ಅಂಚೆಯಣ್ಣ ಮನೆಬಾಗಿಲಿಗೆ ತಲುಪಿಸಿದ ಮೊತ್ತ 1000 ಕೋಟಿ ರೂ. !

ಲಾಕ್‌ಡೌನ್ :

ಹೊಸದಿಲ್ಲಿ: ದೇಶದಲ್ಲಿ 50 ದಿನಗಳ ಲಾಕ್‌ಡೌನ್ ಅವಧಿಯಲ್ಲಿ ಪೋಸ್ಟ್‌ಮನ್‌ಗಳು ವಿವಿಧ ಬ್ಯಾಂಕ್‌ಗಳ ಖಾತೆದಾರರ ಖಾತೆಗಳಿಂದ 1000 ಕೋಟಿ ರೂಪಾಯಿಗಳನ್ನು ಪಡೆದು ಮನೆಬಾಗಿಲಿಗೆ ತಲುಪಿಸುವ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾರೆ. ಇದರ ಜತೆಗೆ ಅಂಚೆ ಕಚೇರಿಯ ಸೇವಿಂಗ್ಸ್ ಬ್ಯಾಂಕ್‌ನಲ್ಲಿ ನಾಲ್ಕು ಕೋಟಿ ವ್ಯವಹಾರಗಳು ನಡೆದಿದ್ದು, 66 ಸಾವಿರ ಕೋಟಿ ರೂ. ವಹಿವಾಟು ನಡೆದಿದೆ.

ಈ ಸಂಕಷ್ಟದ ಪರಿಸ್ಥಿತಿಯಲ್ಲೂ ವಲಸೆ ಕಾರ್ಮಿಕರು ಬ್ಯಾಂಕಿಂಗ್ ಯಶೋಗಾಥೆ ಬರೆದಿದ್ದು, ಉತ್ತರ ಪ್ರದೇಶ ಮತ್ತು ಬಿಹಾರ ಅಂಚೆ ವೃತ್ತಗಳಲ್ಲಿ ಗರಿಷ್ಠ ಅಂದರೆ ಕ್ರಮವಾಗಿ 274 ಕೋಟಿ ರೂ. ಹಾಗೂ 101 ಕೋಟಿ ರೂ.ಗಳನ್ನು ಪೋಸ್ಟ್‌ಮನ್‌ಗಳು ಮನೆಬಾಗಿಲಿಗೆ ತಲುಪಿಸಿದ್ದಾರೆ. ಗುಜರಾತ್, ತೆಲಂಗಾಣ ಹಾಗೂ ಆಂಧ್ರ ಪ್ರದೇಶಗಳು ನಂತರದ ಸ್ಥಾನಗಳಲ್ಲಿವೆ.

ವಲಸೆ ಕಾರ್ಮಿಕರ ಮತ್ತೊಂದು ಸಾಧನೆಯೆಂದರೆ ಲಾಕ್‌ಡೌನ್ ಅವಧಿಯಲ್ಲಿ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ (ಐಪಿಪಿಬಿ)ನಲ್ಲಿ 23 ಲಕ್ಷ ಹೊಸ ಖಾತೆಗಳನ್ನು ತೆರೆದಿರುವುದು. ಹಲವು ಬ್ಯಾಂಕಿಂಗ್ ಸಂಸ್ಥೆಗಳು ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಸಂದರ್ಭದಲ್ಲಿ, ಭಾರತೀಯ ಅಂಚೆಯ ಈ ವಿಶೇಷ ಸಾಧನೆ ಮಹತ್ವದ್ದೆನಿಸಿದೆ.

ಮಾರ್ಚ್ 23ರಿಂದ ಮೇ 11ರ ಅವಧಿಯಲ್ಲಿ 1051 ಕೋಟಿ ರೂಪಾಯಿಗಳನ್ನು ಬ್ಯಾಂಕ್ ಖಾತೆದಾರರ ಮನೆಗಳಿಗೆ ತಲುಪಿಸಲಾಗಿದ್ದು, ಒಟ್ಟು 59 ಲಕ್ಷ ವಹಿವಾಟುಗಳು ನಡೆದಿವೆ ಎಂದು ಅಂಚೆ ಇಲಾಖೆ ಪ್ರಕಟಿಸಿದೆ.

Please follow and like us:
error