ವಲಸಿಗ ಕಾರ್ಮಿಕರ ರೈಲು ಪ್ರಯಾಣ ದರವನ್ನು ಕಾಂಗ್ರೆಸ್ ಭರಿಸಲಿದೆ:ಸೋನಿಯಾ ಗಾಂಧಿ

ಹೊಸದಿಲ್ಲಿ, ಮೇ 4: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಜರಾತ್ ಭೇಟಿ ನೀಡಿದಾಗ 100 ಕೋ.ರೂ.ಖರ್ಚು ಮಾಡಿರುವ ಸರಕಾರಕ್ಕೆ ಹಾಗೂ ಪಿಎಂ-ಕೇರ್ಸ್ ಪಂಡ್‌ಗೆ 150 ಕೊ.ರೂ. ದೇಣಿಗೆ ನೀಡಿರುವ ರೈಲ್ವೆ ಇಲಾಖೆಗೆೆೆ ಲಾಕ್‌ಡೌನ್‌ನಿಂದ ದೇಶದೆಲ್ಲೆಡೆ ಸಿಲುಕಿರುವ ಬಡ ಕಾರ್ಮಿಕರಿಗೆ ತಮ್ಮ ಮನೆಗೆ ತಲುಪಲು ಉಚಿತ ರೈಲು ಪ್ರಯಾಣ ವ್ಯವಸ್ಥೆ ಮಾಡಲು ಯಾಕೆ ಸಾಧ್ಯವಾಗಿಲ್ಲ ಎಂದು ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲೂ ಕೇಂದ್ರ ಸರಕಾರ ಹಾಗೂ ರೈಲ್ವೆ ಇಲಾಖೆಯು ಕಾರ್ಮಿಕರಿಗೆ ರೈಲು ಟಿಕೆಟ್ ಗಾಗಿ ಶುಲ್ಕ ವಿಧಿಸುತ್ತಿರುವ ಆತಂಕಕಾರಿ. ವಲಸಿಗ ಕಾರ್ಮಿಕರ ರೈಲು ಪ್ರಯಾಣ ವೆಚ್ಚವನ್ನು ತನ್ನ ಪಕ್ಷವೇ ಭರಿಸಲಿದೆ ಎಂದು ಘೋಷಿಸಿದರು.

ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ವಲಸಿಗ ಕಾರ್ಮಿಕರಿಗೆ ನೆರವು ನೀಡಿ ಎಂದು ಲಾಕ್‌ಡೌನ್ ಆರಂಭವಾದಾಗಲೇ ಕಾಂಗ್ರೆಸ್ ಮಾಡಿದ್ದ ಮನವಿಯನ್ನು ಸರಕಾರ ನಿರ್ಲಕ್ಷ ಮಾಡಿದೆ. ನಮ್ಮ ಆರ್ಥಿಕತೆಯ ಬೆನ್ನೆಲುಬು,ನಮ್ಮ ದೇಶದ ಅಭಿವೃದ್ಧಿಯ ರಾಯಭಾರಿಯಾಗಿರುವ ಕಾರ್ಮಿಕರ ರೈಲು ಪ್ರಯಾಣ ವೆಚ್ಚವನ್ನು ಕಾಂಗ್ರೆಸ್ ಭರಿಸಲಿದೆ ಎಂದು ಹೇಳಿದರು.

ವಿದೇಶದಲ್ಲಿ ಸಿಲುಕಿಕೊಂಡಿರುವ ನಮ್ಮ ನಾಗರಿಕರಿಗೆ ಉಚಿತ ವಿಮಾನ ಪ್ರಯಾಣ ವ್ಯವಸ್ಥೆ ಮಾಡಿ ತನ್ನ ಜವಾಬ್ದಾರಿಯಿಂದ ಗುರುತಿಸಿಕೊಂಡಿದ್ದ ಸರಕಾರ, ಗುಜರಾತ್‌ನ ಕೇವಲ ಒಂದು ಸಾರ್ವಜನಿಕ ಸಮಾರಂಭಕ್ಕೆ ಸಾರಿಗೆ ಹಾಗೂ ಇತರ ವೆಚ್ಚಕ್ಕೆ 100 ಕೋ.ರೂ. ಖರ್ಚು ಮಾಡುವವರು ಹಾಗೂ ಪಿಎಂ ಕೊರೋನ ಪರಿಹಾರ ಫಂಡ್‌ಗೆ 150 ಕೋ.ರೂ.ದೇಣಿಗೆ ನೀಡುವ ರೈಲ್ವೆ ಇಲಾಖೆಗೆ ನಮ್ಮ ದೇಶದ ಅತ್ಯಗತ್ಯ ಸದಸ್ಯರಿಗೆ ಇಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಇದೇ ರೀತಿಯ ಸೌಜನ್ಯವನ್ನು ತೋರಿಸಲು ಯಾಕೆ ಸಾಧ್ಯವಾಗಿಲ್ಲ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಕಾರ್ಮಿಕರಿಂದ ರೈಲು ಟಿಕೆಟ್ ಶುಲ್ಕವನ್ನು ಕೇಂದ್ರ ಸರಕಾರ ಹಾಗೂ ರೈಲ್ವೆ ಇಲಾಖೆ ವಸೂಲು ಮಾಡುತ್ತಿರುವುದೇಕೆ ಎಂದು ಸೋನಿಯಾ ಪ್ರಶ್ನಿಸಿದರು.

ಕೇಂದ್ರ ಸರಕಾರ ನಾಲ್ಕು ಗಂಟೆ ಮೊದಲು ಲಾಕ್‌ಡೌನ್‌ಗೆ ನೋಟಿಸ್ ನೀಡಿತ್ತು.ಇದರಿಂದಾಗಿ ಕಾರ್ಮಿಕರು ಹಾಗೂ ವಲಸೆ ಕಾರ್ಮಿಕರಿಗೆ ತಮ್ಮ ಮನೆಗಳಿಗೆ ತೆರಳುವ ಅವಕಾಶವನ್ನು ಕಿತ್ತುಕೊಳ್ಳಲಾಗಿತ್ತು. ಹಾಗಾದರೆ ಸರಕಾರದ ಜವಾಬ್ದಾರಿಯೇನು?ಇಂದಿಗೂ ಲಕ್ಷಾಂತರ ಕಾರ್ಮಿಕರು ಹಾಗೂ ವಲಸೆ ಕಾರ್ಮಿಕರು ಮನೆಗೆ ತೆರಳಲಾಗದೆ ನರಳುತ್ತಿದ್ದಾರೆ. ತಮ್ಮ ಕುಟುಂಬವನ್ನು ಸೇರಲು ಬಯಸುತ್ತಿದ್ದಾರೆ. ಆದರೆ ಪ್ರಯಾಣಕ್ಕೆ ಅಗತ್ಯವಿರುವ ಹಣ ಅಥವಾ ಉಚಿತ ಸಾರಿಗೆ ವ್ಯವಸ್ಥೆ ಇಲ್ಲದಾಗಿದೆ. ಎಲ್ಲ ರಾಜ್ಯ ಕಾಂಗ್ರೆಸ್ ಸಮಿತಿಯು ಪ್ರತಿಯೊಬ್ಬ ಬಡ ಕಾರ್ಮಿಕನ ಹಾಗೂ ವಲಸಿಗ ಕಾರ್ಮಿಕನ ರೈಲ್ವೆ ಪ್ರಯಾಣ ವೆಚ್ಚವನ್ನು ಭರಿಸಲಿದ್ದು, ಈ ಕುರಿತು ಅಗತ್ಯ ಹೆಜ್ಜೆ ಇಡಲು ಎಐಸಿಸಿ ನಿರ್ಧರಿಸಿದೆ ಎಂದು ಸೋನಿಯಾ ಹೇಳಿದ್ದಾರೆ.

Please follow and like us:
error