ಬ್ರಿಟನ್ ಆರೋಗ್ಯ ಸಚಿವೆಗೂ ಕೊರೋನಾ ಸೋಂಕು

ಲಂಡನ್ : ಬ್ರಿಟನ್ ಆರೋಗ್ಯ ಸಚಿವೆ ನಡೀನ್ ಡೊರೀಸ್ ಅವರಿಗೆ ಕೊರೋನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಿಂದಾಗಿ ಬಹಳಷ್ಟು ಮಂದಿ ಹಿರಿಯ ಅಧಿಕಾರಿಗಳಿಗೆ ಕೂಡಾ ಸೋಂಕು ತಗುಲಿರುವ ಆತಂಕ ಮೂಡಿದೆ.

“ಕೊರೋನಾ ವೈರಸ್ ಸೋಂಕು ನನಗೆ ತಗುಲಿರುವುದು ದೃಢಪಟ್ಟಿದೆ. ಆದ್ದರಿಂದ ನಾನು ಮನೆಯಲ್ಲೇ ಪ್ರತ್ಯೇಕವಾಗಿ ವಾಸವಿದ್ದೇನೆ” ಎಂದು ಕನ್ಸರ್ವೇಟಿವ್ ಪಾರ್ಟಿ ಸಂಸದೆಯೂ ಆಗಿರುವ ಅವರು ಹೇಳಿದ್ದಾರೆ. ಬ್ರಿಟನ್‌ನಲ್ಲಿ 370 ಕೊರೋನಾ ಪ್ರಕರಣಗಳು ವರದಿಯಾಗಿದ್ದು, ಏಳು ಮಂದಿ ಮೃತಪಟ್ಟಿದ್ದಾರೆ.

ಈ ಮಾರಕ ಸಾಂಕ್ರಾಮಿಕದ ವಿರುದ್ಧ ಹೋರಾಡಲು ರೂಪಿಸಿರುವ ಶಾಸನದ ಕರಡು ತಯಾರಿಯಲ್ಲಿ ನೆರವಾಗಿದ್ದ ಡೊರೀಸ್, ಕೋವಿಡ್-19 ಸೋಂಕು ತಗುಲಿದ ಬ್ರಿಟನ್‌ನ ಮೊದಲ ರಾಜಕಾರಣಿ. ಪ್ರಧಾನಿ ಬೋರಿಸ್ ಜಾನ್ಸನ್ ಸೇರಿದಂತೆ ಹಲವು ಮಂದಿ ರಾಜಕಾರಣಿಗಳು ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳ ಜತೆ ನಿಕಟ ನಂಟು ಹೊಂದಿದ್ದ ಹಿನ್ನೆಲೆಯಲ್ಲಿ ಸರ್ಕಾರಿ ಮಟ್ಟದಲ್ಲಿ ಆತಂಕ ವ್ಯಕ್ತವಾಗಿದೆ.

ಕೊರೋನಾ ವೈರಸ್ ಸೋಂಕನ್ನು ಅಧಿಸೂಚಿತ ರೋಗ ಎಂದು ಘೋಷಿಸುವ ದಾಖಲೆಗೆ ಶುಕ್ರವಾರ ಸಹಿ ಮಾಡುವ ವೇಳೆ ಅವರು ಅಸ್ವಸ್ಥರಾಗಿದ್ದರು. ಅಧಿಸೂಚಿತ ರೋಗಗಳ ಪಟ್ಟಿಯಲ್ಲಿ ಸೇರುವುದರಿಂದ ಈ ರೋಗದ ಚಿಕಿತ್ಸೆಗೆ ವಿಮಾ ಸುರಕ್ಷೆ ಇರುತ್ತದೆ. ಎನ್‌ಎಚ್‌ಎಸ್ ಸಿಬ್ಬಂದಿ ನನಗೆ ಸೂಕ್ತ ಸಲಹೆ ಹಾಗೂ ಬೆಂಬಲ ನೀಡಿದ್ದನ್ನು ಕೃತಜ್ಞತೆಯಿಂದ ಸ್ಮರಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

Please follow and like us:
error