ದಿಲ್ಲಿಯ ರಸ್ತೆಯಲ್ಲಿ ವಲಸೆ ಕಾರ್ಮಿಕರ ಕಷ್ಟವನ್ನು ಆಲಿಸಿದ ರಾಹುಲ್ ಗಾಂಧಿ

ಹೊಸದಿಲ್ಲಿ, ಮೇ 16: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಸಂಜೆ ದಿಲ್ಲಿಯ ರಸ್ತೆಗಿಳಿದು ನಗರದ ಸುಖದೇವ್ ವಿಹಾರ್ ಫ್ಲೈಓವರ್ ಸಮೀಪದಲ್ಲಿ ಬೀಡುಬಿಟ್ಟಿರುವ ವಲಸೆ ಕಾರ್ಮಿಕರನ್ನು ಭೇಟಿಯಾಗಿ ಅವರು ಎದುರಿಸುತ್ತಿರುವ ಕಷ್ಟವನ್ನು ಆಲಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಸರಕಾರ 20 ಲಕ್ಷ ಕೋಟಿ ಪ್ಯಾಕೇಜ್‌ನ್ನು ಮರುಪರಿಶೀಲಿಸಬೇಕು, ದೇಶದ ಅಲ್ಲಲ್ಲಿ ಸಿಲುಕಿರುವ ಕಾರ್ಮಿಕರು ಹಾಗೂ ಬಡ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ನಗದು ಮೊತ್ತವನ್ನು ವರ್ಗಾಯಿಸಬೇಕೆಂದು ವಿನಂತಿಸಿದ ಕೆಲವೇ ಗಂಟೆಗಳ ಬಳಿಕ ರಾಹುಲ್ ರಸ್ತೆಗಿಳಿದು ಕಾರ್ಮಿಕರ ಯೋಗಕ್ಷೇಮ ವಿಚಾರಿಸಿ ಗಮನ ಸೆಳೆದರು.

ಮುಖಕ್ಕೆ ಮಾಸ್ಕ್ ಧರಿಸಿದ್ದ ರಾಹುಲ್ ವಲಸಿಗ ಕಾರ್ಮಿಕರ ಸಣ್ಣ ಗುಂಪಿನೊಂದಿಗೆೆ ಮಾತನಾಡುತ್ತಿದ್ದ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.

‘‘‘ರಾಹುಲ್ ಗಾಂಧೀಜಿ ನಮ್ಮ ಬಳಿ ಬಂದು ಮಾತನಾಡಿದರು. ನಾವು ಎದುರಿಸಿದ ಕಷ್ಟಗಳನ್ನು ತಿಳಿದುಕೊಳ್ಳಲು ಅವರು ಬಯಸಿದ್ದರು. ನಾವಿಲ್ಲಿ ಹಸಿವಿನಿಂದ ಸಾಯುತ್ತಿದ್ದೇವೆ..ನಮಗೆ ಏನೂ ಕೆಲಸವಿಲ್ಲ. ಇದ್ದ ಹಣವನ್ನೆಲ್ಲಾ ಆಹಾರ ಖರೀದಿಸಲು ಖರ್ಚು ಮಾಡಿದ್ದೇವೆ. 50 ದಿನಗಳಿಂದ ಇಂತಹ ಸ್ಥಿತಿ ಎದುರಿಸುತ್ತಿದ್ದೇವೆ ಎಂದು ಅವರಿಗೆ ತಿಳಿಸಿದೆವು. ನಮ್ಮನ್ನು ನಿಲ್ಲಿಸಿ ಮಾತನಾಡಿಸಿದ ರಾಹುಲ್‌ಗೆ ಧನ್ಯವಾದಗಳು’’ ಎಂದು ವಲಸಿಗ ಕಾರ್ಮಿಕ ಮಹೇಶ್ ಕುಮಾರ್ ಹೇಳಿದ್ದಾರೆ.

 

Please follow and like us:
error