ತಮ್ಮ ಆದೇಶವನ್ನೇ ಉಲ್ಲಂಘಿಸಿದ ಮದುವೆಯಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಯಡಿಯೂರಪ್ಪ

ಬೆಳಗಾವಿ, ಮಾ.15: ಕೊರೋನಾ ಭೀತಿಯ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಒಂದು ವಾರಗಳ ಕಾಲ ಅದ್ಧೂರಿ ಸಂಭ್ರಮಾಚರಣೆ, ಸಮಾರಂಭಗಳಿಗೆ ಕಡಿವಾಣ ಹಾಕಿ ಆದೇಶ ಹೊರಡಿಸಿದೆ. ಆದರೂ, ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅವರ ಪುತ್ರಿಯ ವಿವಾಹ ಸರಕಾರದ ಆದೇಶ ಉಲ್ಲಂಘಿಸಿ ನೆರವೇರಿದ್ದು, ಸ್ವತಃ ಸಿಎಂ ಇದಕ್ಕೆ ಸಾಕ್ಷಿಯಾಗಿದ್ದರು.

ಸಭೆ, ಸಮಾರಂಭಗಳನ್ನು ನಿಷೇಧಿಸಿದ ಕುರಿತು ಘೋಷಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಈ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಆದೇಶವನ್ನು ತಾವೇ ಉಲ್ಲಂಘಿಸಿದ್ದಾರೆ. ಅಲ್ಲದೆ, ಕೇಂದ್ರ ಸಚಿವ ಸುರೇಶ್ ಅಂಗಡಿ, ಸಚಿವರಾದ ಬಸವರಾಜ ಬೊಮ್ಮಾಯಿ, ಶ್ರೀಮಂತ ಪಾಟೀಲ, ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಶಾಸಕರು ಪಾಲ್ಗೊಂಡಿದ್ದಾರೆ.

ಹೆಚ್ಚಿನ ಜನಸಂದಣಿಯ ಕಾರ್ಯಕ್ರಮಗಳನ್ನು ನಿಯಂತ್ರಿಸಬೇಕು. ಯಾರಿಗೂ ಸಭೆ, ಸಮಾರಂಭಗಳಿಗೆ ಅವಕಾಶ ನೀಡಬಾರದು ಎಂದು ಸರಕಾರದ ಆದೇಶದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಆದರೂ, ಮುಂಜಾನೆಯಿಂದ ಸಾವಿರಾರು ಸಂಖ್ಯೆಯಲ್ಲಿ ವಿವಿಧ ಕಡೆಗಳಿಂದ ಜನರು ಆಗಮಿಸುತ್ತಿದ್ದಾರೆ. ಅಲ್ಲದೆ, ಜನಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದರೆ, ಇಂತಹ ಸಭೆ, ಸಮಾರಂಭಗಳನ್ನು ಕಡಿಮೆ ಜನರಿಗೆ ಸೀಮಿತಗೊಳಿಸುವಂತೆ ಮನವೊಲಿಸಬೇಕಾದ ಅಧಿಕಾರಿಗಳು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದು ಸರಕಾರದ ಆದೇಶ ಉಲ್ಲಂಘಿಸಿದ್ದಾರೆ.

ಕೊರೊನಾ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ತಿಳಿಸುವ ಬ್ಯಾನರ್‌ಗಳನ್ನು ಸಮಾರಂಭ ನಡೆಯುವ ಎರಡು ಕಡೆಗಳಲ್ಲಿ ಹಾಕಲಾಗಿತ್ತು. ಬಂದವರೆಲ್ಲರೂ ಕೈಗೆ ಸ್ಯಾನಿಟೈಸರ್ ಹಾಕಿಕೊಂಡು ಹೋಗುವಂತಹ ವ್ಯವಸ್ಥೆ ಮಾಡಲಾಗಿತ್ತು. ಕಡಿಮೆ ಪ್ರಮಾಣದ ಮಾಸ್ಕ್‌ಗಳನ್ನು ತಂದಿದ್ದರಿಂದ, ಕೆಲವರಷ್ಟೇ ಅವುಗಳನ್ನು ಬಳಸುತ್ತಿದ್ದರು.

ತಪಾಸಣೆಗೆ ಒಳಗಾಗದ ಸಿಎಂ: ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿಎಂ ಯಡಿಯೂರಪ್ಪ, ಆರೋಗ್ಯ ಇಲಾಖೆಯು ಮುಂಜಾಗ್ರತಾ ಕ್ರಮವಾಗಿ ಕೊರೋನಾ ತಪಾಸಣೆ ನಡೆಸಲು ಕ್ರಮ ಕೈಗೊಳ್ಳಲಾಗಿತ್ತಾದರೂ, ಸಿಎಂ ಯಾವುದೇ ತಪಾಸಣೆಗೆ ಒಳಗಾಗಲಿಲ್ಲ. ಅನಂತರ ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ ಹಾಗೂ ಸಚಿವ ಸಿ.ಟಿ. ರವಿಗೆ ತಪಾಸಣೆ ಮಾಡಲಾಯಿತು.

Please follow and like us:
error