ಡಿಸೆಂಬರ್ ತನಕವೂ ಆತಂಕ-ಕೋವಿಡ್ ತಡೆಯಲು ಮುನ್ನೆಚ್ಚರಿಕೆ ಕ್ರಮಗಳೆ ಮುಖ್ಯ:ಡಾ.ಮಂಜುನಾಥ್ ಅಭಿಮತ

ಬೆಂಗಳೂರು: ಕೋವಿಡ್ ಎರಡನೇ ಅಲೆಯ ತೀವ್ರತೆಯಿಂದ ಪ್ರತಿ ಐವರಲ್ಲಿ ಒಬ್ಬರು ಸೋಕಿತರಾಗಿರುವುದು ಆತಂಕಕಾರಿ ಬೆಳವಣಿಗೆ. ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪರಿಪಾಲನೆ ಮಾಡದೆ ಹೋದರೆ, ಸಮಸ್ಯೆ ಇನ್ನೂ ತೀವ್ರವಾಗಿ ಕಾಡಬಹುದು ಎಂದು ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಹೇಳಿದ್ದಾರೆ.

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಏರ್ಪಡಿಸಿದ್ದ ಕೋವಿಡ್ ಸಂದರ್ಭದಲ್ಲಿ ಪತ್ರಕರ್ತರಿಗಿರಬೇಕಾದ ಮುನ್ನೆಚ್ಚರಿಕೆ ವಿಷಯದ ಬಗ್ಗೆ ಅವರು ವೆಬಿನಾರ್ ಮೂಲಕ ಮಾತನಾಡಿ, ಸಂವಾದ ನಡೆಸಿದರು.

ರಾಜ್ಯದಲ್ಲಿ ಒಂದೂವರೆಯಿಂದ ಎರಡು ಕೋಟಿ ಮಂದಿ ಸೋಂಕಿಗೆ ಒಳಗಾಗಿದ್ದಾರೆ ಎನ್ನುವ ಮಾಹಿತಿ ಇದೆ. ಕರೋನ ಎರಡನೇ ಅಲೆ ಮರಣ ಮೃದಂಗ ಬಾರಿಸುತ್ತಿದೆ ಎಂದರು.

ಭಾರತದಲ್ಲಿ ಸೋಂಕು ಪ್ರಕರಣಗಳು 4 ಲಕ್ಷ ಹಾಗು ಸಾವಿನ ಸಂಖ್ಯೆ 4 ಸಾವಿರ ದಾಟುವ ಮೂಲಕ ಬ್ರೆಜಿಲ್ ಹಾಗೂ ಅಮೇರಿಕಾವನ್ನೂ ಹಿಂದಿಕ್ಕುವ ಸ್ಥಿತಿ ನಿರ್ಮಾಣವಾಗಿರುವುದು ಆತಂಕಕಾರಿ ಎಂದರು.

ಪತ್ರಿಕೋದ್ಯಮ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ತಮ್ಮನ್ನೇ ತಾವು ಸ್ಪರ್ಧೆಗೆ ಒಡ್ಡಿಕೊಳ್ಳುವ ಅನಿವಾರ್ಯತೆ ಎದುರಿಸುತ್ತಿರುತ್ತಾರೆ. ಇಂತಹ ಸ್ಪರ್ಧಾತ್ಮಕ ಹಾಗೂ ಒತ್ತಡದ ಕೆಲಸಗಳು ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡದಂತೆ ಮಾಡುವುದರಿಂದ ತಮ್ಮನ್ನೇ ತಾವು ಅಪಾಯಕ್ಕೆ ದೂಡಿಕೊಳ್ಳುವ ಸಾಧ್ಯತೆ ಇರುತ್ತದೆ. ಬಹುತೇಕ ಯುವಕರೇ ಇಂತಹ ಅಪಾಯದ ಸ್ಥಿತಿಯಲ್ಲಿ ಕೆಲಸ ಮಾಡುವ ಕಾರಣ ಬಹಳ ಬೇಗ ಸೋಂಕಿಗೆ ಒಳಗಾಗುತ್ತಾರೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ವ್ಯಕ್ತಿಗತ ಅಂತರ ಹಾಗೂ ಮುಂಜಾಗೃತಾ ಕ್ರಮಗಳು ಬಹಳ ಮುಖ್ಯ. ಮಾಸ್ಕ್ ಹಾಕಿಕೊಳ್ಳಬೇಕು. ಪ್ರತಿಯೊಬ್ಬರೂ ಕಡ್ಡಾಯವಾಗಿ ವ್ಯಾಕ್ಸಿನ್ ತೆಗೆದುಕೊಳ್ಳಬೇಕು, ವಿಶೇಷವಾಗಿ ದೃಶ್ಯ ಮಾಧ್ಯಮದವರು ಒಂದೆಡೆ ಗುಂಪು ಸೇರುವುದನ್ನು ತಪ್ಪಿಸಬೇಕು. ಸಾರ್ವಜನಿಕ ಪ್ರದೇಶದಲ್ಲಿ ಕೆಲಸ ಮಾಡುವ ವರದಿಗಾರರು ರೋಗ ಲಕ್ಷಣಗಳಿಲ್ಲದಿದ್ದರೂ ಕೊರೋನ ಸೋಂಕಿಗೆ ಒಳಗಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಇದರಿಂದ ಕುಟುಂಬಸ್ಥರಿಗೆ ಅಪಾಯವಾಗುವುದನ್ನು ತಪ್ಪಿಸಲು ಮನೆಯಲ್ಲಿದ್ದಾಗಲೂ ಸಹ ಮಾಸ್ಕ್ ಧರಿಸುವುದು ಸೂಕ್ತ ಎಂದರು.

ಯಾವುದೇ ಸಣ್ಣಪುಟ್ಟ ಮೈ ಕೈ ನೋವು, ಜ್ವರ ಇನ್ನಿತ್ಯಾದಿಗಳ ಬಗ್ಗೆ ಈ ಸಂದರ್ಭದಲ್ಲಿ ಉದಾಸೀನ ಮಾಡದೆ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳಿ. ಸೋಂಕು ದೃಡಪಟ್ಟರೆ ಮನೆಯಲ್ಲಿಯೇ ಐಸೋಲೇಷನ್ ಆಗುವ ಮೂಲಕ ಚಿಕಿತ್ಸೆ ಪಡೆದುಕೊಳ್ಳಿ ಎಂದು ಅವರು ಈ ಸಂದರ್ಭದಲ್ಲಿ ಸಲಹೆ ನೀಡಿದರು.

ಕೋವಿಡ್ ವಿರುದ್ದ ಹೋರಾಟಕ್ಕೆ ಇನ್ನೂ ಮೂರರಿಂದ ನಾಲ್ಕು ತಿಂಗಳು ಪ್ರತೀ ಕ್ಷಣವೂ ಸಜ್ಜಾಗಿರಬೇಕು. ಇದೇ ವೇಳೆ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುವ ಮೂಲಕ ಅವರು ಶೀಘ್ರವಾಗಿ ಗುಣಮುಖರಾಗಲು ಪ್ರತಿಯೊಬ್ಬರೂ ನೆರವಾಗಬೇಕು ಎಂದರು.

ವ್ಯಾಕ್ಸಿನ್, ಮಾಸ್ಕ್ ಹಾಗೂ ವ್ಯಕ್ತಿಗತ ಅಂತರ ಕಾಪಾಡುವ ಮೂಲಕ ದೇಶದ ಆರೋಗ್ಯ ಕಾಪಾಡುವ ಹೊಣೆಗಾರಿಗೆ ನಮ್ಮೆಲ್ಲರದ್ದು ಎನ್ನುವ ಜವಾಬ್ದಾರಿ ಅರಿತು ಮುನ್ನಡೆಯಬೇಕು ಎಂದು ಮನವಿ ಮಾಡಿದರು.

ಕೋವಿಡ್ ಸಂದರ್ಭದಲ್ಲಿ ಆತ್ಮವಿಶ್ವಾಸವನ್ನು ಗಟ್ಟಿಗೊಳಿಸುವ ವರದಿಗಳು ಮುಖ್ಯ. ಸ್ಮಶಾನ ಮತ್ತಿತರ ವರದಿ ಬದಲು ಗುಣಾತ್ಮಕ ವರದಿ ಮಾಧ್ಯಮದಲ್ಲಿ ಹೆಚ್ಚು ಬರಲಿ ಎಂದರು.

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಪ್ರಸ್ತಾವಿಕವಾಗಿ ಮಾತನಾಡಿ, ಸುದ್ದಿಮನೆಯಲ್ಲಿ ಕೆಲಸ ಮಾಡುವ ಪತ್ರಕರ್ತರು ಮತ್ತು ಸಿಬ್ಬಂದಿಗಳು ಒತ್ತಡದಲ್ಲಿದ್ದು, ಕೋವಿಡ್ ಸಂದರ್ಭದಲ್ಲಿ ಅವರು ವಹಿಸಬೇಕಾದ ಮುನ್ನೆಚ್ಚರಿಕೆ ಬಹಳ ಮುಖ್ಯವಾಗಿದ್ದು, ಅದಕ್ಕಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಕಳೆದ ಕೊವಿಡ್ ಅವಧಿಯಲ್ಲಿ ಮೃತಪಟ್ಟ 31 ಪತ್ರಕರ್ತರ ಕುಟುಂಬಗಳಿಗೆ ತಲಾ 5ಲಕ್ಷ ನೆರವು ಕೊಡಲಾಗಿದೆ. ಒಂದೂವರೆ ವರ್ಷದ ಜಾಹೀರಾತು ಬಾಕಿ 56 ಕೋಟಿ ಮಂಜೂರು ಮಾಡಿಸಲಾಯಿತು. ಪತ್ರಕರ್ತರಿಗಾಗಿ ಉಚಿತವಾಗಿ ಹೆಲ್ತ್ ಕಾರ್ಡ್ ಕೊಡಿಸಲಾಗಿದೆ ಎಂದರು.

ಮಾಧ್ಯಮದ ಹಿರಿಯ ಕಿರಿಯ ಪತ್ರಕರ್ತರು ಸಂವಾದದಲ್ಲಿ ಭಾಗವಹಿಸಿದ್ದರು.

Please follow and like us:
error