ಗವಿಮಠ‌ ಕೋವಿಡ್ ಆಸ್ಪತ್ರೆಗೆ ಎನ್ಆರ್ ಐ ನೆರವು

ಕೊಪ್ಪಳ: ಇಲ್ಲಿನ ಗವಿಮಠ ಕೋವಿಡ್ ಆಸ್ಪತ್ರೆಗೆ ಬ್ರೀತ್ ಇಂಡಿಯಾ ಅಭಿಯಾನದಡಿ ಆಕ್ಸಿಜನ್ ಕಾನ್ಸಂಟ್ರೇಟರ್ಸ್ ಸೇರಿ ಮೆಡಿಕಲ್ ಉಪಕರಣಗಳು ದೇಣಿಗೆ ನೀಡಲಾಯಿತು. ಅಭಿಯಾನದ ಸ್ವಯಂ ಸೇವಕರು
ಮೆಡಿಕಲ್ ಉಪಕರಣಗಳನ್ನು ಗವಿಸಿದ್ದೇಶ್ವರ ಸ್ವಾಮೀಜಿಗಳಿಗೆ ಹಸ್ತಾತರಿಸಿದರು.
ಈ ವೇಳೆ ಮಾತನಾಡಿದ ಅಭಿಯಾನದ ಕಾರ್ಯಕರ್ತ ಹರ್ಷ ಮಾತನಾಡಿ, ಅನಿವಾಸಿ ಭಾರತೀಯರೇ ಹೆಚ್ಚಿರುವ ಐ ಕ್ಯಾಟ್ ಪೌಂಡೇಷನ್, ಸೊಸೈಟಿ ಆಫ್ ಎಮರ್ಜನ್ಸಿ ಮೆಡಿಸಿನ್ ಇಂಡಿಯಾ ಹಾಗೂ ಅವಿರತ ಭಾರತ ಸಂಸ್ಥೆಗಳ ಸಹಯೋಗದಲ್ಲಿ ಬ್ರೀತ್ ಇಂಡಿಯಾ ಎಂಬ ಘೋಷವಾಕ್ಯದಡಿ ಕೋವಿಡ್ ಸಾಂಕ್ರಾಮಿಕದ ವಿರುದ್ಧ ಹೋರಾಟ ಮಾಡಲಾಗುತ್ತಿದೆ. ಆಕ್ಸಿಜನ್ ಸೇರಿ ವಿವಿಧ ಅಗತ್ಯ ಮೆಡಿಕಲ್ ಉಪಕರಣಗಳನ್ನು ಕೋವಿಡ್ ಆಸ್ಪತ್ರೆಗೆ ದಾನವಾಗಿ ನೀಡುತ್ತಿರುವ ಈ ಸಂಸ್ಥೆಗಳು ಕರೋನ ವಿರುದ್ಧ ದೇಶಾದ್ಯಂತ ಹೋರಾಟ ಮಾಡುತ್ತಿವೆ. ಇಲ್ಲಿನ ಗವಿಮಠವೂ ಕೂಡ ಬಡ ಕೋವಿಡ್ ರೋಗಿಗಳ ಅನುಕೂಲಕ್ಕಾಗಿ ಕೋವಿಡ್ ಆಸ್ಪತ್ರೆ ತೆರೆದಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಮೆಡಿಕಲ್ ಉಪಕರಣ ನೀಡಲಾಗಿದೆ. ಇದರಲ್ಲಿ 7 ಸಾಮಾನ್ಯ ಆಕ್ಸಿಜನ್ ಕಾನ್ಸಂಟ್ರೇಟರ್ಸ್ ಮತ್ತು 3 ಆಕ್ಸಿಜನ್ ಉತ್ಪಾದಿಸಿ ಸಿಲಿಂಡರ್ ಗೆ ತುಂಬುವ ಸಾಮರ್ಥ್ಯದ ಯಂತ್ರ ಇವೆ. ಜೊತೆಗೆ ವಿವಿಧ ಮೆಡಿಕಲ್ ಉಪಕರಣ ಒಳಗೊಂಡಿದೆ ಎಂದು ಮಾಹಿತಿ ನೀಡಿದರು.
ಬ್ರೀತ್ ಇಂಡಿಯಾ ಅಭಿಯಾನದ ಸಂಸ್ಥಾಪಕರಲ್ಲಿ ಒಬ್ಬರಾದ ಡಾ. ಶಾಲಿನಿ ನಾಲ್ವಾಡ್ ಅವರು ಕೊಪ್ಪಳ ಮೂಲದವರಾಗಿದ್ದಾರೆ. ಕೊಪ್ಪಳ ಜಿಲ್ಲೆಯ ಯಾವುದೇ ಎನ್ ಜಿಇಒ ಮತ್ತು ಸಂಘ ಸಂಸ್ಥೆಗಳು ಕೋವಿಡ್ ವಿರುದ್ದದ ಹೋರಾಟದಲ್ಲಿ ಸೇವೆ ಮಾಡುತ್ತಿದ್ದರೆ, ನೆರವು ನೀಡುತ್ತೇವೆ ಎಂದರು. ಡಾ.ವಿಶ್ವನಾಥ ನಾಲ್ವಾಡ್ ಮಾತನಾಡಿ, ಐ ಕ್ಯಾಟ್ ಸಂಸ್ಥೆ ದೇಶಾದ್ಯಂತ ಏರ್ ಆ್ಯಾಂಬ್ಯೂಲೆನ್ಸ್ ಸೇವೆ ನೀಡುತ್ತಿದ್ದು, ಜನ ಸಾಮಾನ್ಯರಿಗೂ ಈ ಸೇವೆ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಈ ಸಂಸ್ಥೆ ಸಹ ಸಂಸ್ಥಾಪಕಿ ಡಾ.ಶಾಲಿನಿ ಕೊಪ್ಪಳ ಮೂಲದ‌ವರು ಎಂಬುದು ನಮಗೆಲ್ಲ ಹೆಮ್ಮೆಯ‌ ವಿಷಯ ಎಂದರು. ನಗರಸಭೆ ಸದಸ್ಯ ಗುರುರಾಜ ಹಲಗೇರಿ, ಅನೀಲ್ ಕೊಪ್ಪಳ, ಮಾರುತಿ ಬೋಸ್ಲೆ, ಸಿದ್ದು ನಿಲೂಗಲ್ ಸೇರಿ ಇತರರು ಇದ್ದರು.

Please follow and like us:
error