ಒಂದೇ ಕುಟುಂಬದ ಐವರು ಕೊರೋನ ಶಂಕಿತರಿಗೆ ಆಸ್ಪತ್ರೆಯಿಂದ ಬಿಡುಗಡೆ ಸಂಭ್ರಮ

ಕೊಚ್ಚಿನ್ : ವೈದ್ಯರು, ನರ್ಸ್ ಹಾಗೂ ಆಸ್ಪತ್ರೆ ಸಿಬ್ಬಂದಿ ಒಂದೇ ಕುಟುಂಬದ ಐದು ಮಂದಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡುವ ಭಾವನಾತ್ಮಕ ಕ್ಷಣಗಳಿಗೆ ಕೇರಳದ ಪಟ್ಟಣಂತಿಟ್ಟ ಜಿಲ್ಲಾ ಆಸ್ಪತ್ರೆ ಸೋಮವಾರ ಸಾಕ್ಷಿಯಾಯಿತು.

ಕೊರೋನ ವೈರಸ್ ಸೋಂಕು ಶಂಕೆಯಿಂದ ಆಸ್ಪತ್ರೆಯ ಐಸೊಲೇಶನ್ ವಾರ್ಡ್‌ಗೆ ದಾಖಲಾಗಿದ್ದ ಐದು ಮಂದಿಯಲ್ಲೂ ಸೋಂಕು ಇಲ್ಲ ಎಂದು ದೃಢಪಟ್ಟ ಹಿನ್ನೆಲೆಯಲ್ಲಿ 55 ಹಾಗೂ 53 ವರ್ಷದ ಪೋಷಕರು, 25 ವರ್ಷದ ಯುವಕ ಹಾಗೂ ಇಬ್ಬರು ಸಂಬಂಧಿಗಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಅವರ ಗಂಟಲು ದ್ರವವನ್ನು ಎರಡು ಬಾರಿ ಪರೀಕ್ಷಿಸಿದ ಬಳಿಕವೂ ನೆಗೆಟಿವ್ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ಅವರ ಬಿಡುಗಡೆಗೆ ವೈದ್ಯರು ಶಿಫಾರಸ್ಸು ಮಾಡಿದ್ದರು.

ಪಟ್ಟಣಂತಿಟ್ಟದ ಸಮೀಪದ ಅತ್ಯಾಹ ಎಂಬ ಹಳ್ಳಿಯ ಯುವಕ ಹಾಗೂ ಆತನ ಕುಟುಂಬದವರು ಫೆ. 29ರಂದು ಇಟೆಲಿಯಿಂದ ವಾಪಾಸ್ಸಾಗಿದ್ದರು. ಮಾ. 6ರಂದು ರೋಗಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸೋಮವಾರ ಐದು ಮಂದಿಯೂ ಆಸ್ಪತ್ರೆಯಿಂದ ಮನೆಗೆ ತೆರಳುವಾಗ ಆಸ್ಪತ್ರೆ ಸಿಬ್ಬಂದಿ ಚಪ್ಪಾಳೆ ತಟ್ಟಿ, ಸಂಭ್ರಮಿಸಿ ಬೀಳ್ಕೊಟ್ಟರು. ಕುಟುಂಬಕ್ಕೆ ಮೊದಲು ಸಿಹಿ ಹಾಗೂ ರಾತ್ರಿ ಊಟದ ಪ್ಯಾಕೆಟ್ ನೀಡಲಾಯಿತು. ಮುಂದಿನ ಎರಡು ವಾರಗಳ ಕಡ್ಡಾಯ ಹೋಮ್ ಕ್ವಾರಂಟೈನ್‌ಗೆ ಅಗತ್ಯವಾದ ಆಹಾರ ಮತ್ತಿತರ ಸಾಮಗ್ರಿಗಳನ್ನು ಕೂಡಾ ವಿತರಿಸಲಾಯಿತು. ಇವರ ಹೋಮ್ ಕ್ವಾರಂಟೈನ್ ಅವಧಿ ಮುಗಿದ ಬಳಿಕ ಮತ್ತೆ ತಪಾಸಣೆಗೆ ಒಳಪಡಿಸಲಾಗುತ್ತದೆ.

ಈ ಸಂದರ್ಭದಲ್ಲಿ ಆನಂದಭಾಷ್ಪದೊಂದಿಗೆ ಸುದ್ದಿಗಾರರೊಂದಿಗೆ ಮಾತನಾಡಿದ ಯುವಕನ ತಾಯಿ, ನರ್ಸ್‌ಗಳು, ವೈದ್ಯರು, ಜಿಲ್ಲಾಧಿಕಾರಿ, ಜಿಲ್ಲಾ ವೈದ್ಯಾಧಿಕಾರಿ ಹಾಗೂ ಕಳೆದ 25 ದಿನಗಳಲ್ಲಿ ನಮ್ಮ ಬಗ್ಗೆ ಕಾಳಜಿ ವಹಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ನಾವು ಜೀವಂತ ಮನೆಗೆ ವಾಪಸ್ಸಾಗುತ್ತೇವೆ ಎಂದು ನಾವು ಯಾರೂ ಎಣಿಸಿರಲಿಲ್ಲ. ದೇವರಿಗೆ ವಿಶೇಷ ಕೃಜ್ಞತೆ ಸಲ್ಲಿಸುತ್ತೇನೆ ಹಾಗೂ ನಮ್ಮ ಪ್ರಾರ್ಥನೆಯಲ್ಲಿ ನಿಮ್ಮೆಲ್ಲರನ್ನೂ ನೆನಪಿಸಿಕೊಳ್ಳುತ್ತೇನೆ ಎಂದು ಬಣ್ಣಿಸಿದರು.

Please follow and like us:
error