ಅಂತರ್ ಜಿಲ್ಲಾ ಪ್ರಯಾಣಿಕರಲ್ಲಿ ರೋಗ ಲಕ್ಷಣವಿಲ್ಲದಿದ್ದರೆ ಕ್ವಾರಂಟೈನ್‌ಗೆ ಒಳಪಡಿಸುವ ಅಗತ್ಯವಿಲ್ಲ !

ಬೆಂಗಳೂರು, ಮೇ 15: ಲಾಕ್‌ಡೌನ್ ಅವಧಿಯಲ್ಲಿ ಅಂತರ್ ಜಿಲ್ಲಾ ಪ್ರಯಾಣ ಮಾಡಿರುವ ವ್ಯಕ್ತಿಗಳಲ್ಲಿ ಕೊರೋನ ವೈರಸ್ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲವಾದರೆ ಅಂತಹ ಪ್ರಯಾಣಿಕರನ್ನು ಕ್ವಾರಂಟೈನ್‌ಗೆ (ಪ್ರತ್ಯೇಕ ವಾಸ) ಒಳಪಡಿಸುವ ಅಗತ್ಯ ಇಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಸ್ಪಷ್ಟಪಡಿಸಿದ್ದಾರೆ.

ಈ ಸಂಬಂಧ ಮೇ 14ರಂದು ಹೊರಡಿಸಿರುವ ಆದೇಶದಲ್ಲಿ ಅವರು ಸ್ಪಷ್ಟಪಡಿಸಿದ್ದಾರೆ. ಮೂರನೇ ಹಂತದ ಲಾಕ್ಡೌನ್ ವೇಳೆ ಅನುಮತಿ ಪಡೆದು ಅಂತರ್ ಜಿಲ್ಲಾ ಪ್ರವಾಸಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಈ ಸಂಬಂಧ ಪೊಲೀಸ್ ಇಲಾಖೆಯಿಂದ ಇ-ಪಾಸ್ ಪಡೆಯಬೇಕಿತ್ತು. ಎರಡು ದಿನಗಳೊಳಗೆ ಊರಿಗೆ ಹೋಗಿ ಮರಳಬೇಕು ಎಂದು ಸೂಚಿಸಲಾಗಿತ್ತು. ಎರಡು ದಿನಗಳ ಬಳಿಕ ಉಳಿದರೆ ಕ್ವಾರಂಟೈನ್ ಮಾಡಲಾಗುತ್ತದೆ ಎಂದು ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಎಚ್ಚರಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಜಿಲ್ಲಾ ಗಡಿಯಲ್ಲಿ ತಪಾಸಣೆ ನಡೆಸಿಯೇ ಪ್ರವೇಶ ನೀಡಲಾಗುತ್ತದೆ. ರೋಗ ಲಕ್ಷಣ ಇಲ್ಲದಿದ್ದರೂ ಕ್ವಾರಂಟೈನ್‌ಗೆ ಒಳಪಡುವ ಅಗತ್ಯವೇನಿದೆ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಇಲಾಖೆ ಈ ಸಂಬಂಧ ಸ್ಪಷ್ಟನೆ ನೀಡಿದೆ.

 

Please follow and like us:
error