101 ದಿನಗಳಲ್ಲಿ ಒಂದು ಲಕ್ಷ ಜೀವ ಬಲಿ ಪಡೆದ ಕೊರೋನ ವೈರಸ್

ಹೊಸದಿಲ್ಲಿ : ಕೋವಿಡ್-19 ಎಂಬ ಹೊಸ ವೈರಸ್ ಜಗತ್ತಿಗೆ ಪರಿಚಯವಾದ 101 ದಿನಗಳಲ್ಲಿ ವಿಶ್ವಾದ್ಯಂತ ಪ್ರತಿ 90 ಸೆಕೆಂಡ್‌ಗೆ ಒಬ್ಬರಂತೆ ಸೋಂಕಿತರಾಗುತ್ತಿದ್ದಾರೆ. ಶುಕ್ರವಾರ ಕೋವಿಡ್-19 ಸೋಂಕಿಗೆ ಬಲಿಯಾದವರ ಸಂಖ್ಯೆ ಲಕ್ಷದ ಗಡಿ ದಾಟಿದೆ.

ಕಳೆದ ಒಂದು ವಾರದಲ್ಲೇ ಸಾವಿನ ಸಂಖ್ಯೆ ದ್ವಿಗುಣಗೊಂಡಿದ್ದು, ಈ ಅವಧಿಯಲ್ಲಿ ಒಟ್ಟು ಆರು ಲಕ್ಷ ಮಂದಿಗೆ ಸೋಂಕು ತಗುಲಿದೆ ಎಂದು ಜಾನ್ ಹಾಕಿನ್ಸ್ ಯುನಿವರ್ಸಿಟಿ ಕೊರೋನ ವೈರಸ್ ಸಂಶೋಧನಾ ಕೇಂದ್ರ ಹೇಳಿದೆ.

ರಾಷ್ಟ್ರ ರಾಜಧಾನಿಯಲ್ಲಿ ಶುಕ್ರವಾರ ಒಂದೇ ದಿನ 183 ಹೊಸ ಪ್ರಕರಣಗಳು ದೃಢಪಟ್ಟಿವೆ. ದೇಶಾದ್ಯಂತ 855 ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದು, 19 ಮಂದಿ ಬಲಿಯಾಗಿದ್ದಾರೆ. ದೇಶದಲ್ಲಿ ಸೋಂಕಿತರ ಸಂಖ್ಯೆ 7459 ಆಗಿದ್ದು, ಮೃತಪಟ್ಟವರ ಸಂಖ್ಯೆ 249ಕ್ಕೇರಿದೆ.
ಭಾರತದಲ್ಲಿ ಈ ಸೋಂಕು ಕಂಡುಬಂದ 39 ದಿನಗಳ ಬಳಿಕ ಈ ಸ್ಥಿತಿ ಇದ್ದು, ಇತರ ಜನದಟ್ಟಣೆಯ ದೇಶಗಳಿಗೆ ಹೋಲಿಸಿದರೆ ನಿಧಾನವಾಗಿ ಸಾಂಕ್ರಾಮಿಕ ಹರಡುತ್ತಿದೆಯಾದರೂ ಎಚ್ಚರ ತಪ್ಪಿದರೆ ಪರಿಸ್ಥಿತಿ ಕೈಮೀರಿ ಹೋಗುವ ಸಾಧ್ಯತೆ ಇದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಈ ಸಾಂಕ್ರಾಮಿಕ ಆರು ವಾರಗಳಲ್ಲಿ ವ್ಯಾಪಕ ಹಾನಿ ಮಾಡಿದೆ. ವಿಶ್ವದ ಒಟ್ಟು ಸೋಂಕಿತರ ಪೈಕಿ ಶೇಕಡ 77ರಷ್ಟು ಮಂದಿ ಮತ್ತು ಒಟ್ಟು ಮೃತಪಟ್ಟವರ ಪೈಕಿ ಶೇಕಡ 87ರಷ್ಟು ಮಂದಿ ಅಮೆರಿಕ ಹಾಗೂ ಯೂರೋಪ್‌ನಲ್ಲಿದ್ದಾರೆ.

ಭಾರತದಂಥ ಕಡಿಮೆ ಹಾಗೂ ಮಧ್ಯಮ ಆದಾಯದ ದೇಶಗಳಲ್ಲಿ ಹೆಚ್ಚಿನ ಎಚ್ಚರ ವಹಿಸುವ ಅಗತ್ಯವಿದೆ. ವ್ಯಾಪಕವಾಗಿ ಪರೀಕ್ಷೆಗಳನ್ನು ನಡೆಸುವುದನ್ನು ಎಷ್ಟು ಬೇಗ ಆರಂಭಿಸಲಾಗುತ್ತದೆಯೋ ನಿಮ್ಮ ದೇಶಕ್ಕೆ ಅಷ್ಟು ಒಳ್ಳೆಯದು ಎಂದು ಮಿಚಿಗನ್ ವಿವಿ ಜೈವಿಕ ಅಂಕಿ ಅಂಶಗಳ ವಿಭಾಗದ ಮುಖ್ಯಸ್ಥ ಭ್ರಮರ ಮುಖರ್ಜಿ ಹೇಳುತ್ತಾರೆ.

ಪ್ರಕರಣಗಳ ಏರಿಕೆ ಪ್ರಮಾಣ ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಭಿನ್ನ. ಬ್ರಿಟನ್‌ನಲ್ಲಿ ಮೂರು ದಿನಗಳಲ್ಲಿ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳುತ್ತಿದ್ದರೆ, ಭಾರತದಲ್ಲಿ ಆರು ದಿನವಾಗುತ್ತಿದೆ ಎಂದು ಅವರು ವಿವರಿಸುತ್ತಾರೆ. ಪ್ರಕರಣಗಳು ವರದಿಯಾಗುವಲ್ಲಿ ಸಮಸ್ಯೆ ಇದೆಯೇ ಅಥವಾ ಉಷ್ಣತೆ, ವಂಶವಾಹಿ ಅಂಶಗಳು ಇದಕ್ಕೆ ಕಾರಣವೇ ಎನ್ನುವುದನ್ನು ತಿಳಿದುಕೊಳ್ಳಬೇಕಿದೆ ಎಂದು ಅವರು ಸ್ಪಷ್ಟಪಡಿಸುತ್ತಾರೆ.

ಸಾಂಕ್ರಾಮಿಕ ಹರಡುವಿಕೆ ತಡೆಯುವ ದೃಷ್ಟಿಯಿಂದ 42-56 ದಿನಗಳ ಲಾಕ್‌ಡೌನ್ ಅಗತ್ಯ. ಆದರೆ ಇದು ಪ್ರಾಯೋಗಿಕವಲ್ಲ. ಆದಷ್ಟು ಬೇಗ ಲಾಕ್‌ಡೌನ್‌ನಿಂದ ಹೊರಬರಬೇಕು ಎಂದು ಅವರು ಸಲಹೆ ಮಾಡುತ್ತಾರೆ.

Please follow and like us:
error