ಸಿಕ್ಕಿದ್ರೆ ಶಿಕಾರಿ, ಇಲ್ದಿದ್ರೆ ಭಿಕಾರಿ :

 

ಹೆಸರು ಕೇಳಿ ಮಾತ್ರ ಗೊತ್ತಿದ್ದ ಬೆಂಗಳೂರಿನ ಚಾಮುಂಡೇಶ್ವರಿ ಸ್ಟುಡಿಯೋನಲ್ಲಿ, ಶತದಿನೋತ್ಸವ-ಆರು ತಿಂಗಳು-ಒಂದು ವರ್ಷ ಓಡಿದ ಸಿನಿಮಾ ಫಲಕಗಳ ನಡುವೆ ಕುಳಿತು ಒಂದು ಸಾಕ್ಷ್ಯ ಚಿತ್ರ ನೋಡಿದೆವು.

ಯಾರ ಕುರಿತು ನಾವು ಕಣ್ಣಿದ್ದೂ ಕುರುಡರಾಗಿದ್ದೇವೋ, ಕಿವಿಯಿದ್ದೂ ಕಿವುಡರಾಗಿದ್ದೇವೋ ಅಂತಹವರ ಕುರಿತ ಚಿತ್ರವದು. ಕಳೆದ ೨೫ ವರ್ಷಗಳಿಂದ ಹಕ್ಕಿಪಿಕ್ಕಿ ಸಮುದಾಯದೊಡನೆ, ಮಹಿಳಾ ಸಂಘಟನೆಗಳೊಡನೆ ಎಲೆಯ ಮರೆಯ ಕಾಯಂತೆ ಕೆಲಸ ಮಾಡುತ್ತಿರುವ ಅಂತಃಕರಣದ ಗೆಳತಿ ಮಧು ಭೂಷಣ್ ಹಾಗೂ ಅಲೆಮಾರಿ ಬುಡಕಟ್ಟು ಸಮುದಾಯಗಳ ಬದುಕನ್ನು ಸಾಕ್ಷ್ಯಚಿತ್ರಗಳಾಗಿ ಸೆರೆ ಹಿಡಿಯುವ ಸಮರ್ಥ ನಿರ್ದೇಶಕ ವಿನೋದ್ ರಾಜಾ – ಇವರಿಬ್ಬರ ಬದ್ಧತೆಯಿಂದ ಹಕ್ಕಿಪಿಕ್ಕಿ ಎಂಬ ಅರೆ ಅಲೆಮಾರಿ ಸಮುದಾಯ ಕುರಿತ ಸಾಕ್ಷ್ಯಚಿತ್ರ ‘ಸಿಕ್ಕಿದ್ರೆ ಶಿಕಾರಿ, ಇಲ್ದಿದ್ರೆ ಭಿಕಾರಿ’ ರೂಪುಗೊಂಡಿದೆ. ಈ ಚಿತ್ರದ ಇನ್ನೊಂದು ವಿಶೇಷ ಅದೇ ಸಮುದಾಯದವರಾಗಿ ಶಿಕ್ಷಣ ಪಡೆದು ಈಗ ಜೋಗದಲ್ಲಿ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಆಗಿರುವ ಕುಮುದಾ ಅವರ ಭಾಗವಹಿಸುವಿಕೆ.

ಹಕ್ಕಿಪಿಕ್ಕಿ ಸಮುದಾಯದವರನ್ನು ನೀವು ಖಂಡಿತಾ ನೋಡಿರುತ್ತೀರಿ. ಸಂತೆ-ಜಾತ್ರೆ-ತೇರುಪೇಟೆಯಲ್ಲಿ ಒಂದಷ್ಟು ಮಾಸಲು ಪ್ಲಾಸ್ಟಿಕ್ ಬಾಟಲಿಗಳಲ್ಲಿ ಬಣ್ಣದ ಎಣ್ಣೆಯಿಟ್ಟುಕೊಂಡು ನೋವುಗಳೇ ತಮ್ಮ ಬಲೆಗೆ ಬಂದು ಬೀಳುವಂತೆ ‘ಹಳೇನೋವು-ಹೊಸನೋವು-ಸಂದುನೋವು-ಮಾಯದ ನೋವುಗಳಿಗೆ ಮಾಲಿಶ್’ ಎಂದು ಕೂಗಿಕರೆಯುವ ವಿಶಿಷ್ಟ ಚಹರೆಯ ಜನರನ್ನು ನೋಡಿರುತ್ತೀರಿ. ನಿಮ್ಮ ಊರ ಬೀದಿಗಳಲ್ಲಿ ತಮ್ಮದೇ ಆದ ರಾಗ-ಧಾಟಿ-ಶೃತಿಯಲ್ಲಿ ‘ಹಳೇ ಕೂದ್ಲಾ, ಕಡ್ಡಿ, ಪಿನ್ನಾ, ಬಾಚಣಿಕೆ, ಟಿಕ್ಲೀ..’ ಎಂದು ಕೂಗುತ್ತ ಸಾಗುವ ಕೃಶ ಮಹಿಳೆಯನ್ನು ನೋಡಿರುತ್ತೀರಿ. ಹೂವಿನ ಸರ, ಮಣಿಸರ, ಮಣಿಯುಂಗುರ, ವುಲನ್-ಮಕಮಲ್ಲಿನ ನಾನಾ ಪ್ರಾಣಿಪಕ್ಷಿಗಳ ಗೊಂಬೆಗಳನ್ನು ರಸ್ತೆಬದಿ ರಾಶಿಹಾಕಿ ಮಾರುವ ಜನರನ್ನು ಖಂಡಿತ ನೋಡಿರುತ್ತೀರಿ.

ಇಪ್ಪತ್ನಾಲ್ಕು ವರ್ಷಗಳ ಹಳ್ಳಿಯ ವೈದ್ಯಕೀಯ ಪ್ರಾಕ್ಟೀಸಿನಲ್ಲಿ ನಾನು ಹಕ್ಕಿಪಿಕ್ಕಿಗಳಿಗೆ ನಾನಾ ರೀತಿ ಮುಖಾಮುಖಿಯಾಗಿರುವೆ. ಸಣ್ಣ ಪ್ರಚೋದನೆಗೂ ನಿಷ್ಕಳಂಕವಾಗಿ ಎದೆಯಾಳದಿಂದ ಬರುವ ಅವರ ನಗುವಿಗೆ ವಿನೀತಳಾಗಿದ್ದೇನೆ. ಕೆಲವು ಆರೋಗ್ಯ ಮಾಹಿತಿಗಳನ್ನು ಅವರಿಗೆ ದಾಟಿಸಲಾಗದೇ ಸೋಲೊಪ್ಪಿಕೊಂಡಿದ್ದೇನೆ. ಸರ್ಕಾರಿ ಸವಲತ್ತುಗಳ ಬಗೆಗೆ ಅವರಿಗೆ ತಿಳಿದಿದೆಯೋ ಇಲ್ಲವೋ? ತಲುಪಿವೆಯೋ ಇಲ್ಲವೋ? ಎಂದು ನಮ್ಮೂರ ಗುಡ್ಡಗಳ ಇಳಿಜಾರಲ್ಲಿ ಟೆಂಟು ಕಟ್ಟಿಕೊಂಡವರ ಬಳಿ ಹೋಗಿ ಕೇಳಿದರೆ ಹೆಂಗಸರು ಮುಖ ತುಂಬ ಪ್ರಶ್ನೆ ತುಂಬಿಕೊಂಡು ನನಗೇ ಅವನ್ನು ಹಿಂದಿರುಗಿಸಿದರು. ತೂರಾಡುತ್ತಿದ್ದ ಗಂಡಸರು ತಮ್ಮ ಬಿಡಾರದ ಬಳಿ ನನ್ನ ಕಂಡದ್ದಕ್ಕೆ ಸಂದಿ, ಹಳು ಹೊಕ್ಕು ಮಾಯವಾದರು. ಇನ್ನೂ ಅವರ ಜಗತ್ತಿನೊಳಗೆ ಸುಲಭದ ಪ್ರವೇಶ ಸಿಗದೆ ಹೊರಗುಳಿದಿದ್ದೇನೆ.

ಕಣ್ಣೆದುರು ಕಾಣುವ ಎಷ್ಟೋ ಹಕ್ಕಿಗಳ ಬದುಕಿನ ಹಾಗೇ ಅಲೆಮಾರಿ ಬದುಕೂ ನಮ್ಮ ಮಟ್ಟಿಗೆ ಅನಾಮಿಕ, ಅದೃಶ್ಯ. ಅವರು ಬರುವುದಾಗಲೀ, ಇರುವುದಾಗಲೀ ನಮ್ಮ ಗಮನಕ್ಕೇ ಬಂದಿರುವುದಿಲ್ಲ. ಆಗೀಗ ಕಣ್ಣಿಗೆ ಬಿದ್ದು ಮರೆಯಾಗುವವರ ಭಾಷೆ ಯಾವುದೋ, ಹಾಡುಹಸೆ ಯಾವುವೋ, ದೇವರುಗಳು ಯಾರೋ, ದಿನನಿತ್ಯದ ಬದುಕು ಹೇಗೆ ಸಾಗಿಸುವರೋ, ಕ್ರಿಮಿನಲ್ ಟ್ರೈಬ್ಸ್ ಆಕ್ಟ್ ೧೮೭೧ರ ಪ್ರಕಾರ ಬ್ರಿಟಿಷರಿಂದ ಅಪರಾಧಿ ಬುಡಕಟ್ಟು ಎಂಬ ತಪ್ಪು ಶಿರೋನಾಮೆಗೆ ಒಳಗಾಗಿ ಎಷ್ಟು ಕಷ್ಟಪಟ್ಟರೋ, ತುತ್ತಿನ ಚೀಲ ತುಂಬಿಸಲು ಏನೇನು ಮಾಡಿದರೋ – ಇವೆಲ್ಲದರ ಬಗೆಗೆ ನಮಗೆ ಏನೂ ಗೊತ್ತಿರುವುದಿಲ್ಲ. ಈ ಜನ ಯಾರು, ಇಂತಹ ವಸ್ತುಗಳ ವ್ಯಾಪಾರದ ಲಾಭದಿಂದ ಹೇಗೆ ಬದುಕು ಸಾಗಿಸುತ್ತಾರೆ ಎಂದು ಮನೆಯೆದುರು ಹಾದು ಹೋದಾಗಲೂ ನಾವು ಯೋಚಿಸಿರುವುದಿಲ್ಲ. ‘ಸಿಕ್ಕಿದ್ರೆ ಶಿಕಾರಿ, ಇಲ್ದಿದ್ರೆ ಭಿಕಾರಿ’ಯಂತಹ ಸಾಕ್ಷ್ಯಚಿತ್ರಗಳು ಅವರ ಬದುಕುಬವಣೆ ಕುರಿತು ನಮ್ಮ ಕಣ್ತೆರೆಸಬೇಕಾಗಿದೆ.

ಅದಕ್ಕೇ ಈ ಮತ್ತು ಇಂತಹ ಸಾಕ್ಷ್ಯಚಿತ್ರಗಳು ಮೌಲಿಕವಾದವು ಎಂದು ಅನಿಸುತ್ತಿದೆ.

***

ವಗ್ರಿ ಬೋಳಿ ಎಂಬ ಭಾಷೆ ಮಾತನಾಡುವ ಹಕ್ಕಿಪಿಕ್ಕಿಗಳು ಬಗ್ರಿ, ಚಿಗರಿ ಬೇಟೆಗಾರ, ಗುವ್ವಾಲೊಳ್ಳು, ಹರಣ್ ಶಿಕಾರಿ, ಮೇಲ್ ಶಿಕಾರಿ ಮುಂತಾದ ಹೆಸರುಗಳಿಂದ ಕರೆಯಲ್ಪಡುತ್ತಾರೆ. ಹೆಸರೇ ಹೇಳುವಂತೆ ಅವರದು ಶಿಕಾರಿಯನ್ನೇ ನೆಚ್ಚಿಕೊಂಡಿದ್ದ ಪಶ್ಚಿಮ ಭಾರತದ ಸಮುದಾಯ. ತಮ್ಮ ದೊರೆ ರಾಣಾ ಪ್ರತಾಪನನ್ನು ಮೊಘಲ್ ದೊರೆ ಸೋಲಿಸಿದ ಬಳಿಕ ಕೆಲವರು ಪಾಕಿಸ್ತಾನದ ಕಡೆ ವಲಸೆ ಹೋದರೆ, ಬಹುಪಾಲು ಜನ ದಕ್ಷಿಣದ ಕಡೆಗೆ ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ಕೇರಳಗಳಲ್ಲಿ ಚದುರಿದರು. ಕರ್ನಾಟಕದ ದಕ್ಷಿಣ ಭಾಗದಲ್ಲಿ ಹೆಚ್ಚು ಹರಡಿಕೊಂಡರು. ಈಗಲೂ ದಾದಾಜಿ, ಜೋಗನ್, ವಿಖ್ಲಿ, ನೋಕೊರ್, ದುರ‍್ಗಾ-ಕಲ್ಕಾ, ಚಾಮುಂಡೇಶ್ವರಿ ಮೊದಲಾದ ದೇವರುಗಳನ್ನು ತಮ್ಮ ಟೆಂಟು, ವಸ್ತುಗಳೊಡನೆ ಹೊತ್ತು ರಾಜ್ಯ-ದೇಶದ ಗಡಿದಾಟಿ ಅಲೆಯುತ್ತಾರೆ. ಅಲೆಮಾರಿತನದ ಕಾರಣವಾಗಿ ತಮ್ಮ ಭಾಷೆಯಲ್ಲದೆ ಕನ್ನಡ, ಹಿಂದಿ, ತಮಿಳು, ಮಲೆಯಾಳಿ, ತೆಲುಗು, ಕೊಂಕಣಿ ಮುಂತಾಗಿ ಹಲವು ಭಾಷೆಗಳ ಸುಲಲಿತವಾಗಿ ಮಾತಾಡಲು ಕಲಿತಿದ್ದಾರೆ.

ಈ ಸಾಕ್ಷ್ಯಚಿತ್ರ ದಾಖಲಿಸುವಂತೆ ಹಕ್ಕಿಪಿಕ್ಕಿಗಳ ಹೆಸರುಗಳು ಬಹು ವಿಚಿತ್ರವಾಗಿವೆ. ಕಾಫಿ, ಡಿವಿಷನ್, ಚಾಕೊಲೇಟ್ ಬಾಯಿ, ಇನ್ಸ್‌ಪೆಕ್ಟರ್, ಸಕ್ರೆ, ಹೈಕೋರ್ಟ್, ಡಿವೈಎಸ್ಪಿ, ಎಂಪಿ ಶಂಕರ್, ಜಪಾನ್, ಇಂಗ್ಲಿಷ್, ಪಿಸ್ತೂಲ್, ಸೈಕಲ್ ರಾಣಿ, ಗವರ್ನಮೆಂಟ್, ಶಾದಿ, ಗ್ಲೂಕೋಸ್, ತರ‍್ಟಿ ಸಿಕ್ಸ್ ಇವೆಲ್ಲ ವ್ಯಕ್ತಿಗಳ ಹೆಸರುಗಳು! ಹೆರಿಗೆಯಾದ ಹೊತ್ತಲ್ಲಿ ಯಾವ ವ್ಯಕ್ತಿ, ಸ್ಥಳ, ವಸ್ತುವಿನ ಹೆಸರು ಹೊಸದಾಗಿ ಗಮನ ಸೆಳೆವುದೊ ಆ ಹೆಸರನ್ನು ಮಗುವಿಗಿಡುವವರು ಅವರು. ಕೋರ್ಟ್ ಎಂಬಾತನಿಗೆ ಆ ಹೆಸರು ಬಂದಿದ್ದು ಅವನ ತಾಯ್ತಂದೆಯರ ಟೆಂಟು ಕೋರ್ಟಿನ ಬಳಿಯಿದ್ದಾಗ ಅವ ಹುಟ್ಟಿದ್ದರಿಂದ. ಮೊದಲು ನದಿ-ಬೆಟ್ಟ-ಮರಗಳ ಹೆಸರಿಡುತ್ತಿದ್ದವರು ಇಂತಹ ಚಿತ್ರವಿಚಿತ್ರ ಹೆಸರಿಡಲು ಕಾರಣವಿದೆ. ಹಿರೀಕನೊಬ್ಬ ವಿವರಿಸುವಂತೆ ಅವರದು ‘ಸಿಂಗ್’ ಸರ್‌ನೇಮ್ ಪಡೆದಿದ್ದ ಕ್ಷತ್ರಿಯ ಸಮುದಾಯವಾಗಿತ್ತು. ಆದರೆ ಹೊಸನೆಲದಲ್ಲಿ ನೆಲೆಗೊಳ್ಳಬೇಕಾದ ಪರಿಸ್ಥಿತಿ ಬಂದಾಗ ಯಾವ ನೆಲದ ನೀತಿನಿಯಮ, ಕಾನೂನುಗಳನ್ನೂ ಕೇರ್ ಮಾಡದೆ ಮುಕ್ತವಾಗಿ ತಿರುಗಾಡಿಕೊಂಡಿರುವಂತೆ ಆಯಿತು. ಒಂದೆಡೆ ನೆಲೆ ನಿಲ್ಲದೆ ಊರೂರಿಗೆ ‘ಓಡಿಹೋಗುವ’ವರಾದ್ದರಿಂದ ಸಮಾಜ ಅವರನ್ನು ಕಳ್ಳರೆಂಬಂತೆ ನಡೆಸಿಕೊಂಡಿತು. ಅದರ ಮೇಲೆ ಬ್ರಿಟಿಷರು ಕೊಟ್ಟ ಅಪರಾಧಿ ಬುಡಕಟ್ಟು ಎಂಬ ಕಿರೀಟ ಬೇರೆ. ಹೀಗಿರುವಾಗ ತಮ್ಮ ಕುಲದ ಗುರುತು ಮರೆಸಲು ಬೇರೆಬೇರೆ ಹೆಸರುಗಳು ಅವರಿಗೆ ನೆರವಾಗುತ್ತಿದ್ದವಂತೆ. ಜೊತೆಗೆ ಅಲೆಮಾರಿತನದ ಇತಿಹಾಸವನ್ನು, ಹುಟ್ಟಿದ ಕಾಲ-ಸ್ಥಳದ ಪರಿಚಯವನ್ನು ಆ ಹೆಸರುಗಳು ನೀಡುವುದರಿಂದ ಅಂತಹ ಹೆಸರಿಟ್ಟರಂತೆ.

ಈಗ ಅವರ ಹೆಸರುಗಳು ಬದಲಾಗಿವೆ. ಈಗಿನ ಬಹುತೇಕ ಮಕ್ಕಳು ಟಿವಿ ಸೀರಿಯಲ್‌ಗಳ, ಸಿನಿಮಾ ನಾಯಕನಾಯಕಿಯರು, ರಾಜಕೀಯ ನೇತಾರರ ಹೆಸರು ಹೊತ್ತಿದ್ದಾರೆ.

ಹಕ್ಕಿಪಿಕ್ಕಿಗಳದು ಮಾತೃಪ್ರಧಾನ ಸಮಾಜ. ವರದಕ್ಷಿಣೆ ಇಲ್ಲ, ವಧು ದಕ್ಷಿಣೆ ಇದೆ. ಪೂಜಿಸುವ ದೇವರು ಒಂದೇ ಇರುವ ವಂಶಗಳ ನಡುವೆ ಮದುವೆ ನಿಷಿದ್ಧವಾಗಿದೆ. ಸಮುದಾಯದ ಸ್ವಾಯತ್ತ ಹೆಣ್ಮಕ್ಕಳು ವಸ್ತುಗಳ ತಯಾರಿ, ಮಾರಾಟ, ಹಣಕಾಸು ವ್ಯವಹಾರ ಎಲ್ಲದರಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಮಹಿಳೆಯರ ಸಣ್ಣಸಣ್ಣ ಗುಂಪುಗಳು ಒಂದೂರಿಂದ ಇನ್ನೊಂದೂರಿಗೆ ಅಲೆಯುತ್ತ ವ್ಯಾಪಾರ ಮಾಡಿ ಬರುತ್ತವೆ.

ಜನಗಣತಿ ಪ್ರಕಾರ ಅವರ ಜನಸಂಖ್ಯೆ ಅಜಮಾಸು ೧೮ ಸಾವಿರ. ಕರ್ನಾಟಕದಲ್ಲಿ ೧೧೦೦೦ ಜನ, ತಮಿಳುನಾಡಿನಲ್ಲಿ ೭೦೦೦, ಆಂಧ್ರದಲ್ಲಿ ೩೦೦, ಪಾಂಡಿಚೆರಿಯಲ್ಲಿ ೧೦೦ ಜನ ಇದ್ದಾರೆ. ಆದರೆ ಈ ಸಂಖ್ಯೆ ಸರಿಯಲ್ಲ ಎಂದೇ ಹಲವರ ಭಾವನೆ. ಕರ್ನಾಟಕದಲ್ಲೇ ೧೮೦೦೦ಕ್ಕಿಂತ ಹೆಚ್ಚು ಜನರಿದ್ದಾರೆ ಎಂದು ಬುಡಕಟ್ಟು ಅಧ್ಯಯನಗಳು ಹೇಳುತ್ತವೆ. ಅವರು ತಮ್ಮನ್ನು ತಾವು ಯಾವ ಧರ್ಮದಲ್ಲೂ ಗುರುತಿಸಿಕೊಳ್ಳದೆ ಪ್ರಕೃತಿಯೇ ಧರ್ಮವಾಗಿ ಬದುಕಿದ್ದರು. ವರ್ಣಧರ್ಮವಂತೂ ಅವರನ್ನು ನಾಲ್ಕು ವರ್ಣಗಳಾಚೆಯ ಪಂಚಮರ ಆಚೆಗೂ ದೂಡಿತ್ತು. ಆದರೆ ಕಾಲ ಬದಲಾಗಿದೆ. ಈಗವರು ಹಿಂದೂತ್ವದ ಮತ್ತು ಕ್ರೈಸ್ತ ಮಿಷನರಿಗಳ ಕೈಯ ದಾಳವಾಗಿದ್ದಾರೆ. ಒಂದು ಮಾಹಿತಿಯಂತೆ ಅವರಲ್ಲಿ ೯೯% ‘ಹಿಂದೂ’ಗಳು, ೧% ಕ್ರೈಸ್ತರು, ಬೆರಳೆಣಿಕೆಯಷ್ಟು ಜನ ಮುಸ್ಲಿಮರು. ಹಲವರು ಬ್ರಹ್ಮಕುಮಾರಿಯರ ಪಂಥ ಪಾಲಿಸುತ್ತಾರೆ.

ಅವರಲ್ಲಿ ಊರೂರು ಸುತ್ತುತ್ತ ತಮ್ಮ ವ್ಯಾಪಾರೀ ಚಾಕಚಕ್ಯತೆಯನ್ನು ಹಳ್ಳಿ-ಕೇರಿಗಳಿಂದ ಹಿಡಿದು ಪರರಾಜ್ಯ, ಪರದೇಶಗಳಿಗೂ ವಿಸ್ತರಿಸಿದವರು ಇದ್ದಾರೆ! ಟಿಬೆಟ್, ಶ್ರೀಲಂಕಾ, ಯೂರೋಪು, ಆಫ್ರಿಕಾ, ದಕ್ಷಿಣ ಅಮೆರಿಕದ ತನಕ ಹೋಗಿ ಕೂದಲು, ತೈಲ, ಮಣಿ, ಬೇರು, ಹುಲಿಯುಗುರು ಮಾರಿ ಬಂದಿದ್ದಾರೆ. ಕೆಲವರು ಚರ್ಚಿನ ವತಿಯಿಂದ ಹೋಗಿಬಂದರೆ ಮತ್ತೆ ಕೆಲವರು ಫಾರಿನ್ ಟೂರಿಸ್ಟುಗಳನ್ನು ಹಿಡಿದು, ಸಾಲಸೋಲ ಮಾಡಿ, ಪಾಸ್‌ಪೋರ್ಟು ವೀಸಾ ಮಾಡಿಸಿಕೊಂಡು ಹೋಗಿಬಂದಿದ್ದಾರೆ. ವಿದೇಶ ತಿರುತಿರುಗಿ ಕೆಲವರ ಪಾಸ್‌ಪೋರ್ಟ್ ಪುಸ್ತಕ ತುಂಬಿ, ನಂತರ ೩-೪ ಪುಸ್ತಕ ತುಂಬಿವೆ! ಭಾಷೆ-ಜನ ಗೊತ್ತಿಲ್ಲದ ದೇಶಗಳಿಗೂ ಹೋಗಿ ವ್ಯಾಪಾರ ಮಾಡಲು ಅವರಿಗಿರುವ ಹುಕಿ, ಧೈರ್ಯ ಅಚ್ಚರಿ ಹುಟ್ಟಿಸುವಂತಿದೆ.

ಅವರ ವ್ಯಾಪಾರಿ ರಹಸ್ಯಗಳಲ್ಲಿ ಕೆಲವನ್ನು ಕೇಳಿ: ರುದ್ರಾಕ್ಷಿ ಒರಿಜಿನಲ್ ಮಣಿಯನ್ನು ಆಭರಣ ಮಾಡುವವರಿಗೆ ಕೊಡುತ್ತಾರಂತೆ, ಯಾಕೆಂದರೆ ಅವರು ಅಸಲಿ ನಕಲಿ ಪತ್ತೆಹಚ್ಚುಬಿಡುತ್ತಾರೆ. ಅದೇ, ನಕಲಿ ರುದ್ರಾಕ್ಷಿಯನ್ನು ಜ್ಯೋತಿಷಿಗಳಿಗೆ ಮಾರುತ್ತಾರಂತೆ! ಕುರಿ-ಆಡು-ಆಕಳ ಗೊರಸನ್ನು ಕೆತ್ತಿ ಅದರಿಂದ ಹುಲಿಯುಗುರು ತಯಾರಿಸುತ್ತಾರಂತೆ! ತಮ್ಮ ಬಳಿ ಯಾರೂ ಸುಳಿಯದಂತೆ ರಕ್ಷಿಸಿಕೊಳ್ಳಲು ಸ್ನಾನ ಮಾಡದೆ ಮೈ ವಾಸನೆ ಸೂಸಲು ಬಿಡುತ್ತಾರಂತೆ!

***

ಸತತ ಚಲಿಸುತ್ತಿದ್ದ, ಇಡಿಯ ವಿಶ್ವವೇ ಮನೆಯಾಗಿದ್ದ ನಿಜ ವಿಶ್ವಮಾನವರು, ನಿಜ ಜಂಗಮರು ಅವರು. ಮನರಂಜನೆ, ವ್ಯಾಪಾರ, ಬೇಟೆ, ಕಲೆ ಮುಂತಾಗಿ ಜನಸಮುದಾಯಗಳ ನಡುವಿನ, ಸಾಮ್ರಾಜ್ಯಗಳ ನಡುವಿನ ಸೇತುವೆಯಾಗಿ; ರಾಜ್ಯಗಳ ಏಳುಬೀಳುಗಳಿಗೆ ಸಾಕ್ಷಿಯಾಗಿ ಇದ್ದವರು. ಸಂಪರ್ಕ ಸಂವಹನ ಸುಲಭವಿಲ್ಲದ ಕಾಲದಲ್ಲಿ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳು ಉತ್ತರದಿಂದ ದಕ್ಷಿಣಕ್ಕೆ, ಪೂರ್ವದಿಂದ ಪಶ್ಚಿಮಕ್ಕೆ ಚಲಿಸುತ್ತ ಈ ನೆಲದ ಭಾಷೆ, ಸಂಸ್ಕೃತಿ, ಆಚರಣೆಗಳು ವೈವಿಧ್ಯಮಯವಾಗಿ ರೂಪುಗೊಳ್ಳಲು ಕಾರಣರಾಗಿದ್ದರು.

ಆದರೆ ಈಗ ಆಧುನಿಕತೆ ಹಾಗೂ ಜಾಗತೀಕರಣಗಳು ಭಾರತೀಯ ಸಮಾಜದ ಚಿತ್ರಣವನ್ನು ಆಮೂಲಾಗ್ರ ಬದಲಿಸುತ್ತಿರುವಾಗ ಅಲೆಮಾರಿಗಳ ಪಾರಂಪರಿಕ ಜೀವನ ವಿಧಾನ ಪಲ್ಲಟಗೊಳ್ಳತೊಡಗಿದೆ. ಅಂಚಿನ ಸಮುದಾಯಗಳು ತಬ್ಬಲಿಯಾಗತೊಡಗಿವೆ. ಪ್ರಕೃತಿ-ಅರಣ್ಯವೇ ತಮ್ಮ ಶರೀರವೆಂಬಂತೆ ಸಹಬಾಳ್ವೆಯಿಂದ ಬದುಕಿದ್ದವರಿಗೆ ಅಭಿವೃದ್ಧಿ, ಅರಣ್ಯ ರಕ್ಷಣೆ, ಕೈಗಾರಿಕೀಕರಣಗಳ ರೂಪದಲ್ಲಿ ಕಷ್ಟ ಬಂದೆರಗಿದೆ. ಈಗ ಅವರ ಕುಲ ಅಪರಾಧಿಯಲ್ಲದಿರಬಹುದು, ಅವರ ಶಿಕಾರಿ ವೃತ್ತಿ ಅಪರಾಧವೆನಿಸಿಕೊಂಡಿದೆ. ಸ್ವತಂತ್ರ ಭಾರತವು ೧೯೫೨ರಲ್ಲಿ ‘ಕ್ರಿಮಿನಲ್ ಟ್ರೈಬ್ಸ್’ ಪಟ್ಟಿಯನ್ನು ಡಿನೋಟಿಫೈ ಮಾಡಿ ವಸತಿ, ಶಿಕ್ಷಣ, ಉದ್ಯೋಗ ಪಡೆಯಲು ಕೆಲವು ಯೋಜನೆಗಳನ್ನು ಹಾಕಿಕೊಂಡಿದೆ. ಆದರೆ ಅಲೆಮಾರಿ ಬದುಕಿನ ಸಮಸ್ಯೆಗಳಿಗಿಂತ ಅಲೆಮಾರಿಗಳೇ ಸಮಸ್ಯೆ ಎಂದು ನಾಗರಿಕ ಸಮಾಜ ಹಾಗೂ ಪ್ರಭುತ್ವ ಭಾವಿಸಿರುವುದಕ್ಕೋ ಏನೋ, ಮುನ್ನೋಟವಿಲ್ಲದ ಯೋಜನೆಗಳು ಅವರ ಬದುಕಿಗೆ ಕಂಟಕಗಳಾಗಿ ಪರಿಣಮಿಸಿವೆ.

ಹೀಗೆ ಈ ಸಾಕ್ಷ್ಯಚಿತ್ರ ಕಾಣಿಸುವುದೆಲ್ಲ ಹಕ್ಕಿಪಿಕ್ಕಿ ಸಮುದಾಯದ ಏಳುಬೀಳಿನ ಕತೆ. ‘ನಾಗರಿಕ’ಗೊಳಿಸುವ ಯತ್ನದ ಫಲವಾಗಿ ತಮ್ಮ ಜಂಗಮತ್ವ ಕಳೆದುಕೊಂಡು, ತಮ್ಮ ಗಡಿಗಳ ಕುಗ್ಗಿಸಿಕೊಂಡು, ನಾಲ್ಕು ಗೋಡೆಗಳ ನಡುವೆ, ಒಂದು ಕೇರಿ-ಊರಿನ ಮಟ್ಟಿಗೆ ತಮ್ಮನ್ನು ಸೀಮಿತಗೊಳಿಸಿಕೊಂಡು ಸ್ಥಾವರಗೊಳ್ಳಲು ಹೊರಟವರ ಸಂಕಷ್ಟದ ಕತೆ. ‘ನೆಲ ನಮ್ಮದಲ್ಲ-ನಾವು ನೆಲಕೆ ಸೇರಿದವರು’ ಎನ್ನುತ್ತ ಎಲ್ಲೂ ನೆಲೆ ನಿಲ್ಲದೇ ಹರ್ಗಿಸ್ ನೆಲಪತಿಗಳಾಗಲೊಪ್ಪದೇ ಉಳಿದವರ ಕತೆ. ಈಗ ದಶಕಗಳಿಂದ ಬೀಡುಬಿಟ್ಟ ನೆಲದ ಹಕ್ಕುಪತ್ರ ತಮಗೆ ಕೊಡಿ ಎಂದು ಹೋರಾಡುತ್ತಿರುವವರ ಕತೆ.

ಈ ಸಾಕ್ಷ್ಯಚಿತ್ರವು ಹಕ್ಕಿಪಿಕ್ಕಿಗಳ ಬದುಕಿನ ಕುರಿತು ಹಲವು ಒಳ ಸುಳುಹು, ಹೊಳಹುಗಳನ್ನು ಹೊಂದಿದೆ. ಈ ಮೊದಲು ‘ಮಹುವಾ ಮೆಮಾಯರ‍್ಸ್’, ‘ದ ಬೀ, ದ ಬೇರ್ ಅಂಡ್ ದ ಕುರುಬ’ ಮೊದಲಾದ ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರಗಳ ತೆಗೆದ ವಿನೋದ್ ರಾಜಾ ಸಾಕಷ್ಟು ವಸ್ತು, ವಿವರ, ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿ ಈ ಸಾಕ್ಷ್ಯಚಿತ್ರ ರೂಪಿಸಿದ್ದಾರೆ. ವಿಷಯ ಹಂದರವನ್ನು, ಸಂಭಾಷಣೆಯನ್ನು ಮಧು ಭೂಷಣ್ ನೀಡಿದ್ದಾರೆ. ಒಟ್ಟಾರೆ ಹೇಳುವುದಾದರೆ ಈ ಚಿತ್ರ ನೋಡುವವರಿಗೆ ಸಮಾಜದಿಂದ ಅವಗಣನೆಗೆ ಒಳಗಾದ ಲೋಕದೊಳಗೊಂದು ಸುತ್ತು ಹೋಗಿಬಂದ ಅನುಭವವಾಗುತ್ತದೆ. ಅವರಿಗಾಗಿ ಏನೂ ಮಾಡದ, ಅವರ ಕುರಿತು ಕಿಂಚಿತ್ತೂ ಚಿಂತಿಸದ ನಮ್ಮ ಬೇಜವಾಬ್ದಾರಿತನದ ಬಗೆಗೆ ನಾಚಿಕೆಯಾಗುತ್ತದೆ. ಹಕ್ಕಿಪಿಕ್ಕಿಗಳಿಗಾಗಿ, ಅವರಂಥ ಅದೃಶ್ಯ ಸಮುದಾಯಗಳಿಗಾಗಿ ಏನಾದರೂ ಮಾಡಬಯಸುವವರು ಒಮ್ಮೆಯಾದರೂ ಈ ಚಿತ್ರವನ್ನು ನೋಡಿ ತಮ್ಮ ದಾರಿಯನ್ನು ಸ್ಪಷ್ಟಪಡಿಸಿಕೊಳ್ಳಬಹುದಾಗಿದೆ.

ಆದರೆ ಹೇಳಬೇಕಾದ್ದು ಇನ್ನೆಷ್ಟೋ ಇದೆ; ತಮ್ಮ ಹಕ್ಕು ಸವಲತ್ತುಗಳ ಕುರಿತ ಪ್ರಜ್ಞೆ ಎಚ್ಚೆತ್ತು ಅವರು ಸಂಘಟಿತರಾಗಬೇಕಿದೆ; ಅಂಬೇಡ್ಕರರಂಥ ಧೀಮಂತ ನಾಯಕನೊಬ್ಬ ಅವರ ನಡುವೆ ಹುಟ್ಟಿ ಬರಬೇಕಿದೆ. ಅದಕ್ಕೆ ಪೂರಕವಾಗಿ ಹಕ್ಕಿಪಿಕ್ಕಿಗಳೊಂದಿಗಿನ ತಮ್ಮ ಒಡನಾಟದ ಅನುಭವಗಳನ್ನು, ಈ ಚಿತ್ರ ದಾಖಲಿಸದ ಇನ್ನೆಷ್ಟೋ ತಿಳಿವನ್ನು ಮಧು ದಾಖಲಿಸಬೇಕು. ಒಂದೂಕಾಲು ಗಂಟೆಯಲ್ಲಿ ತೋರಿಸಲಾಗದೆ ಬಿಟ್ಟ ಸೂಕ್ಷ್ಮಗಳನ್ನು ಬರೆಯಬೇಕು.

 

ಡಾ. ಎಚ್. ಎಸ್. ಅನುಪಮಾ

 

Please follow and like us:
error