ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂಕೋರ್ಟ್ ಅಸ್ತು

ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂಕೋರ್ಟ್ ಅಸ್ತು

ಹೊಸದಿಲ್ಲಿ, ಸೆ.28: ಇಂದು ಮತ್ತೊಂದು ಐತಿಹಾಸಿಕ ತೀರ್ಪು ನೀಡಿದ ಸುಪ್ರೀಂಕೋರ್ಟ್ ಕೇರಳದ ಶಬರಿಮಲೆ ದೇವಸ್ಥಾನಕ್ಕೆ ಎಲ್ಲ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ದೀಪಕ್ ಮಿಶ್ರಾ ನೇತೃತ್ವದ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠ ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶ ನೀಡುವ ಕುರಿತು ಶುಕ್ರವಾರ ಐತಿಹಾಸಿಕ ತೀರ್ಪು ಪ್ರಕಟಿಸಿದೆ.

ಮಹಿಳೆಯರನ್ನು ದೀರ್ಘಕಾಲದಿಂದ ತಾರತಮ್ಯದಿಂದ ನೋಡಲಾಗುತ್ತಿದೆ. ಮಹಿಳೆಯರು ಎಂದಿಗೂ ತಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದಾರೆ. ಭಾರತದಲ್ಲಿ ಮಹಿಳೆಯರಿಗೆ ದೇವತೆಯ ಸ್ಥಾನ ನೀಡಲಾಗಿದೆ. ಮಹಿಳೆಯರನ್ನು ದುರ್ಬಲರೆಂದು ನೋಡಬಾರದು. ಮಹಿಳೆಯರ ಕುರಿತು ಸಮಾಜದ ಗ್ರಹಿಕೆ ಬದಲಾಗಬೇಕಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ಜಸ್ಟಿಸ್ ಖಾನ್ವಿಲ್ಕರ್ ನೇತೃತ್ವದಲ್ಲಿ ಜಂಟಿ ತೀರ್ಪಿನಲ್ಲಿ ಹೇಳಿದ್ದಾರೆ.

ನ್ಯಾಯಪೀಠದಲ್ಲಿ ಜಸ್ಟಿಸ್ ರೊಹಿಂಗ್ಟನ್ ಫಾಲಿ ನಾರಿಮನ್, ಜಸ್ಟಿಸ್ ಎ.ಎಂ. ಖಾನ್ವಿಲ್ಕರ್, ಜಸ್ಟಿಸ್ ಡಿ.ವೈ. ಚಂದ್ರಚೂಡ್ ಹಾಗೂ ಜಸ್ಟಿಸ್ ಇಂದೂ ಮಲ್ಹೋತ್ರಾ ಅವರಿದ್ದಾರೆ.

ಇಂಡಿಯನ್ ಯಂಗ್ ಲಾಯರ್ಸ್‌ ಅಸೋಸಿಯೇಶನ್ 10 ಹಾಗೂ 50 ವಯಸ್ಸಿನ ನಡುವಿನ ಮಹಿಳೆಯರು ಶಬರಿ ಮಲೆ ದೇವಸ್ಥಾನ ಪ್ರವೇಶಿಸಲು ನಿಷೇಧ ಹೇರಿದ್ದನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ 2006ರ ಜನವರಿ 11 ರಂದು ಸಲ್ಲಿಕೆಯಾಗಿದ್ದು ಒಂದು ದಶಕದ ಬಳಿಕ 2016ರ ಜನವರಿ 11 ರಂದು ನ್ಯಾಯಾಲಯ ಪಿಐಎಲ್ ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು. ಆಗಸ್ಟ್ 1 ರಂದು ಅಂತಿಮ ತೀರ್ಪನ್ನು ಕಾಯ್ದಿರಿಸಿತ್ತು.

ತೀರ್ಪು ಪುನರ್‌ಪರಿಶೀಲನೆಗೆ ಅರ್ಜಿ: ಎಲ್ಲ ವಯಸ್ಸಿನ ಮಹಿಳೆಯರಿಗೆ ಶಬರಿಮಲೆ ದೇವಸ್ಥಾನಕ್ಕೆ ಪ್ರವೇಶಕ್ಕೆ ಅಸ್ತು ಎಂದಿರುವ ಸುಪ್ರೀಂಕೋರ್ಟಿನ ತೀರ್ಪಿನ ಪುನರ್‌ಪರಿಶೀಲನೆಗೆ ಅರ್ಜಿ ಸಲ್ಲಿಸಲಾಗುತ್ತದೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದೆ.