ಯಾವುದೀ ಎಂಇಪಿ ಪಕ್ಷ? ಯಾರು ಈ ನೌಹೇರಾ ಶೇಖ್?

ಕರ್ನಾಟಕ ಚುನಾವಣಾ ಕಣಕ್ಕೆ ಧುತ್ತನೆ ಧುಮುಕಿದ ಹೊಸ ಪಕ್ಷದ ಸುತ್ತ ಸಂಶಯದ ಹುತ್ತ

ನೌಹೇರಾ ಶೇಖ್ ಹಲವು ಕಾರ್ಯಕ್ರಮಗಳಲ್ಲಿ ಬಿಜೆಪಿ ನಾಯಕರೊಂದಿಗೆ ಕಾಣಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ದೇಶದ ಹಲವು ರಾಜ್ಯಗಳಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಕರ್ನಾಟಕವನ್ನು ಕೈವಶ ಮಾಡಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಬಿಜೆಪಿಯ ರಾಷ್ಟ್ರ ನಾಯಕರು ಕರ್ನಾಟಕಕ್ಕೆ ಆಗಾಗ್ಗೆ ಬಂದು ಹೋಗುತ್ತಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖ ಮತದಾರರಾಗಿರುವ ಮುಸ್ಲಿಮರ ಮತವನ್ನು ಒಡೆಯಲು ನೌಹೇರಾ ಶೇಖ್ ರ ಪಕ್ಷವನ್ನು ಬಿಜೆಪಿಯೇ ಸ್ಥಾಪಿಸಿದೆಯೇ ಎನ್ನುವ ಸಂಶಯ

ಯಾರು ಈ ನೌಹೇರಾ ಶೇಖ್? ಯಾವುದೀ ಎಂಇಪಿ ಪಕ್ಷ?

ವಿಧಾನಸಭಾ ಚುನಾವಣೆಯನ್ನು ಎದುರು ನೋಡುತ್ತಿರುವ ಕರ್ನಾಟಕದಲ್ಲಿ ರಾಜಕೀಯದ ಬಿಸಿ ದಿನೇ ದಿನೇ ಹೆಚ್ಚುತ್ತಿದೆ. ಈ ನಡುವೆ ಮೊದಲ ಬಾರಿಗೆ ರಾಜ್ಯ ಚುನಾವಣೆಯ ಕಣಕ್ಕಿಳಿಯುತ್ತಿರುವ ಹೊಸ ಪಕ್ಷವೊಂದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಈಗಾಗಲೇ ರಾಜ್ಯದ ದಿನಪತ್ರಿಕೆಗಳಲ್ಲಿ, ಟಿವಿ ಚಾನೆಲ್ ಗಳಲ್ಲಿ ಈ ಪಕ್ಷದ ಜಾಹೀರಾತುಗಳು ಪ್ರಕಟವಾಗಿದೆ. ಈ ಪಕ್ಷದ ಹೆಸರು ಆಲ್ ಇಂಡಿಯಾ ಮಹಿಳಾ ಎಂಪವರ್ ಮೆಂಟ್ ಪಾರ್ಟಿ (ಎಂಇಪಿ). ಇದರ ಸ್ಥಾಪಕಿ ಡಾ. ನೌಹೇರಾ ಶೇಖ್.

ಉದ್ಯಮರಂಗದ ಕೆಲವರಿಗೆ ಮಾತ್ರ ಪರಿಚಯವಿದ್ದ ನೌಹೇರಾ ಇದೀಗ ಕರ್ನಾಟದ ಜನತೆಗೂ ಹತ್ತಿರವಾಗುವ ನಿಟ್ಟಿನಲ್ಲಿ ಭಾರೀ ಪ್ರಯತ್ನಗಳನ್ನೇ ನಡೆಸುತ್ತಿದ್ದಾರೆ. ಕರ್ನಾಟಕದಲ್ಲಿ ರಾಜಕೀಯ ಪಕ್ಷವೊಂದರ ಸ್ಥಾಪನೆ, ಬೆಳವಣಿಗೆ ಮತ್ತು ಅಸ್ತಿತ್ವ ಅಷ್ಟು ಸಲೀಸಲ್ಲ ಅನ್ನುವುದು ಸತ್ಯವಾಗಿದ್ದರೂ ಎಂಇಪಿಯ ಆರಂಭಿಕ ಚಟುವಟಿಕೆಗಳೇ ಇತರ ಪಕ್ಷಗಳಿಗೆ ಹೋಲಿಸಿದರೆ ವಿಶೇಷವೆನಿಸುತ್ತಿದೆ.

ಡಾ. ನೌಹೇರಾ ಶೇಖ್ ಯಾರು?

ನೌಹೇರಾ ಶೇಖ್ ಮಹಿಳಾ ಉದ್ಯಮಿ ಹಾಗು ಹೀರಾ ಗ್ರೂಪ್ ಆಫ್ ಕಂಪೆನೀಸ್ ಎಂಬ ಸಂಸ್ಥೆಯ ಸಿಇಒ. ತಿರುಪತಿಯಲ್ಲಿ ಹೆಣ್ಣುಮಕ್ಕಳಿಗಾಗಿ ಶಾಲೆ, ಕಾಲೇಜುಗಳನ್ನು ನಡೆಸುತ್ತಿದ್ದಾರೆ. 1998ರಲ್ಲಿ ಸ್ಥಾಪನೆಯಾದ ಇವರ ಹೀರಾ ಗ್ರೂಪ್ ಸ್ಪಲ್ಪ ಸಮಯದಲ್ಲೇ ಪ್ರಸಿದ್ಧಿ ಗಳಿಸಿತು.

ಶೈಖ್ ನನ್ನೆ ಸಾಹೇಬ್ – ಶೈಖ್ ಬಿಲ್ಕಿಸ್ ದಂಪತಿಯ ಪುತ್ರಿಯಾಗಿ ನೌಹೇರಾ ಜನಿಸಿದರು. ಆರಂಭದಿಂದಲೂ ತಂದೆಯ ವ್ಯವಹಾರದಲ್ಲಿ ಜೊತೆಯಾಗಿದ್ದ ನೌಹೇರಾ ಕಾರ್ಪೊರೇಟ್ ಜಗತ್ತನ್ನೂ ಅರಿತುಕೊಂಡರು. ನೌಹೇರಾರ ಅಜ್ಜ ಶೈಖ್ ಕೊಲ್ಕರ್ ಮದಾರ್ ಕೂಡ ಓರ್ವ ಯಶಸ್ವಿ ಉದ್ಯಮಿಯಾಗಿದ್ದರು.

ತಮ್ಮ 19ನೆ ವಯಸ್ಸಿನಲ್ಲಿ ನೌಹೇರಾ ಆಂಧ್ರಪ್ರದೇಶದ ತಿರುಪತಿಯಲ್ಲಿ ಹೆಣ್ಣು ಮಕ್ಕಳಿಗಾಗಿ ಶಾಲೆಯೊಂದನ್ನು ಆರಂಭಿಸಿದರು. ನಂತರದಲ್ಲಿ ಸುಮಾರು 1000 ವಿದ್ಯಾರ್ಥಿನಿಯರಿಗೆ ಶೈಕ್ಷಣಿಕ ಹಾಗು ಧಾರ್ಮಿಕ ಶಿಕ್ಷಣ ಒದಗಿಸುವ ಇಸ್ಮಾಯೀಲ್ ಎಜುಕೇಶನಲ್ ಟ್ರಸ್ಟ್ ನ ಟ್ರಸ್ಟಿಯಾದರು.

ನಂತರ ನೌಹೇರಾರ ಸಂಸ್ಥೆಯ ವ್ಯವಹಾರಗಳೂ ಹೆಚ್ಚಿತು. ಹೀರಾ ಗೋಲ್ಡ್ ಎಕ್ಸ್ ಪೋರ್ಟ್ಸ್ ಆ್ಯಂಡ್ ಇಂಪೋರ್ಟ್ಸ್ ಹೆಸರಿನ ಕಂಪೆನಿಯ ಮೂಲಕ ಅವರು ಚಿನ್ನದ ಆಮದು ಹಾಗು ರಫ್ತನ್ನು ಆರಂಭಿಸಿದ್ದರು. ನಂತರದ ದಿನಗಳಲ್ಲಿ ಹೀರಾ ಗ್ರೂಪ್ ಆಫ್ ಕಂಪೆನೀಸ್ ಬ್ಯಾನರ್ ನಡಿ ನೌಹೇರಾ ಹಲವು ಉದ್ದಿಮೆಗಳನ್ನು ಆರಂಭಿಸಿದರು. ಯಶಸ್ವಿ ಉದ್ಯಮಿಯಾಗಿರುವ ನೌಹರಾರಿಗೆ ಹಲವು ಪ್ರಶಸ್ತಿಗಳು ಸಂದಿವೆ.

2017ರ ನವೆಂಬರ್ 12ರಂದು ನೌಹೇರಾರ ‘ಎಂಇಪಿ’ ಪಕ್ಷ ಅಸ್ತಿತ್ವಕ್ಕೆ ಬಂತು. ಸಾಮಾನ್ಯವಾಗಿ ರಾಜಕೀಯ ಪಕ್ಷಗಳ ಆರಂಭದಂತೆ ಇರದೆ ಸೆಲೆಬ್ರಿಟಿಗಳ ದಂಡೇ ಇಲ್ಲಿತ್ತು. ಮಾಜಿ ಕ್ರಿಕೆಟಿಗ ಮುಹಮ್ಮದ್ ಅಝರುದ್ದೀನ್, ಟೆನ್ನಿಸ್ ತಾರೆ ಸಾನಿಯಾ ಮಿರ್ಝಾ, ನಟ ಸುನೀಲ್ ಶೆಟ್ಟಿ, ಬಾಬಿ ಡಿಯೋಲ್, ಅಫ್ತಾಬ್ ಶಿವ್ದಾಸನಿ, ಝೀನತ್ ಅಮಾನ್, ಪೂನಂ ಧಿಲ್ಲೊನ್, ಫರ್ಹಾ ಖಾನ್ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ನೌಹೇರಾ ವಿರುದ್ಧ ಕೇಸ್

2012ರಲ್ಲಿ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ ನೌಹೇರಾ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ತನ್ನ ಕಂಪೆನಿಗೆ ಬಂಡವಾಳ ಹೂಡುವಂತೆ ಜನರನ್ನು ಆಹ್ವಾನಿಸುವ ನೌಹೇರಾ ಮೋಸ ಮಾಡುತ್ತಿದ್ದಾರೆ ಎಂದು ಒವೈಸಿ ಆರೋಪಿಸಿದ್ದರು ಎಂದು http://ummid.com ವರದಿ ಮಾಡಿದೆ.

ಇಷ್ಟೇ ಅಲ್ಲದೆ ನೌಹೇರಾ ಪಕ್ಷದ ಸ್ಥಾಪನೆಯ ದಿನ ಆರೆಸ್ಸೆಸ್ ನ ಅಂಗಸಂಸ್ಥೆ ಮುಸ್ಲಿಂ ರಾಷ್ಟ್ರೀಯ ಮಂಚ್ (ಎಂಆರ್ ಎಂ)ಗೆ ಸಂಬಂಧಪಟ್ಟ ಕೆಲ ವ್ಯಕ್ತಿಗಳು ನೌಹೇರಾ ಸುತ್ತಮುತ್ತ ಇದ್ದದ್ದು ಕೂಡ ಗಮನ ಸೆಳೆದಿತ್ತು. ತ್ರಿವಳಿ ತಲಾಖ್ ಮೇಲೆ ಹೇರಲಾದ ನಿರ್ಬಂಧವನ್ನೂ ಅವರು ಸ್ವಾಗತಿಸಿದ್ದು, ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪ್ರಯತ್ನವನ್ನು ಹಾಡಿ ಹೊಗಳಿದ್ದರು.

ಕರ್ನಾಟಕದ ಚುನಾವಣಾ ಕಣಕ್ಕೆ ನೌಹೇರಾ!

ಕರ್ನಾಟಕದ ಚುನಾವಣಾ ಕಣಕ್ಕೆ ನೌಹೇರಾ ಪಕ್ಷ ಧುಮುಕಿರುವಂತೆಯೇ ಸಾರ್ವಜನಿಕ ವಲಯದಿಂದ ಹಲವು ಮಾತುಗಳು ಕೇಳಿಬರುತ್ತಿವೆ. ಆಂಧ್ರ ಪ್ರದೇಶದ ನಿವಾಸಿಯಾಗಿರುವ ನೌಹೇರಾ ಕರ್ನಾಟಕದಲ್ಲಿ ಚುನಾವಣೆಗೆ ಇಳಿಯುತ್ತಿರುವುದೇಕೆ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ.

ಇಷ್ಟೇ ಅಲ್ಲದೆ ನೌಹೇರಾ ಶೇಖ್ ಹಲವು ಕಾರ್ಯಕ್ರಮಗಳಲ್ಲಿ ಬಿಜೆಪಿ ನಾಯಕರೊಂದಿಗೆ ಕಾಣಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ದೇಶದ ಹಲವು ರಾಜ್ಯಗಳಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಕರ್ನಾಟಕವನ್ನು ಕೈವಶ ಮಾಡಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಬಿಜೆಪಿಯ ರಾಷ್ಟ್ರ ನಾಯಕರು ಕರ್ನಾಟಕಕ್ಕೆ ಆಗಾಗ್ಗೆ ಬಂದು ಹೋಗುತ್ತಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖ ಮತದಾರರಾಗಿರುವ ಮುಸ್ಲಿಮರ ಮತವನ್ನು ಒಡೆಯಲು ನೌಹೇರಾ ಶೇಖ್ ರ ಪಕ್ಷವನ್ನು ಬಿಜೆಪಿಯೇ ಸ್ಥಾಪಿಸಿದೆಯೇ ಎನ್ನುವ ಸಂಶಯವೂ ಹಲವರದ್ದು.

ನೌಹೇರಾ ಶೇಖ್ ತನ್ನ ಪಕ್ಷದ ಚುನಾವಣಾ ಕಣವಣನ್ನಾಗಿ ಕರ್ನಾಟಕವನ್ನು ಆಯ್ಕೆ ಮಾಡಿದ್ದರೂ ಇದುವರೆಗೂ ಇಲ್ಲಿನ ಜ್ವಲಂತ ಸಮಸ್ಯೆಗಳ ಬಗ್ಗೆ ಮಾತನಾಡಿಲ್ಲ. ಎಲ್ಲಾ ರಾಜಕೀಯ ಪಕ್ಷಗಳು ರಾಜ್ಯದ ಕೆಲ ಸಮಸ್ಯೆಗಳಿಗೆ ನಾವೇ ಪರಿಹಾರ ಒದಗಿಸುತ್ತೇವೆ, ನಮ್ಮನ್ನೇ ಚುನಾಯಿಸಿ ಎನ್ನುವ ಭರವಸೆಗಳನ್ನು ಮುಂದಿಟ್ಟು, ಚುನಾವಣಾ ಪ್ರಚಾರ ಮಾಡುತ್ತಿವೆಯಾದರೂ ನೌಹೇರಾ ಶೇಖ್ ರ ಪಕ್ಷ ಸಮಸ್ಯೆಗಳ ಬಗ್ಗೆಯೇ ಬಾಯಿ ಬಿಡುತ್ತಿಲ್ಲ. ರಾಜ್ಯದ ಸಮಸ್ಯೆಗಳ ಬಗ್ಗೆ ಈ ಪಕ್ಷಕ್ಕೆ ಅರಿವಿದೆಯೇ ಅಥವಾ ಕರ್ನಾಟಕದ ಹಿನ್ನೆಲೆಯನ್ನೇ ತಿಳಿಯದೆ ಈ ಪಕ್ಷ ಚುನಾವಣಾ ಕಣಕ್ಕಿಳಿದಿದೆಯೇ ಎನ್ನುವ ಸಂಶಯ ಕನ್ನಡಿಗರದ್ದು.

ಕರ್ನಾಟಕದ ಯಾವುದೇ ರಾಜಕೀಯ ಪಕ್ಷವಿರಲಿ ಪಕ್ಷ ಸಂಘಟಿಸುವುದು ತಳಮಟ್ಟದಿಂದಲೇ. ಜನಸಾಮಾನ್ಯರನ್ನು ಒಳಗೊಂಡೇ ಪಕ್ಷ ಚಟುವಟಿಕೆಯನ್ನು, ಪ್ರಚಾರವನ್ನು ಆರಂಭಿಸುತ್ತದೆ. ಆದರೆ ನೌಹೇರಾ ಶೇಖ್ ಅವರ ಪಕ್ಷ ಮಾತ್ರ ಜನಸಾಮಾನ್ಯರ ಕುರಿತು ಮಾತನಾಡದೆ ಹೈಟೆಕ್ ಪ್ರಚಾರ ಮಾಡುತ್ತಿದೆ ಎನ್ನುವ ಆರೋಪವೂ ಕೇಳಿಬಂದಿದೆ. ಇದಕ್ಕೆ ಸಾಕ್ಷಿಯಂತಿದ್ದದ್ದು ಪಕ್ಷದ ಸ್ಥಾಪನೆಯ ದಿನ. ಅಂದಿನ ಕಾರ್ಯಕ್ರಮದಲ್ಲಿ ಜನಸಾಮಾನ್ಯರಿಗಿಂತ ಬದಲು ಕಾಣಿಸಿಕೊಂಡವರು ಸೆಲೆಬ್ರಿಟಿಗಳು.

ಇಷ್ಟೇ ಅಲ್ಲದೆ ರೈತರು, ಕಾರ್ಮಿಕರು, ಬಡವರ ಬಗ್ಗೆ ಈ ಪಕ್ಷದ ಧೋರಣೆ ಏನೆಂದು ಯಾರಿಗೂ ಗೊತ್ತಿಲ್ಲ. ಆಂಧ್ರದ ನಿವಾಸಿಯೊಬ್ಬರು ಕರ್ನಾಟಕದ ಚುನಾವಣಾ ಕಣಕ್ಕೆ ಧುಮುಕಿರುವ ವಿಚಾರವೇ ನಾಡಿನ ಜನರ ಅನುಮಾನಕ್ಕೆ ಕಾರಣವಾಗಿರುವುದೂ ಸುಳ್ಳಲ್ಲ.

ಎಂಇಪಿ ಪಕ್ಷದ ಕಾರ್ಯಕರ್ತರ ಬಗ್ಗೆ ಯಾರೊಬ್ಬರಿಗೂ ಮಾಹಿತಿಯಿಲ್ಲ. ತಳಮಟ್ಟದಲ್ಲಿ ಈ ಪಕ್ಷವನ್ನು ಹೇಗೆ ಸಂಘಟಿಸಲಾಗುತ್ತದೆ ಎನ್ನುವ ಬಗ್ಗೆಯೂ ಯಾವುದೇ ಮಾಹಿತಿಯಿಲ್ಲ. ಒಟ್ಟಿನಲ್ಲಿ ಜಾಹೀರಾತುಗಳ ಮೂಲಕವೇ ಈ ಪಕ್ಷ ಆರಂಭವಾಗಿದೆ ಹಾಗು ಇದು ಕರ್ನಾಟಕದ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎನ್ನುವುದು ಜನರಿಗೆ ತಿಳಿದಿತ್ತು.

ಇವೆಲ್ಲವುಗಳ ನಡುವೆ ಈ ಪಕ್ಷದ ಬಗ್ಗೆ ಜನರಿಗೆ ಸಂಶಯ ಹುಟ್ಟಲು ಪ್ರಮುಖ ಕಾರಣವೇ ಕರ್ನಾಟಕದಲ್ಲಿನ ಸ್ಪರ್ಧೆ. ಯಾಕೆಂದರೆ ಯಾವುದೇ ಪ್ರಾದೇಶಿಕತೆಯ ಹಿನ್ನೆಲೆ ಇಲ್ಲದೆ, ಕರ್ನಾಟಕದೊಂದಿಗೆ ಸಂಬಂಧವೇ ಇಲ್ಲದ ಎಂಇಪಿ ಏಕಾಏಕಿ ಕರ್ನಾಟಕದಲ್ಲಿ ನಾವು ಸ್ಪರ್ಧಿಸುತ್ತೇವೆ ಎಂದು ಘೋಷಿಸಿದೆ ಹಾಗು ಹೈಟೆಕ್ ಪ್ರಚಾರವನ್ನೂ ಕೈಗೊಂಡಿದೆ. ಕರ್ನಾಟಕದಲ್ಲಿ ಈ ಪಕ್ಷ ಸ್ಪರ್ಧಿಸುತ್ತಿರುವ ವಿಚಾರವೇ ಜನರಲ್ಲಿ ಹಲವು ಸಂಶಯಗಳನ್ನು ಹುಟ್ಟುಹಾಕಿದೆ.

ಆರಂಭದಿಂದಲೂ ಎಂಇಪಿ ಹೈಟೆಕ್ ಪ್ರಚಾರಗಳನ್ನು ನಡೆಸುತ್ತಿದೆ. ಜಾಹೀರಾತುಗಳಿಗೆ ಭಾರೀ ಮೊತ್ತವನ್ನೇ ವ್ಯಯಿಸುತ್ತಿದೆ. ಪಕ್ಷದ ಉದ್ಘಾಟನೆ ಕಾರ್ಯಕ್ರಮದಲ್ಲಂತೂ ಸೆಲೆಬ್ರಿಟಿಗಳೇ ದಂಡೇ ಇದ್ದು, ಕಾರ್ಪೊರೇಟ್ ಕಾರ್ಯಕ್ರಮದಂತಿತ್ತು. ಇನ್ನೂ ಅಧಿಕಾರ ಪಡೆಯದ, ಚುನಾವಣೆಯಲ್ಲೇ ಸ್ಪರ್ಧಿಸದ ಪಕ್ಷ ಹೈಟೆಕ್ ಆಗಿ ಸಂಘಟಿಸುವುದಕ್ಕೆ ಸಂಪನ್ಮೂಲ ಎಲ್ಲಿಂದ ಎನ್ನುವುದು ಕರ್ನಾಟಕದ ಜನರ ಪ್ರಶ್ನೆ.

ಜಾತಿ, ಧರ್ಮ ಭೇದವಿಲ್ಲದೆ ಎಲ್ಲ ಮಹಿಳೆಯರ ಅಭಿವೃದ್ಧಿ ನಮ್ಮ ಗುರಿ ಹಾಗು ಶಾಸನ ಸಭೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ ನೀಡಬೇಕು ಎಂದು ಆಗ್ರಹಿಸುವ ನೌಹೇರಾ ಶೇಖ್ ದೇಶಾದ್ಯಂತ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ, ಅನ್ಯಾಯಗಳ ಬಗ್ಗೆ ಬಾಯಿ ಬಿಡುತ್ತಿಲ್ಲ. ಜನರಿಂದ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಸಂಗ್ರಹಿಸಿ ಉದ್ಯಮ ನಡೆಸುತ್ತಿರುವ ನೌಹೇರಾ ಅವರ ವಿರುದ್ಧ ಈಗಾಗಲೇ ಕೇಂದ್ರ ಸರ್ಕಾರಕ್ಕೆ ದೂರು ಹೋಗಿದೆ. ಆದ್ದರಿಂದ ಕೇಂದ್ರದಿಂದ ತನಗೆ ತೊಂದರೆಯಾಗದಂತೆ ನೋಡಿಕೊಳ್ಳಲು ನೌಹೇರಾ ಈ ಹೊಸ ಪಕ್ಷ ಸ್ಥಾಪಿಸಿ ಕರ್ನಾಟಕದಲ್ಲಿ ಮುಸ್ಲಿಂ ಮತಗಳನ್ನು ವಿಭಜಿಸಲು ಬಿಜೆಪಿಗೆ ನೆರವಾಗುತ್ತಿದ್ದಾರೆ ಎಂಬ ಆರೋಪಗಳು ರಾಜಕೀಯ ವಲಯದಿಂದ ಕೇಳಿ ಬಂದಿವೆ. ಆದರೆ ಈ ಆರೋಪಗಳು ಈವರೆಗೆ ಸಂಶಯ ಮಾತ್ರ

complaints Heera Group : https://timesofindia.indiatimes.com/city/hyderabad/Cops-book-case-against-firm-for-cheating-investors/articleshow/15712028.cms

https://www.complaintboard.in/complaints-reviews/heera-gold-l163635.html

Heera Gold – Genuine ya Fraud #PART 2

ವೈಯುಕ್ತಿಕ ಜೀವನದಲ್ಲೂ ಹಲವಾರು ಆರೋಪಗಳು

ಇವೆ

https://youtu.be/1bjEVI02KR0
Courtesy : varthabharati