ಮೌನ ಕ್ರಾಂತಿಯ ಹರಿಕಾರ ಡಿ. ದೇವರಾಜ ಅರಸು

ಕರ್ನಾಟಕ ಅಷ್ಟೇ ಏಕೆ ಈ ರಾಷ್ಟ್ರ ಕಂಡ ಮಹಾನ್ ಮುತ್ಸದಿ ರಾಜಕಾರಣಿಗಳಲ್ಲಿ ಡಿ. ದೇವರಾಜ ಅರಸ್ ಅವರು ಅಗ್ರ ಗಣ್ಯರು.  1969 ರಿಂದ 1979 ದಶಕದಲ್ಲಿ “ಅರಸು ಯುಗ” ವೆಂದು ಹೇಳುವುದು ವಾಡಿಕೆಯಾಗಿದೆ.  ಈ ರಾಜ್ಯದ ಮುಖ್ಯಮಂತ್ರಿಯಾಗಿ ಅತೀ ದೀರ್ಘಕಾಲ ಆಡಳಿತ ನಡೆಸಿ, ಸಮಾಜದ ಹಿಂದುಳಿದ ವರ್ಗದವರು, ದಲಿತರು ಮತ್ತು ಬಡಜನರನ್ನು ಜಾಗೃತಗೊಳಿಸಿ, ಅವರ ಕನಸು ಮನಸಿನಲ್ಲೂ ನೆನಸಲಾಗದಿದ್ದ ಅಧಿಕಾರದ ಅರಮನೆಗೆ ಕರೆದುಕೊಂಡು ಹೋದ ಮುತ್ಸದ್ದಿ.  ಹೀಗಾಗಿ ಅವರು ಈ ರಾಜ್ಯದ, ಈ ದೇಶದ ಹಿಂದುಳಿದ ವರ್ಗಗಳ, ದಲಿತರ, ಬಡವರ ಮನಸ್ಸಿನಲ್ಲಿ ಎಂದೆಂದಿಗೂ ಚಿರಸ್ಥಾಯಿಯಾಗಿರುತ್ತಾರೆ.  ಅಸಾಧ್ಯವಾದ ಸಾಧನೆಗಳನ್ನು ಮೌನವಾಗಿ ಮಾಡಿ ತೋರಿಸಿದ ಅವರನ್ನು “ ಮೌನಕ್ರಾಂತಿಯ ಹರಿಕಾರ” ಎಂದು ಹೇಳುತ್ತಾರೆ.
ಬಡವರ ಬದುಕಿನಲ್ಲಿ ಹೊಸ ಭರವಸೆ ತಂದುಕೊಟ್ಟ ಡಿ. ದೇವರಾಜ ಅರಸು ಕರ್ನಾಟಕದಲ್ಲಿ ಆರ್ಥಿಕ, ಸಾಮಾಜಿಕ ಆಂದೋಲನದ ಮೂಲಕ ಹಲವಾರು ಹಲವಾರು ಜನಹಿತ ಯೋಜನೆಗಳನ್ನು ಅನುಷ್ಠಾನಗೊಳಿಸುವುದರಲ್ಲಿ ಯಶಸ್ಸು ಸಾಧಿಸಿದವರು.  ಚಿಕ್ಕಂದಿನಿಂದಲೂ ಹೊಸದನ್ನು ಕಟ್ಟುವ ಧೋರಣೆ ಹೊಂದಿದ್ದ ದೇವರಾಜ ಅರಸರು ತಮ್ಮ ನಾಲ್ಕು ದಶಕಗಳ ಸಾರ್ವಜನಿಕ ಜೀವನದಲ್ಲಿ ಎಂಟು ವರ್ಷಗಳ ಕಾಲ ಕರ್ನಾಟಕದ ಮುಂಖ್ಯಮಂತ್ರಿಯಾಗಿ ಅಧಿಕಾರ ನಡೆಸಿ ನವ ಸಮಾಜದ ನಿರ್ಮಾಣಕ್ಕಾಗಿ ಭದ್ರ ಬುನಾದಿಯನ್ನು ಹಾಕಿ ಕೊಟ್ಟು ಆಡಿದ್ದನ್ನು ಮಾಡಿ ತೋರಿಸಿದವರು.
ದೇವರಾಜ ಅರಸು ಅವರು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕಲ್ಲಹಳ್ಳಿಯಲ್ಲಿ ಜನಿಸಿದರು.  ತಂದೆ ದೇವರಾಜು ಅರಸು  ತಾಯಿ ದೇವಿರಮ್ಮಣಿ.  ಇವರ ಮನೆತನ ಕ್ಷತ್ರಿಯ ವಂಶಕ್ಕೆ ಸೇರಿದ್ದಾದರೂ ಬದುಕಿಗಾಗಿ ಬೇಸಾಯವನ್ನು ಆಯ್ದುಕೊಂಡಿತ್ತು.  ಒಂದೆಡೆ ಕೃಷಿ ಮಾಡುತ್ತಲೇ ಓದಿನಲ್ಲೂ ಮುಂದೆ ಬಂದ ದೇವರಾಜ ಅರಸು ಮೈಸೂರಿನಲ್ಲಿ ಇಂಟರ್‍ಮೀಡಿಯಟ್ ಓದಿ ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎಸ್.ಸಿ ಪದವಿ ಪಡೆದರು.  ಪದವಿ ನಂತರ ಹುಟ್ಟೂರು ಕಲ್ಲಹಳ್ಳಿಗೆ ಬೇಸಾಯ ಮಾಡಲು ಹಿಂದಿರುಗಿದರು.  ಗ್ರಾಮದ ನ್ಯಾಯ ಪಂಚಾಯ್ತಿಗಳಲ್ಲಿ ಪಾಲ್ಗೊಳ್ಳುತ್ತಿದ್ದ ಅರಸರನ್ನು ರಾಜಕೀಯ ಅರಸಿ ಬಂತು.  ಹೀಗಾಗಿ ಅವರು ಸ್ವಾತಂತ್ರ್ಯ ಪೂರ್ವದಲ್ಲಿಯೇ ಮೈಸೂರು ಸಂಸ್ಥಾನದ ಪ್ರಜಾಪ್ರತಿನಿಧಿ ಸಭೆಗೆ ಚುನಾಯಿತರಾದರು (1941).  ಮೈಸೂರು ಅರಸರ ಸಂಬಂಧಿಗಳಾಗಿದ್ದರೂ ಸ್ವಾತಂತ್ರ್ಯ ಹೋರಾಟದಲ್ಲಿ (1942) ಸಕ್ರಿಯರಾಗಿದ್ದ ಅವರು ಚಲೇಜಾವ್ ಚಳುವಳಿಯಲ್ಲಿ ಭಾಗವಹಿಸಿ, ಕಾರಾಗೃಹವಾಸವನ್ನೂ ಅನುಭವಿಸಿದರು.
ಮಾನವತಾ ವಾದಿ :
************* ಅರಸು ಮಹಾ ಮಾನವತಾ ವಾದಿ,  ಸಂಕಷ್ಟದಲ್ಲಿರುವವರನ್ನು ಕಂಡರೆ ಮರುಗುವ ಹೆಂಗರುಳು.  ಸಮಾಜದ ಕಟ್ಟಕಡೆಯ ವ್ಯಕ್ತಿಯ ಬಗ್ಗೆ ನಿಸ್ಸಹಾಯಕರ ಬಗ್ಗೆ ಅನುಕಂಪ, ಬದುಕಿನ ಸಂಧ್ಯಾಕಾಲದಲ್ಲಿ ಅನಾದರಣೆಗೆ ತುತ್ತಾಗುವ ವೃದ್ದರಿಗೆ ನೆಮ್ಮದಿ ನೀಡಲು 40 ರೂ. ಗಳ ಮಾಸಾಶನ ನೀಡಿ “ವೃದ್ಧಾಪ್ಯ” ವೇತನ ಜಾರಿಗೆ ತಂದರು.  ಅಂಗವಿಕಲರು ಮತ್ತು ಅನಾಥರಿಗೆ ಆರ್ಥಿಕ ನೆರವು ನೀಡಿದರು.  ಅಕ್ಷರ ಕಲಿತು ಪದವಿ ಪಡೆದ ಲಕ್ಷಾಂತರ ನಿರುದ್ಯೋಗಿ ಪದವೀಧರರ ಬಾಳಿನ ನಿರಾಸೆಯನ್ನು ದೂಡಲು “ಸ್ಟೈಫೆಂಡರಿ” ಯೋಜನೆ ಜಾರಿಗೆ ತಂದರು.  ಗ್ರಾಮಾಂತರ ಮಕ್ಕಳ ಆರೋಗ್ಯ ರಕ್ಷಣೆಗೆ “ಪೌಷ್ಟಿಕ ಆಹಾರ” ಯೋಜನೆ, ದುರ್ಬಲ ಮತ್ತು ಹಿಂದುಳಿದ ವರ್ಗಗಳಿಗೆ “ಉಚಿತ ನಿವೇಶನ, ಮತ್ತು ಕಡಿಮೆ ವೆಚ್ಚದ ಮನೆ ನಿರ್ಮಾಣ” ಯೋಜನೆ, “ಭಾಗ್ಯಜ್ಯೋತಿ” ಯೋಜನೆ ಮೂಲಕ ದುರ್ಬಲರ ಮನೆಗಳಿಗೆ ದೀಪ ಬೆಳಗಿಸಿದರು.  ಬಡವರ ನೆರವಿಗಾಗಿ ಸಹಕಾರ ಸಂಘಗಳನ್ನು ಸ್ಥಾಪಿಸಿದರು.
ಸಾಧನೆಗಳು :
******** 1941 ರಲ್ಲಿ ಮೈಸೂರು ಸಂಸ್ಥಾನದ ಪ್ರಜಾಪ್ರತಿನಿಧಿ ಸಭೆಗೆ ಆಯ್ಕೆ.  1952 ರಲ್ಲಿ ಹುಣಸೂರು ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆ.  1962 ರಲ್ಲಿ ಎಸ್. ನಿಜಲಿಂಗಪ್ಪನವರ ಮಂತ್ರಿಮಂಡಳದಲ್ಲಿ ಸಚಿವ ಸ್ಥಾನ.  1967ರ ಮಂತ್ರಿಮಂಡಳದಲ್ಲಿ ಸಚಿವ ಸ್ಥಾನ.  ಪ್ರವಾಸ್ಯೋದ್ಯಮ, ಕಾರ್ಮಿಕ, ಸಾರಿಗೆ, ಪ್ರವಾಸೋದ್ಯಮ, ಪಶುಸಂಗೋಪನೆ, ವಾರ್ತಾ ಮತ್ತು ಪ್ರಚಾರ, ರೇಷ್ಮೆ, ಮೀನುಗಾರಿಕೆ ಖಾತೆಗಳನ್ನು ನಿರ್ವಸಿದರು.  20-03-1972 ರಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ.   20-02-1978 ರಲ್ಲಿ 2ನೇ ಬಾರಿ ಮುಖ್ಯಮಂತ್ರಿ.
ಮೌನಕ್ರಾಂತಿಯ ಹರಿಕಾರ :
*********** ನಮ್ಮ ನಾಡಿನ ಸಾಮಾಜಿಕ, ಶಿಕ್ಷಣ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಪರಿವರ್ತನೆಯ ಬಯಕೆಯನ್ನು ಪ್ರಜ್ಞಾಪೂರ್ವಕವಾಗಿ ಸೃಷ್ಟಿಸಿದವರು ಡಿ. ದೇವರಾಜ ಅರಸು ಅವರು.  ಅವರು ಕನ್ನಡನಾಡಿನ ಜನಜೀವನದ ಮೇಲೆ ಬೀರಿದ ಮೇರು ಪ್ರಭಾವ ನಿರಂತರ ಸ್ಮರಣಯೋಗ್ಯ.  ಎಂಟು ವರ್ಷಗಳ ಸುದೀರ್ಘಕಾಲ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಅರಸು ಇಟ್ಟ ದಿಟ್ಟ ಹೆಜ್ಜೆಗಳು ಭವಿಷ್ಯದ ಜನಾಂಗವನ್ನೇ ಬದಲಾಯಿಸಲು ನಾಂದಿಯಾದವು.  ದುರ್ಬಲ ವರ್ಗದವರಲ್ಲಿ ಸ್ವಾಭಿಮಾನದ ಕಲ್ಪನೆ ಹುಟ್ಟಿಸಿ ಅವರಿಗೆ ಆರ್ಥಿಕ ಸ್ವಾವಲಂಬನೆ ಒದಗಿಸಿದ ಅರಸು ಅವರು ಯುಗಪುರುಷ.  ಈ ನಾಡಿನ ಮಹಾನ್ ಚೇತನಗಳಲ್ಲಿ ಅರಸರ ವ್ಯಕ್ತಿತ್ವ ವಿಶಿಷ್ಟವಾದವು.  ಅವರಲ್ಲಿ ರೈತನ ಆತ್ಮಾಭಿಮಾನವಿತ್ತು, ಶತ್ರುವನ್ನು ಪ್ರೀತಿಸುವ ಮಾನವ ಪ್ರೇಮವಿತ್ತು, ಎಡತಾಕ್ಕಿದ್ದನ್ನು ಎದುರಿಸಿ ಮುಂಬರುವ ಗುಣವಿತ್ತು.  ಅವರು ದುಡಿದು ತಿಂದವರು, ಕೊಟ್ಟು ಬಾಳಿದವರು, ಸಾಧಿಸಿ ಶ್ರೇಯಸ್ಸು ಗಳಿಸಿದವರು, ದನಿಯಿಲ್ಲದವರ ಬದುಕಿಗೆ ಬಾಯಾದವರು.  ಸಮಾಜವನ್ನು ಏಕಾಂಗಿಯಾಗಿಯೇ ಎದುರಿಸಿ ಪರಿವರ್ತನೆಯ ಹರಿಕಾರರಾಗಿ ಯಶಸ್ಸು ಕಂಡವರು.  ಅವರ ಬದುಕು ನಿರಂತರ ಹೋರಾಟ ಗಾಥೆ.
ಗೇಣಿದಾರರ ವಿಮೋಚನೆ :
*********** ದೇವರಾಜ ಅರಸು ಸ್ವಾಭಿಮಾನಿ, ಆತ್ಮಗೌರವದಲ್ಲಿ ಅವರಿಗೆ ಅಚಲ ನಂಬಿಕೆ.  ಇನ್ನೊಬ್ಬರ ಹಂಗಿನಲ್ಲಿ ಬಾಳದ ಆತ್ಮಾಭಿಮಾನಿ.  ಈ ಗುಣ ಅವರು ಓದುತ್ತಿರುವಾಗಲೇ ಸುವ್ಯಕ್ತಗೊಂಡಿತ್ತು.  ಮೈಸೂರಿನ ಅರಸು “ಬೋರ್ಡಿಂಗ್ ಶಾಲೆ” ಯಲ್ಲಿ ಓದುವುದನ್ನು ನಿರಾಕರಿಸಿ, ಸ್ವತಂತ್ರವಾಗಿಯೇ ಓದು ಮುಂದುವರಿಸಿದ ವ್ಯಕ್ತಿ.  ಗೇಣಿಯನ್ನು ನಂಬಿ ಬದುಕುತ್ತಿದ್ದ ಲಕ್ಷಾಂತರ ಕುಟುಂಬಗಳಿಗೆ ಸಾಮಾಜಿಕ ನ್ಯಾಯ ಒದಗಿಸಲು “ಭೂ ಸುಧಾರಣೆ”ಯನ್ನು ಅತ್ಯದ್ಭುತ ರೀತಿಯಲ್ಲಿ ಜಾರಿಗೆ ತಂದರು.  ಅದುವರೆವಿಗೂ “ಉಳುವವನೇ ಹೊಲದೊಡೆಯ” ಎಂಬ ನೀತಿ ಬರೀ ಘೋಷಣೆಯಾಗಿತ್ತು.  ಭೂ ಸುಧಾರಣೆಯನ್ನು ತ್ವರಿತವಾಗಿ ಜಾರಿಗೆ ತರಲು ನಿಶ್ಚಿತ ಅವಧಿಯಲ್ಲಿ ಉಳುವವನೇ ಹೊಲದೊಡೆಯನಾಗಲು ಪ್ರಗತಿಪರ ಶಾಸನವನ್ನು ತಂದರು.  ನ್ಯಾಯಾಲಯ ಕಛೇರಿ ಕಾನೂನಿನ ಲೋಪದೋಷಗಳ ಸುಳಿಯಲ್ಲಿ ಸಿಕ್ಕ ಮುಗ್ದ ಹಳ್ಳಿಗರಿಗೆ ಜಯ ಅಸಾಧ್ಯ ಎಂದರಿತ ಅರಸು ಅವರು ಭೂ ಸುಧಾರಣಾ ಮಂಡಳಿಯನ್ನು ರಚಿಸಿದರು.  ಭೂ ಸುಧಾರಣಾ ಮಂಡಳಿಗಳಲ್ಲಿ  ಸಮಾಜದ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳಿರುವಂತೆ ಹಾಗೂ ಪ್ರತಿನಿಧಿಗಳು ನೀಡಿದ ತೀರ್ಪನ್ನು ನ್ಯಾಯಾಲಯದಲ್ಲಿ ಪ್ರಶ್ನಿಸದಿರುವ ಹಾಗೆ ಮಾಡಿದರು.  ಶತಮಾನಗಳಿಂದ ಅಜ್ಞಾನ, ಗುಲಾಮಗಿರಿಯಲ್ಲಿ ಸೊರಗಿದ್ದ ಗೇಣಿದಾರರಿಗೆ ವಿಮೋಚನೆಯ ಮಾರ್ಗ ತೋರಿದರು.
ಸಾಮಾಜಿಕ ಪರಿವರ್ತನೆ :
*******ಅಸಮಾನತೆಯನ್ನು ತೊಡೆದು ವ್ಯಕ್ತಿಯ ಸ್ವಾತಂತ್ರ್ಯಕ್ಕೆ ಬೆಲೆ ನೀಡಿದ ಅರಸರು ಜೀತ ವಿಮುಕ್ತಿಯನ್ನು ಜಾರಿಗೆ ತಂದರು.  ಶೋಷಿತ ಜನಾಂಗದ ಬೆನ್ನೆಲುಬಿಗೆ ಕಸುಬನ್ನು ತುಂಬಿದರು.  ಮಲಹೊರುವಂತ ಅಮನುಷ ಪದ್ದತಿ ಇವರ ಆಡಳಿತ ಕಾಲದಲ್ಲಿ ಕೊನೆಗೊಂಡಿತು.  ಕೃಷಿ ಕಾರ್ಮಿಕರಿಗೆ ಕನಿಷ್ಠ ಕೂಲಿಯನ್ನು ನಿಗದಿಪಡಿಸಿ ಆರ್ಥಿಕ ಬೆಂಬಲ ನೀಡಿದರು.  ಸಾಲದ ಸಂಕೋಲೆಯಿಂದ ಪರಿತಪ್ಪಿಸುತ್ತಿದ್ದ ಲಕ್ಷಾಂತರ ಕುಟುಂಬಗಳಿಗೆ ಋಣಪರಿಹಾರ ತಂದು ಅವರ ಕಣ್ಣೀರು ಒರೆಸಿದರು.  ಅರಸರು ಜಾರಿಗೆ ತಂದ ಭೂ ಸುಧಾರಣೆ, ಜೀತವಿಮುಕ್ತಿ ಮತ್ತು ಋಣಪರಿಹಾರ ಕಾರ್ಯಕ್ರಮಗಳು ವ್ಯವಸ್ಥೆಯ ವಿರುದ್ಧ ಸಾರಿದ ಸಮರ ದುರ್ಬಲ ವರ್ಗದಲ್ಲಿ ಸ್ವಾಭಿಮಾನದ ಕಲ್ಪನೆ ಸೃಷ್ಟಿಸಿ ಅವರ ಬದುಕಿಗೆ ಸ್ವಾವಲಂಬನೆಯ ನೆಲೆ ಒದಗಿಸಿದರು.  ಹಿಂದುಳಿದ ವರ್ಗಗಳ ಅಭ್ಯುದಯಕ್ಕಾಗಿ ಅನೇಕ ಮೂಲಭೂತ ಕಾರ್ಯಕ್ರಮಗಳನ್ನು ಕೈಗೊಂಡರು.  ಶಿಷ್ಯವೇತನ, ಶುಲ್ಕ ರಿಯಾಯಿತಿ, ಉಚಿತ ಊಟ ವ್ಯವಸ್ಥೆ ಹೀಗೆ ಅವರು ಹಿಂದುಳಿದ ವರ್ಗದವರು ಸಾಂಸ್ಕøತಿಕವಾಗಿಯೂ ಮೇಲೆ ಬರಲು ಅನುಕೂಲ ಕಲ್ಪಿಸಿದರು.  ಈ ವರ್ಗದ ಜನರು ಹೊಸ ಬದುಕು ಪಡೆದು ಹೊಸ ಚೈತನ್ಯದಿಂದ ಬದುಕಲು ಅರಸು ರೂವಾರಿಯಾದರು.
ಸತ್ವಶಾಲಿ ವ್ಯಕ್ತಿ :
********* ನಮ್ಮ ನಾಡಿನ ಇತಿಹಾಸದುದ್ದಕ್ಕೂ ಆಗಾಗ್ಗೆ ಸತ್ವಶಾಲಿ ವ್ಯಕ್ತಿಗಳ ಉಗಮವಾಗಿದೆ.  ಸಂಪ್ರದಾಯದ ಬಿಗಿಮುಷ್ಟಿಯಲ್ಲಿ ಜಡ್ಡುಗಟ್ಟಿ ಜನ ವಿರೋಧಿಯಾಗಿ ರೂಪಗೊಂಡ ಸಮಾಜಕ್ಕೆ ಚಿಕಿತ್ಸೆ ನೀಡಿ, ಪರಿವರ್ತನೆಯ ಹಾದಿಯಲ್ಲಿ ಮುನ್ನಡೆಸಿದರು.  ಇವರು ದೀನದಲಿತರ ಒಡಲಲ್ಲಿ ಭರವಸೆಯ ವಿಶಿಷ್ಟ ಬಯಕೆಯನ್ನು ಸೃಷ್ಟಿಸುತ್ತಾರೆ.  ಸಮಾಜದ ವಿಮೋಜನೆಗೆ ಹೋರಾಡುತ್ತಾರೆ.  ಇಂತಹ ಚಿಂತನಶೀಲ ಮಾನವತಾ ವಾದಿಗಳ ಸಾಲಿನಲ್ಲಿ ಗೌತಮ ಬುದ್ಧ, ಮಹಾತ್ಮಾ ಗಾಂಧಿ, ಡಾ. ಬಿ.ಆರ್. ಅಂಬೇಡ್ಕರ್ ಮುಂತಾದವರು ಬರುತ್ತಾರೆ.  ಕನ್ನಡ ನಾಡಿನ  ಜನಸಮೂಹದಲ್ಲಿ ನಿರ್ಲಕ್ಷ್ಯಕ್ಕೊಳಗಾದ ಬಹುಸಂಖ್ಯಾತ ದುರ್ಬಲ ವರ್ಗಗಳ ಚೇತನವನ್ನು ಬುದ್ಧಿಪೂರ್ವಕವಾಗಿ ಹುಡಿಕಿ ತಗೆದು, ಅವರ ಬರಡು ಬದುಕಿಗೆ ಆಸರೆಯ ನೀರುಣಿಸಿದವರಾಗಿದ್ದಾರೆ ದಿವಂಗತ ದೇವರಾಜ ಅರಸು ಅವರು.  ಈ ಮಹಾನ್ ಚೇತನಗಳ ಸಾಲಿನಲ್ಲಿ ಸೇರಿ ಹೋಗಿರುವುದು ಈ ನಾಡಿನ ಪುಣ್ಯ, ವಿಶೇಷ; ಕನ್ನಡ ಜನರು ಹೆಮ್ಮೆ ಪಡುವ ವಿಷಯ.
Please follow and like us:
error