ಬೈರೂತ್ ನ‌ ಮಹಾಸ್ಪೋಟಕ್ಕೆ ಗಾಯಗೊಂಡ ಲೆಬನಾನ್

ಲೆಬನಾನ್ ಗಾಯಗೊಂಡಿದೆ. ಬೈರೂತ್ ಬಂದರಿನಲ್ಲಿ ನಡೆದ ಸ್ಫೋಟ ಈ ಪುಟ್ಟ ರಾಷ್ಟ್ರವನ್ನು ಅಲುಗಾಡಿಸಿಬಿಟ್ಟಿದೆ. ಸತ್ತವರು ನೂರಕ್ಕೂ ಹೆಚ್ಚು, ಗಾಯಗೊಂಡವರು ನಾಲ್ಕು ಸಾವಿರಕ್ಕೂ ಹೆಚ್ಚು. ಕರೋನಾದಿಂದ ಭರ್ತಿಯಾಗಿದ್ದ ಆಸ್ಪತ್ರೆಗಳಲ್ಲಿ ಈ ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸುವುದೇ ಕಷ್ಟಕರವಾಗಿದೆ. ಗಾಯಾಳುಗಳಿಗೆ ಅಗತ್ಯವಾಗಿ ರಕ್ತ ಬೇಕು, ಬ್ಲಡ್ ಬ್ಯಾಂಕುಗಳು ಖಾಲಿಖಾಲಿ. ಮೊದಲೇ ಆರ್ಥಿಕ ಕುಸಿತದಿಂದ ಜರ್ಝರಿತವಾಗಿದ್ದ ಲೆಬನಾನ್ ಮೇಲೆ ಕರೋನಾ‌ ಎರಗಿತ್ತು. ಈಗ ಗಾಯದ ಮೇಲೆ ಬರೆ!

ಇದೆಂಥ ಸ್ಫೋಟ? ಭಯೋತ್ಪಾದಕ ದಾಳಿಯೇ? ನೆರೆಯ ಶತ್ರುದೇಶಗಳ ಮರಾಮೋಸದ ದಾಳಿಯೇ? ಲೆಬನಾನ್ ಒಳಗಿನ ಆಡಳಿತ ವಿರೋಧಿ ಶಕ್ತಿಗಳು ನಡೆಸಿರಬಹುದಾದ ಕೃತ್ಯವೇ? ಅಥವಾ ಸರ್ಕಾರ ಹೇಳುತ್ತಿರುವಂತೆ ಇದೊಂದು ಆಕಸ್ಮಿಕ ಅವಘಡವೇ? ಸದ್ಯಕ್ಕಂತೂ ಈ ಪ್ರಶ್ನೆಗಳಿಗೆ ಉತ್ತರ ಸಿಗುವ ಹಾಗೆ ಕಾಣುತ್ತಿಲ್ಲ. ಇಡೀ ಬೈರೂತ್ ನಗರ ರಕ್ತಸಿಕ್ತವಾಗಿದೆ.

ಲೆಬನಾನ್ ಸುಮಾರು ಎಪ್ಪತ್ತು ಲಕ್ಷದಷ್ಟು ಜನಸಂಖ್ಯೆಯಿರುವ ಪುಟ್ಟ ದೇಶ. ಪಶ್ಚಿಮಕ್ಕೆ ಮೆಡಿಟರೇನಿಯನ್ ಸಮುದ್ರದಂಡೆಯ ಒಂದು ಭಾಗದಲ್ಲಿ ಸೈಪ್ರಸ್ ಇದೆ. ಉತ್ತರ ಮತ್ತು ಪೂರ್ವದಲ್ಲಿ‌ ಸಿರಿಯಾ. ದಕ್ಷಿಣದಲ್ಲಿ ಲೆಬನಾನ್ ಮೇಲೆ ಸದಾ ಹಲ್ಲು ಮಸೆಯುವ ಇಸ್ರೇಲ್.

ನನ್ನ ತಲೆಮಾರಿನವರೆಲ್ಲ ಚಿಕ್ಕವರಾಗಿದ್ದ ಲೆಬನಾನ್ ಹೆಸರು ಪದೇ ಪದೇ ಕೇಳಿದ್ದೆವು, ಪತ್ರಿಕೆಗಳಲ್ಲಿ, ರೇಡಿಯೋಗಳಲ್ಲಿ. ಅದು ಸದಾ ಉರಿಯುವ ಅಗ್ನಿಕುಂಡ. ಏಳು ಸಾವಿರ ವರ್ಷಗಳ ಇತಿಹಾಸ ಈ ಪುಟ್ಟ ದೇಶಕ್ಕಿದೆ ಎಂದು ಹೇಳಲಾಗುತ್ತದೆ. ಹಲವು ಸಂಸ್ಕೃತಿ, ಧರ್ಮ, ಮತ, ಪಂಥಗಳ ಸಂಗಮವಿದು. ಶಿಯಾ ಮತ್ತು ಸುನ್ನಿ ಮುಸ್ಲಿಮರು ಸಮಸಮ ಸಂಖ್ಯೆಯಲ್ಲಿದ್ದಾರೆ. ಒಟ್ಟು ಮುಸ್ಲಿಮರು ಶೇ 54. ಕ್ರಿಶ್ಚಿಯನ್ನರ ಸಂಖ್ಯೆ ಶೇ. 40. ಶಿಯಾ ಪಂಗಡದಿಂದಲೇ ಹುಟ್ಟಿಕೊಂಡ ಡ್ರೂಜ್ (druze) ಎಂಬ ಸಮುದಾಯ ಶೇ.5ರಷ್ಟಿದೆ.

ಆಟೋಮನ್ ತುರುಷ್ಕರು ನಾಲ್ಕುನೂರು ವರ್ಷಗಳ ಕಾಲ ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದರು. ಮೊದಲ ವಿಶ್ವಯುದ್ಧದ ಸಂದರ್ಭದಲ್ಲಿ ಲೆಬನಾನ್ ಫ್ರೆಂಚರ ವಶವಾಯಿತು. ಫ್ರೆಂಚ್ ವಸಾಹತುಶಾಹಿ ವಿರುದ್ಧ ಒಂದು ದೊಡ್ಡ ಹೋರಾಟ ರೂಪುಗೊಂಡು 1943ರಲ್ಲಿ ಲೆಬನಾನ್ ಸ್ವತಂತ್ರಗೊಂಡಿತು.‌ ಇಲ್ಲಿನ ಪ್ರಮುಖ ಧರ್ಮಗಳಿಗೆ ಪಾಲುದಾರಿಕೆ ನೀಡುವ Confessionalist ಸರ್ಕಾರ ಜಾರಿಗೆ ಬಂದಿತು. ಆಧುನಿಕ ಕಾಲಘಟ್ಟಕ್ಕೆ ತಕ್ಕಂತೆ ಲೆಬನಾನ್ ತನ್ನನ್ನು ತಾನು ಮಾರ್ಪಾಡು ಮಾಡಿಕೊಂಡು ಬೆಳೆಯುತ್ತಿತ್ತು. ಆದರೆ 1975ರಿಂದ 1990ರವರೆಗೆ ಅಲ್ಲಿ ಹುಟ್ಟಿಕೊಂಡ ಸಿವಿಲ್ ವಾರ್ ಈ ಪುಟ್ಟದೇಶವನ್ನು ಕಾಡಿತು. ಆಂತರಿಕ ದಂಗೆಗಳ ಆಸರೆ ಪಡೆದು ನೆರೆಯ ಸಿರಿಯಾ ಮಧ್ಯಪ್ರವೇಶ ಮಾಡಿ ತನ್ನ ಮಿಲಿಟರಿ ನೆಲೆಗಳನ್ನು ಸ್ಥಾಪಿಸಿತು. ಅದರ ಜತೆಗೆ ಇಸ್ರೇಲ್ ಕೂಡ ಲೆಬನಾನ್ ಒಳಗೆ ಕಾಲಿಟ್ಟಿತು. 1975ರಿಂದ 2005ರವರೆಗೆ ಸಿರಿಯಾ ಮಿಲಿಟರಿ ಲೆಬನಾನ್ ಒಳಗೆ ಇತ್ತು. 1985ರಿಂದ 2000ದವರೆಗೆ ಇಸ್ರೇಲ್ ಪಡೆಗಳು ಲೆಬನಾನ್ ಒಳಗೆ ಹಲವು ಪ್ರಾಂತ್ಯಗಳ ಮೇಲೆ‌, ವಿಶೇಷವಾಗಿ ದಕ್ಷಿಣ ಲೆಬನಾನ್ ಮೇಲೆ ಹಿಡಿತ ಹೊಂದಿದ್ದವು.

ಲೆಬನಾನ್ ಮೇಲೆ ಇಸ್ರೇಲ್ ನ ದ್ವೇಷ ತುಂಬಾ ಹಳೆಯದು. 1948ರಲ್ಲಿ ಅರಬ್ ದೇಶಗಳು ಇಸ್ರೇಲ್ ಮೇಲೆ ಏರಿಹೋದಾಗ ಲೆಬನಾನ್ ಆ ದೇಶಗಳನ್ನು ಬೆಂಬಲಿಸಿತ್ತು. ಈ ಸಂದರ್ಭದಲ್ಲಿ ಸುಮಾರು ಒಂದು ಲಕ್ಷದಷ್ಟು ಪ್ಯಾಲೇಸ್ಟಿನಿಯನ್ ನಾಗರಿಕರು ನಿರಾಶ್ರಿತರಾಗಿ ಲೆಬನಾನ್ ಒಳಗೆ ಪ್ರವೇಶಿಸಿದರು. ಈಗ ಅವರ ಸಂಖ್ಯೆ ಎರಡು ಮೂರು ಪಟ್ಟಾಗಿದೆ. ಇವರನ್ನು ಮತ್ತೆ ಒಳಗೆ ಬಿಟ್ಟುಕೊಳ್ಳಲು ಇಸ್ರೇಲ್ ತಯಾರಿಲ್ಲ. ಪ್ಯಾಲೇಸ್ಟಿನಿಯನ್ ಗಳಿಗೆ ಲೆಬನಾನ್ ಪೌರತ್ವವೂ ಸಿಗುವುದಿಲ್ಲ, ಆಸ್ತಿ ಕೊಳ್ಳುವ ಹಕ್ಕೂ‌ ಇಲ್ಲ. ಒಂದು ತಲೆಮಾರಿನ ಜನರು ಈಗಾಗಲೇ ಎರಡನೇ ದರ್ಜೆ ನಾಗರಿಕರಾಗಿ ಬದುಕು ಕಳೆದುಬಿಟ್ಟಿದ್ದಾರೆ. 1968ರಿಂದ ದಕ್ಷಿಣ‌‌ ಲೆಬನಾನ್ ನಲ್ಲಿ ನೆಲೆಗೊಂಡಿದ್ದ ಪ್ಯಾಲೇಸ್ಟಿನಿಯನ್ ಗಳು ಇಸ್ರೇಲ್ ವಿರುದ್ಧ ಹೋರಾಡಲು ತಮ್ಮದೇ ಪಡೆಗಳನ್ನು ಕಟ್ಟಿಕೊಂಡರು. ಇಸ್ರೇಲ್ ನಲ್ಲಿ ತಾವು ಕಳೆದುಕೊಂಡ ತಮ್ಮ ನೆಲವನ್ನು ವಾಪಾಸು ಪಡೆದುಕೊಳ್ಳುವುದು ಇವರ ಉದ್ದೇಶವಾಗಿತ್ತು. ಆದರೆ ಈ ಉಗ್ರ ಸಂಘಟನೆ ಕಾಲಕ್ರಮೇಣ ಲೆಬನಾನ್ ಕ್ರಿಶ್ಚಿಯನ್ ಗುಂಪುಗಳ ಮೇಲೆ ಸಮರ ಸಾರಿತು.‌ ಇದು‌ ಲೆಬನಾನ್ ನಲ್ಲಿ ಹುಟ್ಟಿಕೊಂಡ ಸಿವಿಲ್ ವಾರ್ ಗೆ ಮೂಲ‌ಕಾರಣವಾಯಿತು. ಸಿವಿಲ್ ವಾರ್ ತೀವ್ರವಾಗುತ್ತಿದ್ದಂತೆ ಲೆಬನಾನ್ ಅಧ್ಯಕ್ಷ ಇಲಿಯಾಸ್ ಸಾರ್ಕಿಸ್ ಸಿರಿಯಾದ ಆಸರೆ ಕೋರಿದರು. ಸಿರಿಯನ್ ಮಿಲಿಟರಿ ಸಹಾಯಕ್ಕಾಗಿ ಧಾವಿಸಿತು. ಸಿರಿಯನ್ ಪಡೆಗಳು ಆಂತರಿಕ ದಂಗೆಯನ್ನು ನಿಯಂತ್ರಿಸುವ ಕಾರ್ಯದಲ್ಲಿ ತೊಡಗಿದವು. ಈ‌ ನಡುವೆ 1977ರಲ್ಲಿ ಪ್ಯಾಲೆಸ್ಟೈನ್ ಹೋರಾಟಗಾರರು ಇಸ್ರೇಲ್ ಮೇಲೆ ದಾಳಿಗಳನ್ನು ನಡೆಸಿದರು. ಇಸ್ರೇಲ್ ರಾಜಧಾನಿ ಟೆಲ್ ಅವಿವ್ ಮತ್ತು‌ ಹಾಫಿಯಾ ನಡುವಿನ ರಸ್ತೆಯಲ್ಲಿ ಪ್ರಯಾಣಿಕರಿಂದ ತುಂಬಿದ ಎರಡು ಬಸ್ ಗಳನ್ನು ಹೈಜಾಕ್ ಮಾಡಿದ ಉಗ್ರಗಾಮಿಗಳು ಕಂಡಕಂಡವರ ಮೇಲೆ‌ ಗುಂಡು ಹಾರಿಸಿ‌ ಮೂವತ್ತೇಳು‌ ಜನರನ್ನು ಕೊಂದರು. ನಂತರ ಇಸ್ರೇಲಿ ಪಡೆಗಳಿಂದ ಹತ್ಯೆಗೀಡಾದರು. ಇದಕ್ಕೆ‌ ಪ್ರತೀಕಾರವಾಗಿ ಇಸ್ರೇಲ್ ‘ಆಪರೇಚನ್ ಲಿಟಾನಿ’ ನಡೆಸಿ ಲಿಟಾನಿ ನದಿದಂಡೆಯ ಲೆಬನಾನ್ ಪ್ರದೇಶವನ್ನು ತನ್ನ ವಶಕ್ಕೆ‌ ತಂದುಕೊಂಡಿತು.

1981ರ ಜುಲ್ 17ರಂದು ಇಸ್ರೇಲಿ ವಾಯುಪಡೆ ಲೆಬನಾನ್ ನ‌ ರಾಜಧಾನಿ ಬೈರೂತ್ ಮೇಲೇ ದಾಳಿ‌ ನಡೆಸಿತು. ಪ್ಯಾಲೆಸ್ಟೈನ್ ಉಗ್ರಗಾಮಿಗಳು ಇದ್ದಾರೆ ಎಂಬ ಕಾರಣಕ್ಕಾಗಿ ನಡೆದ ಈ ದಾಳಿಯಲ್ಲಿ ಒಂದು ಬಹುಮಹಡಿ‌ ಕಟ್ಟಡ ಕುಸಿದುಬಿದ್ದಿತು. ಸುಮಾರು ಮುನ್ನೂರು ಲೆಬನಾನ್ ನಾಗರಿಕರು ಈ ದಾಳಿಯಲ್ಲಿ ಮೃತಪಟ್ಟಿದ್ದರು. ಈ ದಾಳಿಯನ್ನು ಅಮೆರಿಕ ಸೇರಿದಂತೆ ಬಹುತೇಕ ರಾಷ್ಟ್ರಗಳು ಖಂಡಿಸಿದ್ದವು. ಆದರೆ ಒಂದೇ ವರ್ಷದಲ್ಲಿ ಮತ್ತೆ ಇಸ್ರೇಲ್ ಮೇಲೆ ಲೆಬನಾನ್ ನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಪ್ಯಾಲಸ್ಟೈನಿ ಸಂಘಟನೆ PLO ದಾಳಿ‌‌ ನಡೆಸಿತು. ಈ ಬಾರಿ ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ಇಟಲಿ‌ ಒಳಗೊಂಡ ಬಹುರಾಷ್ಟ್ರೀಯ ಪಡೆ ಇಸ್ರೇಲ್ ಬೆನ್ನಿಗೆ‌‌ ನಿಂತುಕೊಂಡಿತು. PLO ವಿರುದ್ಧ ಬಹುರಾಷ್ಟ್ರೀಯ ಪಡೆಗಳು ಕಾರ್ಯಾಚರಣೆ ನಡೆಸಿದವು. 1982ರ ಸೆಪ್ಟೆಂಬರ್ ನಲ್ಲಿ ಲೆಬನಾನ್ ಅಂದಿನ ಅಧ್ಯಕ್ಷ ಬಷೀರ್ ಗೆಮಾಯಿಲ್ ಅವರನ್ನು‌ ದಾರುಣವಾಗಿ ಭಯೋತ್ಪಾದಕ ಕೃತ್ಯವೊಂದರಲ್ಲಿ‌ ಕೊಲ್ಲಲಾಯಿತು. ಆಂತರಿಕ ದಂಗೆಗಳು ಹೆಚ್ಚಾದವು. ಹಲವರು‌ ಜನಾಂಗೀಯ ನರಮೇಧಗಳೂ‌ ನಡೆದುಹೋದವು.‌ 1984ರಲ್ಲಿ ಬಹುರಾಷ್ಟ್ರೀಯ ಪಡೆಗಳು ಲೆಬನಾನ್ ನಿಂದ ಹೊರಹೋದವು. ದಕ್ಷಿಣ ಲೆಬನಾನ್ ಪ್ರಾಂತ್ಯಗಳನ್ನು ತನ್ನ ವಶದಲ್ಲಿ ಇಟ್ಟುಕೊಂಡಿದ್ದ ಇಸ್ರೇಲ್ 2000ನೇ ಇಸವಿಯಲ್ಲಿ ಬಿಟ್ಟುಕೊಟ್ಟಿತು.‌

ಲೆಬನಾನ್ ನೆರವಿಗೆ ಬಂದಿದ್ದ ಸಿರಿಯನ್ ಪಡೆಗಳು‌ ಹಿಂದಕ್ಕೆ ಹೋಗದೇ ಇರುವುದರ ವಿರುದ್ಧ ಲೆಬನಾನ್ ನಾಗರಿಕರು ವ್ಯಗ್ರರಾಗಿದ್ದರು.‌ ಅದಕ್ಕೆ‌ ಪುಷ್ಟಿ ನೀಡುವಂತೆ 2005ರ ಫೆಬ್ರವರಿಯಲ್ಲಿ ಮಾಜಿ‌ ಪ್ರಧಾನಿ ರಫೀಕ್ ಹರೀರಿ ಕಾರ್ ಬಾಂಬ್ ಸ್ಫೋಟದಲ್ಲಿ ಮೃತಪಟ್ಟರು. ಲೆಬನಾನಿಗಳ ದೃಷ್ಟಿಯಲ್ಲಿ ಈ ಸ್ಫೋಟ ಸಿರಿಯನ್ ಮಿಲಿಟರಿ‌ ನಡೆಸಿತ್ತು. ಇದು ಇಸ್ರೇಲ್ ಕೃತ್ಯ ಎಂದು ಸಿರಿಯಾ ಹೇಳಿಕೊಂಡಿತು. ರಫೀಕ್ ಅವರ ಹತ್ಯೆಯ ನಂತರ ಸರಣಿಯೋಪಾದಿಯಲ್ಲಿ ಲೆಬನಾನ್ ರಾಜಕೀಯ‌ ನಾಯಕರುಗಳ ನಿಗೂಢ ಹತ್ಯೆಗಳಾದವು. ಲೆಬನಾನ್ ಜನರು ಸಿರಿಯಾ ಮಿಲಿಟರಿ ವಿರುದ್ಧ ದಂಗೆ ಎದ್ದರು. ಅಂತಾರಾಷ್ಟ್ರೀಯ ಸಮುದಾಯವೂ ಸಹ ಸಿರಿಯಾ ಮೇಲೆ ಒತ್ತಡ‌ ಹೇರಿತು.‌ ಪರಿಣಾಮವಾಗಿ ಸಿರಿಯನ್ ಸೈನ್ಯ 2005ರಲ್ಲಿ ಲೆಬನಾನ್ ಖಾಲಿ ಮಾಡಿ‌ ವಾಪಾಸಾಯಿತು.

ಇದೆಲ್ಲ ಮುಗಿದರೂ ಲೆಬನಾನ್ ಸಂಕಷ್ಟಗಳು ತೀರಲೇ ಇಲ್ಲ. 70ರ ದಶಕದಲ್ಲಿ ಇರಾನ್ ನಲ್ಲಿ ಆಯತುಲ್ಲಾ ಖೊಮೇನಿ ಪ್ರವರ್ಧಮಾನಕ್ಕೆ ಬಂದಿದ್ದನಲ್ಲ, ಆತನ ಪ್ರಭಾವಳಿಗೆ ಹಲವಾರು ಅರಬ್ ದೇಶಗಳು ಒಳಗಾದವು. ಖೊಮೇನಿಯಿಸಂ ಹೆಸರಿನಲ್ಲಿ ಶಿಯಾ ಮುಸ್ಲಿಮರು ಒಂದಾಗತೊಡಗಿದ್ದರು. ಅದರ ಪರಿಣಾಮವಾಗಿಯೇ ಹೆಜ್ಬೊಲ್ಲಾ ಎಂಬ ರಾಜಕೀಯ ಪಕ್ಷ ಲೆಬನಾನ್ ನಲ್ಲಿ 1985ರಲ್ಲಿ ಸ್ಥಾಪನೆಯಾಗಿತ್ತು. ಅದು ತನ್ನದೇ ಆದ ಸ್ವತಂತ್ರ ಮಿಲಿಟರಿಯನ್ನು ಹೊಂದುವ ಮೂಲಕ ಉಗ್ರಗಾಮಿ ಸಂಘಟನೆಯ ಪಟ್ಟವನ್ನೂ ಹೊತ್ತುಕೊಂಡಿತು. ಯೂರೋಪಿಯನ್ ರಾಷ್ಟ್ರಗಳು ಹಾಗು ಇನ್ನೂ‌ ಹದಿನೆಂಟು ದೇಶಗಳು ಹೆಜ್ಬೊಲ್ಲಾವನ್ನು ಭಯೋತ್ಪಾದಕ ಸಂಘಟನೆ ಎಂದು ಪರಿಗಣಿಸುತ್ತವೆ. ಇಸ್ಲಾಮಿಕ್ ನ್ಯಾಷನಲಿಸಂ ಪ್ರತಿಪಾದಿಸುವ ಹೆಜ್ಬೊಲ್ಲಾ ಸಹಜವಾಗಿ ಇಸ್ರೇಲ್ ಮತ್ತು ಯೂರೋಪಿಯನ್ ದೇಶಗಳನ್ನು ದ್ವೇಷಿಸುತ್ತದೆ. ಸೌದಿ ಅರೇಬಿಯಾ, ಬಹರೇನ್ ಸೇರಿದಂತೆ ಬಹುತೇಕ ಅರಬ್ ದೇಶಗಳು ಮತ್ತು ಅರಬ್ ಲೀಗ್, ಅರಬ್ ಕೋ ಆಪರೇಷನ್ ನಂಥ ಒಕ್ಕೂಟಗಳು ಹೆಜ್ಬೊಲ್ಲಾದ ವಿರುದ್ಧ ಇವೆ. ಮಿಕ್ಕಂತೆ ಇರಾನ್, ಸಿರಿಯಾ, ರಷ್ಯಾ, ಇರಾಕ್ ಮತ್ತಿತರ ದೇಶಗಳ ಬೆಂಬಲವೂ ಇದಕ್ಕಿದೆ.‌

1985ರಿಂದ 2000ದವರೆಗೆ ದಕ್ಷಿಣ ಲೆಬನಾನ್ ನಲ್ಲಿ ಇಸ್ರೇಲ್ ಜತೆ ಬಡಿದಾಡುತ್ತ ಬಂದ ಮುಂಚೂಣಿ ಸೈನ್ಯ ಹೆಜ್ಬುಲ್ಲಾ ಆಗಿತ್ತು. 2006ರಲ್ಲಿ ಹೆಜ್ಬೊಲ್ಲಾ ಪೂರ್ಣಪ್ರಮಾಣದ ಯುದ್ಧವನ್ನೇ ಇಸ್ರೇಲ್ ಜತೆ ನಡೆಸಿತು. ಹೆಜ್ಬೊಲ್ಲಾ ನಡೆಸಿದ ಗೆರಿಲ್ಲಾ ಮಾದರಿಯ ದಾಳಿಗಳಿಂದ ಕಂಗೆಟ್ಟಿದ್ದ ಇಸ್ರೇಲ್ ಹತಾಶೆಯಿಂದ ಲೆಬನಾನ್ ರಾಜಧಾನಿ ಬೈರೂತ್ ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಹಲವೆಡೆ ವೈಮಾನಿಕ ದಾಳಿ ನಡೆಸಿತು. ವಿಶ್ವಸಂಸ್ಥೆಯ ಮಧ್ಯಪ್ರವೇಶದಿಂದಾಗಿ ಈ ಯುದ್ಧ ಕೊನೆಗೊಂಡು, ಇಸ್ರೇಲ್ ತಾನು ಆಕ್ರಮಿಸಿಕೊಂಡಿದ್ದ ಬಹುತೇಕ ಭೂಭಾಗಗಳನ್ನು ಬಿಟ್ಟುಕೊಟ್ಟಿತು. ಲೆಬನಾನಿಗಳೇ ಈ ಯುದ್ಧದಲ್ಲಿ ಹೆಚ್ಚು ಸತ್ತರೂ, ಇಸ್ರೇಲ್ ಪಡೆಗಳನ್ನು ಒಂದುಹಂತದಲ್ಲಿ ಹಿಮ್ಮೆಟ್ಟಿಸಲು ಹೆಜ್ಬೊಲ್ಲಾ ಯಶಸ್ವಿಯಾಗಿತ್ತು. ಇದಕ್ಕೆ ಕಾರಣವೂ ಇತ್ತು, ಹೆಜ್ಬೊಲ್ಲಾ ಜತೆ ಇರಾನ್ ಪೂರ್ಣಪ್ರಮಾಣದಲ್ಲಿ ಕೈ ಜೋಡಿಸಿತ್ತು.

ಹೆಜ್ಬೊಲ್ಲಾ ಮತ್ತು ಇಸ್ರೇಲ್ ಸಂಘರ್ಷ ಈಗಲೂ ಮುಂದುವರೆದಿದೆ. ಕಳೆದ ವಾರವಷ್ಟೇ ಇಸ್ರೇಲ್ ಮತ್ತು ಹೆಜ್ಬೊಲ್ಲಾಗಳ ನಡುವೆ ಲೆಬನಾನ್ ದಕ್ಷಿಣ ಗಡಿಯಲ್ಲಿ ಸಂಘರ್ಷ ಏರ್ಪಟ್ಟಿತ್ತು. ಸಿರಿಯಾದಲ್ಲಿ ಇಸ್ರೇಲಿ ವ್ಯಕ್ತಿಯೊಬ್ಬರನ್ನು ಹೆಜ್ಬೊಲ್ಲಾ ಗಳು ಕೊಂದಿದ್ದಾರೆ ಎಂಬುದು ಇಸ್ರೇಲ್ ಆರೋಪ. ಸಿರಿಯಾದಲ್ಲಿ ನಡೆಯುತ್ತಿರುವ ಬಹುಪಕ್ಷೀಯ ಸಂಘರ್ಷಗಳಲ್ಲಿ ಇಸ್ರೇಲ್ ಮತ್ತು ಹೆಜ್ಬೊಲ್ಲಾ ಪರಸ್ಪರರನ್ನು ಕೊಲ್ಲಬಾರದು ಎಂಬ ನೀತಿಯನ್ನು ಅನುಸರಿಸುತ್ತಿದ್ದವು, ಈಗ ಮತ್ತೆ ಸಂಘರ್ಷ ಹಬೆಯಾಡುತ್ತಿದೆ.

ಇದೆಲ್ಲದರ ನಡುವೆ ಬೈರೂತ್ ನಲ್ಲಿ ಈ ಭೀಕರ ದುರ್ಘಟನೆ ನಡೆದಿದೆ. ಪ್ರಾಥಮಿಕ ವರದಿಗಳ ಪ್ರಕಾರ ಬೈರೂತ್ ಬಂದರಿನಲ್ಲಿ 2700 ಟನ್ ಅಮೋನಿಯಂ ನೈಟ್ರೇಟ್ ಸಂಗ್ರಹಿಸಿಡಲಾಗಿತ್ತು. ಅದೇ ಅಷ್ಟು ದೊಡ್ಡ ಪ್ರಮಾಣದ ಸ್ಫೋಟಕ್ಕೆ ಕಾರಣ.‌ ವಿಷಯ ಏನು ಎಂದರೆ ಅದು ಲೆಬನಾನ್ ಗೆ ಸೇರಿದ್ದೂ ಆಗಿರಲಿಲ್ಲ. ಜಾರ್ಜಿಯಾದಿಂದ ಮೊಜಾಂಬಿಕ್ ಗೆ ರಷ್ಯನ್ ಹಡಗೊಂದು ಈ ಕಾರ್ಗೋವನ್ನು ಸಾಗಿಸುತ್ತಿತ್ತು. ತಾಂತ್ರಿಕ ದೋಷದಿಂದ ಈ ಹಡಗು ಬೈರೂತ್ ಬಂದರಿನಲ್ಲಿ ಇಳಿಯಿತು. ಕಾರ್ಗೋ ವಶಪಡಿಸಿಕೊಂಡು ಬಂದರಿನಲ್ಲೇ ಸಂಗ್ರಹಿಸಿಡಲಾಗಿತ್ತು. ಇದು ನಡೆದಿದ್ದು 2013ರ ಸೆಪ್ಟೆಂಬರ್ ನಲ್ಲಿ. ಈ ದೊಡ್ಡ ಪ್ರಮಾಣದ ಅಪಾಯಕಾರಿ ಸರಕನ್ನು ಯಾಕೆ ಲೆಬನಾನ್ ಅಧಿಕಾರಿಗಳು ಇಷ್ಟು ವರ್ಷವಾದರೂ ವಿಲೇವಾರಿ‌ ಮಾಡಲಿಲ್ಲ. ಅಮೋನಿಯಂ ನೈಟ್ರೇಟ್ ಮೈನಿಂಗ್ ಚಟುವಟಿಕೆಗಳಿಗೆ, ಇನ್ನಿತರ ಉದ್ದೇಶಗಳಿಗೆ ಬಳಸಲಾಗುತ್ತದೆ. ಕಾರ್ಗೋ ಯಾರಿಗೆ ಸೇರಿದ್ದೋ ಅವರಿಗೆ ತಲುಪಿಸಬಹುದಿತ್ತು ಅಥವಾ ಅದನ್ನು ಲೆಬನಾನ್ ನ ಸ್ಫೋಟಕ ತಯಾರಿಕಾ‌ ಕಂಪೆನಿಗಳಿಗೆ ಮಾರಬಹುದಿತ್ತು. ಕೊನೆಗೆ ಇದು ಅಪಾಯಕಾರಿಯಾದ್ದರಿಂದ ಲೆಬನಾನ್ ಸೈನ್ಯದ ವಶಕ್ಕೆ ನೀಡಬಹುದಾಗಿತ್ತು. ಇದ್ಯಾವುದನ್ನೂ ಮಾಡದೆ ಇಷ್ಟು ವರ್ಷಗಳ ಕಾಲ ಯಾಕೆ ಇಟ್ಟುಕೊಳ್ಳಲಾಗಿತ್ತು.‌ ದಿಢೀರನೆ ಅದು ಸ್ಫೋಟವಾಗಿದ್ದಾದರೂ‌ ಹೇಗೆ? ಲೆಬನಾನ್ ಒಳಗಿನ ಅಥವಾ ಹೊರಗಿನ ಶಕ್ತಿಗಳ ಕೈವಾಡ ಇರಬಹುದೇ?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೊಂದು ಭಯೋತ್ಪಾದಕ ದಾಳಿ ಎಂದು ತರಾತುರಿಯಲ್ಲಿ ಹೇಳಿಕೆ‌‌ ನೀಡಿದ್ದಾರೆ. ಇದು ಅವಘಡವೆಂದು ಹೇಳಿದರೂ, ಈ ಅವಘಡವನ್ನೂ ಉದ್ದೇಶಪೂರ್ವಕವಾಗಿ ಆಗಲು ಬಿಡಲಾಗಿದೆಯೇ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ.

ಇದೇನೇ ಇದ್ದರೂ ಸ್ಫೋಟಕ್ಕೆ ಇಡೀ ಲೆಬನಾನ್ ನಡುಗಿಹೋಗಿರುವುದಂತೂ ಸತ್ಯ. ಅದು ಚೇತರಿಸಿಕೊಳ್ಳುವುದು ಕಷ್ಟ. ನಾಲ್ಕುಸಾವಿರ ಗಾಯಾಳುಗಳಲ್ಲಿ ಅದೆಷ್ಟು ಮಂದಿ ಸಾಯಲಿದ್ದಾರೋ? ಅದೆಷ್ಟು ಮಂದಿ ಶಾಶ್ವತವಾಗಿ ಅಂಗವಿಕಲರಾಗಲಿದ್ದಾರೋ? ಏನೂ ಆಗದ ಜನರು ಕೂಡ ಈ‌ ಭೀತಿಯಿಂದ ಹೊರಬರಲು ಇನ್ನೆಷ್ಟು ಸಮಯ ಬೇಕೋ?

ಫ್ರೆಂಚರಿಂದ ಸ್ವಾತಂತ್ರ್ಯ ಪಡೆದ ನಂತರ, ಲೆಬನಾನ್ ಆಧುನಿಕತೆಗೆ ಒಗ್ಗಿಕೊಂಡಿತ್ತು. ಬೈರೂತ್ ಪ್ರವಾಸಿಗರ ಸ್ವರ್ಗವಾಗಿತ್ತು. 50 ಮತ್ತು 60ರ ದಶಕಗಳಲ್ಲಿ ಲೆಬನಾನ್ ಪೂರ್ವ್ ಸ್ವಿಟ್ಜರ್ಲೆಂಡ್‌‌ ಎಂದು ಹೆಸರಾಗಿತ್ತು. ಬೈರೂತ್ ನಗರ ಮಧ್ಯಪ್ರಾಚ್ಯದ ಪ್ಯಾರಿಸ್ ಎಂದು ಕರೆಯಲ್ಪಡುತ್ತಿತ್ತು. ಅದರ ಜಿಡಿಪಿ ಅತ್ಯಂತ ಮೇಲ್ಮಟ್ಟದಲ್ಲಿತ್ತು. ಆದರೆ ಅಂತರ್ಯುದ್ಧ, ಇಸ್ರೇಲ್ ದಾಳಿ, ಸಿರಿಯಾ ಮಧ್ಯಪ್ರವೇಶ, ಪ್ಯಾಲೆಸ್ಟೈನ್ ಸಮಸ್ಯೆ, ರಾಜಕೀಯ ನಾಯಕರ ಹತ್ಯಾ ಸರಣಿ, ಹೆಜ್ಬೊಲ್ಲಾ ಚಟುವಟಿಕೆಗಳು, ದಿನೇದಿನೇ ಹೆಚ್ಚುತ್ತಿರುವ ನಾಗರಿಕ ಪ್ರತಿಭಟನೆಗಳು, ಆರ್ಥಿಕ ಕುಸಿತ, ಕೋವಿಡ್- 19 ವೈರಸ್ ದಾಳಿ… ಹೀಗೆ 70ರ ದಶಕದಿಂದ ಇಂದಿನವರೆಗೆ ಒಂದಲ್ಲ ಒಂದು ಸಂಘರ್ಷ, ಯುದ್ಧ, ಕ್ಷೋಭೆಗಳಿಗೆ ಸಿಲುಕಿಕೊಂಡು ನರಳುತ್ತಿದೆ. ಬೈರೂತ್ ಸ್ಫೋಟ ಲೆಬನಾನ್ ಸಂಕಷ್ಟಗಳ ಹೊರೆಯನ್ನು ಮತ್ತಷ್ಟು ಹೆಚ್ಚಿಸಿದೆ.

-ದಿನೇಶ್ ಕುಮಾರ್ ಎಸ್.ಸಿ

Please follow and like us:
error