ನೋಟು ನಿಷೇಧ:ನ.28ರಂದು ರಾಷ್ಟ್ರವ್ಯಾಪಿ ಬಂದ್ ಗೆ ಪ್ರತಿಪಕ್ಷಗಳ ಕರೆ

opposition_partiesಸರಕಾರದ ನೋಟು ನಿಷೇಧ ಕ್ರಮದಿಂದಾಗಿ ಸಾರ್ವಜನಿಕರು ಸಂಕಷ್ಟಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ನ.28ರಂದು,ಸೋಮವಾರ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಪ್ರತಿಪಕ್ಷಗಳಿಂದು ಕರೆ ನೀಡಿವೆ.

ಬೆಳಿಗ್ಗೆ ಸಂಸತ್ ಭವನದ ಆವರಣದಲ್ಲಿರುವ ಗಾಂಧಿ ಪ್ರತಿಮೆಯ ಬಳಿ ಸಮಾವೇಶ ಗೊಂಡ ಪ್ರತಿಪಕ್ಷಗಳ ಸಂಸದರು ಪರಸ್ಪರ ಕೈಗಳನ್ನು ಸೇರಿಸುವ ಮೂಲಕ ಮಾನವ ಶೃಂಖಲೆಯನ್ನು ರೂಪಿಸಿ ಜಾಥಾದಲ್ಲಿ ತೆರಳಿದರು.

ಪ್ರತಿಪಕ್ಷವು ಸದನದ ಕಲಾಪ ನಿರ್ವಹಣೆಗೆ ಅವಕಾಶ ನಿರಾಕರಿಸುವ ಮೂಲಕ ಸತತ ಐದನೇ ದಿನವೂ ಲೋಕಸಭೆಯ ಸಮಯ ವ್ಯರ್ಥಗೊಂಡಿತು. ಹಣ ನಿಷೇಧ ಕುರಿತು ಚರ್ಚೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮಧ್ಯಪ್ರವೇಶಕ್ಕೆ ಬೇಡಿಕೆ ಈಗಲೂ ಪ್ರತಿಪಕ್ಷಗಳ ಕಾರ್ಯಸೂಚಿಯಲ್ಲಿ ಮೊದಲ ಸ್ಥಾನದಲ್ಲಿದೆ.

ನೋಟು ನಿಷೇಧವನ್ನು ದೇಶದ ಅತ್ಯಂತ ದೊಡ್ಡ ದಿಢೀರ್ ಹಣಕಾಸು ಪ್ರಯೋಗ ಎಂದು ಬಣ್ಣಿಸಿದ ಕಾಂಗ್ರೆಸ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು, ನಿಲುವಳಿ ಸೂಚನೆ ಯಡಿ ಚರ್ಚೆ ನಡೆಯಬೇಕೆಂದು ತನ್ನ ಪಕ್ಷವು ಬಯಸುತ್ತಿದೆ ಎಂದು ಹೇಳಿದರು.

ಕಾಂಗ್ರೆಸ್ ಸದಸ್ಯರಿಗೆ ಲೋಕಸಭೆಯಲ್ಲಿ ಮಾತನಾಡಲು ಅವಕಾಶ ನೀಡಲಾಗುತ್ತಿಲ್ಲ ಎಂದ ಅವರು, ನಮಗೆ ಚರ್ಚೆಗೆ ಸ್ಪೀಕರ್ ಅವಕಾಶ ನಿರಾಕರಿಸುತ್ತಿದ್ದಾರೆ. ಚರ್ಚೆಯಲ್ಲಿ ಪ್ರಧಾನಿ ಉಪಸ್ಥಿತರಿರುತ್ತಾರೆಯೇ,ನಮಗೆ ಮಾತನಾಡಲು ಅವಕಾಶ ದೊರೆಯುತ್ತದೆಯೇ ಎನ್ನುವುದು ಪ್ರಶ್ನೆ. ಇಲ್ಲ,ನಮಗೆ ಅವಕಾಶ ದೊರೆಯುವುದಿಲ್ಲ ಎಂದರು.

ಆರೋಪವನ್ನು ನಿರಾಕರಿಸಿದ ಕೇಂದ್ರ ಸಚಿವ ಎಂ.ವೆಂಕಯ್ಯ ನಾಯ್ಡು ಅವರು, ಕೋಲಾಹಲವನ್ನು ಸೃಷ್ಟಿಸುವ ಮೂಲಕ ಪ್ರತಿಪಕ್ಷವೇ ಸದನದಲ್ಲಿ ಚರ್ಚೆಗೆ ಅವಕಾಶ ನೀಡುತ್ತಿಲ್ಲ. ವಿಪರ್ಯಾಸವೆಂದರೆ ಅವು ಸರಕಾರವನ್ನು ದೂರುತ್ತಿವೆ ಎಂದರು. ಪ್ರತಿಪಕ್ಷವು ಜನರ ಮನೋಗತವನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿದ ಅವರು, ನೋಟು ನಿಷೇಧ ಕ್ರಮ ಯಶಸ್ವಿಯಾಗಬೇಕು ಎಂದು ಬಡಜನರು ಬಯಸುತ್ತಿದ್ದಾರೆ ಮತ್ತು ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ‘ಉದ್ಧಾರಕ ’ನಂತೆ ಕಾಣುತ್ತಿದ್ದಾರೆ ಎಂದರು.

ಸಂಸತ್ತಿನ ಹೊರಗೆ ಸುದ್ದಿಗಾರರೊಡನೆ ಮಾತನಾಡಿದ ಬಿಎಸ್‌ಪಿ ನಾಯಕಿ ಮಾಯಾವತಿ ಅವರು, ಪ್ರಧಾನಿ ಮೋದಿಯವರನ್ನು ಕರೆಸಿಕೊಂಡು ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಅವರಿಗೆ ಸೂಚಿಸುವಂತೆ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರನ್ನು ಆಗ್ರಹಿಸಿದರು.
ಸಂಸತ್ತಿನಲ್ಲಿ ಮೋದಿಯವರ ನಿರಂತರ ಅನುಪಸ್ಥಿತಿಯನ್ನು ಪ್ರಶ್ನಿಸಿದ ಅವರು, ತಾನು ಉತ್ತಮ ಕಾರ್ಯ ಮಾಡಿದ್ದೇನೆ ಎಂದು ಅವರು ಭಾವಿಸಿದ್ದರೆ ಇಷ್ಟೊಂದು ಹೆದರುವುದೇಕೆ ಎಂದು ತಾನು ಅವರನ್ನು ಕೇಳಲು ಬಯಸಿದ್ದೇನೆ ಎಂದರು.

Please follow and like us:
error