ನೆಲಕ್ಕೆ ಅಪ್ಪಳಿಸಿದ ವಿಮಾನ: 41 ಮಂದಿ ಮೃತ್ಯು

ಮಾಸ್ಕೊ, ಮೇ 6: ಇಲ್ಲಿನ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ವೇಳೆ ನೆಲಕ್ಕೆ ಅಪ್ಪಳಿಸಿದ ವಿಮಾನಕ್ಕೆ ಬೆಂಕಿ ಹತ್ತಿಕೊಂಡು ಕನಿಷ್ಠ 41 ಮಂದಿ ಮೃತಪಟ್ಟಿದ್ದಾರೆ.

ಶೆರೆಮೆಟೈವೊ ವಿಮಾನ ನಿಲ್ದಾಣದಲ್ಲಿ ದುರಂತಕ್ಕೀಡಾದ ರಷ್ಯಾದ ಏರೋಫ್ಲೋಟ್ ವಿಮಾನಯಾನ ಸಂಸ್ಥೆಯ ಸುಖೋಯ್ ಸೂಪರ್‌ಜೆಟ್ ವಿಮಾನದಲ್ಲಿದ್ದ ಹಲವು ಮಂದಿ ಪ್ರಯಾಣಿಕರು ವಿಮಾನದ ತುರ್ತು ಸ್ಲೈಡ್‌ಗಳ ಮೂಲಕ ತಪ್ಪಿಸಿಕೊಂಡರು.

ವಿಮಾನ ನೆಲಕ್ಕೆ ಅಪ್ಪಳಿಸಿದ ಕ್ಷಣದಲ್ಲೇ ವಿಮಾನದಲ್ಲಿ ಬೆಂಕಿ ಆವರಿಸಿತು. 73 ಪ್ರಯಾಣಿಕರು ಹಾಗೂ ಐದು ಮಂದಿ ಸಿಬ್ಬಂದಿ ಈ ನತದೃಷ್ಟ ವಿಮಾನದಲ್ಲಿದ್ದರು. ಈ ಪೈಕಿ 37 ಮಂದಿಯಷ್ಟೇ ಉಳಿದಿದ್ದಾರೆ ಎಂದು ರಷ್ಯಾದ ತನಿಖಾ ಸಂಸ್ಥೆಯ ವಕ್ತಾರೆ ಸ್ವೇತ್ಲಾನಾ ಪೆಟ್ರೆಂಕೊ ಹೇಳಿದ್ದಾರೆ. ಈ ದುರಂತಕ್ಕೆ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ತನಿಖೆ ಆರಂಭಿಸಲಾಗಿದ್ದು, ಪೈಲಟ್ ಸುರಕ್ಷಾ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಾರೆಯೇ ಎನ್ನುವುದನ್ನು ಪರಿಶೀಲಿಸಲಾಗುತ್ತಿದೆ ಎಂದು ತನಿಖಾ ಸಂಸ್ಥೆ ಹೇಳಿದೆ.

ಪ್ರತಿಕೂಲ ಹವಾಮಾನ ಮತ್ತು ಸಿಡಿಲಿನ ಕಾರಣದಿಂದ ತುರ್ತು ಭೂಸ್ಪರ್ಶ ಮಾಡಲಾಯಿತು ಎಂದು ಕೆಲ ಪ್ರಯಾಣಿಕರು ಹೇಳಿದ್ದಾರೆ. “ವಿಮಾನ ಟೇಕಾಫ್ ಆದ ಬಳಿಕ ವಿಮಾನಕ್ಕೆ ಸಿಡಿಲು ಬಡಿಯಿತು” ಎಂದು ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ಹೇಳಿದ್ದಾರೆ.

“ವಿಮಾನ ವಾಪಸ್ಸಾಯಿತು ಹಾಗೂ ಭೂಸ್ಪರ್ಶ ತೀರಾ ಕಠಿಣವಾಗಿತ್ತು. ನಾವೆಲ್ಲ ಭಯಭೀತರಾಗಿದ್ದೆವು. ಬಹುತೇಕ ಪ್ರಜ್ಞೆ ಕಳೆದುಕೊಂಡೆವು. ವಿಮಾನ ರನ್‌ವೇಗೆ ಜಿಗಿದ ವೇಳೆ ಬೆಂಕಿ ಹತ್ತಿಕೊಂಡಿತು” ಎಂದು ವಿವರಿಸಿದ್ದಾರೆ. ಮತ್ತೋರ್ವ ಪ್ರಯಾಣಿಕ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡ ವೀಡಿಯೊವನ್ನು ಸರ್ಕಾರಿ ಟಿವಿ ಪ್ರಸಾರ ಮಾಡಿದ್ದು, ಅದರಲ್ಲಿ ಪ್ರಯಾಣಿಕರ ಆಕ್ರಂದನ ಕೇಳಿ ಬರುತ್ತಿದೆ.

Please follow and like us:
error