ನಾಝಿ ಸಾಮ್ರಾಜ್ಯವಾದದ ವಿರುದ್ಧ ಹೋರಾಡಿ, ಮಡಿದ ಟಿಪ್ಪು ಸುಲ್ತಾನ್ ಕುಡಿ

-ಬಿ.ಎಂ.ಬಶೀರ್

ಟಿಪ್ಪು ವೀರ ಮರಣದ  ಬಳಿಕ ಅವರ ವಂಶಸ್ಥರು ಎಲ್ಲಿ ಹೋದರು? ಹಲವರು ಬೀದಿ ಪಾಲಾದರು ನಿಜ. ಆದರೆ ಟಿಪ್ಪುವಿನ ಬದುಕು ಅಲ್ಲಿಗೆ ಮುಗಿಯಲಿಲ್ಲ. ವಿಧಿ ವಿಪರ್ಯಾಸವೆಂದರೆ  ಇದೆ ಟಿಪ್ಪುವಿನ ಒಂದು ಹೆಣ್ಣು ಕುಡಿ ಬ್ರಿಟಿಷರ ಪರವಾಗಿ ಜರ್ಮನ್ ನಾಝಿಗಳ ವಿರುದ್ಧ ಹೋರಾಡಿ ಹುತಾತ್ಮವಾಯಿತು. ಅದೇ ತಾತನ ಧೀರೋದ್ಧಾತತೆಯನ್ನು ಮೆರೆದು ಬದುಕಿ, ಮರಣವಪ್ಪಿದ ಹೆಣ್ಣು ಮಗಳ ಹೆಸರು ನೂರ್ ಇನಾಯತ್. ಈಕೆ ಟಿಪ್ಪುವಿನ ಮೂರನೇ ತಲೆಮಾರಿನ ಕುಡಿ.

‘ಮೈಸೂರಿನ ಹುಲಿ’ ಎಂದೇ ವಿಶ್ವವಿಖ್ಯಾತನಾಗಿರುವ ಸುಲ್ತಾನ್ ಫತೇ ಅಲಿ ಟಿಪ್ಪು, ಬ್ರಿಟಿಶರ ವಿರುದ್ಧ ದಿಟ್ಟ ಹೋರಾಟ ನಡೆಸಿ ಪ್ರಾಣಾರ್ಪಣೆ ಮಾಡಿದ ಮಹಾನ್ ದೇಶಭಕ್ತ. ಶ್ರದ್ಧಾವಂತ ಮುಸ್ಲಿಮನಾಗಿದ್ದ ಟಿಪ್ಪು, ತನ್ನ ಜೀವಿತದುದ್ದಕ್ಕೂ ಜಾತ್ಯತೀತ ಮೌಲ್ಯಗಳನ್ನು ಎತ್ತಿಹಿಡಿದಿದ್ದ.ಟಿಪ್ಪು ಸುಲ್ತಾನ್‌ನ ವಂಶಸ್ಥ ಇನಾಯತ್ ಖಾನ್‌ಗೆ ಜನಿಸಿದ ನೂರ್ ಎಂಬ ಹೆಣ್ಣು ಮಗಳೊಬ್ಬಳ ಬಗ್ಗೆ ನಾವು ತಿಳಿದಿರೂದು ತೀರ ಕಡಿಮೆ. ಲಂಡನ್ ಈಕೆಗೆ ಚಿರ ಋಣಿಯಾಗಿ ಪ್ರತಿವರ್ಷ ನೆನೆಯುತ್ತಿದೆ.  ಎರಡನೆ ವಿಶ್ವಮಹಾಯುದ್ಧದ ಸಂದರ್ಭದಲ್ಲಿ ಬೇಹುಗಾರ್ತಿಯಾಗಿ ದುಡಿದು ಬಲಿದಾನ ಮಾಡಿದ ಈಕೆಯ ಶೌರ್ಯ,  ದುರಂತದ  ಕತೆ ಟಿಪ್ಪುವಿನ ಕತೆಯಂತೆಯೇ ಮೈ ನವಿರೇಳಿಸುವಂಥಹದ್ದು.

ಇನಾಯತ್ ಖಾನ್‌ರ ತಾಯಿ ಟಿಪ್ಪುಸುಲ್ತಾನ್ ವಂಶದವಳು. ಸೂಫಿ ಸಂಪ್ರದಾಯದ ಬಗ್ಗೆ ಅಪಾರ ಶ್ರದ್ಧೆಯನ್ನು ಹೊಂದಿದ್ದ ಇನಾಯತ್ ಖಾನ್ 1910ರಲ್ಲಿ ಭಾರತವನ್ನು ತೊರೆದು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಸಂಚರಿಸುತ್ತಾ, ಸೂಫಿ ತತ್ವಗಳ ಪ್ರಸಾರ ಮಾಡತೊಡಗಿದರು.ಅಮೆರಿಕದಲ್ಲಿ ತನ್ನ ಸುದೀರ್ಘ ವಾಸ್ತವ್ಯದ ಸಂದರ್ಭದಲ್ಲಿ ಇನಾಯತ್ ನ್ಯೂಮೆಕ್ಸಿಕೊದ ಯುವತಿ ಓರಾ ರೇ ಬೇಕರ್ ಎಂಬವರನ್ನು ವಿವಾಹವಾದರು. ಮದುವೆಯ ನಂತರ ಓರಾ ತನ್ನ ಹೆಸರನ್ನು ಪಿರಾನಿ ಅಮೀನಾ ಬೇಗಂ ಎಂಬುದಾಗಿ ಬದಲಾಯಿಸಿಕೊಂಡರು.ಇನಾಯತ್ ಖಾನ್ ಹಾಗೂ ಪಿರಾನಿ ಅಮೀನಾ ಬೇಗಂ ದಂಪತಿಗೆ ಎರಡು ಗಂಡು ಹಾಗೂ ಎರಡು ಹೆಣ್ಣು ಮಕ್ಕಳಿದ್ದರು. ಇವರಲ್ಲಿ ನೂರುನ್ನೀಸಾ ಯಾನೆ ನೂರ್ ಇನಾಯತ್ ಖಾನ್ ಎಲ್ಲರಿಗಿಂತಲೂ ದೊಡ್ಡವಳು.

1913ರಲ್ಲಿ ಇನಾಯತ್ ಖಾನ್ ರಶ್ಯದ ತ್ಸಾರ್ ದೊರೆ ಎರಡನೆ ನಿಕೋಲಾಸ್‌ನ ಅತಿಥಿಯಾಗಿ ಕ್ರೆಮ್ಲಿನ್‌ನಲ್ಲಿ ನೆಲೆಸಿದ್ದ ಸಂದರ್ಭದಲ್ಲಿ ಇನಾಯತ್ ಜನಿಸಿದ್ದಳು. ಅಂತರ್‌ಕಲಹ ಹಾಗೂ ಯುದ್ಧದ ಭೀತಿಯನ್ನು ಎದುರಿಸುತ್ತಿದ್ದ ನಿಕೋಲಾಸ್ ದೊರೆಯು ಇನಾಯತ್‌ರ ಧಾರ್ಮಿಕ ಮಾರ್ಗದರ್ಶನವನ್ನು ಕೋರಿದ್ದ.
1914ರಲ್ಲಿ ಮೊದಲ ಮಹಾಯುದ್ಧವು ಭುಗಿಲೆದ್ದಾಗ, ಇನಾಯತ್ ಖಾನ್ ಕುಟುಂಬವು ರಶ್ಯವನ್ನು ತೊರೆದು ಲಂಡನ್‌ಗೆ ತೆರಳಿತು. 1920ರಲ್ಲಿ ಫ್ರಾನ್ಸ್‌ನಲ್ಲಿ ಆಗಮಿಸಿದ ಇನಾಯತ್ ಕುಟುಂಬವು ಅಲ್ಲಿನ ಸೂಫಿ ಚಳವಳಿಯ ಬೆಂಬಲಿಗರೊಬ್ಬರು ಕೊಡುಗೆಯಾಗಿ ನೀಡಿದ್ದ ಮನೆಯಲ್ಲಿ ವಾಸವಾಗಿತ್ತು. 1927ರಲ್ಲಿ ತನ್ನ ತಂದೆಯ ಅಕಾಲಿಕ ನಿಧನದ ಬಳಿಕ ನೂರ್, ಶೋಕತಪ್ತ ಕುಟುಂಬಕ್ಕೆ ಆಸರೆಯಾಗುವ ಹೊಣೆ ಹೊರಬೇಕಾಯಿತು. ತನ್ನ ಶೋಕತಪ್ತ ತಾಯಿ ಹಾಗೂ ಒಡಹುಟ್ಟಿದವರನ್ನು ಸಲಹುವ ಜವಾಬ್ದಾರಿ ಆ ಹದಿಹರೆಯದ ಬಾಲಕಿಯ ಹೆಗಲೇರಿತು.
ಫ್ರಾನ್ಸ್‌ನ ಸೊರ್ಬೊನ್‌ನಲ್ಲಿ ಶಿಶು ಮನಶಾಸ್ತ್ರವನ್ನು ಅಧ್ಯಯನ ಮಾಡಿದ ನೂರ್‌ಗೆ ಸಂಗೀತದಲ್ಲಿಯೂ ಅಪಾರ ಅಸಕ್ತಿಯಿತ್ತು. ಆಕೆ ಪ್ರಸಿದ್ಧ ಪಾಶ್ಚಾತ್ಯ ಸಂಗೀತಗಾರ್ತಿ ನಾಡಿಯಾ ಬೌಲೆಂಜರ್‌ರಿಂದ ಪ್ಯಾರಿಸ್‌ನಲ್ಲಿ ಪಿಯಾನೊ ಹಾಗೂ ಹಾರ್ಪ್ ವಾದನವನ್ನು ಕಲಿತರು.ಈ ಸಮಯದಲ್ಲಿ ನೂರ್ ಮಕ್ಕಳ ಕತೆಗಳನ್ನು ಹಾಗೂ ಕವನಗಳನ್ನು ಬರೆಯುವ ಕಾಯಕದಲ್ಲಿ ತೊಡಗಿದರು.ಫ್ರಾನ್ಸ್‌ನ ಮಕ್ಕಳ ಪತ್ರಿಕೆಗಳಲ್ಲಿ ಆಕೆಯ ಕಥೆ, ಕವನಗಳು ಆಗಾಗ್ಗೆ ಪ್ರಕಟವಾಗುತ್ತಿದ್ದವು.
ಫ್ರೆಂಚ್ ರೇಡಿಯೋದಲ್ಲೂ ಆಕೆ ಕಾರ್ಯಕ್ರಮಗಳನ್ನು ನೀಡುತ್ತಿದ್ದರು.1939ರಲ್ಲಿ ಆಕೆ ಬುದ್ಧನ ಜಾತಕ ಕಥೆಗಳನ್ನು ಆಧರಿಸಿ ರಚಿಸಿದ ‘20 ಜಾತಕ ಟೇಲ್ಸ್’ ಕೃತಿಯು ಲಂಡನ್‌ನಲ್ಲಿ ಪ್ರಕಟವಾಯಿತು.

ಎರಡನೆ ವಿಶ್ವಮಹಾಯುದ್ಧದ ಸ್ಫೋಟಗೊಂಡಾಗ 1940ರಲ್ಲಿ ಫ್ರಾನ್ಸ್ ದೇಶವನ್ನು ಹಿಟ್ಲರನ ನಾಜಿ ಪಡೆಗಳು ಆಕ್ರಮಿಸಿದವು.ಆಗ ನೂರ್ ತನ್ನ ಕುಟುಂಬದೊಂದಿಗೆ ಲಂಡನ್‌ಗೆ ಪಲಾಯನ ಮಾಡಿದಳು. ಶಾಂತಿಯನ್ನು ಪ್ರತಿಪಾದಿಸುವ ತನ್ನ ತಂದೆಯ ಬೋಧನೆಗಳಿಂದ ನೂರ್ ಪ್ರಭಾವಿತಳಾಗಿದ್ದರೂ, ನಾಜಿ ಸೇನೆಯ ದಬ್ಬಾಳಿಕೆಯ ವಿರುದ್ಧ ಹೋರಾಡಲು ಆಕೆ ದೃಢ ಸಂಕಲ್ಪ ಮಾಡಿದಳು. ಆಕೆಯ ಸಹೋದರ ವಿಲಾಯತ್ ಇನಾಯತ್ ಖಾನ್ ಕೂಡಾ ಆಕೆಯೊಂದಿಗೆ ಕೈಜೋಡಿಸಿದ.
1940ರ ನವೆಂಬರ್ 19ರಂದು ಆಕೆ ಬ್ರಿಟಿಶ್ ಸೇನೆಯ ಮಹಿಳಾ ಆಕ್ಸಿಲರಿ ಏರ್‌ಪೋರ್ಸ್ (ಡಬ್ಲುಎಎಎಫ್)ಗೆ ಸೇರ್ಪಡೆಗೊಂಡಳು.ದ್ವಿತೀಯ ದರ್ಜೆಯ ವೈಮಾನಿಕ ಯೋಧೆಯಾಗಿ ನೇಮಕಗೊಂಡ ಆಕೆಯನ್ನು ವಯರ್‌ಲೆಸ್ ಆಪರೇಟರ್ ತರಬೇತಿಗಾಗಿ ಕಳುಹಿಸಲಾಯಿತು. ತರಬೇತಿಯ ಬಳಿಕ ನೂರ್‌ಳನ್ನು ಬ್ರಿಟನ್‌ನ ವಿಶೇಷ ಕಾರ್ಯಾಚರಣೆಗಳಿಗಾಗಿನ ವಿಭಾಗದಲ್ಲಿ (ಎಸ್‌ಓಇ) ನೇಮಕಗೊಳಿಸಲಾಯಿತು.

1943ರಲ್ಲಿ ಆಕೆಯನ್ನು ವಾಯುಪಡೆ ಸಚಿವಾಲಯದ,ವೈಮಾನಿಕ ಬೇಹುಗಾರಿಕೆ ನಿರ್ದೇಶನಾಲಯದಲ್ಲಿ ನಿಯೋಜನೆ ಮಾಡಲಾಯಿತು. ತರಬೇತಿಯ ಅವಧಿಯಲ್ಲಿ ಆಕೆ ತನ್ನ ಹೆಸರನ್ನು ನೂರಾ ಬೇಕರ್ ಎಂದು ಬದಲಾಯಿಸಿಕೊಂಡಳು. ಫ್ರೆಂಚ್ ಭಾಷೆಯಲ್ಲಿ ಪಾಂಡಿತ್ಯ ಹಾಗೂ ವಯರ್‌ಲೆಸ್ ಕಾರ್ಯಾಚರಣೆಯಲ್ಲಿ ಆಕೆ ಹೊಂದಿರುವ ದಕ್ಷತೆಯು ನೂರ್‌ಗೆ ನಾಝಿ ಆಕ್ರಮಿತ ಫ್ರಾನ್ಸ್‌ನಲ್ಲಿ ಬ್ರಿಟಿಶ್ ಬೇಹುಗಾರ್ತಿಯಾಗುವ ಅವಕಾಶವನ್ನು ದೊರಕಿಸಿಕೊಟ್ಟಿತು.

1943ರ ಜೂನ್ ತಿಂಗಳ 16-17ರ ಮಧ್ಯರಾತ್ರಿಯಂದು ನೂರ್ ನಾಜಿಪಡೆಗಳಿಂದ ಆಕ್ರಮಿತವಾದ ಫ್ರಾನ್ಸ್ ದೇಶದೊಳಗೆ ನುಸುಳಿದಳು. ಈಗ ಆಕೆ ತನ್ನ ಹೆಸರನ್ನು ಜೀಯಾನ್ ಮೇರಿ ರೆಜಿನರ್ ಎಂದು ಬದಲಾಯಿಸಿಕೊಂಡಳು.ಇತರ ಎಸ್‌ಓಇ ಮಹಿಳಾ ಬೇಹುಗಾರ್ತಿಯರ ಜೊತೆ ನೂರ್, ಫ್ರಾನ್ಸಿಸ್ ಸ್ಯುಟಿಲ್ ಎಂಬ ವೈದ್ಯನ ತಂಡವನ್ನು ಸೇರಿಕೊಂಡಳು. ಫ್ರಾನ್ಸ್‌ನಲ್ಲಿ ನಾಜಿಗಳ ಚಲನವಲನಗಳ ಬಗ್ಗೆ ಮಾಹಿತಿಯನ್ನು ರವಾನಿಸುವುದೇ ಆಕೆಯ ಕರ್ತವ್ಯವಾಗಿತ್ತು.
ಆದರೆ ಒಂದೂವರೆ ತಿಂಗಳುಗಳಲ್ಲಿ ನೂರ್‌ಳನ್ನು ಹೊರತುಪಡಿಸಿ, ಉಳಿದ ಎಲ್ಲಾ ರೇಡಿಯೋ ಅಪರೇಟರ್‌ಗಳ ಜಾಲವನ್ನು ನಾಜಿ ಪಡೆಗಳು ಬಂಧಿಸಿದವು. ಆದರೆ ನಾಜಿ ಸೇನೆಯಿಂದ ತಪ್ಪಿಸಿಕೊಂಡ ನೂರ್, ಫ್ರಾನ್ಸ್‌ನಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಂಚರಿಸುತ್ತಾ ಬೇಹುಗಾರಿಕಾ ಮಾಹಿತಿಗಳನ್ನು ರವಾನಿಸತೊಡಗಿದಳು. ಬ್ರಿಟನ್‌ಗೆ ವಾಪಸಾಗಬಹುದು ಎಂಬ ತನ್ನ ಇಲಾಖೆಯ ಸಲಹೆಯನ್ನು ತಿರಸ್ಕರಿಸಿ, ಆಕೆ ನಾಜಿ ಪಡೆಗಳ ಚಲನವಲನಗಳ ಬಗ್ಗೆ ಮಾಹಿತಿಯನ್ನು ಲಂಡನ್‌ಗೆ ಕಳುಹಿಸುತ್ತಲೇ ಇದ್ದಳು.
ಆದರೆ ನಾಜಿಗಳ ಪರ ಡಬ್ಬಲ್ ಏಜೆಂಟ್ ಆಗಿ ಕೆಲಸ ಮಾಡಿದ್ದ ಫ್ರೆಂಚ್ ವಾಯುಪಡೆಯ ಪೈಲಟ್‌ನ ವಿಶ್ವಾಸದ್ರೋಹದಿಂದಾಗಿ ಇನಾಯತ್ ಖಾನ್ ಜರ್ಮನ್ ಪಡೆಗಳಿಗೆ ಸಿಕ್ಕಿಬೀಳಬೇಕಾಯಿತು.1943ರ ಅಕ್ಟೋಬರ್ 13ರಂದು ಇನಾಯತ್‌ ಖಾನ್‌ಗಳನ್ನು ನಾಜಿ ಸೈನಿಕರು ಬಂಧಿಸಿದರು ಹಾಗೂ ಪ್ಯಾರಿಸ್‌ನಲ್ಲಿ ನಾಝಿಗಳ ಭದ್ರತಾ ಸೇವೆಗಳ ಮುಖ್ಯ ಕಾರ್ಯಾಲಯ(ಎಸ್‌ಡಿ)ದಲ್ಲಿ ಬಂಧನದಲ್ಲಿಡಲಾಯಿತು.

ಬಂಧಿತ ನೂರ್‌ಳನ್ನು ಅತ್ಯಂತ ಅಪಾಯಕಾರಿ ಕೈದಿಗಳ ಸಾಲಿಗೆ ಸೇರಿಸಲಾಯಿತು.ವಿಚಾರಣೆಯ ಸಂದರ್ಭದಲ್ಲಿ ನೂರ್‌ಗೆ ಅತ್ಯಂತ ಅಮಾನುಷವಾದ ಚಿತ್ರಹಿಂಸೆಯನ್ನು ನೀಡಿದರೂ ಆಕೆ ಒಂದೇ ಒಂದು ಮಾಹಿತಿಯನ್ನು ಕೂಡಾ ಬಾಯಿ ಬಿಡಲಿಲ್ಲವೆಂದು, ನಾಜಿ ಸೇನೆಯ ಗೂಢಚರ್ಯೆ ವಿಭಾಗ ಗೆಸ್ಟಪೋದ ಪ್ಯಾರಿಸ್ ಘಟಕದ ಮಾಜಿ ಮುಖ್ಯಸ್ಥ ಹ್ಯಾನ್ಸ್ ಎರಡನೆ ಮಹಾಯುದ್ಧದ ಬಳಿಕ ಬಹಿರಂಗಪಡಿಸಿದ್ದನು.1943ರ ನವೆಂಬರ್ 25ರಂದು ಇನಾಯತ್, ಇನ್ನಿಬ್ಬ ಎಸ್‌ಓಇ ಏಜೆಂಟರ ಜೊತೆಗೆ ಬಂಧನದಿಂದ ತಪ್ಪಿಸಿಕೊಂಡಳು. ಆದರೆ ದುರದೃಷ್ಟವಶಾತ್ ಅವರೆಲ್ಲಾ ಕೆಲವೇ ತಾಸುಗಳಲ್ಲಿ ಸಿಕ್ಕಿಬಿದ್ದರು.
ತರುವಾಯ, ನೂರ್‌ಳನ್ನು 1943ರ ನವೆಂಬರ್ 27ರಂದು ಜರ್ಮನಿಗೆ ಕೊಂಡೊಯ್ಯಲಾಯಿತು. ಅಲ್ಲಿ ಫೊರ್‌ಜೆಮ್ ಎಂಬಲ್ಲಿ ಆಕೆಯನ್ನು ಏಕಾಂತ ಬಂಧನದಲ್ಲಿ ಇಡಲಾಯಿತು.ಆಕೆಗೆ ಹೊರಜಗತ್ತಿನ ಯಾವುದೇ ಸಂಪರ್ಕವನ್ನೂ ನಿರಾಕರಿಸಲಾಯಿತು. ದಿನದ ಹೆಚ್ಚಿನ ಸಮಯದಲ್ಲಿ ಆಕೆಯ ಕೈಕಾಲುಗಳನ್ನು ಸರಪಳಿಯಲ್ಲಿ ಕಟ್ಟಿಹಾಕಲಾಗುತ್ತಿತ್ತು. ಇಲ್ಲಿಯೂ ಎಂತಹ ಚಿತ್ರಹಿಂಸೆಗೂ ಬಗ್ಗದ ನೂರ್ ತನ್ನ ಹಾಗೂ ತನ್ನ ಸಹಚರರ ಕಾರ್ಯಾಚರಣೆಗಳ ಬಗ್ಗೆ ಯಾವುದೇ ಸುಳಿವನ್ನು ನೀಡಲೂ ನಿರಾಕರಿಸಿದಳು.

1944ರ ನೂರ್ ಹಾಗೂ ಇತರ ಮೂವರು ಎಸ್‌ಓಇ ಏಜೆಂಟರಾದ ಯೊಲಾಂಡ್ ಬೀಕ್‌ಮ್ಯಾನ್, ಎಲಿಯಾನ್ ಪ್ಲೂಮ್ಯಾನ್ ಹಾಗೂ ಮೇಡಲಿನ್‌ರನ್ನು ಡಕಾಯು ಯಾತನಾ ಶಿಬಿರಕ್ಕೆ ಕಳುಹಿಸಲಾಯಿತು.1944ರ ಸೆಪ್ಟಂಬರ್ 13ರಂದು ಕೈಕೋಳಗಳಿಂದ ಬಂಧಿಸಲಾದ ಈ ನಾಲ್ವರು ಮಹಿಳೆಯರನ್ನು ಮರಣದಂಡನೆ ವಿಧಿಸಲಾಯಿತು.ನಾಲ್ವರನ್ನೂ ಮೈದಾನದಲ್ಲಿ ಮೊಣಕಾಲೂರುವಂತೆ ಮಾಡಿ, ಅವರಿಗೆ ಗುಂಡಿಕ್ಕಲಾಯಿತು.ಪ್ರತ್ಯಕ್ಷದರ್ಶಿಗಳು ಹೇಳುವಂತೆ ಸಾಲಾಗಿ ನಿಂತ ಟ್ರೂಪರ್‌ಗಳು ಒಬ್ಬರಾದ ಮೇಲೆ ಒಬ್ಬರಂತೆ ಯೊಲಾಂಡ್ ಬೀಕ್‌ಮ್ಯಾನ್, ಎಲಿಯಾನ್ ಪ್ಲೂಮ್ಯಾನ್ ಹಾಗೂ ಮೇಡಲಿನ್‌ರನ್ನು ಗುಂಡಿಕ್ಕಿ ಕೊಂದರು.
ನೂರ್‌ಗೆ ಗುಂಡಿಕ್ಕುವ ಸರದಿ ಬಂದಾಗ, ಹಂತಕ ಪಡೆಯ ನೇತೃತ್ವ ವಹಿಸಿದ್ದ ಫ್ರೆಡ್ರಿಕ್ ವಿಲ್‌ಹೆಮ್ ರ್ಯೂಪರ್ಟ್ ಗುಂಡಿಕ್ಕುವುದನ್ನು ನಿಲ್ಲಿಸುವಂತೆ ಆದೇಶಿಸಿದ. ಆತ ತನ್ನ ಬಂದೂಕಿನ ಹಿಡಿಯಿಂದ ನೂರ್‌ಳ ತಲೆಗೆ ಬಡಿದ. ಆಕೆಯ ತಲೆಯಿಂದ ರಕ್ತದ ಕೋಡಿಯೇ ಹರಿಯಿತು. ಆದರೂ ನೂರ್ ಎದ್ದೇಳಲು ಯತ್ನಿಸಿದಳು. ಆಗ ವಿಲ್‌ಹೆಮ್, ನೂರ್‌ಳ ತಲೆಯ ಹಿಂಭಾಗಕ್ಕೆ ಗುಂಡಿಕ್ಕಿದ. ಅಲ್ಲಿಗೆ ನೂರ್‌ಳ ಪ್ರಾಣಪಕ್ಷಿ ಹಾರಿ ಹೋಯಿತು.‘ಲಿಬರ್ಟೆ’ (ಫ್ರೆಂಚ್‌ನಲ್ಲಿ ಸ್ವಾತಂತ್ರ ಎಂದರ್ಥ) ಎಂದು ಆಕೆ ಸಾವಿಗೆ ಮುನ್ನ ಹೇಳಿದ ಕೊನೆಯ ಪದವಾಗಿತ್ತು.

ರಾಜವಂಶಸ್ಥೆ, ಗೂಢಚಾರಿಣಿ, ಯೋಧೆಯಾಗಿ  ನೂರ್ ಇನಾಯತ್ ಖಾನ್‌ರ ಬದುಕು 30ರ ಸಣ್ಣ ವಯಸ್ಸಿನಲ್ಲಿಯೇ ಬಾಡಿಹೋಯಿತು.ಟಿಪ್ಪು ಸುಲ್ತಾನ್ ಬ್ರಿಟಿಶ್ ಸಾಮ್ರಾಜ್ಯದ ವಿರುದ್ಧ ಹೋರಾಡಿದರೆ, ಇನಾಯತ್ ಖಾನ್ ನಾಝಿ ಸಾಮ್ರಾಜ್ಯವಾದದ ವಿರುದ್ಧ ಹೋರಾಡಿ ಮಡಿದಳು. ವೀರ ವನಿತೆ ನೂರ್ ಇನಾಯತ್ ಖಾನ್‌ಗೆ ಮರಣೋತ್ತರ ಬ್ರಿಟನ್, ಶೌರ್ಯ ಪುರಸ್ಕಾರ ಜಾರ್ಜ್ ಕ್ರಾಸ್ ಹಾಗೂ ಚಿನ್ನದ ನಕ್ಷತ್ರ ಪದಕವನ್ನು ನೀಡಿ,  ಗೌರವವನ್ನು ಅರ್ಪಿಸಿದೆ. ನೂರ್ ಇನಾಯತ್‌ ಖಾನ್‌ಳ ಬದುಕು ರೋಚಕವಷ್ಟೇ ಅಲ್ಲ, ಆಕೆಯ ಶೌರ್ಯ, ಕರ್ತವ್ಯ ನಿಷ್ಠೆಗಳು ಇಂದಿನ ಯುವಪೀಳಿಗೆಗೆ ಆದರ್ಶಪ್ರಾಯವೂ ಆಗಿವೆ

Please follow and like us:
error