ತ್ರಿವಳಿ ತಲಾಖ್ ಅನಪೇಕ್ಷಿತ ಪದ್ಧತಿ,ಅದರ ವಿರುದ್ಧ ಸಲಹೆ ನೀಡುವೆ

ಮುಸ್ಲಿಂ ಕಾನೂನು ಮಂಡಳಿಯಿಂದ ಸುಪ್ರೀಂಗೆ ಪ್ರಮಾಣಪತ್ರ ಸಲ್ಲಿಕೆ

talaq-tripleಹೊಸದಿಲ್ಲಿ,ಮೇ 22: ತಮ್ಮ ಮದುವೆಯನ್ನು ರದ್ದುಗೊಳಿಸಲು ತ್ರಿವಳಿ ತಲಾಖ್ ಪದ್ಧತಿಯನ್ನು ಬಳಸದಂತೆ ವರರಿಗೆ ತಿಳಿಸುವಂತೆ ಖಾಜಿಗಳಿಗೆ ಸಲಹೆಯನ್ನು ಹೊರಡಿಸು ವುದಾಗಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ(ಎಐಎಂಪಿಎಲ್‌ಬಿ) ಯು ಸೋಮವಾರ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.

   ಒಂದೇ ಸಮಯಕ್ಕೆ ಮೂರು ಬಾರಿ ತಲಾಖ್ ಉಚ್ಚರಿಸುವುದು ಶರೀಯತ್‌ನಲ್ಲಿ ಅನಪೇಕ್ಷಿತ ಪದ್ಧತಿಯಾಗಿರುವುದರಿಂದ ದಂಪತಿಗಳ ಮಧ್ಯೆ ವಿಚ್ಛೇದನಕ್ಕೆ ಕಾರಣವಾಗುವ ಭಿನ್ನಾಭಿಪ್ರಾಯಗಳು ಸೃಷ್ಟಿಯಾದ ಸಂದರ್ಭಗಳಲ್ಲಿ ಪತ್ನಿಗೆ ವಿಚ್ಛೇದನ ನಿಡಲು ತ್ರಿವಳಿ ತಲಾಖ್‌ನ್ನು ಬಳಸದಂತೆ ನಿಖಾ ನಾಮಾ(ಮದುವೆ ಒಪ್ಪಂದ)ಕ್ಕೆ ಸಹಿ ಹಾಕುವ ವೇಳೆ ವರರಿಗೆ ತಿಳಿಸುವಂತೆ ಖಾಜಿಗಳಿಗೆ ತನ್ನ ಜಾಲತಾಣ, ಪ್ರಕಟಣೆಗಳು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಸಲಹೆ ನೀಡುವುದಾಗಿ ಮಂಡಳಿಯ ಕಾರ್ಯದರ್ಶಿ ಮುಹಮ್ಮದ್ ಫಜ್ಲುರ್ರಹೀಂ ಅವರು ನ್ಯಾಯಾಲಯಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಹೇಳಲಾಗಿದೆ.

 ನಿಖಾ ಸಂದರ್ಭದಲ್ಲಿ ನಿಖಾ ಮಾಡಿಸುವ ಖಾಜಿ ಪತಿಯು ಮೂರು ಬಾರಿ ತಲಾಕ್ ಶಬ್ದವನ್ನು ಉಚ್ಚರಿಸಿ ವಿಚ್ಛೇದನವನ್ನು ನೀಡಲು ಅವಕಾಶವಿರದಂತೆ ನಿಖಾ ನಾಮಾದಲ್ಲಿ ಷರತ್ತೊಂದನ್ನು ಸೇರಿಸುವಂತೆ ವರ ಮತ್ತು ವಧುವಿಗೆ ಸಲಹೆ ನೀಡುತ್ತಾರೆ ಎಂದೂ ಪ್ರಮಾಣಪತ್ರವು ತಿಳಿಸಿದೆ.

ಕಳೆದ ವಾರ ತ್ರಿವಳಿ ತಲಾಖ್ ವಿಷಯದಲ್ಲಿ ತನ್ನ ತೀರ್ಪನ್ನು ಕಾಯ್ದಿರಿಸಿರುವ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಈ ಪ್ರಮಾಣಪತ್ರವನ್ನು ಪರಿಶೀಲಿಸಲಿದೆ.

 ಆರು ದಿನಗಳಲ್ಲಿ ಕೇಂದ್ರ, ಎಐಎಂಪಿಎಲ್‌ಬಿ ಮತ್ತು ಅಖಿಲ ಭಾರತ ಮುಸ್ಲಿಂ ಮಹಿಳಾ ವೈಯಕ್ತಿಕ ಕಾನೂನು ಮಂಡಳಿ ಸೇರಿದಂತೆ ಸಂಬಂಧಿತ ಕಕ್ಷಿಗಳ ವಾದಗಳನ್ನು ಆಲಿಸಿದ ಬಳಿಕ ನ್ಯಾಯಾಲಯವು ಮೇ 18ರಂದು ಮುಸ್ಲಿಮರಲ್ಲಿನ ತ್ರಿವಳಿ ತಲಾಖ್ ಪದ್ಧತಿಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ಕುರಿತು ತನ್ನ ತೀರ್ಪನ್ನು ಕಾಯ್ದಿರಿಸಿತ್ತು.

Leave a Reply