ಠೇವಣಿಗಳ ವಿವರ: ತಕ್ಷಣ ವರದಿ ಮಾಡಲು ಬ್ಯಾಂಕ್‌ಗಳಿಗೆ ಆರ್‌ಬಿಐ ಸೂಚನೆ

ಹೊಸದಿಲ್ಲಿ, ಡಿ.30: ಅಮಾನ್ಯಗೊಂಡ ನೋಟುಗಳ ಠೇವಣಿಗೆ ಕೊನೆಯ ದಿನವಾದ ಶುಕ್ರವಾರ ಬ್ಯಾಂಕಿಂಗ್ ಅವಧಿ ಮುಗಿದ ಬಳಿಕ, ತನಗೆ ರೂ.1000 ಹಾಗೂ 500ರ ಹಳೆಯ ನೋಟುಗಳ ಠೇವಣಿಗಳ ಕುರಿತು ವಿವರವಾದ ವರದಿ ನೀಡುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಇತರ ಬ್ಯಾಂಕ್‌ಗಳಿಗೆ ಸೂಚಿಸಿದೆ.

rbiರದ್ದುಗೊಳಿಸಲಾದ ನೋಟುಗಳ ವಿನಿಮಯ ಸೌಲಭ್ಯ 2016ರ ಡಿ.30ರಂದು ಕೊನೆಗೊಳ್ಳಲಿದೆ. ಎಲ್ಲ ಬ್ಯಾಂಕ್‌ಗಳೂ 2016ರ ಡಿ.30ರಂದೇ ಹಳೆನೋಟುಗಳ ಸಂಗ್ರಹದ ಕುರಿತಾದ ಮಾಹಿತಿಯನ್ನು ಇ-ಮೇಲ್ ಮುಖಾಂತರ ವರದಿ ಮಾಡಬೇಕೆಂದು ಅಧಿಸೂಚನೆಯೊಂದರಲ್ಲಿ ಕೇಂದ್ರೀಯ ಬ್ಯಾಂಕ್ ತಿಳಿಸಿದೆ.

ನಿರ್ದಿಷ್ಟಗೊಳಿಸಲಾದ ಬ್ಯಾಂಕ್ ನೋಟುಗಳ ಠೇವಣಿಯ ಕುರಿತು ಮಾಹಿತಿ ಸಂಗ್ರಹಿಸಲು ವ್ಯವಸ್ಥೆ ಮಾಡುವಂತೆ ಸಾರ್ವಜನಿಕ, ಖಾಸಗಿ, ಗ್ರಾಮೀಣ ಹಾಗೂ ಸಹಕಾರಿ ಬ್ಯಾಂಕ್‌ಗಳ ಸಹಿತ ಎಲ್ಲ ಸಾಲದಾತ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ.

ಜಿಲ್ಲಾ ಕೇಂದ್ರೀಯ ಸಹಕಾರಿ ಬ್ಯಾಂಕ್‌ಗಳ ಹೊರತಾಗಿ ಎಲ್ಲ ಬ್ಯಾಂಕ್ ಶಾಖೆಗಳು ಶುಕ್ರವಾರ ವ್ಯವಹಾರದ ಅಂತ್ಯಕ್ಕೆ ಸಂಗ್ರಹಿಸಿರುವ ಹಳೆಯ ನೋಟುಗಳನ್ನು ಡಿ.31ರೊಳಗೆ ರಿಸರ್ವ್ ಬ್ಯಾಂಕ್‌ನ ಯಾವುದೇ ನೀಡಿಕೆ ಕಚೇರಿ ಅಥವಾ ಕರೆನ್ಸಿ ಚೆಸ್ಟ್ ಒಂದರಲ್ಲಿ ಠೇವಣಿಯಿರಿಸುವಂತೆ ವಿನಂತಿಸಲಾಗಿದೆ.

2016ರ ಡಿ.30ರ ವ್ಯವಹಾರ ಅಂತ್ಯಗೊಂಡ ಬಳಿಕ ನಿಷೇಧಿತ ನೋಟುಗಳು ಬ್ಯಾಂಕಿನ ನಗದು ಶಿಲ್ಕಿನ ಭಾಗವಾಗಲಾರವು. ಆದಾಗ್ಯೂ, ಡಿಸಿಸಿ ಬ್ಯಾಂಕ್‌ಗಳು ನ.10ರಿಂದ 14ರ ವರೆಗೆ ಸಂಗ್ರಹಿಸಿರುವ ಹಳೆಯ ನೋಟುಗಳನ್ನು ಮುಂದಿನ ಸೂಚನೆಯ ವರೆಗೆ ಇರಿಸಿಕೊಳ್ಳಬಹುದೆಂದು ಆರ್‌ಬಿಐ ತಿಳಿಸಿದೆ.

ಸಂಬಂಧಿತ ಅಥವಾ ಇತರ ಬ್ಯಾಂಕ್ ಶಾಖೆಗಳಿಂದ ಹಾಗೂ ಅಂಚೆ ಕಚೇರಿಗಳಿಂದ ಸಂಗ್ರಹಿಸಲ್ಪಟ್ಟಿರುವ ಹಳೆಯ ನೋಟುಗಳ ಠೇವಣಿಗೆ ಅನುಕೂಲ ಕಲ್ಪಿಸುವ ಅಗತ್ಯದ ವ್ಯವಸ್ಥೆ ಮಾಡುವಂತೆ ಕರೆನ್ಸಿ ಚೆಸ್ಟ್ ಇರುವ ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆ.

ಎಲ್ಲ ಠೇವಣಿಗಳನ್ನು ಪಡೆದು ಲೆಕ್ಕ ಮಾಡುವ ವರೆಗೆ, ರಾತ್ರಿ 9 ಗಂಟೆಯ ನಂತರವೂ ಸಮಗ್ರ ಗಣಕೀಕೃತ ಹಣದ ಕಾರ್ಯಾಚರಣೆಗಳು ಹಾಗೂ ಪ್ರಬಂಧನ ವ್ಯವಸ್ಥೆಯ ಮೂಲಕ(ಐಸಿಸಿಒಎಂಎಸ್) ವಹಿವಾಟಿನ ವರದಿ ಮಾಡುವಿಕೆ ಸಾಧ್ಯವಾಗಲಿದೆ.

 ಹಳೆಯ ನೋಟುಗಳ ದಾಸ್ತಾನಿಗೆ ಕರೆನ್ಸಿ ಚೆಸ್ಟ್ ಇರುವ ಬ್ಯಾಂಕ್‌ಗಳು ಈಗಿರುವ ಚೆಸ್ಟ್‌ಗಳಲ್ಲೇ ಹೆಚ್ಚುವರಿ ಸ್ಥಳ ಅಥವಾ ಅದೇ ಕೇಂದ್ರದಲ್ಲಿ ಕರೆನ್ಸಿ ಚೆಸ್ಟ್‌ನಷ್ಟೇ ಸುರಕ್ಷಿತ ಹಾಗೂ ಸುಭದ್ರವಾಗಿರುವ ಹೆಚ್ಚುವರಿ ದಾಸ್ತಾನು ಸ್ಥಳವನ್ನು ಉಪಯೋಗಿಸಬಹುದೆಂದು ಆರ್‌ಬಿಐ ತಿಳಿಸಿದೆ.

Leave a Reply