ಟೈಮ್’ ವರ್ಷದ ವ್ಯಕ್ತಿ ಸಮೀಕ್ಷೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾರೀ ಮುನ್ನಡೆ

ಹೊಸದಿಲ್ಲಿ, ನ. 26 : ನೋಟು ರದ್ದತಿ ಬಳಿಕದ ಪರಿಣಾಮಗಳ ಕುರಿತು ಮೌನ ವಹಿಸಿದ್ದಾರೆ ಎಂದು ವಿಪಕ್ಷಗಳಿಂದ ವ್ಯಾಪಕ ಟೀಕೆಗೊಳಗಾಗಿರುವ ಪ್ರಧಾನಿ ನರೇಂದ್ರ ಮೋದಿ ಹಾಗು ಅವರ ಅಭಿಮಾನಿಗಳಿಗೆ ಈ ಕಗ್ಗಂಟಿನ ನಡುವೆಯೇ ಒಂದು ಶುಭ ಸುದ್ದಿ ಬಂದಿದೆ.

ಪ್ರತಿಷ್ಠಿತ ‘ಟೈಮ್’ ನಿಯತಕಾಲಿಕದ ವರ್ಷದ ವ್ಯಕ್ತಿಗಾಗಿ ನಡೆಸುವ ಓದುಗರ ಸಮೀಕ್ಷೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈಗ ಮುಂಚೂಣಿಯಲ್ಲಿದ್ದಾರೆ. ಚಲಾವಣೆಯಾಗಿರುವ ಮತಗಳಲ್ಲಿ ಈಗಾಗಲೇ 2indian-pm-narendra-modi-russia-remains-our-principal-partner6 ಶೇಕಡಾ ಮತ ಮೋದಿ ಅವರು ಪಡೆದಿದ್ದಾರೆ. ಈ ಮೂಲಕ ಸ್ಪರ್ಧೆಯಲ್ಲಿರುವ ಇತರ ಗಣ್ಯರಿಗಿಂತ ಪ್ರಧಾನಿ ಮೋದಿ ಅವರು ಭಾರೀ ಮುನ್ನಡೆ ಸಾಧಿಸಿದ್ದಾರೆ.

ವಿಕಿಲೀಕ್ಸ್ ಸ್ಥಾಪಕ ಜೂಲಿಯನ್ ಅಸಾಂಜ್ 9 ಶೇ. , ಅಮೇರಿಕಾದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 8% ಮತಗಳನ್ನಷ್ಟೇ ಪಡೆದಿದ್ದಾರೆ. ಈ ಸಮೀಕ್ಷೆಯ ಮತದಾನ ಡಿಸೇಂಬರ್ 4 ಕ್ಕೆ ಮುಕ್ತಾಯಗೊಳ್ಳಲಿದೆ.  ಅದೇ ತಿಂಗಳು ಏಳಕ್ಕೆ ಸಮೀಕ್ಷೆಯ ಫಲಿತಾಂಶ ಘೋಷಣೆಯಾಗಲಿದೆ.

ಈ ಸ್ಪರ್ಧೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ , ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ , ಅಮೇರಿಕಾದ ಹಾಲಿ ಅಧ್ಯಕ್ಷ ಬರಾಕ್ ಒಬಾಮ, ಅಮೇರಿಕಾದ ಒಲಿಂಪಿಕ್ಸ್ ಚಿನ್ನ ವಿಜೇತೆ ಸಿಮೋನ್ ಬೈಲ್ಸ್,  ಖ್ಯಾತ ಗಾಯಕಿ ಬಿಯೊನ್ಸ್ ಮತ್ತಿತರ ಖ್ಯಾತನಾಮರು ಇದ್ದಾರೆ.

ಸದ್ಯ ಮೋದಿ ಇವರೆಲ್ಲರಿಗಿಂತ ಮುಂದಿದ್ದಾರೆ. ಆದರೆ ಸಮೀಕ್ಷೆಯ ಅಂತಿಮ ತೀರ್ಪು ಟೈಮ್ ಸಂಪಾದಕೀಯ ಮಂಡಳಿ ನೀಡಲಿದೆ. ಕಿಮ್ ಜಾಂಗ್ ಹಾಗು ಒಬಾಮ ಕೇವಲ ಒಂದು ಶೇಕಡಾ ಮತ ಪಡೆದಿದ್ದಾರೆ. ಆದರೆ ಮಿಶೆಲ್ ಒಬಾಮ ಎರಡು ಶೇಕಡಾ ಮತ ಪಡೆದಿದ್ದಾರೆ.

“ಈ ವರ್ಷ ನಮ್ಮ ಜೀವನದ ಮೇಲೆ  ಸರಿಯಾಗಿ ಅಥವಾ ತಪ್ಪಾಗಿ ಪ್ರಭಾವ ಬೀರಿದವರನ್ನು ಇದರಲ್ಲಿ ಆಯ್ಕೆ ಮಾಡಲಾಗುವುದು. ಅವರು ಈ ಬಾರಿ ನಮ್ಮನ್ನು ಅತ್ಯಂತ ಹೆಚ್ಚು ಕಾಡಿದ ಘಟನೆ , ವಿಷಯದೊಂದಿಗೆ ಸಂಬಂಧಪಟ್ಟಿರುತ್ತಾರೆ ” ಎಂದು ಟೈಮ್ ಹೇಳಿದೆ.

2010 ರಲ್ಲಿ ಫೇಸ್ ಬುಕ್ ಸ್ಥಾಪಕ ಮಾರ್ಕ್ ಝುಕರ್ಬರ್ಗ್ ,  2011 ರಲ್ಲಿ ವಿಶ್ವಾದ್ಯಂತ ನಡೆದ ಭಾರೀ ಪ್ರತಿಭಟನೆಗಳಲ್ಲಿ ಭಾಗವಹಿಸಿದ ಜನರು, 2012 ರಲ್ಲಿ ಬರಾಕ್ ಒಬಾಮ ,  2013 ರಲ್ಲಿ ಪೋಪ್ ಫ್ರಾನ್ಸಿಸ್ ,  2014 ರಲ್ಲಿ ಎಬೋಲಾ ವಿರುದ್ಧ ಹೋರಾಡಿದ ಜನತೆ ಹಾಗು   2015 ರಲ್ಲಿ ಜರ್ಮನ್ ಚಾನ್ಸಲರ್ ಏಂಜೆಲಾ ಮರ್ಕಲ್ ಟೈಮ್ ವರ್ಷದ ವ್ಯಕ್ತಿಗಳಾಗಿ ಆಯ್ಕೆಯಾಗಿದ್ದರು.

ಮೋದಿ ಸಾಮಾಜಿಕ ಜಾಲತಾಣಗಳಲ್ಲಿ ವಿಶ್ವದಲ್ಲೇ ಎರಡನೇ ಅತ್ಯಂತ ಪ್ರಸಿದ್ಧ ಜನನಾಯಕ. ಅವರಿಗೆ ಫೇಸ್ ಬುಕ್ ನಲ್ಲಿ 3.70 ಕೋಟಿ ಲೈಕ್ಸ್ , ಟ್ವಿಟ್ಟರ್ ನಲ್ಲಿ 2.40 ಕೋಟಿ ಫಾಲೋವರ್ಸ್ ಇದ್ದಾರೆ. ಇದಲ್ಲದೆ ಪ್ರಧಾನಿ ಕಚೇರಿ ಫೇಸ್ ಬುಕ್ ನಲ್ಲಿ 1.20 ಕೋಟಿ ಲೈಕ್ಸ್ ಪಡೆದಿದೆ.

Please follow and like us:
error