ಜೋ ಬೈಡೆನ್ ಗೆಲುವು : ಅಮೆರಿಕದ ಆತ್ಮಕ್ಕಾಗಿ ನಡೆದ ಚಾರಿತ್ರಿಕ ಹೋರಾಟ- ರವಿ ಕೃಷ್ಣಾರೆಡ್ಡಿ

ನಾನು ಸುಮಾರು ಹತ್ತು ವರ್ಷ ಅಮೆರಿಕದಲ್ಲಿ ಬೇರೆಬೇರೆ ರಾಜ್ಯಗಳಲ್ಲಿ ಇದ್ದೆ; 3 ತಿಂಗಳು ಇಲಿನಾಯ್ ರಾಜ್ಯದ ಶಿಕಾಗೋ, ಸುಮಾರು ಒಂದು ವರ್ಷ ಕಾಲ ಮಿನಿಯಾಪೊಲಿಸ್ ಪಕ್ಕದ ಆದರೆ ವಿಸ್ಕಾನ್ಸಿನ್ ರಾಜ್ಯಕ್ಕೆ ಸೇರಿದ ಹಡ್ಸನ್, ಮತ್ತು 8-9 ವರ್ಷಗಳ ಕಾಲ ಕ್ಯಾಲಿಫೋರ್ನಿಯಾದ ಬೇ ಏರಿಯಾ. ಹಡ್ಸನ್’ನಲ್ಲಿ ಇದ್ದಾಗ ಆರೇಳು ತಿಂಗಳ ಕಾಲ ಮಾರ್ಮನ್ ಮತಾಚರಣೆಯ ಸಹೋದ್ಯೋಗಿಯ ಮನೆಯಲ್ಲಿ, ಆತನ ಕುಟುಂಬದ ಪೇಯಿಂಗ್ ಗೆಸ್ಟ್ ಆಗಿ ವಾಸವಿದ್ದೆ.

ಅಮೆರಿಕದ ನನ್ನ ಇಂತಹ ಅನುಭವದ ಹಿನ್ನೆಲೆಯಲ್ಲಿ ನಾಲ್ಕು ವರ್ಷಗಳ ಹಿಂದೆ ಡೊನಾಲ್ಡ್ ಟ್ರಂಪ್ ಅಂತಹ ವ್ಯಕ್ತಿ ಅಲ್ಲಿಯ ರಾಷ್ಟ್ರಾಧ್ಯಕ್ಷನಾಗಿ ಚುನಾಯಿತನಾದಾಗ ನನಗೆ ನಿಜಕ್ಕೂ ಆಶ್ಚರ್ಯ ಮತ್ತು ಗಾಬರಿ ಆಗಿತ್ತು. ತಮ್ಮ ವೈಯಕ್ತಿಕ ಜೀವನದಲ್ಲಿ ಅಮೆರಿಕನ್ನರು ಹೇಗೇ ಇರಲಿ, ಅವರು ತಮ್ಮ ರಾಜಕಾರಣಿಗಳಿಂದ ಮಾತ್ರ ವಿನಯ, ಪ್ರಾಮಾಣಿಕತೆ ಮತ್ತು ಶೀಲವನ್ನು ಹಾಗೂ ಉನ್ನತ ಸ್ಥಾನಗಳ ನಾಯಕರಿಂದ ದಕ್ಷತೆ ಮತ್ತು ದೊಡ್ಡತನವನ್ನು ನಿರೀಕ್ಷಿಸುತ್ತಾರೆ. ಚುನಾವಣಾ ಪ್ರಚಾರ ಸಮಯದ ಪರಸ್ಪರ ವಿರೋಧ, ನಿಂದನೆ, ಆರೋಪಗಳು ಏನೇ ಇದ್ದರೂ ಫಲಿತಾಂಶದ ನಂತರ ಘನತೆಯಿಂದ ನಡೆದುಕೊಳ್ಳುತ್ತಾರೆ. ಎರಡನೇ ಜಾರ್ಜ್ ಬುಷ್ ಅಮೆರಿಕದ ಅಧ್ಯಕ್ಷರಾದಾಗಲೂ ಆತನ ವಿಚಾರದಲ್ಲಿ ಜನರಿಗೆ ಕೆಲವೊಂದು ಆತಂಕಗಳಿದ್ದವು. ಆದರೆ ಕಾಲಾಂತರದಲ್ಲಿ ಅವರೂ ತನ್ನ ಸ್ಥಾನದ ಮಹತ್ವವನ್ನು ಅರಿತು ಜವಾಬ್ದಾರಿಯಿಂದ ವರ್ತಿಸಿದರು. ಆತನ ಹೆಂಡತಿ ಲಾರಾ ಬುಷ್”ರದೂ ಬಹಳ ಸಂಯಮ, ವಿನಯ ಮತ್ತು ಘನತೆಯ ವ್ಯಕ್ತಿತ್ವ.

ಆದರೆ ಇದೆಲ್ಲ ಡೊನಾಲ್ಡ್ ಟ್ರಂಪ್ ವಿಚಾರದಲ್ಲಿ ಬದಲಾಗಿತ್ತು. ಈ ವ್ಯಕ್ತಿಯ ದುರಹಂಕಾರ, ಸುಳ್ಳು ಹೇಳುವುದು, ವಿವೇಚನೆಯಿಲ್ಲದೆ ಮಾಡುವ ಅಧಿಕಾರಮದದ ಮಾತಿನ ದಾಳಿ (ಗೂಳಿಪ್ರವೃತ್ತಿ / Bullying), ರಾತ್ರಿ ಹಗಲುಗಳ ಪರಿವೆ ಇಲ್ಲದೆ ಮನಸ್ಸಿಗೆ ಬಂದದ್ದನ್ನು ಟ್ವೀಟ್ ಮಾಡುವುದು; ಇಂತಹ ಹಲವು ಪ್ರವೃತ್ತಿಗಳು ಅಧ್ಯಕ್ಷನಾದ ಮೇಲೂ ಮುಂದುವರೆದಿತ್ತು. ಇವರ ಅಧ್ಯಕ್ಷಾವಧಿಯಲ್ಲಿ ಅಮೆರಿಕದಲ್ಲಿ ಆರ್ಥಿಕ ಮತ್ತು ಔದ್ಯೋಗಿಕ ಅವಕಾಶಗಳು ಹೆಚ್ಚಿದವು ಎನ್ನುವುದನ್ನು ಬಿಟ್ಟರೆ ಮಿಕ್ಕ ಬಹುತೇಕ ವಿಷಯಗಳಲ್ಲಿ ಅಮೆರಿಕ ತನ್ನ ಗೌರವಯುತ ಸ್ಥಾನವನ್ನು ಕಳೆದುಕೊಂಡಿತು ಮತ್ತು ಆಂತರಿಕವಾಗಿ ನೆಮ್ಮದಿ ಕದಡಿತು. ಬಣ್ಣಶ್ರೇಷ್ಟತೆಯ ಮದ, ಅಲ್ಪಸಂಖ್ಯಾತರೆಡೆಗಿನ ತಿರಸ್ಕಾರ, ಜನಾಂಗೀಯ ಭೇದ, ವಿರೋಧಿಗಳನ್ನು ಕ್ಷುಲ್ಲಕವಾಗಿ ಕಾಣುವುದು, ಸುಳ್ಳುಸುದ್ದಿ ಮತ್ತು ಅಸತ್ಯ ಪಿತೂರಿಕಥನಗಳನ್ನು ಎಗ್ಗುಸಿಗ್ಗಿಲ್ಲದೆ ಹರಡುವುದು; ಹೀಗೆ ಹಲವು ವಿಚಾರಗಳಲ್ಲಿ ಅಮೆರಿಕದ ಸಾರ್ವಜನಿಕ ಜೀವನದ ಇತ್ತೀಚಿನ ದಶಕಗಳಲ್ಲಿ ಊಹಿಸಲಾಗದ್ದನ್ನು ಕಳೆದ ನಾಲ್ಕು ವರ್ಷಗಳಲ್ಲಿ ಅಮೆರಿಕ ಮತ್ತು ಜಗತ್ತು ಕಂಡಿತು.

ಇಂತಹ ಬದಲಾದ ಸ್ಥಿತಿಗೆ ಅಲ್ಲಿಯ Fox News ಅಂತಹ ಮಾಧ್ಯಮಗಳ ಅತಿರೇಕವೂ ಕಾಣಿಕೆ ನೀಡಿತು. ಹಾಗೆಯೇ ಅಂತಹ ಅತಿರೇಕಕ್ಕೆ ವಿರೋಧವಾಗಿ ಇನ್ನೊಂದು ಬದಿಯ ಮಾಧ್ಯಮಗಳಿಂದ ಮತ್ತು ಜನರಿಂದ ಅಮೆರಿಕದ ಆತ್ಮಕ್ಕಾಗಿಯ ಹೋರಾಟವೂ ಚಾರಿತ್ರಿಕ ಮತ್ತು ಅನುಕರಣೀಯ. ಡೊನಾಲ್ಡ್ ಟ್ರಂಪ್’ರ ಸಾಕ್ಷ್ಯಾಧಾರಗಳಿಲ್ಲದ ಆರೋಪ ಮತ್ತು ಸುಳ್ಳುಗಳನ್ನು ಟ್ವಿಟರ್ ಇತ್ತೀಚಿನ ದಿನಗಳಲ್ಲಿ Fact Check ಮಾಡಿ ಯಾವುದೇ ಮುಲಾಜಿಲ್ಲದೆ ತನ್ನ ಬಳಕೆದಾರರನ್ನು ಎಚ್ಚರಿಸಿತು. ಮೂರ್ನಾಲ್ಕು ದಿನಗಳ ಹಿಂದೆ ಡೊನಾಲ್ಡ್ ಟ್ರಂಪ್ ಶ್ವೇತಭವನದಿಂದಲೇ ಚುನಾವಣಾ ಫಲಿತಾಂಶದ ಕುರಿತು ಪತ್ರಿಕಾಹೇಳಿಕೆ ನೀಡುತ್ತಿದ್ದಾಗ, ಅದರಲ್ಲಿ ಮಿಥ್ಯಾರೋಪಗಳು ಮತ್ತು ಅಸತ್ಯದ ಅಂಶಗಳು ಕಂಡು ಬರುತ್ತಿದ್ದಂತೆ ಅಮೆರಿಕದ NBC ಮತ್ತು ABC News ಮಾಧ್ಯಮ ಸಂಸ್ಥೆಗಳು ಆ ಕಾರ್ಯಕ್ರಮದ ನೇರ ಪ್ರಸಾರವನ್ನು ಒಂದೆರಡು ನಿಮಿಷಗಳಲ್ಲಿಯೇ ರದ್ದು ಮಾಡಿದವು. ವ್ಯಾವಹಾರಿಕ ಹಿತಾಸಕ್ತಿಗಳಿರುವ ಸಂಸ್ಥೆಗಳೂ ಸಹ ಸತ್ಯ ಮತ್ತು ಸ್ವಾತಂತ್ರ್ಯಕ್ಕಾಗಿ ಕೆಚ್ಚು ಮತ್ತು ಸ್ಥೈರ್ಯದಿಂದ ಬಡಿದಾಡುವ ಈ ಪರಿ ಭಾರತದ ಇಂದಿನ ಸಂದರ್ಭದಲ್ಲಿ ಊಹೆಗೂ ನಿಲುಕದ ವಿಚಾರ.

ಆದರೆ ಇದೇ ಸಂದರ್ಭದಲ್ಲಿ ಡೊನಾಲ್ಡ್ ಟ್ರಂಪ್ ಈಗಲೂ ಅಮೆರಿಕದಲ್ಲಿ ಜನಪ್ರಿಯ ಎನ್ನುವುದನ್ನು ನಾವು ಮರೆಯಬಾರದು. ಆ ಮಟ್ಟಿಗೆ ಅಮೆರಿಕ ಎರಡು ವೈರುಧ್ಯಗಳಲ್ಲಿ ಧ್ರುವೀಕೃತಗೊಂಡಿದೆ. (7.4 ಕೋಟಿ ಜನ ಜೋ ಬೈ‌ಡೆನ್‌’ರನ್ನು ಬೆಂಬಲಿಸಿದ್ದರೆ, 7+ ಕೋಟಿ ಜನ ಟ್ರಂಪ್‌’ರನ್ನು ಬೆಂಬಲಿಸಿದ್ದಾರೆ.) ಕಳೆದ ನಾಲ್ಕು ವರ್ಷಗಳಲ್ಲಿ ಅಲ್ಲಿಯ ಸ್ಥಳೀಯರಿಗೆ ಹೆಚ್ಚಿದ ಉದ್ಯೋಗಾವಕಾಶಗಳು ಮತ್ತು ಆರ್ಥಿಕ ಭದ್ರತೆ ಹಾಗೂ ಸಮಾಜವಾದ/ಕಮ್ಯುನಿಸಂ ಬಗೆಗಿನ ಭಯ ಅಲ್ಲಿಯ ಇತ್ತೀಚಿನ ವಲಸಿಗ ಮತ್ತು ಅಲ್ಪಸಂಖ್ಯಾತ ಲ್ಯಾಟಿನೋ ಸಮುದಾಯವನ್ನು ಟ್ರಂಪ್ ಬೆಂಬಲಿಗರನ್ನಾಗಿ ಪರಿವರ್ತಿಸಿದೆ. ಮುಂದಿನ ದಿನಗಳಲ್ಲಿ ಅಲ್ಲಿಯ ರಿಪಬ್ಲಿಕನ್ ಪಕ್ಷ ಬೇರೆಯೇ ರೀತಿ ರೂಪಾಂತರವಾಗಲಿದೆ. ಈ ಬೆಳವಣಿಗೆಯಲ್ಲಿ ಅವಕಾಶ ಮತ್ತು ಅಪಾಯಗಳು ಸಮಾನವಾಗಿ ಕಾಣಿಸುತ್ತಿವೆ.

ಜೋ ಬೈಡೆನ್ ಕುರಿತು ನಾನು ಹಲವು ಸಂದರ್ಭಗಳಲ್ಲಿ ಮಾತನಾಡಿದ್ದೇನೆ ಮತ್ತು ಬರೆದಿದ್ದೇನೆ. ಈ ವ್ಯಕ್ತಿಯ ಕುರಿತು ನನಗೆ ಗೌರವವಿದೆ. ಹಾಗೆಯೇ ಕಮಲಾ ಹ್ಯಾರಿಸ್ ಅಪಾರ ಆತ್ಮವಿಶ್ವಾಸದ ಹಾಗೂ ನಿಷ್ಠುರತೆಯ ವ್ಯಕ್ತಿ ಮತ್ತು ಅಮೆರಿಕದ ಮುಂದಿನ ವರ್ಷಗಳ/ದಶಕದ ಪ್ರಬಲ ಶಕ್ತಿ. ಭಾರತಕ್ಕೆ ಈಗ ಅವಕಾಶವೂ ಇದೆ, ಎಚ್ಚರಿಕೆಯೂ ಇದೆ. “ಅಬ್ ಕಿ ಬಾರ್ ಟ್ರಂಪ್ ಸರ್ಕಾರ್” ಎಂದು ತಮ್ಮ ವ್ಯಾಪ್ತಿಯನ್ನು ಮೀರಿ ಅಮೆರಿಕದ ನೆಲದಲ್ಲಿ ಅವಿವೇಕದಿಂದ ನುಡಿದ ನಮ್ಮ ಪ್ರಧಾನಿ ಮತ್ತು ಕೇಂದ್ರ ಸರ್ಕಾರದ ನಾಯಕರುಗಳು ಮುಂದಕ್ಕೆ ಹೇಗೆ ವರ್ತಿಸುತ್ತಾರೆ ಎನ್ನುವುದರ ಮೇಲೆ ಪರಸ್ಪರ ಸಂಬಂಧಗಳು ನಿಂತಿವೆ.

ಜೋ ಬೈಡೆನ್ ಮತ್ತು ಕಮಲಾ ಹ್ಯಾರಿಸ್‌ರಿಗೆ ಶುಭಾಶಯಗಳು. ಇವರ ಮುಂದಿರುವ ಅತಿದೊಡ್ಡ ಸವಾಲು ಜಾಗತಿಕ ತಾಪಮಾನ ಏರಿಕೆಯನ್ನು ನಿಯಂತ್ರಿಸುವುದು ಮತ್ತು ಆ ವಿಚಾರದಲ್ಲಿ ವಿಶ್ವಕ್ಕೆ ನಾಯಕತ್ವ ನೀಡುವುದು. ಅವರ ಯಶಸ್ಸಿನ ಮೇಲೆ ಜಗತ್ತಿನ ಯಶಸ್ಸು ಮತ್ತು ಭವಿಷ್ಯ ನಿಂತಿದೆ ಎಂದರೆ ಸದ್ಯಕ್ಕೆ ಅದು ಅತಿಶಯೋಕ್ತಿ ಅಲ್ಲ.

Please follow and like us:
error