ಕೊರೋನ ಸೋಂಕು: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಐಸಿಯುಗೆ ದಾಖಲು

ಲಂಡನ್,ಎ.7: ಕೊರೋನ ವೈರಸ್ ಸೋಂಕು ವಿರುದ್ಧ ಹೋರಾಡುತ್ತಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ರವಿವಾರ ಲಂಡನ್‌ನ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ.

ಮಧ್ಯಾಹ್ನದ ವೇಳೆಗೆ ಪ್ರಧಾನಿಯವರ ಆರೋಗ್ಯ ಹದಗೆಟ್ಟಿದ್ದು ಅವರ ವೈದ್ಯಕೀಯ ತಂಡದ ಸಲಹೆ ಮೇರೆಗೆ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ ಎಂದು ಪ್ರಧಾನಿಯವರ ಅಧಿಕೃತ ನಿವಾಸ ಡೌನಿಂಗ್ ಸ್ಟ್ರೀಟ್‌ನ ವಕ್ತಾರರ ಹೇಳಿಕೆಯನ್ನು ಉಲ್ಲೇಖಿಸಿ ‘ಸ್ಕೈ ನ್ಯೂಸ್’ ವರದಿ ಮಾಡಿದೆ.

55ರ ವಯಸ್ಸಿನ ಜಾನ್ಸನ್‌ಗೆ ಮಾ.27ರಂದು ವೈರಸ್ ತಗಲಿರುವುದು ದೃಢಪಟ್ಟಿದ್ದು,ಸ್ವತಃ ಪ್ರತ್ಯೇಕತೆ ಕಾಯ್ದುಕೊಂಡಿದ್ದರು. ರವಿವಾರ ಮುನ್ನಚ್ಚರಿಕಾ ಕ್ರಮವಾಗಿ ಲಂಡನ್‌ನ ಆಸ್ಪತ್ರೆಗೆ ದಾಖಲಾಗಿದ್ದರು.

ಪ್ರಧಾನಮಂತ್ರಿಯವರಿಗೆ ಉತ್ತಮ ಚಿಕಿತ್ಸೆ ನೀಡಲಾಗಿದೆ. ಎಲ್ಲಾ ರಾಷ್ಟ್ರೀಯ ಆರೋಗ್ಯ ಸೇವಾ (ಎನ್‌ಎಚ್‌ಎಸ್) ಸಿಬ್ಬಂದಿಯವರ ಕಠಿಣ ಶ್ರಮ ಹಾಗೂ ಬದ್ಧತೆಗೆ ಧನ್ಯವಾದಗಳು ಎಂದು ವಕ್ತಾರರು ತಿಳಿಸಿದ್ದಾರೆ.

ವಿಶ್ವದೆಲ್ಲೆಡೆಯ ನಾಯಕರು ಬೋರಿಸ್ ಬೇಗನೆ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತಿದ್ದಾರೆ. “ಬೋರಿಸ್ ನನ್ನ ಓರ್ವ ಉತ್ತಮ ಗೆಳೆಯನಾಗಿದ್ದು, ಅವರು ಆದಷ್ಟು ಬೇಗನೆ ಚೇತರಿಸಿಕೊಳ್ಳಲಿ” ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾರೈಸಿದರು.

ಶುಕ್ರವಾರ ಕಿರು ವೀಡಿಯೊವನ್ನು ಪೋಸ್ಟ್ ಮಾಡಿದ್ದ ಜಾನ್ಸನ್ “ನನಗೆ ಸ್ವಲ್ಪ ಪ್ರಮಾಣದಲ್ಲಿ ಕೊರೋನ ವೈರಸ್‌ನ ಲಕ್ಷಣವಿದೆ. ನನ್ನ ದೇಹ ಬಿಸಿಯಾಗಿದ್ದು,ವೈರಸ್ ಲಕ್ಷಣ ನಿವಾರಣೆಯಾಗುವ ತನಕ ಸ್ವತಃ ಐಸೋಲೇಶನ್‌ನಲ್ಲಿರಬೇಕೆಂದು ಸರಕಾರ ಸಲಹೆ ನೀಡಿದೆ” ಎಂದಿದ್ದರು.

Please follow and like us:
error