ಮಹದಾಯಿ ನದಿ ಜೋಡಣೆ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆಗಾಗಿ ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ ಒಂದು ವರ್ಷ. 2015ರ ಜುಲೈ 16 ರಂದು ಆರಂಭವಾದ ಈ ಹೋರಾಟ ಹಲವು ಮಜಲುಗಳನ್ನು ದಾಟಿ ಈಗ ವರ್ಷ ಪೂರೈಸಿದೆ. ಗದಗ, ಬೆಳಗಾವಿ, ಧಾರವಾಡ ಜಿಲ್ಲೆಗಳ ರೈತರು ಪ್ರತಿದಿನ ಒಂದಿಲ್ಲೊಂದು ರೀತಿಯಲ್ಲಿ ವಿಭಿನ್ನ ಪ್ರತಿಭಟನೆ ನಡೆಸಿಕೊಂಡು ಬಂದಿದ್ದಾರೆ. ಇಷ್ಟಾದರೂ ಸಹ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಒಬ್ಬರನ್ನೊಬ್ಬರು ದೂಷಿಸುವ ಕೆಲಸ ಮಾಡುತ್ತಿವೆಯೇ ಹೊರತು ಸಮಸ್ಯೆ ಬಗೆಹರಿಸೋ ನಿಟ್ಟಿನಲ್ಲಿ ಏನೂ ಕ್ರಮ ಕೈಗೊಳ್ಳುತ್ತಿಲ್ಲ. ಈ ಹಿನ್ನೆಲೆಯಲ್ಲಿಂದು ಗದಗ, ಬೆಳಗಾವಿ, ಧಾರವಾಡ ಬಂದ್ ಕರೆ ನೀಡಲಾಗಿದೆ, ಇನ್ನೂ ರೈತರ ಹೋರಾಟಕ್ಕೆ ಚಿತ್ರರಂಗ ಹಾಗೂ ವಿವಿಧ ಕನ್ನಡಪರ ಸಂಘಟನೆಗಳೂ ಸಾಥ್ ನೀಡಿವೆ. ಬೆಳಗಾವಿ ಜಿಲ್ಲೆ ಖಾನಾಪುರದಲ್ಲಿ ಹುಟ್ಟುವ ಮಹದಾಯಿ ನದಿಯ 225 ಟಿಎಂಸಿ ನೀರು ಸುಖಾಸುಮ್ಮನೆ ಹರಿದು ಸಮುದ್ರ ಸೇರುತ್ತಿದೆ. ಈ ನೀರಿನಲ್ಲಿ ಕರ್ನಾಟಕದ ಪಾಲಾದ 45 ಟಿಎಂಸಿ ನೀರನ್ನು ಪಡೆದುಕೊಳ್ಳುತ್ತೇವೆ ಎಂದು ಕರ್ನಾಟಕ ಸರ್ಕಾರ ನಿರ್ಧರಿಸಿದ್ದೇ ತಡ ನೆರೆಯ ಗೋವಾ ಸರ್ಕಾರ ನೀರನ್ನು ಮುಟ್ಟುವ ಹಾಗಿಲ್ಲ ಅಂತ ಕ್ಯಾತೆ ತೆಗೆದು ನ್ಯಾಯಾಧೀಕರಣ ರಚನೆಯಾಗುವಂತೆ ಮಾಡಿತು. ಅಂದಿನಿಂದ ಮಹದಾಯಿ ನದಿ ಜೋಡಣೆ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಸಂಪೂರ್ಣವಾಗಿ ಹಳ್ಳ ಹಿಡಿದಿದೆ.
ಒಂದು ವರ್ಷದಲ್ಲಿ ರೈತರ ಹೋರಾಟದ ಕಿಚ್ಚಿಗೆ ಸಾರ್ವಜನಿಕರ ಆಸ್ತಿ ಪಾಸ್ತಿ ಹಾನಿಯಾದರೆ – ಬಂದ್ ನಿಂದ ಸರ್ಕಾರದ ಬೊಕ್ಕಸಕ್ಕೆ ನೂರಾರ ಕೋಟಿ ನಷ್ಟವಾಗಿದೆ. ಇಷ್ಟಾದ್ರೂ ರಾಜ್ಯ ಸರ್ಕಾರವಾಗಲಿ – ಕೇಂದ್ರ ಸರ್ಕಾರವಾಗಲಿ ರೈತರ ಕೂಗಿಗೆ ಕಿವಿಗೊಡುತ್ತಿಲ್ಲ. ಇನ್ಮುಂದಾದ್ರೂ ಸೂಕ್ತ ನಿರ್ಧಾರ ತೆಗೆದುಕೊಳ್ತಾರಾ ಕಾದು ನೋಡಬೇಕಿದೆ.
ಕಳಸಾ – ಬಂಡೂರಿ ಹೋರಾಟಕ್ಕೆ ಇಂದು ಒಂದು ವರ್ಷ…!
Please follow and like us: