ಎ.5ರಂದು ರಾತ್ರಿ 9ಕ್ಕೆ ಮನೆ ಬಾಲ್ಕನಿಯಲ್ಲಿ 9 ನಿಮಿಷ ದೀಪ ಬೆಳಗಿರಿ: ಪ್ರಧಾನಿ ಮೋದಿ ವಿಡಿಯೋ ಸಂದೇಶ

ಹೊಸದಿಲ್ಲಿ, ಎ.3: ಎಪ್ರಿಲ್ 5ರಂದು (ರವಿವಾರ) ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ಮನೆಯ ಎಲ್ಲ ಲೈಟ್ ಬಂದ್ ಮಾಡಿ ಮನೆಯ ಬಾಗಿಲು ಅಥವಾ ಬಾಲ್ಕನಿಯಲ್ಲಿ ನಿಂತು ಮೇಣದ ಬತ್ತಿ, ದೀಪ ಹಾಗೂ ಮೊಬೈಲ್ ಫ್ಲ್ಯಾಶ್‌ಲೈಟ್ ಬೆಳಗಬೇಕು. ಈ ಮೂಲಕ ನಾವು ಒಗ್ಗಟ್ಟು ಪ್ರದರ್ಶಿಸಬೇಕು ಎಂದು ದೇಶವನ್ನು ಉದ್ದೇಶಿಸಿ ಶುಕ್ರವಾರ ಬೆಳಗ್ಗೆ 9 ಗಂಟೆಗೆ ವೀಡಿಯೊ ಸಂದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಕೊರೋನಾ ವಿರುದ್ಧದ ಹೋರಾಟಕ್ಕೆ ಜನ ಸಂಘಟಿತರಾಗಬೇಕು. ಲಾಕ್‍ಡೌನ್‍ನ ಇದುವರೆಗಿನ ಒಂಬತ್ತು ದಿನಗಳ ಅವಧಿಯಲ್ಲಿ ಶಿಸ್ತು ಮತ್ತು ಸೇವೆಯ ಮೂಲಕ ದೇಶದ ಜನ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದ್ದಾರೆ. ಭಾರತದ ಜನತೆಯ ಕ್ರಮಕ್ಕೆ ವಿಶ್ವಾದ್ಯಂತ ಮೆಚ್ಚುಗೆ ವ್ಯಕ್ತವಾಗಿದ್ದು, ಇತರ ದೇಶಗಳಿಗೂ ಇದು ಮಾದರಿಯಾಗಿದೆ ಎಂದು ಹೇಳಿದ್ದಾರೆ.

ಲಕ್ಷಾಂತರ ಮಂದಿ ಮನೆಗೊಳಗೇ ಇರುವಾಗ ಕೆಲವರಾದರೂ, ಏಕಾಂಗಿಯಾಗಿ ಕೋವಿಡ್-19 ವಿರುದ್ಧ ಹೇಗೆ ಹೋರಾಡುತ್ತೀರಿ ಎಂದು ಕೇಳಬಹುದು. ಆದರೆ ನಾವು ಒಬ್ಬಂಟಿಗಳಲ್ಲ. ಇದು 130 ಕೋಟಿ ಜನರ ಶಕ್ತಿ ಎಂದು ಬಣ್ಣಿಸಿದರು.

ಈ ಜಾಗೃತಿ ನಮಗೆ ಸ್ಫೂರ್ತಿ ನೀಡಿದೆ. ಗುರಿ ನೀಡಿದೆ. ಸಾಧಿಸುವ ಶಕ್ತಿ ನೀಡಿದೆ. ಇದು ನಮ್ಮ ಮುಂದಿನ ಪಥವನ್ನು ಸ್ಪಷ್ಟಪಡಿಸಿದೆ ಎಂದು ನುಡಿದರು. ಕೊರೋನ ಸಾಂಕ್ರಾಮಿಕದ ಕತ್ತಲಿನಿಂದ ಬೆಳಕಿನ ಕಡೆಗೆ ನಮ್ಮ ಪಯಣ ಸಾಗಬೇಕಿದೆ. ಕೊರೋನ ಕತ್ತಲಿನಿಂದ ಬೆಳಕಿನೆಡೆಗೆ ಸಾಗುವ ಪ್ರತೀಕವಾಗಿ ಏಪ್ರಿಲ್ 5ರಂದು ಒಂದು ದಿನ ರಾತ್ರಿ 9 ಗಂಟೆಗೆ ಬಾಗಿಲ ಹೊರಗೆ ಅಥವಾ ಬಾಲ್ಕನಿಗಳಲ್ಲಿ ಒಂಬತ್ತು ನಿಮಿಷಗಳ ಕಾಲ ಕ್ಯಾಂಡಲ್, ದೀಪ, ಟಾರ್ಚ್ ಅಥವಾ ಮೊಬೈಲ್ ಟಾರ್ಚ್ ಬೆಳಗಬೇಕು ಎಂದು ಕರೆ ನೀಡಿದರು.

Please follow and like us:
error