ಆದಿತ್ಯನಾಥ್ ನನ್ನನ್ನು ನಿಂದಿಸಿ ಹೊರದಬ್ಬಿದ್ದಾರೆ: ಮೋದಿಗೆ ಬಿಜೆಪಿಯ ದಲಿತ ಸಂಸದನ ದೂರು

ಹೊಸದಿಲ್ಲಿ, ಎ.5: ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನು ಎರಡು ಬಾರಿ ಭೇಟಿಯಾದಾಗಲೂ ಅವರು ತನಗೆ ಬೈದು ತನ್ನನ್ನು ಹೊರಗೆ ಹಾಕಿದ್ದಾರೆಂದು ರಾಜ್ಯದ ರೋಬರ್ಟ್ ಗಂಜ್ ಕ್ಷೇತ್ರವನ್ನು ಪ್ರತಿನಿಧಿಸುವ ಬಿಜೆಪಿಯ ದಲಿತ ಸಂಸದ ಛೋಟೆ ಲಾಲ್ ಖರ್ವರ್ (45) ಪ್ರಧಾನಿಗೆ ದೂರಿ ಪತ್ರ ಬರೆದಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪ್ರಧಾನಿ ಸಂಸದನಿಗೆ ಭರವಸೆ ನೀಡಿದ್ದಾರೆನ್ನಲಾಗಿದೆ.

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ವಿರೋಧಿ ಕಾಯಿದೆಯ ನಿಯಮಾವಳಿಗಳನ್ನು ಸುಪ್ರೀಂ ಕೋರ್ಟ್ ಸಡಿಲಗೊಳಿಸಿರುವುದರ ವಿರುದ್ಧ ದೇಶಾದ್ಯಂತ ನಡೆದ ದಲಿತರ ಪ್ರತಿಭಟನೆಗಳಲ್ಲಿ 11 ಮಂದಿ ಸಾವಿಗೀಡಾದ ನಂತರದ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ.

ತಮ್ಮ ಕ್ಷೇತ್ರದ ಸ್ಥಳೀಯಾಡಳಿತ ಕೂಡ ತನ್ನ ವಿರುದ್ಧ ತಾರತಮ್ಯಕಾರಿ ನಿಲುವು ತಳೆದಿದೆ, ಪಕ್ಷ ಕೂಡ ತನ್ನ ದೂರುಗಳನ್ನು ಪರಿಗಣಿಸುತ್ತಿಲ್ಲ ಎಂದು ಛೋಟೆಲಾಲ್ ಪ್ರಧಾನಿಗೆ ದೂರಿದ್ದಾರೆನ್ನಲಾಗಿದೆ.

ಅವರು ತಮ್ಮ ಪತ್ರದಲ್ಲಿ ಸಿಎಂ ಆದಿತ್ಯನಾಥ್ ಹೊರತಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ಮಹೇಂದ್ರನಾಥ್ ಪಾಂಡೆ ಹಾಗೂ ಇನ್ನೊಬ್ಬ ನಾಯಕ ಸುನಿಲ್ ಬನ್ಸಾಲ್ ಅವರ ಹೆಸರನ್ನೂ ನಮೂದಿಸಿದ್ದು, ದೂರಿನ ಪ್ರತಿಯನ್ನು ರಾಷ್ಟ್ರೀಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಆಯೋಗಕ್ಕೂ ಕಳುಹಿಸಿದ್ದಾರೆ.

ತಮ್ಮ ಕ್ಷೇತ್ರದ ಸಮೀಪವಿರುವ ಚಂದೌಲಿ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆಯಲ್ಲಿರುವ ವ್ಯಾಪಕ ಭ್ರಷ್ಟಾಚಾರದ ಬಗ್ಗೆ ತಾನು ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ, ಆದಿತ್ಯನಾಥ್ ಸರಕಾರ ಬಂದ ಮೇಲೆ ಪರಿಸ್ಥಿತಿ ಸುಧಾರಿಸಿ ಸೂಕ್ತ ಕ್ರಮ ಕೈಗೊಳ್ಳಬಹುದು ಎಂದು ಅಂದುಕೊಂಡಿದ್ದರೂ ಹಾಗಾಗಿಲ್ಲ. ಬದಲಾಗಿ ತಮ್ಮ ಒಡೆತನದ ಭೂಮಿ ಅರಣ್ಯ ಇಲಾಖೆಯ ಒತ್ತುವರಿ ಪ್ರದೇಶ ಎಂದು ಆಡಳಿತ ಗುರುತಿಸಿದೆ ಎಂದರು.

ಸ್ಥಳೀಯ ಬಿಜೆಪಿ ನಾಯಕರು ತಮ್ಮ ಹಾಗೂ ರಾಜಕಾರಣಿಯಾಗಿರುವ ತಮ್ಮ ಸೋದರನ ವಿರುದ್ಧ ವಿಪಕ್ಷಗಳೊಡನೆ ಸೇರಿಕೊಂಡು ಸಂಚು ನಡೆಸುತ್ತಿದ್ದಾರೆ ಎಂದೂ ಖರ್ವರ್ ದೂರಿದ್ಧಾರೆ.

ಈ ಸಂಸದ ಪೊಲೀಸರ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡುತ್ತಿರುವ ವೀಡಿಯೊವೊಂದು ಕಳೆದ ವರ್ಷ ಬಹಿರಂಗಗೊಂಡಿತ್ತು.