ಅ.4ಕ್ಕೆ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಶೈಕ್ಷಣಿಕ ಪ್ರಾರಂಭೋತ್ಸವ: ಸಚಿವ ಬಸವರಾಜ ರಾಯರೆಡ್ಡಿ

ಮಾಜಿ ಪ್ರಧಾನಿ ಮನಮೋಹನ್‌ಸಿಂಗ್ ಉಪನ್ಯಾಸ

ಬೆಂಗಳೂರು, ಸೆ.28: ಬೆಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಪ್ರಸಕ್ತ ಶೈಕ್ಷಣಿಕ ವರ್ಷದ ತರಗತಿಗಳನ್ನು ಆರ್ಥಿಕ ತಜ್ಞ, ಮಾಜಿ ಪ್ರಧಾನಿ ಡಾ.ಮನಮೋಹನ್‌ಸಿಂಗ್ ಅವರು ಅ.4ರಂದು ಶೈಕ್ಷಣಿಕ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 50 ವಿದ್ಯಾರ್ಥಿಗಳನ್ನು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸಿ ಕೌನ್ಸಿಲಿಂಗ್ ಮೂಲಕ ಪ್ರವೇಶ ಕಲ್ಪಿಸಲಾಗಿದೆ ಎಂದರು.

ಆಯ್ಕೆಗೊಂಡಿರುವ 50 ಮಂದಿ ವಿದ್ಯಾರ್ಥಿಗಳ ಪೈಕಿ ಶೇ.60ರಷ್ಟು ಕರ್ನಾಟಕ ರಾಜ್ಯ ಹಾಗೂ ಶೇ.40ರಷ್ಟು ಹೊರರಾಜ್ಯದ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಉಳಿದಂತೆ ಶೇ.30ರಷ್ಟು ಎಸ್ಸಿ-ಎಸ್ಟಿ, ಉಳಿದ ಶೇ.30ರಷ್ಟು ಇತರೆ ವರ್ಷದವರಿಗೆ ಮೀಸಲಿರಿಸಲಾಗಿದೆ. ವಾರ್ಷಿಕ 50 ಸಾವಿರ ರೂ.ಶುಲ್ಕ ನಿಗದಿಪಡಿಸಿದ್ದು, ಎಸ್ಸಿ-ಎಸ್ಟಿಗೆ ಉಚಿವ ಪ್ರವೇಶ ಕಲ್ಪಿಸಲಾಗಿದೆ ಎಂದು ಅವರು ವಿವರ ನೀಡಿದರು.

ಇನ್ನು ಎರಡು ವರ್ಷಗಳ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಸಂಸ್ಥೆಯಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಬೆಂಗಳೂರು ವಿಶ್ವ ವಿದ್ಯಾನಿಲಯದಿಂದಲೇ ಪದವಿ ಪ್ರಮಾಣ ಪತ್ರ ನೀಡಲಾಗುವುದು. ಆ ಬಳಿಕ ಎಎಸ್‌ಇ ಸಂಸ್ಥೆ ಪೂರ್ಣ ಪ್ರಮಾಣದಲ್ಲಿ ಆರಂಭಗೊಂಡ ಬಳಿಕ ಅದೇ ಸಂಸ್ಥೆ ಪ್ರಮಾಣ ಪತ್ರ ನೀಡಲಿದೆ ಎಂದರು.

ಅಕ್ಟೋಬರ್ 4ರಂದು ನಡೆಯಲಿರುವ ಶೈಕ್ಷಣಿಕ ತರಗತಿ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಹಿಸಲಿದ್ದು, ಆರ್ಥಿಕ ತಜ್ಞ ಡಾ.ಸಿ. ರಂಗರಾಜನ್, ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಂಪುಟ ಸಹೋದ್ಯೋಗಿಗಳು ಭಾಗವಹಿಸಲಿದ್ದಾರೆಂದು ರಾಯರೆಡ್ಡಿ ಮಾಹಿತಿ ನೀಡಿದರು.

ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮಾದರಿಯಲ್ಲಿ ಆರಂಭವಾಗಿರುವ ಈ ಸಂಸ್ಥೆಗೆ ಡಾ.ಆರ್.ಆರ್.ದೇಶಪಾಂಡೆ ಅವರನ್ನು ನಿರ್ದೇಶಕರನ್ನಾಗಿ ಹಾಗೂ ನಿವೃತ್ತ ಅಧಿಕಾರಿ ಎಂ.ಬಿ.ಧ್ಯಾಬೇರಿಯನ್ನು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಈ ಶಿಕ್ಷಣ ಸಂಸ್ಥೆಯ ಪ್ರಾಧ್ಯಾಪಕರನ್ನು ನೇಮಕ ಮಾಡಲು ಡಾ.ಕಸ್ತೂರಿ ರಂಗನ್ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ರಚಿಸಲಾಗಿದೆ ಎಂದು ಸಚಿವರು ತಿಳಿಸಿದರು.