ವಿಫಲಗೊಂಡ ಮನುವಾದಿ ಒಳಸಂಚು

–ಸನತ್ ಕುಮಾರ ಬೆಳಗಲಿ

ಕಾವೇರಿ ನೀರಿನ ಹಂಚಿಕೆ ವಿವಾದವನ್ನು ಬಳಸಿಕೊಂಡು ಒಂದು ರೂ. ಕೆ.ಜಿ ಅಕ್ಕಿಯ ಬಿಪಿಎಲ್ ಸಮುದಾಯವನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವನ್ನು ಉರುಳಿಸಲು ಒಳಸಂಚು ನಡೆಸಿದ ಬಿಜೆಪಿ ಕರ್ನಾಟಕದ ಜನರೆದುರು ಬೆತ್ತಲಾಗಿ ನಿಂತಿದೆ. ಅವರ ಸಂಚು ವಿಫಲಗೊಂಡಿದೆ. ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ರಾಜ್ಯವನ್ನಾಗಿ ಮಾಡುವ ಕನಸಿನ ಗೋಪುರ ಕಟ್ಟಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಂಗು ತಿಂದ ಮಂಗನಂತಾಗಿದ್ದಾರೆ. ಮತ್ತೆ ಮುಖ್ಯಮಂತ್ರಿಯಾಗುವmanuvadi_manuvadh ಸ್ವಪ್ನ ಕಾಣುತ್ತಿದ್ದ ಯಡಿಯೂರಪ್ಪ, ಮುಖ ಮುಚ್ಚಿಕೊಂಡು ಓಡಾಡುವಂತಾಗಿದೆ. ಇವರೆಲ್ಲರ ಸೂತ್ರಧಾರರಾದ ಕೇಶವ ಶಿಲ್ಪದ ಪುರೋಹಿತಶಾಹಿಗಳು ಹೊಸ ಹುನ್ನಾರಗಳ ತಯಾರಿ ನಡೆಸಿದ್ದಾರೆ.
ಇದಕ್ಕೆ ತದ್ವಿರುದ್ಧವಾಗಿ ಸಿದ್ದರಾಮಯ್ಯ ಸರಕಾರ ಅತ್ಯಂತ ಜಾಣತನದಿಂದ ಈ ಬಿಕ್ಕಟ್ಟನ್ನು ನಿಭಾಯಿಸಿದೆ. ರಾಜಕೀಯ ಭಿನ್ನಾಭಿಪ್ರಾಯ, ಸ್ವಪ್ರತಿಷ್ಠೆಯನ್ನು ಬದಿಗೊತ್ತಿ ಮಾಜಿ ಪ್ರಧಾನಿ ದೇವೇಗೌಡ ಅವರು ಮುಖ್ಯಮಂತ್ರಿಗಳ ಜೊತೆಗೆ ನಿಂತಿದ್ದಾರೆ. ಎಲ್ಲಕ್ಕಿಂತ ಮಿಗಿಲಾಗಿ ಕಾವೇರಿ ಪ್ರಕರಣದಲ್ಲಿ ರಾಜ್ಯದ ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲರು ನಿರ್ವಹಿಸಿದ ಹೊಣೆಗಾರಿಕೆ. ಸುಪ್ರೀಂಕೋರ್ಟ್‌ನ ಉಲ್ಟಾ ಆದೇಶ ಬಂದಾಗ ಆವೇಶ ಭರಿತರಾಗಿ ಕೋರ್ಟ್ ಹಾಲ್‌ನಲ್ಲಿ ಕೂಗಾಡಿದ್ದು, ರಾಜ್ಯದ ವಕೀಲರಿಗೆ ಚೀಟಿ ಕಳಿಸಿದ್ದು ಈಗ ಎಲ್ಲರ ಚರ್ಚಾ ವಿಷಯವಾಗಿದೆ.
ಎಂ.ಬಿ ಪಾಟೀಲರು ನಮ್ಮ ಬಿಜಾಪುರ ಜಿಲ್ಲೆಯವರು. ಇವರ ತಂದೆ ಬಿ.ಎಂ ಪಾಟೀಲರು ನಮ್ಮ ಜಿಲ್ಲೆಯ ಹಿರಿಯ ರಾಜಕಾರಣಿಯಾಗಿದ್ದರು. ಅವರು ಎಷ್ಟು ಜಾತ್ಯತೀತ ವ್ಯಕ್ತಿಯಾಗಿದ್ದರೆಂದರೆ. ಮುಸಲ್ಮಾನರೇ ಬಹುಸಂಖ್ಯಾತರಾಗಿರುವ ಬಿಜಾಪುರದಲ್ಲಿ ಮುಸ್ಲಿಂ ಎದುರಾಳಿಯನ್ನು ಸೋಲಿಸಿ ಕಾಂಗ್ರೆಸ್‌ನಿಂದ ಗೆದ್ದು ಬರುತ್ತಿದ್ದರು. ಐದಾರು ಸಲ ಬಿಜಾಪುರದಿಂದ ರಾಜ್ಯ ವಿಧಾನಸಭೆಗೆ ಆರಿಸಿ ಬಂದಿದ್ದ ಬಿ.ಎಂ ಪಾಟೀಲರು ರಾಜ್ಯ ಸಂಪುಟದಲ್ಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅದಕ್ಕಿಂತ ಮಿಗಿಲಾಗಿ ಅನೇಕ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದರು.

cm_siddaramayya
ಇಂಥ ಬಿ.ಎಂ ಪಾಟೀಲರ ಪುತ್ರ ಮಲ್ಲನಗೌಡ ಪಾಟೀಲ(ಎಂ.ಬಿ ಪಾಟೀಲ) ತಂದೆಯ ಪ್ರಭಾವದಿಂದ ಚಿಕ್ಕ ವಯಸ್ಸಿನಲ್ಲಿ ಶಾಸಕರಾಗಿ ಸದನಕ್ಕೆ ಬಂದರು. ಪಾಳೇಗಾರಿಕೆ ಗೌಡಿಕೆ ಮನೆತನದಲ್ಲಿ ಬೆಳೆದ ಈ ಹುಡುಗನೇನು ಮಾಡುತ್ತಾನೆ? ಎಂದು ನಮ್ಮ ಜಿಲ್ಲೆಯಲ್ಲಿ ಅನೇಕರು ಆಡಿಕೊಳ್ಳುತ್ತಿದ್ದರು. ನಾನೂ ಹಾಗೆ ಭಾವಿಸಿದ್ದೆ. ಆದರೆ ಮೊನ್ನೆ ಕಾವೇರಿ ವಿವಾದ ಸುಪ್ರೀಂ ಕೋರ್ಟ್ ಮುಂದೆ ಬಂದಾಗ ನ್ಯಾಯಮೂರ್ತಿ ದೀಪಕ್ ಮಿಶ್ರಾ ಕಾವೇರಿ ನಿರ್ವಹಣಾ ಮಂಡಳಿ ರಚನೆ ಬಗ್ಗೆ ಹೇಳತೊಡಗಿದಾಗ ಎಂ.ಬಿ ಪಾಟೀಲರು ಚಡಪಡಿಸತೊಡಗಿದರು. ಗಾಬರಿಗೊಂಡು ಕೋರ್ಟ್ ಹಾಲ್‌ನಲ್ಲಿ ಓಡಾಡಿದರು.
mb_patilಎಂ.ಬಿ ಪಾಟೀಲರು ಎಷ್ಟು ಆವೇಶಭರಿತರಾಗಿದ್ದರೆಂದರೆ ತಮ್ಮ ಮನೆಯ ಕೇಸು ನಡೆದಿದೆಯೇನೋ ಎಂಬಂತೆ ಆತಂಕಗೊಂಡಿದ್ದರು. ರಾಜ್ಯದ ವಕೀಲ ಮೋಹನ್ ಕಾತರಕಿ ಅವರಿಗೆ ಪದೇ ಪದೇ ಚೀಟಿ ಬರೆದು ಕಳಿಸುತ್ತಿದ್ದರು ಎಂದು ದಿಲ್ಲಿಯ ನನ್ನ ಪತ್ರಿಕಾ ಮಿತ್ರರೊಬ್ಬರು ಹೇಳಿದ್ದರು. ಕಾವೇರಿ ವಿವಾದವನ್ನು ಈ ಪರಿ ಹಚ್ಚಿಕೊಂಡ ಮಂತ್ರಿಯನ್ನು ಈವರೆಗೆ ಕಂಡಿರಲಿಲ್ಲ ಎಂದು ವಕೀಲರೊಬ್ಬರು ಹೇಳಿದರು. ಇದನ್ನೆಲ್ಲ ಕೇಳಿ ಎಂ.ಬಿ ಪಾಟೀಲರ ಬಗ್ಗೆ ನನ್ನ ಅಭಿಪ್ರಾಯವೇ ಬದಲಾಯಿತು. ಸಿರಿವಂತ ಮನೆತನದ ಪಡ್ಡೆ ಹುಡುಗ ಎಂಬ ಭಾವನೆ ಮಾಯವಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅತ್ಯಂತ ಎಚ್ಚರದಿಂದ ಹೆಜ್ಜೆ ಇರಿಸಿದರು. ದೇವೇಗೌಡರ ಜೊತೆಗೂ ಹಳೆಯ ಜಗಳ ಮರೆತು ಪದ್ಮನಾಭನಗರದ ಅವರ ಮನೆಗೆ ಹೋಗಿ ಚರ್ಚಿಸಿದರು. ಹಳೆಯ ಒಡನಾಡಿ ಮನೆಗೆ ಬರುತ್ತಾರೆಂದು ದೇವೇಗೌಡರು ಸಿದ್ದರಾಮಯ್ಯನವರ ಇಷ್ಟದ ಬಾಳೇಕಾಯಿ ಬಜ್ಜಿ, ಶುಂಠಿ ಚಹಾ ಮಾಡಿಸಿದ್ದರು. ಅದೇ ದಿನ ಸಂಜೆ ನಡೆದ ಸರ್ವಪಕ್ಷ ಸಭೆಗೆಂದು ಇಪ್ಪತ್ತು ವರ್ಷದ ನಂತರ ವಿಧಾನಸೌಧದ ಮೆಟ್ಟಲು ಹತ್ತಿದ್ದರು. 1996ರ ನಂತರ ಗೌಡರು ಈ ದಿಕ್ಕಿಗೆ ಬಂದಿರಲಿಲ್ಲ.
ಇದಕ್ಕೆ ತದ್ವಿರುದ್ಧವಾಗಿ ಬಿಜೆಪಿ ನಾಯಕರು ಹೊಣೆಗೇಡಿತನದಿಂದ ನಡೆದುಕೊಂಡರು. ರಾಜ್ಯದ ಜನರಿಂದ ಉಗಿಸಿಕೊಂಡರು. ಮುಖ್ಯಮಂತ್ರಿಗಳು ಕರೆದಿದ್ದ ಸರ್ವ ಪಕ್ಷಗಳ ಸಭೆಗೆ ಗೈರು ಹಾಜರಾಗಿ ಅಪಹಾಸ್ಯಕ್ಕೆ ಈಡಾದರು. ಕೇಂದ್ರದಲ್ಲಿ ಬಿಜೆಪಿ ಸರಕಾರವೇ ಇದೆ. ರಾಜ್ಯದಿಂದ ಬಿಜೆಪಿಯ 17 ಸಂಸದರಿದ್ದಾರೆ. ಆದರೂ ಕಾವೇರಿ ಬಿಕ್ಕಟ್ಟು ಇತ್ಯರ್ಥಕ್ಕೆ ಪ್ರಧಾನಿಗೆ ಮನವಿ ಸಲ್ಲಿಸುವ ಧೈರ್ಯವನ್ನು ಇವರ್ಯಾರು ತೋರಿಸಲಿಲ್ಲ. ಯಾಕೆಂದರೆ ನರೇಂದ್ರ ಮೋದಿ ಎದುರು ನಿಂತು ಮಾತಾಡುವ ದಿಟ್ಟತನ ಇವರ್ಯಾರಿಗೂ ಇಲ್ಲ.
ಇಷ್ಟೇ ಆಗಿದ್ದರೆ ಈ ಕೈಲಾಗದ ಬಿಜೆಪಿ ಮುಖಂಡರನ್ನು ಕ್ಷಮಿಸಬಹುದಿತ್ತು. ಆದರೆ, ತಮಿಳುನಾಡಿಗೆ ನೀರು ಬಿಡಲೇಬೇಕು ಎಂದು ಬಿಜೆಪಿಯ ಕೇಂದ್ರೀಯ ವಕ್ತಾರರು ಬಹಿರಂಗವಾಗಿ ಹೇಳಿದರೆ ನೀರು ಬಿಡಬೇಡಿ ಎಂದು ರಾಜ್ಯದ ಬಿಜೆಪಿ ನಾಯಕರು ಕಾಟಾಚಾರದ ಹೇಳಿಕೆ ನೀಡುತ್ತಾರೆ. ತಮಿಳುನಾಡಿನ ಬಿಜೆಪಿ ನಾಯಕರು ಅಲ್ಲಿನ ಮುಖ್ಯಮಂತ್ರಿ ಜಯಲಲಿತಾ ಕರೆದ ಸರ್ವಪಕ್ಷ ಸಭೆಗೆ ಹೋದರೆ, ಸಿದ್ದರಾಮಯ್ಯನವರು ಕರೆದ ಸರ್ವಪಕ್ಷ ಸಭೆಗೆ ರಾಜ್ಯದ ಬಿಜೆಪಿ ನಾಯಕರು ಬಹಿಷ್ಕಾರ ಹಾಕಿದರು.
ಕಾವೇರಿ ಪ್ರಶ್ನೆಯಲ್ಲಿ ಆರಂಭದಿಂದಲೂ ಬಿಜೆಪಿ ಕರ್ನಾಟಕದ ಹಿತಾಸಕ್ತಿಗೆ ತದ್ವಿರುದ್ಧವಾಗಿಯೇ ನಡೆದುಕೊಂಡು ಬಂತು. ಮಹಾದಾಯಿ ಪ್ರಶ್ನೆಯಲ್ಲೂ ಪ್ರಧಾನಿ ಎದುರು ಮೂಕ ಪ್ರೇಕ್ಷಕನಂತೆ ಕುಳಿತು ಬಂದ ಬಿಜೆಪಿ ನಾಯಕರು ಯಾವುದೇ ಒತ್ತಡವನ್ನು ಕೇಂದ್ರ ಸರಕಾರದ ಮೇಲೆ ತರಲಿಲ್ಲ. ಬದಲಾಗಿ ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣ ಇದ್ದಾಗ ಪ್ರಧಾನಿ ಮಧ್ಯ ಪ್ರವೇಶಿಸಲು ಬರುವುದಿಲ್ಲ ಎಂಬ ವಿತಂಡವಾದವನ್ನು ಮಾಡುತ್ತಾ ಬಂದರು.
ಲವ್ ಜಿಹಾದ್, ಗೋ ಸಾಗಾಟದಂತ ಪ್ರಚೋದನಾಕಾರಿ ವಿಷಯಗಳಲ್ಲಿ ತೋರಿಸುವ ಆಸಕ್ತಿಯನ್ನು ರಾಜ್ಯದ ಬಿಜೆಪಿ ನಾಯಕರು ಕರ್ನಾಟಕದ ನೆಲ, ಜಲದ ಪ್ರಶ್ನೆಯಲ್ಲೂ ತೋರಿಸಿಲ್ಲ. ಬೆಳಗಾವಿ ಗಡಿ ಪ್ರಶ್ನೆಯಲ್ಲ್ಲೂ ಇವರ ನಿಲುವು ದ್ವಂದ್ವಮಯವಾಗಿದೆ. ಯಾಕೆಂದರೆ ಕರ್ನಾಟಕದ ಅಸ್ಮಿತೆ ಬಗ್ಗೆ ಬಿಜೆಪಿಗೆ ಕಾಳಜಿಯಾಗಲಿ, ಅಭಿಮಾನವಾಗಲಿ ಇಲ್ಲ. ಅಂತಲೆ ಕರ್ನಾಟಕ ಏಕೀಕರಣ ಹೋರಾಟದಲ್ಲಿ ಸಂಘ ಪರಿವಾರದ ನಾಯಕರ್ಯಾರು ಭಾಗವಹಿಸಲಿಲ್ಲ. ವಾಸ್ತವವಾಗಿ ಭಾಷಾವಾರು ಪ್ರಾಂತ ರಚನೆಗೆ ಆರೆಸ್ಸೆಸ್ ವಿರೋಧವಾಗಿದೆ.
ಕರ್ನಾಟಕದ 17 ಮಂದಿ ಬಿಜೆಪಿ ಸಂಸದರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಒತ್ತಡ ಹೇರಿದ್ದರೆ, ಕಾವೇರಿ ಮತ್ತು ಮಹಾದಾಯಿ ಸಮಸ್ಯೆಗಳು ಎಂದೋ ಬಗೆಹರಿಯುತ್ತಿದ್ದವು. ಆದರೆ ಆ ಬಗ್ಗೆ ಅವರು ಆಸಕ್ತಿ ತೋರಿಸಲಿಲ್ಲ. ಸಿದ್ದರಾಮಯ್ಯ ಕರೆದ ಸರ್ವಪಕ್ಷ ಸಭೆಗೂ ಬರಲಿಲ್ಲ, ಅಂತಲೇ ಸಾಮಾಜಿಕ ಜಾಲತಾಣದಲ್ಲಿ ‘ಭಕ್ತರೇ’ ಈಗ ತಿರುಗಿ ಬಿದ್ದಿದ್ದಾರೆ.
ಬಿಜೆಪಿ ಸರ್ವಪಕ್ಷ ಸಭೆಗೆ ಬಹಿಷ್ಕಾರ ಹಾಕಿದ್ದರೂ ತಮಿಳುನಾಡಿಗೆ ನೀರು ಬಿಡದಿರಲು ಸಭೆ ತೀರ್ಮಾನಿಸಿದ್ದರಿಂದ ರಾಜ್ಯದ ಜನತೆಯ ಎದುರು ಈ ಕನ್ನಡ ವಿರೋಧಿ ಪಕ್ಷದ ನಿಜ ಸ್ವರೂಪ ಬಯಲಾಗಿದೆ. ಕರ್ನಾಟಕದ ಹಿತಕ್ಕಿಂತ ಪ್ರಧಾನಿ ಮೋದಿಯ ಹಿತಾಸಕ್ತಿಯನ್ನು ರಕ್ಷಿಸುವ ಆಸಕ್ತಿಯೇ ಬಿಜೆಪಿ ನಾಯಕರಿಗೆ ಮುಖ್ಯವಾಗಿದೆ.
ದಕ್ಷಿಣ ಭಾರತದ ದ್ರಾವಿಡ ಪರಂಪರೆಗೆ ವಿರೋಧವಾಗಿರುವ ಪಕ್ಷದಿಂದ ಇವನ್ನಲ್ಲದೇ ಬೇರೇನನ್ನೂ ನಿರೀಕ್ಷಿಸಲು ಸಾಧ್ಯ?
ಸಂಘ ಪರಿವಾರದ ರಾಜಕೀಯ ವೇದಿಕೆಯಾದ ಬಿಜೆಪಿಯ ಕನ್ನಡ ವಿರೋಧಿ ನೀತಿ ಈಗ ಬಯಲಿಗೆ ಬಂದಿದೆ. ಜನತೆ ಈಗ ಈ ಪಕ್ಷದ ಬಗ್ಗೆ ಅಸಮಾಧಾನಗೊಂಡಿದ್ದಾರೆ. ಎರಡು ಪ್ರಮುಖ ಜಾತ್ಯತೀತ ಪಕ್ಷಗಳು ಕಾವೇರಿ ಪ್ರಶ್ನೆಯಲ್ಲಿ ಒಂದುಗೂಡಿರುವುದು ಉತ್ತಮ ಬೆಳವಣಿಗೆಯಾಗಿದೆ. ರಾಜ್ಯದ ರಾಜಕಾರಣದಲ್ಲಿ ಕೋಮುವಾದಿ ಫ್ಯಾಶಿಸ್ಟ್ ಶಕ್ತಿಗಳನ್ನು ಮೂಲೆಗುಂಪು ಮಾಡುವ ತುರ್ತು ಅಗತ್ಯವಾಗಿದೆ.
ಮನುವಾದಿ ಶಕ್ತಿಗಳನ್ನು ಮೂಲೆಗುಂಪು ಮಾಡುವ ಉದ್ದೇಶದಿಂದ ದಲಿತ ಸಂಘಟನೆಗಳು ಇದೇ ಸಂದರ್ಭದಲ್ಲಿ ಉಡುಪಿ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದೆ. ಹೀಗೆ ಸೌಹಾರ್ದ ನದಿಗಳೆಲ್ಲ ಉಕ್ಕೇರಿ ಕೋಮುವಾದಿ, ಮನುವಾದಿ ಕೊಳೆ ತೊಳೆದು ಕರ್ನಾಟಕ ಮತ್ತೆ ಸೌಹಾರ್ದ ತಾಣವಾಗಿ ಹೊರ ಹೊಮ್ಮಲಿ ಎಂಬುದು ರಾಜ್ಯದ ಜನರ ಆಶಯವಾಗಿದೆ.

Please follow and like us:
error