ನಲವತ್ತೇಳರ ಸ್ವಾತಂತ್ರ್ಯದ ದುರ್ಗತಿ — ಸನತ್‌ ಕುಮಾರ ಬೆಳಗಲಿ

‘ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತೃಯ’ ಎಂಬ ಕವಿ ಸಿದ್ದಲಿಂಗಯ್ಯನವರ ಹಾಡು ಮತ್ತೆ ನೆನಪಿಗೆ ಬರುತ್ತಿದೆ. ಪ್ರತಿ ಬಾರಿ ಆಗಸ್ಟ್ 15 ಬಂದಾಗಲೇ ದಿಢೀರನೆ ರಾಷ್ಟ್ರಪ್ರೇಮ ಉಕ್ಕುತ್ತದೆ. ಈಗಂತೂ ಬೀದಿ ಬೀದಿಯಲ್ಲಿ ರಾಷ್ಟ್ರಧ್ವಜಗಳು ವಿಜೃಂಭಿಸುತ್ತವೆ. 31 ವರ್ಷಗಳ ಹಿಂದೆ ಈ ಕವಿತೆ ಬರೆದಾಗ ಸಿದ್ದಲಿಂಗಯ್ಯ ಇನ್ನೂ ವಿದ್ಯಾರ್ಥಿ. ಆಗ ದಲಿತ ಸಂಘರ್ಷ ಸಮಿತಿ ಇನ್ನೂ ಅಸ್ತಿತ್ವಕ್ಕೆ ಬಂದಿರಲಿಲ್ಲ. ಸಿಪಿಐನ ವಿದ್ಯಾರ್ಥಿ ಸಂಘಟನೆಯಲ್ಲಿ ಈ ಕವಿಯನ್ನು ನೋಡಿದ ನೆನಪು. ಮುಂದೆ ದಾವಣಗೆರೆಯಲ್ಲಿ 1976ರಲ್ಲಿ ನಡೆದ ಪ್ರಗತಿಪಂಥ ಸಾಹಿತ್ಯ ಸಮ್ಮೇಳನದಲ್ಲಿ ಸಿದ್ದಲಿಂಗಯ್ಯ ತಮ್ಮ ಮೊದಲ ಕವನ ಸಂಕಲನ ‘ಹೊಲೆಮಾದಿಗರ ಹಾಡು’ ತೆಗೆದುಕೊಂಡು ಬಂದಿದ್ದರು. ಅಲ್ಲಿ ಕಟ್ಟಿಮನಿ, ನಿರಂಜನ ಈ ಸಂಕಲನ ಓದಿ ಅಭಿಮಾನದಿಂದ ಮಾತಾಡಿದ್ದರು.

ಯಾರಿಗೆ ಬಂತು ಎಲ್ಲಿಗೆ ಬಂತು ಎಂದು ಕೇಳುತ್ತಲೇ ನಲವತ್ತೇಳರ ಸ್ವಾತಂತ್ರ ಟಾಟಾ -ಬಿರ್ಲಾರ ಜೇಬಿಗೆ ಬಂತು, ಜಮೀನುದಾರರ ಜಗಲಿಗೆ ಬಂತು’’ ಎಂದು ಈ ಕವಿ ಆಗ ಉತ್ತರ ಕಂಡುಕೊಂಡಿದ್ದರು. ಈಗ ಅವರೂ ಸಾಕಷ್ಟು ಬದಲಾಗಿದ್ದಾರೆ. ಆಗ ಬರೆದದ್ದೆಲ್ಲ ಕೋಪಾವೇಶದಿಂದ ಬರೆದಿದ್ದು ಎಂದು ಪಶ್ಚಾತ್ತಾಪದ ಭಾವದಲ್ಲಿ ಸ್ಪಷ್ಟೀಕರಣ ನೀಡಿ ವಿವಾದಕ್ಕೊಳಗಾಗಿದ್ದಾರೆ. ಈಗ ಕವಿಯ ಖಾಸಗಿ ಬದುಕಿನ ಚರ್ಚೆ ಅನಗತ್ಯ. ಆದರೆ ಆತ ಬರೆದ ಪದ್ಯ ಮಾತ್ರ ಸಾವಿರಾರು ಕಂಠಗಳಲ್ಲಿ ಹಾಡಾಗಿ ಊರುಕೇರಿಗಳಲ್ಲಿ ಮಾರ್ದನಿಸಿದ್ದನ್ನು ಮರೆಯಲು ಹೇಗೆ ಸಾಧ್ಯ?

ಆಗ ಟಾಟಾ-ಬಿರ್ಲಾ ಈ ದೇಶದ ಶೋಷಕ ವರ್ಗದ ಮುಂಚೂಣಿಯಲ್ಲಿರುವುದರಿಂದ ಎಲ್ಲ ಹೋರಾಟಗಾರರ ಆಕ್ರೋಶಕ್ಕೆ ಅವರು ಗುರಿಯಾಗಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ದೇಶೀಯ ಬಂಡವಾಳಗಾರರ ಜೊತೆ ವಿದೇಶಿ ಬಹುರಾಷ್ಟ್ರೀಯ ಕಂಪೆನಿಗಳ ದಗಾಕೋರರು ದೇಶದೊಳಗೆ ನುಗ್ಗಿ ಜನತೆ ಪಡೆದಿದ್ದ ಅಲ್ಪಸ್ವಲ್ಪ ಸ್ವಾತಂತ್ರಕ್ಕೂ ಸಂಚಕಾರ ತಂದಿದ್ದಾರೆ. ವಿಶೇಷ ಆರ್ಥಿಕ ವಲಯದ ಹೆಸರಿನಲ್ಲಿ ರೈತರ ಕೃಷಿಯೋಗ್ಯ ಭೂಮಿಯನ್ನು ಕಾರ್ಪೊರೇಟ್ ಖದೀಮರು ನುಂಗುತ್ತಿದ್ದಾರೆ. ಇನ್ನೊಂದೆಡೆ ಕೃಷಿಯಲ್ಲಿ ಕೈಸುಟ್ಟುಕೊಂಡ ರೈತರು ಒಬ್ಬೊಬ್ಬರಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

ಎಲ್ಲಕ್ಕಿಂತ ಮಿಗಿಲಾಗಿ ಕಾರ್ಪೊರೇಟ್ ಬಂಡವಾಳಶಾಹಿಯಿಂದಾಗಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ನಿಶ್ಯಕ್ತವಾಗುತ್ತಿದೆ. ದಿನಗಳೆದಂತೆ ಚುನಾಯಿತ ಸರಕಾರದ ಪಾತ್ರ ಕಡಿಮೆಯಾಗುತ್ತಿದೆ. ಖಾಸಗೀಕರಣ ಎಷ್ಟು ವಿಪರೀತಕ್ಕೆ ಹೋಗಿದೆ ಅಂದರೆ ದೇಶದ ಪ್ರಧಾನಿ, ರಾಜ್ಯದ ಮುಖ್ಯಮಂತ್ರಿಯನ್ನು ಬಿಟ್ಟರೆ ಎಲ್ಲೆಡೆ ಉಳಿದೆಲ್ಲ ಮಹತ್ವದ ಸೇವೆಗಳು ಖಾಸಗಿ ರಣಹದ್ದುಗಳ ಪಾಲಾಗುತ್ತಿವೆ. ಜಾಗತೀಕರಣದ ಕಬಂಧಬಾಹುವಿಗೆ ಸಿಕ್ಕು ಜನತಂತ್ರ ವಿಲಿವಿಲಿ ಒದ್ದಾಡುತ್ತಿದೆ. ದೇಶದ ಶೇ.30ರಷ್ಟು ಜನರ ನಿತ್ಯದ ಗಳಿಕೆ ಬರೀ 20 ರೂ. ಎಂದು ಅಧಿಕೃತ ಅಂಶಗಳು ಖಚಿತಪಡಿಸಿವೆ.

ಸ್ವಾತಂತ್ರಕ್ಕಾಗಿ ನಡೆದ ಹೋರಾಟದಲ್ಲಿ ಬ್ರಿಟೀಷ್ ಸಾಮ್ರಾಜ್ಯಶಾಹಿಯ ಏಜೆಂಟರಾಗಿದ್ದವರು ಗಾಂಧಿಯನ್ನು ಕೊಂದವರು ಈಗ ಮಹಾನ್ ರಾಷ್ಟ್ರಭಕ್ತರಂತೆ ವಿಜೃಂಭಿಸುತ್ತಿದ್ದಾರೆ. ಸ್ವಾತಂತ್ರಕ್ಕಾಗಿ ಹೋರಾಡಿದ ಕಾಂಗ್ರೆಸ್ ಪಕ್ಷದಲ್ಲೂ ಮಹಾಭ್ರಷ್ಟರು, ವಂಚಕರು, ಲಾಭಕೋರರು ಫಟಿಂಗರು ಸೇರಿಕೊಂಡಿದ್ದಾರೆ. ಇವರಿಗೆ ರಾಷ್ಟ್ರವೆಂದರೆ ತ್ರಿವರ್ಣ ಧ್ವಜ ಮಾತ್ರ. ಅದನ್ನು ಮುಂದಿಟ್ಟುಕೊಂಡು ಈ ಲಫಂಗರು ಮಾಡಬಾರದ್ದನ್ನೆಲ್ಲ ಮಾಡುತ್ತಿದ್ದಾರೆ. ಇದನ್ನೆಲ್ಲ ಕಂಡು ಸಿಡಿದೇಳಬೇಕಾದ ಯುವಕರಿಗೆ ಸ್ಫೂರ್ತಿಯ ಸೆಲೆ ತುಂಬಬಲ್ಲ ನಾಯಕತ್ವ ಎಲ್ಲೂ ಕಾಣುತ್ತಿಲ್ಲ.

ದೇಶದ ಅಮೂಲ್ಯ ಖನಿಜ ಸಂಪತ್ತನ್ನು ಲೂಟಿಕೋರರು ದೋಚುತ್ತಿದ್ದಾರೆ. ರವೀಂದ್ರನಾಥ ಟಾಗೋರರು ಸಸ್ಯಶಾಮಲೆ ಎಂದು ವರ್ಣಿಸಿದ ಕಾಡುಗಳನ್ನು ಇಡಿಯಾಗಿ ಸವರಿ ನಾಶಮಾಡಿ ಅದರಡಿ ಇರುವ ಮ್ಯಾಂಗನೀಸ್, ಕಬ್ಬಿಣದ ನಿಕ್ಷೇಪಗಳನ್ನು ದೋಚಲು ಹೊರಟ ಕೊಳ್ಳೇಗಾರರೊಂದಿಗೆ ಚುನಾಯಿತ ಸರಕಾರವೇ ಶಾಮೀಲಾಗಿದೆ. ತಮಗೆ ಅನ್ನ ನೀಡುವ ಭೂಮಿಯನ್ನು ಉಳಿಸಿಕೊಳ್ಳಲು ದೇಶದ ತುಂಬಾ ರೈತರು ಹೋರಾಟಕ್ಕಿಳಿದಿದ್ದಾರೆ.

ಸ್ವಾತಂತ್ರದ ಆರಂಭದಲ್ಲಿ ಜವಾಹರಲಾಲ್ ನೆಹರೂ, ಅಬ್ದುಲ್ ಕಲಾಂ ಆಝಾದ್, ಜಗಜ್ಜೀವನ್ ರಾಯ್ ರಂಥವರು ಸರಕಾರದ ನೇತೃತ್ವ ವಹಿಸಿದ್ದರು. ಡಾ. ಅಂಬೇಡ್ಕರ್ ದೇಶದ ಸಂವಿಧಾನವನ್ನು ರೂಪಿಸಿ ರಾಷ್ಟ್ರ ಮುನ್ನಡೆಯಬೇಕಾದ ದಾರಿ ತೋರಿಸಿದ್ದರು. ಸರಕಾರ ಕೊಂಚ ಎಡವಿದರೆ ಸಾಕು ತರಾಟೆಗೆ ತೆಗೆದುಕೊಳ್ಳಲು ರಾಮಮನೋಹರ ಲೋಹಿಯಾ, ಎಸ್.ಎ.ಡಾಂಗೆ, ಎ.ಕೆ.ಗೋಪಲನ್, ನಾಥ್‌ಪೈ, ಭೂಪೇಶ ಗುಪ್ತ, ಅಶೋಕ ಮೆಹತಾ ಅವರಂಥ ನಾಯಕರಿದ್ದರು.

ಆದರೆ ಈಗ ಯಾರಿದ್ದಾರೆ? ಅಧಿಕಾರದಲ್ಲಿರುವವರತ್ತ ಕಣ್ಣು ಹೊರಳಿಸಿದರೆ ಅದೇ ಚಿದಂಬರ, ಮನಮೋಹನ್ ಸಿಂಗ್, ಕಮಲನಾಥ ರಂಥವರು ಕಾಣುತ್ತಾರೆ. ಪ್ರತಿಪಕ್ಷಗಳ ಸಾಲಿನಲ್ಲಿ ಇರುವವರು ಇನ್ನು ಮಹಾ ಪ್ರಳಯಾಂಕತರರು. ಗಣಿದಣಿಗಳ ಬಳಿ ಪ್ರತಿವರ್ಷ ವರ ಮಹಾಲಕ್ಷ್ಮೀ ಪೂಜೆಗೆ ಬಂದು ದಕ್ಷಿಣೆ ಸ್ವೀಕರಿಸುತ್ತಿದ್ದ ಸುಷ್ಮಾ ಸ್ವರಾಜ್, ಯಡಿ ಯೂರಪ್ಪನವರಿಂದ ಬೆಂಗಳೂರಿಗೆ ಬಂದಾಗೊಮ್ಮೆ ಸೂಟ್‌ಕೇಶ್ ಒಯ್ಯುತ್ತಿದ್ದ ನಿತಿನ್ ಗಡ್ಕರಿ, ಅರುಣ್‌ಜೇಟ್ಲಿ ಹೀಗೆ ಯಾರನ್ನು ನೋಡಿದರೂ ಮೈತುಂಬ ಕಪ್ಪುಕಲೆ ಅಂಟಿಸಿಕೊಂಡವರೇ ಕಾಣುತ್ತಾರೆ. ಇಂಥವರು ಯುವಕರಿಗೆ ಹೇಗೆ ಆದರ್ಶವಾಗಲು ಸಾಧ್ಯ?

ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ಬಿರ್ಲಾ, ಟಾಟಾಗಳಂತಹ ರಾಷ್ಟ್ರೀಯ ಬಂಡವಾಳ ಶಾಹಿಗಳು ಕಾಂಗ್ರೆಸ್ಸಿಗೆ, ಗಾಂಧೀಜಿಗೆ ಹಿಂದೆ ನಿಂತು ಧನಸಹಾಯ ಮಾಡುತ್ತಿದ್ದರು. ಸ್ವಾತಂತ್ರ ನಂತರವು ಬಂಡವಾಳಶಾಹಿ ಪಕ್ಷಗಳಿಗೆ ನಿಧಿ ಕಾಣಿಕೆ ಸಲ್ಲಿಸುತ್ತಿದ್ದರು. ಆ ಮೂಲಕ ತಮ್ಮ ವಾಣಿಜ್ಯ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುತ್ತಿದ್ದರು. ಆದರೆ ಈಗ ಕಾರ್ಪೊರೇಟ್ ಬಂಡವಾಳಗಾರರು ನೇರವಾಗಿ ರಾಜಕಾರಣದಲ್ಲಿ ಪ್ರವೇಶಿಸಿದ್ದಾರೆ. ಅಂಬಾನಿ, ಬಜಾಜ್‌ರಂಥವರು ರಾಜ್ಯಸಭಾ ಸದಸ್ಯರಾಗಿ ಸರಕಾರವನ್ನು ನಿಯಂತ್ರಿಸು ತ್ತಿದ್ದಾರೆ. ಕರ್ನಾಟಕದಲ್ಲಿ ಗಣಿ ರೆಡ್ಡಿಗಳು, ನಿರಾಣಿಗಳು, ಕಟ್ಟಾಗಳು ಮಿಂಚುತ್ತಿದ್ದಾರೆ.

ಇಂತಹ ಸನ್ನಿವೇಶದಲ್ಲಿ ಈ ವ್ಯವಸ್ಥೆಗೆ ಪ್ರತಿಭಟನೆಯ ಧ್ವನಿಗಳು ಅಲ್ಲಲ್ಲಿ ಕೇಳಿ ಬರುತ್ತಿವೆ. ಎಡಪಂಥೀಯ ದೇಶಪ್ರೇಮಿ ವಲಯಗಳಿಂದ ನಾಡಿನ ಸೊತ್ತು , ಸತ್ತೆಯ ರಕ್ಷಣೆಗಾಗಿ ಕೂಗು ಕೇಳಿಬರುತ್ತಿದೆ. ಈ ಕೂಗು ಇಮ್ಮಡಿಯಾಗಿ ನೂರ್ಮಡಿ ಯಾಗಿ, ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು ಹರಿದು ಈ ಕೊಳೆಯನ್ನು ತೊಳೆಯಬೇಕಾಗಿದೆ. ಇಂದಲ್ಲ ನಾಳೆ ಪರಿಸ್ಥಿತಿ ಬದಲಾಗುತ್ತದೆ.ವಿದೇಶಿ ಬಂಡವಾಳಗಾರರನ್ನು, ದೇಶಿ ದರೋಡೆಕೋರರನ್ನು, ಸಂಘ ಪರಿವಾರದ ಗೋಡ್ಸೆವಾದಿ ಗಳನ್ನು ಹೆಡಮುರಿಗೆ ಕಟ್ಟಿ ಅರಬ್ಬಿ ಸಮುದ್ರಕ್ಕೆ ಬಿಸಾಡಬೇಕಾಗಿದೆ. ಅದೇ ಈ ವರ್ಷದ ಸ್ವಾತಂತ್ರ ದಿನದ ಪಣವಾಗಬೇಕಾಗಿದೆ

Please follow and like us:
error

Related posts

Leave a Comment