ಇವರು ಮೃಗಾಲಯದಲ್ಲಿರಬೇಕಾದವರು

 ಸನತ್ ಕುಮಾರ‍ ಬೆಳಗಲಿ
 ಇವರಿಗೆ ಏನಾಗಿದೆ? ಯಾಕೆ ಹೀಗೆ ಮಾತ ನಾಡುತ್ತಾರೆ? ಒಬ್ಬ ಮನುಷ್ಯನ ಸಾವನ್ನು ಈ ಪರಿ ಯಾಕೆ ಸಂಭ್ರಮಿಸುತ್ತಾರೆ? ಎಎನ್‌ಎಫ್ ಪೊಲೀಸರ ಗುಂಡಿಗೆ ಕಬೀರ್ ಎಂಬ ಯುವಕ ಬಲಿಯಾದಾಗ ಎಲ್ಲೆಡೆ ಯಿಂದ ಖಂಡನೆ ವ್ಯಕ್ತವಾಗಬೇಕಿತ್ತು. ಪಾಪ ಬಡಪಾಯಿ ಹುಡುಗ ಸತ್ತ ಎಂಬ ಮನುಷ್ಯ ಸಹಜ ಉದ್ಗರವಾದರೂ ಬರಬೇಕಾಗಿತ್ತು. ಆದರೆ ಹಾಗಾಗಲಿಲ್ಲ. ಎಂದಿನಂತೆ ಪ್ರಗತಿಪರ ಸಂಘಟನೆಗಳ ಗೆಳೆಯರು ಮಾತ್ರ ಅಮಾಯಕನ ಹತ್ಯೆ ಎಂದು ಪ್ರತಿಭಟಿಸಿದರು. ಸೆಕ್ಯುಲರ್ ಎಂದು ಹೇಳಿಕೊಳ್ಳುವ ಕಾಂಗ್ರೆಸ್ಸಿ ನವರು ತುಟಿ ಸಹಾನುಭೂತಿ ವ್ಯಕ್ತಪಡಿಸಿದರು. ಆದರೆ ಅತ್ಯಂತ ಅಮಾನವೀಯ ಪುಂಡಾಟಿಕೆ ಪ್ರತಿಕ್ರಿಯೆ ಬಂದಿದ್ದು ಚಡ್ಡಿ ಪರಿವಾರದಿಂದ.
ಶೃಂಗೇರಿ ಪೊಲೀಸ್ ಠಾಣೆಯ ತನಿಕೋಡು ಚೆಕ್‌ಪೋಸ್ಟ್ ಬಳಿ ಸಂಭವಿಸಿದ ಕಬೀರ್ ಶೂಟೌಟ್ ಪ್ರಕರಣದಲ್ಲಿ ನಕ್ಸಲ್ ನಿಗ್ರಹ ಪಡೆಗೆ ಸಿಐಡಿ ವರದಿಯಲ್ಲಿ ಕ್ಲೀನ್‌ಚಿಟ್ ನೀಡಿದ್ದರೆ, ಇನ್ನೊಂದೆಡೆ ಬಿಜೆಪಿ ಶಾಸಕನೊಬ್ಬ, ಗೋಹತ್ಯೆ ತಡೆಗೆ ಶೂಟೌಟ್ ಒಂದೇ ಪರಿಹಾರ. ಗುಂಡು ಹಾರಿಸಿ ಕಬೀರ್‌ನನ್ನು ಕೊಂದ ಎಎನ್‌ಎಫ್ ಪೇದೆ ನವೀನ್ ನಾಯ್ಕರಂಥವರು ನೂರಾರು ಮಂದಿ ಹುಟ್ಟಿ ಬರಬೇಕೆಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾನೆ. ಅಮಾಯಕ ಪ್ರಜೆಯೊಬ್ಬನ ಸಾವಿನ ತನಿಖೆ ನಡೆದು ಸೆಕ್ಯುಲರ್ ಸರಕಾರದಲ್ಲಿ ಈ ರೀತಿ ಹಂತಕನಿಗೆ ಕ್ಲೀನ್‌ಚಿಟ್ ನೀಡಿದ್ದರೆ, ಪ್ರಜೆಯೊಬ್ಬನ ಕಗ್ಗೊಲೆ ಯನ್ನು ಸಂಭ್ರಮಿಸುವ ವ್ಯಕ್ತಿ ಶಾಸನಸಭೆ ಯಲ್ಲಿ ನಮ್ಮನ್ನು ಪ್ರತಿನಿಧಿಸುತ್ತಿದ್ದಾನೆ. ಇದು ನಮ್ಮ ಜನತಂತ್ರದ ವಿಪರ್ಯಾಸ.
ಯಾರೋ ಪ್ರವೀಣ್ ತೊಗಾಡಿಯಾ, ಪ್ರಮೋದ್ ಮುತಾಲಿಕ್, ಗಿರಿರಾಜ ಸಿಂಗ್, ಸಿಂಘಾಲ್ ಮಾತಾಡಿ ಕೇಸು ಹಾಕಿಸಿ ಕೊಳ್ಳುವುದು ಗೊತ್ತಿದೆ. ಆದರೆ ಚುನಾವಣೆಗೆ ಸ್ಪರ್ಧಿಸಿ ಗೆದ್ದು ಭಾರತದ ಸಮಾಜವಾದಿ, ಜಾತ್ಯತೀತ ಗಣತಂತ್ರ ವ್ಯವಸ್ಥೆಗೆ, ಸಂವಿಧಾನಕ್ಕೆ ನಿಷ್ಠನಾಗಿರುವು ದಾಗಿ ಅಧಿಕಾರದ ಪ್ರಮಾಣ ವಚನ ಸ್ವೀಕರಿಸಿ ಈ ರೀತಿ ನಕಲಿ ಎನ್‌ಕೌಂಟರ್‌ನ್ನು ಸಮರ್ಥಿಸುವುದು ನ್ಯಾಯಸಮ್ಮತವೇ? ಎಂದು ಪ್ರಶ್ನಿಸಿದರೆ, ಮನುವಾದವನ್ನೇ ಸಂವಿಧಾನವೆಂದು ನಂಬಿದ ವರು ಇನ್ನೇನು ಉತ್ತರಿಸಲು ಸಾಧ್ಯ? ಅದೇ ಹೊಡಿ, ಕಡಿ ಭಾಷೆ. ಇದು ಕರಾವಳಿಯ ಒಬ್ಬ ಶಾಸಕನ ಮಾತಲ್ಲ. ಮಲೆನಾಡಿನ ಇನ್ನೊಬ್ಬ ಬಿಜೆಪಿ ಶಾಸಕನೂ ಇದೇ ರೀತಿ ಮಾತಾಡಿದ, ರಾಜ್ಯ ಬಿಜೆಪಿ ಅಧ್ಯಕ್ಷರೂ ಗುಂಡೇಟಿಗೆ ಬಲಿಯಾದ ಕಬೀರ್‌ಗೆ ಪರಿಹಾರ ನೀಡುವುದನ್ನು ವಿರೋಧಿಸಿದರು.
ಇದು ಈ ಚಡ್ಡಿ ಶಾಸಕರ ಜೈವಿಕ ದೋಷ ವಲ್ಲ. ಅವರು ಬಾಲ್ಯದಲ್ಲಿ ಆರೆಸ್ಸೆಸ್‌ನಲ್ಲಿ ಪಡೆದ ಸಂಸ್ಕಾರದಿಂದ ಇಂಥ ಮಾತು ಗಳನ್ನಾಡಿಸುತ್ತಿದೆ. ಆರೆಸ್ಸೆಸ್ ಶಾಖೆಗಳು ಈ ರೀತಿ ಸಾವನ್ನು ಸಂಭ್ರಮಿಸುವ ವ್ಯಕ್ತಿಗಳನ್ನು ಸೃಷ್ಟಿಸುತ್ತವೆ. ಗಾಂಧಿ ಹತ್ಯೆ ಮಾಡಿದವರು, ಬಾಬರಿ ಮಸೀದಿ ಬೀಳಿಸಿದವರು, ಗುಜರಾತ್ ನಲ್ಲಿ ಗರ್ಭಿಣಿಯ ಹೊಟ್ಟೆಗೆ ತ್ರಿಶೂಲ ಚುಚ್ಚಿ ಗರ್ಭ ಸೀಳಿದವರು ಸೃಷ್ಟಿಯಾದದ್ದು ಇದೇ ಶಾಖೆಯಲ್ಲಿ. ಇಲ್ಲವೆ ಅದೇ ವಿಚಾರ ಶಾಲೆಯಲ್ಲಿ. ನರೇಂದ್ರ ಮೋದಿ, ಪ್ರವೀಣ ತೊಗಾಡಿಯಾ, ಮುತಾಲಿಕ್, ಸಿಂಘಾಲ್, ಮಾಲೆಗಾಂವ್ ಬಾಂಬ್ ಸ್ಫೋಟದ ಕರ್ನಲ್ ಪುರೋಹಿತ್, ಸಾಧ್ವಿ ಉಮಾಭಾರತಿ ಇವರೆಲ್ಲ ಈ ಶಾಖೆಯಲ್ಲಿ ಸಂಸ್ಕಾರ ಪಡೆದ ಮುತ್ತು ರತ್ನಗಳು.
ಈ ದೇಶದಲ್ಲಿ ಹೊಟ್ಟೆಪಾಡಿಗಾಗಿ ಜನ ಯಾವುದ್ಯಾವುದೊ ದಂಧೆ ಮಾಡುತ್ತಾರೆ. ಕೆಲವರು ಜ್ಯೋತಿಷ್ಯ ಹೇಳುತ್ತಾರೆ. ಪೌರೋಹಿತ್ಯ ಕೆಲವರ ವೃತ್ತಿಯಾಗಿದೆ. ರಿಯಲ್ ಎಸ್ಟೇಟ್ ಮಾಡಿ ಬದುಕುವವರೂ ಇದ್ದಾರೆ. ಆದರೆ ಕಬೀರ್ ಕುಟುಂಬದ್ದು ದನದ ವ್ಯಾಪಾರ. ಈ ದನದ ವ್ಯಾಪಾರಕ್ಕೆ ಕಾನೂನಿನಲ್ಲಿ ನಿರ್ಬಂಧವಿಲ್ಲ. ಆದರೆ ಕಾನೂನಿಗೆ ಅತೀತವಾದ ಕೆಲವರು ತಮ್ಮದೇ ಕಾನೂನು ಹೇರಿ ನಿರ್ಬಂಧಿಸಲು ಹೊರಟಿ ದ್ದಾರೆ. ಜ್ಯೋತಿಷ್ಯ ಹೇಳಿ ವಂಚನೆ ಮಾಡು ವುದು ಅಪರಾಧವಲ್ಲದ ಈ ನಾಡಿನಲ್ಲಿ ಪ್ರಾಮಾಣಿಕವಾಗಿ ದನದ ವ್ಯಾಪಾರ ಮಾಡುವುದು ಹೇಗೆ ಅಪರಾಧವಾಗುತ್ತದೆ?
ಇನ್ನು ಎಷ್ಟು ಮಂದಿ ದನದ ವ್ಯಾಪಾರಿ ಗಳಿಂದ ಸಂಘಪರಿವಾರ ಹಫ್ತಾ ಪಡೆದಿಲ್ಲ? ಈ ದೇಶದಲ್ಲಿ ಚರ್ಮೋದ್ಯಮ ಅತ್ಯಂತ ಸಮೃದ್ಧವಾಗಿದೆ. ಈ ಚರ್ಮೊದ್ಯಮದ ಕೋಟ್ಯಧೀಶರೆಲ್ಲ ವಿಶ್ವಹಿಂದೂ ಪರಿಷತ್ತಿನ ಪದಾಧಿಕಾರಿಗಳಾಗಿದ್ದಾರೆ. ಆರೆಸ್ಸೆಸ್ ಶಾಖೆಗೆ ಬಂದು ಗುರುದಕ್ಷಿಣೆ ಸಲ್ಲಿಸುತ್ತಾರೆ. ಆದರೂ ಇದ್ಯಾವುದೂ ಈ ಸ್ವಯಂ ಘೋಷಿತ ಗೋ ರಕ್ಷಕರಿಗೆ ಅಪಥ್ಯವಲ್ಲ. ಆದರೆ ಮುಸಲ್ಮಾನನೊಬ್ಬ ಹೊಟ್ಟೆಪಾಡಿ ಗಾಗಿ ದನದ ವ್ಯಾಪಾರ ಮಾಡಿದರೆ ಗುಲ್ಲೆಬ್ಬಿಸಿ ಹಿಂದೂ ವೋಟ್ ಬ್ಯಾಂಕ್ ನಿರ್ಮಿಸಲು ಸೌಹಾರ್ದ ಬದುಕಿಗೆ ಹುಳಿ ಹಿಂಡುತ್ತಾರೆ.
ಗೋಹತ್ಯೆ ತಡೆಯಲು ಶೂಟೌಟ್ ಮಾಡಿ ಸಾಯಿಸಬೇಕೆಂದರೆ ಇಂಥ ಗುಂಡಿಗೆ ಮೊದಲು ಇವರ ನಾಯಕ ಅಟಲ್ ಬಿಹಾರಿ ವಾಜಪೇಯಿ ಬಲಿ ಯಾಗಬೇಕಾಗುತ್ತದೆ. ವಾಜಪೇಯಿ ಪ್ರಧಾನಿಯಾಗಿದ್ದಾಗಲೂ ವಿದೇಶಕ್ಕೆ ಲಕ್ಷಾಂತರ ಟನ್ ದನದ ಮಾಂಸ ರಫ್ತಾಗುತ್ತಿತ್ತು. ಇದನ್ನು ನಿರ್ಬಂಧಿಸುವ ಪ್ರಸ್ತಾಪವನ್ನು ಅಟಲ್ ಆಗ ತಿರಸ್ಕರಿಸಿದ್ದರು. ಸ್ವತಃ ವಾಜಪೇಯಿ ಅವರಿಗೆ ಗೋಮಾಂಸ ಅಂದರೆ ತುಂಬ ಇಷ್ಟ ಎಂದು ಅವರಿಗೆ ಅನೇಕ ವರ್ಷಗಳಿಂದ ಆಪ್ತರಾಗಿರುವವ ರೊಬ್ಬರು ನನಗೆ ಒಮ್ಮೆ ಹೇಳಿದ್ದರು. ಇದು ಬಿಜೆಪಿ ನಾಯಕರಿಗೆಲ್ಲ ಗೊತ್ತು.
 ಈ ನಕಲಿ ದೇಶಭಕ್ತರ ದೃಷ್ಟಿಯಲ್ಲಿ ದನ ಸಾಗಾಟ ಮಾಡುವುದು ಅಪರಾಧ. ಆದರೆ ಶಾಸಕನೊಬ್ಬ ತನ್ನ ಹೆಂಡತಿಯನ್ನು ಕೊಲ್ಲುವುದು ಅಪರಾಧವಲ್ಲ. ಉನ್ನತ ಸ್ಥಾನದಲ್ಲಿರುವ ವ್ಯಕ್ತಿ ಯೊಬ್ಬ ಮಾನವ ಕಳ್ಳಸಾಗಾಟ ಮಾಡಿದರೆ ಅಪರಾಧವಲ್ಲ. ಉಡುಪಿ ಬಳಿ ದ್ವೀಪದಲ್ಲಿ ರೇಪ್ ಪಾರ್ಟಿ ನಡೆಸಿ ಎಂಜಲು ತಿನ್ನುವುದು ಅಪರಾಧವಲ್ಲ. ವಿಧಾನಸೌಧದಲ್ಲಿ ಬ್ಲೂಫಿಲಂ ನೋಡುವುದು ಅಪರಾಧವಲ್ಲ. ಪತ್ನಿಯನ್ನು ಕೊಂದ ಪ್ರಕರಣದಲ್ಲಿ ಪಾರಾಗಲು ಕಾಂಗ್ರೆಸ್ ನಾಯಕರ ಪಾದ ಚುಂಬನ ಮಾಡುವುದು ಕೂಡ ತಪ್ಪೆನಿಸಲಿಲ್ಲ. ಈ ದೇಶದಲ್ಲಿ ದನ ಸಾಗಾಟವೊಂದು ಸಮಸ್ಯೆಯೇ ಅಲ್ಲ. ಆದರೆ ಸ್ತ್ರೀ ಭ್ರೂಣ ಹತ್ಯೆಗಳು, ಅತ್ಯಾಚಾರಗಳು, ಅನಾಚಾರಗಳು, ನಿತ್ಯವೂ ನಡೆಯುತ್ತಿವೆ. ಅದನ್ನು ತಡೆಯಲು ಶೂಟೌಟ್ ಮಾಡಬೇಕೆಂದು ಬಿಜೆಪಿ ನಾಯಕರು ಎಂದೂ ಆಗ್ರಹಿಸುವುದಿಲ್ಲ. ಕಳೆದವಾರ ಮೇಲ್ಜಾತಿ ಯುವತಿಯ ಜೊತೆ ಮಾತನಾಡಿದ ತಪ್ಪಿಗಾಗಿ ದಲಿತ ಯುವಕ ನಿತೀನ್ ಆಗೆಯನ್ನು ಜಾತಿವಾದಿಗಳು ಕೊಚ್ಚಿ ಕೊಚ್ಚಿ ಕೊಂದು ಹಾಕಿದರು. ಆ ರೀತಿ ದಲಿತರನ್ನು ಕೊಂದವರನ್ನು ಶೂಟೌಟ್ ಮಾಡಬೇಕೆಂದು ಸಂಘಪರಿವಾರದ ನಾಯಕರು ಎಂದೂ ಒತ್ತಾಯಿಸುವುದಿಲ್ಲ. ಯಾಕೆಂದರೆ ಅವರ ದೃಷ್ಟಿಯಲ್ಲಿ ಆ ದಲಿತ ಯುವಕ ಮಾಡಿದ್ದು ಅಪರಾಧ.
ಪ್ರಜಾಪ್ರಭುತ್ವದಲ್ಲಿ ಪೊಲೀಸರಿಂದ ಅಮಾಯಕನೊಬ್ಬನ ಹತ್ಯೆ ನಡೆದಾಗ ಮುಖ್ಯ ಪ್ರತಿಪಕ್ಷವಾಗಿ ಬಿಜೆಪಿ ಅದನ್ನು ಖಂಡಿಸಬೇಕಾಗಿತ್ತು. ಕಾಂಗ್ರೆಸ್ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳ ಬೇಕಾಗಿತ್ತು. ಆದರೆ ಗುಂಡಿಗೆ ಬಲಿಯಾದವನು ಹಿಂದೂವಾಗಿದ್ದರೆ ಖಂಡಿಸುತ್ತೇವೆ, ಮುಸ್ಲಿಂ ಆಗಿದ್ದರೆ ಸಮರ್ಥಿಸುತ್ತೇವೆ ಎಂಬ ನಿಲುವು ಹೊಂದಿದವರನ್ನು ಅಲ್ಪಸಂಖ್ಯಾತರು ಹೇಗೆ ನಂಬಬೇಕು? ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾ ನಾಯಕರು ಮಾತ್ರ ಕುರ್ಚಿಗಾಗಿ ಸಜೀವವಾಗಿ ಕೋಮಾಕ್ಕೆ ಹೋಗಿದ್ದಾರೆ. ಈ ರೀತಿ ಕಗ್ಗೊಲೆಗಳನ್ನು ಸಮರ್ಥಿಸು ವವರು ಇಂದು ಶಾಸನ ಸಭೆಗಳನ್ನು ಪ್ರವೇಶಿಸಿದ್ದಾರೆ. ಮಾಧ್ಯಮಗಳಲ್ಲಿ ಠಳಾಯಿಸುತ್ತಿದ್ದಾರೆ. ಕಾವಲಿಗಿರುವ ಬೇಲಿಯೆ ಹೊಲ ಮೇಯುತ್ತಿದೆ. ಮನುಷ್ಯರ ನಡುವೆ ಇದ್ದುಕೊಂಡು ಈ ರೀತಿ ಸಹಜೀವಿಯ ಸಾವನ್ನು ಸಂಭ್ರಮಿಸುವವರು ಶಾಸನಸಭೆ ಮಾತ್ರವಲ್ಲ, ನಾಗರಿಕ ಸಮಾಜ ದಲ್ಲಿರಲು ಅಯೋಗ್ಯರು. ಇಂಥವರು ಮೃಗಾಲಯ (ಪ್ರಾಣಿ ಸಂಗ್ರಾಹಲಯ) ದಲ್ಲಿರಲು ಮಾತ್ರ ಅರ್ಹರು.
ಇದೇ ಸಂವಿಧಾನ ಚೌಕಟ್ಟಿನಲ್ಲಿ ನಡೆಯುವ ಚುನಾವಣೆಗಳಲ್ಲಿ ಸ್ಪರ್ಧಿಸಿ ಬಹುಸಂಖ್ಯಾತ ವೋಟ್ ಬ್ಯಾಂಕ್ ಮೂಲಕ ಅಧಿಕಾರಕ್ಕೆ ಬಂದು ನಂತರ ಈಗಿನ ಸಂವಿಧಾನವನ್ನೇ ಹೂತು ಹಾಕುವ ಹುನ್ನಾರವೊಂದು ಈ ದೇಶದಲ್ಲಿ ನಡೆಯುತ್ತಿದೆ. ಅಂತಲೇ ತಾವು ಸ್ವೀಕರಿಸಿದ ಪ್ರಮಾಣ ವಚನಕ್ಕೆ ವ್ಯತಿರಿಕ್ತವಾಗಿ ವರ್ತಿಸುವ ಶಾಸಕರು ನಮ್ಮ ನಡುವಿದ್ದಾರೆ. ಭಾರತೀಯ ಸೆಕ್ಯುಲರ್ ಜನತಂತ್ರ ಈಗ ವೈರುಧ್ಯದ ಸುಳಿಗೆ ಸಿಲುಕಿದೆ. ಈ ಬಿಕ್ಕಟ್ಟಿನಿಂದ ಸಂಸದೀಯ ವ್ಯವಸ್ಥೆಯನ್ನು ಪಾರು ಮಾಡಬೇಕೆಂದರೆ ಕೋಮುವಾದಿ ಪಕ್ಷಗಳು ಚುನಾವಣೆಗೆ ಸ್ಪರ್ಧಿಸುವುದನ್ನು ನಿರ್ಬಂಧಿಸಬೇಕಾಗಿದೆ.
Please follow and like us:
error