fbpx

ಮೂಢನಂಬಿಕೆ, ಪಂಕ್ತಿ ಭೇದ, ಮಹಿಳಾ ದೌರ್ಜನ್ಯ ವಿರೋಧಿಸಿ ಜನ ನುಡಿ ನಿರ್ಣಯ

ಮಂಗಳೂರು, ಡಿ.15: ಮೂಢ ನಂಬಿಕೆ, ಪಂಕ್ತಿ ಭೇದ, ಮಹಿಳಾ ದೌರ್ಜನ್ಯ ವಿರೋಧಿಸಿ ನಾಡು ನುಡಿಯನ್ನು ಬಂಡವಾಳಶಾಹಿ ಶಕ್ತಿಗಳಿಂದ ಮುಕ್ತಗೊಳಿಸುವ ನಿರ್ಣಯಗಳನ್ನು ಇಂದು ಸಮಾರೋಪಗೊಂಡ ಜನನುಡಿ ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಳ್ಳಲಾಯಿತು. ಇದೇ ಸಂದರ್ಭದಲ್ಲಿ ಮೂಢನಂಬಿಕೆ ವಿರೋಧಿ ಮಸೂದೆ ಯನ್ನು ಜಾರಿಗೊಳಿಸಲು ಸರಕಾರವನ್ನು ಆಗ್ರಹಗೊಳಿಸುವ ನಿರ್ಣಯ ಕೈಗೊಳ್ಳಲಾಯಿತು.

ಶಕ್ತಿನಗರದ ಕಲಾಂಗಣದಲ್ಲಿ ಅಭಿಮತ ಮಂಗಳೂರು ವತಿಯಿಂದ ಹಮ್ಮಿ ಕೊಂಡ ಎರಡು ದಿನಗಳ ‘ನುಡಿಯೂ ಸಿರಿಯಲ್ಲ ಬದುಕು’ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಕೆ.ನೀಲಾ ಅಧ್ಯಕ್ಷತೆಯಲ್ಲಿ ಈ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೆ.ನೀಲಾ ಮಾತನಾಡುತ್ತಾ, ಜನನುಡಿ ಸಮ್ಮೇಳನ ಈ ನಾಡಿನ ಸಂಘರ್ಷ ಪರಂಪರೆಯನ್ನು ನೆನಪಿಸುವ ಪರ್ಯಾಯ ಸಂಘಟನೆಯಾಗಿದೆ. ಕೋಟ್ಯಂತರ ರೂಪಾಯಿಗಳನ್ನು ಸುರಿದು ನಡೆಸುವ ವೈಭವದ ಸಮ್ಮೇಳನಕ್ಕೆ ಪರ್ಯಾಯವಾಗಿದೆ ಎಂದು ತಿಳಿಸಿದರು.
ಜನ ನುಡಿ ಒಂದು ಘಟನೆಯಲ್ಲ ನಿರಂತರವಾಗಿ ನಡೆಯಬೇಕಾದ ಚಳವಳಿ: ಈ ನಾಡಿನಲ್ಲಿ ಪ್ರಜಾಪ್ರಭುತ್ವ ಶಕ್ತಿಗಳನ್ನು ದುರ್ಬಲಗೊಳಿಸುವ ಶಕ್ತಿಗಳು ವಿಸ್ತೃತಗೊಳ್ಳುತ್ತಿರುವ ಕಾಲಘಟ್ಟದಲ್ಲಿ ಜನನುಡಿ ನಿರಂತರವಾಗಿ ನಡೆಯಬೇಕಾದ ಚಳವಳಿಯಾಗಿದೆ ಎಂದು ಸಮಾರೋಪ ಭಾಷಣ ಮಾಡಿದ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ತಿಳಿಸಿದ್ದಾರೆ.
   ಈ ನಾಡಿನಲ್ಲಿ ದೇವರಾಜ ಅರಸು ಅವರ ಕಾಲದಲ್ಲಿ ಹಲವು ಮೂಢನಂಬಿಕೆಗಳನ್ನು ನಿಷೇಧಿಸಲಾಯಿತು. ಆದರೆ ಈ ಬಾರಿ ಸರಕಾರ ಮೂಢನಂಬಿಕೆ ನಿಷೇಧದ ಕಾಯಿದೆ ಜಾರಿಗೆ ತರಲು ಹೊರಟಾಗ ವ್ಯಾಪಕವಾದ ಅಪಪ್ರಚಾರದ ಮೂಲಕ ಅದನ್ನು ತಡೆಯುವ ಪ್ರಯತ್ನ ನಡೆದಿದೆ.ಒಂದು ಕಾಲದಲ್ಲಿ ಸೌಹಾರ್ದದ ಪರಂಪರೆಯ ತೊಟ್ಟಿಲಾಗಿದ್ದ ಕರಾವಳಿಯಲ್ಲಿ ಕೋಮುವಾದದ ರಾಜಕೀಯ, ಗುಜರಾತ್ ಮಾದರಿಯ ಅಭಿವೃದ್ಧಿಯ ಪ್ರಚಾರ ಮಾಡಲಾಗುತ್ತಿದೆ. ಗುಜರಾತ್‌ನಲ್ಲಿ ಕೋಮುವಾದಿ ಹಾಗೂ ಅತೀಯಾದ ಖಾಸಗೀಕರಣದ ಶಕ್ತಿಗಳೇ ಸರಕಾರವನ್ನು ನಡೆಸುತ್ತಿದೆ. ಗುಜರಾತ್ ಕೇಂದ್ರೀಕೃತ ಅಭಿವೃದ್ಧಿಯಲ್ಲಿ ಮನುಷ್ಯರ ಬಗ್ಗೆ ಕಾಳಜಿ ಇಲ್ಲ. ಆ ರಾಜ್ಯದಲ್ಲಿ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅದೇ ರೀತಿ ರಾಜ್ಯದಲ್ಲೂ ಬಡವರಿಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಅಡ್ಡಿಪಡಿಸಲು ಅಗೋಚರವಾಗಿ ಸರಕಾರವನ್ನು ನಿಯಂತ್ರಿಸು ತ್ತಿರುವ ಶಕ್ತಿಗಳು ಪ್ರಯತ್ನ ನಡೆಸುತ್ತಲೆ ಇದೆ. ಈ ಶಕ್ತಿಗಳೇ ದೇಶಕ್ಕೆ ಮಾದರಿಯಾದ ಮೀಸಲಾತಿಯನ್ನು ತಂದ ಹಾವನೂರು ವರದಿಗೆ ತಿದ್ದುಪಡಿ ತಂದು ದುರ್ಬಲಗೊಳಿಸಿವೆ, ಭೂಸುಧಾರಣಾ ನೀತಿಯನ್ನು ತಿದ್ದುಪಡಿಗೊಳಿಸಿ ದುರ್ಬಲಗೊಳಿ ಸಿವೆ, ಅಲ್ಪಸಂಖ್ಯಾತರ ಇಲಾಖೆಯಿಂದ ಹಮ್ಮಿಕೊಂಡ ಶಾದಿ ಭಾಗ್ಯ ಯೋಜನೆಯನ್ನು ವಿರೋಧಿಸಿವೆ. ಆದರೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಜಾರಿಯಾಗಿದ್ದ ಶಾದಿಮಹಲ್‌ಗೆ ವಿರೋಧ ವ್ಯಕ್ತಪಡಿಸಿಲ್ಲ ಎಂದು ದಿನೇಶ್ ಅಮೀನ್ ತಿಳಿಸಿದರು.
ಶಿಕ್ಷಣದ ವ್ಯಾಪಾರೀಕರಣಕ್ಕೆ ಸಾಂಸ್ಕೃತಿಕ ಮುಖವಾಡ ಸಲ್ಲದು:   ಶಿಕ್ಷಣದ ವ್ಯಾಪಾರೀಕರಣಕ್ಕೆ ಸಾಂಸ್ಕೃತಿಕ ಮುಖವಾಡ ಸಲ್ಲದು.ಶಿಕ್ಷಣದ ಹೆಸರಿನಲ್ಲಿ ವ್ಯಾಪಾರ ನಡೆಸುವವರು ಅದಕ್ಕೊಂದು ಸಾಂಸ್ಕೃತಿಕ ಮುಖವಾಡ ನೀಡುವುದು ಅಪರಾಧ ಎಂದು ದಿನೇಶ್ ತಿಳಿಸಿದರು.
ಕುದ್ರೋಳಿಯಲ್ಲಿ ನಾರಾಯಣ ಗುರುಗಳ ಆದರ್ಶಗಳಿಗೆ ಗೋರಿ: ಅಮೀನ್‌ಮಟ್ಟು
ಕುದ್ರೋಳಿಯಲ್ಲಿ ನಾರಾಯಣ ಗುರು ಆದರ್ಶಗಳಿಗೆ ಗೋರಿಕಟ್ಟಲಾಗಿದೆ ಎಂದು ದಿನೇಶ್ ಅಮೀನ್‌ಮಟ್ಟು ವಿಷಾದ ವ್ಯಕ್ತಪಡಿಸಿದ್ದಾರೆ. ಜನನುಡಿ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು, ನಾರಾಯಣ ಗುರು ಆದರ್ಶಗಳಿಗೆ ವಿರುದ್ಧವಾಗಿ ಶೃಂಗೇರಿ ಮಠದ ಸ್ವಾಮಿಗಳನ್ನು ಕರೆಸಿ ಜೀಣೋದ್ದಾರ ಮಾಡಿಸಲಾಯಿತು. ಸಾಯಿಬಾಬಾರಿಂದ ಹಿಡಿದು ಹಲವಾರು ದೇವರುಗಳನ್ನು ಕುದ್ರೋಳಿಯಲ್ಲಿ ಪ್ರತಿಷ್ಠಾಪಿಸಲಾಗಿದೆ. ನಾರಾಯಣ ಗುರು ಸಾರಿದ ಸರಳ ವಿವಾಹಕ್ಕೆ ತಿಲಾಂಜಲಿ ನೀಡಲಾಗಿದೆ. ವಿಧವಾ ಅರ್ಚಕಿಯ ರನ್ನು ನೇಮಿಸಿದಂತಹ ಕೆಲವು ಒಳ್ಳೆಯ ಕೆಲಸಗಳು ನಡೆದರೂ ನಾರಾಯಣ ಗುರು ಮಂದಿರದಲ್ಲಿದ್ದ ಸರಳ ಆಚರಣೆಗಳು ಮರೆಯಾಗಿವೆ ಎಂದರು.ಮೊಗವೀರ, ದಲಿತರನ್ನು ಸಂಘ ಪರಿವಾರ ಕೋಮುವಾದದ ದಾಳಗಳಾಗಿ ಬಳಸುತ್ತಿರುವುದು ವಿಪರ್ಯಾಸ. ಆದರೆ ಇವರು ವಿವೇಕಾನಂದರ, ಪೆರಿಯಾರರ, ಬುದ್ಧ, ಬಸವರ ಆದರ್ಶವನ್ನು ಒಪ್ಪುವುದಿಲ್ಲ,ಹಿಂದೂ ಸಮಾಜದಲ್ಲಿ ಸಹ ಪಂಕ್ತಿ ಭೋಜನ, ದಲಿತರ ದೇವಸ್ಥಾನ ಪ್ರವೇಶಕ್ಕೆ ಒಪ್ಪುವುದಿಲ್ಲ ಎಂದು ದಿನೇಶ್ ಅಮೀನ್ ತಿಳಿಸಿದರು.
ವೇದಿಕೆಯಲ್ಲಿ ಸನತ್ ಕುಮಾರ್ ಬೆಳಗಲಿ,ಮಾವಳ್ಳಿ ಶಂಕರ್, ಡಾ.ವಸುಂಧರಾ ಭೂಪತಿ ಉಪಸ್ಥಿತರಿದ್ದರು.
Please follow and like us:
error

Leave a Reply

error: Content is protected !!