ಇದು ಸಿದ್ದೀಕಿ ಪ್ರಶ್ನೆ ಮಾತ್ರವಲ್ಲ

ಸನತ್ ಕುಮಾರ್ ಬೆಳಗಲಿ–
‘‘ನಾನು ಮುಸಲ್ಮಾನನಾಗಿರದಿದ್ದರೆ ಪೊಲೀಸರು ನನ್ನನ್ನು ಬಂಧಿಸುತ್ತಿದ್ದರಾ? ಮುಸಲ್ಮಾನನಾಗಿ ಹುಟ್ಟಿದ ತಪ್ಪಿಗೆ ಭಯೋತ್ಪಾದನಾ ಸಂಚಿನಲ್ಲಿ ನನ್ನನ್ನು ಸಿಲುಕಿಸಿದವರಲ್ಲವೇ?’’ ಇದು ಆರೋಪ ಸಾಬೀತಾಗದೆ ಜೈಲಿನಿಂದ ಬಿಡುಗಡೆಯಾಗಿ ಬಂದಿರುವ ಯುವ ಪತ್ರಕರ್ತ ಮತೀವುರ್ರಹ್ಮಾನ್ ಸಿದ್ದೀಕಿ ಕೇಳಿದ ಪ್ರಶ್ನೆ. ಇದು ಆತನ ಪ್ರಶ್ನೆ ಮಾತ್ರವಲ್ಲ ಎಲ್ಲ ಅಲ್ಪಸಂಖ್ಯಾತ, ದಲಿತ, ಹಿಂದುಳಿದ ಸಮು ದಾಯಗಳು ಕೇಳಿದ ಪ್ರಶ್ನೆಯಾಗಿದೆ. ನಮ್ಮ ಪ್ರಭುತ್ವ ಎದೆ ಮುಟ್ಟಿ ನೋಡಿಕೊಳ್ಳಬೇಕಾದ ಸವಾಲಾಗಿದೆ. ಈ ಪ್ರಶ್ನೆಗೆ ಸೂಕ್ತ ಉತ್ತರ ನೀಡಲಾಗದಿದ್ದರೆ ಪ್ರಭುತ್ವದ ಬಗ್ಗೆ ಜನ ವಿಶ್ವಾಸ ಕಳೆದುಕೊಳ್ಳುತ್ತಾರೆ.
ಅಲ್ಪಸಂಖ್ಯಾತರು, ದಲಿತರು ಮತ್ತು ಹಿಂದುಳಿದವರ ಬಗ್ಗೆ ನಮ್ಮ ದೇಶದ ತನಿಖಾ ಆಯೋಗಗಳು ಪೂರ್ವಗ್ರಹ ಪೀಡಿತವಾಗಿವೆ ಎಂಬ ಸಿದ್ದೀಕಿ ಆರೋಪ ನೂರಕ್ಕೆ ನೂರರಷ್ಟು ಸತ್ಯ. ಸೂಕ್ತ ಸಾಕ್ಷಾಧಾರವಿಲ್ಲದೆ ಒಂದು ಸಮುದಾಯದ ಯುವಕರನ್ನು ಬಂಧಿಸುವುದು, ಮಾಧ್ಯಮಗಳಿಗೆ ಬಣ್ಣಬಣ್ಣದ ಕತೆಗಳನ್ನು ಬಿಡುಗಡೆ ಮಾಡುವುದು, ಮಾಧ್ಯಮಗಳು ಇನ್ನಷ್ಟು ರಂಗು ಸೇರಿಸಿ ಪ್ರಕಟಿಸುವುದು, ತಿಂಗಳಾನುಗಟ್ಟಲೆ ವಶದಲ್ಲಿಟ್ಟುಕೊಂಡು ಆರೋಪ ಸಾಬೀತಾಗಿಲ್ಲ ಎಂದು ಬಿಟ್ಟು ಬಿಡುವುದು. ಇದು ನಮ್ಮ ಪೊಲೀಸರ ಇತ್ತೀಚಿನ ಚಾಳಿಯಾಗಿದೆ. ಆದರೆ ಒಮ್ಮೆ ‘ಟೆರರಿಸ್ಟ್’ ಎಂದು ಹಣೆಗೆ ಪಟ್ಟಿ ಹಚ್ಚಿಸಿಕೊಂಡವನ ನಂತರದ ಬದುಕಿನ ಮೂಕ ಸಂಕಟಕ್ಕೆ ಪರಿಹಾರವೇನು? ಯಾರು ಪರಿಹಾರ ನೀಡುತ್ತಾರೆ?
‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಯ ವರದಿಗಾರ ಮತೀವುರ್ರಹ್ಮಾನ್ ಸಿದ್ದೀಕಿ ಮತ್ತು ಸೈಯದ್ ಯೂಸುಫ್ ನಾಲಬಂದ್ ಸೇರಿದಂತೆ ಹನ್ನೊಂದು ಯುವಕರನ್ನು ಪೊಲೀಸರು ಆರು ತಿಂಗಳ ಹಿಂದೆ ಬಂಧಿಸಿ ಭಯೋತ್ಪಾದಕರೆಂಬ ಹಣೆಪಟ್ಟಿ ಅಂಟಿಸಿದರು. ಕೆಲ ‘ಮಹಾನ್ ದೇಶಭಕ್ತರ’ ಕೊಲೆಗೆ ಇವರು ಸಂಚು ರೂಪಿಸಿದ್ದರು ಎಂದು ಆರೋಪ ಹೊರಿಸಿದರು. ಆರು ತಿಂಗಳ ಕಾಲ ಜೈಲಿನಲ್ಲಿಟ್ಟರು. ಆರು ತಿಂಗಳ ನಂತರವೂ ಆರೋಪ ಸಾಬೀತುಗೊಳಿಸುವಂಥ ಸಾಕ್ಷಾಧಾರ ಸಂಗ್ರಹಿಸಲು ಪೊಲೀಸರಿಗೆ ಯಾಕೆ ಸಾಧ್ಯವಾಗಲಿಲ್ಲ? ಇದಕ್ಕೆ ಪೊಲೀಸರು ಉತ್ತರ ನೀಡಬೇಕಾಗಿದೆ. ಅಮಾಯಕ ಯುವಕರನ್ನು ಮೊದಲು ಬಂಧಿಸಿ ಆಮೇಲೆ ಆರೋಪ ಸಾಬೀತುಪಡಿಸಲು ಪೊಲೀಸರು ಹೆಣಗಾಡಿದರಲ್ಲವೆ? ಇನ್ನಿಬ್ಬರು ಪತ್ರಕರ್ತರಾದ ನವೀನ್ ಸೂರಿಂಜೆ ಮತ್ತು ಶಾಹಿನಾ ಪ್ರಕರಣದಲ್ಲಿ ಇಂಥದೇ ಪರದಾಟದಲ್ಲಿ ಪೊಲೀಸರು ತೊಡಗಿದ್ದಾರೆಯೇ?
ಮತೀವುರ್ರಹ್ಮಾನ್ ಸಿದ್ದೀಕಿ ಮತ್ತು ಸೈಯದ್ ಯೂಸುಫ್ ನಾಲಬಂದ್ ಅವರನ್ನು ಬಂಧಿಸಿದ ಪೊಲೀಸರು ಇವರನ್ನು ಭಯೋತ್ಪಾದನಾ ಸಂಚಿನಲ್ಲಿ ಸಿಲುಕಿಸಲು ಹರಸಾಹಸ ಪಟ್ಟರು. ಖಾಲಿ ಹಾಳೆಗಳ ಮೇಲೆ ಸಹಿ ಹಾಕಿಸಿಕೊಂಡರು. ಬಲವಂತವಾಗಿ ತಪ್ಪೊಪ್ಪಿಗೆ ಹೇಳಿಕೆಗೆ ಸಹಿ ಹಾಕಿಸಿಕೊಂಡರು. ಆದರೂ ಈ ಸುಳ್ಳು ಸೃಷ್ಟಿತ ಸಾಕ್ಷಾಧಾರಗಳೆಲ್ಲ ನ್ಯಾಯಾಲಯದಲ್ಲಿ ವಿಚಾರಣೆ ನಡೆದಾಗ ನಿಲ್ಲುವುದಿಲ್ಲ. ನ್ಯಾಯಾಧೀಶರಿಂದ ಉಗಿಸಿಕೊಳ್ಳಬೇಕಾಗುತ್ತದೆ ಎಂದು ಖಾತ್ರಿಯಾದ ನಂತರ ಬಿಡುಗಡೆ ಮಾಡಿದರು. ಆದರೆ ಸಿದ್ದೀಕಿ ಮತ್ತು ನಾಲಬಂದ್ ಅವರ ಅಸ್ವಸ್ಥಗೊಂಡ ಬದುಕಿನ ಎಳೆಗಳನ್ನು ಮತ್ತೆ ಸರಿಪಡಿಸುವವರ್ಯಾರು?
  
ಆರು ತಿಂಗಳ ಹಿಂದೆ ‘‘ಭಾರೀ ಭಯೋತ್ಪಾದಕ ಸಂಚು ಬಯಲು’’ ಪ್ರಹ್ಲಾದ ಜೋಶಿ, ವಿಶ್ವೇಶ್ವರ ಭಟ್ಟ, ಪ್ರತಾಪಸಿಂಹ, ಸಂಕೇಶ್ವರ ಮುಂತಾದವರ ಹತ್ಯೆಗೆ ಪಿತೂರಿ ಎಂದೆಲ್ಲ ಪೊಲೀಸರು ಮಾಧ್ಯಮಗಳಿಗೆ ತಿಳಿಸಿದರು. ಮಾಧ್ಯಮಗಳಲ್ಲಿ ಅದರಲ್ಲೂ ಟಿವಿ ಚಾನೆಲ್‌ಗಳಲ್ಲಿ ಅತಿರಂಜಿತ ಅಂತೆಕಂತೆಗಳ ತನಿಖಾ ವರದಿಗಳು ಪ್ರಕಟವಾದವು. ಸಿದ್ದೀಕಿಯೇ ಈ ಸಂಚಿನ ಸೂತ್ರಧಾರ ಎಂದು ಹೇಳಿದರು. ಆ‘‘ಸೂತ್ರಧಾರ’’ನ ಆರೋಪ ಸಾಬೀತು ಪಡಿಸಲಾಗದೆ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಪೊಲೀಸರು ಯಾರ ಒತ್ತಡಕ್ಕೆ ಮಣಿದು ಈ ಸಂಚಿನ ಕತೆ ಕಟ್ಟಿದರು? ಇದಕ್ಕೆ ಉತ್ತರಬೇಕಾಗಿದೆ.
ಈ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾದಾಗ ನಾನು ಹುಬ್ಬಳ್ಳಿಯಲ್ಲಿದ್ದೆ. ಸ್ನೇಹಿತರೊಟ್ಟಿಗೆ ಸಿದ್ದೀಕಿ ಮನೆಗೆ ಹೋಗಿ ವಿಚಾರಿಸಿದ್ದೆ. ಮನೆಯ ಅಕ್ಕಪಕ್ಕದ ಹಿಂದೂ-ಮುಸಲ್ಮಾನ ಕುಟುಂಬಗಳ ಎಲ್ಲರನ್ನೂ ಮಾತಾಡಿಸಿದ್ದೆ. ಸಿದ್ದೀಕಿಯಂಥ ಸಂಭಾವಿತ ಹುಡುಗನ ಮೇಲೆ ಇಂಥ ಆರೋಪ ಬಂದಿರುವ ಬಗ್ಗೆ ಎಲ್ಲರೂ ಆತಂಕಭರಿತ ಅಚ್ಚರಿ ವ್ಯಕ್ತಪಡಿಸಿದ್ದರು. ‘‘ಅವನು ಅಂಥವನಲ್ರಿ’’ ಎಂದು ಎಲ್ಲರೂ ಹೇಳಿದ್ದರು. ಬಿಜೆಪಿಗೆ ತನ್ನ ಹಾರರ್ ಮುಚ್ಚಿಕೊಳ್ಳಲು ಮತ್ತೆ ಅಧಿಕಾರಕ್ಕೆ ಬರಲು ಇಂಥದೊಂದು ಸುಳ್ಳು ಪ್ರಕರಣದ ಸೃಷ್ಟಿ ಬೇಕಾಗಿತ್ತು ಎಂದು ಆಗಲೇ ನಾನು ಇದೇ ಅಂಕಣದಲ್ಲಿ ಬರೆದಿದ್ದೆ.
ಖಚಿತ, ಸೂಕ್ತ ಸಾಕ್ಷಾಧಾರಗಳಿಲ್ಲದೆ ಸಿದ್ದೀಕಿ ಸೇರಿ ಹನ್ನೊಂದು ಮಂದಿ ಮುಸ್ಲಿಂ ಯುವಕರನ್ನು ಏಕಾಏಕಿ ಬಂಧಿಸಲಾಯಿತು. ಪೊಲೀಸರು ತಯಾರಿಸಿದ ಮೊದಲ ಮಾಹಿತಿ ವರದಿ (ಎಫ್‌ಐಆರ್) ಸಂಪೂರ್ಣ ಅಂತೆಕಂತೆಗಳ ಕತೆಯಾಗಿತ್ತು. ಇವರೆಲ್ಲರನ್ನು ಒಂದು ತಿಂಗಳ ಕಾಲ ಪೊಲೀಸರು ತಮ್ಮ ವಶದಲ್ಲಿಟ್ಟುಕೊಂಡು ಐದು ತಿಂಗಳ ಕಾಲ ಜೈಲಿನಲ್ಲಿಟ್ಟು ಕಸರತ್ತು ನಡೆಸಿದರೂ ಆರೋಪ ಸಾಬೀತಾಗಲಿಲ್ಲ. ಕೊನೆಗೆ ಬೆಂಗಳೂರಿನ ಪೊಲೀಸ್ ಆಯುಕ್ತರು ಮುಖ ಸಪ್ಪಗೆ ಮಾಡಿ ‘‘ಹೌದು, ಸಂಚಿನ ಯಾವುದೇ ನಿರ್ದಿಷ್ಟ ಸುಳಿವಿಲ್ಲ’’ ಎಂದು ಒಪ್ಪಿಕೊಳ್ಳಬೇಕಾಯಿತು. ಇದಕ್ಕಿಂತ ನಾಚಿಕೆಗೇಡಿನ ಪ್ರಸಂಗ ಇನ್ನೊಂದಿಲ್ಲ. ಕರ್ನಾಟಕದ ಪೊಲೀಸ್ ಇತಿಹಾಸಕ್ಕೆ ಇದೊಂದು ಕಪ್ಪು ಚುಕ್ಕೆಯಾಗಿದೆ.
ಹನ್ನೊಂದು ಮಂದಿ ತರುಣರನ್ನು ಆರು ತಿಂಗಳ ಕಾಲ ಜೈಲಿಗೆ ಹಾಕಿ ಯಾವುದೇ ಖಚಿತ ಸಾಕ್ಷಾಧಾರಗಳನ್ನು ಒದಗಿಸಲಾಗದಿದ್ದರೆ ಅದು ಮಾನವ ಹಕ್ಕು ಉಲ್ಲಂಘನೆಯ ಪ್ರಕರಣ ಎಂದು ಸಾಬೀತಾಗುತ್ತದೆ. ಸಿದ್ದೀಕಿ ಮತ್ತು ನಾಲಬಂದ್ ರನ್ನು ಬಿಡುಗಡೆ ಮಾಡಿದ ಮಾತ್ರಕ್ಕೆ ಪೊಲೀಸರು ಉತ್ತರ ನೀಡದೇ ತಪ್ಪಿಸಿಕೊಳ್ಳುವಂತಿಲ್ಲ. ಗೃಹ ಸಚಿವ ಅಶೋಕ್ ಕೂಡ ಈ ಲೋಪಕ್ಕೆ ಉತ್ತರಿಸಬೇಕಾಗುತ್ತದೆ. ಪೊಲೀಸರು ಹೇಳಿದ ಅಂತೆಕಂತೆಯ ಕಟ್ಟುಕತೆಗಳನ್ನು ದೊಡ್ಡದಾಗಿ ಪ್ರಕಟಿಸಿದ ಮಾಧ್ಯಮಗಳೂ ಈಗ ಹೊಣೆಯಿಂದ ಜಾರಿಕೊಳ್ಳುವಂತಿಲ್ಲ. ಮಾಧ್ಯಮಗಳಲ್ಲಿ ನುಸುಳಿರುವ ಬಜರಂಗಿಗಳ ಕಿವಿ ಹಿಂಡಬೇಕಾಗಿದೆ.
ಒಂದು ಜನ ಸಮುದಾಯದ ಬಗ್ಗೆ ಪೂರ್ವಗ್ರಹ ಇರಿಸಿಕೊಂಡಿರುವ ಪೊಲೀಸರು ಹಾಗೂ ಮಾಧ್ಯಮಗಳು ಮನುವಾದಿಗಳು ತಮ್ಮ ಮೂಗಿನ ನೇರಕ್ಕೆ ಇಂಥ ಸುದ್ದಿ ಪ್ರಕಟಿಸಿ ರಾಷ್ಟ್ರದ ಭಾವೈಕ್ಯತೆಗೆ ಧಕ್ಕೆ ತರುತ್ತಿದ್ದಾರೆ. ಸಿದ್ದೀಕಿಯಂಥ ಭಾರತೀಯ ತರುಣರು ‘‘ನಾನು ಮುಸಲ್ಮಾನನಾಗಿ ಜನಿಸಿದ್ದು ತಪ್ಪೆ?’’ ಎಂದು ನೋವಿನಿಂದ ಪ್ರಶ್ನಿಸುವ ಸನ್ನಿವೇಶವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕಳೆದ ಆರು ತಿಂಗಳು ಜೈಲಿನ ಅಸಹನೀಯ ಒಂಟಿತನದಲ್ಲಿ ಸಿದ್ದೀಕಿ ಅಂಥವರ ಬದುಕು ವ್ಯರ್ಥವಾಯಿತಲ್ಲ ಅದನ್ನು ಯಾರು ತುಂಬಿಕೊಡುತ್ತಾರೆ? ಇದಕ್ಕೆ ಯಾರು ಹೊಣೆ? ಈ ಲೋಪಕ್ಕಾಗಿ ಅಧಿಕಾರದಲ್ಲಿ ರುವವರು ಕನಿಷ್ಠ ಕ್ಷಮೆ ಯನ್ನಾದರೂ ಯಾಚಿಸ ಬೇಕಲ್ಲವೆ?
ಅಲ್ಪಸಂಖ್ಯಾತರು ರಾಷ್ಟ್ರದ ಮುಖ್ಯ ವಾಹಿನಿಗೆ ಬರಬೇಕೆಂದು ಧಾರಾಳವಾಗಿ ಉಪದೇಶ ನೀಡುವ ಪಂಡಿತರು ನಮ್ಮ ನಡುವೆ ಸಾಕಷ್ಟಿದ್ದಾರೆ. ಆದರೆ ಒಬ್ಬ ಪತ್ರಕರ್ತನಾಗಿ ಮುಖ್ಯವಾಹಿನಿಯಲ್ಲೇ ಇದ್ದ ಸಿದ್ದೀಕಿಯಂಥ ಯುವಕರನ್ನು ಭಯೋತ್ಪಾದಕ ಎಂಬ ಹಣೆಪಟ್ಟಿ ಕಟ್ಟಿ ಜೈಲಿಗೆ ತಳ್ಳಿದರಲ್ಲ ಇದಕ್ಕೇನು ಕಾರಣ? ಇಡೀ ಮುಸ್ಲಿಂ ಸಮುದಾಯವನ್ನೇ ಸಂಶಯಿಸಿ, ಪ್ರತ್ಯೇಕಿಸಿ ಮೂಲೆಗೆ ತಳ್ಳುವ ಆರೆಸ್ಸೆಸ್ ಹುನ್ನಾರಕ್ಕೆ ತಕ್ಕಂತೆ ಪ್ರಭುತ್ವ ನಂಗಾನಾಚ್ ಮಾಡುತ್ತಿರುವರಿಂದಲೇ ಇಂಥ ಅಪಚಾರಗಳು ನಡೆಯುತ್ತಿವೆ ಅಲ್ಲವೆ? ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಇಂಥ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಲ್ಲವೆ?
ಮುಸಲ್ಮಾನರು ಈ ದೇಶದ ಮುಖ್ಯವಾಹಿನಿ ಯಲ್ಲೇ ಇದ್ದಾರೆ. ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಹೆಗಲಿಗೆ ಹೆಗಲು ಕೊಡುತ್ತಿದ್ದಾರೆ. ಸಂಗೀತ, ಸಾಹಿತ್ಯ, ಸಿನೆಮಾ, ಕಟ್ಟಡ ನಿರ್ಮಾಣ, ಗ್ಯಾರೇಜು, ಹೊಟೇಲ್, ಒಕ್ಕಲುತನ, ವಿಜ್ಞಾನ ಹೀಗೆ… ಎಲ್ಲ ಕ್ಷೇತ್ರಗಳ್ಲಿ ಉಳಿದವರಿಗೆ ಸರಿಸಾಟಿಯಾದಂಥ ಕೊಡುಗೆಯನ್ನು ಮುಸಲ್ಮಾನರು ನೀಡಿದ್ದಾರೆ.
ಬಿಸ್ಮಿಲ್ಲಾ ಖಾನರ ಶಹನಾಯಿ, ಶರೀಫ್ ಸಾಹೇಬರ ಹಾಡು, ಮುಹಮ್ಮದ್ ರಫಿ ಕಂಠ ಕೇಳಿದ ಯಾರೂ ಮುಸಲ್ಮಾನರನ್ನು ಸಂಶಯದಿಂದ ನೋಡುವುದಿಲ್ಲ. ಆದರೆ ಮುಸ್ಲಿಂ ಸಮುದಾಯವನ್ನು ಮುಖ್ಯವಾಹಿನಿಯಿಂದ ಪ್ರತ್ಯೇಕಿಸಿ ತನ್ನ ‘ಹಿಂದುತ್ವ’ ಅಜೆಂಡಾ ಜಾರಿಗೆ ತರಲು ಹೊರಟವರು ಇಂಥ ಮಸಲತ್ತು ನಡೆಸುತ್ತಾರೆ. ಕರ್ನಾಟಕದಲ್ಲಿ ಇಂಥ ಪಾತಕಿಗಳೇ ಅಧಿಕಾರದಲ್ಲಿರುವುದರಿಂದ ಇಂಥ ಆತಂಕಕಾರಿ ಘಟನೆಗಳ ನಡೆಯುತ್ತಿವೆ.
ಮತೀವುರ್ರಹ್ಮಾನ್ ಸಿದ್ದೀಕಿ ಬಿಡುಗಡೆಯಾಗಿ ಬಂದಿದ್ದಾರೆ. ಇವರನ್ನು ಭಯೋತ್ಪಾದಕರೆಂದು ಕರೆದ ಪೊಲೀಸರು ಮತ್ತು ಮಾಧ್ಯಮಗಳು ತಮ್ಮ ತಪ್ಪಿಗೆ ಬೇಷರತ್ ಕ್ಷಮೆಯಾಚಿಸಬೇಕು. ಈ ನೊಂದ ಜೀವಿಗಳಿಗೆ ಸೂಕ್ತವಾದ ಪುನರ್ವಸತಿ ಕಲ್ಪಿಸಬೇಕು. ಇನ್ನು ಮುಂದೆ ಹೀಗಾದಾಗ ಮೀಡಿಯಾಗಳು ತಮ್ಮ ನವರಂಧ್ರಗಳನ್ನು ಮುಚ್ಚಿಕೊಂಡು ಸತ್ಯಸಂಗತಿಗಳನ್ನು ಮಾತ್ರ ಪ್ರಕಟಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಗಾಂಧಿ ಹಂತಕ ಪರಿವಾರಕ್ಕೆ ಸೇರಿದವರಿಗೆ ಮತಹಾಕುವ ಮುನ್ನ ಜನತೆ ಸಾವಿರ ಸಾವಿರ ಬಾರಿ ಯೋಚಿಸಬೇಕು. ಬಿಜೆಪಿಗೆ ರಾಜಕೀಯ ಕಾರಣಗಳಿಗಾಗಿ ಹಿಂದೂ ಓಟ್ ಬ್ಯಾಂಕ್ ನಿರ್ಮಾಣಕ್ಕಾಗಿ ಇಂಥ ಕಲ್ಪಿತ ಭಯೋತ್ಪಾದನೆ ಪ್ರಚಾರ ಅಗತ್ಯವಾಗಿರಬಹುದು. ತನ್ನ ಹಗರಣಗಳನ್ನು ಮುಚ್ಚಿಕೊಳ್ಳಲು ಜನರ ಗಮನವನ್ನು ಬೇರೆಡೆ ಸೆಳೆಯಲು ಇಂಥ ಕಟ್ಟುಕತೆ ಅದಕ್ಕೆ ಅನಿವಾರ್ಯವಾಗಿರಬಹುದು. ಆದರೆ ಪೊಲೀಸರು ಅಧಿಕಾರದಲ್ಲಿರುವವರ ಸೂತ್ರದ ಗೊಂಬೆಯಂತೆ ಕುಣಿಯಬಾರದು. ರಾಜಕಾರಣಿಗಳ ಆಟಕ್ಕೆ ದಾಳಗಳಾಗಬಾರದು. ಒಂದು ಇಡೀ ಸಮುದಾಯವನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಹುನ್ನಾರ ನಡೆಸಬಾರದು. ಇಂಥ ಘಟನೆಗಳು ಪುನರಾವರ್ತನೆಯಾಗತೊಡಗಿದರೆ ಜನ ಈ ವ್ಯವಸ್ಥೆಯ ಬಗ್ಗೆ ನಂಬಿಕೆ ಕಳೆದುಕೊಳ್ಳುತ್ತಾರೆ.
ಭಾರತ ಹಿಂದು ರಾಷ್ಟ್ರವಲ್ಲ. ಹಿಂದು ರಾಷ್ಟ್ರವಾಗಲು ಸಾಧ್ಯವೂ ಇಲ್ಲ. ಇದು ಜಾತ್ಯತೀತ ರಾಷ್ಟ್ರ. ಸಂವಿಧಾನವೇ ನಮ್ಮ ದಾರಿದೀಪ. ಆ ಬೆಳಕಿನಲ್ಲಿ ಸಾಗಲು ಅಲ್ಪಸಂಖ್ಯಾತರೂ ಹಿಂಜರಿಯಬೇಕಾಗಿಲ್ಲ. ತೊಗಾಡಿಯಾ, ಮುತಾಲಿಕ್, ಮೋದಿಯವರಂಥವರು ನಮಗೆ ರಾಷ್ಟ್ರಭಕ್ತಿಯ ಸರ್ಟಿಫಿಕೆಟ್ ನೀಡಬೇಕಾಗಿಲ್ಲ. ಈ ನೆಲದಲ್ಲಿ ಇದ್ದು ನಾವು ಬಸಿದ ಬೆವರು ರಕ್ತಗಳೇ ನಾವು ಭಾರತೀಯರೆಂಬುದಕ್ಕೆ ಸಾಕ್ಷಿಯಾಗಿದೆ. 
-ವಾರ್ತಾಭಾರತಿ ಅಂಕಣ 
Please follow and like us:
error