ಅಣ್ಣಾ ಚಳವಳಿಯ ರಾಜಕೀಯ ಲಾಭ ಬಿಜೆಪಿಗೆ- ಸನತ್‌ ಕುಮಾರ್‌ ಬೆಳಗಲಿ

ಅಣ್ಣಾ ಹಝಾರೆ ಗೆಲುವಿನ ಬಾವುಟ ಹಾರಿಸಿದ್ದಾರೆ. ಜನಲೋಕಪಾಲ ಮಸೂದೆಯ ಮೂರು ವಿವಾದಾತ್ಮಕ ಅಂಶಗಳಿಗೆ ಸಂಸತ್ತು ಸಮ್ಮತಿ ನೀಡಿದೆ. ಪಕ್ಷಭೇದ ಮರೆತು ಎಲ್ಲ ಸದಸ್ಯರು ಒಮ್ಮತದ ನಿಲುವು ತಾಳಿದ್ದಾರೆ. ಈ ವಿಧೇಯಕ ಕಾನೂನು ರೂಪ ಪಡೆದು ಜನಲೋಕಪಾಲ ಅಸ್ತಿತ್ವಕ್ಕೆ ಬಂದ ನಂತರ ದೇಶದಲ್ಲಿ ಭ್ರಷ್ಟಾಚಾರ ಸಂಪೂರ್ಣವಾಗಿ ತೊಲಗಿ ಹೋಗುತ್ತದೆ ಎಂಬ ಭ್ರಮೆ ಯಾರಿಗೂ ಇಲ್ಲ. ಸ್ವತಃ ಅಣ್ಣಾ ಹಝಾರೆ ಯವರಿಗೂ ಇಲ್ಲ. ಲಂಚ ಪಡೆಯುವಾಗ ಸಿಕ್ಕಿ ಬೀಳುವ ಸರಕಾರಿ ನೌಕರರನ್ನು, ರಾಜಕಾರಣಿ ಗಳನ್ನು ಶಿಕ್ಷಿಸುವುದಕ್ಕೆ ಮಾತ್ರ ಇದರಿಂದ ಸಾಧ್ಯವಾಗುತ್ತದೆ. ಯಾರ ಕಣ್ಣಿಗೂ ಕಾಣದೇ ನಡೆ ಯುವ ಭ್ರಷ್ಟಾಚಾರ ಎಂದಿನಂತೆ ಮುಂದುವರಿ ಯುತ್ತದೆ.ಈ ಹೋರಾಟದ ಪರಿಣಾಮವಾಗಿ ಇಡೀ ದೇಶದಲ್ಲಿ, ಅದರಲ್ಲೂ ಮಧ್ಯಮವರ್ಗದಲ್ಲಿ ಜಾಗೃತಿ ಮೂಡಿದೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಇದರಿಂದ ಭ್ರಷ್ಟಾಚಾರ ತೊಲಗುತ್ತದೋ, ಬಿಡುತ್ತದೋ…
ಆದರೆ ರಾಜಕೀಯವಾಗಿ ಬಿಜೆಪಿಗೆ ಅನುಕೂಲವಾಗುತ್ತದೆ ಎಂಬುದು ಮಾತ್ರ ನೂರಕ್ಕೆ ನೂರರಷ್ಟು ಸತ್ಯ. ಅಣ್ಣಾ ಹಝಾರೆಯವರ ಭ್ರಷ್ಟಾಚಾರ ವಿರೋಧಿ ಚಳವಳಿ ಕೇಂದ್ರದ ಯುಪಿಎ ಸರಕಾರದ ನೇತೃತ್ವ ವಹಿಸಿರುವ ಕಾಂಗ್ರೆಸ್‌ನ್ನು ಗುರಿಯಾಗಿಸಿ ಕೊಂಡಿತ್ತು. ಹೀಗಾಗಿ ಇಡೀ ಚಳವಳಿಯಲ್ಲಿ ಕಾಂಗ್ರೆಸ್ ವಿರೋಧಿ ಘೋಷಣೆ, ಭಾಷಣಗಳು ಎದ್ದು ಕಾಣುತ್ತಿದ್ದವು. ಈ ಕಾಂಗ್ರೆಸ್ ವಿರೋಧಿ ಅಲೆಯಿಂದ ಅತ್ಯಂತ ಹೆಚ್ಚು ಲಾಭ ಪಡೆಯುವ ಪಕ್ಷವೆಂದರೆ ಬಿಜೆಪಿ. ಅಣ್ಣಾ ಹಝಾರೆ ಮತ್ತು ಅವರ ಬೆಂಬಲಿಗರು ಪಕ್ಷವನ್ನು ಕಟ್ಟಿಕೊಂಡು ಚುನಾವಣಾ ಕಣಕ್ಕೆ ಇಳಿಯುವುದಿಲ್ಲ. ಆಗ ಜನರ ಕಣ್ಣಿಗೆ ನೇರವಾಗಿ ಗೋಚರಿಸುವುದು ಕಾಂಗ್ರೆಸ್ ಎದುರಾಳಿಯಾದ ಬಿಜೆಪಿ.
ಅಂತಲೇ ಅಣ್ಣಾ ಚಳವಳಿಯಲ್ಲೂ ಕೂಡ ಪರಂಪರಾಗತವಾಗಿ ಬಿಜೆಪಿಯನ್ನೇ ಬೆಂಬಲಿಸುತ್ತ ಬಂದ ಮೇಲುಜಾತಿ-ಮೇಲುವರ್ಗಗಳ ನವ ಮಧ್ಯಮ ವರ್ಗದ ಯುವಕರು ಹೆಚ್ಚಾಗಿ ಕಂಡು ಬರುತ್ತಿದ್ದಾರೆ.ಅಣ್ಣಾ ಹಝಾರೆ ಚಳವಳಿ ತೀವ್ರ ಸ್ವರೂಪ ಪಡೆದಿದ್ದಾಗ ನನ್ನ ಮೊಬೈಲ್‌ಗೆ ಒಂದು ಮೆಸೇಜು ಬಂತು. ಬ್ರಾಹ್ಮಣಿಸಂ ಬಿಕ್ಕಟ್ಟಿನಲ್ಲಿದೆ. ಅಣ್ಣಾ ಹಝಾರೆಯವರನ್ನು ಅದು ಬಳಸಿಕೊಳ್ಳುತ್ತಿದೆ. ಮಂಡಲ್ ಆಯೋಗದ ವರದಿಯನ್ನು ವಿರೋಧಿಸಿದವರು. ನಂತರ ಕಮಂಡಲ ಹಿಡಿದು ಹೊರಟವರು ಹಝಾರೆ ಚಳವಳಿಯ ಮುಂಚೂಣಿಯಲ್ಲಿದ್ದಾರೆ. ಈ ಪಟ್ಟಭದ್ರ ಹಿತಾಸಕ್ತಿಗಳು ಭಾರತ ಸಂವಿಧಾನದ ಮೇಲೆ ಮತ್ತು ಸಂಸ ದೀಯ ಜನತಂತ್ರದ ಮೇಲೆ ಸವಾರಿ ಮಾಡಲು ಹೊರಟಿವೆ. ನಾವು ಎಚ್ಚರವಾಗಿರಬೇಕು.
ಹೀಗಂತ ನನ್ನ ಮೊಬೈಲ್‌ಗೆ ಎಸ್‌ಎಂಎಸ್ ಬಂದಿದೆ. ಕಳುಹಿಸಿದವರು ಹೆಸರಾಂತ ವಕೀಲ ಸಿ.ಎಸ್.ದ್ವಾರಕಾನಾಥ್. ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಅವರು ಸಂಘ ಪರಿವಾರದ ಆಸೆ-ಆಮಿಷ-ಒತ್ತಡಗಳಿಗೆ ಮಣಿಯದೆ ಮತ್ತು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರಿಗೆ ಸೊಪ್ಪು ಹಾಕದೇ ಅಧಿಕಾರ ತ್ಯಜಿಸಿ ಸ್ವಾಭಿಮಾನದಿಂದ ಹೊರಗೆ ಬಂದವರು. ಹೊರಗೆ ಬರುವಾಗ ಸಮಗ್ರವಾದ ವರದಿಯನ್ನು ನೀಡಿ ಬಂದರು. ಇಂಥವರು ಇಂಥದೊಂದು ಮೆಸೇಜು ಕಳುಹಿಸುತ್ತಾರೆಂದರೆ ಅದನ್ನು ನಾವೆಲ್ಲ ಗಂಭೀರವಾಗಿ ತೆಗೆದುಕೊಳ್ಳದೇ ಇರಲಿಕ್ಕಾಗುವುದಿಲ್ಲ. ಯಾಕೆಂದರೆ ಅವರು ಪ್ರಸ್ತಾಪಿಸಿರುವ ವಿಷಯ ನಾವೆಲ್ಲ ಆತಂಕ ಪಡುವಂಥದ್ದು. ಸಂಘ ಪರಿವಾರದ ಹಿಂದುತ್ವ ಮುಸುಕಿನ ಬ್ರಾಹ್ಮಣವಾದ ಮಾತ್ರವಲ್ಲ, ಬಂಡವಾಳ ವಾದವೂ ಬಿಕ್ಕಟ್ಟಿನ ಸುಳಿಗೆ ಸಿಲುಕಿದೆ. ಹೀಗೆ ಬಿಕ್ಕಟ್ಟಿಗೆ ಸಿಲುಕಿದಾಗಲೆಲ್ಲ, ಅಣ್ಣಾ ಹಝಾರೆ ಅಂಥವರನ್ನು ತನ್ನ ಉಳಿವಿಗಾಗಿ ಅದು ಸೃಷ್ಟಿಸುತ್ತದೆ.
ದ್ವಾರಕಾನಾಥ ಅವರ ಮೆಸೇಜು ಬಂದಾಗ ನಾನು ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿದ್ದೆ. ಅಂದು ಹಝಾರೆಯನ್ನು ಬಂಧಿಸಿದ ಎರಡನೆ ದಿನ. ಈ ಮರಾಠಿ ಪ್ರದೇಶದಲ್ಲೂ ಭಗವಾಧ್ವಜ ಹಿಡಿದ ಶಿವಸೇನೆ, ಆರೆಸ್ಸೆಸ್, ಬಿಜೆಪಿ ಕಾರ್ಯಕರ್ತರೇ ಎದ್ದು ಕಾಣುತ್ತಿದ್ದರು. ಆದರೆ ಬರೀ ಇವರೇ ಇರಲಿಲ್ಲ. ಆ ಜನಜಂಗುಳಿ ಯಲ್ಲಿ 90ರ ನಂತರದ ಕಾರ್ಪೊರೇಟ್ ಮಧ್ಯಮವರ್ಗದ ಜನರು ಕಾಣುತ್ತಿದ್ದರು.
ಭ್ರಷ್ಟಾಚಾರ ವಿರುದ್ಧ ದನಿಯೆತ್ತಿದ ಹಝಾರೆ ವ್ಯಕ್ತಿತ್ವ ಮತ್ತು ಪ್ರಾಮಾಣಿಕತೆ ಬಗ್ಗೆ ಚರ್ಚೆ ಅನಗತ್ಯ. ಅವರು ಕೋಮುವಾದಿ ಎಂದು ಹೇಳಲು ಆಗುವುದಿಲ್ಲ. ಆರೆಸ್ಸೆಸ್ ಪ್ರಭಾವದಿಂದ ತಪ್ಪಿಸಿಕೊಳ್ಳಲು ಅವರು ಚಡಪಡಿಸುತ್ತಿದ್ದರು ಎಂದು ತಿಳಿದು ಬಂದಿದೆ. ಆದರೆ ಲೋಕಸಭೆಯಲ್ಲಿ ಲಾಲೂ ಪ್ರಸಾದ ಯಾದವ್ ಹೇಳಿದಂತೆ ಈ ಚಳವಳಿಯನ್ನು ಬಳಸಿಕೊಳ್ಳಲು ಸಂಘ ಪರಿವಾರ ಷಢ್ಯಂತ್ರ ರೂಪಿಸಿತ್ತು. ಆರೆಸ್ಸೆಸ್‌ನ ಸೈದ್ಧಾಂತಿಕ ಹಿನ್ನಲೆ ಹೊಂದಿರುವ ಗೋವಿಂದಾಚಾರ್ಯ ಆಗಾಗ ವೇದಿಕೆಯಲ್ಲಿ ಕಾಣುತ್ತಿದ್ದರು. ಅವರ ಸುತ್ತ ಸೇರಿದವರೆಲ್ಲ ಮೀಸಲಾತಿ ವಿರೋಧಿಗಳು, ಕೋಮುವಾದಿಗಳು, ಉದ್ಯಮ ಪತಿಗಳು, ಲೂಟಿಕೋರ ಮಠಾಧೀಶರು, ಪ್ರಚಾರಪ್ರಿಯ ಕೋಡಂಗಿಗಳು.
ಬೆಂಗಳೂರಿನಲ್ಲಿ ನಡೆದ ಹಝಾರೆ ಪರ ಸತ್ಯಾಗ್ರಹದಲ್ಲಿ ಯಡಿಯೂರಪ್ಪನವರು ಭಾಗವಹಿಸಲು ಹೊರಟಿದ್ದರು. ಆದರೆ ಸಂತೋಷ್ ಹೆಗ್ಡೆ ಅದಕ್ಕೆ ಅವಕಾಶ ನೀಡಲಿಲ್ಲ. ಆದರೂ ರೇಣುಕಾ ಚಾರ್ಯ, ಉಮೇಶ್ ಕತ್ತಿ ಅಂಥ ಚೇಲಾಗಳು ನಿರಶನದಲ್ಲಿ ಪಾಲ್ಗೊಂಡರು.
70ರ ದಶಕದಲ್ಲಿ ನಡೆದ ಜೆ.ಪಿ.ಚಳವಳಿ ಎಲ್ಲಿಂದ, ಹೇಗೆ ಆರಂಭವಾಗಿ ಎಲ್ಲಿಗೆ ತಲುಪಿತು. ಯಾರ್ಯಾರನ್ನು ಬೆಳೆಸಿತು ಎಂಬ ಸಂಗತಿ ಗೊತ್ತಿರುವ ಎಲ್ಲರಿಗೂ ದ್ವಾರಕಾನಾಥ ರಂತೆ ಆತಂಕ ಉಂಟಾಗುವುದು ಸಹಜ. ಜಯ ಪ್ರಕಾಶ ನಾರಾಯಣ ಸ್ವಾತಂತ್ರ್ಯ ಚಳವಳಿಯಲ್ಲಿ ಅಗ್ರ ಪಾತ್ರವಹಿಸಿದವರು. ಗಾಂಧೀಜಿಗೆ ಅತ್ಯಂತ ಆಪ್ತರಾಗಿದ್ದವರು. ಇದೆಲ್ಲಕ್ಕಿಂತ ಹೆಚ್ಚಾಗಿ ಸಮಾಜವಾದಿ ಹಿನ್ನಲೆಯುಳ್ಳವರು. ಸಾಕಷ್ಟು ಓದಿಕೊಂಡವರು. ಇಂತಹ ಮಹಾಚೇತನವನ್ನೇ ದಾರಿ ತಪ್ಪಿಸಿದ ಪ್ರಳಯಾಂತಕರ ಬಗ್ಗೆ ತಿಳಿದವರಿಗೆ ಹಝಾರೆ ಚಳವಳಿಯ ಆಕಾರ-ವಿಕಾರಗಳ ಬಗ್ಗೆ ಭೀತಿ ಉಂಟಾಗುವುದು ಸಾಮಾನ್ಯ.
1974-75ರಲ್ಲಿ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯ ಸರ್ವಾಧಿಕಾರದ ವಿರುದ್ಧ ಸಂಪೂರ್ಣ ಕ್ರಾಂತಿ ಚಳವಳಿಗೆ ಕರೆ ನೀಡಿದ್ದ ಜೆ.ಪಿ., ಚುನಾಯಿತ ಪ್ರತಿನಿಧಿಗಳು ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಡುವಂತೆ ಬಲವಂತ ಮಾಡಬೇಕು ಎಂದು ಜನರಿಗೆ ಕರೆ ನೀಡಿದರು. ಭ್ರಷ್ಟ ಸರಕಾರದ ವಿರುದ್ಧ ಸಿಡಿದೇಳುವಂತೆ, ಸರಕಾರಿ ನೌಕರರನ್ನು, ಪೊಲೀಸರನ್ನು ಮತ್ತು ಸೈನಿಕರನ್ನು ಪ್ರಚೋದಿಸಿದರು. ಈಗ ಅಣ್ಣಾ ಹಝಾರೆಯವರು ಸಂಸದರಿಗೆ ಘೇರಾವ್ ಹಾಕುವಂತೆ ಕರೆ ನೀಡಿದ್ದು ಕೂಡ ಆ ಜೆ.ಪಿ. ದಿನಗಳನ್ನು ನೆನಪಿಗೆ ತಂದಿತು. ಹೆಸರಿಗೆ ಪಕ್ಷಾತೀತವಾಗಿದ್ದ ಆ ಚಳವಳಿ ಯಲ್ಲಿ ಗಾಂಧಿ ಹಂತಕ ಪರಿವಾರಕ್ಕೆ ಸೇರಿದವರು ಮುಂಚೂಣಿಯಲ್ಲಿದ್ದರು. ಆಗ ಕಮ್ಯುನಿಸ್ಟರು ಮತ್ತು ಕೆಲ ಪ್ರಗತಿಪರರು ಆಕ್ಷೇಪ ವ್ಯಕ್ತ ಪಡಿಸಿದಾಗ, ಜೆ.ಪಿಯಂಥ ಜೆ.ಪಿ.ಯವರೇ, ‘‘ಆರೆಸ್ಸೆಸ್ ಕೋಮುವಾದಿಯಾದರೆ, ನಾನೂ ಕೋಮುವಾದಿ’’ ಎಂಬ ಅಪಾಯಕಾರಿ ಹೇಳಿಕೆ ನೀಡಿದರು.
ಜೆ.ಪಿ ಚಳವಳಿ ಆರಂಭವಾಗುವವರೆಗೆ ಆರೆಸ್ಸೆಸ್ ಇಲ್ಲವೇ ಬಿಜೆಪಿ (ಅಂದಿನ ಜನಸಂಘ) ರಾಷ್ಟ್ರರಾಜಕಾರಣದಲ್ಲಿ ಮುಖ್ಯ ವಾಹಿನಿಯಲ್ಲಿ ಇರಲಿಲ್ಲ. ಗಾಂಧಿ ಹತ್ಯೆಯ ನಂತರ ಈ ಸಂಘಟನೆಗಳನ್ನು ಜನ ದೂರವಿಟ್ಟಿ ದ್ದರು. ಲೋಕಸಭೆಯಲ್ಲೂ ಇವರ ಬಲ ಬೆರಳೆಣಿಕೆಯಷ್ಟಿತ್ತು. ಸಾಮಾಜಿಕ ಮಾನ್ಯತೆಗಾಗಿ ಹಾತೊರೆಯುತ್ತಿದ್ದ ಇವರಿಗೆ ಜೆ.ಪಿ ಚಳವಳಿ ಮರಳುಗಾಡಿನಲ್ಲಿ ಧುಮ್ಮಿಕ್ಕುವ ಜಲಧಾರೆಯಂತೆ ಬಂದು ಬಾಲ ಬಿಚ್ಚಲು ಅವಕಾಶ ನೀಡಿತು. ಆನಂತರ ನಡೆದ ಚುನಾವಣೆಗಳಲ್ಲಿ ಇವರು ಗೆದ್ದು ಬಂದರು. ಕೇಂದ್ರದ ಅಧಿಕಾರಸೂತ್ರವನ್ನು ಹಿಡಿದರು. ಅಧಿಕಾರ ಸಿಕ್ಕ ತಕ್ಷಣ ಸುಮ್ಮನಿರದೆ ತಮ್ಮ ಕರಾಳವಾದ ‘ಹಿಡನ್ ಅಜೆಂಡಾ’ ಜಾರಿಗೆ ತರಲು ಮುಂದಾದರು.
1992ರಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿಯಾಗಿದ್ದ ಕಲ್ಯಾಣ್ ಸಿಂಗ್ ಅವರ ಮೂಲಕ ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿ, ನಂತರ ಅದನ್ನು ಕಾಲಕಸಕ್ಕೆ ಸಮನಾಗಿ ಕಂಡು ಅಯೋಧ್ಯೆಯ ಬಾಬ್ರಿ ಮಸೀದಿಯನ್ನು ನೆಲ ಸಮಗೊಳಿಸಿದರು. ಕೇಂದ್ರದಲ್ಲಿ ಅಧಿಕಾರ ಪಡೆದ ನಂತರ ಗೋ-ಹತ್ಯೆ ನಿಷೇಧ, ಏಕರೂಪ ನಾಗರಿಕ ಸಂಹಿತೆ, ಹಿಂದೂ ಮಂದಿರಗಳ ವಿಮೋಚನೆ, ಮತಾಂತರ….ಹೀಗೆ ಕೆಲಸಕ್ಕೆ ಬಾರದ ವಿವಾದಗಳನ್ನು ಹುಟ್ಟು ಹಾಕಿದರು. ಜನತೆಯ ಜ್ವಲಂತ ಸಮಸ್ಯೆಗಳು ಕಡೆಗಣಿಸಲ್ಪಟ್ಟವು. ಇವರ ಕಾರ್ಯಸೂಚಿಯ ಸುತ್ತ ಜನರನ್ನು ಅಣಿನೆರೆಸಿ ಕಾದಾಟಕ್ಕಿಳಿಸಿದರು. ಇವೆಲ್ಲ ವಿಧ್ವಂಸಕ ಚಟುವಟಿಕೆ ನಡೆಸಲು ಬಲ ಪಡೆದದ್ದು ಜೆ.ಪಿ.ಚಳವಳಿಯಿಂದ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ.
ಈಗಲೂ ಅದೇ ಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಕ್ಕೆ ಬಂದಲ್ಲೆಲ್ಲ ಇವರ ಹಗರಣಗಳು ದುರ್ವಾಸನೆ ಹಬ್ಬಿಸಿವೆ. ಜನ ಇವರನ್ನು ನಂಬುತ್ತಿಲ್ಲ. ರಾಮಮಂತ್ರದ ಪುಂಗಿ ನಡೆಯುತ್ತಿಲ್ಲ. ಈಗ ಮತ್ತೆ ಸಾಮಾಜಿಕ ಮಾನ್ಯತೆ ಪಡೆದು ಅಧಿಕಾರಸೂತ್ರ ಹಿಡಿಯಲು ಹುನ್ನಾರ ನಡೆಸಿದ್ದಾರೆ. ಮೊದಲು ಬಾಬಾ ರಾಮ್‌ದೇವ್ ಮುಂದೆ ಬಿಟ್ಟು ಪ್ರಯೋಗ ಮಾಡಿದರು. ದಿಲ್ಲಿ ಪೊಲೀಸರ ಮಧ್ಯರಾತ್ರಿಯ ಹೊಡೆತಕ್ಕೆ ತತ್ತರಿಸಿದ ರಾಮ್‌ದೇವ್ ಪಲಾಯನ ಮಾಡಿದರು. ಆ ಪ್ರಯೋಗ ವಿಫಲಗೊಂಡ ನಂತರ ಅಣ್ಣಾ ಹಝಾರೆಯ ಚಳವಳಿಯಲ್ಲಿ ತೂರಿಕೊಂಡು ಬೇಳೆ ಬೇಯಿಸಿಕೊಳ್ಳಲು ಯತ್ನಿಸಿದರು.
ಗಾಳಿ ಬಿಟ್ಟಾಗ ತೂರಿಕೊಳ್ಳುವುದು ಇವರ ಜಾಯಮಾನ. ನೇರವಾಗಿ ಜನರ ಮುಂದೆ ಬರುವ ನೈತಿಕ ಬಲ ಇವರಿಗಿಲ್ಲ. ಹಝಾರೆಯವರ ಗಾಂಧಿ ಟೋಪಿಯಡಿಯಲ್ಲಿ ರಕ್ಷಣೆ ಪಡೆಯಲು ಯತ್ನಿಸಿದರು. ಹಝಾರೆಗೂ ಇದು ಗೊತ್ತಿತ್ತು. ಅಂತಲೇ ಅವರು ಎಚ್ಚರದ ಹೆಜ್ಜೆಯಿಡುತ್ತಿದ್ದರು. ಆದರೆ ಆರೆಸ್ಸೆಸ್ ನೇರವಾಗಿ ಮಧ್ಯಪ್ರವೇಶ ಮಾಡದೇ ಬೆಂಗಳೂರಿನ ಭೂಮಾಫಿಯಾಗಳ ಗುರು ರವಿಶಂಕರ್ ಅಂಥವರ ಮೂಲಕ ತಮ್ಮ ಆಟವಾಡುತ್ತಿತ್ತು. ದಿಲ್ಲಿಯ ರಾಮ್‌ಲೀಲಾ ಮೈದಾನದಲ್ಲಿ ಹಝಾರೆ ಜೊತೆಗೆ ರಾಮ್‌ದೇವ್ ಮತ್ತು ಭೂಗಳ್ಳ ರವಿಶಂಕರ್ ಪಾಲ್ಗೊಂಡಿದ್ದರು.. ಇವರನ್ನು ತಡೆಯಲು ಹಝಾರೆಯಿಂದಲೂ ಸಾಧ್ಯವಾಗಲಿಲ್ಲ. ಈ ಕಾವಿಧಾರಿಗಳನ್ನು ಮುಂದಿಟ್ಟುಕೊಂಡು ಸಂಘ ಪರಿವಾರ ಷಡಂತ್ರ ರೂಪಿಸಿತು.
ಅಣ್ಣಾ ಹಝಾರೆಯ ಚಳವಳಿಯಿಂದ ಹೇಗೆ ಲಾಭ ಮಾಡಿಕೊಳ್ಳಬೇಕು ಎಂಬುದರ ಕುರಿತು ಆರೆಸ್ಸೆಸ್ ಮೂರು ದಿನಗಳ ಕಾಲ ಉಜೈನಿಯಲ್ಲಿ ಸಮನ್ವಯ ಬೈಠಕ್‌ವೊಂದನ್ನು ನಡೆಸಿತ್ತು. ಇದರಲ್ಲಿ ಅಡ್ವಾಣಿ, ವೆಂಕಯ್ಯ ನಾಯ್ಡು, ಅನಂತಕುಮಾರ್, ಗಡ್ಕರಿ ಸೇರಿದಂತೆ ಪರಿವಾರದ 40ಕ್ಕೂ ಹೆಚ್ಚು ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಜೆ.ಪಿ ಅಂಥವರನ್ನು ದಾರಿ ತಪ್ಪಿಸಿದವರಿಗೆ ಅಮಾಯಕ ಹಝಾರೆಯವರನ್ನು ಬಲೆಗೆ ಬೀಳಿಸುವುದು ಕಷ್ಟವೇನಲ್ಲ. ಆದರೆ ಇದರಿಂದ ಭಾರತದ ಜಾತ್ಯತೀತ ಜನತಂತ್ರ ಪ್ರಾಣಸಂಕಟ ಅನುಭವಿಸಬೇಕಾಗುತ್ತದೆ. ಹೀಗೆ ಆಗಬಾರದು ಎಂದರೆ ನಾವು ಎಚ್ಚರವಾಗಿರಲೇಬೇಕು.
ಯಾರು ಏನೇ ಹೇಳಲಿ, ದೇಶದಲ್ಲಿ ಕಾಂಗ್ರೆಸ್‌ಗೆ ಪರ್ಯಾಯವಾಗಿ ಕಂಡು ಬರುತ್ತಿರುವುದು ಬಿಜೆಪಿ ಮಾತ್ರ. ಮೂರನೆ ರಂಗ ಎಂಬುದು ಕೇವಲ ಹೆಸರಿಗೆ ಮಾತ್ರವಿದೆ. ಕಾಂಗ್ರೆಸೇತರ ಜಾತ್ಯತೀತ ಪಕ್ಷಗಳು ಈಗಲಾದರೂ ಎಚ್ಚೆತ್ತು ಒಂದುಗೂಡದಿದ್ದರೆ, ಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನಿಚ್ಚಳ ಬಹುಮತ ಪಡೆಯುವುದು ನಿಶ್ಚಿತ.

Leave a Reply