ವಿವಾದವೇ ಅಲ್ಲದ ವಿವಾದ

 – ಸನತ್‌ಕುಮಾರ ಬೆಳಗಲಿ
ಅನಂತಮೂರ್ತಿ ಅವರು ಆಡುವ ಪ್ರತಿಯೊಂದು ಮಾತೂ ಯಾಕೆ ವಿವಾದದ ಅಲೆಯನ್ನೆಬ್ಬಿಸುತ್ತದೆ. ಹಾಗೆ ನೋಡಿದರೆ ಅವರ ‘ಸಂಸ್ಕಾರ’ವನ್ನು ಹೊರತುಪಡಿಸಿ ಯಾವ ಕೃತಿಯೂ ವಿವಾದಕ್ಕೆ ಕಾರಣವಾಗಿಲ್ಲ. ಆದರೆ ಅವರ ಭಾಷಣಗಳು, ಅನಿಸಿಕೆಗಳು ಮಾತ್ರ ಬಲಪಂಥೀಯ ಫ್ಯಾಸಿಸ್ಟರ ಆಕ್ರೋಶಕ್ಕೆ ಗುರಿಯಾಗುತ್ತಲೇ ಇವೆ. ಎಪ್ಪತ್ತರ ದಶಕದಲ್ಲಿ ಅವರು ಬರೆದ ‘ಸಂಸ್ಕಾರ’ದ ಬಗ್ಗೆ ಆಗ ನಮ್ಮ ಬಿಜಾಪುರ ಜಿಲ್ಲೆಯ ಮಾಧ್ವ ಬ್ರಾಹ್ಮಣರಲ್ಲಿ ಕೆಲವರು ಅವರ ವಿರುದ್ಧ ಕೆಂಡಕಾರುತ್ತಿದ್ದರು. ಅಂತಲೇ ಕುತೂಹಲದಿಂದ ಅದನ್ನು ಧಾರವಾಡದಿಂದ ತರಿಸಿ ಓದಿದ ನಾನು ಅವರ ಬರವಣಿಗೆ ಬಗ್ಗೆ ತುಂಬ ಪ್ರಭಾವಿತನಾಗಿದ್ದೆ. ಹಾಗೆ ನೋಡಿದರೆ ಅನಂತಮೂರ್ತಿ ಆಡುವ ಮಾತಿನಲ್ಲಿ ವಿವಾದ ಎಂಬುದಿರುವುದಿಲ್ಲ. ಅವರು ಎಸೆಯುವ ಕಲ್ಲು ಸರಿಯಾದ ದಿಕ್ಕಿನಲ್ಲಿ ಹೋಗುತ್ತದೆ. ಆದರೆ ಬೊಗಳುವ ಹುಚ್ಚು ನಾಯಿಗಳು ಇದರಿಂದ ಕೆರಳುತ್ತವೆ. ಎಪ್ಪತ್ತರ ದಶಕದಲ್ಲಿ ದೇವರಾಜ ಅರಸು ಸಂಪುಟದಲ್ಲಿ ಸಚಿವರಾಗಿದ್ದ ಬಿ.ಬಸವಲಿಂಗಪ್ಪ ಕನ್ನಡ ಸಾಹಿತ್ಯವನ್ನು ಭೂಸಾ ಸಾಹಿತ್ಯವೆಂದು ಟೀಕಿಸಿದ್ದರು.
ಜನಪರವಲ್ಲದ ಪ್ರತಿಗಾಮಿ ಸಾಹಿತ್ಯದ ಬಗ್ಗೆ ಅವರು ಈ ಮಾತನ್ನು ಆಡಿದ್ದರು. ಆದರೆ ಜಾತಿವಾದಿ ಪಟ್ಟಭದ್ರ ಹಿತಾಸಕ್ತಿಗಳು ದೊಡ್ಡ ರಾದ್ಧಾಂತವನ್ನೇ ಎಬ್ಬಿಸಿದವು. ಆಗ ಅನಂತ ಮೂರ್ತಿ ಬಸವಲಿಂಗಪ್ಪನವರ ಬೆಂಬಲಕ್ಕೆ ನಿಂತರು. ಆಗಲೂ ಇಂಥ ಟೀಕೆಗಳನ್ನು ಎದುರಿಸಿದ್ದರು. ಲೋಹಿಯಾವಾದಿಯಾದ ಅನಂತಮೂರ್ತಿ ಮೊದಲು ಕಾಂಗ್ರೆಸ್ಸಿನ ಕಡುವಿರೋಧಿ.  ಕಾಂಗ್ರೆಸ್ಸೇತರ ಪಕ್ಷಗಳ ಏಕತೆಯ ಪ್ರತಿಪಾದಕರಾಗಿದ್ದರು. ಆದರೆ ಮಾರ್ಕ್ಸ್‌ವಾದಿ ಹಿನ್ನೆಲೆಯ ನನ್ನಂಥವರಿಗೆ ಈ ನಿಲುವು ಸಮ್ಮತವಾಗದಿದ್ದರೂ ಈಗಿನ ಅವಿವೇಕಿಗಳಂತೆ ಅವರನ್ನು ಹೀಗೆಳೆಯಲಿಲ್ಲ. ಆದರೆ ಅನಂತಮೂರ್ತಿ ನಂತರ ಬದಲಾದರು.
1992ರಲ್ಲಿ ಅಯೋಧ್ಯೆಯ ಬಾಬರಿ ಮಸೀದಿಯನ್ನು ಗಾಂಧಿ ಹಂತಕರು ಕೆಡವಿದ ನಂತರ ಅವರು ಸಂಪೂರ್ಣ ಬದಲಾದರು. ಅನೇಕತೆಯ ಭಾರತದಲ್ಲಿ ಬಹುಮುಖಿ ಬದುಕಿಗೆ ಸಂಘ ಪರಿವಾರದಿಂದ ಗಂಡಾಂತರ ಬಂದಿದೆ ಎಂದು ಅರಿವಾದ ನಂತರ ಅವರ ವಿರುದ್ಧ ಸಿಡಿದು ನಿಂತರು.ಭೈರಪ್ಪ ‘ಆವರಣ’ ಎಂಬ ನೀಚಕೃತಿ ಬರೆದಾಗ ಅನಂತಮೂರ್ತಿ ಆತ ಸಾಹಿತಿಯೇ ಅಲ್ಲ, ಚರ್ಚಾಕೋರ ಎಂದರು. ಆಗಲೂ ಈ ಅವಿವೇಕಿಗಳು ಅಸಭ್ಯವಾಗಿ ಬೈದಿದ್ದರು. ನರೇಂದ್ರ ಮೋದಿ ಪ್ರಧಾನಿಯಾಗಬಾರದು ಎಂದಾಗಲೂ ಅದೇ ಬೊಗಳಿಕೆ.
ಅನಂತ ಮೂರ್ತಿ ಹೇಳಿದ ಮಾತುಗಳಲ್ಲಿ ವಿವಾದವೇ ಇರಲಿಲ್ಲ. ಗುಜರಾತ್‌ನಲ್ಲಿ 2002ರಲ್ಲಿ ಸರಕಾರದ ಉಸ್ತುವಾರಿಯಲ್ಲಿ ಅಲ್ಪಸಂಖ್ಯಾತರ ಹತ್ಯಾಕಾಂಡ ನಡೆಸಿದ ಮೋದಿ ನರಹಂತಕ ನಲ್ಲದೆ ಮತ್ತೇನು ಜನಾನುರಾಗಿ ಎಂದು ಕರೆಯಬೇಕೆ! ಇದ್ದದ್ದನ್ನು ಇದ್ದಂತೆ ಹೇಳಿದರೆ ಇವರ ಎದೆಗೆ ಒದ್ದಂತಾಗುತ್ತದೆ ಏಕೆ? ಈ ಗೋಡ್ಸೆ ಮರಿಗಳನ್ನು ಚುಚ್ಚದಿದ್ದರೆ ಅನಂತಮೂರ್ತಿ ಅವರಿಗೂ ಸಮಾಧಾನವಾಗುವುದಿಲ್ಲ. ಹಿಂದಿನ ಕಾಲದಲ್ಲಿ ಬ್ರಾಹ್ಮಣರು ಗೋಮಾಂಸ ಸೇವಿಸುತ್ತಿದ್ದರು ಎಂದು ಅನಂತಮೂರ್ತಿ ಹೇಳಿದ ಮಾತೊಂದರಿಂದ ಈ ಪರ ಪಿಂಡದಂಡದ ಹುಚ್ಚು  ಕೆರಳಿದೆ.
“ಭಾರತದ ಅನ್ನ ತಿಂದು ಭಾರತದಿಂದ ಜ್ಞಾನ ಪೀಠ ಪಡೆದುಕೊಂಡು ಇದೀಗ ನರೇಂದ್ರ ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುವುದಾಗಿ ಹೇಳಿರುವ ಅನಂತ ಮೂರ್ತಿಯವರಿಂದ ಜ್ಞಾನಪೀಠ ಪ್ರಶಸ್ತಿಯನ್ನು ವಾಪಸ್ ಪಡೆಯಬೇಕು” ಎಂದು ಸ್ವಾಮಿಯೊಬ್ಬ ಹೇಳಿದ್ದಾನೆ. ‘ಪ್ರಾಚೀನ ಕಾಲದಲ್ಲಿ ಬ್ರಾಹ್ಮಣರು ಗೋಮಾಂಸ ಭಕ್ಷಿಸುತ್ತಿದ್ದರು’ ಎಂಬ ಅನಂತ ಮೂರ್ತಿ ಅಭಿಪ್ರಾಯದ ಬಗೆಗೂ ಚಡ್ಡಿ ಪರಿವಾರದವರು ಮಾನಸಿಕ ಸ್ಥಿಮಿತ ಕಳೆದು ಕೊಂಡು ಅರಚಾಡುತ್ತಿದ್ದಾರೆ. ಬ್ರಾಹ್ಮಣ ಮಹಾಸಭಾವೂ ಆಕ್ರೋಶ ವ್ಯಕ್ತಪಡಿಸಿದೆ.
ಅವರ ಹೇಳಿಕೆ ಖಂಡಿಸಿ ಪೋಸ್ಟ್‌ಕಾರ್ಡ್ ಚಳವಳಿ ನಡೆಸುವುದಾಗಿ ಅದು ಬೆದರಿಕೆ ಹಾಕಿದೆ. ರಾಷ್ಟ್ರೀಯ ಸ್ವಯಂ ಸೇವಕನಾಗಿ ರೂಪಾಂತರಗೊಂಡಿರುವ ಒಂದು ಕಾಲದ ಸಂಶೋಧಕ ಚಿದಾನಂದ ಮೂರ್ತಿ ಎಂದಿನಂತೆ ಕೆರಳಿ ನಿಂತಿದ್ದಾರೆ. ಉಳಿದವರು ಹಾಳಾಗಿ ಹೋಗಲಿ. ಪೇಜಾವರ ಸ್ವಾಮಿಗಳಂಥವರೂ ಕೂಡ ಅನಂತಮೂರ್ತಿ ಹೇಳಿಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ಅವರು ಕೆಲ ಅವಿವೇಕಿಗಳಂತೆ ಅಸಭ್ಯ ಭಾಷೆ ಬಳಸಿಲ್ಲ. ಅವರು ಮಠಾಧೀಶರ ಪೈಕಿ ಮೃದು ಹಿಂದುತ್ವವಾದಿ, ಧಾರ್ಮಿಕ ರಂಗದ ವಾಜಪೇಯಿ. ಆದರೆ ಅವರ ಬದ್ಧತೆ ಇರುವುದು ಆರೆಸ್ಸೆಸ್‌ನ ಅದೆ ಫ್ಯಾಸಿಸ್ಟ್ ಸಿದ್ಧಾಂತಕ್ಕೆ. ಅಂತಲೆ ಅವರ ಮಾತು ಸಿಹಿಲೇಪಿತ ಮಾತ್ರೆ ಇದ್ದಂತೆ.
ಪ್ರಾಚೀನ ಕಾಲದಲ್ಲಿ ಬ್ರಾಹ್ಮಣರು ಗೋಮಾಂಸ ಸೇವಿಸುತ್ತಿದ್ದರು ಎಂಬುದು ವಿವಾದಾಸ್ಪದ ವಿಷಯವೇ ಅಲ್ಲ. ಅದು ಬ್ರಾಹ್ಮಣರ ಅವಹೇಳನವೂ ಅಲ್ಲ. ಎಪ್ಪತ್ತರ ದಶಕದ ಕೊನೆಯಲ್ಲಿ ನಾನು ಹುಬ್ಬಳ್ಳಿಯಲ್ಲಿದ್ದಾಗ ಈ ಬಗ್ಗೆ ಮಾತಾಡಲು ಧಾರವಾಡದ ಸಾಧನಕೇರಿಯಲ್ಲಿದ್ದ ಕನ್ನಡದ ಖ್ಯಾತ ಸಂಶೋಧಕ ಶಂ.ಭಾ.ಜೋಶಿ ಅವರ ಮನೆಗೆ ಹೋಗಿದ್ದೆ. “ಹೌದು ಇದು ನಿಜ. ಇದಕ್ಕೆ ಖಚಿತ ಆಧಾರಗಳಿವೆ” ಎಂದು ಹಲವಾರು ಗ್ರಂಥಗಳನ್ನು ಓದಿ ತೋರಿಸಿದ್ದರು.
ಈ ಬಗ್ಗೆ ಡಾ.ಡಿ.ಎನ್.ಝಾ ಬರೆದ ಪುಸ್ತಕದಲ್ಲಿ ಹಲವಾರು ಉಲ್ಲೇಖಗಳು ಇವೆ. ಕರ್ನಾಟಕದ ಎಡಪಂಥೀಯ ಪಂಡಿತ ದಿವಂಗತ ಎಸ್.ಆರ್.ಭಟ್ ಅವರು ಬ್ರಾಹ್ಮಣರ ಗೋಮಾಂಸ ಭಕ್ಷಣೆ ಬಗ್ಗೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ದಕ್ಷಿಣ ಕನ್ನಡದ ಪುತ್ತೂರು ಮೂಲದ ಭಟ್ಟರು ಬೆಂಗಳೂರಿನ ಗಾಂಧಿ ನಗರದಲ್ಲಿದ್ದಾಗ ಅವರೊಂದಿಗೆ ಹೋಗಿ ಆಗಾಗ ಚರ್ಚಿಸುತ್ತಿದ್ದೆ. ಸಂಸ್ಕೃತ-ಕನ್ನಡ-ಇಂಗ್ಲಿಷ್, ಪಾಲಿ ಹೀಗೆ ಹಲವಾರು ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದ ಅವರು ಈ ಬಗ್ಗೆ ನೀಡುತ್ತಿದ್ದ ದಾಖಲೆಗಳನ್ನು ಯಾರಿಂದಲೂ ನಿರಾಕರಿಸಲಾಗುವುದಿಲ್ಲ.
ಅನಂತಮೂರ್ತಿ ಅವರ ವಿರುದ್ಧ ಹರಿಹಾಯುತ್ತಿರುವ ಈ ಮೋದಿ ಬ್ರಿಗೇಡ್ ಎಂಬ ಸಂಘಪರಿವಾರದ ಮಂದಿಗೆ ಗೋವುಗಳನ್ನು ಪೂಜಿಸುವುದು ಮಾತ್ರ ಗೊತ್ತು. ಅವುಗಳನ್ನು  ಸಾಕುವುದಿಲ್ಲ, ಸಗಣಿ ಬಳೆಯುವುದಿಲ್ಲ. ಅವುಗಳಿಗೆ ಮೇವು ಕೊಡುವುದಿಲ್ಲ. ತಾಯಿಯ ಹಾಲನ್ನು ಕುಡಿಯಲು ಕರುವಿಗೆ ಅವಕಾಶ ನೀಡದೆ ಹಾಲು ಹಿಂಡಿ ಪಾತ್ರೆ ತುಂಬಿಸಿಕೊಳ್ಳುತ್ತಾರೆ. ಅನೇಕ ಕಡೆ ವಯಸ್ಸಾದ ಗೋವುಗಳು ಹೊಟ್ಟೆಗಿಲ್ಲದೆ ನರಳಿ ಸತ್ತು ಹೋಗುತ್ತವೆ. ಗೋಮಾಂಸ ರಫ್ತು ಮಾಡುವ ಉದ್ಯಮಿಗಳಲ್ಲಿ ಸಂಘ ಪರಿವಾರಕ್ಕೆ ಗುರುದಕ್ಷಿಣೆ ನೀಡುವ ವ್ಯಕ್ತಿಗಳು ಸೇರಿದ್ದಾರೆ.
ಗೋಮಾಂಸ ಭಕ್ಷಣೆ ಹಿಂದುಗಳಿಗೆ ನಿಷಿದ್ಧ ಎಂಬ ಇಂದಿನ ನಂಬಿಕೆಗೆ ಇವರು ಹೇಳುವ ಹಿಂದು ಧರ್ಮಶಾಸ್ತ್ರಗಳಲ್ಲಿ ಆಧಾರವಿದೆಯೇ? ಪ್ರಾಚೀನ ಭಾರತದಲ್ಲಿ ಬ್ರಾಹ್ಮಣರು ಗೋವಧೆ ಮಾಡುತ್ತಿದ್ದರು. ಗೋಮಾಂಸ ಭಕ್ಷಿಸುತ್ತಿದ್ದರು ಎಂಬುದಕ್ಕೆ ಶ್ರುತಿ,ಸ್ಮೃತಿಗಳೆರಡರಲ್ಲೂ ಸಾಕಷ್ಟು ಉದಾಹರಣೆಗಳಿವೆ. ವೇದಕಾಲೀನ ಆರ್ಯರು ಅಶ್ವಮೇಧ, ರಾಜಸೂಯ ಮಹಾ ಯಾಗಗಳನ್ನು ಕಾಮೇಷ್ಟಿಗಳೆಂಬ ನಾನಾ ರೀತಿಯ ಚಿಕ್ಕಪುಟ್ಟ ಯಜ್ಞಗಳನ್ನು ಮಾಡಿ ಕುದುರೆ, ಆಡು, ಗೋವು ಮೊದಲಾದ ಸಾಕು ಪ್ರಾಣಿಗಳನ್ನು ಆಹುತಿ ನೀಡಿ ಹವಿತ ಶೇಷ ವನ್ನು ತಾವು ಭಕ್ಷಿಸುತ್ತಿದ್ದರು ಎಂಬುದು ವಿವಾದಾತೀತ ಸತ್ಯ.
ಋಗ್ವೇದದ ಒಂದು ಸೂತ್ರದಲ್ಲಿ ಗೋವನ್ನು ವಧಾಸ್ತಂಭಕ್ಕೆ ಕಟ್ಟಿ ವಧಿಸಲು ಸಿದ್ಧತೆ ಮಾಡುವ ವರ್ಣನೆಯಿದೆ. ಆ ಕಾಲದ ಯಜ್ಞಗಳು ಜನಜೀವನದ ಮುಖ್ಯ ಅಂಗವಾಗಿದ್ದುದರಿಂದ ಈ ರೀತಿ ಪ್ರಾಣಿವಧೆ ಮತ್ತು ಮಾಂಸ ಭಕ್ಷಣೆ  ಹೆಚ್ಚಾಗಿ ಯಜ್ಞಗಳ ಮೂಲಕ ನಡೆಯುತ್ತಿದ್ದವು. ವಾಸ್ತವಾಂಶ ಹೀಗಿರುವುದರಿಂದ ಗೋಮಾಂಸ ಭಕ್ಷಣೆ ಬಗ್ಗೆ ಅನಂತ ಮೂರ್ತಿ ಹೇಳಿದ ಮಾತಿನಲ್ಲಿ ವಿವಾದಾಸ್ಪದವಾದುದೇನೂ ಇಲ್ಲ.
ಬಿಜೆಪಿಯ ಹಿರಿಯ ನಾಯಕ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೂ ಗೋಮಾಂಸ ತುಂಬ ಇಷ್ಟವಾದುದು ಎಂಬುದು ಸಂಘಪರಿವಾರದ ಉನ್ನತ ನಾಯಕರಿಗೆಲ್ಲ ಗೊತ್ತಿದೆ. ವಾಜಪೇಯಿ ಪ್ರಧಾನಿಯಾಗಿದ್ದಾಗಲೂ ಕೂಡ ಈ ದೇಶದಿಂದ ಲಕ್ಷಾಂತರ ಟನ್ ಗೋಮಾಂಸ ವಿದೇಶಕ್ಕೆ ರಫ್ತು ಆಗುತ್ತಿತ್ತು. ಆಗ ಬಾಯಿಮುಚ್ಚಿಕೊಂಡಿದ್ದ ಈ ನಕಲಿ ದೇಶಭಕ್ತರು ಈಗೇಕೆ ಈ ಪರಿ ಅರಚಾಡುತ್ತಿದ್ದಾರೆ. ಗೋವು ಇವರಿಗೆಂದೂ ಪ್ರೀತಿಯ ಪ್ರಾಣಿಯಲ್ಲ. ಗೋವಿನ ಹೆಸರಿನಲ್ಲಿ ರಾಜಕಾರಣ ಮಾಡಿ ಓಟ್ ಬ್ಯಾಂಕ್ ನಿರ್ಮಿಸಿಕೊಳ್ಳಲು ಮಾತ್ರ ಇವರಿಗೆ ಗೋವು ಬೇಕು.
ಮೋದಿಯನ್ನು ಮುಂದಿಟ್ಟುಕೊಂಡರೂ ಬರುವ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವುದು ಸಾಧ್ಯವಿಲ್ಲ ಎಂದು ಈ ಚಡ್ಡಿಗಳಿಗೆ ಖಾತ್ರಿಯಾಗಿದೆ. ಅಂತಲೇ ಈ ರೀತಿ ಹತಾಶೆಯಿಂದ ಅರಚಾಡುತ್ತಿದ್ದಾರೆ. ಈ ಹುಚ್ಚಿಗೆ ಯಾವ ಔಷಧಿ ನೀಡಬೇಕೆಂಬುದು ಮತದಾರರಿಗೆ ಗೊತ್ತಿದೆ. ಅವರು ಖಂಡಿತವಾಗಿ ನೀಡುತ್ತಾರೆ. ಅನಂತಮೂರ್ತಿ ಅವರನ್ನು ಬೈದಷ್ಟು ಬಿಜೆಪಿಗೆ ಬೀಳುವ ಮತಗಳ ಸಂಖ್ಯೆ ಕಡಿಮೆಯಾಗುತ್ತ ಹೋಗುತ್ತದೆ ಎಂಬುದು ಈ ಮೂರ್ಖರಿಗೆ ಗೊತ್ತಿಲ್ಲ.                             varthabharati
Please follow and like us:
error