ಹುಚ್ಚ ವೆಂಕಟ್, ಡ್ರೋನ್ ಪ್ರತಾಪ ಮೀಡಿಯಾ ಶಿಶುಗಳು

ನೀವೇನೇ ಹೇಳಿ. ಹುಚ್ಚ ವೆಂಕಟ್, ಡ್ರೋನ್ ಪ್ರತಾಪ ಮೀಡಿಯಾ ಶಿಶುಗಳು. ಇವರೆಲ್ಲ ದಿಢೀರ್ ಖ್ಯಾತಿಯ ಹುಚ್ಚಿಗೆ ಬೀಳಲು ಮೀಡಿಯಾ ಕಾರಣ.‌ ಮೀಡಿಯಾಗಳು ಇವರನ್ನು ಟಿಆರ್ ಪಿಗಾಗಿ ಬಳಸಿಕೊಳ್ಳದೇ ಇದ್ದಿದ್ದರೆ ಇವರ ಹೆಸರನ್ನು ನಾವು ಕೇಳಿಯೇ ಇರುತ್ತಿರಲಿಲ್ಲ. ಇಂಥವರನ್ನು ಹುಟ್ಟಿಸೋದೂ ಮೀಡಿಯಾಗಳೇ, ಕೆಳಗೆ ದೊಪ್ಪನೆ ಎತ್ತಿ ಬೀಳಿಸೋದೂ ಮೀಡಿಯಾಗಳೆ.

ಇದು ಕರ್ನಾಟಕದ ಕಥೆ ಮಾತ್ರವಲ್ಲ, ಹುಡುಕಿದರೆ ಬೇರೆ ರಾಜ್ಯಗಳಲ್ಲೂ ಒಬ್ಬೊಬ್ಬರಾದರೂ ಸಿಗುತ್ತಾರೆ. ಆಂಧ್ರಪ್ರದೇಶದಲ್ಲಿ ಒಬ್ಬನಿದ್ದಾನೆ.‌ ಅವನ‌ ಹೆಸರು ಸ್ರೀರಾಮೋಜು ಸುನಿಶಿತ್. ಅವನಿಗೆ ಅಲ್ಲಿನ ಮೀಡಿಯಾ ಕೊಟ್ಟ ಹೆಸರು ‘ಸ್ಯಾಕ್ರಿಫೈಸ್ ಸ್ಟಾರ್’. ನಮ್ಮ ಹುಚ್ಚ ವೆಂಕಟನಿಗೆ ಫೈರಿಂಗ್ ಸ್ಟಾರ್ ಎಂಬ ಬಿರುದು ದಯಪಾಲಿಸಿದ್ದೂ ನಮ್ಮ ಮೀಡಿಯಾಗಳೇ ಅಲ್ಲವೇ?

ಈ ಸುನಿಶಿತ್ ಚಿತ್ರವಿಚಿತ್ರ ಹೇಳಿಕೆಗಳನ್ನು ಕೊಟ್ಟು ಇದ್ದಕ್ಕಿದ್ದಂತೆ ಫೇಮಸ್ಸಾಗಿ ಬಿಟ್ಟ. ಅಲ್ಲಿನ ಜನಪ್ರಿಯ ನಟ ಮಹೇಶ್ ಬಾಬುಗೆ ನಾನೇ ಲೈಫ್ ಕೊಟ್ಟೆ ಅಂದ. ರವಿತೇಜ ನನಗೆ ಮೋಸ ಮಾಡಿದ ಅಂದ. ಜೂನಿಯರ್ ಎನ್ ಟಿಆರ್ ನಾನು ಮಾಡಬೇಕಿದ್ದ ಪಾತ್ರ ಮಾಡಿದ ಎಂದು ಹೇಳಿದ. ಮೀಡಿಯಾ ಗೊತ್ತಲ್ಲ, ಸುನಿಶಿತ್ ಬೆನ್ನಿಗೆ ಬಿದ್ದವು. ಸಾಲು ಸಾಲು ಟೀವಿ, ಯೂಟ್ಯೂಬ್ ಇಂಟರ್ ವ್ಯೂಗಳು.

ನಿಮಗೆ ನೆನಪಿರಬಹುದು, ಹುಚ್ಚ ವೆಂಕಟೇಶ್ ಹೆಸರು ಕೇಳಿದ್ದೇ ನಟಿ ರಮ್ಯಾ ವಿಷಯದಲ್ಲಿ ಅವನು ಆಡಿದ ಮಾತುಗಳಿಂದ. ರಮ್ಯಾಳನ್ನು ನಾನು ಮದುವೆಯಾಗಿದ್ದೆ ಎಂದು ಇವನು ಒದರಿಕೊಂಡು ಓಡಾಡುತ್ತಿದ್ದ. ಸಿನಿಮಾ ಮಂದಿಗೆ ಅವನ‌ ಹುಚ್ಚಾಟ ಗೊತ್ತಿತ್ತು, ಸುಮ್ಮನಿದ್ದರು. ಆದರೆ ಪಬ್ಲಿಕ್ ಟೀವಿ ಅವನನ್ನು ಸ್ಟುಡಿಯೋಗೆ ಕರೆಯಿಸಿ ಮಾತನಾಡಿತು. ಈಗ ನ್ಯೂಸ್ 18 ನಲ್ಲಿರುವ ಹರೀಶ್ ನಾಗರಾಜ್ ಈ ಹುಚ್ಚ ವೆಂಕಟ್ ನನ್ನು ಪಕ್ಕ ಕೂರಿಸಿಕೊಂಡು ಸಂದರ್ಶನ ನಡೆಸಿದರು. ವೆಂಕಟ್ ಅಲ್ಲೂ ತಾನು ರಮ್ಯಾ ಮದುವೆಯಾಗಿದ್ದಾಗಿ ಹೇಳಿದ. ಹರೀಶ್ ಏನೋ ಪ್ರಶ್ನೆ ಕೇಳಿದಾಗ ಏನೋ ಕೆಟ್ಟದಾಗಿ ಬೈದಿದ್ದ. ಗಾಬರಿಬಿದ್ದ ಹರೀಶ್ ಬೇಗ ಸಂದರ್ಶನ ಮುಗಿಸಿದ್ದರು. ಇದೆಲ್ಲ ಲೈವ್ ಕಾರ್ಯಕ್ರಮದಲ್ಲಿ ‌ನಡೆದಿತ್ತು. ರಮ್ಯಾ ಪೊಲೀಸ್ ಕಂಪ್ಲೇಂಟ್ ಕೊಟ್ಟರು. ಆಮೇಲೆ ಹುಚ್ಚ ವೆಂಕಟನ ಸಿನಿಮಾ ಬಿಡುಗಡೆಯಾಯಿತು. ಜನ ಸಿನಿಮಾ ನೋಡ್ತಾ ಇಲ್ಲ ಎಂದು ವೆಂಕಟ್ ಬಾಯಿಗೆ ಬಂದಂತೆ ಕೂಗಾಡಿದ. ಅದನ್ನು ಟೀವಿಯೊಂದು ಯಥಾವತ್ತು ವರದಿ ಮಾಡಿತು. ಹುಚ್ಚ ವೆಂಕಟ್ ಮನೆಮನೆಗೆ ತಲುಪಿಬಿಟ್ಟ. ತಲುಪಿಸುವ ಕೆಲಸವನ್ನು ಮೀಡಿಯಾ ನಿಯತ್ತಾಗಿ ಮಾಡಿತು.

ಇದೆಲ್ಲ ಯಾಕೆ ನೆನಪಿಸಿದೆನೆಂದರೆ ಸುನಿಶಿತ್ ಕೂಡ ಇದೇ ಕೆಲಸ ಮಾಡಿದ. ಸುನಿಶಿತ್ ತಾನು ಜನಪ್ರಿಯ ನಟಿ ತಮನ್ನಾಳನ್ನು ಮದುವೆ ಆಗಿರುವುದಾಗಿ ಹೇಳಿದ. ಇನ್ನೊಬ್ಬ ನಟಿ ಲಾವಣ್ಯ ತ್ರಿಪಾಠಿ ತನ್ನ ಮಾಜಿ ಪ್ರೇಮಿ ಎಂದು ಹೇಳಿಬಿಟ್ಟ. ತಮನ್ನಾ ಇವನ್ಯಾರೋ ಹುಚ್ಚ ಎಂದು ಸುಮ್ಮನಾದರೂ ಲಾವಣ್ಯ ಸುಮ್ಮನಿರಲಿಲ್ಲ. ಪೊಲೀಸ್ ಕಂಪ್ಲೇಂಟ್ ಕೊಟ್ಟರು. ಪೊಲೀಸರು ಇವನ ಮೇಲೆ ಮಾತ್ರವಲ್ಲ, ಇವನ ಸಂದರ್ಶನ‌ ಪ್ರಸಾರ ಮಾಡಿದ ಯೂಟ್ಯೂಬರ್ ಮೇಲೂ ಕೇಸು ಹಾಕಿದರು.

ಜ್ಯೂನಿಯರ್ ಎನ್ ಟಿಆರ್ ನಾನಕು ಪ್ರೇಮತೋ ಎಂಬ ಸಿನಿಮಾ ಮಾಡಿದರು. ಈ ಸಿನಿಮಾ ನಾನು ಮಾಡಬೇಕಿತ್ತು.‌ ಎನ್ ಟಿ ಆರ್ ತನ್ನ ಪ್ರಭಾವ ಬಳಸಿ ಈ ಸಿನಿಮಾದಿಂದ ತನ್ನನ್ನು ಕಿತ್ತು ಹಾಕಿ ತಾನೇ ಹೀರೋ ಆದರು ಎಂದು ಹೇಳಿದ ಸುನಿಶಿತ್.‌

2014 ರಲ್ಲಿ ಮಹೇಶ್ ಬಾಬು ಅವರ ನೇನೊಕ್ಕಡೇನೆ ಸಿನಿಮಾ ಬಂತಲ್ಲ, ಆ ಸಿನಿಮಾವನ್ನೂ ಸುನಿಶಿತ್ ಮಾಡಬೇಕಿತ್ತಂತೆ. ಶೂಟಿಂಗ್ ಕೂಡ ಶುರುವಾಗಿತ್ತಂತೆ. ಅದರ ನಿರ್ದೇಶಕ ಸುಕುಮಾರ್ ಗೆ ಮಹೇಶ್ ಬಾಬು ಒತ್ತಡ ಹೇರಿ ತಾನೇ ಹೀರೋ ಆದರಂತೆ! ಇದನ್ನೆಲ್ಲ ಅವನು ಎಷ್ಟು ಕಾನ್ಫಿಡೆನ್ಸ್ ನಲ್ಲಿ ಹೇಳುತ್ತಾನೆಂದರೆ, ಬೇಕಿದ್ದರೆ ಸುಕುಮಾರ್ ಮತ್ತು ಮಹೇಶ್ ಬಾಬು ಕಾಲ್ ಡೀಟೇಲ್ಸ್ ತೆಗೆಸಿ ನೋಡಿ ಎನ್ನುತ್ತಾನೆ.‌ ನಿನ್ನೆ ಡ್ರೋನ್ ಪ್ರತಾಪ್ ಮೈಸೂರು ರೈಲ್ವೆ ಸ್ಟೇಷನ್ನಲ್ಲಿ ಮಲಗಿದ್ದಕ್ಕೆ ಸಿಸಿ ಟಿವಿ ಚೆಕ್ ಮಾಡಿಸಿ ಎಂದನಲ್ಲ ಹಾಗೇನೇ.

ಇದೆಲ್ಲದಕ್ಕಿಂತ ತಮಾಶೆ ಎಂದರೆ ರವಿತೇಜ ಅವರ ಬಲುಪು ಸಿನಿಮಾದಲ್ಲೂ ಇವನೇ ಹೀರೋ ಆಗಿದ್ದನಂತೆ. ಆ ಸಿನಿಮಾ ಬಿಟ್ಟುಕೊಡೋದಕ್ಕೆ ರವಿ ತೇಜ ಕೇಳಿದರಂತೆ. ಇವನು ಒಪ್ಪದೇ ಇದ್ದಾಗ ಬೆದರಿಕೆ ಹಾಕಿದರಂತೆ. ಸುನಿಶಿತ್ ಬಂಜಾರಾ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟನಂತೆ. ಆಮೇಲೆ ಇವನಿಗೆ ರವಿತೇಜ 45 ಲಕ್ಷ‌ ರುಪಾಯಿ ಕೊಟ್ಟು ಸೆಟ್ಲ್ ಮಾಡಿಕೊಂಡಿರಂತೆ.

ಸುನಿಶಿತ್ ಕೂಡ ಸತ್ಯದ ತಲೆಮೇಲೆ ಹೊಡೆದಂತೆ ಸುಳ್ಳು ಹೇಳುತ್ತಾನೆ. ನಮ್ಮ ವೆಂಕಟ್, ಪ್ರತಾಪ್, ಸೂಲಿಬೆಲೆಗಳ ಹಾಗೆಯೇ. ಯಾವುದೇ ಪ್ರಶ್ನೆ ಕೇಳಿದರೂ ಏನಾದರೊಂದು ಸಮಜಾಯಿಷಿ ನೀಡುತ್ತಾನೆ. ಅಲ್ಲಪ್ಪಾ ದೊರೆ, ಮೂವತ್ತೈದು ಸಿನಿಮಾಗಳಲ್ಲಿ ಆಕ್ಟ್ ಮಾಡಿದ್ದೀನಿ ಅಂತೀಯಲ್ಲ, ಒಂದೇ ಒಂದು ಸಿನಿಮಾದ ಹೆಸರು ಹೇಳು ಅಂದರೆ ನನಗೆ ನೆನಪಿಲ್ಲ, ನನ್ನ ನೆನಪಿನ ಶಕ್ತಿ ಸ್ವಲ್ಪ ಕಮ್ಮಿ ಅಂತಾನೆ. ಮೇಲಿಂದ ಮೇಲೆ ಅದೇ ಪ್ರಶ್ನೆ ಕೇಳಿದರೆ, ಒಂದ್ ಕೆಲ್ಸ ಮಾಡಿ, ಆರ್ಟಿಸ್ಟ್ ಅಸೋಸಿಯೇಷನ್ ಗೆ ಹೋಗಿ, ಅಲ್ಲಿ ನಾನು ಮಾಡಿದ ಸಿನಿಮಾಗಳ ಪಟ್ಟಿ ಸಿಗುತ್ತೆ ಎನ್ನುತ್ತಾನೆ. ನಾವ್ಯಾಕೆ ಅಲ್ಲಿಗೆ ಹೋಗಬೇಕು? ನೀನೇ ಹೇಳೋದಿದ್ದರೆ ಹೇಳು. ನೀನು ಇದನ್ನೆಲ್ಲ ಪಬ್ಲಿಸಿಟಿಗೆ ಮಾಡ್ತಾ ಇದ್ದೀಯ ಅಲ್ವಾ ಅಂತ ಸಂದರ್ಶಕ/ಸಂದರ್ಶಕಿ ಕೇಳಿದರೆ, ನಿಮಗೆ ಇಂಟರ್ ವ್ಯೂ ಮಾಡಿ ಅಂತ‌ ನಾನು ಹೇಳಿದ್ನಾ? ಈಗಲೂ ಕಾಲ ಮಿಂಚಿಲ್ಲ. ಈ ಸಂದರ್ಶನ ಪ್ರಸಾರ ಮಾಡಲೇಬೇಡಿ. ನಾನೇನು ಹಠ ಹಿಡಿದಿದ್ದೀನಾ ಅಂತಾನೆ. ಮಾನಗೆಟ್ಟ ಮೀಡಿಯಾಗಳು ಪ್ರಸಾರ ಮಾಡಿಯೇ ಮಾಡುತ್ತವೆ, ಏನೊಂದೂ ಎಡಿಟ್ ಮಾಡದೆ!

ಬಾಹುಬಲಿ ಸಿನಿಮಾದಲ್ಲಿ ನಾನೊಂದು ಹಾಡು ಹೇಳಿದ್ದೀನಿ ಗೊತ್ತಾ ಅಂತಾನೆ ಸುನಿಶಿತ್. ಯಾವ ಹಾಡು ಹೇಳು ನೋಡಣ ಅಂದರೆ, ನೆನಪಿಲ್ಲ ಅಂತಾನೆ.‌ ಒಂದೇ ಒಂದು ಲೈನಾದರೂ ಹೇಳಿ ಸಾಯಿ ಅಂದ್ರೆ, ಒಂದ್ ಕೆಲಸ ಮಾಡಿ, ರಾಜಮೌಳಿ ಆಫೀಸಿಗೆ ಹೋಗಿ, ಆಡಿಯೋ ಕವರ್ ನಲ್ಲಿ ನೋಡಿ, ನನ್ನ‌ ಹೆಸರು ಇರುತ್ತೆ ಅಂತಾನೆ.

ಸುನಿಶಿತ್ ಏನು ಅಂತ ನಿಮಗೆ ಅರ್ಥವಾಗಿರಬಹುದು. ನಮ್ಮ ಡ್ರೋನ್ ಪ್ರತಾಪನ ಪ್ರತಿರೂಪ. ಇವನು ಹುಚ್ಚನ ಥರ ಕಾಣೋದಿಲ್ಲ, ನಾನು ನೂರಕ್ಕೆ ನೂರು ಮಾನಸಿಕವಾಗಿ ಸ್ವಸ್ಥನಾಗಿದ್ದೇನೆ ಅಂತ ಅವನೇ ಹೇಳಿಕೊಳ್ಳುತ್ತಾನೆ. ಅವನಿಗೆ ಮೀಡಿಯಾಗಳಿಂದ ಪಬ್ಲಿಸಿಟಿ ತಗೊಳ್ಳೋದು ಹೇಗೆ ಅನ್ನೋದು ಚೆನ್ನಾಗಿ ಗೊತ್ತು. ನಿನ್ನೆ ಡ್ರೋನ್ ಪ್ರತಾಪನ ಮೀಡಿಯಾ ಟ್ರಯಲ್ ನಡೀತಲ್ಲ, ಅಂಥದ್ದೇ ಒಂದು ಟ್ರಯಲ್ ನಲ್ಲಿ ಸುನಿಶಿತ್ ನ ಗೆಳೆಯ ಫೋನೋದಲ್ಲಿ ಮಾತನಾಡುತ್ತಾನೆ. ಅಲ್ಲಾ ಕಣೋ, ನಾವು ಮೀಡಿಯಾಗಳ ಕಣ್ಣಿಗೆ ಬೀಳೋದು ಹೇಗೆ, ಪಬ್ಲಿಸಿಟಿ ತಗೊಳ್ಳೋದು ಹೇಗೆ ಅಂತೆಲ್ಲ ತಮಾಶೆಯಾಗಿ ಮಾತಾಡಿಕೊಂಡಿದ್ದೆವಲ್ಲವಾ, ನೀನು ಅದನ್ನೇ ಸೀರಿಯಸ್ಸಾಗಿ ನಿಜ ಮಾಡಿದ್ದೀಯಲ್ಲೋ ಮಹರಾಯ ಎನ್ನುತ್ತಾನೆ. ಅಲ್ಲಿಯವರೆಗೆ ಫ್ರೆಂಡ್ ಎನ್ನುತ್ತಿದ್ದ ಸುನಿಶಿತ್, ಇವನ್ಯಾರೋ ನಂಗೆ ಗೊತ್ತೇ ಇಲ್ಲ ಎಂದು ಹೇಳಿಬಿಡುತ್ತಾನೆ.

ಹುಚ್ಚ ವೆಂಕಟ್, ಡ್ರೋನ್ ಪ್ರತಾಪ್, ಸುನಿಶಿತ್ ಎಲ್ಲ ಒಂದೇ ಕೆಟಗರಿಯವರು. ಹುಚ್ಚ ವೆಂಕಟ್ ಈ ನಡುವೆ ಯಾವ ಊರಿಗೆ ಹೋದರೂ ಏಟು ತಿನ್ನುತ್ತಿದ್ದಾನೆ. ಅವನು ತನ್ನನ್ನು ತಾನು ಅಸಾಮಾನ್ಯ ಹೀರೋ ಎಂದು ಭ್ರಮಿಸಿಕೊಂಡ, ಜಗತ್ತಿನಾದ್ಯಂತ ತನ್ನದೇ ಆದ ಹುಚ್ಚ ವೆಂಕಟ್ ಸೇನೆ ಇದೆ ಎಂದು ನಂಬಿಕೊಂಡ. ಮೀಡಿಯಾದವರು ಪದೇಪದೇ ಅದನ್ನೇ ಮಾತನಾಡಿಸಿ, ಅವನು ಇನ್ನಷ್ಟು ತಾನು ಸೃಷ್ಟಿಸಿದ ಸುಳ್ಳುಗಳನ್ನು ನಂಬಿಕೊಂಡು, ಕಂಡಕಂಡಲ್ಲಿ ಏಟು ತಿನ್ನುತ್ತಿದ್ದಾ‌ನೆ.

ಡ್ರೋನ್ ಪ್ರತಾಪನದೂ ಅದೇ ಕಥೆ. ಅವನಿಗೆ ಡ್ರೋನ್ ಕಂಡರೆ ಆಸಕ್ತಿಯಿತ್ತು‌. ಆ ವಯಸ್ಸಿನಲ್ಲಿ ಅಂಥದ್ದೆಲ್ಲ ಸಹಜ. ಅವನು ಡ್ರೋನ್ ಗಳ ಬಗ್ಗೆ ಬೇಸಿಕ್ ಗಳನ್ನೂ ತಿಳಿದುಕೊಂಡ. ಅದರ ಬಗ್ಗೆ ಪುಂಖಾನುಪುಂಖ ಮಾತನಾಡಿದ. ಮಠದವರು ಅವನನ್ನು ಜಪಾನ್ ನ ಎಕ್ಸಿಬಿಷನ್ ಗೆ ಕಳಿಸಿದರು. ಬಂದವನು ನಾನು ಗೋಲ್ಡ್ ಮೆಡಲ್ ಗೆದ್ದೆ ಎಂದು ಸುಳ್ಳು ಹೇಳಿದ. 360 ಕೆಜಿ ತೂಕದ ಡ್ರೋನ್ ಹೊತ್ತುಕೊಂಡುಹೋಗಿದ್ದನ್ನು ವರ್ಣರಂಜಿತವಾಗಿ ಹೇಳಿದ. ಮೀಡಿಯಾ ಕವರೇಜ್ ಮಾಡಿತು. ಪ್ರತಾಪ, ಒಂದಿಷ್ಟು ಮಾತಾಡುವುದನ್ನು ಕಲಿತಿದ್ದ‌ನಲ್ಲ, ದಿನಕ್ಕೊಂದು ಕಥೆ ಹೊಸೆದು inspirational speech ಗಳನ್ನು ನೀಡತೊಡಗಿದ. ಈಗ ಸುಳ್ಳುಗಳೆಲ್ಲ ಬಯಲಾಗಿ ಬೀದಿಪಾಲಾಗಿದ್ದಾನೆ. ಈಗ ಅವನು ಡಿಪ್ರೆಷನ್ ನಲ್ಲಿ ಇದ್ದಾನಂತೆ. “ನೀವು ಯಾಕೆ ಜೋರಾಗಿ ಮಾತಾಡಲಿಲ್ಲ ಅಂತ ಕೆಲವರು ಕೇಳುತ್ತಿದ್ದಾರೆ, ಅವನು ಆತ್ಮಹತ್ಯೆ ಮಾಡಿಕೊಂಡಿದ್ದರೆ ಯಾರು ಹೊಣೆ”ಎಂದು ಕಿರಿಕ್ ಕೀರ್ತಿ ಹೇಳುತ್ತಿರುವುದನ್ನು ಗಮನಿಸಿದರೆ ಡ್ರೋನ್ ಪ್ರತಾಪನಿಗೂ ಕೌನ್ಸಿಲಿಂಗ್, ಚಿಕಿತ್ಸೆ ಅಗತ್ಯ ಅನಿಸುತ್ತಿದೆ.

ಸುನಿಶಿತ್ ನದೂ ಅದೇ ಕಥೆ. ಈ ಮುಠ್ಠಾಳನಿಗೆ ದಿಢೀರನೆ ಹೆಸರು ಮಾಡಬೇಕಿತ್ತು. ಮೀಡಿಯಾಗಳನ್ನು ಬಳಸಿಕೊಂಡು ಬಣ್ಣಬಣ್ಣದ ಕಥೆಗಳನ್ನು ಕಟ್ಟಿ ಹರಡಿದ. ತೆಲುಗು ನಟರಿಗೆ ಇರುವ ಹುಚ್ಚು ಅಭಿಮಾನಿಗಳ ಕಥೆ ಗೊತ್ತಲ್ಲ ನಿಮಗೆ? ಪವನ್ ಕಲ್ಯಾಣ್ ಮೇಲೆ ಶ್ರೀರೆಡ್ಡಿ ಎಂಬ ನಟಿ ಆಪಾದನೆ ಮಾಡಿದಳು ಎಂಬ ಕಾರಣಕ್ಕೆ ಅಭಿಮಾನಿಗಳು ಆಕೆಯನ್ನು ರೇಪ್ ಮಾಡಿ ಜೈಲಿಗೆ ಹೋಗುವುದಾಗಿ ಬಹಿರಂಗ ಬೆದರಿಕೆ ಒಡ್ಡಿದ್ದರು. ಅಲ್ಲಿ ಜನಪ್ರಿಯ ನಟರುಗಳ ಅಭಿಮಾನಿಗಳ ನಡುವೆ ಗ್ಯಾಂಗ್ ವಾರ್ ನಡೆಯೋದು ಮಾಮೂಲು. ಸುನಿಶಿತ್ ಒಬ್ಬರಾದ ಮೇಲೊಬ್ಬರಂತೆ ಎಲ್ಲ ನಾಯಕನಟರನ್ನೂ ತಡವಿಕೊಳ್ಳುತ್ತಿದ್ದಾನೆ. ಮಹೇಶ್ ಬಾಬು, ಜೂನಿಯರ್ ಎನ್ ಟಿ ಆರ್, ರವಿತೇಜ ಎಲ್ಲರೂ ಅಪಾರ ಸಂಖ್ಯೆಯ ಅಭಿಮಾ‌ನಿಗಳಿರುವ ನಟರುಗಳು. ಯಾವನೋ ತಲೆಕಟ್ಟ ಅಭಿಮಾನಿ ಏನೋ ಮಾಡಿಬಿಟ್ಟರೆ?

ಹುಚ್ಚು ಇವರಿಗಲ್ಲ ಇರೋದು, ನಮ್ಮ ಮೀಡಿಯಾಗಳಿಗೆ. ಟಿಆರ್ ಪಿ ಆಸೆಗಾಗಿ ಇವರು ಇಂಥವರನ್ನು ಗಂಟೆಗಟ್ಟಲೆ, ದಿನಗಟ್ಟಲೆ ಸ್ಟುಡಿಯೋದಲ್ಲಿ ಇಟ್ಟುಕೊಂಡು ಲೈವ್ ಮಾಡುತ್ತಾರೆ. ಹುಚ್ಚ ವೆಂಕಟ್ ಬಿಗ್ ಬಾಸ್ ನಲ್ಲಿ ಸಹಸ್ಪರ್ಧಿಗೆ ಹೊಡೆದು ಹೊರ ಬಂದ ನಂತರ ಅವನನ್ನು ತಮ್ಮ ಸ್ಟುಡಿಯೋಗೆ ಕರೆದೊಯ್ಯಲು ಪೈಪೋಟಿ ನಡೆಸುತ್ತ ಟೀವಿ ಚಾನಲ್ ಗಳ ಸಿಬ್ಬಂದಿ ಪರಸ್ಪರ ಹೊಡೆದಾಡಿಕೊಂಡಿದ್ದು ನಿಮಗೆ ನೆನಪಿರಬೇಕಲ್ಲ?

ನಾವು ಗಟ್ಟಿ ಧ್ವನಿಯಲ್ಲಿ ಮಾತನಾಡದ ಹೊರತು, ಈ ಮೀಡಿಯಾಗಳು ಇಂಥವನ್ನೆಲ್ಲ ನಿಲ್ಲಿಸೋದಿಲ್ಲ. ಹೊಸ ವೆಂಕಟ್, ಹೊಸ ಪ್ರತಾಪ್ ಗಳು ಸೃಷ್ಟಿಯಾಗುತ್ತಲೇ ಇರುತ್ತಾರೆ. ಇದೊಂಥರ ರೋಗ, ಚಿಕಿತ್ಸೆ ನೀಡದ ಹೊರತು ವಾಸಿಯಾಗೋದಿಲ್ಲ.

– ದಿನೇಶ್ ಕುಮಾರ್ ಎಸ್.ಸಿ.

Please follow and like us:
error