ಸ್ವಾತಂತ್ರ್ಯ ಹೋರಾಟ ಮತ್ತು ಸಂಘ ಪರಿವಾರ -ಎಲ್ಲರಿಗೂ ಗೊತ್ತಿರುವ ಸತ್ಯ

sanata-kumar-belagali

Sanatkumar-belagali

ಸ್ವಾತಂತ್ರ್ಯ ಹೋರಾಟಗಳಲ್ಲಿ ಆರೆಸ್ಸೆಸ್, ಬಿಜೆಪಿ ಭಾಗವಹಿಸಿರಲಿಲ್ಲ ಎಂಬ ರಮ್ಯಾ ಆಡಿದ ಮಾತು ವಿವಾದದ ಅಲೆ ಎಬ್ಬಿಸಬೇಕಾಗಿರಲಿಲ್ಲ. ಇದು ಎಲ್ಲರಿಗೂ ಗೊತ್ತಿರುವ ಸತ್ಯ. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಯಾರೇ ಹಿರಿಯರನ್ನು ಕೇಳಿದರೂ ಈ ಮಾತನ್ನು ಅವರು ಹೇಳುತ್ತಾರೆ. ದಿವಂಗತ ಗರಡು ಶರ್ಮಾ ಮತ್ತು ಧಾರವಾಡದ ನರಸಿಂಹ ದಾಬಡೆ ಅವರೊಂದಿಗೆ ಚರ್ಚಿಸುವಾಗ, ಅನೇಕ ಬಾರಿ ಈ ಮಾತನ್ನು ನಾನು ಕೇಳಿದ್ದೇನೆ. ಈಗ ನಮ್ಮ ನಡುವೆ ಇರುವ ದೊರೆಸ್ವಾಮಿಯವರು ಸಾವರ್ಕರ್ ಬ್ರಿಟಿಷರಿಗೆ ಕ್ಷಮೆಯಾಚಿಸಿದ ಬಗ್ಗೆ ಬಹಿರಂಗ ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲ, ಆರೆಸ್ಸೆಸ್‌ನ ಹಿರಿಯ ನಾಯಕರೊಂದಿಗೆ ಖಾಸಗಿಯಾಗಿ ಮಾತನಾಡುವಾಗ ಈ ಮಾತನ್ನು ಅವರು ಒಪ್ಪಿಕೊಳ್ಳುತ್ತಾರೆ. ಇಂತಹ ಆರೋಪ ಬಂದಾಗ, ನಾಗಪುರದ ಆರೆಸ್ಸೆಸ್ ಕೇಂದ್ರ ಕಚೇರಿಯೂ ಕೂಡ ಯಾವುದೇ ಸ್ಪಷ್ಟೀಕರಣ ನೀಡುವ ಗೋಜಿಗೆ ಹೋಗಿಲ್ಲ. ಇದು ವಾಸ್ತವ ಸಂಗತಿ.

independence_strugle_rss ramya-rssrss_strugle_indipendence

ರಮ್ಯಾ ಅವರು ಆಡಿದ ಮಾತು ವಿವಾದದ ಅಲೆ ಎಬ್ಬಿಸಲು ಮಾಧ್ಯಮಗಳಲ್ಲಿನ ಕೆಲವರ ಕಿತಾಪತಿ. ಎಬಿವಿಪಿ, ಆರೆಸ್ಸೆಸ್‌ನಲ್ಲಿ ಕೆಲ ಕಾಲ ಓಡಾಡಿದ ಇವರು ಮಾಧ್ಯಮಗಳ ಆಯಕಟ್ಟಿನ ಸ್ಥಾನ ಹಿಡಿದು ಕೂತಿದ್ದಾರೆ. ಇಂತಹವರು ಸದಾ ವಿವಾದ ಸೃಷ್ಟಿಸುತ್ತಲೇ ಇರುತ್ತಾರೆ. ಪಾಕಿಸ್ತಾನಕ್ಕೆ ಹೋಗಿ ಬಂದ ರಮ್ಯಾ ಆ ದೇಶದ ಬಗ್ಗೆ ನಾಲ್ಕು ಒಳ್ಳೆಯ ಮಾತುಗಳನ್ನಾಡಿದರೆ, ಕನ್ನಡದ ಸುದ್ದಿ ಚಾನೆಲ್‌ವೊಂದರ ಸಂಪಾದಕನೊಬ್ಬ, ರಮ್ಯಾ ರಾಹುಲ್ ಗಾಂಧಿಯವರನ್ನು ಕರೆದುಕೊಂಡು ಪಾಕಿಸ್ತಾನಕ್ಕೆ ಹೋಗಿ ನೆಲೆಸಲಿ ಎಂದು ಅವಿವೇಕಿಯಂತೆ ಮಾತನಾಡಿದ. ಇದೇ ರಮ್ಯಾ ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿ, ಆರೆಸ್ಸೆಸ್ ಪಾಲ್ಗೊಂಡಿರಲಿಲ್ಲ ಎಂದು ಹೇಳಿದಾಗ, ಕೆಲ ಪತ್ರಿಕೆಗಳು ರಮ್ಯಾ ಮತ್ತೊಂದು ವಿವಾದ ಎಂಬ ತಲೆಬರಹದಲ್ಲಿ ಸುದ್ದಿಗಳನ್ನು ಪ್ರಕಟಿಸಿದವು. ಹಾಗೆ ನೋಡಿದರೆ, ಇದು ವಿವಾದದ ವಿಷಯವೇ ಅಲ್ಲ. ಆರೆಸ್ಸೆಸ್‌ನಲ್ಲಿ ದಶಕಗಳಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿದ ಕೆಲವರಿಗೆ ಇದು ಗೊತ್ತಿದೆ. ಆದರೆ, ಯಾವುದೇ ವಿಚಾರವನ್ನು ಸರಿಯಾಗಿ ತಿಳಿದುಕೊಳ್ಳದೆ ಅವಿವೇಕಿಗಳಂತೆ ವಿವಾದ ಸೃಷ್ಟಿಸುತ್ತಾರೆ.

ಆರೆಸ್ಸೆಸ್ ಮಹಾನ್ ದೇಶಭಕ್ತ ಸಂಘಟನೆ. ಅದರ ವಿರುದ್ಧ ಮಾತನಾಡುವುದೇ ಅಪರಾಧ ಎಂಬ ಭಯದ ವಾತಾವರಣ ಸೃಷ್ಟಿಸಿದ ಮಾಧ್ಯಮದ ಪಡ್ಡೆಗಳಿಗೆ ಚರಿತ್ರೆಯ ಸತ್ಯ ತಿಳಿದುಕೊಳ್ಳುವ ವ್ಯವಧಾನ ಇಲ್ಲ. ಇನ್ನೊಬ್ಬರ ಅಭಿಪ್ರಾಯ ಗೌರವಿಸುವ ಸಜ್ಜನಿಕೆ ಇಲ್ಲ. ಇದೆಲ್ಲಕ್ಕಿಂತ ಮುಖ್ಯವಾಗಿ ಮಾಧ್ಯಮಗಳಲ್ಲಿ ಕೆಲಸ ಮಾಡುವ ತಾವು ನಿಷ್ಪಕ್ಷಪಾತವಾಗಿ ಇರಬೇಕೆಂಬ ವೃತ್ತಿನಿಷ್ಠೆಯೂ ಇಲ್ಲ. 70ರ ದಶಕದಲ್ಲಿ ನಾನು ಸಂಯುಕ್ತ ಕರ್ನಾಟಕದ ಮೂಲಕ ಪತ್ರಿಕೋದ್ಯಮ ಪ್ರವೇಶಿಸಿದಾಗ, ಹುಬ್ಬಳ್ಳಿಯಲ್ಲಿ ಆರೆಸ್ಸೆಸ್‌ನ ಹಿರಿಯ ಚಿಂತಕ ನಾರಾಯಣ ಘಳಗಿ ಅಂತಹವರು ಮುಖ್ಯ ಉಪಸಂಪಾದಕರಾಗಿದ್ದರು. ಅವರು ಈ ರೀತಿ ಅಸಭ್ಯವಾಗಿ ವರ್ತಿಸಿದ್ದನ್ನು ನಾನು ನೋಡಿಲ್ಲ. ಆದರೆ, ಜಾತಿವಾದ ಮತ್ತು ಭ್ರಷ್ಟಾಚಾರ ಮೈಗೂಡಿಸಿಕೊಂಡ ಇಂದಿನ ಮಾಧ್ಯಮ ರಂಗದ ಈ ಅವಿವೇಕಿಗಳು ಜಾತಿ ಕಾರಣಕ್ಕಾಗಿ ಸಿದ್ದರಾಮಯ್ಯ ಅಂತಹವರನ್ನು ವಿರೋಧಿಸುತ್ತಾರೆ. ಸದಾ ರಾಷ್ಟ್ರಭಕ್ತಿ ಬಗ್ಗೆ ಮಾತನಾಡುವ ಇವರಿಗೆ ರಾಷ್ಟ್ರವೆಂದರೆ, ಅವರ ಜಾತಿ. ತಮ್ಮ ಜಾತಿ ಹಿತಾಸಕ್ತಿ ಕಾಪಾಡಿಕೊಳ್ಳಲು ಹಿಂದೂ ಎಂಬ ಧರ್ಮದ ಮುಖವಾಡ ಬಳಸಿಕೊಳ್ಳುತ್ತಾರೆ. ಹಿಂದುತ್ವವೇ ತಮ್ಮ ರಾಷ್ಟ್ರಪ್ರೇಮ ಎಂದು ಪ್ರತಿಪಾದಿಸುತ್ತಾರೆ. ಜಾತಿ ಹಿತಾಸಕ್ತಿ ಜೊತೆಗೆ ‘‘ಹಚ್ಚಗಿದ್ದಲ್ಲಿ ಮೇಯುವ, ಬೆಚ್ಚಗಿದ್ದಲ್ಲಿ ಮಲಗುವ’’ ಇವರು ಜಾತಿ ಹಿತಾಸಕ್ತಿ ಕಾಪಾಡಲು ಎಲ್ಲಿಯವರೆಗೆ ಹೋಗುತ್ತಾರೆಂದರೆ ತಮ್ಮ ಜಾತಿಯ ಮಠಾಧೀಶನೊಬ್ಬ ಅತ್ಯಾಚಾರ ಆರೋಪದಲ್ಲಿ ಸಿಲುಕಿದರೆ ಆತನನ್ನು ರಕ್ಷಿಸಿಕೊಳ್ಳಲು ತಮ್ಮ ವೃತ್ತಿ ಪ್ರಭಾವ ಬಳಸಿಕೊಳ್ಳುತ್ತಾರೆ. ತಮ್ಮ ಜಾತಿಯವನು ಅಲ್ಲದ ಸನ್ಯಾಸಿಯೊಬ್ಬ ಯಾವುದೇ ಹಗರಣದಲ್ಲಿ ಸಿಲುಕಿದರೆ, ನಿತ್ಯಾನಂದನ ಕರ್ಮಕಾಂಡ ಎಂದು ಕೆಟ್ಟಭಾಷೆಯಲ್ಲಿ ನಿಂದಿಸುತ್ತಾರೆ. ಇದು ಇಂದಿನ ಮಾಧ್ಯಮಗಳ ಸ್ಥಿತಿ.

ಇಂದು ಮಾಧ್ಯಮಗಳಲ್ಲಿ ಅದರಲ್ಲೂ ಮುಖ್ಯವಾಗಿ ಟಿವಿ ಚಾನೆಲ್ ಮತ್ತು ಪತ್ರಿಕೆಗಳಲ್ಲಿ ಆಯಕಟ್ಟಿನ ಜಾಗ ಹಿಡಿದು ಕೂತವರು ಒಂದೇ ಜಾತಿ ಮತ್ತು ಪಂಗಡಕ್ಕೆ ಸೇರಿದವರು ಆಗಿದ್ದಾರೆ. ಅವರಿಗೆ ತಮ್ಮ ಜಾತಿ ಹಿತಾಸಕ್ತಿ ಜೊತೆಗೆ ಬಿಟ್ಟಿಯಾಗಿ ಬರುವ ಸವಲತ್ತುಗಳು ಮುಖ್ಯ. ಇಂತಹವರು ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ನೋವಿಗೆ ಎಂದಿಗೂ ಸ್ಪಂದಿಸುವುದಿಲ್ಲ.

ಮಾಧ್ಯಮ ರಂಗ ಮತ್ತು ನಮ್ಮ ವಿದ್ಯಾರ್ಥಿ ಯುವಜನರು ಹೀಗಾಗಲು ಕಾರಣ ಎಡಪಂಥೀಯರು ಮತ್ತು ಪ್ರಗತಿಪರರು ಎಂದು ಹೇಳಿಕೊಳ್ಳುವ ನಾವಲ್ಲದೇ ಬೇರಾರೂ ಅಲ್ಲ. 90ರ ದಶಕದ ನಂತರ ಕಣ್ಣು ಬಿಟ್ಟ ಹೊಸ ಪೀಳಿಗೆಯನ್ನು ತಲುಪುವ ಪ್ರಯತ್ನ ನಾವು ಯಾರೂ ಹೋಗಲೇ ಇಲ್ಲ. ಶಾಲಾ ಕಾಲೇಜುಗಳನ್ನು ಎಬಿವಿಪಿಯಂತಹ ಸಂಘಟನೆಗೆ ಬಿಟ್ಟುಕೊಟ್ಟು ನಾವು ಕೇವಲ ಸಂಘಟಿತ ಕಾರ್ಮಿಕ ವರ್ಗದ ಆರ್ಥಿಕ ಬೇಡಿಕೆಗಳಿಗಾಗಿ ನಮ್ಮನ್ನು ತೊಡಗಿಸಿಕೊಂಡೆವು. ಹೀಗೆ ಆರ್ಥಿಕ ಸವಲತ್ತು ಪಡೆದವರಿಗೆ ಸಿದ್ಧಾಂತ ಕೊಡಲಿಲ್ಲ. ಹೀಗಾಗಿ ಅವರು ತಲೆ ಮೇಲೆ ಇಟ್ಟಿಗೆ ಹೊತ್ತು ಅಯೋಧ್ಯೆಗೆ ಹೊರಟರು.

ಉದಾಹರಣೆಗೆ, ದಕ್ಷಿಣ ಕನ್ನಡದಲ್ಲಿ ಭಯಾನಕ ರೂಪ ತಾಳಿರುವ ಹಿಂದೂ ಕೋಮುವಾದದಲ್ಲಿ ಹಿಂದುಳಿದ ವರ್ಗದ ಯುವಕರೇ ಸಕ್ರಿಯವಾಗಿದ್ದಾರೆ. ಇವರು ಬೇರಾರೂ ಅಲ್ಲ. ಭೂಸುಧಾರಣೆಗಾಗಿ ಕಮ್ಯುನಿಸ್ಟರು ನಡೆಸಿದ ಹೋರಾಡಿದ ಫಲವಾಗಿ ಮತ್ತು ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ತಂದ ಭೂಸುಧಾರಣೆಯಿಂದಾಗಿ ಭೂಮಿ ಪಡೆದ ಗೇಣಿದಾರರ ಮಕ್ಕಳೇ ಇವತ್ತು ಭಜರಂಗ ದಳದ ಕಾರ್ಯಕರ್ತರಾಗಿ ಕಂಡಕಂಡವರ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ಇದರ ಬಗ್ಗೆ ಪ್ರಗತಿಪರ ಸಂಘಟನೆಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

ಇಂತಹ ನಿರಾಶಾಜನಕದ ವಾತಾವರಣದ ನಡುವೆಯೂ ಮುಖೇಶ್ ಅಂಬಾನಿ ಎದುರು ಮಂಡಿಯೂರಿ ಕೂತುಕೊಳ್ಳುವ ಪ್ರಧಾನಿ ವಿರುದ್ಧ, ಚಡ್ಡಿಭಕ್ತರ ಅವಿವೇಕದ ವಿರುದ್ಧ ನಮ್ಮ ಅನೇಕ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಪಡಿಸುತ್ತಿರುವುದನ್ನು ನೋಡಿದರೆ, ನಾವು ನಿರಾಶರಾಗಬೇಕಿಲ್ಲ ಎಂದು ಅನ್ನಿಸುತ್ತದೆ.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬಲಿದಾನ ಮಾಡಿದ, ಜೈಲಿಗೆ ಹೋದ ಸಾವಿರಾರು ಮುಸಲ್ಮಾನರ ಹೆಸರನ್ನು ನಾನು ಹೇಳುತ್ತೇನೆ. ಆರೆಸ್ಸೆಸ್‌ನ ಒಬ್ಬನೇ ಒಬ್ಬ ವ್ಯಕ್ತಿಯ ಹೆಸರು ಹೇಳಲು ಸ್ವಾಮಿ ಅಗ್ನಿವೇಶ್ ಅವರು ಹಾಕಿದ ಸವಾಲಿಗೆ ಈವರೆಗೆ ಉತ್ತರ ಬಂದಿಲ್ಲ. ಮಾಧ್ಯಮಗಳಲ್ಲಿ ಇರುವ ಪುರೋಹಿತಶಾಹಿಗಳು ಈ ಸವಾಲು ಚರ್ಚೆಯಾಗದಂತೆ ನೋಡಿಕೊಳ್ಳುತ್ತಾರೆ.

1925ರಲ್ಲಿ ಹುಟ್ಟಿದ ಆರೆಸ್ಸೆಸ್ ಸ್ವಾತಂತ್ರ್ಯ ಹೋರಾಟದಲ್ಲಿ ಯಾಕೆ ಪಾಲ್ಗೊಳ್ಳಲಿಲ್ಲ ಎಂಬ ಸಂಗತಿ ಈಗ ಗುಟ್ಟಾಗಿ ಉಳಿದಿಲ್ಲ. ರಾಷ್ಟ್ರದ ಸ್ವಾತಂತ್ರ್ಯಗಿಂತ ಬ್ರಾಹ್ಮಣ್ಯಶಾಹಿ ಪ್ರಾಬಲ್ಯದ ಹಿಂದೂ ರಾಷ್ಟ್ರ ನಿರ್ಮಿಸುವುದು ಗುರಿಯಾಗಿತ್ತು. ಈ ಗುರಿ ಸಾಧನೆಗೆ ಅಂದಿನ ಸ್ವಾತಂತ್ರ್ಯ ಹೋರಾಟದ ಮುಂಚೂಣಿ ನಾಯಕರಾಗಿದ್ದ ಮಹಾತ್ಮಾ ಗಾಂಧಿ, ಜವಾಹರಲಾಲ್ ನೆಹರೂ, ಸುಭಾಶ್ಚಂದ್ರ ಬೋಸ್, ಭಗತ್‌ಸಿಂಗ್ ಅಂತಹವರು ಅಡ್ಡಿಯಾಗಿದ್ದರು. ಎಲ್ಲಾ ಜಾತಿ, ಸಮುದಾಯಗಳನ್ನು ಕಟ್ಟಿಕೊಂಡು ದೇಶವನ್ನು ಮುನ್ನಡೆಸುವ ಗಾಂಧೀಜಿಯನ್ನು ಕಂಡರೆ ಆರೆಸ್ಸೆಸ್‌ಗೆ ಆಗುತ್ತಿರಲಿಲ್ಲ. ಅಂತಲೇ ಆರೆಸ್ಸೆಸ್ ಸರಸಂಘ ಚಾಲಕ ಗೋಳ್ವಾಲ್ಕರ್ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ವ್ಯರ್ಥ ಶ್ರಮ ಹಾಳು ಮಾಡಿಕೊಳ್ಳದೇ ಮುಸ್ಲಿಮರು, ಕ್ರೈಸ್ತರು ಮತ್ತು ಕಮ್ಯುನಿಸ್ಟರ ವಿರುದ್ಧ ಹೋರಾಡಲು ಸಜ್ಜಾಗಿರಬೇಕೆಂದು ಸಂಘದ ಕಾರ್ಯಕರ್ತರಿಗೆ ಕರೆ ನೀಡಿದ್ದರು.

ಆರೆಸ್ಸೆಸ್ ಸ್ಥಾಪನೆಗೂ ಮುನ್ನ 1920ರಲ್ಲಿ ಬಾಲಗಂಗಾಧರ ತಿಲಕರು ಸ್ವಾತಂತ್ರ್ಯ ಹೋರಾಟಕ್ಕೆ ಧಾರ್ಮಿಕ ಸ್ವರೂಪ ನೀಡಿದಾಗ, ಹೆಡಗೇವಾರ್ ಪಾಲ್ಗೊಂಡಿದ್ದು ನಿಜ. ಆದರೆ ತಿಲಕರ ಸಾವಿನ ನಂತರ ಹೋರಾಟದ ನಾಯಕತ್ವ ಗಾಂಧಿ ಕೈಗೆ ಬಂತು. ಗಾಂಧಿ ಅದನ್ನು ಸರ್ವಧರ್ಮೀಯ ಹೋರಾಟವನ್ನಾಗಿ ರೂಪಿಸಿದರು. ಇದರಿಂದ ರೋಸಿ ಹೋದ ಹೆಡಗೇವಾರ್ ಸ್ವಾತಂತ್ರ್ಯ ಹೋರಾಟದಿಂದ ದೂರ ಸರಿದು 1925ರಲ್ಲಿ ಆರೆಸ್ಸೆಸ್ ಸ್ಥಾಪಿಸಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಆರೆಸ್ಸೆಸ್ ಪಾತ್ರ ಇರಲಿಲ್ಲ ಎಂದು ಟೀಕಿಸಿದರೆ, ನೆಹರೂ ಮತ್ತು ಲೇಡಿ ವೌಂಟ್ ಬೆಟನ್ ಕತೆ ಹೇಳುತ್ತಾರೆ. ತಮ್ಮ ಹಿಂದೂರಾಷ್ಟ್ರ ನಿರ್ಮಾಣಕ್ಕೆ ಅಡ್ಡಿಯಾಗಿದ್ದ ಗಾಂಧೀಜಿಯನ್ನು ಮುಗಿಸಿದ ನಂತರವೂ ಕೂಡ ಇವರ ಕನಸು ನನಸಾಗಲಿಲ್ಲ. ಡಾ. ಅಂಬೇಡ್ಕರ್ ರೂಪಿಸಿದ ಸಂವಿಧಾನ ಇವರ ಮನುವಾದಿ ಹಿಂದೂ ರಾಷ್ಟ್ರವಾದ ನಿರ್ಮಾಣಕ್ಕೆ ಪ್ರಮುಖ ಅಡ್ಡಿಯಾಗಿದೆ. ಅಂತಲೇ ಸಂವಿಧಾನವನ್ನು ಬದಲಿಸುವ ಮಾತನ್ನು ಅವರು ಆಡುತ್ತಾರೆ. ಗಾಂಧಿ ಹತ್ಯೆ ನಂತರ ಬಾಲ ಮುದುರಿಕೊಂಡಿದ್ದ ಇವರು 90ರ ದಶಕದಲ್ಲಿ ಜಾಗತೀಕರಣದ ಪ್ರವೇಶದೊಂದಿಗೆ ಮತ್ತೆ ಬಾಲ ಬಿಚ್ಚಿದರು. ಅಯೋಧ್ಯೆಯ ಬಾಬರಿ ಮಸೀದಿ ನಾಶ, ಅದಕ್ಕಾಗಿ ಅಡ್ವಾಣಿ ನಡೆಸಿದ ರಥಯಾತ್ರೆ ಇವನ್ನೆಲ್ಲ ವಿಸ್ತರಿಸಲು ಅವಕಾಶ ನೀಡಿತು. ಈಗ ದೇಶದ ಅಧಿಕಾರ ಸೂತ್ರ ಹಿಡಿದು ಮತ್ತೆ ತಮ್ಮ ಗುರಿ ಸಾಧಿಸಲು ಯತ್ನ ನಡೆಸಿದ್ದಾರೆ. ದೇಶದ ಸಂಪತ್ತಿನ ಲೂಟಿಗೆ ಅಂಬಾನಿ, ಅದಾನಿಯಂತಹ ಕಾರ್ಪೊರೇಟ್ ಬಂಡವಾಳ ಶಾಹಿಗಳಿಗೂ ಇವರ ನೆರವು ಬೇಕಿದೆ. ದೇಶದ ಸಂಪತ್ತಿನ ಸುಲಿಗೆ ವಿರುದ್ಧ ಯುವಕರು ಬಂಡೇಳದಂತೆ ಮಾಡಲು ಅವರನ್ನು ಗೋರಕ್ಷಣೆಯಂತಹ ಹೊಡೆದಾಟದಲ್ಲಿ ತೊಡಗಿಸಿ ತಮ್ಮ ಗುರಿ ಸಾಧಿಸುತ್ತಿದ್ದಾರೆ. ಸಂಘ ಪರಿವಾರದ ಬ್ರಾಹ್ಮಣಶಾಹಿ, ಕಾರ್ಪೊರೇಟ್ ಬಂಡವಾಳಶಾಹಿಗಳ ನಡುವಿನ ಮೈತ್ರಿಯಿಂದಾಗಿ ದೇಶ ಈ ಸ್ಥಿತಿಗೆ ಬಂದು ತಲುಪಿದೆ. ಈ ದುಷ್ಟಕೂಟದ ವಿರುದ್ಧ ಹೋರಾಟವೇ ನಮ್ಮ ಮೊದಲ ಆಧ್ಯತೆ ಆಗಬೇಕಿದೆ.

Courtesy : varthabharati

Please follow and like us:
error