ಹಿಂದುತ್ವದ ಬಂಧನ ನಿರಾಕರಿಸಿದ ಲಿಂಗಾಯತರು-ಸನತ್ ಕುಮಾರ್ ಬೆಳಗಲಿ

ವೇದಕ್ಕೆ ಒರೆಯ ಕಟ್ಟುವೆ
ಶಾಸ್ತ್ರಕ್ಕೆ ನಿಗಳ ನಿಕ್ಕುವೆ
ಆಗಮದ ಮೂಗ ಕೊಯ್ಯುವೆ ನೋಡಯ್ಯ
ಮಹಾದಾನಿ ಕೂಡಲ ಸಂಗಮದೇವ
ಮಾದಾರಚನ್ನಯ್ಯನ ಮನೆಯ ಮಗ ನಾನಯ್ಯ

ಎಂದು ವೈದಿಕ ಶಾಹಿಗೆ ಸವಾಲು ಹಾಕಿ 12ನೆ ಶತಮಾನದಲ್ಲಿ ಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪಿಸಿದರು. ಇಂಥ ಪರಂಪರೆಗೆ ಸೇರಿದ ಲಿಂಗಾಯತರನ್ನು ಹಿಂದೂ ಧರ್ಮ ಬಿಟ್ಟು ಹೋಗಬೇಡಿಯೆಂದು ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಕೇಳಿಕೊಂಡಿದ್ದಾರೆ. ತಮ್ಮ ಮನೆಯಲ್ಲಿ ಎಂದು ಇರದವರನ್ನು, ಮನೆಯಿಂದ ದೂರ ಇಟ್ಟವರನ್ನು ಮನೆಯಿಂದ ದೂರ ಹೋಗಬೇಡಿ ಎಂದು ಪೇಜಾವರ ಸ್ವಾಮೀಜಿ ಕೇಳಿಕೊಂಡಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. 

ಲಿಂಗಾಯತರು ಹಿಂದೂ ಧರ್ಮದ ಭಾಗವೇ ಅಲ್ಲ. ಹಾಗಿದ್ದರೂ ನೀವೇಕೆ ನಮ್ಮನ್ನು ಹಿಂದೂ ಧರ್ಮ ಬಿಟ್ಟು ಹೋಗಬೇಡಿ, ವೀರಶೈವರು-ನೀವು ಪ್ರತ್ಯೇಕ ಆಗಬೇಡಿಯೆಂದು ಪದೇ ಪದೇ ಕೇಳುತ್ತಿದ್ದೀರಿಯೆಂದು ಪ್ರತ್ಯೇಕ ಲಿಂಗಾಯತ ಧರ್ಮ ಚಳವಳಿಯ ನೇತೃತ್ವ ವಹಿಸಿದವರಲ್ಲಿ ಒಬ್ಬರಾದ ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ.ಜಾಮದಾರ್ ಪೇಜಾವರ ಶ್ರೀಗಳನ್ನು ಪ್ರಶ್ನಿಸಿದ್ದಾರೆ. ತಮ್ಮ ಧರ್ಮದ ಆಂತರಿಕ ವ್ಯವಹಾರದಲ್ಲಿ ಕೈ ಹಾಕುವ ಸಂಘ ಪರಿವಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡ ಅವರು ಲಿಂಗಾಯತ ಹೋರಾಟದಿಂದ ಪೇಜಾವರ ಶ್ರೀಗಳು, ಬಿಜೆಪಿ ಮತ್ತು ಆರೆಸ್ಸೆಸ್ ನಾಯಕರು ಕಂಗಾಲಾಗಿದ್ದಾರೆಂದು ಹೇಳಿದ್ದಾರೆ. ಲಿಂಗಾಯತರು ಯಾರು ಎಂದು ನಿಮಗೆ ಮನವರಿಕೆ ಮಾಡಿಕೊಡಲು ಸಿದ್ಧರಿದ್ದೇವೆ. ಬಹಿರಂಗ ಚರ್ಚೆಗೆ ಬನ್ನಿಯೆಂದು ಪೇಜಾವರ ಶ್ರೀಗಳಿಗೆ ಮಾತ್ರವಲ್ಲ ಆರೆಸ್ಸೆಸ್ ಸರಸಂಘ ಚಾಲಕ ಮೋಹನ್ ಭಾಗವತ್, ಸಾಹಿತಿ ಎಸ್.ಎಲ್.ಭೈರಪ್ಪ, ಸಂಸದ ಪ್ರತಾಪ್ ಸಿಂಹ ಹಾಗೂ ಕಲ್ಲಡ್ಕ ಪ್ರಭಾಕರ ಭಟ್‌ರಿಗೆ ಅವರು ಸವಾಲು ಹಾಕಿದ್ದಾರೆ.

ಲಿಂಗಾಯತ ಧರ್ಮದ ಹೋರಾಟ ತೀವ್ರಗೊಂಡರೆ ರಕ್ತಪಾತವಾಗಲಿದೆ ಎಂದು ಸಂಘ ಪರಿವಾರದವರು ಹೇಳಿದ್ದಾರೆ. ಸೈದ್ಧಾಂತಿಕ ಹೋರಾಟ ಕೈಗೊಂಡ ಮೂವರು ಲಿಂಗಾಯತರು ಈಗಾಗಲೇ ಬಲಿಯಾಗಿದ್ದಾರೆ. ನನಗೂ ಜೀವಭಯವಿದೆ. ಆದರೆ ನಾನು ಇದಕ್ಕೆ ಹೆದರುವುದಿಲ್ಲ. ಶರಣರಿಗೆ ಮರಣವೇ ಮಹಾನವಮಿ ಎಂದು ಜಾಮದಾರ ಉತ್ತರಿಸಿದ್ದಾರೆ.

ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಹೋರಾಡುವವರನ್ನು ಟೀಕಿಸಿ ಆರೆಸ್ಸೆಸ್ ಪ್ರಚಾರಕ ಸು.ರಾಮಣ್ಣ ಬಹಿರಂಗ ಹೇಳಿಕೆ ನೀಡಿ, ನಂತರ ಕ್ಷಮೆಯಾಚಿಸಿದರು. ಈಗ ಪೇಜಾವರ ಶ್ರೀಗಳು ಲಿಂಗಾಯತರಿಗೆ ಬುದ್ಧಿ ಹೇಳಲು ಹೊರಟಿದ್ದಾರೆ. ಲಿಂಗಾಯತರು ಹಿಂದೂ ಧರ್ಮ ಬಿಟ್ಟು ಹೋಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪೇಜಾವರ ಶ್ರೀಗಳಿಗೆ ವಿವಾದಗಳು ಹೊಸತಲ್ಲ. ಉಡುಪಿಯ ಮಠಾಧೀಶರಾಗಿದ್ದುಕೊಂಡು ಬಾಬರಿ ಮಸೀದಿ ಬೀಳಿಸುವ ರಾಜಕೀಯ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದರೆ ಈಗ ತಮ್ಮ ಕನಸಿನ ಹಿಂದೂ ರಾಷ್ಟ್ರದ ಗೋಪುರದ ಕಲ್ಲುಗಳು ಉರುಳಿ ಬೀಳುತ್ತಿರುವ ಬಗ್ಗೆ ಅವರು ಗಾಬರಿಗೊಂಡಿದ್ದಾರೆ. ಈ ಗಾಬರಿಯಿಂದಲೇ ಅವರು ಲಿಂಗಾಯತರಿಗೆ ಮನವಿ ಮಾಡಿಕೊಂಡಿದ್ದಾರೆ. ಲಿಂಗಾಯತರು ಮತ್ತು ತಾವು ಪ್ರತಿಪಾದಿಸುತ್ತಿರುವ ಹಿಂದೂತ್ವಕ್ಕೂ ಸಂಬಂಧವಿಲ್ಲ ಎಂಬುದು ಗೊತ್ತಿರದಷ್ಟು ಪೇಜಾವರ ಶ್ರೀಗಳು ದಡ್ಡರಲ್ಲ. ಅವರಿಗೆ ಎಲ್ಲ ಗೊತ್ತಿದೆ. ಗೊತ್ತಿದ್ದು ಕೂಡ ಜೇನುಗೂಡಿಗೆ ಕಲ್ಲು ಎಸೆಯುವ ಸಾಹಸ ಮಾಡಿದ್ದಾರೆ. ಲಿಂಗಾಯತ ಧರ್ಮದ ಅಡಿಪಾಯವೇ ಬಸವ ಸಿದ್ಧಾಂತ.

ಬಸವಣ್ಣನವರು ತಮ್ಮ ವಚನವೊಂದರಲ್ಲಿ ಉಳ್ಳವರು ಶಿವಾಲಯ ಮಾಡುವರು, ನಾನೇನು ಮಾಡಲಿ ಬಡವನಯ್ಯ,
ಎನ್ನ ಕಾಲೇ ಕಂಬ,
ದೇಹವೇ ದೇಗುಲ,

ಶಿರವೇ ಹೊನ್ನ ಕಳಶವಯ್ಯ, ಸ್ಥಾವರಕ್ಕಳಿವುಂಟು
ಜಂಗಮಕ್ಕೆ ಅಳಿವಿಲ್ಲ
ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಆದರೆ ಪೇಜಾವರರದ್ದು ಸ್ಥಾವರ ಸಂಸ್ಕೃತಿ. ಅಂತಲೇ ಅಯೋಧ್ಯೆಯ ಮಸೀದಿಯನ್ನು ಕೆಡವಿಸಿ, ಬೃಹತ್ ರಾಮ ಮಂದಿರ ನಿರ್ಮಾಣಕ್ಕೆ ಅವರು ಸಾರಥ್ಯ ವಹಿಸಿದರು. ಬಸವಣ್ಣನವರಿಗೆ ಸ್ಥಾವರ ಸಂಸ್ಕೃತಿಯಲ್ಲಿ ನಂಬಿಕೆ ಇಲ್ಲ. ಅವರು ದೇಹವೇ ದೇಗುಲ ಎಂದು ಹೇಳಿದರು. ಆದರೆ ಸಂಘ ಪರಿವಾರದವರು ಮಂದಿರವನ್ನು ಅಲ್ಲೇ ಕಟ್ಟುವೆವು ಎಂದು ಹೂಂಕರಿಸುತ್ತಾರೆ. ಮಂದಿರಕ್ಕೆ ಹೋಗಿ ಮನಸ್ಸಿಗೆ ಸಮಾಧಾನ ಮಾಡಿಕೊಳ್ಳುವವರು ಇಲ್ಲವೆಂದಲ್ಲ. ಆದರೆ ಪೇಜಾವರರು ಕಟ್ಟಲು ಹೊರಟಿರುವ ರಾಮ ಮಂದಿರ ಭಕ್ತಿಯ ಉದ್ದೇಶದಿಂದ ಕೂಡಿದ್ದಲ್ಲ. ಅದರ ಹಿಂದೆ ಒಂದು ರಾಜಕೀಯ ಕಾರ್ಯಸೂಚಿಯಿದೆ.

ಹಿಂದೂಗಳು ಪೂಜಿಸುವ ಶಿವನನ್ನು ಪರದೈವ ಎಂದು ಹೇಳುವ ಪೇಜಾವರ ಸ್ವಾಮಿಗಳು ಶಿವಲಿಂಗ ಪೂಜೆಯನ್ನು ಲಿಂಗಾಯತರು ಮಾಡುತ್ತಿರುವುದರಿಂದ ಅವರು ಹಿಂದೂಗಳೆಂದು ವಾದಿಸುತ್ತಾರೆ. ಆದರೆ ಲಿಂಗಾಯತರು ಪೂಜಿಸುತ್ತಿರುವುದು ಬಸವಣ್ಣನವರು ಹೇಳಿಕೊಟ್ಟ ಇಷ್ಟಲಿಂಗವನ್ನ್ನು. ದೇವಾಯಲಕ್ಕೆ ಹೋದರೆ, ಪುರೋಹಿತರ ಶೋಷಣೆಗೆ ಒಳಗಾಗಬೇಕಾಗುತ್ತದೆ. ನಿಮ್ಮ ಕರಕಮಲದಲ್ಲೇ ಲಿಂಗವನ್ನು ಇಟ್ಟು ಪೂಜಿಸಿಯೆಂದು ಬಸವಣ್ಣ ಹೇಳಿದರು. ಹಿಂದೂಗಳು ಬಹುದೇವೋಪಾಸಕರು. ಆದರೆ ಲಿಂಗಾಯತರು ಏಕದೇವೋಪಾಸಕರು. ಅಹಿಂಸಾವಾದಿಗಳಾದ ಅವರು ಯಜ್ಞ, ಯಾಗ ಮತ್ತು ಹೋಮವನ್ನು ತೀವ್ರ ವಿರೋಧಿಸುತ್ತಾರೆ. ಲಿಂಗಾಯತರು ಪೂಜಿಸುವ ಶಿವನೆಂದರೆ, ಕೈಲಾಸಪತಿ ನಂದಿ ವಾಹನ ರುಂಡ ಮಾಲಾಧಾರಿ ಶಿವನಲ್ಲ. ನಿರಾಕಾರ ಶಿವ ಎಂದು ಚಿಂತಕ ಕಲಬುರ್ಗಿಯವರು ಹೇಳಿದ್ದಾರೆ.

ಲಿಂಗಾಯತರು ವೇದಗಳ ಕರ್ಮಕಾಂಡವನ್ನು ಖಂಡಿಸುತ್ತಾರೆ. ಜ್ಞಾನಕಾಂಡವನ್ನು ಒಪ್ಪಿಕೊಳ್ಳುತ್ತಾರೆ ಎಂಬ ಮಾತು ನಿಜ. ಕರ್ಮಕಾಂಡವನ್ನು ನಿರಾಕರಿಸುವ ಜೈನ ಮತ್ತು ಬೌದ್ಧ ಧರ್ಮಗಳನ್ನು ಹೇಗೆ ಪ್ರತ್ಯೇಕ ಧರ್ಮಗಳೆಂದು ಪರಿಗಣಿಸಲಾಗುತ್ತದೆಯೋ ಅದೇ ರೀತಿ ಲಿಂಗಾಯತ ಧರ್ಮವನ್ನು ಪ್ರತ್ಯೇಕವೆಂದು ಪರಿಗಣಿಸುವುದು ನ್ಯಾಯಸಮ್ಮತವಾಗಿದೆ.

ಹಿಂದೂ ಧರ್ಮವನ್ನು ಬಿಟ್ಟು ಹೋಗಬೇಡಿ ಎಂದು ಲಿಂಗಾಯತರಿಗೆ ಮನವಿ ಮಾಡಿಕೊಳ್ಳುವ ಮುನ್ನ ಪೇಜಾವರ ಶ್ರೀಗಳು ಪ್ರಶ್ನೆಯೊಂದಕ್ಕೆ ಉತ್ತರಿಸಬೇಕಿದೆ. ಲಿಂಗಾಯತರು ಹಿಂದೂ ಧರ್ಮದಲ್ಲಿ ಯಾವಾಗ ಇದ್ದರು? ಅದರೊಳಗೆ ಇಲ್ಲದವರನ್ನು ಬಿಟ್ಟು ಹೋಗಬೇಡಿಯೆಂದು ಮನವಿ ಮಾಡಿಕೊಳ್ಳುವುದರಲ್ಲಿ ಏನು ಅರ್ಥವಿದೆ? ವಾಸ್ತವವಾಗಿ ಲಿಂಗಾಯತರಿಗೂ, ಹಿಂದೂ ಧರ್ಮಕ್ಕೂ ಸಂಬಂಧವಿಲ್ಲ. ಹಿಂದೂಗಳಲ್ಲಿ ಶ್ರೇಣೀಕೃತ ಜಾತಿ ಪದ್ಧತಿಯಿದೆ. ಆದರೆ ಲಿಂಗಾಯತರಲ್ಲಿ ಜಾತಿ ಭೇದವಿಲ್ಲ. ಲಿಂಗಾಯತರಲ್ಲಿ ಲಿಂಗ ಧರಿಸುವವರೆಲ್ಲ ಸಮಾನರು. ಯಾರು ಯಾವಾಗ ಬೇಕಾದರೂ ಲಿಂಗಾಯತರಾಗಬಹದು. ಮಠಾಧಿಪತಿಗಳಾಗಬಹುದು. ಉದಾಹರಣೆಗೆ ಇಳಕಲ್ ಮಠಕ್ಕೆ ದಲಿತ ಹಿಂದುಳಿದ ಸಮುದಾಯದ ಜ್ಞಾನವಂತ ಯುವಕನನ್ನು ಅಲ್ಲಿನ ಸ್ವಾಮಿಗಳು ತಮ್ಮ ಉತ್ತರಾಧಿಕಾರಿಯನ್ನಾಗಿ ಮಾಡಿದರು. ಇದಕ್ಕೆ ವಿರೋಧ ಬಂದರೂ ಅವರು ಮಣಿಯಲಿಲ್ಲ. ಮುಂಡರಗಿಯ ತೋಂಟದಾರ್ಯ ಮಠಕ್ಕೆ ಲಿಂಗಾಯತರಲ್ಲದ ನಿಜಗುಣಾನಂದ ಸ್ವಾಮಿಗಳು ಮಠಾಧೀಶರಾಗಿದ್ದಾರೆ. ಜೈನರಲ್ಲೂ ಇಂಥ ಅವಕಾಶವಿದೆ. ಹಿಂದುಳಿದ ಕುರುಬ ಸಮಾಜಕ್ಕೆ ಸೇರಿದ ಯುವಕನೊಬ್ಬ ಕುಲಭೂಷಣ ಸ್ವಾಮೀಜಿಯಾಗಿ ಉತ್ತರ ಕರ್ನಾಟಕದಲ್ಲಿ ಹೆಸರು ಮಾಡಿದ್ದಾರೆ. ಆದರೆ ಹಿಂದೂತ್ವದ ಪ್ರತಿಪಾದಕರಾದ ಪೇಜಾವರ ಶ್ರೀಗಳು ತಮ್ಮ ಉತ್ತರಾಧಿಕಾರಿಯನ್ನಾಗಿ ಬ್ರಾಹ್ಮಣೇತರ ವ್ಯಕ್ತಿಯನ್ನು ಆಯ್ಕೆ ಮಾಡುವರೇ? ಬಹುಶಃ ಪೇಜಾವರ ಶ್ರೀಯವರ ಬಳಿ ಈ ಪ್ರಶ್ನೆಗೆ ಉತ್ತರವಿಲ್ಲ.

ಬಹುಶಃ ಪೇಜಾವರರು ವೀರಶೈವರು ಮತ್ತು ಲಿಂಗಾಯತರು ಒಂದೇ ಎಂದುಕೊಂಡು ಗೊಂದಲ ಉಂಟು ಮಾಡಿಕೊಂಡಿದ್ದಾರೆ. ವೀರಶೈವರು ಹಿಂದೂಗಳು ಎಂಬುದು ನಿಜವಾಗಿರಬಹುದು. ಆದರೆ ವೇದ ಪ್ರಾಮಾಣ್ಯವನ್ನು ಒಪ್ಪಿಕೊಳ್ಳದ ಲಿಂಗಾಯತರು ಹೇಗೆ ಹಿಂದೂಗಳಾಗುತ್ತಾರೆ. ಅವರು ಹಿಂದೂಗಳೇ ಆಗಿದ್ದರೆ, ಬಸವಣ್ಣನವರು ವೇದಕ್ಕೆ ಒರೆಯ ಕಟ್ಟುವೆ, ಆಗಮದ ಮೂಗ ಕೊಯ್ಯುವೆ ಎಂಬಂತಹ ವಚನ ಬರೆಯುತ್ತಿದ್ದರೇ? ವೇದಗಳಲ್ಲಿ ಕರ್ಮಕಾಂಡವನ್ನು ನಿರಾಕರಿಸಿ, ಜ್ಞಾನ ಕಾಂಡವನ್ನು ಒಪ್ಪುತ್ತಾರೆ ಎಂಬುದು ನಿಜ. ಲಿಂಗಾಯತರು ಮಾತ್ರವಲ್ಲ ಅವೈದಿಕ ಧರ್ಮಗಳಾದ ಜೈನ ಮತ್ತು ಬೌದ್ಧ ಧರ್ಮಗಳು ಕೂಡ ಇದನ್ನು ಒಪ್ಪಿಕೊಳ್ಳುತ್ತವೆ.

ಹಿಂದೂತ್ವದ ಬಂಧನದಿಂದ ಕಳಚಿಕೊಳ್ಳಲು 12ನೆ ಶತಮಾನದಿಂದಲೇ ಹೋರಾಡುತ್ತ ಬಂದಿರುವ ಲಿಂಗಾಯತರನ್ನು ತನ್ನತ್ತ ಸೆಳೆದುಕೊಳ್ಳಲು ಹಿಂದೂತ್ವವೂ ಕೂಡ ಅವಿತರತವಾಗಿ ಪ್ರಯತ್ನಿಸುತ್ತಲೇ ಇದೆ. ಆದರೆ ಆಚಾರ, ವಿಚಾರ ಯಾವುದರಲ್ಲೂ ಲಿಂಗಾಯತಕ್ಕೂ ಹಿಂದೂತ್ವಕ್ಕೂ ಸಂಬಂಧವಿಲ್ಲ. ಹಿಂದೂಗಳು ಮಾಡುವ ಯಜ್ಞ, ಹೋಮ, ಯಾಗವನ್ನು ಲಿಂಗಾಯತರು ಒಪ್ಪಿಕೊಳ್ಳುವುದಿಲ್ಲ. ಜೈನರು ಮತ್ತು ಬೌದ್ಧರು ಕೂಡ ಈ ಆಚರಣೆಯನ್ನು ಮಾನ್ಯ ಮಾಡುವುದಿಲ್ಲ. ಹಿಂದೂಗಳಲ್ಲಿ ಲಿಂಗ ಭೇದಕ್ಕೆ ಮಾನ್ಯತೆಯಿದೆ. ಅಲ್ಲಿ ಹೆಂಗಸರ ಕೆಲಸ ಅಡುಗೆಮನೆಗೆ ಮಾತ್ರ. ಮನುಸ್ಮತಿ ಪ್ರಕಾರ, ಮಹಿಳೆ ಪುರುಷರಿಗೆ ಸಮಾನಳಲ್ಲ. ಆದರೆ ಲಿಂಗಾಯತ ಧರ್ಮದಲ್ಲಿ ಪುರುಷರಿಗೆ ಸಮಾನವಾದ ಎಲ್ಲಾ ಹಕ್ಕು ಮಹಿಳೆಯರಿಗಿದೆ. ಅಂತಲೇ ಅನುಭವ ಮಂಟಪದಲ್ಲಿ ಬಸವಣ್ಣ ಮತ್ತು ಅಲ್ಲಮಪ್ರಭು ಅವರಿಗೆ ಸಮಾನವಾಗಿ ನಿಂತು ಅಕ್ಕಮಹಾದೇವಿ ವಾದಿಸುತ್ತಿದ್ದರು.

ಲಿಂಗಾಯತರು ವರ್ಣಾಶ್ರಮ ಪದ್ಧತಿ ಒಪ್ಪಿಕೊಳ್ಳುವುದಿಲ್ಲ. ಅವರಲ್ಲಿ ಶ್ರೇಣೀಕೃತ ಜಾತಿ ಪದ್ಧತಿಯಿಲ್ಲ. ಹಿಂದೂ ಧರ್ಮದ ಪ್ರಕಾರ, ವೇದ ಪಠಣ, ವೇದ ಅಧ್ಯಯನ, ವೇದ ಅಧ್ಯಾಪನಕ್ಕೆ ಶೂದ್ರರಿಗೆ ಅವಕಾಶವಿಲ್ಲ. ಅಂತಲೇ ಚಾರ್ತುವರ್ಣ ಪದ್ಧತಿಯ ಯಾವ ವರ್ಣಕ್ಕೂ ಲಿಂಗಾಯತರು ಸೇರಿದವರಲ್ಲ. ಆದರೆ ಬಹಳಷ್ಟು ಲಿಂಗಾಯತರು ದೇವಾಲಯಕ್ಕೆ ಹೋಗುತ್ತಾರೆ ಮತ್ತು ವಿಗ್ರಹ ಆರಾಧನೆ ಮಾಡುತ್ತಾರೆಂದ ಮಾತ್ರಕ್ಕೆ ಹಿಂದೂಗಳೆಂದು ಪರಿಗಣಿಸುವುದಿಲ್ಲ. ಲಿಂಗಾಯತರು ಇಷ್ಟಲಿಂಗವನ್ನು ಬಿಟ್ಟು ಬೇರೆ ಯಾವುದನ್ನೂ ಪೂಜಿಸುವುದಿಲ್ಲ.

ಹಿಂದೂ ಧರ್ಮದಲ್ಲಿ ಬ್ರಾಹ್ಮಣರು, ವೈಶ್ಯರು, ಕ್ಷತ್ರಿಯರು ಮತ್ತು ಶೂದ್ರರು ತಮ್ಮ ಜಾತಿ ಬಿಟ್ಟು ಬೇರೆ ಜಾತಿಗೆ ಸೇರಲು ಅವಕಾಶವಿಲ್ಲ. ಪ್ರತಿಯೊಂದು ಜಾತಿಗೂ ಪರಿಶುದ್ಧತೆ ಲಕ್ಷ್ಮಣ ರೇಖೆಯನ್ನು ವೈದಿಕ ಧರ್ಮ ರೂಪಿಸಿದೆ. ಪ್ರತಿಯೊಬ್ಬನು ತನ್ನ ಜಾತಿಯ ಕರ್ಮವನ್ನು ಮಾಡಿ, ಸ್ವರ್ಗಕ್ಕೆ ಹೋಗಬೇಕು. ಮತ್ತೊಂದು ಜಾತಿಯ ಕರ್ಮವನ್ನು ಮಾಡಲು ಅವಕಾಶವಿಲ್ಲ. ಹೀಗಾಗಿ ಒಂದು ಜಾತಿಯವರು ಇನ್ನೊಂದು ಜಾತಿಯವರೊಂದಿಗೆ ವೈವಾಹಿಕ ಸಂಬಂಧ ಇಟ್ಟುಕೊಳ್ಳುವಂತಿಲ್ಲ. ವರ್ಣಸಂಕರ ಎಂಬುದು ಘೋರ ಅಪರಾಧವೆಂದು ಹಿಂದೂ ಧರ್ಮ ಪರಿಗಣಿಸುತ್ತದೆ. ಹಿಂದೂಗಳಲ್ಲದವರನ್ನು ಹಿಂದೂಗಳನ್ನಾಗಿ ಮಾಡಲು ಸಂಘ ಪರಿವಾರ ಮರು ಮತಾಂತರ ಕಾರ್ಯಕ್ರಮ ರೂಪಿಸಿದ್ದರೂ ಹಿಂದೂಗಳಾದ ನಂತರ ಅವರು ಅದರಲ್ಲಿ ಯಾವ ಜಾತಿಗೆ ಸೇರಬೇಕು ಎಂಬ ಪ್ರಶ್ನೆಗೆ ಅವರಲ್ಲಿ ಉತ್ತರವಿಲ್ಲ.

ಹಿಂದೂ ಧರ್ಮ ಬಿಟ್ಟು ಹೋಗಬಾರದೆಂದು ಮನವಿ ಮಾಡಿಕೊಳ್ಳುವ ಪೇಜಾವರ ಶ್ರೀಗಳು ಹಿಂದೂತ್ವ ಎಂದರೇನು ಎಂಬ ಬಗ್ಗೆ ಉತ್ತರ ನೀಡಬೇಕು. ಹಿಂದೂ ಎಂಬುದು ಒಂದು ಧರ್ಮವೇ ಅಥವಾ ಜೀವನ ಪದ್ಧತಿಯೇ? ಧರ್ಮವಾಗಿದ್ದರೆ, ಅದರ ಸ್ಥಾಪಕರು ಯಾರು? ಅದರ ಧರ್ಮಗ್ರಂಥ ಯಾವುದು? ಜೀವನ ಪದ್ಧತಿ ಎಂದಾದರೆ ಮರು ಮತಾಂತರದ ಪ್ರಹಸನವೇಕೆ? ವೈಷ್ಣವ ದೀಕ್ಷೆ ಏಕೆ? ಈ ರೀತಿ ಪ್ರಶ್ನಿಸಿದರೆ, ವೇದ ಧರ್ಮ ಅನುಸರಿಸುವವರೇ ಹಿಂದೂಗಳೆಂದು ಹೇಳಲಾಗುತ್ತದೆ. ವೇದ ಧರ್ಮವೆಂದರೆ ಬ್ರಾಹ್ಮಣ ಧರ್ಮವಲ್ಲದೇ ಬೇರೇನೂ ಅಲ್ಲ ಎಂಬುದು ಪ್ರಜ್ಞಾವಂತರ ಅಭಿಪ್ರಾಯ. ಬ್ರಾಹ್ಮಣವೆಂದರೆ ಒಂದು ಜಾತಿಯ ಜನ ವರ್ಗ. ಅವರನ್ನು ವೈದಿಕರೆಂದು ಕರೆಯುತ್ತಾರೆ. ಅವರಿಗೆ ಈ ಧರ್ಮದ ಸರ್ವ ಸಂಸ್ಕಾರಗಳು, ಅಧಿಕಾರಗಳಿವೆ.

ಜನ್ಮೇನ ಜಾಯತೇ ಶೂದ್ರ, ಸಂಸ್ಕಾರಾತ ದ್ವಿಜ ಮುಚ್ಚತೆ ಎಂದು ಶಾಸ್ತ್ರ ಹೇಳುತ್ತದೆ. ಅಂದ್ರೆ ಮನುಷ್ಯ ಶೂದ್ರನಾಗಿ ಹುಟ್ಟುತ್ತಾನೆ. ಸಂಸ್ಕಾರಗಳಿಂದ ಬ್ರಾಹ್ಮಣನಾಗುತ್ತಾನೆ ಎಂಬುದು ಈ ಶಾಸ್ತ್ರದ ಅರ್ಥ. ಹಾಗಾದರೆ, ಬ್ರಾಹ್ಮಣನ ಮಗ ಹುಟ್ಟಿದಾಗಲೇ ಬ್ರಾಹ್ಮಣ ಹೇಗೆ ಆಗುತ್ತಾನೆ? ಅವನೂ ಶೂದ್ರನೇ ಅಲ್ಲವೇ? ಅವನಿಗೆ ಸಂಸ್ಕಾರ ಕೊಟ್ಟು ಬ್ರಾಹ್ಮಣ ಮಾಡುವುದಾದರೆ, ಶೂದ್ರನೆಂದು ಕರೆಯಲಾಗುವ ಎಲ್ಲರನ್ನೂ ಕೂಡ ಸಂಸ್ಕಾರ ಕೊಟ್ಟು ಬ್ರಾಹ್ಮಣರಾಗಿ ಮಾಡಬಹುದಲ್ಲವೇ? ಆದರೆ ಇದು ಸಾಧ್ಯವಿಲ್ಲ ಎನ್ನುತ್ತಾರೆ ವೈದಿಕ ಶಾಸ್ತ್ರ ಅರ್ಥೈಸುವ ಪುರೋಹಿತರು.

ಬ್ರಾಹ್ಮಣನ ಮಗನೇ ಸಂಸ್ಕಾರಗಳಿಂದ ಬ್ರಾಹ್ಮಣ ಎನ್ನಿಸಿಕೊಳ್ಳುವನು ಎಂಬುದು ಅವರ ಹೇಳಿಕೆ. ಇಂಥ 40 ಸಂಸ್ಕಾರಗಳಿವೆ. ಅದರಲ್ಲಿ 16 ಸಂಸ್ಕಾರಗಳನ್ನಾದರೂ ಕೊಡಬೇಕಾಗುವುದು. ಈ ರೀತಿ ಸಂಸ್ಕಾರಗೊಂಡಂತೆ 6 ಕರ್ಮಾಧಿಕಾರಗಳು ಅವನಿಗೆ ದೊರೆಯುತ್ತವೆ. ಹೀಗೆ ಸಂಸ್ಕಾರದಿಂದ ಕರ್ಮಾಧಿಕಾರ ಪಡೆದ ಅವನು ಸಮಾಜದಲ್ಲಿ ಸರ್ವೋಚ್ಚನಾಗುತ್ತಾನೆ. ಇದು ಶೂದ್ರಾತಿಶೂದ್ರರಿಗೆ ಲಭ್ಯವಿಲ್ಲ. ಹಿಂದೆ ರಾಜಗಳಾಗಿದ್ದ ಕ್ಷತ್ರಿಯರು ಅಧಿಕಾರದ ಬಲದಿಂದ ಕರ್ಮಾಧಿಕಾರ ಪಡೆದಿದ್ದಾರೆ.

 ಈಗ ಹಿಂದೂ ಸಾಮ್ರಾಟ ಎಂದು ವರ್ಣಿಸುವ ಶಿವಾಜಿ ಮಹಾರಾಜರಿಗೂ ಪಟ್ಟಾಭಿಷೇಕಕ್ಕೆ ಪುರೋಹಿತಶಾಹಿಗಳು ವಿರೋಧ ವ್ಯಕ್ತಪಡಿಸಿದ್ದರು. ಆಗ ಕಾಶಿಯಿಂದ ಕಾಕಭಟ್‌ನನ್ನು ಕರೆ ತಂದು, ಆತನಿಗೆ 60 ಲಕ್ಷ ವರಹ ನೀಡಿ, ಶಿವಾಜಿ ಪಟ್ಟಾಭಿಷೇಕ ಮಾಡಿಕೊಳ್ಳಬೇಕಾಯಿತು. ಆಗ ಮರಾಠಿ ಸಮುದಾಯದ ರೈತರೆಲ್ಲ ಜನಿವಾರ ಹಾಕಿಕೊಂಡು ಕ್ಷತ್ರಿಯರೆಂದು ಕರೆದುಕೊಂಡರು. ಇದನ್ನೇ ಸಾಕ್ಷ್ಯಾಧಾರ ಸಮೇತ ತಮ್ಮ ಪುಸ್ತಕದಲ್ಲಿ ಬರೆದ ಗೋವಿಂದ ಪಾನ್ಸಾರೆಯವರನ್ನು ಈ ದುಷ್ಟಶಕ್ತಿಗಳು ಗುಂಡಿಟ್ಟು ಕೊಂದವು. ಇಂಥ ಹಿನ್ನೆಲೆ ಹೊಂದಿದ ಹಿಂದೂ ಎಂದು ಕರೆಸಿಕೊಳ್ಳುವ ವೈದಿಕ ಧರ್ಮಕ್ಕೂ ಮತ್ತು ಲಿಂಗಾಯತರಿಗೂ ಸಂಬಂಧವಿಲ್ಲ.

ಒಬ್ಬ ಹಿಂದೂ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬ ನಾಲ್ಕು ಜಾತಿಗಳಲ್ಲಿ ಒಂದರಲ್ಲಿ ಸೇರಬೇಕಾಗುತ್ತದೆ. ಬ್ರಾಹ್ಮಣ ಶ್ರೇಷ್ಠ ಮತ್ತು ಶೂದ್ರ ಕನಿಷ್ಠ ಎಂದು ಒಪ್ಪಿಕೊಳ್ಳಬೇಕಾಗುತ್ತದೆ. ಮನುಸ್ಮತಿಯಲ್ಲಿ ಶೂದ್ರ ಕನಿಷ್ಠ ಎಂಬುದರ ಬಗ್ಗೆ ವರ್ಣನೆಯಿದೆ. ಶೂದ್ರರಿಗೆ ಉಪನಯನವಿಲ್ಲ. ವೇದ ಅಧ್ಯಯನದ ಅವಕಾಶವಿಲ್ಲ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಇದನ್ನೇ ಪ್ರತಿಭಟಿಸಿದ ಬಸವಣ್ಣ ತಾನು ಜನಿಸಿದ ಬ್ರಾಹ್ಮಣ ಜಾತಿಯನ್ನು ತೊರೆದು, ಜನಿವಾರವನ್ನು ಹರಿದು ಜಾತ್ಯತೀತ ಸಮಾಜ ಸ್ಥಾಪನೆಗಾಗಿ ಲಿಂಗಾಯತ ಧರ್ಮ ಸ್ಥಾಪಿಸಿದ. ಲಿಂಗಾಯತದಲ್ಲಿ ಜಾತಿ ಭೇದ ಇಲ್ಲ. ಲಿಂಗ ಧರಿಸಿದವರೆಲ್ಲ ಸಮಾನರು.

ಹಿಂದೂ ಸಮಾಜದ ಜಾತಿ ವ್ಯವಸ್ಥೆಯಲ್ಲಿ ಅಸಮಾನತೆ ವಿರುದ್ಧ ಧ್ವನಿಯೆತ್ತಿದ ಮತ್ತು ಸಮಾಜ ಸುಧಾರಣೆಗೆ ಯತ್ನಿಸಿದ ಸಮಾಜ ಸುಧಾರಕರನ್ನು ಅವರು ಪ್ರತಿಪಾದಿಸಿದ ಸಿದ್ಧಾಂತಕ್ಕಾಗಿ ಮಾನಸಿಕ, ದೈಹಿಕವಾಗಿ ಹತ್ತಿಕಲಾಗಿದೆ. 12ನೇ ಶತಮಾನದಲ್ಲಿ ಸಮಗಾರ ಹರಳಯ್ಯನ ಮಗನಿಗೆ ಬ್ರಾಹ್ಮಣ ಮಧುವರಸನ ಮಗಳನ್ನು ಕೊಟ್ಟು ಮದುವೆ ಮಾಡಲು ಬಸವಣ್ಣ ಮುಂದಾದಾಗ, ಕಲ್ಯಾಣದಲ್ಲಿ ರಕ್ತಪಾತವೇ ಆಯಿತು. ಕಲ್ಯಾಣದಲ್ಲಿ ಗಡಿಪಾರಾದ ಬಸವಣ್ಣ ಕೂಡಲ ಸಂಗಮಕ್ಕೆ ಬಂದು ಅಲ್ಲಿ ಸಂಶಯಾಸ್ಪದವಾಗಿ ಸಾವಿಗೀಡಾದರು. ಅದು ಸಾವಲ್ಲ, ಹತ್ಯೆಯೆಂದು ಹಿರಿಯ ಸಾಹಿತಿಗಳಾದ ಬಸವರಾಜ ಕಟ್ಟಿಮನಿ ಪ್ರತಿಪಾದಿಸುತ್ತಿದ್ದರು. ಬಸವಣ್ಣ ಕಲ್ಯಾಣ ಬಿಟ್ಟು ಹೋದ ನಂತರ ಅವರ ಜೊತೆಗಿದ್ದ ಶರಣರ ಮೇಲೆ ಹಿಂಸಾಚಾರ ನಡೆಯಿತು. ಬಸವಣ್ಣ ಸೇರಿದಂತೆ ಅನೇಕ ಶರಣರ ವಚನಗಳನ್ನು ಬೆಂಕಿಗೆ ಹಾಕಿ ಸುಡಲಾಯಿತು. ಆಗ ಅಳಿದುಳಿದ ವಚನಗಳನ್ನು ಎತ್ತಿಕೊಂಡು ಚನ್ನಬಸವಣ್ಣ ಈಗ ಉತ್ತರ ಕನ್ನಡದಲ್ಲಿರುವ ಉಳಿವಿಗೆ ಬಂದು ಆಸರೆ ಪಡೆದರು.

ಕರ್ನಾಟಕದ ವಚನ ಚಳವಳಿಗಳಂತೆ ಮಹಾರಾಷ್ಟ್ರದಲ್ಲಿ ಸಂತ ಚಳವಳಿ ಜಾತಿ ರಹಿತ ಸಮಾಜದ ಕನಸು ಕಟ್ಟಿಕೊಂಡು ಆರಂಭವಾಯಿತು. 13ನೇ ಶತಮಾನದ ಬ್ರಾಹ್ಮಣ ಸಂತ ಜ್ಞಾನೇಶ್ವರನಿಂದ ಹಿಡಿದು 16ನೇ ಶತಮಾನದ ಸಂತ ತುಕಾರಾಮವರೆಗೆ ಭಕ್ತಿ ಮಾರ್ಗದ ಮೂಲಕ ಸಮಾಜ ಸುಧಾರಣೆಗೆ ಸಂತರು ಯತ್ನಿಸಿದರು. ಈ ಪರಂಪರೆಯಲ್ಲಿ ಸಂತ ನಾಮದೇವ, ದಲಿತ ಸಮುದಾಯದ ಛೋಕಾಮೇಳ, ಅವರ ಪತ್ನಿ ಸುಗುಣಾಬಾಯಿ ಹೀಗೆ ಅನೇಕರು ಆಗಿ ಹೋದರು. ಜಾತಿ ವ್ಯವಸ್ಥೆ ವಿರುದ್ಧ ಸಂತ ತುಕಾರಾಮ ಬರೆದ ಅಭಂಗಗಳನ್ನು ಇದೇ ಪುರೋಹಿತಶಾಹಿಗಳು ನದಿಯಲ್ಲಿ ಮುಳುಗಿಸಿ, ನಾಶ ಮಾಡಿದರು. ಬಸವಣ್ಣನವರಂತೆ ತುಕಾರಾಮ ಅವರ ಸಾವು ಕೂಡ ಸಂಶಯಾಸ್ಪದವಾಗಿದೆ.

ಹೀಗೆ ಈ ದೇಶದ ಮನುವಾದಿ ಶಕ್ತಿಗಳು ಜಾತಿ ರಹಿತ ಸಮಾಜಕ್ಕಾಗಿ ನಡೆದ ಬಂಡಾಯಗಳನ್ನು ಹತ್ತಿಕ್ಕುತ್ತಲೇ ಬಂದರು. ಆದರೆ 18ನೇ ಶತಮಾನದಲ್ಲಿಮಹಾರಾಷ್ಟ್ರದಲ್ಲಿ ಜನಿಸಿದ ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ, ನಂತರ ಬಂದ ಕೊಲ್ಲಾಪುರದ ಶಾಹು ಮಹಾರಾಜ, ಆಗರ್ಕರ್, ಅಂಬೇಡ್ಕರ್ ಇವರೆಲ್ಲರ ಪ್ರಭಾವದಿಂದ ಹಿಂದುಳಿದ ಸಮುದಾಯಗಳಲ್ಲಿ ಹೊಸ ಜಾಗೃತಿ ಮೂಡಿ, ಜಾತಿ ಪದ್ಧತಿಗಳ ಬೇರುಗಳು ಸಡಿಲವಾದವು. ಆಗ ದೇಶವನ್ನು ಆಳುತ್ತಿದ್ದ ಬ್ರಿಟಿಷರು ಕೂಡ ಅಸ್ಪಶ್ಯರಿಗೆ ಮತ್ತು ಮಹಿಳೆಯರಿಗೆ ಅಕ್ಷರ ಕಲಿಸಲು ಫುಲೆ ದಂಪತಿಗೆ ಹಾಗೂ ಸತಿ ಸಹಗಮನ ಪದ್ಧತಿ ವಿರುದ್ಧ ಹೋರಾಡಲು ರಾಜಾ ರಾಮ ಮೋಹನ್ ರಾಯ್‌ಗೆ ಪ್ರೋತ್ಸಾಹ ನೀಡಿದರು.

ಅದೇ ಸಮಯದಲ್ಲಿ ಮಹಾರಾಷ್ಟ್ರದಲ್ಲಿ ಕೈಗಾರಿಕಾ ಕ್ರಾಂತಿ ಉಂಟಾಯಿತು. ಮುಂಬೈ ಮಹಾನಗರದಲ್ಲಿ ಜವಳಿ ಗಿರಣಿಗಳು ತಲೆಯೆತ್ತಿದವು. ಎಲ್ಲಾ ಜಾತಿಗಳ ದುಡಿಯುವ ಜನ ಕೆಂಬಾವುಟದಡಿಯಲ್ಲಿ ಒಂದಾದರು. 1917ರಲ್ಲಿ ನಡೆದ ಸೋವಿಯತ್ ರಷ್ಯದ ಸಮಾಜವಾದಿ ಕ್ರಾಂತಿ ಕೂಡ ಭಾರತದಂತಹ ದೇಶದಲ್ಲಿ ಸಮಾಜ ಸುಧಾರಣಾ ಚಳವಳಿಗೆ ಮತ್ತು ಶೋಷಣಾ ರಹಿತ ಸಮಾಜದ ಸ್ಥಾಪನೆಗೆ ಹೋರಾಡಲು ಸ್ಫೂರ್ತಿ ನೀಡಿತು. ಹೀಗೆ ಎಲ್ಲಾ ದಿಕ್ಕಿನಿಂದ ಸಾಮಾಜಿಕ ಕ್ರಾಂತಿಯ ಬೆಳಕು ಆವರಿಸಿತೊಡಗಿದಾಗ, ಕಗ್ಗತ್ತಲ ವಾತಾವರಣ ಬದಲಾಯಿತು.

ಈ ಕಾಲಘಟ್ಟದಲ್ಲಿ ಜಾತಿ ವಿರೋಧಿಯಾದ ಮಹಿಳಾ ಸಮಾನತೆ ಪರವಾಗಿದ್ದ ಚಳವಳಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಮನಗಂಡ ಮನುವಾದಿ ಶಕ್ತಿಗಳು ತಮ್ಮ ಅಸಮಾನತೆ ವ್ಯವಸ್ಥೆ ರಕ್ಷಿಸಿಕೊಳ್ಳಲು ಹಿಂದೂತ್ವದ ವೇಷ ಹಾಕಿದರು. 1925ರಲ್ಲಿ ನಾಗಪುರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸ್ಥಾಪನೆಯಾಯಿತು. ಬ್ರಾಹ್ಮಣ್ಯದ ರಕ್ಷಣೆಯ ರಹಸ್ಯ ಕಾರ್ಯ ಸೂಚಿ ಹೊಂದಿದ ಇದು ಹಿಂದೂಗಳ ರಕ್ಷಣೆಯ ಮುಖವಾಡ ಹಾಕಿತು. ಸಾವರ್ಕರ್ ಅವರಿಂದ ಸ್ಫೂರ್ತಿ ಪಡೆದ ಚಿತ್ಪಾವನ ಬ್ರಾಹ್ಮಣ ಯುವಕರು ಈ ಸಂಘಟನೆ ಕಟ್ಟಿದರು. ಆರೆಸ್ಸೆಸ್ ಸ್ಥಾಪಕ ಕೇಶವ ಬಲಿರಾಮ ಹೆಡಗೇವಾರ್ ತಮ್ಮ ಸ್ನೇಹಿತ ಬಾಲಕೃಷ್ಣ ಮುಂಜೆಯನ್ನು ಇಟಲಿಗೆ ಕಳುಹಿಸಿಕೊಟ್ಟು ಅಲ್ಲಿ ಮುಸಲೋನಿ ಕಟ್ಟಿದ ಫ್ಯಾಶಿಸ್ಟ್ ಪಾರ್ಟಿ ಸಂಘಟನಾ ಸ್ವರೂಪ ಅಧ್ಯಯನ ಮಾಡಿಕೊಂಡು ಬರಲು ತಿಳಿಸಿದರು. ಅದೇ ರೀತಿ ಭಾರತದಲ್ಲಿ ಹಿಂದೂತ್ವದ ರಕ್ಷಣೆಗಾಗಿ ಆರೆಸ್ಸೆಸ್ ಸ್ಥಾಪನೆಯಾಯಿತು. ಬರೀ ಬ್ರಾಹ್ಮಣ್ಯದ ರಕ್ಷಣೆಯಂದರೆ, ಉಳಿದ ಸಮುದಾಯದವರು ಬರುವುದಿಲ್ಲ ಎಂದು ಹಿಂದೂಗಳಿಗೆ ಅಪಾಯ ಎಂಬ ಕೂಗೆಬ್ಬಿಸಿ ಸಂಘಟನೆ ಕಟ್ಟತೊಡಗಿದರು. ಆಗ ನಡೆದ ದೇಶದ ಸ್ವಾತಂತ್ರ್ಯ ಚಳವಳಿ ಅವರಿಗೆ ಮುಖ್ಯವಾಗಿರಲಿಲ್ಲ. ಅಂತಲೇ ಅವರು ಭಾಗವಹಿಸಲಿಲ್ಲ. ಆಗ ಗಾಂಧೀಜಿ, ಸುಭಾಷ್, ಭಗತ್ ಸಿಂಗ್ ಮುಂತಾದವರ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯ ಚಳವಳಿಯಲ್ಲಿ ಎಲ್ಲಾ ಜಾತಿ, ಸಮುದಾಯದ ಜನರು ಭಾಗವಹಿಸಿದ್ದರು. ಅಂತಲೇ ಅದು ಆರೆಸ್ಸೆಸ್‌ಗೆ ಇಷ್ಟವಿರಲಿಲ್ಲ. ಅದು ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಪ್ರತ್ಯೇಕ ಗುರಿಯಿಟ್ಟುಕೊಂಡು ಚಟುವಟಿಕೆ ಆರಂಭಿಸಿತು.

ಸ್ವಾತಂತ್ರ್ಯ ನಂತರ ನಾವೆಲ್ಲ ಹಿಂದೂ, ನಾವೆಲ್ಲ ಒಂದು ಘೋಷಣೆ ಮುಂದೆ ಮಾಡಿ ಈ ದೇಶದ ವಿಭಿನ್ನ ಭಾಷೆ, ಸಂಸ್ಕೃತಿ, ಪರಂಪರೆ, ವೈವಿಧ್ಯತೆಗಳನ್ನು ಹಿಂದೂತ್ವದಲ್ಲಿ ಆಪೋಶನ ಮಾಡಿಕೊಳ್ಳಲು ಯತ್ನಿಸುತ್ತಿದೆ. ಏಕ ಧರ್ಮ, ಏಕ ಸಂಸ್ಕೃತಿ ಮತ್ತು ಏಕ ಭಾಷೆಯನ್ನು ಅದು ಪ್ರತಿಪಾದಿಸುತ್ತಿದೆ. ಪ್ರಕೃತಿಯನ್ನು ಆರಾಧಿಸುವ ಆದಿವಾಸಿಗಳನ್ನು ಹಿಂದೂತ್ವದ ತಕ್ಕೆಗೆ ತೆಗೆದುಕೊಳ್ಳುವ ಯತ್ನ ನಡೆದಿದೆ. ಈ ಷಡ್ಯಂತ್ರದ ಭಾಗವಾಗಿ, ಲಿಂಗಾಯತ ಧರ್ಮವನ್ನು ನುಂಗಲು ಅದು ಹುನ್ನಾರ ನಡೆಸಿದೆ. ಈ ಅಪಾಯವನ್ನು ಅರಿತ ಲಿಂಗಾಯತರು ಈಗ ಪ್ರತ್ಯೇಕ ಧರ್ಮಕ್ಕಾಗಿ ಹೋರಾಟ ಕೈಗೊಂಡಿದ್ದಾರೆ.

ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಇರುವ ಐದು ಕೋಟಿ ಲಿಂಗಾಯತರು ಪ್ರತ್ಯೇಕ ಧರ್ಮ ಸ್ಥಾಪಿಸಿಕೊಂಡರೆ, ದೇಶದ ಉಳಿದ ಸಮುದಾಯಗಳು ಪ್ರತ್ಯೇಕ ಧರ್ಮಕ್ಕಾಗಿ ಧ್ವನಿಯೆತ್ತುತ್ತವೆ. ಆಗ ತಮ್ಮ ಕಲ್ಪನೆಯ ಹಿಂದೂ ರಾಷ್ಟ್ರ ಗುರಿ ಸಾಧಿಸಲು ಸಾಧ್ಯವಾಗುವುದಿಲ್ಲ ಎಂದು ಈ ಶಕ್ತಿಗಳು ಈಗ ಪ್ರತ್ಯೇಕ ಲಿಂಗಾಯತ ಧರ್ಮದ ಬೇಡಿಕೆಯನ್ನು ವಿರೋಧಿಸುತ್ತಿವೆ. ವೀರಶೈವವನ್ನು ಮುಂದೆ ಮಾಡಿ, ಲಿಂಗಾಯತ ಧ್ವನಿಯನ್ನು ಹತ್ತಿಕ್ಕಲು ಯತ್ನಿಸುತ್ತಿವೆ. ಆದರೆ ಲಿಂಗಾಯತರು ಈಗ ಈ ಮೋಸದ ಬಲೆಗೆ ಬೀಳುವುದಿಲ್ಲ. ಅವರಿಗೆ ಬಸವಣ್ಣ ನೀಡಿದ ವಚನ ಸಾಹಿತ್ಯ ಬೆಳಕಾಗಿದೆ. ಆ ಬೆಳಕಿನಲ್ಲಿ ಮುನ್ನಡೆದು ಅವರು ಗುರಿ ಸಾಧಿಸುತ್ತಾರೆ.

Please follow and like us:
error