ಸಂವಿಧಾನ ನಾಶಕ್ಕೆ ಸಂಘ ಪರಿವಾರದ ಸಂಚು

New Delhi: File photo of RSS Chief Mohan Bhagwat (C) during the RSS function. Khaki shorts, the trademark RSS dress for 91 years, is on its way out, making way for brown trousers, the significant makeover decision was taken here at an RSS conclave in Nagaur, Rajasthan on Sunday. PTI Photo (PTI3_13_2016_000268B)
 ನರೇಂದ್ರ ಮೋದಿ ಅವರ ಸರ್ವಾಧಿಕಾರ ವ್ಯಕ್ತಿತ್ವದಿಂದ ಮಾತ್ರ ಜನತಂತ್ರಕ್ಕೆ ಗಂಡಾಂತರ ಬಂದಿದೆ ಎಂದರೆ, ಅದು ಅರ್ಧ ಸತ್ಯವಾಗುತ್ತದೆ. ವ್ಯಕ್ತಿಯಾಗಿ ಸರ್ವಾಧಿಕಾರಿ ಆಗಿರುವುದರ ಜೊತೆಗೆ ಅವರು ಬೆಳೆದು ಬಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ನಾಗಪುರದಲ್ಲಿ ಕೂತು ಅವರನ್ನು ನಿಯಂತ್ರಿಸುತ್ತಿದೆ. ದಶಕಗಳ ಕಾಲ ಸಂಘದ ಪ್ರಚಾರಕನಾಗಿ ಓಡಾಡಿದ ಮೋದಿಯವರಿಗೂ ಬಿಜೆಪಿಯ ಉಳಿದ ನಾಯಕರಿಗೂ ವ್ಯತ್ಯಾಸವಿದೆ. ಅಟಲ್ ಬಿಹಾರಿ ವಾಜಪೇಯಿ ಸಂಘದಲ್ಲಿಯೇ ಬೆಳೆದು ಬಂದಿದ್ದರೂ ಅವರಿಗೆ ಪ್ರಜಾಪ್ರಭುತ್ವದ ಅಂತಃಸತ್ವದ ಬಗ್ಗೆ ಅರಿವಿತ್ತು. ಭಾರತದಂತಹ ಬಹುಧಾರ್ಮಿಕ, ಬಹುಜನಾಂಗೀಯ ದೇಶದಲ್ಲಿ ಎಲ್ಲರನ್ನೂ ಸಂಬಾಳಿಸಿಕೊಂಡು ಹೋಗುವ ಎಚ್ಚರವಿತ್ತು. ಆದರೆ ಮೋದಿ ಹಾಗಲ್ಲ, ಇವರಿಗೆ ಅಧ್ಯಯನದ ಕೊರತೆಯ ಜೊತೆಗೆ ಭಿನ್ನಮತ ಸಹಿಸದಂತಹ ನಿರಂಕುಶ ಪ್ರವೃತ್ತಿಯಿದೆ.

ದೇಶದ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಸುಪ್ರೀಂ ಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳು ಬಹಿರಂಗ ಹೇಳಿಕೆ ನೀಡಿ, ಎಲ್ಲರನ್ನೂ ಬೆಚ್ಚಿ ಬೀಳುವಂತೆ ಮಾಡಿದ್ದಾರೆ. ಸರ್ವೋಚ್ಚ ನ್ಯಾಯಾಲಯದಲ್ಲಿನ ಸಮಸ್ಯೆಗಳನ್ನು ಆಂತರಿಕವಾಗಿ ಪರಿಹರಿಸಿಕೊಳ್ಳುವುದು ಅಸಾಧ್ಯವಾದಾಗ, ಅನ್ಯಮಾರ್ಗವಿಲ್ಲದೇ ಮಾಧ್ಯಮಗಳ ಮೂಲಕ ರಾಷ್ಟ್ರಕ್ಕೆ ತಮ್ಮ ಮನದ ಅಳಲನ್ನು ಹೇಳಿಕೊಳ್ಳಲು ಅವರು ಮುಂದಾಗಿದ್ದಾರೆ.

ವಾಸ್ತವವಾಗಿ ಪ್ರಜಾಪ್ರಭುತ್ವಕ್ಕೆ ಗಂಡಾಂತರ ಎದುರಾಗಿರುವುದು ತೀರ ಇತ್ತೀಚೆಗೆ ಅಲ್ಲ. ಬರೀ ಸುಪ್ರೀಂ ಕೋರ್ಟ್‌ನ ವಿದ್ಯಮಾನಗಳಿಂದಲ್ಲ. 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದಾಗಲೇ ಈ ಅಪಾಯದ ಗಂಟೆ ಬಾರಿಸಿದೆ. ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ, ಎಲ್ಲಾ ಜನತಾಂತ್ರಿಕ ಸಂಸ್ಥೆಗಳನ್ನು, ಭಿನ್ನಾಭಿಪ್ರಾಯಗಳನ್ನು ಮಣ್ಣುಗೂಡಿಸಿ ಸರ್ವಾಧಿಕಾರಿ ಯಾಗಿ ಮೆರೆದ ವ್ಯಕ್ತಿ ಕಾರ್ಪೊರೇಟ್ ಬಂಡವಾಳಶಾಹಿ ಕೃಪೆಯಿಂದ ಕೇವಲ ಶೇ.31ರಷ್ಟು ಮತ ಪಡೆದು ಪ್ರಧಾನಿಯಾದಾಗಲೇ ನಮ್ಮ ದೇಶದ ಜನತಂತ್ರದ ಚರಮಗೀತೆ ಆರಂಭವಾಯಿತು.

ನರೇಂದ್ರ ಮೋದಿ ಅವರ ಸರ್ವಾಧಿಕಾರ ವ್ಯಕ್ತಿತ್ವದಿಂದ ಮಾತ್ರ ಜನತಂತ್ರಕ್ಕೆ ಗಂಡಾಂತರ ಬಂದಿದೆ ಎಂದರೆ, ಅದು ಅರ್ಧ ಸತ್ಯವಾಗುತ್ತದೆ. ವ್ಯಕ್ತಿಯಾಗಿ ಸರ್ವಾಧಿಕಾರಿ ಆಗಿರುವುದರ ಜೊತೆಗೆ ಅವರು ಬೆಳೆದು ಬಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ನಾಗಪುರದಲ್ಲಿ ಕೂತು ಅವರನ್ನು ನಿಯಂತ್ರಿಸುತ್ತಿದೆ. ದಶಕಗಳ ಕಾಲ ಸಂಘದ ಪ್ರಚಾರಕನಾಗಿ ಓಡಾಡಿದ ಮೋದಿಯವರಿಗೂ ಬಿಜೆಪಿಯ ಉಳಿದ ನಾಯಕರಿಗೂ ವ್ಯತ್ಯಾಸವಿದೆ. ಅಟಲ್ ಬಿಹಾರಿ ವಾಜಪೇಯಿ ಸಂಘದಲ್ಲಿಯೇ ಬೆಳೆದು ಬಂದಿದ್ದರೂ ಅವರಿಗೆ ಪ್ರಜಾಪ್ರಭುತ್ವದ ಅಂತಃಸತ್ವದ ಬಗ್ಗೆ ಅರಿವಿತ್ತು. ಭಾರತದಂತಹ ಬಹುಧಾರ್ಮಿಕ, ಬಹುಜನಾಂಗೀಯ ದೇಶದಲ್ಲಿ ಎಲ್ಲರನ್ನೂ ಸಂಬಾಳಿಸಿಕೊಂಡು ಹೋಗುವ ಎಚ್ಚರವಿತ್ತು. ಅಂತಲೇ ಆರೆಸ್ಸೆಸ್ ನೀಡಿದ ಎಲ್ಲಾ ಆದೇಶಗಳನ್ನು ಅವರು ಜಾರಿಗೆ ತರುತ್ತಿರಲಿಲ್ಲ. ಆದರೆ ಮೋದಿ ಹಾಗಲ್ಲ, ಇವರಿಗೆ ಅಧ್ಯಯನದ ಕೊರತೆಯ ಜೊತೆಗೆ ಭಿನ್ನಮತ ಸಹಿಸದಂತಹ ನಿರಂಕುಶ ಪ್ರವೃತ್ತಿಯಿದೆ.

ಆರೆಸ್ಸೆಸ್‌ಗೆ ಪ್ರಜಾಪ್ರಭುತ್ವ ಎಂಬ ಶಬ್ದ ಕೇಳಿದರೆ ಆಗುವುದಿಲ್ಲ. ಪ್ರಜಾಪ್ರಭುತ್ವ ಮತ್ತು ಸಮಾಜವಾದ ಎಂಬ ಶಬ್ದಗಳು ಈ ದೇಶಕ್ಕೆ ಹೊರಗಿನಿಂದ ಬಂದ ವಿಚಾರಧಾರೆಗಳೆಂದು ಆರೆಸ್ಸೆಸ್‌ನ ಎರಡನೇ ಸರಸಂಘಚಾಲಕ ಮಾಧವ ಸದಾಶಿವ ಗೋಳ್ವಾಲ್ಕರ್ ಹೇಳುತ್ತಿದ್ದರು. ದೇಶಕ್ಕೆ ಸ್ವಾತಂತ್ರ ಬರುವುದು ಅವರ ಗುರಿಯಾಗಿರಲಿಲ್ಲ. ಹಿಂದೂ ರಾಷ್ಟ್ರ ನಿರ್ಮಾಣ ಅವರ ಕನಸಾಗಿತ್ತು. ಅಂತಲೇ ಸ್ವಾತಂತ್ರ ಚಳವಳಿಯಲ್ಲಿ ಆರೆಸ್ಸೆಸ್ ಭಾಗವಹಿಸಲಿಲ್ಲ. ಸ್ವಾತಂತ್ರಾ ನಂತರ ಡಾ. ಅಂಬೇಡ್ಕರ್ ರೂಪಿಸಿದ ಸಂವಿಧಾನ, ಇವರ ಹಿಂದೂ ರಾಷ್ಟ್ರ ನಿರ್ಮಾಣದ ಕನಸಿಗೆ ಅಡ್ಡಿಯಾಗಿತ್ತು. ಅಂತಲೇ ತಮಗೆ ಅಡ್ಡಿಯಾದ ಸಂವಿಧಾನವನ್ನು ಮತ್ತು ಪ್ರಜಾಪ್ರಭುತ್ವವನ್ನು ನೆಲಸಮಗೊಳಿಸುವುದು ಸಂಘ ಪರಿವಾರದ ಕಾರ್ಯಸೂಚಿಯಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ತೋರಿಕೆಗೆ ಒಪ್ಪಿಕೊಂಡು ಅದರೊಳಗೆ ಇದ್ದುಕೊಂಡು ಸಂಸತ್ತಿನಲ್ಲಿ ಬಹುಮತ ಗಳಿಸಿ, ಅದನ್ನು ನಾಶಪಡಿಸಲು ಸಂಘ ಪರಿವಾರ ತಂತ್ರ ರೂಪಿಸುತ್ತಲೇ ಬಂದಿದೆ.

ಡಾ. ಅಂಬೇಡ್ಕರ್ ನೇತೃತ್ವದ ರಾಜ್ಯಾಂಗ ರಚನಾ ಸಮಿತಿ ಸಿದ್ಧಪಡಿಸಿದ ಸಂವಿಧಾನ ಈಗ ನಮ್ಮ ದೇಶವನ್ನು ಮುನ್ನಡೆಸುವ ಬೆಳಕಾಗಿದೆ. ಇಲ್ಲಿ ಎಷ್ಟೇ ಜಾತಿ, ಧರ್ಮ ಗಳಿರಲಿ ಪ್ರಜಾಪ್ರಭುತ್ವವೇ ನಮ್ಮ ರಾಷ್ಟ್ರಧರ್ಮವಾಗಿದೆ. ಸಂವಿಧಾನವೇ ನಮ್ಮ ಧರ್ಮಗ್ರಂಥವಾಗಿದೆ. ಇದನ್ನು ಒಪ್ಪಿಕೊಳ್ಳಲು ಸಂಘ ಪರಿವಾರ ಇಂದಿಗೂ ಸಿದ್ಧವಿಲ್ಲ. ಈ ಸಂವಿಧಾನದ ಬದಲಾಗಿ, ಮನುಸ್ಮತಿಯ ಕಾನೂನನ್ನು ದೇಶ ಅಂಗೀಕರಿಸಬೇಕೆಂದು ಆರೆಸ್ಸೆಸ್ ಪ್ರತಿಪಾದಿಸುತ್ತ ಬಂದಿದೆ. 1949ರ ಜನವರಿ 26ರಂದು ಭಾರತೀಯ ಸಂವಿಧಾನ ರಚನಾ ಸಭೆ ಅಂತಿಮವಾಗಿ ನಮ್ಮ ಸಂವಿಧಾನವನ್ನು ಸ್ವೀಕರಿಸಿತು. ಆಗ ಈ ಸಂವಿಧಾನ ಟೀಕಿಸಿ, ಆರೆಸ್ಸೆಸ್ ಮುಖಪತ್ರವಾದ ಆರ್ಗನೈಸರ್ ಕಟುವಾದ ಲೇಖನ ಬರೆಯಿತು. ಸಂವಿಧಾನ ಎಂಬ ಶೀರ್ಷಿಕೆಯಡಿಯಲ್ಲಿ ಬರೆದ ಸಂಪಾದಕೀಯದಲ್ಲಿ, ‘‘ಅಂಬೇಡ್ಕರ್ ನೇತೃತ್ವದಲ್ಲಿ ರೂಪುಗೊಂಡ ಹೊಸ ಸಂವಿಧಾನ ದಲ್ಲಿ ಭಾರತೀಯ ಎಂಬುದಕ್ಕೆ ಸ್ಥಾನವೇ ಇಲ್ಲ. ಇದು ಅದರಲ್ಲಿನ ಅಸಂಗತ ಸಂಗತಿಯಾಗಿದೆ. ನಮ್ಮ ಪ್ರಾಚೀನ ಭಾರತದ ನಿಯಮಗಳು, ಭಾವನೆಗಳು ಮತ್ತು ಪದ ನಾಮಗಳಿಗೆ ಈ ಸಂವಿಧಾನದಲ್ಲಿ ಜಾಗವಿಲ್ಲ. ಬೇರೆ ದೇಶಗಳ ಕಾನೂನುಗಳಿಗಿಂತ ಮುಂಚೆಯೇ ಮನುಧರ್ಮ ನಮ್ಮಲ್ಲಿ ನೆಲೆಗೊಂಡಿತ್ತು. ಈ ಸಂವಿಧಾನ ಅದನ್ನು ಪರಿಗಣಿಸಿಲ್ಲ’’ ಎಂದು ಟೀಕಿಸಲಾಗಿತ್ತು.

ಹಿಂದುತ್ವವಾದಿ ಬಲಪಂಥೀಯರಿಗೆ ಮನುಸ್ಮತಿ ಅತ್ಯಂತ ಪವಿತ್ರವಾದ ಗ್ರಂಥ ಎಂಬುದನ್ನು ಹಿಂದುತ್ವ ಸಿದ್ಧಾಂತದ ಜನಕ ವಿನಾಯಕ ದಾಮೋದರ ಸಾವರ್ಕರ ಕೂಡ ಹೇಳಿದ್ದಾರೆ. ಮನುಸ್ಮತಿಗಿಂತ ಮುಂಚೆಯೇ ಈ ದೇಶದಲ್ಲಿದ್ದ ಬೌದ್ಧ ಮತ್ತು ಜೈನ ಧರ್ಮಗಳ ಬಗ್ಗೆ ಮತ್ತು 12ನೇ ಶತಮಾನದಲ್ಲಿ ಬಂದ ಶರಣ ಚಳವಳಿ ಬಗ್ಗೆ, ಮಹಾರಾಷ್ಟ್ರದ ಸಂತ ಚಳವಳಿ ಬಗ್ಗೆ ಎಲ್ಲಿಯೂ ಉಲ್ಲೇಖಿಸದ ಸಾವರ್ಕರ್ ಮನುಸ್ಮತಿ ಹಿಂದೂ ರಾಷ್ಟ್ರದ ಆರಾಧ್ಯ ಗ್ರಂಥವೆಂದು ಹೇಳುತ್ತಾರೆ. 1950ರ ಜನವರಿ 26ರಂದು ಭಾರತ ದೇಶವು ಸಾರ್ವಭೌಮ ಪ್ರಜಾಪ್ರಭುತ್ವ ಗಣರಾಜ್ಯವೆಂದು ಘೋಷಿಸಲ್ಪಟ್ಟಿತು. ಅದರ ಮುನ್ನಾ ದಿನಗಳಲ್ಲಿ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾಗಿದ್ದ ಶಂಕರ ಸುಬ್ಬ ಅವರ ಮೂಲಕ ಆರೆಸ್ಸೆಸ್ ಮನುಧರ್ಮವನ್ನು ಕೂಡಲೇ ಜಾರಿಗೆ ತರಬೇಕೆಂದು ಒತ್ತಾಯಿಸಿತ್ತು.

ಭಾರತದ ಗಣ್ಯರಾಜ್ಯವನ್ನು ಮನುಧರ್ಮ ಶಾಸ್ತ್ರ ಆಧಾರಿತ ಬ್ರಾಹಣ್ಯ ಅಧಿ ನಾಯಕ ವ್ಯವಸ್ಥೆಯನ್ನಾಗಿ ಬದಲಿಸಬೇಕು ಎಂಬುದು ಆರೆಸ್ಸೆಸ್‌ನ ಹಳೆಯ ಕನಸು. ಕೊನೆಯ ಆಂಗ್ಲ ಮರಾಠ ಯುದ್ಧದಲ್ಲಿ ಪುಣೆಯ ಪೇಶ್ವೆ ಸಾಮ್ರಾಜ್ಯ ಕುಸಿದು ಬಿದ್ದ ಆನಂತರ ಮಹಾರಾಷ್ಟ್ರದಲ್ಲಿ ಜ್ಯೋತಿಭಾ ಫುಲೆ, ಶಾಹು ಮಹಾರಾಜ, ಆನಂತರ ಅಂಬೇಡ್ಕರ್ ಸಾಮಾಜಿಕ ಸಮಾನತೆಯ ಜ್ಯೋತಿ ಹೊತ್ತಿಸಿದರು. ಇದರಿಂದ ದಿಗ್ಭ್ರಮೆ ಗೊಂಡ ಪೇಶ್ವೆ ಪಳೆಯುಳಿಕೆಗಳು ಹಿಂದುತ್ವದ ವೇಷ ಹಾಕಿ, ಆರೆಸ್ಸೆಸ್ ಎಂಬ ಹೊಸ ಸಂಘಟನೆ ಕಟ್ಟಿದವು. ಪೇಶ್ವೆಗಳ ಕೇಸರಿ ಬಾವುಟವೇ ಇವರ ಬಾವುಟವಾಯಿತು. ಜರ್ಮನಿ ಮತ್ತು ಇಟಲಿಯಿಂದ ತಂದ ಫ್ಯಾಶಿಸ್ಟ್ ಮತ್ತು ನಾಝಿ ಸಿದ್ಧಾಂತಕ್ಕೆ ಮನುವಾದದ ಲೇಪನ ಮಾಡಿ, ಹಿಂದುತ್ವದ ಸಿದ್ಧಾಂತ ಹುಟ್ಟು ಹಾಕಿದರು. ಈ ಹಿನ್ನೆಲೆಯಲ್ಲಿ ದೇಶದ ಇಂದಿನ ವಿದ್ಯಮಾನಗಳನ್ನು ಗಮನಿಸಬೇಕಿದೆ. ಈಗಿರುವ ಸರ್ವರಿಗೂ ಸಮಾನಾವಕಾಶ ಒದಗಿಸಿದ ಸಂವಿಧಾನವನ್ನು ಒಮ್ಮೆಲೇ ನಾಶ ಮಾಡಲು ಬರುವುದಿಲ್ಲ ಎಂದು ಅದನ್ನು ಹಂತಹಂತವಾಗಿ ಮುಳುಗಿಸುವ ಹುನ್ನಾರ ನಡೆದಿದೆ. ಮೋದಿಯವರು ಅಧಿಕಾರಕ್ಕೆ ಬಂದ ನಂತರ ಸಂವಿಧಾನದ ಆಧಾರ ಸ್ತಂಭಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗವನ್ನು ಹಂತಹಂತವಾಗಿ ನಿಷ್ಕ್ರಿಯಗೊಳಿಸಲಾಗುತ್ತಿದೆ.

ಚುನಾವಣೆ ಮೂಲಕ ಶಾಸಕಾಂಗ ಗೆದ್ದುಕೊಂಡರೂ ನ್ಯಾಯಾಂಗ ತಮ್ಮ ಹಿಡಿತಕ್ಕೆ ಸಿಗಲಿಲ್ಲವೆಂದು ಇವರಿಗೆ ಅಸಮಾಧಾನವಿದೆ. ಸುಪ್ರೀಂ ಕೋರ್ಟ್ ಸೇರಿದಂತೆ ಎಲ್ಲಾ ನ್ಯಾಯಾಲಯಗಳಿಗೆ ನ್ಯಾಯಾಧೀಶರನ್ನು ನೇಮಿಸುವ ಅಧಿಕಾರವನ್ನು ತನ್ನ ಕೈಗೆ ತೆಗೆದುಕೊಳ್ಳಲು ಸರಕಾರ ಬಯಸಿದೆ. ಇದಕ್ಕೆ ಪ್ರತಿಯಾಗಿ ಸರ್ವೋಚ್ಚ ನ್ಯಾಯಾಲಯ ಮತ್ತು ವಿವಿಧ ಹೈಕೋರ್ಟ್‌ಗಳ ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಸರಕಾರ ಹಸ್ತಕ್ಷೇಪ ಮಾಡುತ್ತಿರುವುದನ್ನು ನ್ಯಾಯಮೂರ್ತಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ನ್ಯಾಯಮೂರ್ತಿಗಳ ಕೊರತೆ ಎದ್ದು ಕಾಣುತ್ತಿದೆ. ಸುಪ್ರೀಂ ಕೋರ್ಟ್‌ವೊಂದರಲ್ಲೇ ನ್ಯಾಯಮೂರ್ತಿಗಳ ಕೊರತೆಯಿಂದಾಗಿ 59 ಸಾವಿರ ಪ್ರಕರಣಗಳು ಬಾಕಿಯುಳಿದಿವೆ. ಹೈಕೋರ್ಟ್‌ನಲ್ಲಿ 40 ಲಕ್ಷ ಮತ್ತು ಕೆಳಗಿನ ಕೋರ್ಟ್‌ಗಳಲ್ಲಿ 2.5 ಕೋಟಿ ಪ್ರಕರಣಗಳು ಬಾಕಿಯುಳಿದಿವೆ. ಆದರೂ ನ್ಯಾಯಮೂರ್ತಿಗಳ ನೇಮಕಾತಿಗೆ ಒಪ್ಪಿಗೆ ನೀಡಲು ಮೋದಿ ಸರಕಾರ ಸಿದ್ಧವಿಲ್ಲ.

ಕಾಂಗ್ರೆಸ್ ಮುಕ್ತ ಭಾರತದ ಘೋಷಣೆಯಡಿಯಲ್ಲಿ ಪ್ರತಿಪಕ್ಷ ಮುಕ್ತ ಭಾರತವನ್ನು ನಿರ್ಮಿಸಿ, ಸರ್ವಾಧಿಕಾರಿ ಫ್ಯಾಶಿಸ್ಟ್ ಆಡಳಿತ ಹೇರಲು ಹೊರಟಿರುವ ಸರಕಾರ ಸಂವಿಧಾನಾತ್ಮಕ ಸಂಸ್ಥೆಗಳನ್ನು ಒಂದೊಂದಾಗಿ ನಿಷ್ಕ್ರಿಯಗೊಳಿಸುತ್ತಿದೆ. ರಿಸರ್ವ್ ಬ್ಯಾಂಕ್‌ನ ಗಮನಕ್ಕೆ ತಾರದೇ ನೋಟು ಅಮಾನ್ಯೀಕರಣ ಮಾಡಿದ್ದು, ಯಾವುದೇ ಪೂರ್ವಸಿದ್ಧತೆಯಿಲ್ಲದೇ ಜಿಎಸ್‌ಟಿ ಜಾರಿಗೆ ತಂದಿದ್ದು, ಸಂಘ ಪರಿವಾರದ ಸಿದ್ಧಾಂತ ಒಪ್ಪದ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯವನ್ನು ನಾಶ ಮಾಡಲು ಯತ್ನಿಸು ತ್ತಿರುವುದು ಇವೆಲ್ಲವೂ ಸರಕಾರದ ಸರ್ವಾಧಿಕಾರಿ ಧೋರಣೆಗೆ ಸಾಕ್ಷಿಯಾಗಿವೆ.

ಭಾರತದ ಜನತೆ ಚುನಾಯಿಸಿದ ಸಂಸತ್ತಿಗೆ ಪ್ರತಿಯಾಗಿ ಸಂಘ ಪರಿವಾರ ಧರ್ಮ ಸಂಸದ್ ಸ್ಥಾಪಿಸಿದೆ. ಈ ಧರ್ಮ ಸಂಸದ್ ರಹಸ್ಯವಾಗಿ ಮನುಸ್ಮತಿ ಆಧಾರಿತ ಸಂವಿಧಾನ ರೂಪಿಸಿದ್ದು, ಅದನ್ನು ದೇಶದ ಮೇಲೆ ಹೇರುವ ಸಂಚು ನಡೆಯುತ್ತಿದೆ. ಈ ಧರ್ಮ ಸಂಸದ್ ಇತ್ತೀಚೆಗೆ ಉಡುಪಿಯಲ್ಲಿ ಸಮಾವೇಶಗೊಂಡಾಗ, ಹಿಂದೂಗಳು ತಮ್ಮ ರಕ್ಷಣೆಗಾಗಿ ತಲವಾರು ಹಿಡಿಯಬೇಕೆಂದು ಆರೆಸ್ಸೆಸ್ ನಾಯಕರೊಬ್ಬರು ಕರೆ ನೀಡಿದರು. ಈ ದೇಶದ ಎಲ್ಲಾ ಪ್ರಜೆಗಳ ರಕ್ಷಣೆಗೆ ಪೊಲೀಸ್ ಪಡೆ ಮತ್ತು ರಕ್ಷಣಾ ಪಡೆಗಳು ಇರುವಾಗ, ಅದಕ್ಕೆ ಪರ್ಯಾಯವಾಗಿ ಪ್ರಜೆಗಳು ತಲವಾರು ಹಿಡಿಯಬೇಕೆಂದು ಕರೆ ನೀಡುವುದು ರಾಷ್ಟ್ರದ್ರೋಹವಲ್ಲದೆ ಮತ್ತೇನು?. ಇವರಿಗೂ ಕಾಶ್ಮೀರದ ಭಯೋತ್ಪಾದಕರಿಗೂ ಏನು ವ್ಯತ್ಯಾಸವಿದೆ? ಅಂತಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರನ್ನು ಉಗ್ರಗಾಮಿಗಳೆಂದು ಕರೆದ ಕೂಡಲೇ ಇವರು ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ. ಮೋದಿ ಅಧಿಕಾರಕ್ಕೆ ಬಂದ ನಂತರ ಗೋರಕ್ಷಣೆ ಹೆಸರಿನಲ್ಲಿ ನಡೆದಿರುವ ಕಗ್ಗೊಲೆ ಗಳು, ಅದನ್ನು ಸಮರ್ಥಿಸುವ ಹೇಳಿಕೆಗಳು, ಇದನ್ನು ತಡೆಯಲಾಗದ ಪ್ರಧಾನಿಯ ಮೊಸಳೆ ಕಣ್ಣೀರು ಇವೆಲ್ಲವನ್ನೂ ದೇಶದ ಜನರು ನೋಡುತ್ತಿದ್ದಾರೆ. ಪ್ರಜಾಪ್ರಭುತ್ವ ವನ್ನು ಹೆಸರಿಗೆ ಇಟ್ಟುಕೊಂಡು ಸಂವಿಧಾನವನ್ನು ಸರ್ವನಾಶ ಮಾಡುವ ಭಾರೀ ಸಂಚು ಈ ದೇಶದಲ್ಲಿ ನಡೆದಿದೆ. ನಾವು ಸಂವಿಧಾನವನ್ನು ಬದಲಿಸಲು ಬಂದಿದ್ದೇವೆ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಬಹಿರಂಗವಾಗಿ ಹೇಳಿದ್ದನ್ನು ಇಲ್ಲಿ ಗಮನಿಸಬಹುದು.

ಇದೆಲ್ಲ ಒತ್ತಟ್ಟಿಗಿರಲಿ, ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಸುಪ್ರೀಂಕೋರ್ಟ್ ನ ನಾಲ್ವರು ನ್ಯಾಯಮೂರ್ತಿಗಳು ಬಹಿರಂಗವಾಗಿ ಹೇಳಿದರೆ, ಅವರನ್ನು ತೇಜೋ ವಧೆ ಮಾಡಿ, ಬಾಯಿ ಮುಚ್ಚಿಸುವ ಮಸಲತ್ತು ನಡೆದಿದೆ. ಈ ನ್ಯಾಯಮೂರ್ತಿಗಳು ಪ್ರಾಮಾಣಿಕತೆಗೆ ಹೆಸರಾದವರು ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿಯವರೇ ಹೊಗಳಿದ್ದಾರೆ. ಇವರು ಯಾಕೆ ಬೀದಿಗೆ ಬಂದರು ಎಂಬ ಬಗ್ಗೆ ಅಧಿಕಾರದಲ್ಲಿದ್ದವರು ಸಹಾನುಭೂತಿಯಿಂದ ಯೋಚಿಸಬೇಕಿದೆ. ಇವರು ಬರೀ ಬೀದಿಗೆ ಬಂದಿಲ್ಲ. ಭಾರತದ ಪ್ರಜಾಪ್ರಭುತ್ವ ಗಂಡಾಂತರದಲ್ಲಿದೆ ಎಂದು ಬಹಿರಂಗ ವಾಗಿ ಹೇಳಿದ್ದಾರೆ. ನರೇಂದ್ರ ಮೋದಿ ಸರಕಾರ ನ್ಯಾಯಾಂಗದಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ತನ್ನ ಹಿತಾಸಕ್ತಿ ರಕ್ಷಿಸಿಕೊಳ್ಳಲು ನ್ಯಾಯಾಂಗವನ್ನು ಬಳಸಿಕೊಳ್ಳುತ್ತಿದೆ ಎಂಬುದು ಪ್ರತಿಪಕ್ಷದ ಆರೋಪ ಮಾತ್ರವಾಗಿ ಉಳಿದಿಲ್ಲ.

ಅಮಿತ್ ಶಾ ಗುಜರಾತ್ ಗೃಹ ಮಂತ್ರಿಯಾಗಿದ್ದಾಗ ನಡೆದ ಸೊಹ್ರಾಬುದ್ದೀನ್ ಎನ್‌ಕೌಂಟರ್ ಪ್ರಕರಣದಲ್ಲಿ ವಿಚಾರಣೆ ನಡೆಸುತ್ತಿದ್ದ ಸಿಬಿಐ ವಿಶೇಷ ನ್ಯಾಯಮೂರ್ತಿ ಲೋಯಾ ಅವರ ಸಂಶಯಾಸ್ಪದ ಸಾವಿನ ಪ್ರಕರಣ ಈಗ ಸರ್ವೋಚ್ಚ ನ್ಯಾಯಾಲಯದ ಅಂಗಳದಲ್ಲಿದೆ. ಈ ಪ್ರಕರಣ ವನ್ನು ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ತಮ್ಮಾಂದಿಗೆ ಸಮಾ ಲೋಚಿಸದೆ ಮನಸೋ ಇಚ್ಛೆ ಇನ್ನೊಂದು ಪೀಠಕ್ಕೆ ವರ್ಗಾಯಿಸಿ ದ್ದಾರೆಂದು ನಾಲ್ವರು ನ್ಯಾಯಮೂರ್ತಿಗಳ ಆರೋಪದಲ್ಲಿ ಹುರುಳಿಲ್ಲದಿಲ್ಲ. ಈ ಪ್ರಕರಣದಲ್ಲಿ ಅಮಿತ್ ಶಾ ಅವರನ್ನು ಗುಜರಾತ್‌ನಿಂದ ಗಡಿಪಾರು ಮಾಡಲಾಗಿತ್ತು. ಮೋದಿ ಅಧಿಕಾರಕ್ಕೆ ಬಂದ ಬಳಿಕ ದೋಷಮುಕ್ತರಾಗಲು ನ್ಯಾಯಾಂಗವನ್ನು ಬಳಸಿಕೊ ಳ್ಳುತ್ತಿದ್ದಾರೆ ಎಂಬ ಆರೋಪವಿದೆ.

ಒಟ್ಟಾರೆ, ಈ ವಿದ್ಯಮಾನಗಳಿಂದ ಒಂದು ಅಂಶ ಸ್ಪಷ್ಟವಾಗುತ್ತದೆ. ಭಾರತದ ಜನಸಾಮಾನ್ಯರು ಶಾಸಕಾಂಗ ಮತ್ತು ಕಾರ್ಯಾಂಗದಂತಹ ಸಂವಿಧಾನಾತ್ಮಕ ಸಂಸ್ಥೆಗಳ ಮೇಲೆ ಈಗಾಗಲೇ ನಂಬಿಕೆ ಕಳೆದು ಕೊಳ್ಳುತ್ತಿದ್ದಾರೆ. ಅವರಿಗೆ ಇರುವ ಏಕೈಕ ಭರವಸೆ ನ್ಯಾಯಾಂಗ. ಸುಪ್ರೀಂ ಕೋರ್ಟ್‌ಗೆ ಹೋದರೆ, ನ್ಯಾಯ ಸಿಗಬಹುದು ಎಂಬ ನಂಬಿಕೆ ಅವರಿಗೆ ಇದೆ. ಆ ನಂಬಿಕೆಯನ್ನು ನಾಶ ಪಡಿಸುವುದು ಸಂಘ ಪರಿವಾರ ನಿಯಂತ್ರಿತ ಮೋದಿ ಸರಕಾರದ ಹುನ್ನಾರವಾಗಿದೆ.

ಈ ರೀತಿ ಸಂವಿಧಾನಾತ್ಮಕ ಸಂಸ್ಥೆಗಳ ಮೇಲೆ ಜನರು ಹಂತ ಹಂತವಾಗಿ ನಂಬಿಕೆ ಕಳೆದುಕೊಳ್ಳುವಂತೆ ಮಾಡಿ, ಕೊನೆಗೆ ಈ ಸಂವಿಧಾನವೇ ನಿರುಪಯುಕ್ತವೆಂದು ಜನರು ರೋಸಿ ಹೋಗುವಂತೆ ಮಾಡಿ, ಕೊನೆಗೆ ದೇಶದ ಮೇಲೆ ಶ್ರೇಣೀಕೃತ ಜಾತಿ ಪದ್ಧತಿಯನ್ನು ಪ್ರತಿಪಾದಿಸುವ ಮನುವಾದವನ್ನು ಹೇರುವುದು ಸಂಘ ಪರಿವಾರದ ಒಳಸಂಚು ಆಗಿದೆ. ಆ ಸಂಚಿನ ಭಾಗವಾಗಿಯೇ ಜನತಂತ್ರದ ಸಂಸ್ಥೆಗಳನ್ನು ಇಂಚು ಇಂಚಾಗಿ ಕೊಲ್ಲುವ ಕೆಲಸ ನಡೆದಿದೆ. ಒಮ್ಮೆ ಸಂವಿಧಾನದ ಮೇಲೆ ನಂಬಿಕೆ ಕಳೆದುಕೊಂಡರೆ, ಆ ಅವಕಾಶ ಬಳಸಿಕೊಂಡು ಪೇಜಾವರ ಸ್ವಾಮಿ ನೇತೃತ್ವದ ಆರೆಸ್ಸೆಸ್ ನಿಯಂತ್ರಿತ ಧರ್ಮ ಸಂಸದ್ ರೂಪಿಸಿದ ಪರ್ಯಾಯ ಸಂವಿಧಾನ ವನ್ನು ಅಂದ್ರೆ ಮನುವಾದವನ್ನು ದೇಶದ ಮೇಲೆ ಹೇರುವುದು ಇವರ ಮಸಲತ್ತು ಆಗಿದೆ. ಅದನ್ನು ಈಗ ತಡೆಯದಿದ್ದರೆ, ಈ ಭಾರತ ಒಡೆದು ಚೂರುಚೂರಾಗಿ ಹೋಗುತ್ತದೆ.

Varthabharati

Please follow and like us:
error