ಭ್ರಮೆಪೀಡಿತ ‘‘ದೇಶಭಕ್ತ’’ರಿಗೆ ಕಂಡವರೆಲ್ಲ ದೇಶದ್ರೋಹಿಗಳು!

500 ಮತ್ತು 1,000 ರೂ. ಮುಖಬೆಲೆಯ ನೋಟುಗಳು ರದ್ದುಗೊಂಡ ನಂತರ ಕೆಲ ಸೂಕ್ಷ್ಮ ಸಂಗತಿಗಳನ್ನು ಗಮನಿಸಿದ್ದೀರಾ? ನೋಟುಗಳು ಸಕಾಲಕ್ಕೆ ಸಿಗದೇ ಬಹುತೇಕ ಬಡವರು, ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದರು, ದಿಕ್ಕು ತೋಚದ ಸ್ಥಿತಿ ತಲುಪಿದರು. ಆಘಾತಕ್ಕೆ ಒಳಗಾಗಿ 50ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡರು. ಇದು ಸಾಲದುಎಂಬಂತೆ ಹೊಸ ನೋಟುಗಳ ಹೆಸರಿನಲ್ಲಿ ದೇಶವನ್ನು ಒಡೆಯುವ ಮತ್ತು ಸೌಹಾರ್ದ ವನ್ನು ಕದಡುವ ಪ್ರಯತ್ನವೂ ನಡೆಯುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಂಟಕವಾದ ಸರ್ವಾಧಿಕಾರಿಯ ಗುಣಲಕ್ಷಣಗಳು ಈಗ ಇನ್ನಷ್ಟು ನಿಚ್ಚಳವಾಗಿ ಗೋಚರಿಸತೊಡಗಿವೆ. ತಮ್ಮದೇ ಹಣ ಬದಲಿಸಿಕೊಳ್ಳಲು ಕೆಲಸ ಕಾರ್ಯ ಬಿಟ್ಟು ಇಡೀ ದಿನ ಸರತಿ ಸಾಲಿನಲ್ಲಿ ನಿಲ್ಲುವ ಬಡವರು, ಜನಸಾಮಾನ್ಯರ ದೇಶಭಕ್ತಿ ಮತ್ತು ಬದ್ಧತೆ ಅನುಮಾನಿಸುವ ವ್ಯವಸ್ಥಿತ ಸಂಚು ನಡೆದಿದೆ. ನೋಟು ರದ್ದತಿ ಕುರಿತು ಅಪಸ್ವರವೆತ್ತಿದರೆ ಮತ್ತು ಕೇಂದ್ರ ಸರಕಾರದ ಕ್ರಮದ ವಿರುದ್ಧ ಪ್ರಶ್ನಿಸಿದರೆ, ಸಹಜವಾಗಿ ‘‘ದೇಶದ್ರೋಹಿ’’ ಪಟ್ಟಿಯಲ್ಲಿ ಸೇರಬೇಕು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಯಾವುದೆಲ್ಲ ನಿರ್ಣಯ ತೆಗೆದುಕೊಳ್ಳುವುದೋ, ಅದನ್ನು ತೆಪ್ಪಗೆ ಒಪ್ಪಿಕೊಳ್ಳಬೇಕು. ಅದನ್ನು ಒಪ್ಪದಿದ್ದರೆ, ‘‘ನೀವು ದೇಶದ ಹಿತಚಿಂತಕರಲ್ಲ. ದೇಶದ ಅಭಿವೃದ್ಧಿ ವಿರೋಧಿಗಳು’’ ಎಂಬ ವ್ಯಂಗ್ಯ ಮಿಶ್ರಿತ ವಿಕೃತ ಮಾತುಗಳಿಗೆ ತುತ್ತಾಗಬೇಕು.india-economy-bank-forex

‘‘ಅಪ್ರತಿಮ ದೇಶಭಕ್ತ’’ ಎಂದು ಗುರುತಿಸಿಕೊಳ್ಳಲು ಇಷ್ಟಪಡುವ ಪ್ರಧಾನಿ ನರೇಂದ್ರ ಮೋದಿ, ‘‘ಕಾಳಧನದ ಪತ್ತೆಗಾಗಿ, ನೋಟು ರದ್ದುಗೊಳಿಸಿದ್ದೇನೆ’’ ಎಂದು ಹೇಳಿದ್ದೇ ತಡ, ಭ್ರಮೆಪೀಡಿತ ಮೋದಿ ಭಕ್ತರಲ್ಲಿ ಒಮ್ಮೆಲೇ ವಿದ್ಯುತ್ ಪ್ರವಹಿಸಿ ತಮ್ಮನ್ನು ತಾವು ‘‘ಸ್ವಯಂ-ಘೋಷಿತ ದೇಶಭಕ್ತ’’ರಾಗಿ ಬಿಂಬಿಸಿಕೊಂಡರು. ಭ್ರಷ್ಟಾಚಾರ ತಡೆಗೆ ಪ್ರಧಾನಿ ಮೋದಿ ಇಷ್ಟೆಲ್ಲ ಮಾಡುವಾಗ, ‘‘ನೀವು ದೇಶಕ್ಕಾಗಿ ಸಾಲಿನಲ್ಲಿ ನಿಲ್ಲಲು ಆಗುವುದಿಲ್ಲವೇ? ಒಂದೆರಡು ದಿನ ಕಷ್ಟ ಅನುಭವಿಸಲು ಆಗಲ್ಲವೇ’’ ಎಂದರು. ಹಣವಿಲ್ಲದೆ ಮೊದಲೇ ಕಂಗಾಲಾದ ಜನಸಾಮಾನ್ಯರನ್ನು ಧ್ವನಿಯೆತ್ತದಂತೆ ದಮನಿಸಿದರು. ಸುಲಭವಾಗಿ ಚೇತರಿಸಿಕೊಳ್ಳಲು ಆಗದಷ್ಟು ದುರ್ಬಲಗೊಳಿಸಿದರು. ಭ್ರಮೆಪೀಡಿತ ದೇಶಭಕ್ತಿ ಇಲ್ಲಿಗೆ ಕೊನೆಯಾಗಲಿಲ್ಲ. ಜನರನ್ನು ಭಾವಪರವಶಗೊಳಿಸಿ ಬ್ಲ್ಯಾಕ್‌ಮೇಲ್ ಮಾಡುವ ಯತ್ನವೂ ನಡೆಯಿತು. ‘‘ನನ್ನ ಬಳಿ ಕಾಳಧನವಿಲ್ಲ. ನಾನು ಏಕೆ ಕಷ್ಟ ಅನುಭವಿಸಬೇಕು’’ ಎಂದು ಜನಸಾಮಾನ್ಯರು ಕೇಳಿದರೆ, ‘‘ದೇಶದ ಗಡಿಯಲ್ಲಿ ನಿಂತಿರುವ ಯೋಧನಿಗೆ ಪಾಕಿಸ್ತಾನದ ವಿರುದ್ಧ ವೈಯಕ್ತಿಕ ದ್ವೇಷವಿಲ್ಲ. ಆದರೆ ಆ ಯೋಧ ನಿಮ್ಮ ಮತ್ತು ದೇಶದ ಸಲುವಾಗಿ ಯಾಕೆ ನಿಲ್ಲಬೇಕೆಂದು ಮರಳಿದರೆ ಏನು ಮಾಡುತ್ತೀರಿ’’ ಎಂದು ವಿಕೃತವಾಗಿ ಪ್ರಶ್ನಿಸಿದರು. ಭ್ರಮೆಪೀಡಿತ ದೇಶಭಕ್ತರು ಇಂತಹ ಮೊಂಡು ವಾದಗಳಿಗೆ ಮಣೆ ಹಾಕಿದರೇ ಹೊರತು ವಾಸ್ತವಾಂಶ ಅರಿಯುವ ಪ್ರಯತ್ನ ಮಾಡಲಿಲ್ಲ. ಅದು ಅವರಿಗೆ ಬೇಕಾಗಿಯೂ ಇಲ್ಲ.

prachalitha-sanatakumar-belagaliದೇಶವನ್ನು ಸಾಮಾಜಿಕ, ಬೌದ್ಧಿಕ, ಆರ್ಥಿಕ ಮತ್ತು ಜನಸಾಮಾನ್ಯರ ಹಿತ ದೃಷ್ಟಿಯಿಂದ ನೋಡುವುದಕ್ಕಿಂತ ದೇಶವನ್ನು ಮತ್ತು ಜನರನ್ನು ಭಾವನೆಗಳಲ್ಲಿ ಅಳೆದು ತೂಗುವ ವಿಕಾರ ರೂಪ ಈಗ ಪ್ರದರ್ಶನವಾಗತೊಡಗಿದೆ. ಬಡತನ, ಶಿಕ್ಷಣ, ನಿರುದ್ಯೋಗ, ಉದ್ಯೋಗ ಅಭದ್ರತೆ, ಸಾಮಾಜಿಕ ಅಸಮಾನತೆ ಮುಂತಾದ ವಿಷಯ ಗಳನ್ನು ಬದಿಗಿರಿಸಿ ದೇಶದ ಬಗ್ಗೆ ಭಾವನಾತ್ಮಕವಾಗಿ ಚಿಂತಿಸುವಂತಹ ಪರಿಸ್ಥಿತಿ ನಿರ್ಮಿಸಲಾಗುತ್ತಿದೆ. ‘‘ನೋಟುಗಳ ಬದಲಾವಣೆಗಾಗಿ ಮೂರು-ನಾಲ್ಕು ದಿನ ಕಷ್ಟವಾಗುತ್ತದೆ. ಹಣ ಸಿಗೊಲ್ಲ. ಎರಡು ದಿನ ಉಪವಾಸ ಇರುವಂತೆ ತಾಯಿ ಹೇಳಿದರೆ, ಹಸಿದ ಮಕ್ಕಳು ಅದಕ್ಕೊಪ್ಪಿ ಜೈಹಿಂದ್ ಎನ್ನಬೇಕು. ಇದು ನಿಜವಾದ ದೇಶಭಕ್ತಿ’’ ಎಂಬುದನ್ನು ಹೇರುವ ವ್ಯವಸ್ಥಿತ ಸಂಚು ಮಾಡಲಾಗುತ್ತಿದೆ. ಒಂದು ಹೊತ್ತಿನ ಊಟ ಸಿಗದಿರುವಾಗ, ಆ ಜನರು ಬದುಕುವುದಾದರೂ ಹೇಗೆ? ಪೌಷ್ಟಿಕ ಆಹಾರ ಮತ್ತು ಶುದ್ಧ ನೀರು ಸಿಗದೆ ಕಾಯಿಲೆಪೀಡಿತರಾಗಿ ಸಾವನ್ನಪ್ಪುತ್ತಿದ್ದಾರೆ. ಅವರ ಸಮಸ್ಯೆಗೆ ಸ್ಪಂದಿಸಿ ಪರಿಹಾರ ಒದಗಿಸುವ ಬದಲು ಅಲ್ಲಿಯೂ ‘‘ಸುಧಾರಣೆ’’ ಎಂಬ ಭ್ರಮೆಯ ನಶೆ ಏರಿಸಿ ದೇಶಭಕ್ತರಾಗುವಂತೆ ಬೋಧಿಸಿದರೆ, ಅದು ಯಾವ ಬಡವರಿಗೆ ಅರ್ಥವಾದೀತು.

‘‘ದೇಶ 70 ವರ್ಷಗಳಿಂದ ನಿದ್ದೆ ಮಾಡುತಿತ್ತು. ಈಗ ಎದ್ದು ಕೂತಿದೆ. ತುಂಬಾನೇ ಹಿಂದುಳಿದಿದ್ದ ದೇಶ ಈಗ ಅಭಿವೃದ್ಧಿ ಪಥದಲ್ಲಿ ನಡೆಯುತ್ತಿದೆ’’ ಎಂಬುದು ಭ್ರಮೆಪೀಡಿತ ದೇಶಭಕ್ತರ ಪ್ರಲಾಪ. ದೇಶಕ್ಕೆ ಈಗಷ್ಟೇ ಸ್ವಾತಂತ್ರ್ಯ ದೊರೆತು, ಜ್ಞಾನೋದಯ ಗೊಂಡಿದ್ದೇವೆ ಎಂಬಂತೆ ವರ್ತಿಸುವ ಅವರಿಗೆ ಪುನಃ ಗುಲಾಮಗಿರಿಯತ್ತ ಹೊರಟಿರು ವುದು ಅರಿವಿಗೆ ಬರುತ್ತಿಲ್ಲ. ಅರಿವಿಗೆ ಬಂದರೂ ಉದ್ದೇಪೂರ್ವಕವಾಗಿ ತಾವು ನಿದ್ದೆಯಿಂದ ಎಚ್ಚೆತ್ತುಕೊಳ್ಳಲುಬಯಸುತ್ತಿಲ್ಲ. ದೇಶವನ್ನು ದೀರ್ಘಕಾಲದವರೆಗೆ ಆಳಿದ ಕಾಂಗ್ರೆಸ್ ಸರಕಾರ ಏನನ್ನೂ ಮಾಡಿಲ್ಲ ಎಂದು ಸಂಕುಚಿತ ಮನಸ್ಸಿನಿಂದ ಮಾತನಾಡುವ ಭಕ್ತರಿಗೆ, ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗಿ ಉಳಿದಿರುವ ವಿಷಯ ಮಹತ್ವ ಅನ್ನಿಸುವುದೇ ಇಲ್ಲ. ಸ್ವಾತಂತ್ರ್ಯ ಪಡೆದುಕೊಂಡ ಕೆಲ ದೇಶಗಳು ಪುನಃ ಸ್ವಾತಂತ್ರ್ಯ ಕಳೆದುಕೊಂಡಿದ್ದರೆ, ಕೆಲ ದೇಶ ಗಳಲ್ಲಿ ರಾಜಕೀಯ ಅಸ್ಥಿರತೆ ಮತ್ತು ಇತರೆ ಸಮಸ್ಯೆಗಳು ತಂಡವವಾಡುತ್ತಿವೆ. ಒಂದೊಂದು ರಾಜ್ಯಗಳು ಒಂದೊಂದು ದೇಶದಂತೆ ಇದ್ದು ಅಕ್ಷರಶಃ ಇಡೀ ಭಾರತವು ಉಪಖಂಡದಂತಿದೆ. ಆದರೆ ಹಲವಾರು ಸಮಸ್ಯೆಗಳಿದ್ದರೂ ಎಲ್ಲಾ ರಾಜ್ಯಗಳನ್ನು ಒಟ್ಟುಗೂಡಿಸಿಕೊಂಡು ದೇಶ ಗಟ್ಟಿಯಾಗಿ ನೆಲೆ ನಿಂತಿರುವುದು ಸಾಧನೆಯೆಂದು ಅವರು ಪರಿಗಣಿಸುವುದಿಲ್ಲ. ಇದೆಲ್ಲಕ್ಕಿಂತ ಮಿಗಿಲಾಗಿ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ದೇಶಕ್ಕಾಗಿ ಪ್ರಾಣ ಕಳೆದುಕೊಂಡರೇ ಹೊರತು ಸ್ವಾರ್ಥ ಕಾರಣಕ್ಕಲ್ಲ. ಪಂಜಾಬ್‌ನಲ್ಲಿ ಆಪರೇಷನ್ ಬ್ಲ್ಯೂ ಸ್ಟಾರ್ ಕಾರ್ಯಾಚರಣೆಯಿಂದ ಇಂದಿರಾ ಗಾಂಧಿಯವರ ಪ್ರಾಣಕ್ಕೆ ಅಪಾಯ ವಿದೆ ಎಂದು ಗುಪ್ತಚರ ಮೂಲಗಳು ತಿಳಿಸಿದ್ದವು. ಆ ಕ್ಷಣಕ್ಕೆ ಕಾರ್ಯಾಚರಣೆ ನಡೆಸುವುದು ಅನಿವಾ ರ್ಯವೂ ಆಗಿತ್ತು. ಪ್ರಾಣ ಬೆದರಿಕೆಯಿದ್ದರೂ ಇಂದಿರಾ ಗಾಂಧಿ ನಂಬಿಕೆ ಮತ್ತು ವಿಶ್ವಾಸದ ಆಧಾರದ ಮೇಲೆ ಸಿಖ್ ಭದ್ರತಾ ಸಿಬ್ಬಂದಿ ಹೊಂದಿದ್ದರು. ಆದರೆ ಆ ಭದ್ರತಾ ಸಿಬ್ಬಂದಿಯ ಗುಂಡುಗಳೇ ಅವರ ಜೀವ ತೆಗೆಯಿತು. ಭದ್ರತಾ ಹಿತದೃಷ್ಟಿಯಿಂದ ರಾಜೀವ್ ಗಾಂಧಿಯವರಿಗೆ ಜನರ ಮಧ್ಯೆ ಹೆಚ್ಚು ಹೋಗದಂತೆ ಎಚ್ಚರಿಕೆ ನೀಡಲಾಗಿತ್ತು. ಆದರೆ ಅವರು ಜನರ ಮಧ್ಯೆಯಿರಲು ಮತ್ತು ಅವರ ಕಷ್ಟಸುಖ ಹಂಚಿಕೊಳ್ಳಲು ಇಷ್ಟಪಡುತ್ತಿದ್ದರು.ಆದರೆ ಅದೇ ಅವರ ಜೀವಕ್ಕೆ ಮುಳುವಾಯಿತು. ತಮಿಳುನಾಡಿನ ಶ್ರೀ ಪೆರಂಬುದೂರಿನಲ್ಲಿ ಎಲ್ಟಿಟಿಇ ದುಷ್ಕೃತ್ಯದ ಮಾನವ ಬಾಂಬ್ ಸ್ಫೋಟದಲ್ಲಿ ಅವರು ಪ್ರಾಣ ಕಳೆದುಕೊಂಡರು.

ದೇಶದಲ್ಲಿ ಆಳ್ವಿಕೆ ನಡೆಸಿದ ಪ್ರಧಾನಿಗಳು ಟೀಕೆ ಮತ್ತು ಟಿಪ್ಪಣಿಗಳನ್ನು ಸ್ವಾಗತಿಸುತ್ತಿದ್ದರೇ ಹೊರತು ಟೀಕಾಕಾರರ ವಿರುದ್ಧ ಸೇಡು ತೀರಿಸಿಕೊಳ್ಳುವ ಮನೋಭಾವ ಬೆಳೆಸಿಕೊಂಡಿ ರಲಿಲ್ಲ. ನೆಹರೂ ಅವರ ಕಾಲದಲ್ಲಿ ಪ್ರಕಟವಾಗುತ್ತಿದ್ದ ‘‘ಶಂಕರ್ಸ್‌ ವೀಕ್ಲಿ’’ ಎಂಬ ವ್ಯಂಗ್ಯಚಿತ್ರಗಳ ಪತ್ರಿಕೆ ಹೆಚ್ಚು ಜನಪ್ರಿಯವಾಗಿತ್ತು. ಆ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಮೊನಚಾದ ವ್ಯಂಗ್ಯಚಿತ್ರಗಳಿಗೆ ನೆಹರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಆಡಳಿತದಲ್ಲಿ ತಪ್ಪು ಗಳಾಗಿದ್ದಲ್ಲಿ ತಿದ್ದಿಕೊಳ್ಳುತ್ತಿದ್ದರು. ‘‘ಮಾಧ್ಯಮಗಳು ಸರಿ ತಪ್ಪುಗಳನ್ನು ಎತ್ತಿ ತೋರಿಸದಿದ್ದರೆ, ಆಡಳಿತ ನಡೆಸುವುದು ಕಷ್ಟ’’ ಎಂದು ನಂಬಿದವರು ಅವರು. ಆದರೆ ಈಗ ಇಲ್ಲಸಲ್ಲದ ನೆಪ ಗಳನ್ನು ಒಡ್ಡಿ ಟಿವಿ ವಾಹನಿಗಳ ಪ್ರಸಾರ ನಿಷೇಧಿಸುವ, ಪತ್ರಿಕೆಗಳ ಮುದ್ರಣ ಸ್ಥಗಿತಗೊಳಿ ಸುವ ಪ್ರಕ್ರಿಯೆ ನಡೆಯುತ್ತಿದೆ. ಪತ್ರಕರ್ತರು ಬಂಧಿತರಾದರೂ ಅಥವಾ ಪ್ರಾಣ ಕಳೆದುಕೊಂಡರೂ ಅದನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕುವ ಪ್ರಯತ್ನಗಳು ನಡೆದಿವೆ.

ಇನ್ನೊಂದು ಆಸಕ್ತಿಕರ ವಿಷಯವೆಂದರೆ, ಈ ಹಿಂದಿನ ಪ್ರಧಾನಿಗಳು ಯಾರೂ ಇನ್ನೊಬ್ಬರ ತೇಜೋವಧೆ ಮಾಡುತ್ತಿರಲಿಲ್ಲ. ಮನಸ್ಸಿಗೆ ಬಂದಂತೆ ಆರೋಪಿಸುತ್ತಿರಲಿಲ್ಲ. ಯಾರೊಂದಿಗೆ ಯಾವ ಸಂದರ್ಭದಲ್ಲಿ ಹೇಗೆ ಮಾತನಾಡಬೇಕು ಎಂಬುದು ಅವರಿಗೆ ಅರಿವಿತ್ತು. ಎಲ್ಲಾ ಕಡೆಗಳಲ್ಲೂ ಒಂದೇ ತೆರನಾದ ಭಾಷಣ ಮಾಡುತ್ತಿರಲಿಲ್ಲ. ಇಂದಿರಾ ಗಾಂಧಿಯವರ ಆಡಳಿತಕ್ಕೆ ರೋಸಿ ಹೋಗಿ ಅವರನ್ನು ಯಾರಾದರೂ ಏಕವಚನದಲ್ಲಿ ಆಕ್ರೋಶ ವ್ಯಕ್ತಪಡಿಸಿದರೆ, ಅದಕ್ಕೆ ಅಟಲ್ ಬಿಹಾರಿ ವಾಜಪೇಯಿ ಆಕ್ಷೇಪಣೆ ಇರುತ್ತಿತ್ತು. ಪರಸ್ಪರ ಗೌರವಭಾವನೆಯಿಂದ ಕಾಣಬೇಕು ಮತ್ತು ಸಾತ್ವಿಕ ಸಿಟ್ಟು ಮಾತ್ರ ವ್ಯಕ್ತಪಡಿಸಬೇಕೆ ಹೊರತು ಮಾತಿನ ಭರದಲ್ಲಿ ಇನ್ನೊಬ್ಬರಿಗೆ ಅವಮಾನಿಸಬಾರದು ಎಂದು ಹೇಳಿದವರು ವಾಜಪೇಯಿ. ಅವರೂ ಇಂದಿರಾಗಾಂಧಿಯವರಿಗೆ ಇಂದಿರಾಜೀ ಎಂದೇ ಸಂಬೋಧಿಸಿದರೇ ಹೊರತು ಅಗೌರವದಿಂದ ಕಾಣಲಿಲ್ಲ.

ಆದರೆ ಈಗಿನ ಪ್ರಧಾನಿ ನರೇಂದ್ರ ಮೋದಿಯವರ ಬಹುತೇಕ ಭಾಷಣಗಳಲ್ಲಿ ಹಿಂದಿನ ಪ್ರಧಾನಿಗಳ ಕುರಿತು ಟೀಕೆ ಹೆಚ್ಚಿರುತ್ತವೆ ಹೊರತು ಮುಂದಿನ ಕಾರ್ಯ ಯೋಜನೆ ಗಳ ಕುರಿತು ಮಾಹಿತಿ ಕಡಿಮೆ ಇರುತ್ತದೆ. ಒಂದು ವೇಳೆ ಈ ಹಿಂದಿನ ಪ್ರಧಾನಿಗಳೆಲ್ಲರೂ ಭ್ರಷ್ಟಾಚಾರಿಗಳು ಆಗಿದ್ದರೆ, ಅದರಲ್ಲಿ ಅಟಲ್ ಬಿಹಾರಿ ವಾಜಪೇಯಿಯವರ ಸರಕಾರವೂಇತ್ತು. ಲಾಲ್ ಕೃಷ್ಣ ಅಡ್ವಾಣಿಯವರು ಸರಕಾರದ ಪ್ರಮುಖ ಸ್ಥಾನದಲ್ಲಿದ್ದರು. ಅವರ ಅವಧಿಯಲ್ಲೂ ಭ್ರಷ್ಟಾಚಾರ ನಡೆದಿತ್ತೇ? ಅವರದ್ದೇ ನೇತೃತ್ವದ ಎನ್‌ಡಿಎ ಸರಕಾರ ದೇಶದ ಕುರಿತು ಕಿಂಚಿತ್ತೂ ಚಿಂತೆಯೇ ಮಾಡಲಿಲ್ಲವೇ?

ಮುಂದಿನ ದಿನಗಳು ಅಪಾಯಕಾರಿಯಾಗಿವೆ. ಪ್ರಗತಿಪರ ಸಂಘಟನೆಗಳು, ಎಡಪರ ಚಿಂತಕರು, ಜಾತ್ಯತೀತ ಶಕ್ತಿಗಳು ಒಟ್ಟಾಗದಿದ್ದರೆ ಮತ್ತು ತೀವ್ರ ಸ್ವರೂಪದ ಪ್ರತಿರೋಧ ಒಡ್ಡ ದಿದ್ದರೆ, ಸವಾಲುಗಳನ್ನು ಎದುರಿಸುವುದು ಕಷ್ಟವಾಗುತ್ತದೆ. ಭ್ರಮೆಗಳನ್ನು ಚೂರುಗೊಳಿಸಿ, ವಾಸ್ತವಾಂಶದ ಕುರಿತು ಬೆಳಕು ಚೆಲ್ಲದಿದ್ದರೆ, ಪ್ರಜಾಪ್ರಭುತ್ವದ ತಳಹದಿಯ ಮೇಲೆ ದೇಶವನ್ನು ಉಳಿಸಿಕೊಳ್ಳುವುದು ಕಷ್ಟವಾಗುತ್ತಿದೆ. ಒಂದರ್ಥದಲ್ಲಿ ಇದು ಎಚ್ಚರಿಕೆಯ ಗಂಟೆಯೂ ಹೌದು

Courtesy -Varthabharati

Please follow and like us:
error