fbpx

ದೇಶಭಕ್ತಿ ಎಂಬ ದಗಾಕೋರರ ಅಡಗುತಾಣ – ಸನತ್ ಕುಮಾರ ಬೆಳಗಲಿ

prachalitha-sanatakumar-belagali

ರಾಷ್ಟ್ರಭಕ್ತಿ ಎಂಬುದು ಗೂಂಡಾಗಳ, ಫಟಿಂಗರ ಕೊನೆಯ ಆಶ್ರಯತಾಣವಾಗಿದೆ ಎಂದು ಖ್ಯಾತ ಚಿಂತಕ ಸ್ಯಾಮುಯಲ್ ಜಾನ್ಸನ್ ಹೇಳಿದ ಮಾತು. ನಮ್ಮ ದೇಶದ ಇಂದಿನ ಸ್ಥಿತಿಗೆ ಚೆನ್ನಾಗಿ ಅನ್ವಯಿಸುತ್ತದೆ. ನಾನಾ ಅಕ್ರಮ ವ್ಯವಹಾರ ಮಾಡುವವರು, ಅಪರಾಧ ಕೃತ್ಯ ಎಸಗುವವರು ರಾಷ್ಟ್ರಭಕ್ತಿ ಹೆಸರಿನಲ್ಲಿ ಎಲ್ಲವನ್ನೂ ದಕ್ಕಿಸಿಕೊಳ್ಳುತ್ತಿದ್ದಾರೆ. ಈ ದೇಶವನ್ನು ಕೊಳ್ಳೆ ಹೊಡೆಯುವ ಲೂಟಿಕೋರರು, ಧಣಿಕಳ್ಳರು ರಿಯಲ್ ಎಸ್ಟೇಟ್ ಮಾಫಿಯಾದವರು, ಮೀಟರ್ ಬಡ್ಡಿ ದಂಧೆ ಮಾಡುವ ಹರಾಮಕೋರರು ಇಂತಹವರಿಗೆಲ್ಲ ದೇಶಭಕ್ತಿ ಎಂಬುದು ಅಡಗುತಾಣವಾಗಿದೆ.

ತಾವು ಮಾಡುತ್ತಿರುವ ಸುಲಿಗೆ, ಶೋಷಣೆ, ದಗಲ್ಬಾಜಿತನ, ಬಡ್ಡಿ ವ್ಯವಹಾರ, ರಿಯಲ್ ಎಸ್ಟೇಟ್, ಗಣಿಗಾರಿಕೆ ಇವುಗಳನ್ನೆಲ್ಲ ಜನ ಪ್ರಶ್ನಿಸದಂತೆ ಅವರನ್ನು ಮತಧರ್ಮದ ಅಮಲಿನಲ್ಲಿ ಮುಳುಗಿಸಲಾಗಿದೆ. ಧರ್ಮದ ಹೆಸರಿನಲ್ಲಿ ಕಲಹದ ಕಿಡಿ ಹೊತ್ತಿಸಿ, ಅರಾಜಕತೆ ಸೃಷ್ಟಿಸಲಾಗುತ್ತದೆ. ಘರ್‌ವಾಪ್ಸಿ, ಲವ್ ಜಿಹಾದ್, ಗೋರಕ್ಷಣೆ ಹೆಸರಿನಲ್ಲಿ ದ್ವೇಷದ ದಳ್ಳುರಿ ಎಬ್ಬಿಸಿ ತಮ್ಮ ಅಕ್ರಮ ದಂಧೆ ಸರಾಗವಾಗಿ ನಡೆಯಲು ಇವರು ಮಾರ್ಗ ಸುಲಭ ಗೊಳಿಸಿಕೊಂಡಿದ್ದಾರೆ. ಇವರೆಲ್ಲ ಸಾಮಾನ್ಯವಾಗಿ ಆರೆಸ್ಸೆಸ್, ವಿಎಚ್‌ಪಿ, ಶ್ರೀರಾಮಸೇನೆ, ಎಬಿವಿಪಿಯಂತಹ ಸಂಘಟನೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ತಮ್ಮನ್ನು ವಿರೋಧಿಸುವ ಎಡಪಕ್ಷಗಳು, ದಲಿತ ಸಂಘಟನೆಗಳು, ಬುದ್ಧಿಜೀವಿಗಳು ಹಾಗೂ ಕಲಾವಿದರನ್ನೆಲ್ಲ ದೇಶದ್ರೋಹಿಗಳೆಂದು ಹೀಯಾಳಿಸುತ್ತಾರೆ. ಇದನ್ನೆಲ್ಲ ಮಾಡಲು ಕೋಮುವಾದಿ ಸಂಘಟನೆಗಳಿಗೆ ಕೋಟ್ಯಂತರ ರೂಪಾಯಿ ಕಪ್ಪು ಹಣ ಹರಿದು ಬರುತ್ತದೆ. ಅನ್ಯಾಯದ ವಿರುದ್ಧ ಹೋರಾಡುತ್ತಿರುವ ಜನರನ್ನು ಪರಸ್ಪರ ಕಾದಾಟಕ್ಕೆ ಇಳಿಸಲು ಇವರು ಸಂಚು ರೂಪಿಸುತ್ತಾರೆ. ಕೇರಳದ ಕಣ್ಣೂರಿನಲ್ಲಿ ಆರೆಸ್ಸೆಸ್ ಈ ಪರಿ ಕೊಲೆ ರಾಜಕೀಯ ಮಾಡಲು ಅವರಿಗೆ ಬಂಡವಾಳಗಾರರಿಂದ ಬರುತ್ತಿರುವ ಕಪ್ಪು ಹಣವೇ ಮೂಲವಾಗಿದೆ. 50ರ ದಶಕದಲ್ಲಿ ಕೇರಳದಲ್ಲಿ ಬೀಡಿ ಕಾರ್ಮಿಕರ ಹೋರಾಟ ಹತ್ತಿಕ್ಕಲು, ಕಾರ್ಮಿಕರನ್ನು ವಿಭಜಿಸಲು ಬೀಡಿ ಕಂಪೆನಿ ಮಾಲಕರು ಆರೆಸ್ಸೆಸ್ ಪ್ರಚಾರಕರನ್ನು ತಂದು ಇಲ್ಲಿಬಿಟ್ಟರು.

gujarat sushma-janardan-reddy-sriramulu

ನಮ್ಮ ಕರ್ನಾಟಕದಲ್ಲೂ ಇಂತಹ ನಕಲಿ ದೇಶಭಕ್ತ್ತರ ಆಳ್ವಿಕೆ ನೋಡಿದ್ದೇವೆ. ಬಳ್ಳಾರಿಯಲ್ಲಿ ಭಾರತಮಾತೆಯ ಗರ್ಭ ಸೀಳಿ, ಕಬ್ಬಿಣದ ಅದಿರು ಲೂಟಿ ಮಾಡಿದ ದಗಾಕೋರರು ಆಸರೆ ಪಡೆದದ್ದು ಇಂತಹ ರಾಷ್ಟ್ರವಾದಿ ಪಕ್ಷವನ್ನೇ. ನುಂಗಿದ್ದನ್ನು ಜೀರ್ಣಿಸಿಕೊಳ್ಳಲಾಗದೇ ಜೈಲಿಗೆ ಹೋಗಿ ಬಂದ ಜನಾರ್ದನ ರೆಡ್ಡಿ ಈಗ 250 ಕೋಟಿ ರೂ. ವೆಚ್ಚದಲ್ಲಿ ಮಗಳ ಮದುವೆ ಮಾಡುತ್ತಿದ್ದಾರೆ. ಅದರಲ್ಲಿ ಐದು ಕೋಟಿ ರೂಪಾಯಿ ಮದುವೆಯ ಆಹ್ವಾನ ಪತ್ರಿಕೆಗೆ ವೆಚ್ಚ ಮಾಡಿದ್ದಾರೆ. ಇದನ್ನು ಸಮರ್ಥಿಸಿಕೊಂಡ ಬಿಜೆಪಿ ಸಂಸದ ಶ್ರೀರಾಮುಲು ಅವರವರ ಯೋಗ್ಯತೆಗೆ ತಕ್ಕಂತೆ ಮದುವೆ ಸಮಾರಂಭವನ್ನು ಆಯೋಜಿಸುತ್ತಾರೆ. ಇದರಲ್ಲಿ ತಪ್ಪೇನು? ಎಂದು ಪ್ರಶ್ನಿಸುತ್ತಾರೆ. ಬಿಜೆಪಿಯ ಹಿರಿಯ ನಾಯಕ ಈಶ್ವರಪ್ಪ ಅವರು ಇದನ್ನು ಸಮರ್ಥಿಸಿಕೊಂಡು, ಬಿಜೆಪಿ ನಾಯಕರೇನೂ ಆಕಾಶದಿಂದ ಇಳಿದು ಬಂದವರಲ್ಲ ಎನ್ನುತ್ತಾರೆ. ಹೊಟ್ಟೆ ಹಸಿವು ಇಂಗಿಸಿಕೊಳ್ಳಲು ಬಡವರು ಮಕ್ಕಳನ್ನು ಮಾರುವ ಮತ್ತು ಕಿಡ್ನಿಯನ್ನು ಮಾರುವ ಈ ದೇಶದಲ್ಲಿ ಕೋಟ್ಯಂತರ ರೂ.ಖರ್ಚು ತಗಲುವ ಇಂತಹ ಅದ್ಧೂರಿ ಮದುವೆಗಳು ಅಸಹ್ಯವೆಂದು ಈ ನಕಲಿ ರಾಷ್ಟ್ರವಾದಿಗಳಿಗೆ ಅನ್ನಿಸಿಲ್ಲ.

ಕಾಲ ಈಗ ಬದಲಾಗಿದೆ. ಮೀಟರ್ ಬಡ್ಡಿ ದಂಧೆಕೋರರು, ರಿಯಲ್ ಎಸ್ಟೇಟ್ ಮಾಫಿಯಾಗಳು ಈಗ ಮಹಾನ್ ದೇಶಭಕ್ತ್ತರೆಂದು ಕರೆಯಲ್ಪಡುತ್ತಿದ್ದಾರೆ. ಮಹಾತ್ಮಾಗಾಂಧಿ, ಸುಭಾಶ್ಚಂದ್ರ ಬೋಸ್, ಭಗತ್‌ಸಿಂಗ್ ಅವರನ್ನು ಮರೆಮಾಚುವಂತೆ ಮಿಂಚುತ್ತಿದ್ದಾರೆ. ಇಂತಹವರು ತಾವು ಮಾಡುವ ಕೆಟ್ಟ ದಂಧೆ ಕಾರಣಕ್ಕಾಗಿ ಕೊಲೆಗೀಡಾದರೆ, ರಾಜ್ಯದ ಬಿಜೆಪಿ ನಾಯಕರು ಆಕಾಶವೇ ಹಾರಿ ಬಿದ್ದಂತೆ ಹಾರಾಡುತ್ತಾರೆ. ಕರ್ನಾಟಕ ಕಂಡ ಹೆಸರಾಂತ ಸಂಶೋಧಕ ಎಂ.ಎಂ.ಕಲಬುರ್ಗಿಯವರ ಹತ್ಯೆ ನಡೆದಾಗ, ಬಾಯಿ ಮುಚ್ಚಿಕೊಂಡಿದ್ದ ಇವರು ಈಗ ರುದ್ರೇಶ ಹತ್ಯೆಗೆ ಕೋಮು ಬಣ್ಣ ಬಳಿಯುತ್ತಿದ್ದಾರೆ. ಎಂದೋ ಮನುವಾದಿಗಳ ಮಠ ಸೇರಿದ ವೋಟಿಗಾಗಿ ಲಿಂಗಾಯಿತನಾಗುವ ಯಡಿಯೂರಪ್ಪನವರು ಕಲಬುರ್ಗಿ ಹತ್ಯೆ ವಿರುದ್ಧ ಪ್ರತಿಭಟಿಸಲಿಲ್ಲ. ಅಧಿಕಾರದ ರುಚಿ ಕಂಡ ಇವರಿಗೆ ಕುರ್ಚಿ ಎಂದಿಗೂ ಬಿಟ್ಟಿರಲು ಆಗುತ್ತಿಲ್ಲ. ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಯಾವ ಆರೋಪಗಳು ಇಲ್ಲ. ಹೇಗಾದರೂ ಮಾಡಿ, ಅವರನ್ನು ಕೆಳಗಿಳಿಸಬೇಕು ಎಂಬುದು ಈ ದಗಾಕೋರರ ಹುನ್ನಾರವಾಗಿದೆ. ಅದಕ್ಕಾಗಿ ತೀರ್ಥಹಳ್ಳಿಯ ನಂದಿತಾ ಆತ್ಮಹತ್ಯೆ ಕೊಲೆಯೆಂದು ಅಪಹಾಸ್ಯಕ್ಕೀಡಾದರು. thakre-mushkil-cm

ಕಳೆದ ವರ್ಷ ಟಿಪ್ಪುಜಯಂತಿ ಸಂದಭರ್ದಲ್ಲಿ ಮಡಿಕೇರಿಯಲ್ಲಿ ಗಲಭೆ ಪ್ರಚೋದಿಸಿ, ಒಬ್ಬನ ಸಾವಿಗೆ ಕಾರಣರಾದರು. ಮೈಸೂರಿನಲ್ಲಿ ನಡೆದ ಬಿಜೆಪಿ ಕಾರ್ಯಕರ್ತನ ಕೊಲೆಯನ್ನು ಮುಂದೆ ಮಾಡಿ ರಾದ್ಧಾಂತ ಎಬ್ಬಿಸಿದರು. ಇದಿಷ್ಟು ಸಾಲದು ಎಂಬಂತೆ ಶೋಭಾ ಕರಂದ್ಲಾಜೆ ಅವರು ತಮ್ಮ ಕಾರ್ಯಕರ್ತರಿಗೆ ಬಂದೂಕು ಇರಿಸಿಕೊಳ್ಳಲು ಲೈಸೆನ್ಸ್ ನೀಡಬೇಕೆಂದು ಕೋರಿದ್ದಾರೆ. ನೂರಾರು ವರ್ಷಗಳಿಂದ ಈ ದೇಶವನ್ನು ಶ್ರೇಣೀಕೃತ ಜಾತಿ ವ್ಯವಸ್ಥೆ ಹೆಸರಿನಲ್ಲಿ ಆಳುತ್ತ ಬಂದ ಇವರಿಗೆ ಹಿಂದುಳಿದ ಸಮುದಾಯದ ಪ್ರಾಮಾಣಿಕ ವ್ಯಕ್ತಿ ಮುಖ್ಯಮಂತ್ರಿ ಆಗಿರುವುದನ್ನು ಸಹಿಸಲು ಆಗುತ್ತಿಲ್ಲ. ಇದು ಇಲ್ಲಿ ಮಾತ್ರವಲ್ಲ, ಕೇರಳದಲ್ಲಿ ಕಳೆದ ಚುನಾವಣೆಯಲ್ಲಿ ಕಮ್ಯುನಿಸ್ಟ್ ಪಕ್ಷ ಗೆದ್ದು ಬಹುಮತ ಗಳಿಸಿ ಹಿಂದುಳಿದ ಈಡಿಗ ಸಮುದಾಯದ ಪಿಣರಾಯಿ ವಿಜಯನ್ ಮುಖ್ಯಮಂತ್ರಿಯಾದಾಗ, ಅಲ್ಲೂ ಇದನ್ನು ಸಹಿಸಲಾಗದೇ ಕೊಲೆ ರಾಜಕೀಯದಲ್ಲಿ ತೊಡಗಿದ್ದಾರೆ. ತಾವೇ ಅನೇಕ ಕೊಲೆಗಳನ್ನು ಮಾಡಿಸಿ, ತಮ್ಮ ಕಾರ್ಯಕರ್ತರ ಕೊಲೆಯಾಗುತ್ತಿದೆಯೆಂದು ಅಗ್ಗದ ಪ್ರಚಾರ ಮಾಡಿಸುತ್ತಿದ್ದಾರೆ.
ಕೇವಲ ಮೂರು ವರ್ಷದ ಹಿಂದೆ ಕರ್ನಾಟಕವನ್ನು ಐದು ವರ್ಷ ಆಳಿದ ಇವರು ಏನೂ ಮಾಡಿದರೆಂಬುದು ಜನರಿಗೆ ಗೊತ್ತಿದೆ. ಈ ರಾಷ್ಟ್ರಭಕ್ತ್ತರ ಸಂಪುಟದಲ್ಲಿ ಅತ್ಯಾಚಾರ ಆರೋಪಕ್ಕೆ ಒಳಗಾದ ಸಚಿವರು ಇದ್ದರು. ಸದನಲ್ಲಿ ಬ್ಲ್ಯೂಫಿಲಂ ನೋಡಿದ ಮಂತ್ರಿಗಳಿದ್ದರು. ಪರಪ್ಪನ ಅಗ್ರಹಾರಕ್ಕೆ ಹೋಗಿ ಬಂದ ಮುಖ್ಯಮಂತ್ರಿಗಳಿದ್ದರು. ರಾಜ್ಯಕ್ಕೆ ಸ್ಥಿರ ಆಡಳಿತ ನೀಡಲಾಗದೇ ಮೂವರು ಮುಖ್ಕಮಂತ್ರಿಯರನ್ನು ಬದಲಾಯಿಸಿದರು. ಇಂತಹವರು ತಮ್ಮ ಮುಖಕ್ಕೆ ಮೆತ್ತಿಕೊಂಡ ಹೊಲಸನ್ನು ಒರೆಸಿಕೊಂಡು ಸಿದ್ದರಾಮಯ್ಯ ವಿರುದ್ಧ ಮಾತನಾಡುತ್ತಿದ್ದಾರೆ.

ಈ ರಾಷ್ಟ್ರಭಕ್ತ್ತರ ಹಾವಳಿ ಕರ್ನಾಟಕ ಮಾತ್ರವಲ್ಲ ದೇಶವ್ಯಾಪಿ ಹಬ್ಬಿದೆ. ಮಹಾರಾಷ್ಟ್ರದಲ್ಲಿ ಬಾಳಾ ಠಾಕ್ರೆ ಕುಟುಂಬದ ಆಸ್ತಿಯಾದ ಶಿವಸೇನೆ ಎಂಬ ಸಂಘಟನೆ ನ್ಯಾಯಾಂಗ, ಕಾರ್ಯಾಂಗ ಮತ್ತು ಸಂವಿಧಾನವನ್ನು ಕಡೆಗಣಿಸಿ ತನ್ನದೇ ಸಾಮ್ರಾಜ್ಯ ನಡೆಸಿಕೊಂಡು ಬಂದಿದೆ. ಬಾಳಾ ಠಾಕ್ರೆ ಕೊನೆಯ ದಿನಗಳಲ್ಲಿ ಶಿವಸೇನೆ ನಾಯಕತ್ವ ಯಾರಿಗೆ ಬಿಟ್ಟುಕೊಡಬೇಕು ಎಂಬ ಸಮಸ್ಯೆಗೆ ಸಂಬಂಧಿಸಿದಂತೆ ವಿವಾದ ಉಂಟಾಗಿ ಠಾಕ್ರೆ ತಮ್ಮ ಮಗನಿಗೆ ಬಿಟ್ಟುಕೊಟ್ಟರು. ಅವಾಗ ಬಂಡೆದ್ದ ಠಾಕ್ರೆ ಸೋದರ ಮಗ ರಾಜ್ ಠಾಕ್ರೆ ಮಹಾರಾಷ್ಟ್ರ ನವನಿರ್ಮಾಣ ಸೇವೆ ಕಟ್ಟಿ ಬಿಹಾರಿಗಳ ಮೇಲೆ ಹಿಂಸಾಕೃತ್ಯ ನಡೆಸಿದ್ದು ಎಲ್ಲರಿಗೂ ಗೊತ್ತಿದೆ. ಈಗ ಈ ಸಂಘಟನೆ ‘ಯೇ ದಿಲ್ ಹೈ ಮುಷ್ಕಿಲ್’ ಚಲನಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿ ಹಿಂಸಾಚಾರಕ್ಕೆ ಇಳಿದಿದೆ. ಈ ಚಿತ್ರದಲ್ಲಿ ಪಾಕ್ ನಟ ಫವಾದ್ ಖಾನ್ ನಟಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ವಿರೋಧ ಮಾಡುತ್ತಿದೆ. ಪಾಕಿಸ್ತಾನ ಕಲಾವಿದರ 48 ತಾಸುಗಳಲ್ಲಿ ದೇಶ ಬಿಟ್ಟು ಹೋಗಬೇಕೆಂದು ಗಡುವು ನೀಡುತ್ತದೆ. ಈ ಗೂಂಡಾಗಿರಿ ಎದುರು ಚುನಾಯಿತ ಸರಕಾರ ಕಾನೂನು, ಸಂವಿಧಾನ ಎಲ್ಲವೂ ಗರ ಬಡಿದಂತಿವೆ. ರಾಜಕೀಯ ಪಕ್ಷಗಳು ಬಾಯಿ ಬಿಚ್ಚಿ ಮಾತನಾಡುತ್ತಿಲ್ಲ. ನಕಲಿ ದೇಶಭಕ್ತ್ತರ ಇಂತಹ ಬೂಟಾಟಿಕೆ ವಿರೋಧಿಸಿದರೆ, ಇಂತಹವರನ್ನು ದೇಶದ್ರೋಹಿಯೆಂದು ಕರೆದು ಪಾಕಿಸ್ತಾನಕ್ಕೆ ಹೋಗಲು ವಿಮಾನದ ಟಿಕೆಟ್ ಕಳುಹಿಸುತ್ತಾರೆ. ಕರ್ನಾಟಕದಲ್ಲಿ ಡಾ. ಅನಂತಮೂರ್ತಿ ಅವರಿಗೆ ದೇಶ ಬಿಟ್ಟು ಹೋಗಲು ಇದೇ ರೀತಿ ವಿಮಾನ ಟಿಕೆಟ್ ಕಳುಹಿಸಿ ಸಾಕಷ್ಟು ಚಿತ್ರಹಿಂಸೆ ನೀಡಿದರು. ಅಮಿರ್ ಖಾನ್, ಶಾರೂಖ್ ಖಾನ್ ಅವರಂತಹ ಹೆಸರಾಂತ ಕಲಾವಿದರು ಈ ನಕಲಿ ದೇಶಭಕ್ತ್ತರಿಂದ ಸಾಕಷ್ಟು ಕಿರಿಕಿರಿ ಅನುಭವಿಸಿದ್ದಾರೆ. ಅಂತಲೇ ದೇಶದಲ್ಲಿ ಆರ್ಥಿಕ ಶಕ್ತಿಗಿಂತಲೂ ಸಾಂಸ್ಕೃತಿಕ ಸರ್ವಾಧಿಕಾರ ಹೆಚ್ಚು ಶಕ್ತಿಯಾಗಿದೆ.

ಸಾಂಸ್ಕೃತಿಕ ಶೋಷಣೆ ನಡೆದಿದೆಯೆಂದು ಮ್ಯಾಗ್ಸೇಸ್ಸೆ ಪ್ರಶಸ್ತಿ ಪುರಸ್ಕೃತ ಸಂಗೀತಗಾರ ಟಿ.ಎಂ.ಕೃಷ್ಣ ಹೇಳಿದ್ದಾರೆ. ಈಗ ಪರಿಸ್ಥಿತಿ ಎಷ್ಟು ಆತಂಕಕಾರಿಯಾಗಿದೆ ಎಂದರೆ, ರಾಷ್ಟ್ರಭಕ್ತಿಯ ಸೋಗು ಹಾಕಿದ ಈ ಗೂಂಡಾಗಳ ವಿರುದ್ಧ ಯಾರೂ ಧ್ವನಿಯೆತ್ತುತ್ತಿಲ್ಲ. ಕಾನೂನು ಶಿಸ್ತು ಪಾಲನೆ ಮಾಡಬೇಕಾದ ಸರಕಾರ ವೌನವಾಗಿದೆ. ಸಂವಿಧಾನ ಜಾರಿಗೆ ತರಬೇಕಾದ ಪ್ರಭುತ್ವಕ್ಕೆ ಗರ ಬಡಿದಿದೆ. ಪೇಜಾವರ ಶ್ರೀಗಳಂತಹವರು ಬುದ್ಧಿಜೀವಿಗಳನ್ನು ಹಿಂದೂ ವಿರೋಧಿಗಳೆಂದು ಕರೆದು ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಿದ್ದಾರೆ. ಅಂತಲೇ ಪ್ರತಿಭಟನೆಯ ಧ್ವನಿಗಳು ಉಡುಗಿ ಹೋಗಿವೆ. ಪಾಕಿಸ್ತಾನ ಕಲಾವಿದರ ಬಗ್ಗೆ ಕೋಮುವಾದಿ ಸಂಘಟನೆಗಳಿಂದ ವ್ಯಕ್ತವಾದ ಪ್ರತಿಭಟನೆ ಬಗ್ಗೆ ಪ್ರಶ್ನಿಸಿದರೆ, ಹೆಸರಾಂತ ಸರೋದ್ ಮಾಂತ್ರಿಕ ಉಸ್ತಾದ ಅಮ್ಜದ್ ಅಲಿ ಖಾನ್ ಅಂತಹವರು ವೌನಕ್ಕೆ ಮೊರೆ ಹೋಗುತ್ತಾರೆ. ಜನರ ಭಾವನೆಗಳನ್ನು ಗೌರವಿಸುತ್ತೇನೆ ಎಂದು ಜಾರಿಕೊಳ್ಳುತ್ತಾರೆ. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶ ಮಾಡಿ, ಮನುವಾದಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸಲು ಹೊರಟ ಮಠಾಧೀಶರು, ಮೈನಿಂಗ್ ಮಾಫಿಯಾಗಳು, ಕಾರ್ಪೊರೇಟ್ ಖದೀಮರು ಸರಕಾರವನ್ನೇ ಮಣಿಸುವಷ್ಟು ಪ್ರಬುದ್ಧರಾಗಿದ್ದಾರೆ. ತಮ್ಮ ಮಠದ ತಂಟೆಗೆ ಬರಕೂಡದು ಎಂದು ಅತ್ಯಾಚಾರಿ ಮಠಾಧೀಶನೊಬ್ಬ ಮುಖ್ಯಮಂತ್ರಿಗಳಿಗೆ ಬೆದರಿಕೆ ಹಾಕುವ ದೃಶ್ಯಗಳನ್ನು ಕಾಣುತ್ತಿದ್ದೇವೆ.

ಇಂತಹ ನಿರಾಶಾದಾಯಕ ಸನ್ನಿವೇಶದ ನಡುವೆಯೂ ದಲಿತ ಮತ್ತು ಎಡಪಂಥೀಯ ಚಳವಳಿಯ ಯುವಕರು ಭರವಸೆಯ ಬೆಳಕನ್ನು ನೀಡುತ್ತಿದ್ದಾರೆ. ಇತ್ತೀಚೆಗೆ ನಡೆದ ಜೆಎನ್‌ಯು, ಕ್ಯಾಲಿಕಟ್, ಪುದುಚೇರಿ ವಿಶ್ವವಿದ್ಯಾನಿಲಯದ ಚುನಾವಣೆಗಳಲ್ಲಿ ಎಡಪಂಥೀಯ ಮತ್ತು ದಲಿತ ವಿದ್ಯಾರ್ಥಿಗಳ ಮೈತ್ರಿಕೂಟ ಜಯಶಾಲಿಯಾಗಿದೆ. ಅಪಾಯದ ಅಂಚಿನಲ್ಲಿರುವ ಈ ಭಾರತವನ್ನು ರಕ್ಷಿಸುವ ಸಾಮರ್ಥ್ಯ ಈ ಬಿಸಿರಕ್ತದ ಯುವಕರಲ್ಲಿದೆ ಎಂದರೆ ಅತಿಶಯೋಕ್ತಿಯಲ್ಲ

Please follow and like us:
error

Leave a Reply

error: Content is protected !!