ಕೇರಳದಲ್ಲಿ ಸಂಘ ಪರಿವಾರದ ಅಪಾಯಕಾರಿ ಆಟ-ಸನತ್ ಕುಮಾರ್ ಬೆಳಗಲಿ

ಕೇರಳವೆಂದರೆ ಗುಜರಾತ್ ಅಲ್ಲ ಎಂಬುದು ಅಮಿತ್ ಶಾಗೆ ಗೊತ್ತಿಲ್ಲ. ಹಿಂದೂ ಜಾತಿ ವ್ಯವಸ್ಥೆ ವಿರುದ್ಧ ಬಂಡೆದ್ದ ನಾರಾಯಣಗುರುಗಳು ನಡೆದಾಡಿದ ನೆಲವಾದ ಕೇರಳ ಕಮ್ಯುನಿಸ್ಟ್ ಚಳವಳಿಯ ಭದ್ರಕೋಟೆಯಾಗಿದೆ. ಕಯ್ಯೂರ್ ಹುತಾತ್ಮರ ತ್ಯಾಗ, ಬಲಿದಾನವನ್ನು ಅಲ್ಲಿನ ಜನರು ಮರೆತಿಲ್ಲ. ಗುಜರಾತ್‌ನಂತೆ ಮತ್ತು ಇತರ ರಾಜ್ಯಗಳಂತೆ ಅಲ್ಲಿ ಕಮ್ಯುನಿಸ್ಟ್ ಚಳವಳಿ ಕೇವಲ ಕಾರ್ಮಿಕರ ಹೋರಾಟಕ್ಕೆ ಸೀಮಿತವಾಗಿಲ್ಲ. ಇದು ಅಲ್ಲಿನ ಜನರ ಭಾಗವಾಗಿದೆ. ಅದು ಎಲ್ಲ ಜನರ ಪಕ್ಷವಾಗಿ ಬೆಳೆದಿದೆ. ಅಂತಲೇ ಅದು ಭದ್ರವಾಗಿ ಬೇರೂರಿದೆ.

sanatakumar-belagali violance-in-kerala-sangha-parivarಕೇರಳದಲ್ಲಿ ನಡೆಯುತ್ತಿರುವ ಹಿಂಸಾಚಾರ ಮತ್ತು ರಾಜಕೀಯ ಕೊಲೆಗಳಿಗೆ ಕಾರಣ ಯಾರು? ನಿತ್ಯವೂ ಅಲ್ಲಿ ನಡೆಯುತ್ತಿರುವ ಕೊಲೆ, ದೊಂಬಿಗಳ ಮೂಲ ಯಾವುದು? ಇದಕ್ಕೆ ಕೊನೆಯೆಂದು ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಹೊರಟಾಗ, ಆತಂಕಕಾರಿ ಸತ್ಯಗಳು ಗೋಚರಿಸುತ್ತವೆ. ಈ ಸತ್ಯಗಳ ಬೆಳಕಿನಲ್ಲಿ, ದೇಶ ಸಾಗುತ್ತಿರುವ ದಾರಿ ಬಗ್ಗೆ ಅವಲೋಕಿಸಿದಾಗ ಕಳವಳ ಉಂಟಾಗುತ್ತದೆ. ಸಹಿಷ್ಣುತೆ, ಪ್ರಜಾಪ್ರಭುತ್ವದ ಬೇರುಗಳು ಸಡಿಲ ಆಗುತ್ತಿವೆಯೇ ಎಂಬ ಭೀತಿ ಮೂಡುತ್ತದೆ. ಕೇರಳದ ಹಿಂಸಾಚಾರಕ್ಕೆ ದಶಕಗಳ ಇತಿಹಾಸವಿದೆ. ಸ್ವಾತಂತ್ರ್ಯ ಕಾಲದಲ್ಲಿ ಬ್ರಿಟಿಷ್ ಪ್ರಭುತ್ವದ ಎದುರು ಹೋರಾಟ ಮಾಡಿದ ಹಿನ್ನೆಲೆ ಹೊಂದಿರುವ ಕೇರಳದಲ್ಲಿ ಆರೆಸ್ಸೆಸ್ ಸ್ಥಾಪನೆಯಾದ ನಂತರ ಹಿಂಸಾಚಾರದ ಬೀಜ ಮೊಳಕೆಯೊಡೆಯಿತು. ಅದಕ್ಕಿಂತಮುಂಚೆ ಭೂಮಾಲಕರ ವರ್ಗಗಳ ವಿರುದ್ಧ ಕಯ್ಯೂರು ಮತ್ತು ಪುನ್ನಪ್ರವೈಲಾರ ಹೋರಾಟದ ಇತಿಹಾಸವೂ ಅಲ್ಲಿದೆ. ಆದರೆ ಸೈದ್ಧಾಂತಿಕ ಕಾರಣಗಳಿಗಾಗಿ ಹತ್ಯೆ ರಾಜಕೀಯ ಆರಂಭವಾಗಿದ್ದು ಸಂಘ ಪರಿವಾರ ಪ್ರವೇಶಿಸಿದ ನಂತರ.

ಕಳೆದ ಏಳು ದಶಕಗಳಿಂದ ಆರೆಸ್ಸೆಸ್ ಶಾಖೆಗಳು ಕೇರಳದಲ್ಲಿ ಚಟುವಟಕೆ ನಡೆಸುತ್ತಿವೆ. ಇತ್ತೀಚೆಗೆ ಈ ಶಾಖೆಗಳ ಸಂಖ್ಯೆಯೂ ಹೆಚ್ಚಾಗಿದೆ. ಆದರೆ ಇದರಿಂದ ಸಂಘದ ರಾಜಕೀಯ ವೇದಿಕೆಯಾದ ಬಿಜೆಪಿಗೆ ಹೆಚ್ಚಿನ ಪ್ರಯೋಜನವಾಗಿಲ್ಲ. ಬಿಜೆಪಿಯು ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿಲ್ಲ. ಈ ನಿರಾಸೆ ಹತಾಶೆಯ ರೂಪ ತಾಳಿ, ಅಲ್ಲಿ ಹಿಂಸಾತ್ಮಕ ಚಟುವಟಿಕೆಗಳು ನಡೆಯುತ್ತಿವೆ.amit-shah

ಕೇರಳದ ರಾಜಕೀಯ ಕಳೆದ 70 ವರ್ಷಗಳಿಂದ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷಗಳ ಮಧ್ಯೆ ಧ್ರುವೀಕರಣಗೊಂಡಿದೆ. ಅಲ್ಲಿನ ವಿಧಾನಸಭೆ ಚುನಾವಣೆಯಲ್ಲಿ ಒಂದು ಬಾರಿ, ಕಮ್ಯುನಿಸ್ಟ್ ನೇತೃತ್ವದ ಎಡರಂಗ ಅಧಿಕಾರಕ್ಕೆ ಬರುತ್ತದೆ. ಮತ್ತೊಂದು ಬಾರಿ, ಕಾಂಗ್ರೆಸ್ ನೇತೃತ್ವದ ಸಂಯುಕ್ತ ಪ್ರಜಾಪ್ರಭುತ್ವ ರಂಗ ಗೆಲುವು ಸಾಧಿಸುತ್ತದೆ. ಇವೆರಡರ ನಡುವೆ ಪೈಪೋಟಿಯಲ್ಲಿ ಬಿಜೆಪಿಗೆ ಅಲ್ಲಿ ಅವಕಾಶ ಇಲ್ಲದಂತಾಗಿದೆ. ಗುಜರಾತ್‌ನಂತೆ ಕೋಮು ಧ್ರುವೀಕರಣ ಮಾಡುವುದು ಅಲ್ಲಿ ಸಾಧ್ಯವಿಲ್ಲ. ಯಾಕೆಂದರೆ, ಕೇರಳದ ಬಹುತೇಕ ಹಿಂದೂಗಳು ಎಡಪಕ್ಷಗಳ ಜೊತೆಗಿದ್ದಾರೆ. ಅತ್ಯಂತ ಮುಖ್ಯವಾಗಿ ನಾರಾಯಣಗುರುಗಳ ಅನುಯಾಯಿಗಳಾದ ಈಳವ ಸಮಾಜ ಕಮ್ಯುನಿಸ್ಟ್ ಪಕ್ಷದ ಆಧಾರಸ್ತಂಭವಾಗಿದೆ.

ಉಳಿದಂತೆ, ಅಲ್ಪಸಂಖ್ಯಾತರ ನಡುವೆಯೂ ಎಡಪಕ್ಷಗಳಿಗೆ ಪ್ರಭಾವವಿದೆ. ಸ್ವಾತಂತ್ರ್ಯ ಹೋರಾಟದ ಹಿನ್ನೆಲೆ ಹೊಂದಿದ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ತನ್ನದೇ ನೆಲೆ ಹೊಂದಿದೆ. ಹೀಗಾಗಿ ಕೇರಳದ ಜನ ಬಿಜೆಪಿಯನ್ನು ಇಷ್ಟಪಡುವುದಿಲ್ಲ. ಕಳೆದ ಬಾರಿ ವಿಧಾನಸಭೆ ಚುನಾವಣೆ ನಡೆದಾಗಲೂ ಕೂಡ ರಾಜ್ಯದಲ್ಲಿ ಮೂರನೆ ಶಕ್ತಿಯಾಗಿ ಹೊರಹೊಮ್ಮುವ ಬಿಜೆಪಿ ಕನಸು ನುಚ್ಚುನೂರಾಯಿತು. ಹೇಗಾದರೂ ಮಾಡಿ, ಪಕ್ಷವನ್ನು ಗೆಲ್ಲಿಸಬೇಕೆಂದು ಪ್ರಧಾನ ಸೇವಕರೇ ದಿಲ್ಲಿಯಿಂದ ಕೇರಳಕ್ಕೆ ಬಂದು ರಾಜ್ಯದೆಲ್ಲೆಡೆ ಸುತ್ತಾಡಿದರೂ ಕೂಡ ಕನ್ನಯ್ಯಾ ಕುಮಾರ್ ಸಭೆೆಗೆ ಸೇರಿದಷ್ಟು ಜನರು ಕೂಡ ಅವರ ಸಭೆಗೆ ಸೇರಲಿಲ್ಲ. ಕೇರಳವನ್ನು ಇಥಿಯೋಪಿಯಾಗೆ ಹೋಲಿಸಿ, ಅವರು ಮಾಡಿದ ಟೀಕೆ ರಾಜ್ಯದ ಜನರ ತೀವ್ರ ಆಕ್ರೋಶಕ್ಕೆ ಕಾರಣವಾಯಿತು.

ನಿರಂತರ ಕೋಮು ಹಿಂಸಾಚಾರ, ರಾಜಕೀಯ ಕಗ್ಗೊಲೆ, ಕಾರ್ಪೊರೇಟ್ ಬಂಡವಾಳಶಾಹಿಯ ಹಣದ ಹೊಳೆ, ಧಾರ್ಮಿಕ ಸಂಕೇತಗಳ ದುರುಪಯೋಗ ಇವೆಲ್ಲವನ್ನೂ ಬಳಸಿಕೊಂಡು ಬಿಜೆಪಿ ಗೆದ್ದಿದ್ದು ಒಂದು ಸ್ಥಾನ ಮಾತ್ರ. ತಿರುವನಂತಪುರದಿಂದ ಬಿಜೆಪಿಯ ಹಿರಿಯ ನಾಯಕ ರಾಜಗೋಪಾಲರನ್ನು ಬಿಟ್ಟರೆ ಬಿಜೆಪಿಯಿಂದ ಬೇರೆ ಯಾರೂ ಗೆಲ್ಲಲಿಲ್ಲ. ಈ ಸೋಲಿನಿಂದ ಹತಾಶೆಗೊಂಡ ಸಂಘ ಪರಿವಾರ ಹಿಂಸಾಚಾರಕ್ಕೆ ಇಳಿಯಿತು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ವಿಜಯೋತ್ಸವದ ಮೆರವಣಿಗೆ ಮೇಲೆ ಬಾಂಬ್ ಹಾಕಿ, ಸಾವುನೋವುಗಳಿಗೆ ಕಾರಣವಾಯಿತು.

ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಮುಖ್ಯ ಅಡ್ಡಿಯಾಗಿರುವ ಎಡಪಕ್ಷಗಳನ್ನು ಮುಗಿಸಲು ಸಂಚು ನಡೆಸಿರುವ ಸಂಘ ಪರಿವಾರ ಕಮ್ಯುನಿಸ್ಟ್ ಪಕ್ಷಗಳ ಕೋಟೆಗಳಾದ ತ್ರಿಪುರಾ ಮತ್ತು ಕೇರಳದ ಮೇಲೆ ತನ್ನ ದಾಳಿಯನ್ನು ಕೇಂದ್ರೀಕರಿಸಿದೆ. ಇತ್ತೀಚೆಗೆ ತ್ರಿಪುರಾದ ಎಸ್‌ಎಫ್‌ಐ ನಾಯಕನ ಮನೆ ಮೇಲೆ ಬಾಂಬ್ ದಾಳಿ ಮಾಡಿ, ಅವರನ್ನು ಕೊಲ್ಲುವ ಯತ್ನ ನಡೆಯಿತು. ಕೇರಳದಲ್ಲಂತೂ ನಿತ್ಯವೂ ಕಗ್ಗೊಲೆಗಳ ವರದಿಗಳು ಬರುತ್ತಲೇ ಇವೆ. ಇತ್ತೀಚೆಗೆ ಕೇರಳಕ್ಕೆ ಬಂದು ಪ್ರವಾಸ ಮಾಡಿ ಹೋದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಗಾದರೂ ಮಾಡಿ, ಕೇರಳವನ್ನು ಗೆದ್ದುಕೊಳ್ಳಿ ಎಂದು ತಮ್ಮ ಪಕ್ಷದ ಸದಸ್ಯರಿಗೆ ಸಲಹೆ ನೀಡಿದರು.

ಗುಜರಾತನ್ನು ತಾವು ಗೆದ್ದುಕೊಂಡ ರೀತಿ ಬಗ್ಗೆ ವಿವರಿಸಿದರು. ಅಷ್ಟೇ ಅಲ್ಲ, ಬೇರೆ ರಾಜ್ಯಗಳಲ್ಲಿ ಚರ್ಚ್‌ಗಳ ಮೇಲೆ ದಾಳಿಯನ್ನು ಪ್ರಚೋದಿಸುವ ಇದೇ ಅಮಿತ್ ಶಾ ಕೇರಳಕ್ಕೆ ಬಂದು ಕ್ರೈಸ್ತ ಧರ್ಮ ಗುರುಗಳನ್ನು ಭೇಟಿಯಾಗಿ ಅವರನ್ನು ಬುಟ್ಟಿಗೆ ಹಾಕಿಕೊಳ್ಳಲು ಯತ್ನಿಸಿದರು. ಆದರೂ ಇವರ ಇತಿಹಾಸ ಗೊತ್ತಿರುವ ಕ್ರೈಸ್ತ ನಾಯಕರು ಇವರ ಬುಟ್ಟಿಗೆ ಬೀಳಲಿಲ್ಲ.

ಕೇರಳವೆಂದರೆ ಗುಜರಾತ್ ಅಲ್ಲ ಎಂಬುದು ಅಮಿತ್ ಶಾಗೆ ಗೊತ್ತಿಲ್ಲ. ಹಿಂದೂ ಜಾತಿ ವ್ಯವಸ್ಥೆ ವಿರುದ್ಧ ಬಂಡೆದ್ದ ನಾರಾಯಣಗುರುಗಳು ನಡೆದಾಡಿದ ನೆಲವಾದ ಕೇರಳ ಕಮ್ಯುನಿಸ್ಟ್ ಚಳವಳಿಯ ಭದ್ರಕೋಟೆಯಾಗಿದೆ. ಕಯ್ಯೂರ್ ಹುತಾತ್ಮರ ತ್ಯಾಗ, ಬಲಿದಾನವನ್ನು ಅಲ್ಲಿನ ಜನರು ಮರೆತಿಲ್ಲ. ಗುಜರಾತ್‌ನಂತೆ ಮತ್ತು ಇತರ ರಾಜ್ಯಗಳಂತೆ ಅಲ್ಲಿ ಕಮ್ಯುನಿಸ್ಟ್ ಚಳವಳಿ ಕೇವಲ ಕಾರ್ಮಿಕರ ಹೋರಾಟಕ್ಕೆ ಸೀಮಿತವಾಗಿಲ್ಲ. ಇದು ಅಲ್ಲಿನ ಜನರ ಭಾಗವಾಗಿದೆ. ಅದು ಎಲ್ಲ ಜನರ ಪಕ್ಷವಾಗಿ ಬೆಳೆದಿದೆ. ಅಂತಲೇ ಅದು ಭದ್ರವಾಗಿ ಬೇರೂರಿದೆ.

ಆದರೂ ಹೇಗಾದರೂ ಮಾಡಿ, ಪಕ್ಷವನ್ನು ಕಟ್ಟಿಯೆಂದು ತಮ್ಮ ನಾಯಕ ಅಮಿತ್ ಶಾ ನೀಡಿದ ಆದೇಶವನ್ನು ಜಾರಿಗೆ ತರಲು ಹೊರಟ ಸಂಘ ಪರಿವಾರ ತನ್ನ ಕಚೇರಿಯ ಮೇಲೆ ತಾನೇ ಬಾಂಬ್ ದಾಳಿ ನಡೆಸಿ, ಅಪಹಾಸ್ಯಕ್ಕೀಡಾಯಿತು. ತಿರುವನಂತಪುರದ ಜಿಲ್ಲಾ ಬಿಜೆಪಿ ರಾಜಕೀಯ ಕಾರ್ಯಾಲಯದ ಮೇಲೆ ಕಳೆದ ವಾರ ರಾತ್ರಿ ಅಪರಿಚಿತ ದುಷ್ಕರ್ಮಿಗಳು ದಾಳಿ ಮಾಡಿದರು. ಈ ದಾಳಿ ನಡೆಯುವ ಒಂದು ಗಂಟೆ ಮುಂಚೆಯೇ ಬಿಜೆಪಿ ಮತ್ತು ಸಂಘ ಪರಿವಾರದ ಸಂಘಟನೆಯವರು ಸಾಮಾಜಿಕ ಜಾಲತಾಣಗಳಲ್ಲಿ ದಾಳಿಯನ್ನು ಖಂಡಿಸಿ ಹೇಳಿಕೆ ನೀಡಿದ್ದು ಮಾತ್ರವಲ್ಲ ಸಿಪಿಎಂ ವಿರುದ್ಧ ರಾಜ್ಯವ್ಯಾಪಿ ಹರತಾಳಕ್ಕೆ ಕರೆ ನೀಡಿದರು. ಇದರಿಂದ ದಾಳಿ ಮಾಡಿದವರು ಯಾರು ಎಂಬುದು ಬೆಳಕಿಗೆ ಬಂದು, ಸಂಘ ಪರಿವಾರ ಅಪಹಾಸ್ಯಕ್ಕೀಡಾಯಿತು. ತನ್ನ ಕಚೇರಿ ಮೇಲೆ ತಾನೇ ದಾಳಿ ನಡೆಸಿ, ಜನರ ಸಹಾನುಭೂತಿ ಗಿಟ್ಟಿಸುವ ಮತ್ತು ಜನರನ್ನು ಸಿಪಿಎಂ ವಿರುದ್ಧ ಎತ್ತಿಕಟ್ಟುವ ಪ್ರಯತ್ನ ವಿಫಲಗೊಂಡಿತು.

ದಿಲ್ಲಿಯಲ್ಲಿ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಮೇಲೆ ಹಲ್ಲೆ ಯತ್ನ ನಡೆಸಿದ ಮೇಲೆ ಕೇರಳದ ಕೋಝಿಕ್ಕೋಡ್ ಸಿಪಿಎಂ ಕಚೇರಿ ಮೇಲೆ ಬಾಂಬ್ ದಾಳಿ ನಡೆಯಿತು. ಅದರಲ್ಲೂ ಸಂಘ ಪರಿವಾರದ ಕಾರ್ಯಕರ್ತರು ಸಿಕ್ಕಿಬಿದ್ದರು. ಎಸ್‌ಡಿಪಿಐ ನಾಯಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಗೆ ಕಾರಣವೆಂದು ಈ ಹಿಂದೆ ಸಿಪಿಎಂ ಕಾರ್ಯಕರ್ತರನ್ನು ಬಂಧಿಸಲಾಗಿತ್ತು. ಆದರೆ ಇತ್ತೀಚೆಗೆ ನಡೆದ ಪೊಲೀಸ್ ತನಿಖೆಯಿಂದ ಈ ಕೊಲೆಗೆ ಆರೆಸ್ಸೆಸ್ ಕಾರ್ಯಕರ್ತರು ಕಾರಣ ಎಂಬ ಸಂಗತಿ ಬಯಲಿಗೆ ಬಂದಿದೆ. ಕೇರಳದಲ್ಲಿ ಆರೆಸ್ಸೆಸ್ ಹೇಗೆ ಗಲಭೆಗಳನ್ನು ಸೃಷ್ಟಿಸುತ್ತದೆ, ಕೊಲೆಗಳನ್ನು ಹೇಗೆ ಪ್ರಚೋದಿಸುತ್ತದೆ ಎಂಬುದು ಸುರೇಶ್ ವಿನ್ನಿಯವರ ನರಕದ ಗರ್ಭಗುಡಿಯೊಳಗೆ ವಿವರವಾಗಿ ಬಯಲುಗೊಳಿಸಲಾಗಿದೆ. ಹೀಗಾಗಿ ಅದರ ನಿಜ ಸ್ವರೂಪ ತಿಳಿದುಕೊಂಡು ಅನೇಕ ಆರೆಸ್ಸೆಸ್ ಕಾರ್ಯಕರ್ತರು ಅದರಿಂದ ದೂರ ಸರಿಯುತ್ತಿದ್ದಾರೆ.

ಕೇರಳವನ್ನು ಸ್ವಾಧೀನಪಡಿಸಿಕೊಳ್ಳುವ ಸಂಘ ಪರಿವಾರದ ಯತ್ನ ಈವರೆಗೆ ಯಶಸ್ವಿಯಾಗಿಲ್ಲ. ಮುಂದೆಯೂ ಯಶಸ್ವಿಯಾಗುವುದಿಲ್ಲ ಎಂಬುದು ಅಲ್ಲಿನ ರಾಜಕೀಯ ವಿದ್ಯಮಾನಗಳಿಂದ ಸ್ಪಷ್ಟವಾಗುತ್ತದೆ. ರಾಜಕೀಯ ಸ್ವಾರ್ಥ ಸಾಧನೆಗಾಗಿ ಕೇರಳದ ಶಾಂತಿ ಮತ್ತು ನೆಮ್ಮದಿಗೆ ಕೊಳ್ಳಿಡುತ್ತಿರುವ ಸಂಘ ಪರವಾರದ ವಿರುದ್ಧ ಕೇರಳದ ಜನ ಈಗ ತಿರುಗಿ ಬೀಳುತ್ತಿದ್ದಾರೆ.

Please follow and like us:
error

Related posts

Leave a Comment