ಸತ್ಯಗಳು ಮೂಗಿನ ನೇರಕ್ಕೆ-ನಾ ದಿವಾಕರ

ಹೇಳಬೇಕಾದ್ದನ್ನು ದೊಡ್ಡ ಸ್ವರದಲ್ಲಿ ಮಾಧ್ಯಮಗಳ ಆರ್ಕೆಸ್ಟ್ರಾ ಸಹಿತ ಹೇಳಿದರೆ ಸತ್ಯ ಸುಳ್ಳಾದೀತೇ? ಸಂವಿಧಾನ, ಸಂಸದೀಯ ನಡೆವಳಿಕೆಗಳು ಬದಲಾಗುತ್ತವೆಯೆ?
ಇದನ್ನು ಈವತ್ತಿನ “ವಿಶೇಷ” ವಿಧಾನಪರಿಷತ್ ಅಧಿವೇಶನ ಸಿದ್ಧಪಡಿಸಿ ತೋರಿಸಲಿದೆ ಎಂದು ಕಾಣಿಸುತ್ತದೆ.
ವಿಧಾನ ಪರಿಷತ್ತಿನ ಅದ್ಯಕ್ಷಾಧಿಕಾರಿ ಹುದ್ದೆ ಸಾಂವಿಧಾನಿಕ ಹುದ್ದೆ. ಅದರ ವಿರುದ್ಧ ಅವಿಶ್ವಾಸ ತೋರಿಸುವುದಿದ್ದರೆ ಅದನ್ನು ನಿರ್ದಿಷ್ಠ ವಿಚಾರದ ಮೇಲೆ ಬೊಟ್ಟುಮಾಡಿ ಹೇಳಬೇಕಾಗುತ್ತದೆಯೇ ಹೊರತು ಬಹಳ ಕ್ಯಾಶುವಲ್ ಆಗಿ “ಪಕ್ಷಪಾತ” ಅಂದರೆ ನಿಯಮಗಳು ಅವನ್ನು ಒಪ್ಪುವುದಿಲ್ಲ. ಎಲ್ಲಿ, ಹೇಗೆ, ಯಾವಾಗ ಪಕ್ಷಪಾತ ಆಯಿತೆಂದು ವಿವರಿಸುವುದು ನೋಟೀಸು ನೀಡುವವರ ಜವಾಬ್ದಾರಿ. ಜೊತೆಗೆ ಸದನದಲ್ಲಿ ಮಂಡಿಸಬೇಕಾದ ಅವಿಶ್ವಾಸ ನಿರ್ಣಯವನ್ನು ನಿಖರವಾಗಿ ಸದನದಲ್ಲಿ ಮಂಡಿಸಬೇಕಾದಂತೆಯೇ ಬರೆದು ನೋಟೀಸಿನ ಜೊತೆ ನೀಡಬೇಕಾಗುತ್ತದೆ. ಹಾಲೀ ಅವಿಶ್ವಾಸ ನೋಟೀಸು ಅವನ್ನು ಮಾಡಿಲ್ಲ. ಆ ಕಾರಣಕ್ಕಾಗಿಯೇ ಆಳುವ ಪಕ್ಷದ ಸದಸ್ಯರು ನೀಡಿದ ಅವಿಶ್ವಾಸದ ನೋಟೀಸನ್ನು ನಿಯಮಬದ್ಧವಾಗಿಲ್ಲ ಎಂಬ ಕಾರಣ ನೀಡಿ ಸಭಾಪತಿಗಳು ತಿರಸ್ಕರಿಸಿದ್ದಾರೆ. ಅದು ನಿಯಮಬದ್ಧವಾಗಿಯೇ ನಡೆದಿದೆ.
ಇದೆಲ್ಲ ಸದನ ಪಟಲಕ್ಕೆ ಬರುವುದು, ಅದು ಕಲಾಪಪಟ್ಟಿಯಲ್ಲಿ ದಾಖಲಾದ ಬಳಿಕ (ಅದು ಯಾವಾಗ ಎಂಬುದು ಕೂಡ ಸಭಾಪತಿಗಳ ವಿವೇಚನೆಗೆ ಬಿಟ್ಟದ್ದು ಅನ್ನುತ್ತದೆ ನಿಯಮ). ಅಲ್ಲಿಯ ತನಕ ಯಾವುದೇ ಚರ್ಚೆಗೆ ಸದನದಲ್ಲಿ ಅವಕಾಶಗಳನ್ನು ನಿಯಮ ನೀಡುವುದಿಲ್ಲ.
ಮಾಧ್ಯಮಗಳು ಹೇಳುತ್ತಿರುವಂತೆ, ಸಭಾಪತಿಗಳ ಪದಚ್ಯುತಿ ಎಂಬುದು ಮನಸ್ಸಾದ ಕೂಡಲೇ ಒಂದೇ ದಿನದಲ್ಲಿ ಸ್ಥಳದಲ್ಲೇ ಮಾಡಿ ಮುಗಿಸುವ ಪ್ರಕ್ರಿಯೆ ಅಲ್ಲ. ಹಾಗಾಗಿ ಒಂದು ದಿನದ ಅಧಿವೇಶನದಲ್ಲಿ ಹೆಚ್ಚೆಂದರೆ ಗ್ಯಾಲರಿಗೆ ಒಂದಿಷ್ಟು ಆಟ ಆಡಿ ತೃಪ್ತಿ ಪಟ್ಟುಕೊಳ್ಳಬಹುದೇ ಹೊರತು ಯಾವುದೇ ಸಾಧನೆ ಆಗುವ ಲಕ್ಷಣಗಳು ನಿಯಮಾನುಸಾರ ತೋರುತ್ತಿಲ್ಲ. ಇದಲ್ಲದೇ, ಈ ಹಿಂದಿನ ಉದಾಹರಣೆಗಳು ಕೂಡ (ಸಂಸದೀಯ ನಿಯಮಗಳ ವ್ಯಾಖ್ಯಾನಕ್ಕೆ ಮಹತ್ವದವೆಂದು ಪರಿಗಣಿಸಲಾಗಿರುವ ಕೌಲ್ ಅಂಡ್ ಶಕಧರ್ ಬರೆದ ಪುಸ್ತಕ ಮತ್ತು ಸುಭಾಸ್ ಸಿ. ಕಾಷ್ಯಪ್ ಬರೆದ ಪುಸ್ತಕಗಳು) ಸದ್ಯದ ಸನ್ನಿವೇಶದಲ್ಲಿ ಆಳುವ ಪಕ್ಷದ ನಿಲುವನ್ನು ಸಮರ್ಥಿಸುವುದಿಲ್ಲ.
ನಿಜಕ್ಕೆಂದರೆ, ಮಾಧ್ಯಮಗಳಲ್ಲಿ ಸುದ್ದಿಮನೆಯಲ್ಲಿ ಕುಳಿತಿರುವವರು ನಿಯಮಗಳನ್ನು ಒಮ್ಮೆ ಓದಿಕೊಂಡರೆ, ಇದೊಂದು ವಿವಾದವೇ ಅಲ್ಲ. ಅದಾಗದೇ ಇರುವುದರಿಂದಲೇ ರಾಜಕೀಯದ ದಾಳಗಳಾಗಿ ಮಾಧ್ಯಮಗಳು ರಾಡಿಯಲ್ಲಿ ಉರುಳಾಡುತ್ತಿವೆ. ವಿಧಾನ ಪರಿಷತ್ತಿನ ನಿಯಮ 165, 166, 167, 168ಗಳನ್ನು ಒಮ್ಮೆ ಓದಿಕೊಳ್ಳಿ #ಡಿಯರ್_ಮೀಡಿಯಾ
ಸಾಂವಿಧಾನಿಕ ಹುದ್ದೆಯೊಂದನ್ನು ಈ ರೀತಿ ರಾಜಕೀಯ ಮೇಲಾಟಗಳಿಗೆ ಬಳಸಿಕೊಳ್ಳುವುದು ದಿರ್ಘಕಾಲಿಕವಾಗಿ ನಾಡಿನ ಸಾರ್ವಜನಿಕ ಬದುಕಿಗೆ ಒಳ್ಳೆಯ ಬೆಳವಣಿಗೆ ಖಂಡಿತಾ ಅಲ್ಲ.
ನನಗೆ ವೈಯಕ್ತಿಕವಾಗಿ ತಿಳಿದಿರುವಂತೆ, ನಮ್ಮೂರು ಕುಂದಾಪುರದವರೇ ಆದ ಸಭಾಪತಿಗಳು ಅಧಿಕಾರದ ಹಪಾಹಪಿ ಇರುವವರಾಗಲೀ, ಕುರ್ಚಿಗೆ ಅಂಟಿಕೊಂಡಿರುವ ವ್ಯಕ್ತಿತ್ವವಾಗಲೀ ಅಲ್ಲ. ಕಳೆದ 45 ವರ್ಷಗಳ ಅವರ ರಾಜಕೀಯ ಜೀವನ ಕಂಡವರಿಗೆ ಇದು ಗೊತ್ತಿದೆ. ರಾಜೀನಾಮೆ ಎಸೆದು ಹೊರಬರಬೇಕಾದ ಅನಿವಾರ್ಯತೆ ಬಂದರೆ ಒಂದು ನಿಮಿಷವೂ ವಿಳಂಬಿಸುವ ಜಾಯಮಾನವೂ ಅವರದಲ್ಲ. ಅಕಸ್ಮಾತ್ ಹಾಗಾದರೆ, ಅವರು ಕಳೆದುಕೊಳ್ಳುವುದೇನೂ ಇರುವುದಿಲ್ಲ. ಆದರೆ, ನಮ್ಮ ಸಂಸದೀಯ ಶಿಸ್ತು, ನೈತಿಕತೆ ಬಹಳಷ್ಟನ್ನು ಕಳೆದುಕೊಳ್ಳಲಿದೆ.
Please follow and like us:
error