ಸಂವಿಧಾನ ಉಳಿದರೆ ದೇಶ ಉಳಿಯುತ್ತದೆ-ಸನತ್ ಕುಮಾರ್ ಬೆಳಗಲಿ

ಜಗತ್ತಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಾರತದ ಸಂವಿಧಾನ ಅತ್ಯಂತ ಶ್ರೇಷ್ಠವಾದ ದಾಖಲೆ ಎಂದು ಹೆಸರಾಗಿದೆ. ಸ್ವಾತಂತ್ರದ ಏಳು ದಶಕಗಳ ಕಾಲ ಈ ದೇಶವನ್ನು ಮುನ್ನಡೆಸಿದ ಈ ಸಂವಿಧಾನದ ವಿರುದ್ಧ ಈಗ ಸಂಚು ಒಳಸಂಚುಗಳು ನಡೆದಿವೆ. ಈ ಸಂವಿಧಾನ ಇಲ್ಲದಿದ್ದರೆ ರಾಮನಾಥ ಕೋವಿಂದ್ ರಾಷ್ಟ್ರಪತಿಯಾಗುತ್ತಿರಲಿಲ್ಲ, ಮೋದಿ ಪ್ರಧಾನಿಯಾಗುತ್ತಿರಲಿಲ್ಲ. ಸಂವಿಧಾನ ಬರುವ ಮುನ್ನ ಇಲ್ಲಿದ್ದ ಮನುಸ್ಮತಿಯ ಕಟ್ಟುಪಾಡುಗಳ ಪ್ರಕಾರ ಇವರೆಲ್ಲ ತಮ್ಮ ತಮ್ಮ ಜಾತಿಗಳಿಗೆ ವಿಧಿಸಿದ ಕೆಲಸ ಮಾಡಿಕೊಂಡು ಬಿದ್ದಿರಬೇಕಿತ್ತು. ಇವತ್ತು ಚಪ್ಪಲಿ ಹೊಲಿಯುವ ಮಹಿಳೆ ತನ್ನ ಮಗ ಕಲೆಕ್ಟರ್ ಸಾಹೇಬ ಆಗಬೇಕೆಂದು ಕನಸು ಕಾಣುವ ಆ ಕನಸನ್ನು ನನಸನ್ನಾಗಿ ಮಾಡುವ ಅವಕಾಶ ಕಲ್ಪಿಸಿದ್ದು ಈ ಸಂವಿಧಾನ. ಈ ಆತ್ಮಗೌರವ ಬಂದಿದ್ದು ಯಾವುದೇ ದೇವರು, ಧರ್ಮದಿಂದಲ್ಲ, ಬಾಬಾಸಾಹೇಬರು ರೂಪಿಸಿದ ಸಂವಿಧಾನದಿಂದ.

ಇಂತಹ ಸಂವಿಧಾನವನ್ನು ನಾಶ ಮಾಡಲು ಹೊರಟವರು ಈಗ ಸಂವಿಧಾನದ ಮೂಲ ಕರಡು ಪ್ರತಿ ಸಿದ್ಧಪಡಿಸಿದವರು ಅಂಬೇಡ್ಕರ್ ಅಲ್ಲ ಬಿ.ಎನ್.ರಾವ್ ಎಂಬ ಕುತ್ಸಿತ ಪ್ರಚಾರ ನಡೆಸಿದ್ದಾರೆ.

ಬೆನಗಲ್ ನರಸಿಂಗರಾವ್ ಕರ್ನಾಟಕದ ದೊಡ್ಡ ವಿದ್ವಾಂಸರು. ಅವರ ಬಗ್ಗೆ ಗೌರವವಿದೆ. ಆದರೆ ಭಾರತದ ಸಂವಿಧಾನದ ಕರಡು ಪ್ರತಿಯನ್ನು ಅವರು ರಚಿಸಿದರೆಂಬುದು ಸತ್ಯಕ್ಕೆ ಅಪಚಾರ ಮಾಡಿದಂತೆ. ಸಂವಿಧಾನದ ಕರಡುಪ್ರತಿ ತಯಾರಿಸಿದ ಸಂಪೂರ್ಣ ಶ್ರೇಯಸ್ಸು ಡಾ. ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಇದು ಅಭಿಮಾನದಿಂದ ಹೇಳುವ ಮಾತಲ್ಲ. ವಾಸ್ತವ ಸತ್ಯ.

ಸಂವಿಧಾನ ರಚನಾ ಕಾರ್ಯ ಪೂರ್ಣಗೊಂಡ ನಂತರ ಪತ್ರಕರ್ತನೊಬ್ಬ ಡಾ.ಅಂಬೇಡ್ಕರ್ ಅವರಿಗೆ ಈ ಸಂವಿಧಾನ ಸುದೀರ್ಘ ಕಾಲ ಭಾರತದ ಹಿತವನ್ನು ಹೇಗೆ ಕಾಪಾಡುತ್ತದೆ ಎಂದು ಪ್ರಶ್ನಿಸುತ್ತಾನೆ. ಆಗ ಅಂಬೇಡ್ಕರ್ ಅವರು ಈ ಸಂವಿಧಾನ ಸ್ವಾತಂತ್ರ, ಸಮಾನತೆ, ನ್ಯಾಯ ಹಾಗೂ ಭ್ರಾತೃತ್ವ ಎಂಬ ನಾಲ್ಕು ಆಧಾರ ಸ್ತಂಭಗಳ ಮೇಲೆ ನಿಂತಿದೆ. ಖಂಡಿತ ದೇಶದ ರಕ್ಷಾಕವಚವಾಗಿದೆ ಎಂದು ಉತ್ತರಿಸುತ್ತಾರೆ.

ಇದೀಗ ಕನ್ನಡದಲ್ಲಿ ಬಂದಿರುವ ಸಂವಿಧಾನ ರಚನಾ ಸಭೆಯ ಕಲಾಪಗಳ ಹತ್ತು ಸಂಪುಟಗಳನ್ನು ಅವಲೋಕಿಸಿದರೆ ಸಂವಿಧಾನದ ಕರಡು ಪ್ರತಿಯನ್ನು ಯಾರು ಸಿದ್ಧಪಡಿಸಿದರೆಂಬುದು ಗೊತ್ತಾಗುತ್ತದೆ. ಕರ್ನಾಟಕ ಸರಕಾರದ ಕನ್ನಡ ಸಂಸ್ಕೃತಿ ಇಲಾಖೆ (ಅನುವಾದ ಅಕಾಡಮಿ) ಪ್ರಕಟಿಸಿರುವ ಈ ಸಂಪುಟಗಳನ್ನು ಎಲ್ಲರೂ ಓದಬೇಕು.

ಈ ದಾಖಲೆಗಳ ಪ್ರಕಾರ ಸಂವಿಧಾನ ರಚನಾ ಸಮಿತಿ 5.9.1948 ರಂದು ಸಭೆ ಸೇರಿದಾಗ ಸಂವಿಧಾನದ ಕರಡುಪ್ರತಿ ಸಿದ್ಧಪಡಿಸುವ ಸಮಿತಿಯ ಸದಸ್ಯರಾಗಿದ್ದ (ನೆಹರೂ ಸಂಪುಟದ ಆರ್ಥಿಕ ಸಚಿವರು) ಟಿ.ಟಿ.ಕೃಷ್ಣಮಾಚಾರಿ ಅವರು ಅಂದಿನ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್‌ರನ್ನುದ್ದೇಶಿಸಿ ಮಾತನಾಡುತ್ತ ಸಂವಿಧಾನದ ಕರಡುಪ್ರತಿಯ ರಚನೆಯ ಸಂಪೂರ್ಣ ಶ್ರೇಯಸ್ಸು ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಸಮಿತಿಯ ಏಳು ಸದಸ್ಯರ ಪೈಕಿ ಒಬ್ಬರು ಆರಂಭದಲ್ಲೇ ರಾಜೀನಾಮೆ ಕೊಡುತ್ತಾರೆ. ಇನ್ನೊಬ್ಬರು ಮೃತಪಡುತ್ತಾರೆ. ಇನ್ನೊಬ್ಬರು ಅಮೆರಿಕದಲ್ಲಿರುತ್ತಾರೆ. ಮಗದೊಬ್ಬರು ದಿಲ್ಲಿಯ ರಾಜಕಾರಣದಲ್ಲಿ ಮುಳುಗಿರುತ್ತಾರೆ. ಹೀಗಾಗಿ ಯಾರ ಸಹಾಯ, ಸಹಕಾರವೂ ಡಾ.ಅಂಬೇಡ್ಕರರಿಗೆ ಸಿಗುವುದಿಲ್ಲ. ತುಂಬಾ ಪ್ರಯಾಸಪಟ್ಟು ಅವರೇ ಸಂವಿಧಾನದ ಕರಡು ಪ್ರತಿ ಸಿದ್ಧಪಡಿಸುತ್ತಾರೆ. ಹಗಲೂ ರಾತ್ರಿ ಇದಕ್ಕಾಗಿ ದುಡಿದ ಪರಿಣಾಮವಾಗಿ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಎಂದು ಹೇಳುತ್ತಾರೆ.

ಅಯೋಧ್ಯೆಯ ರಾಮ ಮಂದಿರ ರಥಯಾತ್ರೆ ನಡೆದಾಗಲೇ ಸಂವಿಧಾನ ಬದಲಾವಣೆಯ ಮಾತು ಕೇಳಿ ಬಂದಿತ್ತು. ತೊಂಬತ್ತರ ದಶಕದಲ್ಲಿ ವಿಶ್ವ ಹಿಂದೂ ಪರಿಷತ್‌ನ ಧರ್ಮ ಸಂಸತ್ ಪರ್ಯಾಯ ಸಂವಿಧಾನದ ಚರ್ಚೆ ನಡೆಸಿತ್ತು. ಆನಂತರವೂ ನಡೆಸುತ್ತಲೇ ಇದೆ. ಇದೇ ಉದ್ದೇಶಕ್ಕಾಗಿ ಮಠಾಧೀಶರು, ಧರ್ಮ ಗುರುಗಳು ಪರ್ಯಾಯ ಸಂವಿಧಾನದ ಕರಡು ಪ್ರತಿಯನ್ನೂ ಸಿದ್ಧಪಡಿಸಿದ್ದರು. ಆದರೆ ಕಾರಣಾಂತರಗಳಿಂದ ಅದನ್ನು ಹೊರಗೆ ಬಿಡಲಿಲ್ಲ. ಅದಕ್ಕಾಗಿ ಕಾಲ ಪಕ್ವವಾಗಬೇಕು, ದೇಶದ ಜನರ, ಅದರಲ್ಲೂ ಯುವಜನರ ಮನಸ್ಸನ್ನು ಅದಕ್ಕಾಗಿ ಅಣಿಗೊಳಿಸಬೇಕು ಎಂದು ಮುಂದೂಡಲಾಗಿತ್ತು. ಈಗ ಜನಸಾಮಾನ್ಯರ ಮೆದುಳಿನಲ್ಲಿ ಜನಾಂಗೀಯ ದ್ವೇಷದ ವಿಷ ತುಂಬುವಲ್ಲಿ ಅದು ಕೊಂಚ ಮಟ್ಟಿಗೆ ಯಶಸ್ವಿಯಾದಂತೆ ಕಾಣುತ್ತದೆ. ಅದಕ್ಕಾಗಿ ಮತ್ತೆ ಸಂವಿಧಾನ ಬದಲಾವಣೆ ಮಾತು ಕೇಳಿ ಬರುತ್ತದೆ.

ಸ್ವಾತಂತ್ರಕ್ಕಾಗಿ ಹೋರಾಡದಿದ್ದವರಿಗೆ ಸ್ವತಂತ್ರ ಭಾರತದ ಈ ಸಂವಿಧಾನ ಅರ್ಥವಾಗುವುದಿಲ್ಲ. ಅರ್ಥವಾದರೂ ಅವರು ಇದನ್ನು ಒಪ್ಪುವುದಿಲ್ಲ. ಬಾಬಾಸಾಹೇಬರು ರೂಪಿಸಿದ ಈ ಸಂವಿಧಾನದಲ್ಲಿ ಭಾರತೀಯವಾದುದೇನೂ ಇಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಎರಡನೇ ಸರಸಂಘಚಾಲಕ ಮಾಧವ ಸದಾಶಿವ ಗೋಳ್ವಾಲ್ಕರ್ ಟೀಕಿಸಿದ್ದರು. ನಂತರ ಅವರ ಶಿಷ್ಯರು ಆಗಾಗ ಸಂವಿಧಾನದ ಮೇಲೆ ದಾಳಿ ಮಾಡುತ್ತಲೇ ಇದ್ದಾರೆ. ವಾಜಪೇಯಿ ಪ್ರಧಾನಿಯಾಗಿದ್ದಾಗ ಸಂವಿಧಾನವನ್ನು ಪರಿಷ್ಕರಿಸುವ ಯತ್ನವೊಂದು ನಡೆಯಿತು ಆದರೆ ಅದು ಯಶಸ್ವಿಯಾಗಲಿಲ್ಲ. ಆನಂತರ ಆಗಾಗ ಸಂವಿಧಾನ ಬದಲಿಸುವ ಅಪಸ್ವರಗಳನ್ನು ಕೇಳುತ್ತಲೇ ಇದ್ದೇವೆ. ಕಳೆದ ವರ್ಷ ಕರ್ನಾಟಕದ ಬಿಜೆಪಿ ಸಂಸದ ನಾವು ಸಂವಿಧಾನವನ್ನು ಬದಲಿಸಲೆಂದೇ ಬಂದಿದ್ದೇವೆ ಎಂದು ಹೇಳಿದರು. ನರೇಂದ್ರ ಮೋದಿ ಎರಡನೇ ಬಾರಿ 2019ರಲ್ಲಿ ಅಧಿಕಾರಕ್ಕೆ ಬಂದ ನಂತರ ಸಂವಿಧಾನ ಬದಲಾವಣೆಯ ಹುನ್ನಾರ ತೀವ್ರಗೊಂಡಿದೆ.

ಹಾಗೆ ನೋಡಿದರೆ ಸಂವಿಧಾನ ರಚನೆಯ ಸವಾಲು 1934ರಲ್ಲೇ ಭಾರತೀಯರಿಗೆ ಎದುರಾಗಿತ್ತು. ದೇಶವನ್ನಾಕ್ರಮಿಸಿದ್ದ ಬ್ರಿಟಿಷ್ ವಸಾಹತುಶಾಹಿಗಳ ವಿರುದ್ಧ ಸ್ವಾತಂತ್ರದ ಧ್ವನಿ ಮೊಳಗಿತ್ತು. ಆಗ ಬ್ರಿಟಿಷ್ ಸರಕಾರ ಸ್ವಾತಂತ್ರ ಕೊಟ್ಟರೆ ಸಂವಿಧಾನ ರಚಿಸುವ ಸಾಮರ್ಥ್ಯ ಭಾರತೀಯರಿಗೆಲ್ಲಿದೆ ಎಂದು ಸವಾಲು ಹಾಕಿತ್ತು. ಈ ಸವಾಲನ್ನು ಸ್ವೀಕರಿಸಿದ್ದ ಭಾರತದ ಕಮ್ಯುನಿಸ್ಟ್ ಆಂದೋಲನದ ಮೊದಲ ತಲೆಮಾರಿನ ನಾಯಕ ಮಾನವೇಂದ್ರನಾಥ ರಾಯ್(ಎಂ.ಎನ್.ರಾಯ್) ಅವರು ಸ್ವತಂತ್ರ ಭಾರತದ ಸಂವಿಧಾನ ಕರಡುಪ್ರತಿ ಸಿದ್ಧಪಡಿಸಿದ್ದರು. (ಈ ಮಾತನ್ನು ಶಾಸಕ ಪಿ.ರಾಜೀವ ಇತ್ತೀಚೆಗೆ ಸದನದಲ್ಲಿ ಮಾತಾಡುವಾಗಲೂ ಉಲ್ಲೇಖಿಸಿದ್ದರು) ಹೀಗೆ ಭಾರತದ ಸಂವಿಧಾನ ನಡೆದು ಬಂದದಾರಿ ಸುದೀರ್ಘವಾಗಿದೆ. ಅಂತಿಮವಾಗಿ ಬಾಬಾಸಾಹೇಬರು ಅದಕ್ಕೆ ಒಂದು ಶಾಸ್ವತ ರೂಪ ನೀಡಿದರು.ಅದಕ್ಕಾಗಿ ತಮ್ಮ ರಕ್ತವನ್ನು ನೀರು ಮಾಡಿಕೊಂಡರು. ಸಂವಿಧಾನ ರಚನೆಯ ಈ ಕತೆಯನ್ನು ಕ್ರಾಂತಿಕಾರಿ ಕವಿ, ಗಾಯಕ ಪಿಚ್ಚಳ್ಳಿ ಶ್ರೀನಿವಾಸ ಹಾಡಿನ ರೂಪದಲ್ಲಿ ಪರಿಣಾಮಕಾರಿಯಾಗಿ ಹೇಳಿದ್ದಾರೆ.

ಸಂವಿಧಾನದ ಬಗ್ಗೆ ಕರ್ನಾಟಕ ವಿಧಾನ ಸಭೆಯಲ್ಲಿ ಇತ್ತೀಚೆಗೆ ಚರ್ಚೆ ನಡೆದಾಗ ಮಾಜಿ ವಿಧಾನ ಸಭಾಧ್ಯಕ್ಷ ರಮೇಶ್‌ಕುಮಾರ್ ಅವರೂ ಪರಿಣಾಮಕಾರಿಯಾಗಿ ಮಾತಾಡಿದರು.

ಮೊಗಲರು ಮತ್ತು ಬ್ರಿಟಿಷರು ಬರುವ ಮುಂಚಿನ ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಹೇರುವ ಒಳ ಕಾರ್ಯಸೂಚಿಯನ್ನು ಹೊಂದಿರುವ ಮನುವಾದಿ ಶಕ್ತಿಗಳಿಗೆ ಬಾಬಾಸಾಹೇಬರ ಸಂವಿಧಾನ ಮುಖ್ಯ ಅಡ್ಡಿಯಾಗಿದೆ. ಜಾತಿಭೇದ, ಲಿಂಗಭೇದ ಇಲ್ಲದ ಸಮಾನತೆಯ ಬದುಕನ್ನು ನೀಡಿದ ಈ ಸಂವಿಧಾನವನ್ನು ಕಿತ್ತು ಬಿಸಾಡುವುದು ಇವರ ಹುನ್ನಾರವಾಗಿದೆ

ಆದರೆ ಸಂವಿಧಾನ ಎಂಬುದು ಶತಮಾನಗಳ ಕಾಲ ಕಾರ್ಗತ್ತಲಲ್ಲಿ ನೋವನ್ನುಣ್ಣುತ್ತ ಪ್ರಾಣಿ ಪಕ್ಷಿಗಳಿಗಿಂತ ಕಡೆಯಾಗಿ ಜೀವನ ಸಾಗಿಸುತ್ತಿದ್ದ ಸಮಾಜದ ನೊಂದ ಜನವರ್ಗಗಳ ಬದುಕಿಗೆ ಬೆಳಕನ್ನು ತಂದಿತು.ಸಂವಿಧಾನ ಬರುವ ಮುಂಚೆ ಅಸ್ಪಶ್ಯ ಸಮುದಾಯದ ವ್ಯಕ್ತಿಯೊಬ್ಬ ಸಮಾಜದ ಉನ್ನತ ಸ್ಥಾನಮಾನ ಪಡೆಯುವುದು ಸಾಧ್ಯವಿರಲಿಲ್ಲ.ಮನುವಾದ ದಲಿತರ ಕೈಗೆ ಪೊರಕೆ ಕೊಟ್ಟು ತಲೆಯ ಮೇಲೆ ಮಲದ ಬುಟ್ಟಿ ಹೊರಿಸಿ ಅವರ ಬದುಕನ್ನು ನಾಶ ಮಾಡಿತ್ತು. ಮಹಿಳೆಯ ಬದುಕೂ ಹೀನಾಯವಾಗಿತ್ತು. ಪತಿ ಕಾಯಿಲೆಯಿಂದ ಸತ್ತರೆ ಆತನ ಚಿತೆಗೆ ಹೆಂಡತಿಯೂ ಹಾರಿ ಪ್ರಾಣ ಬಿಡಬೇಕಾದ ಪರಿಸ್ಥಿತಿ ಇತ್ತು.ಆದರೆ ಬಾಬಾಸಾಹೇಬರ ಸಂವಿಧಾನ ಬಂದ ನಂತರ ಎಲ್ಲ ಬದಲಾಗುತ್ತ ಬಂತು. ಮಹಿಳೆ ಇವತ್ತು ಸಾಮಾಜಿಕ, ರಾಜಕೀಯ ಜೀವನದ ಹಾಗೂ ಆಡಳಿತಾಂಗದ ಉನ್ನತ ಸ್ಥಾನಕ್ಕೆ ಹೋಗಿ ತಾನು ಪುರುಷನಿಗಿಂತ ಯಾವುದರಲ್ಲೂ ಕಡಿಮೆಯಿಲ್ಲ ಎಂದು ಸಾಧಿಸಿ ತೋರಿಸಿದ್ದಾಳೆ. ಇದನ್ನು ಕಂಡು ಮನುವಾದದ ಆರಾಧಕರಿಗೆ ಸಹಿಸಲು ಆಗುತ್ತಿಲ್ಲ. ಅಂತಲೇ ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತರು ಮಹಿಳೆಯ ಸ್ಥಾನ ಅಡುಗೆ ಮನೆಯೊಳಗೆ ಇರಬೇಕು. ಪುರುಷನ ಸೇವೆ ಆಕೆಯ ಕರ್ತವ್ಯ ಎಂದು ಹೇಳುತ್ತಿದ್ದಾರೆ. ಇನ್ನು ಕೆಲವರು ಹಿಂದೂ ಹೆಣ್ಣು ಮಕ್ಕಳು ತಲಾ ಒಂದು ಡಜನ್ ಮಕ್ಕಳನ್ನು ಹೆತ್ತು ಹಿಂದೂಗಳ ಸಂಖ್ಯೆಯನ್ನು ಹೆಚ್ಚಿಸಲು ಕರೆ ನೀಡುತ್ತಿದ್ದಾರೆ. ಅವರು ಮನುವಾದವನ್ನು ಮತ್ತೆ ಹೇರಲು ಮಸಲತ್ತು ನಡೆಸಿದ್ದಾರೆ. ಅವರಿಗೆ ಅಡ್ಡಿಯಾಗಿರುವುದು ಸಂವಿಧಾನ. ಅಂತಲೇ ಈ ಸಂವಿಧಾನವನ್ನೇ ಬದಲಿಸಲು ರಹಸ್ಯ ಮಸಲತ್ತು ನಡೆಸಿದ್ದಾರೆ. ಭಾಗವತರು ಈ ಮಾತನ್ನು ಈಗಾಗಲೇ ಅನೇಕ ಬಾರಿ ಹೇಳಿದ್ದಾರೆ. ಮೀಸಲಾತಿ ರದ್ದುಗೊಳಿಸಬೇಕೆಂಬ ಅವರ ಮಾತಿನ ಹಿಂದೆ ಸಂವಿಧಾನದ ಬಗೆಗಿನ ಅಸಹನೆ ಎದ್ದು ಕಾಣುತ್ತಿದೆ.

ಈ ಹಿನ್ನೆಲೆಯಲ್ಲಿ ಅವಲೋಕಿಸಿದರೆ ಈಗ ದೇಶದಲ್ಲಿ ನಡೆಯುತ್ತಿರುವುದು ಕೆಲವರು ಹೇಳುವಂತೆ ಎಡ ಬಲಗಳ ಸಂಘರ್ಷವಲ್ಲ. ಬಿಜೆಪಿ ಕಾಂಗ್ರೆಸ್ ನಡುವಿನ ಇಲ್ಲವೇ ಬಿಜೆಪಿ ಪ್ರತಿಪಕ್ಷಗಳ ನಡುವಿನ ಪೈಪೋಟಿ ಅಲ್ಲ. ಇದು ಸಂವಿಧಾನ ಮತ್ತು ಮನುವಾದದ ನಡುವಿನ ಅಸಾಮಾನ್ಯ ಸಮರ. ಈ ಸಮರದಲ್ಲಿ ಮನುವಾದ ಗೆದ್ದರೆ ಭಾರತ ನಾಶವಾಗುತ್ತದೆ. ಸಂವಿಧಾನಕ್ಕೆ ಜಯವಾದರೆ ಭಾರತ ಉಳಿಯುತ್ತದೆ.

Please follow and like us:
error