ಲವ್ ಜಿಹಾದ್- ನಿಜವೆಷ್ಟು? ಸುಳ್ಳೆಷ್ಟು?- ಶಿವಸುಂದರ್

ಸ್ವರಾಜ್ ಮತ್ತು ಸುರಾಜ್ ಎಂದರೆ ಮುಸ್ಲಿಮರ, ದಲಿತರ, ರೈತಾಪಿಗಳ, ವಲಸೆ ಕಾರ್ಮಿಕರ, ಬಡಪಾಯಿಗಳ ಮತ್ತು ಎಲ್ಲಾ ಧರ್ಮದ ಹೆಣ್ಣು ಮಕ್ಕಳ ಬದುಕನ್ನು ಸಾಧ್ಯವಾದಷ್ಟು ಧ್ವಂಸಗೊಳಿಸುವುದು ಎಂದು ಮೋದಿ ನೇತೃತ್ವದ ಬಿಜೆಪಿ ದಿನೇ ದಿನೇ ಸ್ಪಷ್ಟಪಡಿಸುತ್ತಿದೆ.

ಕಳೆದ ಸೆಪ್ಟೆಂಬರ್ ನಲ್ಲಿ ಉತ್ತರಪ್ರದೇಶದಲ್ಲಿ ಒಬ್ಬ ಮುಸ್ಲಿಂ ಮಹಿಳೆ ಸ್ವ ಇಚ್ಚೆಯಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡು ಮದುವೆಯಾದಳು. ಆದರೆ ಮದುವೆಯಾಗಬೇಕೆಂಬ ಉದ್ದೇಶದಿಂದ ಮತಾಂತರಗೊಂಡಿದ್ದರಿಂದ ಈ ಮತಾಂತರ ಹಾಗೂ ಮದುವೆ ಎರಡೂ ಕಾನೂನು ಸಮ್ಮತವಲ್ಲ ಎಂದು ಉತ್ತರಪ್ರದೇಶದ ಅಲಹಾಬಾದ್ ಹೈಕೋರ್ಟಿನ ಏಕಸದಸ್ಯ ಪೀಠ ಅಭಿಪ್ರಾಯ ಪಟ್ಟಿತು.

ಅದೇ ಹೈಕೋರ್ಟು ವಲಸೆ ಕಾರ್ಮಿಕರ ಕ್ಷೇಮಾಭಿವೃದ್ಧಿಯ ಬಗ್ಗೆ ಹತ್ತು ಹಲವು ಸೂಚನೆಗಳನ್ನು ಕೊಟ್ಟಿದ್ದರೂ ಕ್ಯಾರೇ ಎನ್ನದಿದ್ದ ಯೋಗಿ ಸರ್ಕಾರ ಕೂಡಲೇ, ನ್ಯಾಯಾಲಯದ ಈ ಅಭಿಪ್ರಾಯವನ್ನೇ ಸರ್ಕಾರಕ್ಕೆ ಕೊಟ್ಟ ಆದೇಶವೆಂದು ಸುಳ್ಳು ವ್ಯಾಖ್ಯಾನ ಮಾಡುತ್ತಾ ಮದುವೆಗಾಗಿ ನಡೆಯುವ ಮತಾಂತರ ಹಾಗೂ ಮದುವೆ ಎರಡನ್ನೂ ನಿಷೇಧಿಸುವ ಕಾನೂನು ತರಲು ಮುಂದಾಯಿತು. ಅದನ್ನೇ ಕಾಯುತ್ತಿದ್ದ ಇತರ ರಾಜ್ಯಗಳ ಬಿಜೆಪಿ ಸರ್ಕಾರಗಳು ಇದೇ ಆದೇಶವನ್ನು ಉಲ್ಲೇಖಿಸುತ್ತಾ ತಮ್ಮತಮ್ಮ ರಾಜ್ಯಗಳಲ್ಲೂ ಲವ್ ಜಿಹಾದ್ ಕಾನೂನನ್ನು ತರಲು ಈಗ ಮುಂದಾಗಿವೆ.

ಆದರೆ ನವಂಬರ್ ೧೧ ರಂದು ಅದೇ ಅಲಹಾಬಾದ್ ಹೈಕೋರ್ಟಿನ ದ್ವಿಸದಸ್ಯ ಪೀಠವು ಈ ಬಗ್ಗೆ ಏಕಸದಸ್ಯ ಪೀಠದ ತೀರ್ಮಾನವು ನ್ಯಾಯ ಹಾಗೂ ಕಾನೂನು ಬಾಹಿರ ಎಂದು ಸ್ಪಷ್ಟವಾಗಿ ಉಲ್ಲೇಖಿಸಿ ಏಕಸದಸ್ಯ ಪೀಠದ ತೀರ್ಮಾನವನ್ನು ರದ್ದುಗೊಳಿಸಿದೆ. ಹಾಗೂ ಸ್ವ ಇಚ್ಚೆಯಿಂದ ಯಾವ ಧರ್ಮಕ್ಕೇ ಬೇಕಾದರೂ ಮತಾಂತರವಾಗುವ ಹಾಗೂ ತನ್ನ ಇಷ್ಟದವರನ್ನು ಮದುವೆಯಾಗುವ ಹಕ್ಕು ಈ ದೇಶದ ಸಂವಿಧಾನ ಈ ದೇಶದ ಪ್ರಾಪ್ತ ವಯಸ್ಕರಿಗೆ ಕೊಡುತ್ತದೆ. ಆ ವೈಯಕ್ತಿಕ ಸ್ವಾತಂತ್ರ್ಯದಲ್ಲಿ ಮಧ್ಯಪ್ರವೇಶಿಸುವ ಯಾವ ಅಧಿಕಾರವೂ ಸರ್ಕಾರಕ್ಕಾಗಲೀ, ಸಮಾಜಕ್ಕಾಗಲಿ ಇಲ್ಲವೆಂದು ಸ್ಪಷ್ಟ ಮಾತುಗಳಲ್ಲಿ ಆದೇಶನೀಡಿದೆ.

ಅಲಹಾಬಾದಿನ ದ್ವಿಸದಸ್ಯ ಪೀಠದ ಆದೇಶದ ಪೂರ್ಣಪಠ್ಯವನ್ನು ಆಸಕ್ತರು ಈ ಕೆಳಗಿನ ವೆಬ್ ವಿಳಾಸದಲ್ಲಿ ಓದಬಹುದು:

https://www.livelaw.in/pdf_upload/pdf_upload-384996.pdf

ಆದರೂ ಈಗಾಗಲೇ ಉತ್ತರಪ್ರದೇಶದ ಯೋಗಿ ಸರ್ಕಾರ ಲವ್ ಜಿಹಾದ್ ನಿಷೇಧಿಸುವ ಹೆಸರಿನಲ್ಲಿ ಧಾರ್ಮಿಕ ಗೂಂಡಾಗಿರಿ ನಡೆಸುವ ಸುಗ್ರೀವಾಜ್ನೆಯನ್ನು ನವಂಬರ್ ೨೪ರಿಂದ ಜಾರಿ ಮಾಡಿದೆ. ಮೊನ್ನೆ ಆ ಸುಗ್ರೀವಾಜ್ನೆಯ ಅಡಿಯಲ್ಲಿ ಪ್ರೀತಿಸಿ ಮದುವೆಯಾದ ವಯಸ್ಕ ಮುಸ್ಲಿಂ ಯುವಕ ಹಾಗೂ ಹಿಂದೂ ಯುವತಿಯಿಬ್ಬರ ಮೇಲೂ ಎಫ಼್.ಐ.ಆರ್ ದಾಖಲಿಸಿದi! ಏಕೆಂದರೆ ಯೋಗಿಯ ಈ ಹೊಸ ಕಾಯಿದೆಯ ಪ್ರಕಾರ ಮುಸ್ಲಿಂ ಯುವಕನೆಷ್ಟು ಅಪರಾಧಿಯೋ, ಅವನನ್ನು ಮದುವೆಯಾಗುವ ಹಿಂದೂ ಮಹಿಳೆಯೂ ಅಷ್ಟೇ ದೊಡ್ಡ ಅಪರಾಧಿ! ಇದೇ ರೀತಿಯ ಕಾಯಿದೆಯನ್ನು ಧರ್ಮಸ್ವಾತಂತ್ರ್ಯ ಕಾಯಿದೆಯ ಹೆಸರಿನಲ್ಲಿ ಮಧ್ಯಪ್ರದೇಶದ ಬಿಜೆಪಿ ಸರ್ಕಾರ ಸಿದ್ಧಗೊಳಿಸಿದೆ. ಅದರ ತದ್ರೂಪು ಮಸೂದೆಯನ್ನೇ ಹರ್ಯಾಣದ, ಅಸ್ಸಾಮಿನ ಹಾಗೂ ನಮ್ಮ ಕರ್ನಾಟಕದ ಬಿಜೆಪಿ ಸರ್ಕಾರಗಳು ಜಾರಿಗೊಳಿಸುವುದಾಗಿ ಘೋಷಿಸಿವೆ.

ಅಸಲು ಈ ಲವ್ ಜಿಹಾದ್ ಎಂದರೇನು?

ಈ ದೇಶದ ಮುಸ್ಲಿಮರನ್ನು ಸದಾ ವಿಲನೀಕರಿಸಲು ಹಾಗೂ ತಮ್ಮ ಧರ್ಮ ಹಾಗೂ ಜಾತಿಗಳ ಮಹಿಳೆಯರನ್ನು ತಮ್ಮ ಅಂಕೆಯಲ್ಲಿರಿಸಿಕೊಳ್ಳಲು ಇಲ್ಲಸಲ್ಲದ ಕಥನಗಳನ್ನು ಹುಟ್ಟಿಹಾಕುವ ಸಂಘಪರಿವಾರದ ಹೊಸಸೃಷ್ಟಿಯೇ ಈ ಲವ್ ಜಿಹಾದ್ ಎಂಬ ಕಥನ. ಮುಸ್ಲಿಂ ಯುವಕರು ಅಮಾಯಕ ಹಿಂದೂ ಮಹಿಳೆಯರನ್ನು ಬೈಕ್ ಸವಾರಿ, ಸುವಾಸನೆಯ ಅತ್ತರು ಇತ್ಯಾದಿ ಅಮಿಷಗಳಿಂದ ಪಟಾಯಿಸಿ ಮತಾಂತರ ಮಾಡಿ ಮದುವೆಯಾಗುತ್ತಿದ್ದಾರೆ. ಇದಕ್ಕಾಗಿ ಗಲ್ಫ್ ರಾಷ್ಟ್ರಗಳ ಜಿಹಾದಿ ಸಂಘಟನೆಗಳಿಂದ ಕೋಟ್ಯಾಂತರ ರೂಪಾಯಿ ಹಣ ಹರಿದು ಬರುತ್ತಿದೆ. ಇದರ ಹಿಂದೆ ಭಾರತವನ್ನು ಮುಸ್ಲಿಂ ರಾಷ್ಟ್ರ ಮಾಡುವ ಅಂತರರಾಷ್ಟ್ರೀಯ ಸಂಚಿದೆ. ಆದ್ದರಿಂದ ಇದು ಲವ್ ಅಲ್ಲ. ಭಾರತದ ಮೇಲೆ ನಡೆಸುತ್ತಿರುವ ಲವ್ ಜಿಹಾದ್ ಆಗಿದೆ ಎಂಬುದು ಈ ಕಥನದ ಸಾರ .

ಹೀಗಾಗಿ ಇದರ ಹಿಂದೆ ಕೇವಲ ಮುಸ್ಲಿಂ ಯುವಕರನ್ನೂ, ಮತ್ತು ಇಸ್ಲಾಮನ್ನೂ ದುರುಳೀಕರಿಸುವ ಹುನಾರಗಳು ಮಾತ್ರವಲ್ಲದೆ ಮಾತ್ರವಲ್ಲದೆ ಹಿಂದೂ ಯುವತಿಯರು ಸ್ವಂತ ತಿಳವಳಿಕೆ ಇಲ್ಲದ, ಚಂಚಲಚಿತ್ತರು ಎಂದು ಚಿತ್ರಿಸುವ ಮನುವಾದಿ ರಾಜಕೀಯವೂ ಎದ್ದುಕಾಣುತ್ತದೆ.

ಕರ್ನಾಟಕದಲ್ಲಿ ಶ್ರೀರಂ ಸೇನಾ ಹಾಗೂ ಭಜರಂಗದಳಗಳು ೨೦೦೭-೯ರಲಿ ಹುಟ್ಟುಹಾಕಿದ ಈ ಕಥನ ಜಗತ್ತಿನಾದ್ಯಂತ ವ್ಯಾಪಿಸಿ ನಂತರ ಸರ್ಕಾರ ಹಾಗೂ ನ್ಯಾಯಾಲಯಗಳ ಅಧಿಕೃತ ದಾಖಲೆಗಳಲ್ಲೂ ಸ್ಥಾನಗೌರವ ಪಡೆದುಕೊಂಡು ಮಾನ್ಯತೆ ಪಡೆದುಕೊಂಡುಬಿಟ್ಟಿತು.

ಒಂದೆಡೆ ಶ್ರೀರಾಂ ಸೇನಾ ಕರ್ನಾಟಕದಲ್ಲಿ ಪ್ರತಿವರ್ಷ ಸಾವಿರಾರು ಹಿಂದೂ ಮಹಿಳೆಯರು ಲವ್ ಜಿಹಾದ್‌ಗೆ ಬಲಿಯಾಗುತ್ತಿದ್ದಾರೆ ಎಂದು ಪ್ರಚಾರ ಮಾಡಿದರೆ, ಕೇರಳದಲ್ಲಿ ಹಿಂದೂಜನಜಾಗೃತಿ (ನಮ್ಮ ಗೌರಿಯನ್ನು ಕೊಂದವರು ಬಹುಪಾಲು ಪಾತಕಿಗಳು ಈ ಸಂಘಟನೆಯ ಸಂಬಂಧಿಕರು) ಸಂಘಟನೆಯು ಕೇರಳದಲ್ಲಿ ೩೦,೦೦೦ ಹಿಂದೂ ಯುವತಿಯರು ಲವ್ ಜಿಹಾದಾಗಿಬಿಟ್ಟಿದ್ದಾರೆಂದು ಕೇರಳದಾದ್ಯಂತ ಕರಪತ್ರ ಹಾಗೂ ಪೋಸ್ಟರಗಳ ಕ್ಯಾಂಪೇನ್ ಮಾಡಿತು.

ಲವ್ ಜಿಹಾದ್ ನಡೆಯುತ್ತಿದೆಯೇ?

ವಾಸ್ತವದಲ್ಲಿ ಲವ್ ಜಿಹಾದ್ ಬಗ್ಗೆ ೨೦೦೯ರಿಂದ ಬಿಜೆಪಿ ಸರ್ಕಾರಗಳಿದ್ದ ರಾಜ್ಯಗಳನ್ನೂ ಒಳಗೊಂಡಂತೆ ದೇಶದ ವಿವಿಧ ರಾಜ್ಯಗಳ ಪೊಲೀಸರು, ಕೇಂದ್ರದ ಬಿಜೆಪಿ ಸರ್ಕಾರದಡಿ NIA ನಡೆಸಿದ ತನಿಖೆಗಳು ಹಾಗೂ ನ್ಯಾಯಲಯಗಳು ನಡೆಸಿದ ಎಲ್ಲಾ ವಿಚಾರಣೆಗಳು ಲವ್ ಜಿಹಾದ್ ಎಂಬ ಒಂದು ವಿದ್ಯಮಾನ ಈ ದೇಶದಲ್ಲಿ ಇಲ್ಲವೆಂದು ಸ್ಪಷ್ಟ ಮಾತುಗಳಲ್ಲಿ ಘೋಷಿಸಿವೆ.

ಕೆಲವು ಮುಖ್ಯ ಉದಾಹರಣೆಗಳು:

ಸಯನೈಡ್ ಮೋಹನ್ ಮತ್ತು ಶ್ರೀರಾಮ ಸೇನೆಯ ಲವ್ ಜಿಹಾದ್:

೨೦೦೭-೦೯ರಲ್ಲಿ ಮಂಗಳೂರು ಜಿಲ್ಲೆಯ ೨೦-೩೦ ಪ್ರಾಯದ ಹತ್ತಾರು ಮಹಿಳೆಯರು ಕಾಣೆಯಾಗುತ್ತಾ ಹೋದರು. ಆ ಸರಣಿಯಲ್ಲಿ ೨೦೦೯ರ ಜೂನ್ ನಲ್ಲಿ ಬಂಟ್ವಾಳದ ೩೦ ವರ್ಷ ಪ್ರಾಯದ ಅನಿತಾ ಮಲ್ಯ ಎಂಬ ಮಹಿಳೆಯು ಕಾಣೆಯಾದದ್ದು ಇಡೀ ಕರ್ನಾಟಕದಲ್ಲಿ ಸುದ್ದಿಯಾಯಿತು. ಅದೇ ಸಂದರ್ಭವನ್ನು ಬಳಸಿಕೊಂಡು ಶ್ರೀರಾಂ ಸೇನೆಯು ಕಾಣೆಯಾದ ಎಲ್ಲಾ ಹಿಂದೂ ಮಹಿಳೆಯರು ಲವ್ ಜಿಹಾದ್‌ಗೆ ಬಲಿಯಾಗಿದ್ದಾರೆಂದು ಹುಯಿಲೆಬ್ಬಿಸಿತು.

ಆಗ ಅಧಿಕಾರದಲ್ಲಿದ್ದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಕೂಡಲೇ ಸಿಐಡಿ ತನಿಖೆಗೆ ಆದೇಶಿಸಿತು. ಲವ್ ಜಿಹಾದ್ ಸಾಬೀತುಪಡಿಸಲು ಚುರುಕಾಗಿ ತನಿಖೆಗೆ ಇಳಿದ ಪೊಲೀಸರಿಗೆ ಸಿಕ್ಕಿದ್ದು ಜಿಹಾದಿಗಳಲ್ಲ. ಬದಲಿಗೆ ಮೋಹನ್ ಕುಮಾರ್ ಎಂಬ ಸೀರಿಯಲ್ ಮತ್ತು ಸಯನೈಡ್ ಕಿಲ್ಲರ್. ಈತ ೨೦೦೭-೦೯ರ ಅವಧಿಯಲ್ಲಿ ೨೦-೩೫ ಪ್ರಾಯದ ಈಡಿಗ, ಬಿಲ್ಲವ ಇನ್ನಿತರ ದಮನಿತ ಹಿಂದೂ ಜಾತಿಗಳಿಗೆ ಸೇರಿದ ೧೯ ಕ್ಕೂ ಹೆಚ್ಚು ದುಡಿಯುವ ಮಹಿಳೆಯರನ್ನು ಮದುವೆಯಾಗುವ ಆಮಿಷ ತೋರಿಸಿ ಕೊಂದಿದ್ದ. ನಂತರ ಅವರ ಬಳಿ ಇದ್ದ ಚಿನಾಭರಣಗಳನ್ನು ದೋಚಿ ಪರಾರಿಯಾಗುತ್ತಿದ್ದ.

ಆದರೆ ಆವರೆಗೆ ಹಿಂದೂ ಮಹಿಳೆಯರ ರಕ್ಷಣೆ, ಲವ್ ಜಿಹಾದ್ ಎಂದೆಲ್ಲಾ ವೀರಗಾಸೆ ಮಾಡುತ್ತಿದ್ದ ಹಿಂದೂ ವೀರರು, ದಿಢೀರ್ ಸುಮ್ಮನಾಗಿಬಿಟ್ಟರು!

ಹಿಂದೂ ಧರ್ಮದೊಳಗೆ ದಮನಿತ ಜಾತಿಗಳಿಗೆ ಸೇರಿದ ಆ ಬಡ ಮಹಿಳೆಯರಿಗೆ ಪ್ರಾಪ್ತ ವಯಸ್ಸಾದರೂ ಏಕೆ ಮದುವೆಯಾಗುತ್ತಿಲ್ಲ? ಮದುವೆಯಾಗದ ಆ ಹೆಣ್ಣುಮಕ್ಕಳು ಮನೆ ಸಾಕುವ ಹೊಣೆ ಹೊತ್ತು ಕುಟುಂಬದಲ್ಲಿ ಹಾಗೂ ಹಿಂದೂ ಸಮಾಜದಲ್ಲಿ ಅನುಮಭವಿಸುತ್ತಿದ್ದ ಯಾತನೆಗಳೇನು? ಯಾವ ಹತಾಷೆ ಹಾಗೂ ಅಸಹಾಯಕತೆಗಳು ಅಥವಾ ಕನಸುಗಳು ಅವರನ್ನು ಸಂiiನೈಡ್ ಮೋಹನ್ ಗೆ ಬಲಿಮಾಡಿತು ಎಂಬ ಪ್ರಶ್ನೆಗಳು ಈ ಹಿಂದೂ ವೀರರಿಗೆ ಹುಟ್ಟಲೇ ಇಲ್ಲ.

ಆ ಹಿಂದೂ ಹೆಣ್ಣುಮಕ್ಕಳು ಬಲಿಯಾದದ್ದು ಲವ್ ಜಿಹಾದಿಗಲ್ಲ..ಬದಲಿಗೆ ಬಡತನ ಮತ್ತು ಹಿಂದೂ ಧರ್ಮದ ಪಿತೃಸ್ವಾಮ್ಯ ವ್ಯವಸ್ಥೆಯ ಜಿಹಾದಿಗೆ..

ಕರ್ನಾಟಕದಲ್ಲಿ ಲವ್ ಇದೆ- ಜಿಹಾದ್ ಇಲ್ಲ- ಸಿಐಡಿ ವರದಿ

೨೦೦೯ರಲ್ಲೇ ಚಾಮರಾಜನಗರದ ಸೆಲ್ಜಾರಾಜ್ ಎಂಬ ವಯಸ್ಕ ಕ್ರಿಸ್ಚಿಯನ್ ಮಹಿಳೆ ಸ್ವ ಇಚ್ಚೆಯಿಂದ ಕಣ್ಣೂರಿನ ಅಸ್ಗರ್ ಎಂಬ ಮುಸ್ಲಿಮ್ ಯುವಕನನ್ನು ಪ್ರೀತಿಸಿ ಮದುವೆಯಾದರು. ಸೆಲ್ಜಾ ಅವರ ಅಪ್ಪ ಕೊಟ್ಟ ದೂರಿನ ಮೇರೆಗೆ ಪೊಲೀಸರು ಅದನ್ನು ಲವ್ ಜಿಹಾದ್ ಪ್ರಕರಣವೆಂದು ನೊಂದಾಯಿಸಿಕೊಂಡರು. ವಿಷಯ ನ್ಯಾಯಾಲಯವನ್ನು ತಲುಪಿ ಕರ್ನಾಟಕ ಹೈಕೋರ್ಟು ವಿಷಯದ ತನಿಖೆ ನಡೆಸಲು ಸಿಐಡಿಗೆ ಆದೇಶಿಸಿದರು. ಬಿಜೆಪಿ ಸರ್ಕಾರದಡಿಯಿದ್ದ ಪೊಲೀಸರೇ ತನಿಖೆ ನಡೆಸಿ ಸೆಲ್ಜಾ ರಾಜ್-ಅಸ್ಗರ್ ಅವರದ್ದು ಸ್ವಚ್ಚಂದ ಪ್ರೇಮವಿವಾಹವೇ ವಿನಾ ಲವ್ ಜಿಹಾದೆಂಬುದೇನೂ ಇಲ್ಲವೆಂದು ವರದಿ ಕೊಟ್ಟಿರು.

ಹೀಗಾಗಿ ಸೆಲ್ಜಾರಾಜ್-ಅಸ್ಗರ್ ದಂಪತಿಗಳ ವೈವಾಹಿಕ ಜೀವನಕ್ಕೆ ಹೈಕೋರ್ಟು ಅವಕಾಶ ನೀಡಿತು. ಆದರೂ ಹಿಂದೂ ಸಂಘಟನೆಗಳು ಆರೋಪಿಸುವಂತೆ ಕರ್ನಾಟಕದಲ್ಲಿ ಕಣ್ಮರೆಯಾಗುತ್ತಿರುವ ಮಹಿಳೆಯರು ಲವ್ ಜಿಹಾದ್ ಗೆ ಬಲಿಯಾಗುತ್ತಿದ್ದಾರೆಯೇ ಎಂದು ತನಿಖೆ ಮಾಡಿ ವರದಿ ಮಾಡಲು ಸಿಐಡಿಗೆ ಆದೇಶಿಸಿತು.

ಅದರಂತೆ ೨೦೦೫-೦೯ರ ನಡುವೆ ನಾಪತ್ತೆಯಾದ ಮಹಿಳೆಯರ ತನಿಖೆಯನ್ನು ಕೈಗೊಂಡ ಸಿಐಡಿ ಅಂಥಾ ೨೧,೮೯೦ ಪ್ರಕರಣಗಳನ್ನು ಗುರುತಿಸಿತು. ಹಾಗೂ ಲವ್ ಜಿಹಾದ್ ಬಗ್ಗೆ ಹಿಂದೂ ಸಂಘಟನೆಗಳ ಬಳಿ ಇರುವ ಮಾಹಿತಿಗಳನ್ನು ಪಡೆದುಕೊಳ್ಳಲು ಮುಂದಾಯಿತು. ಆದರೆ ಸಿಐಡಿಯ ಪ್ರಕಾರ ಹಿಂದೂ ಸಂಘಟನೆಗಳು ಈ ಬಗ್ಗೆ ಯಾವ ಉಪಯುಕ್ತ ಮಾಹಿತಿಗಳನ್ನೂ ಕೊಡಲಿಲ್ಲ!

ಸಿಐಡಿ ಕಲೆಹಾಕಿದ ಮಾಹಿತಿಯ ಪ್ರಕಾರ ನಾಪತ್ತೆಯಾದ ಪ್ರಕರಣಗಳಲ್ಲಿ ೨೨೯ ಮಹಿಳೆಯರು ಮಾತ್ರ ಅಂತರ್ ಧರ್ಮೀಯ ಮದುವೆಯಾಗಿದ್ದರು. ಹಾಗೂ ಅದರಲ್ಲಿ ೬೩ ಪ್ರಕರಣಗಳಲ್ಲಿ ಮಾತ್ರ ಮತಾಂತರವಾಗಿತ್ತು. ಆದರೆ ಹಿಂದೂ ಮಹಿಳೆಯೆರು ಮುಸ್ಲಿಂ ಪುರುಷರನ್ನು ಮದುವೆಯಾಗಿದ್ದಂತೆ, ಮುಸ್ಲಿಂ ಮಹಿಳೆಯರು ಹಿಂದೂ ಪುರುಷರನ್ನೂ ಹಾಗೂ ಕ್ರಿಶ್ಚಿಯನ್ ಮಹಿಳೆಯರು ಮುಸ್ಲಿಂ ಪುರುಷರನ್ನೂ ಮದುವೆಯಾದ ಉದಾಹರಣೆಗಳಿದ್ದವು. ಈ ಎಲ್ಲಾ ತನಿಖೆಗಳನ್ನು ಆಧರಿಸಿ ೨೦೦೯ರ ಡಿಸೆಂಬರ್‌ನಲ್ಲಿ ಕರ್ನಾಟಕ ಸಿಐಡಿಯು ಕರ್ನಾಟಕದಲ್ಲಿ ಲವ್ ಜಿಹಾದ್ ಪ್ರಕರಣಗಳು ನಡೆದಿಲ್ಲವೆಂದು ಸ್ಪಷ್ಟವಾದ ವರದಿಯನ್ನು ಕೋರ್ಟಿಗೆ ಸಲ್ಲಿಸಿತು.

ಇದನ್ನು ಆಧರಿಸಿ ಕರ್ನಾಟಕ ಹೈಕೋರ್ಟಿನ ದ್ವಿಸದಸ್ಯ ಪೀಠ ೨೦೧೩ರಲ್ಲಿ ಕರ್ನಾಟಕದಲಿ ಲವ್ ಜಿಹಾದ್ ಪ್ರಕರಣಗಳಿಲ್ಲವೆಂದು ವಿಚಾರಣೆಯನ್ನು ಮುಕ್ತಾಯ ಮಾಡಿತು. ಸಿಐಡಿಯು ತನ್ನ ವರದಿಯಲ್ಲಿ ಹಿಂದೂ ಮಹಿಳೆಯರ ನಾಪತ್ತೆ ವಿದ್ಯಮಾನದಲ್ಲಿ ಲವ್ ಜಿಹಾದಿಗಿಂತ ಹೆಂಗಸರನ್ನು ವೇಶ್ಯಾವಾಟಿಕೆಗೆ ದೂಡುವ ಧರ್ಮಾತೀತ ದಲ್ಲಾಳಿ ಗುಂಪುಗಳ ಹಾವಳಿ ಹೆಚ್ಚು ಕಳವಳಕಾರಿ ಎಂದು ಗುರುತಿಸಿತ್ತು. ಆದರೆ ಇದನ್ನು ನಿಗ್ರಹಿಸಲು ಸರ್ಕಾರ ಕಠಿಣಕ್ರಮ ತೆಗೆದುಕೊಳ್ಳಬೇಕೆಂಬ ಯಾವ ಆಗ್ರಹಗಳನ್ನು ಈ ಸ್ವಘೋಷಿತ ಹಿಂದೂ ರಕ್ಷಕರು ಮಾಡಲೇ ಇಲ್ಲ.

ಆಸಕ್ತರು ಕರ್ನಾಟಕ ಹೈಕೋರ್ಟಿನ ಆದೇಶವನ್ನು ಈ ವೆಬ್ ವಿಳಾಸದಲ್ಲಿ ಓದಬಹುದು:

http://judgmenthck.kar.nic.in/judgments/bitstream/123456789/907138/1/WPHC158-09-06-11-2013.pdf

ಕೇರಳದಲ್ಲೂ ಲವ್ ಜಿಹಾದಿಲ್ಲ-ಹೈಕೋರ್ಟು

ಅದೇ ಅವಧಿಯಲ್ಲಿ ಕೇರಳದಲ್ಲೂ ಹಿಂದು ಜನಜಾಗೃತಿ ಇನ್ನಿತ್ಯಾದಿ ಹಿಂದೂತ್ವವಾದಿ ಸಂಘಟನೆಗಳು ಕೇರಳದಲ್ಲಿ ೩೦,೦೦೦ಕ್ಕೂ ಹೆಚ್ಚು ಹಿಂದೂ ಮಹಿಳೆಯರು ಲವ್ ಜಿಹಾದಿಗೆ ಬಲಿಯಾಗಿದ್ದಾರೆಂದು ಆಕ್ರಮಣಕಾರಿ ಪ್ರಚಾರ ಪ್ರಾರಂಭಿಸಿದ್ದರು. ಹೀಗಾಗಿ ಕೇರಳ ಹೈಕೋರ್ಟೂ ಸಹ ಈ ಬಗ್ಗೆ ತನಿಖೆಯನ್ನು ಮಾಡಲು ಕೇರಳದ ಪೊಲೀಸ್ ಮಹಾ ನಿರ್ದೇಶಕರಿಗೆ ಆದೇಶಿಸಿತು. ಅದರಂತೆ ಕೂಲಂಕಷವಾದ ತನಿಖೆ ಕೈಗೊಂಡ ಕೇರಳದ ಪೊಲೀಸರು ಕೇರಳದಲ್ಲೆಲ್ಲೂ ಯಾವುದೇ ಅಂತರರಾಷ್ಟ್ರೀಯ ಶಡ್ಯಂತ್ರದ ಭಾಗವಾಗಿ ಯಾವುದೇ ಮುಸ್ಲಿಂ ಸಂಘಟನೆಗಳು ವ್ಯವಸ್ಥಿತವಾಗಿ ಹಿಂದೂ ಮಹಿಳೆಯರನ್ನು ಲವ್ ಜಿಹಾದಿನ ಜಾಲದಲ್ಲಿ ಸಿಲುಕಿಸುತ್ತಿದ್ದಾರೆ ಎಂದು ಪತ್ತೆಯಾಗಿಲ್ಲ ಎಂದು ವರದಿ ಕೊಟ್ಟರು. ಮಾತ್ರವಲ್ಲ. ಹಾಗೆ ಸುಳ್ಳು ಪ್ರಚಾರ ಮಾಡಿ ಸಮಾಜದ ಶಾಂತಿ ಭಂಗ ಮಾಡಿದ್ದಕ್ಕಾಗಿ ಹಿಂದೂ ಜನ ಜಾಗೃತಿ ಸಂಘಟೆನಯ ಮೇಲೆ ಎಫ಼್‌ಐಆರ್ ದಾಖಲಿಸಿದರು.

ಈ ವರದಿಯನ್ನು ಆಧರಿಸಿ ಕೇರಳದ ಹೈಕೋರ್ಟು ೨೦೧೨ರಲ್ಲಿ ಲವ್ ಜಿಹಾದ್ ಪ್ರಕರಣಗಳ ತನಿಖೆಯನ್ನು ಮುಕ್ತಾಯಗೊಳಿಸಿತು.

ಅಖಿಲಾ ಎಂಬ ಹಾದಿಯಾ ಮತ್ತು ವ್ಯಕ್ತಿ ಸ್ವಾತಂತ್ರ್ಯಾ

ಹೀಗೆ ಕೋರ್ಟುಗಳು ಮತ್ತು ಪೊಲಿಸ್ ತನಿಖೆಗಳು ಅಧಿಕೃತವಾಗಿ ಲವ್ ಜಿಹಾದನ್ನು ನಿರಾಕರಿಸಿದ ನಂತರ ಇದರ ಸುತ್ತಾ ಸ್ವಘೋಷಿತ ಹಿಂದೂ ರಕ್ಷಕರ ಹುಯಿಲೂ ಕಡಿಮೆಯಾಗಿತ್ತು.

ಆದರೆ ೨೦೧೬ರಲ್ಲಿ ಕೇರಳದಲ್ಲಿ ಅಖಿಲಾ ಎಂಬ ೨೪ ವರ್ಷದ ಹಿಂದೂ ಯುವತಿ ಸ್ವ ಇಚ್ಚೆಯ ಮೇರೆಗೆ ಇಸ್ಲಾಂ ಧರ್ಮ ಸ್ವೀಕರಿಸಿ ಹಾದಿಯಾ ಆದಳು. ಆ ನಂತರ ಮುಸ್ಲಿಂ ಯುವಕನನ್ನು ಮದುವೆಯಾದಳು. ಈ ಮದುವೆಯ ಬಗ್ಗೆ ಸಮ್ಮತಿ ಇರದ ಅವರ ತಂದೆ ಅಶೋಕನ್ ಇದು ಬಲವಂತದ ಮತಾಂತರ ಹಾಗೂ ಮದುವೆ ಎಂದು ದೂರಿತ್ತಿದ್ದರಿಂದ ಈ ಪ್ರಕರಣ ಹಿಂದೂ ಸಂಘಟನೆಗಳಿಗೆ ಆಹಾರವಾಯಿತು. ಪ್ರಕರಣವು ಹೈಕೋರ್ಟಿನ ಮೆಟ್ಟಿಲೇರಿ, ಕೇರಳ ಹೈಕೋರ್ಟು ಹಿಂದೆಮುಂದೆ ನೋಡದೆ ಇದೊಂದು ಲವ್ ಜಿಹಾದ್ ಪ್ರಕರಣವೆಂದು ಪರಿಗಣಿಸಿ ಸಾಂವಿಧಾನಿಕವಾಗಿ ತನ್ನಿಚ್ಚೆ ಬಂದವರನ್ನು ಮದುವೆಯಾಗುವ ವಯಸ್ಸು ಹಾಗೂ ಅಧಿಕಾರ ಹೊಂದಿದ್ದ ಹಾದಿಯಾಳ ನಿರ್ಧಾರವನ್ನು ಅಸಿಂಧುವೆಂದು ಘೋಷಿಸಿ ಮದುವೆಯನ್ನು ರದ್ದುಪಡಿಸಿತು. ಇದರ ವಿರುದ್ಧ ಹಾದಿಯಾಳ ಪತಿ ಸುಪ್ರೀಂ ಕೋರ್ಟಿನ ಮೆಟ್ಟಿಲೇರಿದರು.

೨೦೧೮ರಲ್ಲಿ ಈ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟಿನ ತ್ರಿಸದಸ್ಯ ಪೀಠ ತನ್ನ ಅಂತಿಮ ತೀರ್ಮಾನವನ್ನು ಘೋಷಿಸಿತು. ಅದು ಹೈಕೋರ್ಟಿನ ವಿಚಾರಣೆ ಹಾಗೂ ತೀರ್ಪಿನ ಬಗ್ಗೆ ತೀವ್ರವಾದ ಅಸಂತೋಷವನ್ನು ವ್ಯಕ್ತಪಡಿಸುತ್ತಾ ಅದರ ಆದೇಶವನ್ನು ರದ್ದುಗೊಳಿಸಿತು ಹಾಗೂ:

ಮದುವೆಯೆಂಬುದು ಒಬ್ಬ ವ್ಯಕ್ತಿಯ ಖಾಸಗಿ ವಿಷಯ. ಅವರ ವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಪಟ್ಟ ವಿಷಯ. ಅದರಲ್ಲಿ ಮೂಗುತೂರಿಸುವ ಅಧಿಕಾರ ಪ್ರಭುತ್ವಕ್ಕಿಲ್ಲ. ವ್ಯಕ್ತಿಗಳ ಈ ಸಾಂವಿಧಾನಿಕ ಸ್ವಾತಂತ್ರ್ಯವನ್ನು ರಕ್ಷಿಸಬೇಕಿರುವುದು ಕೋರ್ಟುಗಳ ಕರ್ತವ್ಯ. ನಮ್ಮ ಸಮಾಜದ ಸ್ಥಿರತೆಯು ನಮ್ಮ ಸಮಾಜದ ಬಹುಸಂಸ್ಕೃತಿಯನ್ನೇ ಆಧರಿಸಿದೆ. ನಮ್ಮ ಸಂವಿಧಾನವು ಅದನ್ನು ರಕ್ಷಿಸುತ್ತದೆ.

ಎಂದು ಸ್ಪಷ್ಟ ಮಾತುಗಳಲ್ಲಿ ಸ್ವ ಇಚ್ಚೆಯಿಂದ ತನಗಿಷ್ಟ ಬಂದ ಮತವನ್ನು ಆಚರಿಸುವ ಹಾಗೂ ಸ್ವ ಇಚ್ಚೆಯಿಂದ ತನಗೆ ಇಷ್ಟ್ ಬಂದವರನ್ನು ಮದುವೆಯಾಗುವ ಹಾದಿಯಾಳ ಹಕ್ಕನ್ನು ಮಾತ್ರವಲ್ಲದೆ. ಈ ದೇಶದ ಎಲ್ಲಾ ಜನರ ಹಕ್ಕನ್ನು ಎತ್ತಿಹಿಡಿಯಿತು.

ಆಸಕ್ತರು ಆ ತೀರ್ಪಿನ ಪೂರ್ಣ ಪಠ್ಯವನ್ನು ಈ ವೆಬ್ ವಿಳಾಸದಲ್ಲಿ ಓದಬಹುದು:

https://main.sci.gov.in/supremecourt/2017/19702/19702_2017_Judgement_08-Mar-2018.pdf

ಆದರೂ ಅದೇ ಸಮಯದಲ್ಲಿ ಇಂಥಾ ಮದುವೆಗಳ ಹಿಂದೆ ಯಾವುದಾದರೂ ವ್ಯವಸ್ಥಿತ ಪಿತೂರಿಯಿದೆಯೇ ಎಂದು ತನಿಖೆ ಮಾಡುತ್ತಿದ್ದ NIA ಯು ತನ್ನ ತನಿಖೆಯನ್ನು ಮುಂದುವರೆಸಿ ಸುಪ್ರೀಂ ಕೋರ್ಟಿಗೆ ತನ್ನ ವರದಿಯನ್ನು ಸಲ್ಲಿಸಲುಕೂಡ ಆದೇಶಿಸಿತು.

ಕೇಂದ್ರ ಬಿಜೆಪಿ ಸರ್ಕಾರದಡಿ ಇರುವ NIA ಯು ಕೂಡಾ ತನ್ನ ತನಿಖೆಯನ್ನು ೨೦೧೮ರಲ್ಲಿ ಪೂರ್ಣಗೊಳಿಸಿತು. ಮತ್ತು ಲವ್ ಜಿಹಾದ್ ನಂತಹ ಯಾವ ವಿದ್ಯಮಾನವೂ ಇಲ್ಲವೆಂದು ವರದಿ ಮಾಡಿತು.

(https://thewire.in/politics/nia-love-jihad-kerala-hadiya)

ಯೋಗಿ ಪೊಲೀಸರೂ ಲವ್ ಜಿಹಾದ್ ಇಲ್ಲವೆಂದರು!

೨೦೧೪ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲೇ ಬಿಜೆಪಿಯು ಉತ್ತರಪ್ರದೇಶದಲ್ಲಿ ಲವ್ ಜಿಹಾದ್ ಭೂತವನ್ನು ಹುಟ್ಟುಹಾಕಿ ಜಾಟರ ಮತ್ತು ಮುಸ್ಲಿಮರ ನಡುವೆ ಕೋಮು ಧ್ರೂವೀಕರಣ ಸೃಷ್ಟಿಸುವಲಿ ಯಶಸ್ವಿಯಾಗಿತ್ತು. ಆ ನಂತರ ೨೦೧೭ರ ರಾಜ್ಯದ ಶಾಸನಾ ಸಭಾ ಚುನಾವಣೆಯ ಸಂದರ್ಭದಲ್ಲಿ ಮತ್ತೊಮ್ಮೆ ಲವ್ ಜಿಹಾದ್ ಅಪಪ್ರಚಾರವನ್ನು ದೊಡ್ಡ ಮಟ್ಟದಲ್ಲಿ ಎಬ್ಬಿಸಿತು. ಹಾಗೂ ರೋಮಿಯೋ ಸ್ಕ್ವಾಡ್ ಇನ್ನಿತ್ಯಾದಿ ಗಿಮಿಕ್ಕುಗಳನ್ನು ಮಾಡಿತು. ಯೋಗಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಲವ್ ಜಿಹಾದ್ ಪ್ರಕರಣಗಳ ಬಗ್ಗೆ ತನಿಖೆ ಮಾಡಲು ಒಂದು ವಿಶೆಷ ತನಿಖಾ ದಳವನ್ನೇ (SIT) ನೇಮಿಸಿತು. ಅದಕ್ಕೆ ೧೪ ಪ್ರಮುಖ/ಪ್ರಖ್ಯಾತ ಪ್ರಕರಣಗಳನ್ನು ವಹಿಸಿಕೊಡಲಾಯಿತು. ತಮ್ಮದೇ ಮಾಧ್ಯಮಗಳಲಿದರ ಬಗ್ಗೆ ಮನಸ್ಸಿಗೆ ಬಂದಂತೆ ತಳಬುಡವಿಲ್ಲದ ಪ್ರಚಾರವನ್ನೂ ಮಾಡಿಸಿತು.

ಆದರೆ ಎರಡು ತಿಂಗಳ ಕೆಳಗೆ ಪ್ರಾಥಮಿಕ ವರದಿ ನೀಡಿರುವ ಉತ್ತರ ಪ್ರದೇಶದ ಪೊಲೀಸರು ಮೊದಲ ಏಳು ಪ್ರಕರಣಗಳಲ್ಲಿ ಯಾವುದೇ ಲವ್ ಜಿಹಾದ್ ನಡೆದಿಲ್ಲವೆಂದು ವರದಿ ನೀಡಿದರು.

ಆಗ ಯೋಗಿಯ ಸಹಾಯಕ್ಕೆ ಬಂದಿದ್ದು ಅಲಹಾಬಾದ್ ಹೈಕೋರ್ಟಿನ ಮೇಲೆ ಉಲ್ಲೇಖಿಸಲಾದ ಏಕ ಸದಸ್ಯ ಪೀಠದ ತೀರ್ಪು. ಕೂಡಲೇ ಅದನ್ನು ಆಧರಿಸಿ ಯೋಗಿ ಸರ್ಕಾರ ಸುಗ್ರೀವಾಜ್ನೆ ತಂದಿತು. ಆದರೆ ಈಗಾಗಲೇ ಉಲ್ಲೇಖಿಸಿದಂತೆ ಯಾವ ಆದೇಶವನ್ನು ಆಧರಿಸಿ ಯೋಗಿ ಸರ್ಕಾರ ಕರಾಳ ಲವ್ ನಿಷೇಧ ಕಾನೂನು ತಂದಿತೋ ಆ ತೀರ್ಪನ್ನು ಅಲಹಾಬಾದ್ ಹೈಕೋರ್ಟಿನ ದ್ವಿಸದಸ್ಯ ಪೀಠವೇ ರದ್ದು ಪಡಿಸಿದೆ.

ಅಷ್ಟು ಮಾತ್ರವಲ್ಲ. ಒಂದು ವಾರದ ಕೆಳಗೆ ಯೋಗಿ ಪೊಲೀಸರೇ ಎಸ್‌ಐಟಿಗೆ ವಹಿಸಲಾದ ಯಾವುದೇ ಪ್ರಕರಣದಲ್ಲಿ ಲವ್ ಜಿಹಾದ್ ನಡೆದಿದೆಯೆಂಬುದಕ್ಕೆ ಪುರಾವೆಯಿಲ್ಲವೆಂದು ವರದಿ ಮಾಡಿದ್ದಾರೆ.

ಅದಕ್ಕೆ ಸಂಬಂಧಪಟ್ಟ ಪತ್ರಿಕಾವರದಿಯನ್ನು ಆಸಕ್ತರು ಈ ವೆಬ್ ವಿಳಾಸದಲ್ಲಿ ಓದಬಹುದು:

https://scroll.in/latest/979287/love-jihad-cases-in-kanpur-sit-finds-no-proof-of-conspiracy-or-foreign-funding

ಹೀಗೆ ಈವರೆಗೆ ಈ ದೇಶದಲ್ಲಿ ಲವ್ ಜಿಹಾದ್ ಎಂಬುದನ್ನು ಸಾಬೀತು ಮಾಡಬಲ್ಲ ಒಂದೇ ಒಂದು ಉದಾಹರಣೆ ಇಲ್ಲ.

ಅದರ ಅರ್ಥ ಬಲವಂತದ ಮದುವೆ ನಡೆಯುತ್ತಿಲವೆಂತಲ್ಲ. ಅದು ಎಲ್ಲಾ ಧರ್ಮಗಳ ಮಹಿಳೆಯರು ಎದುರಿಸುತ್ತಿರುವ ಶೋಷಣೆ. ಹಾಗೂ ಅದನ್ನು ತಡೆಯಲು ಈಗಾಗಲೇ ಹಲವು ಕಾನುನುಗಳಿವೆ.

ಹೀಗಿದ್ದರೂ ಬಿಜೆಪಿಯು ಕೋವಿಡ್ ಸಂದರ್ಭದಲ್ಲಿ ಲವ್ ಜಿಹಾದ್ ಭೂತವನ್ನು ಬಡಿದೆಬ್ಬಿಸುತ್ತಿರುವುದೇತಕ್ಕೆ?

ಒಂದು ದೇಶ- ಒಂದೇ ಧರ್ಮ, ಜನಾಂಗ

ಇದರ ಹಿಂದೆ ಎರಡು ಫ್ಯಾಸಿಸ್ಟ್ ಅಜೆಂಡಾಗಳಿವೆ.

ಮೊದಲನೆಯದು ತುರ್ತಿನದು-

ಕೋವಿಡ್ ದಾಳಿಯ ಜೊತೆಗೆ ಮೋದಿ ಸರ್ಕಾರದ ದಾಳಿಯೂ ಸೇರಿ ದೇಶದ ಆರ್ಥಿಕತೆ ಇತಿಹಾಸದಲ್ಲೇ ಕಂಡರಿಯದ ಹಿಂದ್ಸರಿತವನ್ನು ಅನುಭವಿಸುತ್ತಿದೆ. ನಿರುದ್ಯೋಗ, ಕೃಷಿ ಬಿಕ್ಕಟ್ಟು, ಬೆಲೆ ಏರಿಕೆಗಳು ಇತಿಹಾಸದಲ್ಲೇ ಕಂಡರಿಯದ ಮಟ್ಟಕ್ಕೆ ಮುಟ್ಟಿವೆ. ಈ ಕಂಗಾಲಿನಿಂದ ಜನರನ್ನು ಪಾರು ಮಾಡಬೇಕೆಂದರೆ ಜನರ ಆಹಾರ, ಉದ್ಯೋಗ, ಹಾಗೂ ಆರೋಗ್ಯಕ್ಕಾಗಿ ಸರ್ಕಾರ ಹೆಚ್ಚು ವೆಚ್ಚ ಮಾಡಬೇಕು. ಆದರೆ ಕೋವಿಡ್ ಪ್ಯಾಕೇಜ್ ಎಂದು ಮೋದಿ ಸರ್ಕಾರ ಘೋಷಿಸಿದ ಹಣ ಮತ್ತು ಯೋಜನೆಗಳನ್ನು ಸಿಂಹಪಾಲು ಕಾರ್ಪೊರೇಟ್ ಕಂಪನಿಗಳಿಗೆ ಹರಿದಿದೆ. ಅದರ ಜೊತೆಗೆ ಕೋವಿಡ್ ಸಂದರ್ಭವನ್ನು ಬಳಸಿಕೊಂಡು ಕಾರ್ಪೊರೇಟ್ ಕುಳಗಳ ಲಾಭವನ್ನು ಹೆಚ್ಚಿಸುವ ಕಾರ್ಮಿಕ ಕಾಯಿದೆ ಮತ್ತು ಕೃಷಿ ಕಾಯಿದೆಗಳನ್ನು ಸಂಚಿನಿಂದ ಜಾರಿ ಮಾಡಿರುವ ಮೋದಿ ಸರ್ಕಾರ ಈ ದೇಶದ ಬಹುಸಂಖ್ಯಾತ ಜನರನ್ನು ಹತಾಷೆಯಂಚಿಗೆ ದೂಡಿದೆ.

ಈ ಹತಾಷೆ ಸರ್ಕಾರದ ವಿರುದ್ಧ ಆಕ್ರೋಶವಾಗದಂತೆ ಮಾಡಲು ಜನರನ್ನೇ ಒಡೆದಾಳುವ ತಂತ್ರ ಮೋದಿ ಸರ್ಕಾರದ್ದು. ಜನರು ಉಳಲು ಭೂಮಿ ಬೇಕೆಂದರೆ ರಾಮ ಜನ್ಮ ಭೂಮಿಯನ್ನೂ ತೋರಿಸುತ್ತಿದೆ. ಕೃಷಿ ಅಪಾಯದಲ್ಲಿದೆ ಎಂದರೆ ಹಿಂದೂ ಧರ್ಮ ಅಪಾಯದಲ್ಲಿದೆ ಎಂದು ಹಿಂದೂ ಜನರನ್ನು ವಂಚಿಸುತ್ತಿದೆ. ಅದರ ಭಾಗವಾಗಿಯೇ ಗೋಹತ್ಯೆ ಹಾಗೂ ಲವ್ ಜಿಹಾದ್ ವಿರೋಧಿ ಶಾಸನಗಳನ್ನು ಜಾರಿ ಮಾಡಲು ಹೊರಟಿದೆ.

ಎರಡನೆಯದು ದೀರ್ಘಕಾಲಿನದ್ದು-

ಅದು ಈ ದೇಶವನ್ನು ಹಿಂದೂ ರಾಷ್ಟ್ರ ಮಾಡುವ ಫ್ಯಾಸಿಸ್ಟ್ ಅಜೆಂಡಾದ ಭಾಗ. ಒಂದು ರಾಷ್ಟ್ರ- ಒಂದೇ ಧರ್ಮ ಹಾಗೂ ಜನಾಂಗ. ಹಿಟ್ಲರ್ ಕೂಡ ೧೯೩೫ರಲ್ಲಿ ಆರ್ಯನ್ ಪರಿಶುದ್ಧತೆಯನ್ನು ಉಳಿಸಿಕೊಂಡು ಜರ್ಮನಿಯ ಧಮನಿಯಲ್ಲಿರುವ ಬಹು ಸಂಸ್ಕೃತಿಯನ್ನು ತೊಡೆದುಹಾಕಲು ಭಾಗವಾಗಿ ಜರ್ಮನ್-ಯೆಹೂದಿ ಮದುವೆಗಳನ್ನು ನಿಷೇಧಿಸಿದ್ದ. ಮೋದಿ ಸರ್ಕಾರದ ಲವ್ ಜಿಹಾದ್ ನಿಷೇಧದ ಕಾನೂನುಗಳೂ ಕೂಡಾ ಹಿಂದೂ ಪರಿಶುದ್ಧತೆಯನ್ನು ಉಳಿಸಿಕೊಳ್ಳುವ ಅಜೆಂಡಾದ ಭಾಗವಾಗಿದೆ. ಇದು ಕೇವಲ ಅಂತರ್ ಧರ್ಮೀಯ ವಿವಾಹ ನಿಷೇಧದಲ್ಲಿ ಮತ್ರ ಕೊನೆಗೊಳ್ಳದೆ ಅಂತರ್ ಜಾತೀಯ ಮದುವೆಯನ್ನು ನಿಷೇಧಿಸಿ ಮೇಲ್ಜಾತಿ ಪರಿಶುದ್ಧತೆಯನ್ನು ಉಳಿಸಿಕೊಳ್ಳುವ ಉದ್ದೇಶವನ್ನೂ ಒಳಗೊಂಡಿದೆ. ಈ ಪ್ರಕ್ರಿಯೆಯಲ್ಲಿ ಅತಿ ಹೆಚ್ಚು ದಮನಕ್ಕೊಳಗಾಗುವುದು ಹಿಂದೂ ಮಹಿಳೆಯರೇ ಆಗಿದ್ದಾರೆ.

ಹೀಗಾಗಿ ಲವ್ ಜಿಹಾದ್ ಅಪಪ್ರಚಾರ ಕೇವಲ ಮುಸ್ಲಿಂ ದಮನವನ್ನು ಮಾತ್ರವಲ್ಲ ಹಿಂದೂ ಮಹಿಳೆಯರ ದಮನವನ್ನೂ ಉದ್ದೇಶಿಸಿರುವ ಬ್ರಾಹ್ಮಣೀಯ ರಾಷ್ಟ್ರ ಸಂಸ್ಥಾಪನೆಯ ಅಜೆಂಡಾದ ಭಾಗವಾಗಿದೆ.

-ಶಿವಸುಂದರ್

Courtesy : varthabharati

Please follow and like us:
error