Breaking News
Home / ಅಂಕಣಗಳು / ರಾಷ್ಟ್ರೀಯವಾದ ಮತ್ತು ಸಂವಿಧಾನ-ಸನತ್ ಕುಮಾರ್ ಬೆಳಗಲಿ
ರಾಷ್ಟ್ರೀಯವಾದ ಮತ್ತು ಸಂವಿಧಾನ-ಸನತ್ ಕುಮಾರ್ ಬೆಳಗಲಿ

ರಾಷ್ಟ್ರೀಯವಾದ ಮತ್ತು ಸಂವಿಧಾನ-ಸನತ್ ಕುಮಾರ್ ಬೆಳಗಲಿ

ಈಗ ರಾಷ್ಟ್ರಭಕ್ತಿ ಮೇಲೆ ಮಾತನಾಡುವ ಆರೆಸ್ಸೆಸ್ ದೇಶದ ಸ್ವಾತಂತ್ರ ಚಳವಳಿಯಲ್ಲಿ ಪಾಲ್ಗೊಂಡಿರಲಿಲ್ಲ. ಹಿಂದೂ ರಾಷ್ಟ್ರ ನಿರ್ಮಾಣಕ್ಕಾಗಿ ದುಡಿಯುವ ಗುರಿಯನ್ನು ಇಟ್ಟುಕೊಂಡ ಆರೆಸ್ಸೆಸ್ ತನ್ನ ಸಿದ್ಧಾಂತಕ್ಕೆ ಇಟಲಿಯ ಫ್ಯಾಶಿಸ್ಟ್ ಸರ್ವಾಧಿಕಾರಿ ಮುಸಲೋನಿಯಿಂದ ಸ್ಫೂರ್ತಿ ಪಡೆಯಿತು. ನಾಗಪುರದ ಚಿತ್ ಪಾವನ ಬ್ರಾಹ್ಮಣರ ಓಣಿಯಲ್ಲಿ ಆರೆಸ್ಸೆಸ್ ಶಾಖೆ ಆರಂಭಿಸುವ ಮನ್ನ ಈ ಸಂಘದ ಸ್ಥಾಪಕರಾದ ಡಾ. ಮುಂಜೆ ಅವರು 1925ರಲ್ಲಿ ಇಟಲಿಗೆ ಹೋಗಿ, ಮುಸಲೋನಿಯನ್ನು ಭೇಟಿಯಾಗಿ ಬಂದರು. ಫ್ಯಾಶಿಸ್ಟ್ ಪಕ್ಷದ ಪ್ರಣಾಳಿಕೆ ಮತ್ತು ಸಂಘಟನಾ ಸ್ವರೂಪವನ್ನು ಮಾದರಿಯಾಗಿ ಇಟ್ಟುಕೊಂಡು 1925ರಲ್ಲಿ ಆರೆಸ್ಸೆಸ್ ಸ್ಥಾಪನೆಯಾಯಿತು.


ಏಕ ರಾಷ್ಟ್ರ, ಏಕ ಧರ್ಮ, ಏಕ ಸಂಸ್ಕೃತಿ, ಏಕ ಭಾಷೆ ಎಂದು ಪ್ರತಿಪಾದಿಸುತ್ತ ಭಾರತ ಎಂಬ ಮಹಾನ್ ದೇಶದ ವೈವಿಧ್ಯವನ್ನೇ ಅಳಿಸಿ ಹಾಕುವ ಹೊಸ ರಾಷ್ಟ್ರ ವಾದ ಎಂಬುದು ಇಲ್ಲಿ ಹುಟ್ಟಿದೆ. ಒಂದೇ ಜನಾಂಗ, ಒಂದೇ ಜನ ಸಮುದಾಯವನ್ನು ಹೊಂದಿದ ಯುರೋಪಿನ ಪುಟ್ಟ ಪುಟ್ಟ ದೇಶಗಳಲ್ಲಿ ಇಂತಹ ರಾಷ್ಟ್ರವಾದ ಬೇರೂರಿದೆ. ಆದರೆ ಭಾರತದಂತಹ ದೇಶ ಜಗತ್ತಿನಲ್ಲಿ ಇನ್ನೊಂದಿಲ್ಲ. ನೂರಾರು ಜನಾಂಗಗಳು, ಹಲವಾರು ಸಂಸ್ಕೃತಿಗಳು, ವಿಭಿನ್ನ ಭಾಷೆಗಳು, ಭಿನ್ನ ಧರ್ಮಗಳು, ಜಾತಿಗಳು ಇವೆಲ್ಲವನ್ನೂ ಒಳಗೊಂಡರೂ ಕೂಡ ಇದೊಂದು ರಾಷ್ಟ್ರವಾಗಿದೆಯಲ್ಲ ಎಂದು ಹೆಮ್ಮೆ ಅನ್ನಿಸುತ್ತದೆ.

ಈ ವೈವಿಧ್ಯವೇ ಭಾರತದ ಜೀವದ ಜೀವ. ಇಂತಹ ವೈವಿಧ್ಯಮಯವಾದ ಇನ್ನೊಂದು ದೇಶ ಜಗತ್ತಿನಲ್ಲಿ ಇಲ್ಲ.ಇಂತಹ ಅಪರೂಪದ ರಾಷ್ಟ್ರವನ್ನು ನಾವು ಉಳಿಸಿಕೊಳ್ಳಬೇಕಿದೆ. ಎಷ್ಟೇ ಭಿನ್ನತೆಯಿದ್ದರೂ ಪರಸ್ಪರ ಹೊಂದಿಕೊಂಡು ಹೇಗೆ ಬದುಕಬೇಕು ಎಂಬುದನ್ನು ಜಗತ್ತಿಗೆ ಕಲಿಸುವ ಯೋಗ್ಯತೆ ಈ ದೇಶಕ್ಕಿದೆ. ಇಂತಹ ಬಹುಮುಖಿ ಭಾರತಕ್ಕೆ ಪೂರಕವಾಗುವ ಸಂವಿಧಾನವನ್ನು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ನೇತೃತ್ವದ ರಾಜ್ಯಾಂಗ ರಚನಾ ಸಮಿತಿ ದೇಶಕ್ಕೆ ನೀಡಿದೆ. ಇಂತಹ ಹಿರಿಮೆ ಮತ್ತು ಹೆಮ್ಮೆಯ ದೇಶ ಈಗ ಸಂಕಟದ ಸುಳಿಯಲ್ಲಿ ಸಿಲುಕಿದೆ.

ಇಟಲಿ ಮುಸಲೋನಿ ಮತ್ತು ಅಡಾಲ್ಫ್ ಹಿಟ್ಲರ್ ಅವರಿಂದ ಸ್ಫೂರ್ತಿ ಪಡೆದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಈ ಬಹುಮುಖಿ ಭಾರತವನ್ನು ನಾಶಪಡಿಸಿ, ಇದನ್ನು ಮನುವಾದಿ ರಾಷ್ಟ್ರವನ್ನಾಗಿ ಮಾಡಲು ಕಾರ್ಯಾಚರಣೆಗೆ ಇಳಿದಿದೆ. ಈ ಕಾರ್ಯಾಚರಣೆ ಅತ್ಯಂತ ಆಕ್ರಮಣಕಾರಿ ರೂಪ ತಾಳಿದೆ. ಹಿಂದೂ ರಾಷ್ಟ್ರದ ದೀರ್ಘ ಕಾಲೀನ ಗುರಿ ಸಾಧನೆಗೆ ಪೂರಕವಾಗಿ ಗೋ ಹತ್ಯೆ, ಮತಾಂತರ, ಲವ್ ಜಿಹಾದ್, ಮಂದಿರ ನಿರ್ಮಾಣ ಮಂತಾದ ವಿವಾದಾತ್ಮಕ ವಿಷಯಗಳನ್ನು ಧರ್ಮದ ಆಧಾರದಲ್ಲಿ ದೇಶವನ್ನು ವಿಭಜಿಸುವ ಯತ್ನ ನಡೆದಿದೆ.

ಈ ಅಪಾಯದ ಅರಿವು ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಮತ್ತು ಡಾ. ಅಂಬೇಡ್ಕರ್ ಅವರಿಗೆ ಇತ್ತು. ಭಾರತದಲ್ಲಿ ಫ್ಯಾಶಿಸಂ ಬಂದರೆ, ಬಹುಸಂಖ್ಯಾತ ಹಿಂದೂ ಕೋಮುವಾದದ ಮೂಲಕ ಬರುವುದೆಂದು ಜವಾಹರ ಲಾಲ್ ನೆಹರೂ ಅವರು ಏಳು ದಶಕಗಳ ಹಿಂದೆಯೇ ಹೇಳಿದ್ದರು. ಹಿಂದೂ ರಾಷ್ಟ್ರ ನಿರ್ಮಾಣದ ಅಪಾಯದ ಬಗ್ಗೆ ಮಾತನಾಡಿದ ಡಾ. ಅಂಬೇಡ್ಕರ್ ಅವರು, ‘‘ಭಾರತ ಒಂದು ವೇಳೆ ಹಿಂದೂ ರಾಷ್ಟ್ರವಾದರೆ, ಅದು ಸರ್ವನಾಶ ಆಗುತ್ತದೆ’’ ಎಂದು ಹೇಳಿದ್ದರು. ಸ್ವಾತಂತ್ರ ಹೋರಾಟದ ನಾಯಕತ್ವ ವಹಿಸಿದ್ದ ಗಾಂಧೀಜಿಯವರು ಭಾಷಣಗಳಲ್ಲಿ ರಾಮರಾಜ್ಯ ಎಂದು ಹೇಳುತ್ತಿದ್ದರೂ ಕೂಡ ದೇಶಕ್ಕೆ ಸ್ವಾತಂತ್ರ ದೊರೆತಾಗ ಜಾತ್ಯತೀತ ಪ್ರಜಾಪ್ರಭುತ್ವದ ಪರ ನಿಂತರು.

ಭಾರತದಲ್ಲಿ ಸ್ವಾತಂತ್ರ ಹೋರಾಟ ಮತ್ತು ನಂತರದ ಸಂದರ್ಭದಲ್ಲಿ ಎರಡು ರಾಷ್ಟ್ರವಾದದ ನಡುವೆ ತಿಕ್ಕಾಟ ನಡೆದಿತ್ತು. ಅದರಲ್ಲಿ ಒಂದು, ಹಿಂದೂ ರಾಷ್ಟ್ರವಾದ. ಎರಡನೆಯದ್ದು ಭಾರತೀಯ ರಾಷ್ಟ್ರವಾದ. ಹಿಂದೂ ರಾಷ್ಟ್ರವೆಂದರೆ, ಸಾವರ್ಕರ್ ಮತ್ತು ಗೋಳ್ವಾಲ್ಕರ್ ಪ್ರತಿಪಾದಿಸಿದ ರಾಷ್ಟ್ರವಾದ. ಇಡೀ ದೇಶವನ್ನು ಪುಣ್ಯಭೂಮಿ ಮತ್ತು ಪಿತೃಭೂಮಿಯೆಂದು ಪರಿಗಣಿಸಿದ ವ್ಯಕ್ತಿ ಹಿಂದೂ ಎಂದು ಸಾವರ್ಕರ್ ವ್ಯಾಖ್ಯಾನಿಸಿದರು. ಹಿಂದೂಗಳು ಒಂದು ರಾಷ್ಟ್ರ ಎಂಬ ಅವರ ಪ್ರತಿಪಾದನೆ, ಮುಸ್ಲಿಂ ರಾಷ್ಟ್ರವಾದಕ್ಕ್ಕೆ ಪ್ರಚೋದನೆ ನೀಡಿತು. ಈ ಹಿಂದೂ ರಾಷ್ಟ್ರವಾದಕ್ಕಿಂತ ಭಿನ್ನವಾದ ಭಾರತೀಯ ರಾಷ್ಟ್ರವಾದ ಕೇವಲ ಒಂದು ಧಾರ್ಮಿಕ ಸಮುದಾಯವನ್ನು ಪ್ರತಿನಿಧಿಸುವುದಿಲ್ಲ. ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್ ಹೀಗೆ ಎಲ್ಲ ಸಮುದಾಯವನ್ನ್ನು ಅದು ಪ್ರತಿನಿಧಿ ಸುತ್ತದೆ. ದೇಶದ ಸ್ವಾತಂತ್ರ ಹೋರಾಟದ ನೇತೃತ್ವ ವಹಿಸಿದವರು ಈ ಭಾರತೀಯ ರಾಷ್ಟ್ರವಾದದ ಪ್ರತಿಪಾದಕರಾಗಿದ್ದರು. ಈ ದೇಶ ಒಪ್ಪಿಕೊಂಡ ಸಂವಿಧಾನವು ಈ ಭಾರತೀಯ ರಾಷ್ಟ್ರವಾದಕ್ಕೆ ಪೂರಕವಾಗಿದೆ.

ಈಗ ರಾಷ್ಟ್ರಭಕ್ತಿ ಮೇಲೆ ಮಾತನಾಡುವ ಆರೆಸ್ಸೆಸ್ ದೇಶದ ಸ್ವಾತಂತ್ರ ಚಳವಳಿ ಯಲ್ಲಿ ಪಾಲ್ಗೊಂಡಿರಲಿಲ್ಲ. ಹಿಂದೂ ರಾಷ್ಟ್ರ ನಿರ್ಮಾಣಕ್ಕಾಗಿ ದುಡಿಯುವ ಗುರಿಯನ್ನು ಇಟ್ಟುಕೊಂಡ ಆರೆಸ್ಸೆಸ್ ತನ್ನ ಸಿದ್ಧಾಂತಕ್ಕೆ ಇಟಲಿಯ ಫ್ಯಾಶಿಸ್ಟ್ ಸರ್ವಾಧಿಕಾರಿ ಮುಸಲೋನಿಯಿಂದ ಸ್ಫೂರ್ತಿ ಪಡೆಯಿತು. ನಾಗಪುರದ ಚಿತ್ ಪಾವನ ಬ್ರಾಹ್ಮಣರ ಓಣಿಯಲ್ಲಿ ಆರೆಸ್ಸೆಸ್ ಶಾಖೆ ಆರಂಭಿಸುವ ಮನ್ನ ಈ ಸಂಘದ ಸ್ಥಾಪಕರಾದ ಡಾ. ಮುಂಜೆ ಅವರು 1925ರಲ್ಲಿ ಇಟಲಿಗೆ ಹೋಗಿ, ಮುಸಲೋನಿಯನ್ನು ಭೇಟಿಯಾಗಿ ಬಂದರು. ಫ್ಯಾಶಿಸ್ಟ್ ಪಕ್ಷದ ಪ್ರಣಾಳಿಕೆ ಮತ್ತು ಸಂಘಟನಾ ಸ್ವರೂಪವನ್ನು ಮಾದರಿಯಾಗಿ ಇಟ್ಟುಕೊಂಡು 1925ರಲ್ಲಿ ಆರೆಸ್ಸೆಸ್ ಸ್ಥಾಪನೆಯಾಯಿತು.

ಆರೆಸ್ಸೆಸ್ ಸ್ಥಾಪನೆಗೆ ಚಾರಿತ್ರಿಕ ಹಿನ್ನೆಲೆಯಿದೆ. ಮಹಾರಾಷ್ಟ್ರದಲ್ಲಿ ಪುಣೆಯ ಪೇಶ್ವೆಗಳ ಸಾಮ್ರಾಜ್ಯ ಕುಸಿದು ಬಿದ್ದ ಬಳಿಕ ಸಮಾಜ ಸುಧಾರಕರ ದೊಡ್ಡ ಅಲೆ ಬಂತು. ಮಹಾತ್ಮ ಜ್ಯೋತಿಬಾ ಪುಲೆ, ಶಾಹು ಮಹಾರಾಜ, ರಾನಡೇ, ಆಗರಕರ, ನಂತರ ಅಂಬೇಡ್ಕರ್ ಇವರೆಲ್ಲರ ಪ್ರಭಾವದಿಂದಾಗಿ ಬ್ರಾಹ್ಮಣಶಾಹಿ ಬಿಕ್ಕಟ್ಟಿಗೆ ಸಿಲುಕಿತು. ಈ ಬಿಕ್ಕಟ್ಟಿನಿಂದ ಪಾರಾಗಲು ಸಾವರ್ಕರ್ ಮತ್ತು ಗೋಳ್ವಾಲ್ಕರ್ ಕಂಡು ಹಿಡಿದ ದಾರಿ ಹಿಂದುತ್ವ. ಪುರೋಹಿತಶಾಹಿ ವಿರುದ್ಧ ಮತ್ತು ಪಾಳೇಗಾರಿಕೆ ವಿರುದ್ಧ ಬಂಡೆದ್ದ ದಮನಿತ ಸಮುದಾಯಗಳ ದಾರಿ ತಪ್ಪಿಸಲು ಹಿಂದೂ ರಾಷ್ಟ್ರವಾದ ತಲೆಯೆತಿತ್ತು.

ನಮ್ಮ ಸ್ವಾತಂತ್ರ ಹೋರಾಟದ ನೇತೃತ್ವ ವಹಿಸಿದ್ದ ನಾಯಕರಲ್ಲಿ ಬಹುತೇಕರು ಹಿಂದೂ ರಾಷ್ಟ್ರವಾದವನ್ನು ವಿರೋಧಿಸಿದರು. ಮಹಾತ್ಮಾ ಗಾಂಧೀಜಿಗೆ ಸರ್ವಧರ್ಮ ಸಮಭಾವ ಮೊದಲ ಆದ್ಯತೆಯಾಗಿತ್ತು. ಭಗತ್ ಸಿಂಗ್ ಮತ್ತು ಸುಭಾಶ್ಚಂದ್ರ ಬೋಸ್ ಸಮಾಜವಾದ ಭಾರತದ ಕನಸು ಕಂಡವರು. ದೇಶದ ಮೊದಲ ಪ್ರಧಾನಿ ನೆಹರೂ ಅವರಿಗೆ ಸೋವಿಯತ್ ರಷ್ಯಾ ಆದರ್ಶವಾಗಿತ್ತು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹಿಂದೂ ರಾಷ್ಟ್ರವಾದ ವಿರೋಧಿಸುತ್ತಲೇ ಬಂದರು. ರಾಷ್ಟ್ರೀಯತೆ ಬಗ್ಗೆ ಮಹಾತ್ಮಾ ಗಾಂಧೀಜಿ ಜೊತೆ ಒಮ್ಮೆ ವಾಗ್ವಾದಕ್ಕೆ ಇಳಿದ ಅಂಬೇಡ್ಕರ್, ‘‘ನಮಗೆ ನಮ್ಮದೇ ಆದ ಮಾತೃಭೂಮಿ ಎಲ್ಲಿದೆ’ ಎಂದು ಕೇಳಿದರು. ನಾಯಿ, ಬೆಕ್ಕುಗಳನ್ನು ಮನೆಯಲ್ಲಿ ಸಾಕುವ ನಮ್ಮನ್ನು ಊರಾಚೆಗೆ ಅಟ್ಟಿದೆ ಈ ದೇಶವನ್ನು ನನ್ನ ದೇಶವೆಂದು ಹೇಗೆ ಕರೆಯಲಿ’’ ಎಂದು ಪ್ರಶ್ನಿಸಿದರು.

ಸ್ವಾತಂತ್ರಾ ನಂತರ ಭಾರತವನ್ನು ಹಿಂದೂರಾಷ್ಟ್ರವೆಂದು ಘೋಷಿಸಬೇಕೆಂದು ತೀವ್ರ ಒತ್ತಡ ಬಂದಾಗ, ಸಂವಿಧಾನ ರಚನಾ ಸಮಿತಿ ಅಧ್ಯಕ್ಷರಾಗಿದ್ದ ಡಾ. ಅಂಬೇಡ್ಕರ್ ಅದಕ್ಕೆ ಮಣಿಯಲಿಲ್ಲ. ಸರ್ವರಿಗೂ ಸಮಾನಾವಕಾಶ ನೀಡುವ ಸಂವಿಧಾನ ನೀಡಿದರು. ಇದನ್ನು ಹಿಂದೂ ರಾಷ್ಟ್ರವಾದಿಗಳು ಒಪ್ಪಲಿಲ್ಲ. ಮೇಲ್ನೋಟಕ್ಕೆ ಒಪ್ಪಿಕೊಂಡಂತೆ ನಟಿಸಿದರೂ ಕೂಡ ಹೇಗಾದರೂ ಮಾಡಿ, ಈ ಸಂವಿಧಾನವನ್ನು ಬದಲಿಸಲು ಪ್ರಜಾಪ್ರಭುತ್ವ ಭಾರತವನ್ನು ಹಿಂದೂರಾಷ್ಟ್ರವನ್ನಾಗಿ ಮಾಡಲು ಕೋಮುವಾದಿ ಶಕ್ತಿಗಳು ಹುನ್ನಾರ ನಡೆಸುತ್ತಲೇ ಇವೆ. ಇದೇ ಸಂವಿಧಾನದಡಿಯಲ್ಲಿ ಚುನಾವಣೆಗೆ ಸ್ಪರ್ಧಿಸಿ, ಅಧಿಕಾರ ವಶಪಡಿಸಿಕೊಂಡು ಇದನ್ನು ಬುಡಮೇಲು ಮಾಡಲು ಸಂಚು ನಡೆಯುತ್ತಲೇ ಇದೆ,

ಸ್ವಾತಂತ್ರದ ಏಳು ದಶಕಗಳ ನಂತರ ನಮ್ಮ ಸಂವಿಧಾನ, ಪ್ರಜಾಪ್ರಭುತ್ವ ಇಕ್ಕಟ್ಟಿಗೆ ಸಿಲುಕಿದೆ, ನಾಗಪುರದ ಸಂವಿಧಾನೇತರ ಅಧಿಕಾರ ಕೇಂದ್ರ ಇಡೀ ದೇಶದ ಚುನಾಯಿತ ಸರಕಾರವನ್ನು ನಿಯಂತ್ರಿಸುತ್ತಿದೆ. ಸರ್ವರಿಗೆ ಸಮಾನಾವಕಾಶ ನೀಡಿದ ಸಂವಿಧಾನಕ್ಕೆ ಹಿಂದೂ ರಾಷ್ಟ್ರದಿಂದ ಗಂಡಾಂತರ ಎದುರಾಗಿದೆ. ಪ್ರಜಾಪ್ರಭುತ್ವಕ್ಕೆ ಆಧಾರಸ್ತಂಭವಾದ ಈ ಸಂವಿಧಾನ ಕುಸಿದು ಬಿದ್ದರೆ, ವೈವಿಧ್ಯಮಯ ಈ ಭಾರತ ಛಿದ್ರಛಿದ್ರವಾಗುತ್ತದೆ. ಇಂತಹ ಬಲಾಢ್ಯ ಭಾರತವನ್ನು ಛಿದ್ರ ಮಾಡಿ, ಇಲ್ಲಿನ ಸಂಪತ್ತನ್ನು ಕೊಳ್ಳೆ ಹೊಡೆಯಲು ಮಸಲತ್ತು ನಡೆಸಿವೆ. ಆಂಗ್ಲೋ ಅಮೆರಿಕನ್ ಸಾಮ್ರಾಜ್ಯಶಾಹಿ ಶಕ್ತಿಗಳು ಮತ್ತೆ ಈ ದೇಶದಲ್ಲಿ ಹಸ್ತಕ್ಷೇಪ ಮಾಡುವ ಅಪಾಯವಿದೆ. ಸಾಮ್ರಾಜ್ಯಶಾಹಿ ಶಕ್ತಿಗಳ ಗುಲಾಮರಾದ ಹಿಂದೂ ಕೋಮುವಾದಿಗಳು ದೇಶವನ್ನು ಚೂರು ಚೂರು ಮಾಡಲು ನಿರಂತರ ಹುನ್ನಾರ ನಡೆಸುತ್ತಲೇ ಇದ್ದಾರೆ. ಹಿಂದೂ ರಾಷ್ಟ್ರವಾದದಿಂದ ಅಪಾಯದ ಅಂಚಿಗೆ ಬಂದು ನಿಂತಿರುವ ದೇಶವನ್ನು ರಕ್ಷಿಸಬೇಕಾದದ್ದು ಮತ್ತು ಸಂವಿಧಾನ ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಆಗಬೇಕಿದೆ

About admin

Comments are closed.

Scroll To Top