ಮಹುವಾ ಅವರ ಈ ಐತಿಹಾಸಿಕ ಭಾಷಣ-ದಿನೇಶ್ ಕುಮಾರ್ ಎಸ್.ಸಿ.

ಮಹುವಾ ಮೊಯಿತ್ರಾ ಸೋಮವಾರ ಲೋಕಸಭೆಯಲ್ಲಿ ಮಾತನಾಡಿದ್ದು ಕೇವಲ 21 ನಿಮಿಷಗಳು ಮಾತ್ರ. ಅದರಲ್ಲಿ ಕೆಲವು ನಿಮಿಷಗಳು ಗದ್ದಲದಲ್ಲಿ ಕಳೆದುಹೋದವು. ಆದರೆ ಮಹುವಾ ತನಗೆ ಸಿಕ್ಕ ಪ್ರತಿ ಸೆಕೆಂಡನ್ನೂ ಸಮರ್ಪಕವಾಗಿ ಬಳಸಿಕೊಂಡರು, ಉಸಿರಾಡಲೂ ಅವಕಾಶವಿಲ್ಲದಂತೆ ಸರಸರನೆ ಮಾತನಾಡುತ್ತ ಹೋದರು. ಅದು ಏಳು ವರ್ಷಗಳ ಮೋದಿ ಸರ್ಕಾರದ ಅನಧಿಕೃತ ಪೋಸ್ಟ್ ಮಾರ್ಟಂ. ಇಂಗ್ಲಿಷ್ ಸಲೀಸಾಗಿ ಅರ್ಥವಾಗದ ಕೆಲವು ಗೆಳೆಯರು, ಮಹುವಾ ಅವರ ಭಾಷಣದ ಮುಖ್ಯ ಅಂಶಗಳನ್ನು ಕನ್ನಡದಲ್ಲೂ ಹೇಳಿ ಅಂತ ಕೋರಿದರು. ಅವರಿಗಾಗಿ ಈ ಟಿಪ್ಪಣಿ.
ಮಹುವಾ ಅವರ ಈ ಐತಿಹಾಸಿಕ ಭಾಷಣಕ್ಕೊಂದು ತಲೆಬರೆಹ ಕೊಡಿ ಎಂದರೆ ನಾನು ಹೇಳುವುದು “ಧೈರ್ಯ ಮತ್ತು ಹೇಡಿತನ” ಎಂಬ ವಾಕ್ಯವನ್ನೇ.‌ ಮಹುವಾ ಈ ಎರಡು ಪದಗಳನ್ನು ಇಟ್ಟುಕೊಂಡೇ ಒಂದು ಪ್ರತಿರೋಧ ಕಾವ್ಯವನ್ನು ಕಟ್ಟಿದರು. ಅವರು ಹೇಡಿಗಳನ್ನು ಬಹಳ ಚೆನ್ನಾಗಿ ವರ್ಣಿಸಿದರು. ಧೀರರಿಗೂ ಹೇಡಿಗಳಿಗೂ ಮೂಲಭೂತವಾದ ವ್ಯತ್ಯಾಸವಿದೆ. ಹೇಡಿಯೊಬ್ಬ ಧೈರ್ಯಶಾಲಿಯಂತೆ ಕಾಣುವುದು ಅವನ ಕೈಯಲ್ಲಿ ಅಧಿಕಾರ ಇದ್ದಾಗ ಮಾತ್ರ. ನಾವು ನಿಜವಾದ ಧೈರ್ಯವಂತರು, ಬರಿಗೈಯಲ್ಲಿ ಇದ್ದರೂ ಹೋರಾಡೋಣ ಎಂದರು ಮಹುವಾ. ದ್ವೇಷ ಮತ್ತು ಧರ್ಮಾಂಧತೆಯನ್ನು ತಲೆಗೇರಿಸಿಕೊಂಡ ಪ್ರಭುತ್ವ ಹೇಗೆ ದೇಶದ ಅಸ್ತಿತ್ವವನ್ನು ಅಲುಗಾಡಿಸುತ್ತ ಬರುತ್ತಿದೆ ಎಂಬುದನ್ನು ಹೇಳುತ್ತ ಹೋದರು. ಅವರು ಕೇವಲ ಸರ್ಕಾರವನ್ನು ದೂಷಿಸಲಿಲ್ಲ, ಇವತ್ತಿನ ಸ್ಥಿತಿಗೆ ನ್ಯಾಯಾಂಗ ಮತ್ತು ಮೀಡಿಯಾ ಕೂಡ ಹೊಣೆ ಹೊರಬೇಕು ಎಂದರು.
ಸರ್ಕಾರ ಅಧಿಕಾರಬಲದ ಹಿಂದೆ ಅಡಗಿಕೊಂಡು ದೇಶವನ್ನು ‘ಪೊಲೀಸ್ ರಾಜ್ಯ’ವನ್ನಾಗಿ ಮಾಡಿದೆ. ಟೀಕಿಸುವ ಧ್ವನಿಗಳ ಮೇಲೆ ರಾಜದ್ರೋಹದ ಕೇಸುಗಳನ್ನು ಹೂಡುತ್ತಿದೆ. ಇದನ್ನು ನೀವು ಧೈರ್ಯ ಎಂದು ಭಾವಿಸಬೇಡಿ. ಹೇಡಿಗಳಷ್ಟೆ ಇದನ್ನು ಮಾಡಬಲ್ಲರು ಎನ್ನುತ್ತಲೇ ಸರ್ಕಾರದ ಜತೆಗಿರುವ ಮೀಡಿಯಾ ಹೌಸ್ ಒಂದರ ಮುಖ್ಯಸ್ಥನ ವಾಟ್ಸಾಪ್ ಚಾಟ್ ಉಲ್ಲೇಖಿಸಿ, ಮೀಡಿಯಾ ಹೇಗೆ ಪಾತಾಳ ತಲುಪಿದೆ‌ಎನ್ನುವುದನ್ನು ಸೂಚ್ಯವಾಗಿ ಹೇಳಿದರು.
ಮಹುವಾ ಭಾಷಣದಲ್ಲಿ ಎಷ್ಟೊಂದು ವಿಷಯಗಳಿದ್ದವು. ಒಂದರ ಹಿಂದೊಂದು ಬಾಣಗಳು ಹೊರಡುತ್ತಿದ್ದವು. ಟ್ರಜರಿ ಬೆಂಚ್ ನಲ್ಲಿ ಕುಳಿತವರ ಮುಖಗಳು ಸೀದುಹೋಗತೊಡಗಿದವು.
ನೆರೆಯ ದೇಶಗಳ ಧಾರ್ಮಿಕ ಅಲ್ಪಸಂಖ್ಯಾತರ ಕುರಿತು ಅಪಾರ ಕಾಳಜಿ ಇಟ್ಟುಕೊಂಡವರಂತೆ ಸಿಎಎ ಕಾಯ್ದೆಯನ್ನು ಅಷ್ಟು ಆತುರವಾಗಿ ಜಾರಿಗೆ ತಂದಿರಲ್ಲ. ಕಾಯ್ದೆಯ ನಿಯಮಗಳನ್ನು ರಚಿಸಲು ಇನ್ನೂ ಈ‌ ಸರ್ಕಾರಕ್ಕೆ ಯಾಕೆ ಸಾಧ್ಯವಾಗಿಲ್ಲ? ಯಾಕೆ ಒಂದಾದ ಮೇಲೊಂದರಂತೆ ಡೆಡ್ ಲೈನ್ ಗಳನ್ನು ನೀಡಲಾಗುತ್ತಿದೆ ಎಂಬ ಪ್ರಶ್ನೆ ಎಸೆದರು.
ನೀವು ನಾಲ್ಕೇ ಗಂಟೆಗಳ ಅವಕಾಶ ನೀಡಿ ರಾಷ್ಟ್ರವ್ಯಾಪಿ ಲಾಕ್ ಡೌನ್ ಘೋಷಿಸಿದಿರಿ. ಲಕ್ಷಾಂತರ ಜನರು ನೂರಾರು ಕಿ.ಮೀ. ನಡೆದುಕೊಂಡು ಹೋಗುವಂತೆ ಮಾಡಿದಿರಿ. ಎಷ್ಟೋ ಪ್ರಾಣಗಳು ಬಲಿಯಾದವು. ಇದೇ ನೀವು ಪ್ರದರ್ಶಿಸಿದ ಧೈರ್ಯ ಎಂದು ಮಹುವಾ ಚುಚ್ಚಿದರು.
ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರ ಬಗ್ಗೆ ಕಾಳಜಿ ವಹಿಸಲು ನಿಮ್ಮ ಒಂದೇ ಒಂದು ಸಚಿವಾಲಯವನ್ನು ದೆಹಲಿ ಗಡಿಗೆ ಕಳುಹಿಸಲಿಲ್ಲ. ಆದರೆ ಹದಿನೆಂಟು ವರ್ಷ ವಯಸ್ಸಿನ ಪರಿಸರ ಕಾರ್ಯಕರ್ತೆ, ಒಬ್ಬ ಪಾಪ್ ಗಾಯಕಿ ಟ್ವೀಟ್ ಮಾಡಿದ ಕೂಡಲೇ ವಿದೇಶಾಂಗ ಸಚಿವಾಲಯವನ್ನೇ ಕಣಕ್ಕೆ ಇಳಿಸಿದಿರಿ. ದೆಹಲಿ ಗಡಿಯಲ್ಲಿ ಪ್ರತಿಭಟಿಸುತ್ತಿರುವ ರೈತರ ವಿಷಯದಲ್ಲಿ ನೈತಿಕವಾಗಿ ನಡೆದುಕೊಳ್ಳಬೇಕಾಗಿದ್ದ ನೀವು ಆಯ್ದುಕೊಂಡಿದ್ದು ಕ್ರೌರ್ಯದ ಮಾರ್ಗವನ್ನು. ಇದು ನಿಮ್ಮ ಧೈರ್ಯಶಾಲಿತನವೇ? ಅಲ್ಲ, ಇದು ಹೇಡಿತನ.
ದೇಶದ ಅತ್ಯುನ್ನತ ನ್ಯಾಯಾಲಯದ ಸರ್ವೋಚ್ಛ ನ್ಯಾಯಮೂರ್ತಿಯ ಮೇಲೆ ಲೈಂಗಿಕ ಕಿರುಕುಳದ ಪ್ರಕರಣ ದಾಖಲಾಯಿತು. ಶತ ತನ್ನ ಮೇಲಿನ ಆರೋಪ ಪ್ರಕರಣವನ್ನು ತಾನೇ ಕ್ಲಿಯರ್ ಮಾಡಿಕೊಂಡು, ನಿವೃತ್ತಿಯಾದ ಮೂರೇ ತಿಂಗಳಲ್ಲಿ ರಾಜ್ಯಸಭೆಯ ಸದಸ್ಯನೂ ಆಗಿಬಿಟ್ಟ ಎಂದು ಮಹುವಾ ಹೇಳಿದ ಕೂಡಲೇ ಸದನದಲ್ಲಿ ಬಾಂಬ್ ಬಿದ್ದ ಹಾಗಾಯಿತು. ಇದನ್ನು ಹೇಳುವ ಮೊದಲು,‌ ನಾನು ಈಗ ಏನನ್ನು ಪ್ರಸ್ತಾಪಿಸಲಿದ್ದೇನೋ ಅದನ್ನು ಹೇಳಿಯೇ ತೀರುತ್ತೇನೆ. ಯಾರೂ ಅಡ್ಡಿ ಮಾಡಬೇಡಿ, ಇದನ್ನು ದಾಖಲೆಗಳಿಂದಲೂ‌ ತೆಗೆಯಕೂಡದು ಎಂದು ತಾಕೀತು ಮಾಡಿದ್ದರು ಮಹುವಾ. ಬಿಜೆಪಿ ಮಂತ್ರಿಗಳು ಎಷ್ಟೇ ಗದ್ದಲ, ಅಡೆತಡೆ ಮಾಡಿದರೂ ಮಹುವಾ ಹೇಳಬೇಕಾಗಿದ್ದನ್ನು ಹೇಳಿಯೇ ಬಿಟ್ಟರು. ನ್ಯಾಯಾಂಗ ಇವತ್ತು ಪವಿತ್ರವಾಗಿ ಉಳಿದಿಲ್ಲ.‌ ಅದು ತನ್ನ ಘನತೆ ಕಳೆದುಕೊಂಡಿದೆ. ಅದು ಈಗೀಗ ಯಕಶ್ಚಿತ್ ಕಾಮಿಡಿಯನ್ ಗಳ‌ ಹಾಸ್ಯವನ್ನೂ ಸಹಿಸಿಕೊಳ್ಳುತ್ತಿಲ್ಲ. ಈ ನೆಲದ ಅತ್ಯಂತ ಮಹತ್ವದ ಸಾಮಾಜಿಕ ಹೋರಾಟಗಾರರು ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರು ನಡೆದುನಡೆದೇ ಸತ್ತು ಹೋದಾಗ ನ್ಯಾಯಾಂಗ ನೋಡಿಕೊಂಡು ಸುಮ್ಮನಿತ್ತು ಎಂದು ಇವತ್ತಿನ ಸನ್ನಿವೇಶಕ್ಕೆ ನ್ಯಾಯಾಂಗದ ಕೊಡುಗೆಗಳನ್ನು ಪಟ್ಟಿ ಮಾಡಿದರು.
ಸರ್ಕಾರ ಭಿನ್ನಧ್ವನಿಗಳನ್ನು ಅಡಗಿಸುವ ಕೆಲಸವನ್ನು ಎಗ್ಗಿಲ್ಲದೆ ಮಾಡುತ್ತಿದೆ. ಇವರು ಎಮರ್ಜೆನ್ಸಿಯ ಬಗ್ಗೆ ಮಾತಾಡುವವರು.‌ಆದರೆ ದೇಶದಲ್ಲೀಗ ಅಘೋಷಿತ ತುರ್ತುಪರಿಸ್ಥಿತಿ ಇದೆ. ಸರ್ಕಾರ ತನ್ನ‌ ವಿರುದ್ಧ ಧ್ವನಿ ಎತ್ತುವ ಎಲ್ಲರನ್ನೂ ಬಗ್ಗು ಬಡಿಯುತ್ತದೆ. ಅದು ವಿದ್ಯಾರ್ಥಿಗಳು, ರೈತರಿಂದ ಹಿಡಿದು ಶಾಹೀನ್ ಬಾಗ್ ನ ದಾದಿಯವರೆಗೆ ಎಲ್ಲರೂ ಈ ಸರ್ಕಾರದಿಂದ ಶಿಕಾರಿಯಾದವರೇ ಆಗಿದ್ದಾರೆ. ನಿಮ್ಮನ್ನು ಧೈರ್ಯವಂತರೆಂದು ಹೇಗೆ ಕರೆಯುವುದು? ನೀವು ಅಕ್ಷರಶಃ ಹೇಡಿಗಳು!… ಹೀಗೆ ಏನನ್ನೇ ಮಾತಾಡಿದರೂ ಧೈರ್ಯ ಮತ್ತು ಹೇಡಿತನದ ನಡುವಿನ ಅಂತರ ಹೇಳಲು ಬಳಸಿಕೊಂಡರು.
ಮಹುವಾ ಪಶ್ಚಿಮ ಬಂಗಾಳದ ಸಂಸದೆ. ತಾಯ್ನೆಲದ ಇಬ್ಬರು ಮಹಾನ್ ವ್ಯಕ್ತಿಗಳನ್ನು ಅವರು ಉಲ್ಲೇಖಿಸಿದರು. ರವೀಂದ್ರನಾಥ ಠಾಗೋರ್ ಅವರ ಕಲ್ಪನೆಯ ಭಾರತವನ್ನು ಅರ್ಥ ಮಾಡಿಕೊಳ್ಳಲು‌ ಜನಗಣಮನದ ಪೂರ್ಣ ಪಾಠ ಓದಿಕೊಳ್ಳಿ. ಭಾರತದ ಬಹುತ್ವ ನಿಮಗೆ ಅರ್ಥವಾಗಬಹುದು ಎಂದು ಹೇಳುತ್ತಲೇ, ನಾವು ಈಗ ಹಾಡುವ ಜನಗಣಮನದಲ್ಲಿ ಇಲ್ಲದ ಮೂಲ ಗೀತೆಯ ಚರಣವೊಂದನ್ನು ಹೇಳಿದರು.
ಸರ್ಕಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮದಿನಾಚರಣೆಯಲ್ಲಿ ತನ್ನ ಸಂಕುಚಿತ ನೆರೇಟಿವ್ ಗಳನ್ನು ಹೇರಲು ಯತ್ನಿಸಿತು. ನೇತಾಜಿ ಎಲ್ಲರೂ ಒಪ್ಪುವ ‘ಜೈ ಹಿಂದ್’ ಘೋಷಣೆಯನ್ನು ನೀಡಿದರು. ನೀವು ಒಂದು‌ ಧರ್ಮಕ್ಕೆ ಮಾತ್ರ ಅನ್ವಯಿಸುವ ಸಂಕುಚಿತ

ಘೋಷಣೆಯನ್ನು ವಿರೋಧಿಗಳನ್ನು ಹಣಿಯಲು ಬಳಸುತ್ತಿದ್ದೀರಿ. ಈ ಘೋಷಣೆ ಅಲ್ಪಸಂಖ್ಯಾತರಿಗೆ ತಾವು ಯಾರಿಂದ ಆಳಲ್ಪಡುತ್ತಿದ್ದೇವೆ ಎಂದು‌ ಪದೇಪದೇ ನೆನಪಿಸುವ ಕುಟಿಲ ಉದ್ದೇಶದಿಂದ ಕೂಡಿದೆ. ನೇತಾಜಿ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ‌ ‘ಚಲೋ ದಿಲ್ಲಿ’ ಎಂಬ ಕರೆ ನೀಡಿದ್ದರು. ನೇತಾಜಿಯ ಹಾಗೆಯೇ ನಿಮ್ಮೊಂದಿಗೆ ಮಾತಾಡಲು, ನಿಮ್ಮ ಕಾಯ್ದೆಗಳನ್ನು ಧಿಕ್ಕರಿಸಲು ಬರುತ್ತಿದ್ದ ರೈತರನ್ನು ದಿಲ್ಲಿಯ ಗಡಿಗಳಲ್ಲೇ ತಡೆದುಬಿಟ್ಟಿರಿ.
ನೇತಾಜಿಯನ್ನು ಹೈಜಾಕ್ ಮಾಡಿಕೊಳ್ಳುವ ಬಿಜೆಪಿ ಯತ್ನಗಳ ಕುರಿತು ಮಮತಾ ಬ್ಯಾನರ್ಜಿಯವರು ಮಾತಾಡಿದ್ದು ಕೇಳಿದ್ದೆವು. ಮಹುವಾ ಅದನ್ನು ಇಲ್ಲಿ ಮುಂದುವರೆಸಿದರು.
ಮಹುವಾ ಭಾಷಣ ಅತ್ಯಂತ inclusive ಆಗಿತ್ತು.‌ ಅವ
ರು ಕೇವಲ‌ ಪಶ್ಚಿಮ ಬಂಗಾಳದ ಕುರಿತು ಮಾತನಾಡಲಿಲ್ಲ. ಹರಿಯಾಣದ ಉದಾಹರಣೆ ತೆಗೆದುಕೊಂಡರು.‌ ವಾಯುಸೇನೆಯ ಶೇ.10ರಷ್ಟು, ನೌಕಾದಳದ ಶೇ.11 ಸೈನಿಕರು ಹರಿಯಾಣ್ವಿಗಳು. ನೀವು ಅವರನ್ನು‌ ಭಯೋತ್ಪಾದಕರು, ದೇಶದ್ರೋಹಿಗಳು ಎಂದು ಕರೆಯುತ್ತೀರಾ ಎಂದು ಕಿಡಿಕಿಡಿಯಾದರು.
ಹೆಸರುಗಳನ್ನು ಹೇಳದಿದ್ದರೂ ಅವರ ಭಾಷಣ ಕೇಳುವಾಗ ನಿಮಗೆ ರೋಹಿತ್ ವೇಮುಲಾರಿಂದ ಹಿಡಿದು ಕನ್ಹಯ್ಯ, ಮುನಾವರ್, ಸುಧಾ ಭಾರದ್ವಾಜ್, ಉಮರ್ ಖಾಲಿದ್ ವರವರರಾವ್, ಶಶಿ ತರೂರ್, ರಾಜದೀಪ್ ಸರದೇಸಾಯಿ, ಆನಂದ್ ತೇಲ್ತುಂಬೆವರೆಗೆ ಪ್ರಭುತ್ವದ ಕ್ರೌರ್ಯಕ್ಕೆ ಬಲಿಯಾದವರ, ಕೇಸು ಎದುರಿಸುತ್ತಿರುವವರ, ಜೈಲು ಸೇರಿರುವವರ ಮುಖಗಳೆಲ್ಲ ಕಣ್ಣಮುಂದೆ ಹಾದು ಹೋದಂತಾಗುತ್ತದೆ. ಕ್ರೂರ UAPA ಕಾಯ್ದೆ ಮತ್ತು ಬ್ರಿಟಿಷರ‌‌ ಕಾಲದ ರಾಜದ್ರೋಹದ ಸೆಕ್ಷನ್ ಗಳನ್ನು ಸರ್ಕಾರ ಹೇಗೆ ನಿರ್ಲಜ್ಜತೆಯಿಂದ ಬಳಸಿಕೊಳ್ಳುತ್ತಿದೆ ಎಂಬುದನ್ನು ಮಹುವಾ ಹೇಳುತ್ತ ಹೋದರು. ಒಟ್ಟಾರೆಯಾಗಿ ಮಹುವಾ ಎಲ್ಲರ ಪರವಾಗಿ ಮಾತನಾಡಿದರು.
ಮಹುವಾ ಭಾಷಣ ಮಾಡುವಾಗ ಸಭಾಧ್ಯಕ್ಷ ಸ್ಥಾನದಲ್ಲಿ ಕುಳಿತಿದ್ದಿದ್ದು ಕೇರಳದ ಸಂಸದ ಎನ್.ಕೆ.ಪ್ರೇಮಚಂದ್ರನ್. Revolutionary Socialist Party ಸದಸ್ಯರು. ಕೊನೆಯಾದಾಗಿ ಸಮಯಾವಕಾಶ ಮುಗಿದು ಭಾಷಣ ನಿಲ್ಲಿಸಲು ಹೇಳಿದಾಗ ಮಹುವಾ ಟೇಬಲ್ಗುದ್ದಿ ‘ರಿಪೀಲ್ ಆರ್ ನಂಥಿಂಗ್’ ಎಂದು ಅಬ್ಬರಿಸಿ ಕುಳಿತುಕೊಂಡರು. ಪ್ರೇಮಚಂದ್ರನ್ ‘ವೆರಿ‌ಗುಡ್’ ಎಂದರು. ಅವರು ವೆರಿಗುಡ್ ಎಂದಿದ್ದು ಭಾಷಣ ನಿಲ್ಲಿಸಿದ್ದಕ್ಕಾ? ಅಥವಾ ಇಡಿಯ ಭಾಷಣಕ್ಕಾ? ಅದು ನಮ್ಮ ಊಹೆಗೆ ಬಿಟ್ಟ ವಿಷಯ.
ನಾವು ಪ್ರಜಾಪ್ರಭುತ್ವವಾದಿಗಳು ಮಹುವಾ ಮೊಯಿತ್ರ ಭಾಷಣವನ್ನು ಇಷ್ಟಪಡುವುದಕ್ಕೆ ಹಲವು ಕಾರಣಗಳಿವೆ. ಇಡೀ ದೇಶದಲ್ಲಿ ಪ್ರಜಾಸತ್ತೆ ಸತ್ತೇ ಹೋಯಿತು ಎಂಬ ಭೀತಿ ಆವರಿಸಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ, ಮಹುವಾ ಭಾಷಣ ನಿಜಕ್ಕೂ ಸಣ್ಣ ಧೈರ್ಯ ತುಂಬುತ್ತದೆ. ಒಂದು ಸಣ್ಣ ಕಿಡಿ ಜ್ವಾಲೆಯಾಗಿ ಹರಡುವುದಲ್ಲವೇ? ಮಹುವಾ ಅವರ ಧೈರ್ಯದ ಭಾಷಣ ನೂರಾರು ಭೀತಿ ತೊರೆದು ಮಾತನಾಡಲು ಶಕ್ತಿ ತುಂಬಬಹುದು.
ನಿಮಗೇನನ್ನಿಸುತ್ತದೆ, ತಪ್ಪದೇ ಹೇಳಿ. ಏನಾದರೂ ಮರೆತಿದ್ದರೆ ಸೇರಿಸಿ.
Please follow and like us:
error