fbpx

ಬ್ರೆಜಿಲ್ ಅಧ್ಯಕ್ಷ ಜೇರ್ ಬೋಲ್ಸನಾರೋ ಕರೋನಾ ಸೋಂಕಿತ

ಬ್ರೆಜಿಲ್ ಅಧ್ಯಕ್ಷ ಜೇರ್ ಬೋಲ್ಸನಾರೋ ಕರೋನಾ ಸೋಂಕಿತನಾಗಿದ್ದಾನೆ. ಬೋಲ್ಸನಾರೋ ಕರೋನಾ ಶುರುವಾದಾಗಿನಿಂದ ಹುಚ್ಚುಹುಚ್ಚಾಗಿ ಹೇಳಿಕೆ ನೀಡುತ್ತ ಬಂದವನು. ಇದೊಂದು ಸಣ್ಣ ಫ್ಲೂ ಕಣ್ರೀ, ಸಣ್ಣ ಶೀತ. ಅದಕ್ಕೆ ಯಾಕೆ ತಲೆಕೆಡಿಸಿಕೊಳ್ಳಬೇಕು ಎನ್ನುತ್ತಿದ್ದ ಬೋಲ್ಸನಾರೋ. ಕರೋನಾ‌ ನನಗೆ ಏನನ್ನೂ ಮಾಡೋದಿಲ್ಲ. ನಾನು ಫಿಜಿಕಲಿ ಫಿಟ್ ಆಗಿದ್ದೇನೆ. ಒಂದು ಕಾಲದಲ್ಲಿ ಅಥ್ಲೀಟ್ ಆಗಿದ್ದವನು ನಾನು. ನಂಗೇನೂ ಆಗಲ್ಲ ಎನ್ನುತ್ತಿದ್ದ. ಅವನು ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಚಾರ ಮಾಡುತ್ತಿದ್ದಾಗ ‘ಮಾನಸಿಕ ಅಸ್ವಸ್ಥ’ನೊಬ್ಬ ಇರಿದಿದ್ದ. ಆ ಘಟನೆಯನ್ನು ಥಳುಕು ಹಾಕಿ, ನಾನು ಚೂರಿ ಇರಿಸಿಕೊಂಡು ಬದುಕಿ‌ ಬಂದವನು, ಕರೋನಾ ಏನು ಮಾಡುತ್ತೆ ಎಂದು ವಿಚಿತ್ರ ತರ್ಕ ಮುಂದಿಡುತ್ತಿದ್ದ.

ಎಲ್ಲ‌ ದೇಶಗಳು ಮಾಸ್ಕ್ ಕಡ್ಡಾಯಗೊಳಿಸುತ್ತಿದ್ದರೆ ಇವನು ಮಾತ್ರ ಅದಕ್ಕೆ ವಿರೋಧವಾಗಿದ್ದ. ಕಳೆದ ಸೋಮವಾರವಷ್ಟೇ ಮಾಸ್ಕ್ ಕುರಿತಾದ ಕಾನೂನಿಗೆ ಬೋಲ್ಸನಾರೋ ಅಸಮ್ಮತಿ ಸೂಚಿಸಿದ್ದ. ಅಷ್ಟು ಮಾತ್ರವಲ್ಲ, ಬೇಕೆಂದೇ ದಿನವೂ ಮಾಸ್ಕ್ ಧರಿಸದೇ ತನ್ನ ಬೆಂಬಲಿಗರನ್ನು ಭೇಟಿ ಮಾಡುವುದು, ಹ್ಯಾಂಡ್ ಶೇಕ್ ಮಾಡುವುದನ್ನು ಇಟ್ಟುಕೊಂಡಿದ್ದ. ಭಾನುವಾರ ಅಮೆರಿಕ ರಾಯಭಾರಿ ಕಚೇರಿಯಲ್ಲಿ ಪಾರ್ಟಿ ಕೂಡ ನಡೆಸಿದ. ಅಮೆರಿಕ ರಾಯಭಾರಿಯನ್ನು ತಬ್ಬಿಕೊಂಡಿರುವ, ಮಾಸ್ಕ್ ಇಲ್ಲದೆ ಹಲವರು ಒಟ್ಟಿಗೆ ಇರುವ ಚಿತ್ರಗಳು ವೈರಲ್ ಆಗಿದ್ದವು.

ಆದರೆ ಕರೋನಾ ಬೋಲ್ಸನಾರೋವನ್ನು ಬಿಟ್ಟಿಲ್ಲ. ಹಿಂದೆ ಮೂರು‌ಬಾರಿ ಕರೋನಾ ಪರೀಕ್ಷೆಗೆ ಒಳಗಾಗಿದ್ದಾಗ ನೆಗಟಿವ್ ರಿಸಲ್ಟ್ ಬಂದಿತ್ತು. ಆಗ ಯಾವ ಸಿಂಪ್ಟಮ್ಸ್ ಇರಲಿಲ್ಲ. ಈಗ ಸಿಂಪ್ಟಮ್ಸ್ ಶುರುವಾಗಿದೆ. ಜ್ವರ ಬಂದು ಹೋಗಿದೆ. ಆಗಲೂ ಬೋಲ್ಸನಾರೋ ಉಡಾಫೆ ಮಾಡಿ, ಜ್ವರ ಬಂದುಹೋಗಿದೆ, ನಾನು 100% ಫಿಟ್ ಆಗಿದ್ದೇನೆ ಎಂದು ಹೇಳಿದ್ದ. ನಂತರ ಜ್ವರ ಮರುಕಳಿಸಿದೆ, ಕರೋನಾದ ಸಿಂಪ್ಟಮ್ಸ್ ಗಳೆಲ್ಲ ಕಾಣಿಸಿಕೊಂಡಿವೆ. ಮತ್ತೆ ಪರೀಕ್ಷೆ ಮಾಡಿಸಿಕೊಂಡಾಗ ಪಾಜಿಟಿವ್ ಬಂದಿದೆ.

ಬೋಲ್ಸನಾರೋ ಚಿಕಿತ್ಸೆ ಪಡೆದು ಹುಶಾರಾಗಬಹುದು, ಅದು ಬೇರೆ ವಿಷಯ. ಆದರೆ ಅವನು ತನ್ನ ದುರಹಂಕಾರದಿಂದ ಬ್ರೆಜಲಿಯನ್ನರನ್ನು ಎಂಥ ಅಪಾಯಕ್ಕೆ ದೂಡಿದ್ದಾನೆಂದರೆ ಅದಕ್ಕೆ ಕ್ಷಮೆಯೇ ಇಲ್ಲ. ಇಪ್ಪತ್ತೊಂದು ಕೋಟಿ ಜನಸಂಖ್ಯೆಯ ದೇಶ ಬ್ರೆಜಿಲ್. ಈಗಾಗಲೇ ಹದಿನಾರು ಲಕ್ಷ ಜನ‌ ಸೋಂಕಿತರು, ಅದರಲ್ಲಿ ಅರವತ್ತೈದು ಸಾವಿರ ಮಂದಿ ಮೃತಪಟ್ಟಿದ್ದಾರೆ. ಇಷ್ಟೆಲ್ಲ ಆದ ಮೇಲೂ ಇಷ್ಟೊಂದು ಉಡಾಫೆಯಲ್ಲಿ ಮಾತನಾಡುವುದು ದೇಶದ ನಾಯಕನಿಗೆ ಹೇಗೆ ಸಾಧ್ಯ? ನಮ್ಮದು ಉಷ್ಣಾಂಶ ಹೆಚ್ಚಿರುವ ದೇಶ, ಕರೋನಾ ನಮ್ಮ ದೇಶಕ್ಕೆ ಬಂದರೆ ಸುಟ್ಟುಹೋಗುತ್ತದೆ ಎಂದು ಮಾರ್ಚ್ ನಲ್ಲಿ ಹೇಳಿದ್ದ. ಇವನು ತನ್ನ ಉಡಾಫೆಗೆ ತನ್ನನ್ನು ತಾನು ಬಲಿಯಾಗಿಸಿಕೊಳ್ಳಲಿ, ಆದರೆ ಸಾಮಾನ್ಯ ಜನರು? ಅವರನ್ನೇಕೆ ಬಲಿಪೀಠದ ಮೇಲೆ ನಿಲ್ಲಿಸಿದ?

ತಮಾಶೆ ಏನು ಗೊತ್ತ? ಇವನ ಹಿರಿಯಣ್ಣ ಟ್ರಂಪ್, ಹೈಡ್ರಾಕ್ಸಿ ಕ್ಲೋರೋಕ್ವಿನ್ ಎಂದು ಕೂಗಾಡಿದ್ದೆಲ್ಲ ನೆನಪಿದೆಯಲ್ಲ, ಥೇಟ್ ಅದೇ ರೀತಿ ಇವನೂ ಸಹ ಹೈಡ್ರಾಕ್ಸಿಕ್ಲೋರೋಕ್ವಿನ್ ಭಜನೆ ಮಾಡಿದ್ದ. ವೈದ್ಯಕೀಯ ಸಮುದಾಯ ಕರೋನಾಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯಾಗಬಹುದೆ ಎಂಬುದನ್ನು ಖಚಿತಪಡಿಸುವ ಮೊದಲೇ ಈ ಇಬ್ಬರೂ ಅದೇ ಔಷಧ ಎಂದು ಮುಠ್ಠಾಳರಂತೆ ಸಾರಿದ್ದರು. ಈ ಬೋಲ್ಸನಾರೋ ಅಂತೂ ಹೈಡ್ರಾಕ್ಸಿಕ್ಲೋರೋಕ್ವಿನ್ ‘ದೇವರು ಕಳಿಸಿದ ಸಂಜೀವಿನಿ’ ಎಂದು ಹೇಳಿದ್ದ. ಇಂಡಿಯಾದಿಂದ ಹೈಡ್ರಾಕ್ಸಿಕ್ಲೋರೋಕ್ವಿನ್ ತರಿಸಿ ಕರೋನಾ ಓಡಿಸುವುದಾಗಿ ಹೇಳಿದ್ದ.

ಜಗತ್ತಿನ ತುಂಬೆಲ್ಲ ಇಂಥ ತಿಕ್ಕಲು ದೊರೆಗಳೇ ಆಳುತ್ತಿರುವಾಗ ಕರೋನಾದಂಥ ದೊಡ್ಡ ರೋಗ ಬಾರದೇ ಇರುತ್ತದೆಯೇ?

 

Please follow and like us:
error
error: Content is protected !!