ಬಹುತ್ವ ಭಾರತದ ಬೆರಗು- ಗುಲ್ಝಾರ್

‘‘ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಅಸ್ಥಿರತೆ, ಅಸಹಿಷ್ಣುತೆ, ಭಯದ ವಾತಾವರಣ ಭಾರತದ ಇತಿಹಾಸದಲ್ಲೇ ಹಿಂದೆಂದೂ ಸೃಷ್ಟಿಯಾಗಿರಲಿಲ್ಲ’’ -ಹೀಗೆಂದವರು ಕವಿ, ಕತೆಗಾರ, ಚಲನಚಿತ್ರ ನಿರ್ದೇಶಕ ಗುಲ್ಝಾರ್. ಭಾರತದ ಸಂದರ್ಭದಲ್ಲಿ ಹೀಗೆ ಭಿನ್ನ ಧ್ವನಿಯನ್ನು, ಪ್ರಭುತ್ವದ ವಿರುದ್ಧದ ಬಂಡಾಯವನ್ನು ಗುಲ್ಝಾರ್ ಅಂತಹವರು ಆಗಾಗ ವ್ಯಕ್ತಪಡಿಸುವುದು ಬಹುತ್ವ ಭಾರತದ ಬಹುಮುಖ್ಯ ಗುಣವೇ ಆಗಿದೆ. ಅದರಲ್ಲೂ ಕವಿ ಹೃದಯದ, ಸೂಕ್ಷ್ಮ ಸ್ವಭಾವದ, ಸಂವೇದನಾಶೀಲ ಗುಲ್ಝಾರ್ ಅವರಿಂದ ಇಂತಹ ಹೇಳಿಕೆ ಬರುತ್ತದೆಂದರೆ; ಅದು ಭಾರತೀಯರ ತುಮುಲ, ತಳಮಳ ತಾರಕಕ್ಕೇರಿದಾಗ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಹಾಗೆಯೇ ಬಾಯಿ ಕಟ್ಟಿದ ಭಾರತೀಯರ ಪ್ರತಿನಿಧಿಯಾಗಿ ಗುಲ್ಝಾರ್ ಮಾತನಾಡುತ್ತಿದ್ದಾರೆಂದು ಭಾವಿಸಬೇಕಾಗಿದೆ.
ಆಶ್ಚರ್ಯಕರ ಸಂಗತಿ ಎಂದರೆ, ಪ್ರಸ್ತುತ ಸಂದರ್ಭದಲ್ಲಿ ಇದು ಕೆಲವರಿಗೆ ದೇಶದ್ರೋಹದಂತೆ ಗೋಚರಿಸುತ್ತದೆ. ಮೂದಲಿಕೆ, ಟೀಕೆ, ಗೇಲಿಗೂ ಒಳಗಾಗುತ್ತದೆ. ಪ್ರತಿರೋಧ ಮತ್ತು ಮೂದಲಿಕೆಗಳ ನಡುವೆಯೇ, ಬಹುಮುಖಿ ಭಾರತದ ಆತ್ಮವನ್ನು ಅರಿತ ಗುಲ್ಝಾರ್ ಅಂಥವರ ಎಚ್ಚರದ ನಡೆಗಳೇ ಭಾರತವನ್ನು, ಭಾರತೀಯರನ್ನು ಜಾಗೃತಾವಸ್ಥೆಯಲ್ಲಿಟ್ಟಿದೆ ಎಂದರೆ ಉತ್ಪ್ರೇಕ್ಷೆಯಾಗಲಾರದು. ಇಂತಹ ಗುಲ್ಝಾರ್ ಇಂದು 85 ವಸಂತಗಳನ್ನು ಪೂರೈಸಿ, 86ಕ್ಕೆ ಕಾಲಿಡುತ್ತಿದ್ದಾರೆ.
ಗುಲ್ಝಾರ್ ಎಂದಾಕ್ಷಣ ಗಿಬ್ರಾನ್, ಗಾಲಿಬ್, ಉರ್ದು, ಸೂಫಿಸಂ ನೆನಪಾಗುವುದು ಸಹಜ. ಆ ಕಾರಣಕ್ಕಾಗಿಯೇ ಹಲವರು ಗುಲ್ಝಾರ್ ನಡೆ-ನುಡಿಯನ್ನು ಅನುಮಾನದಿಂದ ಕಂಡು, ಮುಸ್ಲಿಂ ಎಂದು ಭ್ರಮಿಸಿ, ದೇಶದ್ರೋಹಿಯ ಪಟ್ಟ ಕಟ್ಟುವುದೂ ಉಂಟು. ಅಸಲಿಗೆ ಗುಲ್ಝಾರ್ ಮುಸ್ಲಿಮರಲ್ಲ. ಮುಸ್ಲಿಮರೂ ದೇಶವಾಸಿಗಳೇ ಎಂದು ಭಾವಿಸುವ ಸಿಖ್ ಧರ್ಮೀಯರು. 1934ರ ಆಗಸ್ಟ್ 18ರಂದು ಅವಿಭಜಿತ ಭಾರತದ, ಈಗ ಪಾಕಿಸ್ತಾನದಲ್ಲಿರುವ ದಿನಾ ಎಂಬಲ್ಲಿ ಜನಿಸಿದವರು. ಅವರ ನಿಜನಾಮಧೇಯ ಸಂಪೂರನ್ ಸಿಂಗ್ ಕಾಲ್ರಾ. ತಂದೆ ಮಖ್ಖನ್ ಸಿಂಗ್ ಕಾಲ್ರಾ ವ್ಯಾಪಾರಸ್ಥರು. ಭಾರತ-ಪಾಕಿಸ್ತಾನ ವಿಭಜನೆಯ ಸಂದರ್ಭದಲ್ಲಿ, ಹಿಂದೂ-ಮುಸ್ಲಿಂ ಗಲಭೆಗಳಿಂದಾಗಿ ಪಾಕಿಸ್ತಾನವನ್ನು ತೊರೆದು ಬರಿಗೈಲಿ ಭಾರತಕ್ಕೆ ಬಂದವರು. ಪಂಜಾಬಿನ ಅಮೃತಸರದಲ್ಲಿ ನೆಲೆ ನಿಂತು, ಬದುಕಿಗಾಗಿ ಬಟ್ಟೆ ಅಂಗಡಿ ತೆರೆದವರು. ಗುಲ್ಝಾರ್ ತಂದೆಗೆ ಮೂವರು ಮಡದಿಯರು, ಮನೆ ತುಂಬಾ ಮಕ್ಕಳು. ಗುಲ್ಝಾರ್ ಎರಡನೆ ಹೆಂಡತಿಯ ಮಗ. ತಾಯಿಯ ಮಮತೆಯಿಂದ ವಂಚಿತರಾಗಿ, ಮಲತಾಯಿಯ ನಿರ್ಲಕ್ಷ್ಯಕ್ಕೊಳಗಾಗಿ ಒಬ್ಬಂಟಿಯಾಗಿ ಬೆಳೆದವರು. ಕೈಗೆ ಸಿಕ್ಕ ಪುಸ್ತಕಗಳೇ ಸ್ನೇಹಿತರಾಗಿ, ಓದಿನ ಗೀಳಿಗೆ ಬಿದ್ದವರು. ಪುಸ್ತಕಗಳನ್ನು ಓದುವುದಕ್ಕಾಗಿಯೇ ಬೆಂಗಾಲಿ ಕಲಿತರು. ಬೀದಿ ಉರ್ದು-ಹಿಂದಿ ಕಲಿಸಿತು. ಮನೆ ಭಾಷೆ ಪಂಜಾಬಿ. ಕುಟುಂಬದೊಳಗಿನ ಕದನ, ಬಡತನದಿಂದಾಗಿ ಸ್ಕೂಲ್ ಬಿಟ್ಟು, ಮನೆ ತೊರೆದು, ಕೆಲಸ ಅರಸಿ ಮುಂಬೈಗೆ ಬಂದರು.
‘‘ನನಗೆ ಬಣ್ಣಗಳೊಂದಿಗೆ ಆಡುವ ಆಟ ಗೊತ್ತಾಗಿದ್ದೇ ನಾನು ಕಾರ್ ಗ್ಯಾರೇಜಿನಲ್ಲಿ ಅಪಘಾತಕ್ಕೊಳಗಾದ ಕಾರುಗಳಿಗೆ ಬಣ್ಣ ಹಚ್ಚುವಾಗ’’ ಎನ್ನುವ ಗುಲ್ಝಾರ್, ಅಮೃತಸರದಿಂದ ಮುಂಬೈಗೆ ಬಂದು ಕಾರ್ ಗ್ಯಾರೇಜಿನಲ್ಲಿ ಕಾರ್ಮಿಕನಾಗಿ ಕೆಲಸ ನಿರ್ವಹಿಸಿದ್ದನ್ನು ಹೆಮ್ಮೆಯಿಂದ ಹೇಳಿಕೊಳ್ಳುವುದುಂಟು. ಬಾಲ್ಯದ ಅನಾಥಪ್ರಜ್ಞೆ ಮತ್ತು ಅಲೆಮಾರಿ ಬದುಕಿನಿಂದ ಅವರು ಕಲಿತದ್ದು ಅಪಾರ. ಗ್ಯಾರೇಜಿನ ಕೆಲಸದ ಬಿಡುವಿನ ವೇಳೆಯಲ್ಲಿ ಮತ್ತೆ ಪುಸ್ತಕಗಳ ಓದಿನ ಹಾದಿಗೆ ಮರಳಿದ ಗುಲ್ಝಾರ್‌ಗೆ, ರವೀಂದ್ರನಾಥ ಟಾಗೋರರ ಕೃತಿಗಳು ಬದುಕನ್ನು ಬೇರೆಯೇ ದಿಕ್ಕಿನಲ್ಲಿ ನೋಡುವುದನ್ನು ಕಲಿಸಿದವು. ಅಲ್ಲಿಂದ ಬರೆಯುವುದನ್ನು ರೂಢಿಸಿಕೊಂಡರು. ಬರೆದದ್ದಕ್ಕೆ ‘ಗುಲ್ಝಾರ್ ದೀನ್ವಿ’ ಎಂಬ ಅಂಕಿತನಾಮ ಬಳಸಿದರು. ನಂತರ ಅದು ‘ಗುಲ್ಝಾರ್’ ಆಯಿತು.
ಕಾರ್ ಗ್ಯಾರೇಜಿನಲ್ಲಿ ಕೆಲಸ ಮಾಡುತ್ತಿರುವಾಗಲೇ, ಹತ್ತಿರದ ಕೂವರ್ ಲಾಡ್ಜ್‌ಗೆ ಹೋಗುವುದು ಅಭ್ಯಾಸವಾಯಿತು. ಅದು ಆ ಕಾಲಕ್ಕೆ ಮುಂಬೈ ಚಿತ್ರರಂಗದ ಕೆಲ ನಟ-ನಟಿಯರ, ತಂತ್ರಜ್ಞರ ತಂಗುದಾಣವಾಗಿತ್ತು. ಅಲ್ಲಿ ನಟ ಓಂಪ್ರಕಾಶ್, ಬಾಲರಾಜ್ ಸಹಾನಿ, ಮಜರೂಹ್ ಸುಲ್ತಾನ್‌ಪುರಿ ಮುಂತಾದವರ ಪರಿಚಯವಾಯಿತು. ನಂತರ ಬರೆಯಲು ಆರಂಭಿಸಿದಾಗ ‘ಪ್ರಗತಿಪರ ಬರಹಗಾರರ ವೇದಿಕೆ’ಯ ಸದಸ್ಯನಾಗಿ, ಪ್ರತಿ ರವಿವಾರ ಚರ್ಚೆಯಲ್ಲಿ ಪಾಲ್ಗೊಳ್ಳುವಂತಾಗಿ, ಅಲ್ಲಿ ಸಾಹಿರ್ ಲೂದಿಯಾನ್ವಿ, ಹೃಷಿಕೇಷ್ ಮುಖರ್ಜಿ, ಬಿಮಲ್ ರಾಯ್ ಸಂಪರ್ಕಕ್ಕೆ ಸಿಕ್ಕರು. ಗುಲ್ಝಾರ್‌ರ ಬರವಣಿಗೆಯನ್ನು ಗಮನಿಸಿದ ಇವರು ಸಿನೆಮಾ ಕ್ಷೇತ್ರಕ್ಕೆ ಬರಲು ಪ್ರೇರೇಪಿಸಿದರು.
1963ರಲ್ಲಿ, ಬಿಮಲ್ ರಾಯ್ ‘ಬಾಂದಿನಿ’ ಚಿತ್ರ ಮಾಡುವಾಗ, ಮೊತ್ತ ಮೊದಲ ಬಾರಿಗೆ ಗುಲ್ಝಾರ್ ಅವರಿಗೆ ಗೀತರಚನೆಗೆ ಅವಕಾಶ ಮಾಡಿಕೊಟ್ಟರು. ಎಸ್.ಡಿ.ಬರ್ಮನ್ ಸಂಗೀತ ನಿರ್ದೇಶಕರಾಗಿದ್ದ ಆ ಚಿತ್ರಕ್ಕೆ ಗುಲ್ಝಾರ್ ‘‘ಮೋರಾ ಗೋರ ಆಂಗ್ ಲಾಯ್ಲೆ’’ ಗೀತೆ ರಚನೆ ಮಾಡುವ ಮೂಲಕ ಚಿತ್ರಜಗತ್ತಿಗೆ ಅಡಿಯಿಟ್ಟರು. ಲತಾ ಮಂಗೇಶ್ಕರ್ ಹಾಡಿದ್ದ, ನೂತನ್ ನಟಿಸಿದ್ದ ಈ ಹಾಡು ಜನಮನ್ನಣೆ ಗಳಿಸಿತು. ಇಲ್ಲಿಂದ ಮುಂದಕ್ಕೆ ಗುಲ್ಝಾರ್ ಗೀತರಚನೆಕಾರರಾಗಿ ಹಾಗೂ ಬಿಮಲ್ ರಾಯ್ರ ಸಹನಿರ್ದೇಶಕರಾಗಿ ಚಿತ್ರರಂಗದ ಒಳ-ಹೊರಗನ್ನು ಅರಿಯುತ್ತಾ, ಅರಗಿಸಿಕೊಳ್ಳುತ್ತಾ ಸಾಗಿದರು. ಅವರು ಅನುಭವಿಸಿದ ಅವಮಾನ ಮತ್ತು ಸುತ್ತಲಿನ ಜನರ ಸಹಕಾರವೇ ಚಿತ್ರೋದ್ಯಮದಲ್ಲಿ ಗುಲ್ಝಾರ್ ಗಟ್ಟಿಯಾಗಿ ನೆಲೆಯೂರಲು ನೆರವಿಗೆ ನಿಂತವು.
1968ರಲ್ಲಿ, ಬಿಮಲ್ ರಾಯ್ ಶಿಷ್ಯ ಹೃಷಿಕೇಷ್ ಮುಖರ್ಜಿ ‘ಆಶೀರ್ವಾದ್’ ಚಿತ್ರ ಮಾಡುವಾಗ ಸಂಭಾಷಣೆ ಮತ್ತು ಗೀತರಚನೆಯ ಜವಾಬ್ದಾರಿಯನ್ನು ಗುಲ್ಝಾರ್‌ಗೆ ವಹಿಸಿದರು. ಆ ಚಿತ್ರದ ಅವರ ಕಾವ್ಯಾತ್ಮಕ ಸಂಭಾಷಣೆ, ಚಿತ್ರದ ನಾಯಕನಟ ಅಶೋಕ್‌ಕುಮಾರ್‌ಗೆ ಪ್ರಶಂಸೆ-ಪ್ರಶಸ್ತಿಗಳನ್ನು ತಂದುಕೊಟ್ಟಿತು. ಅಷ್ಟಾದರೂ ಗುಲ್ಝಾರ್ ಹತ್ತರಲ್ಲಿ ಹನ್ನೊಂದನೆಯವರಾಗಿಯೇ ಉಳಿದರು. ಆದರೆ 1971ರಲ್ಲಿ ಬಂದ ‘ಗುಡಿ’್ಡ ಚಿತ್ರದ ‘‘ಹಮ್ಕೊ ಮನ್ ಕಿ ಶಕ್ತಿ ದೇನಾ’’ ಹಾಡು ದಿನಬೆಳಗಾಗುವುದರೊಳಗೆ ಜನಪ್ರಿಯವಾಯಿತು. ಅದು ಇಂದಿಗೂ ಶಾಲೆಗಳಲ್ಲಿ ಪ್ರಾರ್ಥನಾ ಗೀತೆಯಾಗಿ ಚಾಲ್ತಿಯಲ್ಲಿರುವುದನ್ನು ಗಮನಿಸಬಹುದು.
ಹಾಗೆ ನೋಡಿದರೆ ಗುಲ್ಝಾರ್ ಅವರ ಗೀತಸಾಹಿತ್ಯದಲ್ಲಿ ಸಾಹಿರ್ ಲೂದಿಯಾನ್ವಿ, ಮಜರೂಹ್ ಸುಲ್ತಾನ್‌ಪುರಿ, ಕೈಫಿ ಅಜ್ಮಿ, ಕಮಲ್ ಅಮ್ರೋಹಿ, ಉರ್ದು ಕಾವ್ಯ, ಸೂಫಿಸಂ ಎಲ್ಲದರ ಪ್ರಭಾವ ಹಾಗೂ ಪ್ರೇರಣೆ ಇದೆ. ಜೊತೆಗೆ ಸಂಗೀತ ನಿರ್ದೇಶಕರಾದ ಎಸ್.ಡಿ.ಬರ್ಮನ್‌ರಿಂದ ಹಿಡಿದು ಎ.ಆರ್.ರೆಹಮಾನ್‌ವರೆಗೆ; ನಾಯಕನಟರಾದ ಅಶೋಕ್‌ಕುಮಾರ್‌ರಿಂದ ಹಿಡಿದು ಅಭಿಷೇಕ್ ಬಚ್ಚನ್‌ವರೆಗೆ; ನಿರ್ದೇಶಕರಾದ ಬಿಮಲ್ ರಾಯ್ರಿಂದ ಹಿಡಿದು ಮಣಿರತ್ನಂವರೆಗೆ.. ಎಲ್ಲರ ಸಹಕಾರವೂ ಇದೆ. ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದೆ. ಹೀಗಾಗಿ ಗುಲ್ಝಾರ್ ಅವರ ಹಾಡುಗಳು ಅವರನ್ನೂ ಬೆಳೆಸಿ ಭಾರತೀಯ ಚಿತ್ರೋದ್ಯಮದ ಬೆಳವಣಿಗೆಗೂ ಸಹಕಾರಿಯಾಗಿವೆ.

ಹೀಗೆ ಎಲ್ಲರೊಂದಿಗೆ ಬೆರೆತು ಬೆಳೆಯುವ ನಿಟ್ಟಿನಲ್ಲಿಯೇ ಗುಲ್ಝಾರ್ ಚಿತ್ರನಿರ್ದೇಶನಕ್ಕೂ ಕೈ ಹಾಕಿದರು. 1971ರಲ್ಲಿ ಮೊದಲಬಾರಿಗೆ ‘ಮೇರೆ ಅಪ್ನೆ’ ಚಿತ್ರ ನಿರ್ದೇಶಿಸಿದರು. ಮೀನಾಕುಮಾರಿ ನಾಯಕಿಯಾಗಿದ್ದ ಈ ಚಿತ್ರದಲ್ಲಿ ಕತೆ ಸತ್ವಪೂರ್ಣವಾಗಿದ್ದರೂ, ಚಿತ್ರ ಗೆಲ್ಲಲಿಲ್ಲ. ಆದರೆ ಆನಂತರ ಬಂದ ‘ಪರಿಚಯ್’, ‘ಕೋಷಿಶ್’, ‘ಅಚಾನಕ್’, ‘ಆಂಧಿ’, ‘ಮಾಸೂಮ್’, ‘ಅಂಗೂರ್’, ‘ಮಾಚಿಸ್’ ಚಿತ್ರಗಳು ಗುಲ್ಝಾರ್ ಅವರ ಸೃಜನಶೀಲ ಪ್ರತಿಭೆಯನ್ನು ಜಗಜ್ಜಾಹೀರು ಮಾಡಿದವು. ‘ಆಂಧಿ’ ತುರ್ತು ಪರಿಸ್ಥಿತಿ ಕಾಲದ ವಿವಾದಾತ್ಮಕ ಚಿತ್ರವಾದರೆ, ‘ಅಂಗೂರ್’ ಹಾಸ್ಯಪ್ರಧಾನ ಚಿತ್ರವಾಗಿ ಸಾಮಾನ್ಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ‘ಮಾಚಿಸ್’ ಚಿತ್ರವಂತೂ, ಪಂಜಾಬಿನ ಉಗ್ರವಾದಿ ಗುಂಪುಗಳು ಪ್ರತ್ಯೇಕ ಖಾಲಿಸ್ತಾನ್ ದೇಶಕ್ಕೆ ಆಗ್ರಹಿಸಿ ಹೋರಾಟ ಪ್ರಾರಂಭಿಸಿದಾಗ, ಉಗ್ರರ ವ್ಯಥೆಗೆ ಕಾರಣಗಳನ್ನು ಹುಡುಕುವ ಚಿತ್ರವಾಗಿ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಇಲ್ಲಿಯವರೆಗೆ ಗುಲ್ಝಾರ್ 17 ಚಿತ್ರಗಳನ್ನು ನಿರ್ದೇಶಿಸಿದ್ದರೂ, ಗೆಲುವಿನಷ್ಟೇ ಸೋಲಿನ ಕಹಿಯನ್ನೂ ಸ್ವೀಕರಿಸಿ, ಸಮಚಿತ್ತತೆಯನ್ನು ಕಾಪಾಡಿಕೊಂಡಿದ್ದಾರೆ. ಹಾಗೆಯೇ 70-80ರ ದಶಕಗಳ ಹಿಂದಿ ಚಲನಚಿತ್ರೋದ್ಯಮಕ್ಕೆ ಪರ್ಯಾಯ ಮಾರ್ಗ ತೋರಿದವರಲ್ಲಿ ಪ್ರಮುಖರಾಗಿದ್ದಾರೆ.

ಭಾರತ-ಪಾಕಿಸ್ತಾನದ ವಿಭಜನೆಯನ್ನು ಕಣ್ಣಾರೆ ಕಂಡಿದ್ದ ಗುಲ್ಝಾರ್, ತಾವು ಬೆಳೆದುಬಂದ ಹಾದಿಯಲ್ಲಿ ಅನುಭವಕ್ಕೆ ದಕ್ಕಿದ ವ್ಯಕ್ತಿಗಳನ್ನು, ಘಟನೆಗಳನ್ನು ಚಿತ್ರದ ಕಥಾವಸ್ತುವನ್ನಾಗಿಸಿಕೊಂಡರು. ಜೊತೆಗೆ ಮನುಷ್ಯ ಸಂವೇದನೆಗಳನ್ನು ಪ್ರಧಾನವಾಗಿಟ್ಟುಕೊಂಡು, ಕಾವ್ಯಾತ್ಮಕ ಸಂಭಾಷಣೆಗಳು ಮತ್ತು ತಂಗಾಳಿಯಂತಹ ಹಾಡುಗಳ ಮೂಲಕ ಪ್ರೇಕ್ಷಕರ ಮನಗೆದ್ದರು. ತಮ್ಮದೇ ಆದ ಭಿನ್ನ ಶೈಲಿಯನ್ನು ಹುಟ್ಟುಹಾಕಿದರು. ‘ಪರಿಚಯ್’ ಚಿತ್ರದ ‘‘ಮುಸಾಫಿರ್ ಹೂ ಯಾರೋ’’, ‘ಆಂಧಿ’ಯ ‘‘ತೆರೆ ಬಿನಾ ಜಿಂದಗಿ ಸೆ ಕೊಯಿ’’, ‘ಗೋಲ್‌ಮಾಲ್’ ಚಿತ್ರದ ‘‘ಆನೆವಾಲಾ ಪಲ್ ಜಾನೇವಾಲಾ ಹೈ’’, ‘ಕಿನಾರ’ ಚಿತ್ರದ ‘‘ನಾಮ್ ಗುಮ್ ಜಾಯೇಗಾ’’, ‘ಮಾಸೂಮ್’ ಚಿತ್ರದ ‘‘ತುಜ್ಸೆ ನಾರಾಜ್ ನಹಿ ಜಿಂದಗಿ’’ ಮುಂತಾದವು ಕೇಳುಗರ ಮೆಚ್ಚಿನ ಹಾಡುಗಳ ಪಟ್ಟಿಯಲ್ಲಿದ್ದು, ಇವತ್ತಿಗೂ ಚಾಲ್ತಿಯಲ್ಲಿವೆ. ಕಳೆದ 56 ವರ್ಷಗಳಿಂದ ಹಿಂದಿ ಚಿತ್ರೋದ್ಯಮದಲ್ಲಿ ಕತೆಗಾರ, ಗೀತರಚನೆಕಾರ, ಸಂಭಾಷಣೆಕಾರ, ನಿರ್ದೇಶಕರಾಗಿ ಅಪಾರ ಜನಪ್ರಿಯತೆ ಮತ್ತು ಅಭಿಮಾನಿಗಳನ್ನು ಗಳಿಸಿರುವ ಗುಲ್ಝಾರ್, ಸಾಹಿತ್ಯ ಮತ್ತು ಸಿನೆಮಾವನ್ನು ಬೆಸೆದ ಪರಂಪರೆಯಲ್ಲಿ ಪ್ರಮುಖರು. ಗುಲ್ಝಾರ್ ಸಿನಿಕ್ಷೇತ್ರವಷ್ಟೇ ಅಲ್ಲ, ‘ಮಿರ್ಜಾ ಗಾಲಿಬ್’, ‘ತಾಹೀರ್ ಮುನ್ಷಿ ಪ್ರೇಮಚಂದ್ ಕಿ’, ‘ಹಲೋ ಜಿಂದಗಿ’, ‘ಪೋತಿ ಬಾಬಾ ಕಿ’ ಮತ್ತು ‘ಜಂಗಲ್ ಬುಕ್’ ಸೇರಿದಂತೆ ಹಲವಾರು ಟೆಲಿ ಧಾರಾವಾಹಿಗಳಿಗೂ ಕೆಲಸ ಮಾಡಿದ್ದಾರೆ. ಅದರಲ್ಲೂ ಅವರಿಷ್ಟದ ಕವಿ ಮಿರ್ಜಾ ಗಾಲಿಬ್ ಕುರಿತ ಟೆಲಿ ಧಾರಾವಾಹಿಯನ್ನು, ತಮ್ಮೆಲ್ಲ ಬುದ್ಧಿಯನ್ನು ಬಸಿದು ಗಾಲಿಬ್ ಎಂಬ ಬೆಳಕನ್ನು ಭಾರತೀಯರ ಮುಂದಿರಿಸಿದ್ದು ಅದ್ಭುತವಾಗಿದೆ. ಅದಕ್ಕೆ ನಾಸಿರುದ್ದೀನ್ ಶಾ, ಕೈಫಿ ಅಜ್ಮಿ ಮತ್ತು ಜಗಜಿತ್ ಸಿಂಗ್ ಸಾಥ್ ನೀಡಿದ್ದು ಸೂಕ್ತವಾಗಿಯೇ ಇದೆ. ಧಾರಾವಾಹಿಯಲ್ಲಿ ಕುತೂಹಲಕರ ಸನ್ನಿವೇಶವೊಂದಿದೆ. ಅದು ಗಾಲಿಬ್ ತನ್ನ ಮಡದಿ ಉಮ್ರಾವ್ ಜೊತೆಗಿನ ವೈವಾಹಿಕ ಸಂಬಂಧ ಕುರಿತಾದದ್ದು. ಗಾಲಿಬ್-ಉಮ್ರಾವ್ ಬಾಲ್ಯ ಸ್ನೇಹಿತರಾದರೂ, ಬೆಳೆಯುತ್ತ ಭಿನ್ನ ವ್ಯಕ್ತಿತ್ವವನ್ನು ರೂಢಿಸಿಕೊಂಡವರು. ಹಾಗಾಗಿ ಇಬ್ಬರ ನಡುವೆ ಸ್ನೇಹವಿದ್ದೂ ಅಂತರವೂ ಮನೆಮಾಡಿಕೊಂಡಿರುತ್ತದೆ. ಗಾಲಿಬ್‌ನ ಕುಡಿತ, ಜೂಜು ಆಕೆಯನ್ನು ದೈವಭಕ್ತೆಯನ್ನಾಗಿಸುತ್ತದೆ. ಉಮ್ರಾವ್‌ಳ ದೈವಭಕ್ತಿ ಗಾಲಿಬ್‌ನನ್ನು ಅವಳಿಂದ ವಿಮುಖನನ್ನಾಗಿಸುತ್ತದೆ. ಒಂದೇ ಮನೆಯಲ್ಲಿದ್ದರೂ ಇಬ್ಬರ ಜಗತ್ತು ಬೇರೆ ಬೇರೆ. ನೆಲಮಹಡಿಯಲ್ಲಿ ಉಮ್ರಾವ್, ಮಹಡಿ ಮೇಲೆ ಗಾಲಿಬ್ ಬದುಕುವಂತಾಗುತ್ತದೆ. ಇದನ್ನು ಗುಲ್ಝಾರ್, ಪತ್ನಿ ರಾಖಿಯೊಂದಿಗಿನ ವೈವಾಹಿಕ ಬದುಕನ್ನು, ಗಾಲಿಬ್-ಉಮ್ರಾವ್ ದಾಂಪತ್ಯದೊಂದಿಗೆ ಥಳಕುಹಾಕಿ, ರೂಪಕದಂತೆ ಬಳಸಿರುವುದನ್ನು ಗಮನಿಸಬಹುದು. ಬದುಕಿನ ದುರಂತವೆಂದರೆ, ಮಾನವೀಯ ಅಂತಃಕರಣದ ಗುಲ್ಝಾರ್, ಮನದನ್ನೆ ರಾಖಿಯ ಮನ ಗೆಲ್ಲಲಾಗದ್ದು.
ಬೆಂಗಾಲಿ ಬೆಡಗಿ, ಜನಪ್ರಿಯ ನಟಿ ರಾಖಿಯನ್ನು 1973ರಲ್ಲಿ ಮೆಚ್ಚಿ ಮದುವೆಯಾಗುವ ಗುಲ್ಝಾರ್, ಆಕೆ ಸಿನೆಮಾದಲ್ಲಿ ನಟಿಸುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ. ದಾಂಪತ್ಯ ಜೀವನ ಮಗಳು ಮೇಘನಾ ಹುಟ್ಟುವುದರೊಳಗೆ, ಒಂದು ವರ್ಷದೊಳಗೆ ಮುರಿದು ಬೀಳುತ್ತದೆ. ಆದರೆ ಅವರು ವಿಚ್ಛೇದನ ಪಡೆಯುವುದಿಲ್ಲ, ಬೇರೆಯಾಗುವುದೂ ಇಲ್ಲ. ಮಗಳು ಮೇಘನಾ ಇಬ್ಬರೊಂದಿಗೂ ಬೆಳೆಯುತ್ತಾಳೆ. ಈಗ ಮಗಳು ಮೇಘನಾ ಕೂಡ ಚಿತ್ರನಿರ್ದೇಶಕಿಯಾಗಿ ‘ಫಿಲ್ಹಾಲ್’, ‘ಜಸ್ಟ್ ಮ್ಯಾರೀಡ್’, ‘ದಸ್ ಕಹಾನಿಯಾ’, ‘ತಲ್ವಾರ್’ ಮತ್ತು ‘ರಾಝಿ’ ಚಿತ್ರಗಳ ಮೂಲಕ ಭರವಸೆಯ ನಿರ್ದೇಶಕಿಯಾಗಿ ಗುರುತಿಸಿಕೊಂಡಿದ್ದಾರೆ.
ಹಲವು ಪುಸ್ತಕಗಳನ್ನು ಪ್ರಕಟಿಸಿರುವ, ಹಿಂದಿ ಚಿತ್ರರಂಗಕ್ಕೆ ಕಾವ್ಯದ ಸಂವೇದನೆಯನ್ನು ಒದಗಿಸಿಕೊಟ್ಟ ಗುಲ್ಝಾರ್ ಸಾಬ್‌ಗೆ ಲೆಕ್ಕವಿಲ್ಲದಷ್ಟು ಪ್ರಶಸ್ತಿ ಪುರಸ್ಕಾರಗಳು ಹುಡುಕಿಕೊಂಡು ಬಂದು ಗೌರವಿಸಿವೆ. ಪಾಕಿಸ್ತಾನದಿಂದ ಭಾರತಕ್ಕೆ ಬಂದು, ಗ್ಯಾರೇಜಿನಲ್ಲಿ ಹಳೆ ಕಾರುಗಳಿಗೆ ಬಣ್ಣ ಬಳಿಯುತ್ತಿದ್ದ ಅಲೆಮಾರಿ ಹುಡುಗನೊಬ್ಬ ಬಹುಮುಖ ಪ್ರತಿಭಾವಂತನಾಗಿ ರೂಪುಗೊಳ್ಳುವಲ್ಲಿ; ಅಂತಃಕರಣವುಳ್ಳ ಮಾನವೀಯ ವ್ಯಕ್ತಿಯಾಗಿ ಹೊರಹೊಮ್ಮುವಲ್ಲಿ ಬಹುತ್ವ ಭಾರತ ಬಹುಮುಖ್ಯ ಪಾತ್ರ ವಹಿಸಿದೆ. ಆ ಬಹುಮುಖಿ ಭಾರತದ ಪ್ರತಿನಿಧಿಯಂತಿರುವ 86ರ ಹರೆಯದ ಗುಲ್ಝಾರ್, ನೂರ್ಕಾಲ ಬಾಳಲಿ. ಭಿನ್ನ ಧ್ವನಿಯ ಮೂಲಕ ಭಾರತದ ಮಣ್ಣಿನ ಗುಣವನ್ನು ಸಾಬೀತುಪಡಿಸುತ್ತಲೇ ಸಾಗಲಿ.

ಬಸು ಮೇಗಲಕೇರಿ

Please follow and like us:
error