ನ್ಯಾಯ ದೇವಿಯೆ, ಕಂಡೆ ನಿನ್ನ ಮಡಿಲಲ್ಲಿ ಎಂಥ ದೃಶ್ಯ?- ಡಾ. ಎಚ್. ಎಸ್. ಅನುಪಮಾ

ಬಹುಪಾಲು ಮಹಿಳಾಪರ ಸುಧಾರಣೆ-ಯೋಜನೆ-ಕಾನೂನುಗಳನ್ನು ರೂಪಿಸಿದವರು ತಾಯ್ತನದ ಮನಸಿನ ಪುರುಷರು. ಆದರೂ ವಿವಿಧ ಹಂತದ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರು ಕೊಡುವ ತೀರ್ಪು-ಸಲಹೆಗಳಲ್ಲಿ; ವಕೀಲರ ವಾದ-ಪ್ರತಿವಾದ ಧೋರಣೆಗಳಲ್ಲಿ ಇಣುಕುವ ‘ಗಂಡು ಧೋರಣೆ ಕೆಲವೊಮ್ಮೆ ಚರ್ಚೆಗೆ ಬರುತ್ತದೆ. ತಾರತಮ್ಯ ರಹಿತವಾಗಿ ನ್ಯಾಯಾನ್ಯಾಯ ತೀರ್ಮಾನ ಮಾಡಬೇಕಾದ ನ್ಯಾಯಾಧೀಶರೇ ಪುರುಷ ಪಾರಮ್ಯ ಎತ್ತಿ ಹಿಡಿವಾಗ ಪ್ರಜ್ಞಾವಂತ ಮನಸುಗಳು ಬೆಚ್ಚಿಬಿದ್ದು ನ್ಯಾಯವ್ಯವಸ್ಥೆ ಮಹಿಳಾ ವಿರೋಧಿಯಾಗತೊಡಗಿದೆಯೆ ಎಂಬ ಚರ್ಚೆ ಶುರು ಮಾಡುತ್ತವೆ.

ಪ್ರಾತಿನಿಧಿಕವಾಗಿ ನ್ಯಾಯವ್ಯವಸ್ಥೆಯಲ್ಲಿ ಕಡಿಮೆ ಸಂಖ್ಯೆಯ ದಲಿತರಿದ್ದಾರೆ. ಕಡಿಮೆ ಸಂಖ್ಯೆಯ ಆದಿವಾಸಿಗಳಿದ್ದಾರೆ. ಕಡಿಮೆ ಸಂಖ್ಯೆಯ ಹಳ್ಳಿಗರಿದ್ದಾರೆ. ಕಡಿಮೆ ಸಂಖ್ಯೆಯ ಅಲ್ಪಸಂಖ್ಯಾತ ಸಮುದಾಯದವರಿದ್ದಾರೆ. ಆದರೆ ಅಲ್ಲಿರುವ ಮಹಿಳೆಯರ ಸಂಖ್ಯೆ ಅವರ ಜನಸಂಖ್ಯೆಗನುಗುಣವಾಗಿ ತುಂಬ ಕಡಿಮೆಯಿದೆ. ಕಣ್ಣುಪಟ್ಟಿ ಕಟ್ಟಿ ತಕ್ಕಡಿ ಹಿಡಿದು ನಿಲಿಸಿದ ನ್ಯಾಯದೇವತೆಯ ಮಟ್ಟಿಗಷ್ಟೇ ಮಹಿಳಾ ಭಾಗವಹಿಸುವಿಕೆ ಮುಗಿದು ಹೋಗುತ್ತಿದೆಯೇ ಎಂದು ಆತಂಕ ಹುಟ್ಟಿಸುವಂತೆ ವಾಸ್ತವವಿದೆ.

ಮಾಜಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಫಾತಿಮಾ ಬೀವಿ ಅಥವಾ ಸುಜಾತಾ ಮನೋಹರ್ ಇರಲಿ; ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್ ಇರಲಿ; ಇತ್ತೀಚೆಗೆ ಬಾರ್ ಅಸೋಸಿಯೇಷನ್ ಪ್ರವೇಶಿಸಿ ದಿಟ್ಟ ಕಮೆಂಟುಗಳಿಂದ ಸುದ್ದಿ ಮಾಡಿದ ಅನಿಮಾ ಮುಯರತ್ ಇರಲಿ – ಸ್ವತಂತ್ರವಾಗಿ ವೃತ್ತಿ ಕೈಗೊಂಡ ಯಾವುದೇ ಮಹಿಳಾ ನ್ಯಾಯವಾದಿಯನ್ನು ಉದ್ಯೋಗ ಸ್ಥಳದಲ್ಲಿ ಅವರ ಸ್ಥಿತಿಗತಿ ಕುರಿತು ಕೇಳಿ ನೋಡಿ. ನ್ಯಾಯಾಸ್ಥಾನ ಪುರುಷ ಪ್ರಧಾನವಾಗಿರುವುದನ್ನು, ತಾವು ಪುರುಷ ದರ್ಪದ ಕಾರಣವಾಗಿ ಅನುಭವಿಸುತ್ತಿರುವ ಸಂಕಟಗಳನ್ನು ನೋವಿನಿಂದ ಹೇಳಿಕೊಳ್ಳುತ್ತಾರೆ. ಅಪರಾಧ-ಶಿಕ್ಷೆಯ ಭಾಷೆ ಮಾತ್ರ ಗೊತ್ತಿರುವ ಗಂಡುಮನಸುಗಳ ವಿರುದ್ಧ ದನಿಯೆತ್ತುವುದು, ಏನಾದರೂ ಬದಲಾವಣೆ ತರಬೇಕೆಂದು ಕನಸುವುದು ಸಾಧ್ಯವೇ ಇಲ್ಲವೆಂಬ ಸ್ಥಿತಿ ಇರುವುದನ್ನು ಹೆಸರು ಹಾಕಬಾರದೆಂಬ ಷರತ್ತಿನೊಂದಿಗೆ ಬಿಚ್ಚಿಡುತ್ತಾರೆ. ಬಹಿರಂಗವಾಗಿ ಟೀಕಿಸಿದ ಮಹಿಳೆಯರು ಪ್ರಭಾವಿಗಳಲ್ಲದಿದ್ದಲ್ಲಿ ಅವರ ವಿರುದ್ಧ ಊರೂರುಗಳಲ್ಲಿ ಮಾನನಷ್ಟ ಮೊಕದ್ದಮೆ ಜಡಿದು ಕೋರ್ಟು ಅಲೆಸಿ ಸುಸ್ತು ಮಾಡಲಾಗುತ್ತದೆ. ತಮಗೆ ಅನುಕೂಲೆಯಾಗಿರುವವರನ್ನು ಮೇಲೇರಿಸಿ, ತಮ್ಮ ದಿಕ್ತಟ ಮೀರುವ ಮಹಿಳಾ ವಕೀಲರನ್ನು ಅಲಿಖಿತ ಬಹಿಷ್ಕಾರ ಹಾಕಿ ಮೂಲೆಗುಂಪು ಮಾಡಲಾಗುತ್ತದೆ. ಕೈಬೆರಳೆಣಿಕೆಯಷ್ಟು ಮಹಿಳಾ ನ್ಯಾಯವಾದಿಗಳಷ್ಟೇ ಸ್ವತಂತ್ರವಾಗಿ, ಯಶಸ್ವಿಯಾಗಿ ಇಂಥ ಅಡೆತಡೆ ಎದುರಿಸಿ ಗೆದ್ದಿದ್ದಾರೆ. ಯಶಸ್ಸಿನ ಕಥೆಗಳಿಗಿಂತ ಸಾವಿರಪಟ್ಟು ಹೆಚ್ಚು ಮಹಿಳೆಯರು ಗಾಯಗೊಂಡ ಅನುಭವ ಹೊಂದಿದವರೇ ಇದ್ದಾರೆ.

ಇದೇಕೆ ಹೀಗಾಯಿತು? ಸಮಾನತೆಯ ಆಣೆ ಮಾಡಿ ಕಾನೂನು ಕಲಿತ ಕಾನೂನು ರಕ್ಷಕರೇಕೆ ಮಹಿಳಾ ವಿರೋಧಿ ಮನಸ್ಥಿತಿ ಹೊಂದಿದರು? ಮನುಷ್ಯನ ಮೂಲಸ್ವಭಾವವಾದ ತಾರತಮ್ಯ ಮತ್ತು ಕ್ರೌರ್ಯವನ್ನು ಬದಲಾಯಿಸಲು ಓದು ಮತ್ತು ವೃತ್ತಿ ವಿಫಲವಾಯಿತೆ? ಪುರುಷಾಧಿಕಾರವು ಅಲ್ಲಿರುವ ಮಹಿಳೆಯರ ಉಸಿರುಗಟ್ಟಿಸುತ್ತಿದೆಯೆ ಅಥವಾ ಗಮನಾರ್ಹ ಸಂಖ್ಯೆಯ ಮಹಿಳೆಯರಿಲ್ಲದಿರುವಿಕೆ ಲಿಂಗ ಸೂಕ್ಷ್ಮತೆ ಇಲ್ಲದಂತೆ ಮಾಡಿದೆಯೆ?

ನ್ಯಾಯಾಸ್ಥಾನದಲ್ಲಿರುವ ಮಹಿಳೆಯರ ಅಂಕಿಅಂಶ ಈ ಅನುಮಾನಗಳಿಗೆ ಪುಷ್ಟಿ ನೀಡುತ್ತದೆ.

ಭಾರತದಲ್ಲಿ ೧೭ ಲಕ್ಷ ಲಾಯರುಗಳು ಬಾರ್ ಕೌನ್ಸಿಲಿನಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಅದರಲ್ಲಿ ೧೦-೧೫% ಮಾತ್ರ ಮಹಿಳೆಯರಿದ್ದಾರೆ. ಯಾವ ಕಾಲಘಟ್ಟದಲ್ಲೂ ಸುಪ್ರೀಂಕೋರ್ಟಿನಲ್ಲಿ ಇಬ್ಬರಿಗಿಂತ ಹೆಚ್ಚು ನ್ಯಾಯಾಧೀಶೆಯರಿಲ್ಲ. ಈಗ ಸುಪ್ರೀಂಕೋರ್ಟಿನ ೨೫ ನ್ಯಾಯಮೂರ್ತಿಗಳಲ್ಲಿ ಜಸ್ಟಿಸ್ ಆರ್. ಭಾನುಮತಿ ಒಬ್ಬರೇ ಮಹಿಳೆ. ಇದುವರೆಗೆ ಆರು ಜನ ಮಹಿಳೆಯರಷ್ಟೇ ಸುಪ್ರೀಂಕೋರ್ಟಿನ ನ್ಯಾಯಮೂರ್ತಿಗಳಾಗಿದ್ದಾರೆ. ಭಾರತದ ಮೊದಲ ಮಹಿಳಾ ಸಾಲಿಸಿಟರ್ ಜನರಲ್ ಇಂದಿರಾ ಜೈಸಿಂಗ್ ಬಂದದ್ದು ೨೦೦೯ರಲ್ಲಿ. ಸ್ವತಂತ್ರ ಭಾರತದ ಮೊದಲ ಮಹಿಳಾ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಅನ್ನಾ ಚಾಂಡಿ ೧೯೫೯ರಲ್ಲಿ ಬಂದರು. ಆದರೆ ಸುಪ್ರೀಂಕೋರ್ಟಿನ ನ್ಯಾಯಮೂರ್ತಿಯಾಗಲು (ಫಾತಿಮಾ ಬೀವಿ (೧೯೮೯-೯೨)) ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಲು (ಲೀಲಾ ಸೇಥ್ (೧೯೯೧-೯೬)) ಮಹಿಳೆಯರು ನಾಲ್ಕೈದು ದಶಕ ಕಾಲ ಕಾಯಬೇಕಾಯಿತು. ಪ್ರಸ್ತುತ ಎರಡು ಹೈಕೋರ್ಟುಗಳಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿ ಮಹಿಳೆಯರಿದ್ದಾರೆ (ಮುಂಬಯಿಯಲ್ಲಿ ಜ. ಮಂಜುಳಾ ಚೆಲ್ಲೂರ್ ಹಾಗೂ ದೆಹಲಿಯಲ್ಲಿ ಜ. ಜಿ. ರೋಹಿಣಿ).

ಗೊತ್ತೆ? ಭಾರತದ ಕೋರ್ಟುಗಳು ೧೯೨೪ರವರೆಗೆ ಮಹಿಳೆಯರಿಗೆ ತಮ್ಮ ಬಾಗಿಲು ಮುಚ್ಚಿಕೊಂಡಿದ್ದವು! ನ್ಯಾಯವಾದಿಗಳ ಸಹಾಯಕರಾಗಿ ಮಹಿಳಾ ಬ್ಯಾರಿಸ್ಟರುಗಳು ಕೆಲಸ ಮಾಡಿಕೊಡಬಹುದಿತ್ತೇ ವಿನಹ ಕೋರ್ಟಿನೊಳ ಹೊಕ್ಕು ವಾದಿಸುವಂತಿರಲಿಲ್ಲ. ಭಾರತದ ಮೊದಲ ಬ್ಯಾರಿಸ್ಟರ್ ಮಹಿಳೆ ೧೮೯೪ರಲ್ಲಿ ಇಂಗ್ಲೆಂಡಿನ ಆಕ್ಸ್‌ಫರ್ಡಿನಲ್ಲಿ ಪದವಿ ಪಡೆದರೂ ಕೋರ್ಟು ಪ್ರವೇಶಿಸಲು ೩೦ ವರ್ಷ ಕಾಯಬೇಕಾಯಿತು! ಹೌದು. ಕಾನೂನು ಅಭ್ಯಸಿಸಿ ಪದವಿ ಪಡೆದಿದ್ದರೂ ಹೆಣ್ಣು ಎಂಬ ಕಾರಣಕ್ಕೇ ಅವರ ಜ್ಞಾನ, ಬುದ್ಧಿಮತ್ತೆ ದಂಡವೆನಿಸಿತ್ತು.

ಕಾರ್ನೆಲಿಯಾ ಸೊರಾಬ್ಜಿ

ಭಾರತದ ಅಷ್ಟೆ ಅಲ್ಲ, ಬ್ರಿಟನಿನ ಮೊತ್ತಮೊದಲ ವಕೀಲೆ ಕಾರ್ನೆಲಿಯಾ ಸೊರಾಬ್ಜಿ (೧೮೬೬-೧೯೫೪). ಅವರು ಮಹಾರಾಷ್ಟ್ರದ ನಾಸಿಕ್‌ನವರು. ಪಾರ್ಸಿ ಕ್ರೈಸ್ತ ಮಿಷನರಿ ತಂದೆ ಸೊರಾಬ್ಜಿ ಕರ್ಸೆಡ್ಜಿ ಹಾಗೂ ಮಿಷನರಿಗಳಿಂದ ದತ್ತು ತೆಗೆದುಕೊಂಡು ಬೆಳೆಸಲ್ಪಟ್ಟ ಭಾರತೀಯ ಮೂಲದ ಫ್ರಾನ್ಸಿನಾ ಫೋರ್ಡ್ ಎಂಬ ತಾಯಿಯ ಒಂಭತ್ತು ಮಕ್ಕಳಲ್ಲಿ ಒಬ್ಬಳು ಆಕೆ. ಮನೆಯಲ್ಲಿ ಹಾಗೂ ಶಾಲೆಯಲ್ಲಿ ಕಾರ್ನೆಲಿಯಾ ಇಂಗ್ಲಿಷ್ ಶಿಕ್ಷಣ ಪಡೆದು ಬೆಳೆದಳು. ಅವಳ ತಾಯಿ ಮಹಿಳಾ ಶಿಕ್ಷಣದಲ್ಲಿ ನಂಬಿಕೆಯಿಟ್ಟು ಪುಣೆಯಲ್ಲಿ ಶಾಲೆ ತೆರೆಯಲು ಸಹಾಯ ಮಾಡಿದ್ದರು. ಅವರಮ್ಮನ ಬಳಿ ಸ್ಥಳೀಯ ಹೆಣ್ಣುಮಕ್ಕಳು ತಮ್ಮ ಆಸ್ತಿವ್ಯಾಜ್ಯ ಪರಿಹಾರಕ್ಕಾಗಿ ಸಲಹೆ ಪಡೆಯಲು ಬರುತ್ತಿದ್ದರು. ಆ ಮಾತುಕತೆಗಳು ಎಳೆಯ ಕಾರ್ನೆಲಿಯಾ ಮೇಲೆ ಪ್ರಭಾವ ಬೀರಿದವು.

೧೮೮೯ರಲ್ಲಿ ಮುಂಬಯಿ ವಿಶ್ವವಿದ್ಯಾಲಯದ ಬಿಎ ಪದವಿ ಪಡೆದ ಕಾರ್ನೆಲಿಯಾ ಆ ವಿಶ್ವವಿದ್ಯಾಲಯದ ಮೊದಲ ಪದವಿ ಪಡೆದ ಮಹಿಳೆಯಾದರು. ೧೮೯೨ರಲ್ಲಿ ಆಕ್ಸ್‌ಫರ್ಡಿನಲ್ಲಿ ಬ್ಯಾರಿಸ್ಟರ್ ಪದವಿ ಪಡೆದು ದೇಶದ ಮೊದಲ ಕಾನೂನು ಪದವೀಧರೆ ಹಾಗೂ ಆಕ್ಸ್‌ಫರ್ಡ್ ಕಾನೂನು ಶಾಲೆ ಪ್ರವೇಶಿಸಿದ ಮೊತ್ತಮೊದಲ ಮಹಿಳೆ ಆದರು. ೧೮೯೪ರಲ್ಲಿ ಭಾರತಕ್ಕೆ ಮರಳಿದರೂ ಪೂರ್ಣ ಪ್ರಮಾಣದ ನ್ಯಾಯವಾದಿಯಾಗುವಂತಿರಲಿಲ್ಲ. ಸಣ್ಣಪುಟ್ಟ ಕೆಲಸಗಳಿಗೇ ತೃಪ್ತಿ ಪಡಬೇಕಿತ್ತು.

ಆಗ ಹಿಂದೂ ಸಮಾಜದ ಕೆಲವು ಪ್ರದೇಶ-ಪಂಗಡಗಳ ಮಹಿಳೆಯರು ಪರ್ದಾ ಅನುಸರಿಸುತ್ತಿದ್ದರು. ಅವರೆಲ್ಲ ಪರ್ದಾ ಹಿಂದೆಯೇ ಇದ್ದ ಅನಕ್ಷರಸ್ಥರು. ಮನೆಯ ಕೆಲ ಪುರುಷರನ್ನು ಬಿಟ್ಟರೆ ಬೇರೆ ಗಂಡಸರನ್ನು ನೋಡುವಂತಿಲ್ಲ. ಏನೇ ವ್ಯವಹಾರ ಮಾಡುವುದಾದರೂ ಅವರ ಪರವಾಗಿ ಒಬ್ಬ ಗಂಡಸು ಇದ್ದರಷ್ಟೇ ಅದು ಊರ್ಜಿತವಾಗುತ್ತಿತ್ತು. ಆ ಮಹಿಳೆಯರಿಗೆ ಆಸ್ತಿವಂಚನೆಯಾದರೂ ಕಾನೂನು ಸಲಹೆ ತೆಗೆದುಕೊಳ್ಳಲಾರದವರಾಗಿದ್ದರು. ಅವರ ಹಲವು ಹಕ್ಕುಗಳು ಹೆಣ್ಣು ಎಂಬ ಕಾರಣಕ್ಕೇ ಮೊಟಕುಗೊಂಡಿದ್ದವು. ಕಾಥೇವಾಡ ಮತ್ತು ಇಂದೋರ್ ಸಂಸ್ಥಾನಗಳ ಇಂಥ ‘ಪರ್ದಾ ನಶೀನ್ ಹೆಂಗಸರ ಪರವಾಗಿ ಮಾತನಾಡಲು ಕಾರ್ನೆಲಿಯಾ ವಿಶೇಷ ಅನುಮತಿ ಪಡೆದರು. ಆದರೆ ಅವರ ವಿದೇಶಿ ಪದವಿಗೆ ಮಾನ್ಯತೆ ಸಿಗಲಿಲ್ಲ. ಕೊನೆಗೆ ೧೮೯೭ರಲ್ಲಿ ಮುಂಬಯಿ ವಿಶ್ವವಿದ್ಯಾಲಯದ ಎಲ್‌ಎಲ್‌ಬಿಯನ್ನೂ, ೧೮೯೯ರಲ್ಲಿ ಅಲಹಾಬಾದ್ ಹೈಕೋರ್ಟಿನ ಪ್ಲೀಡರ್ ಪರೀಕ್ಷೆಯನ್ನೂ ಪಾಸು ಮಾಡಿದರು. ೧೯೦೨ರಲ್ಲಿ ಮಹಿಳೆಯರು ಮತ್ತು ಮಕ್ಕಳ ಸಲಹಾಕಾರ್ತಿಯಾಗಿ ಇಂಡಿಯಾ ಆಫೀಸಿನಲ್ಲಿ ಕೆಲಸ ಮಾಡತೊಡಗಿದರು. ೧೯೦೪ರಲ್ಲಿ ಬಂಗಾಳದ ಕೋರ್ಟ್ ಆಫ್ ವಾರ್ಡ್ಸ್‌ಗೆ ಮಹಿಳಾ ಸಹಾಯಕಿಯಾಗಿ ಕೆಲಸ ಮಾಡಿದರು. ಮುಂದಿನ ೨೦ ವರ್ಷ ೬೦೦ಕ್ಕಿಂತ ಹೆಚ್ಚು ಮಹಿಳೆಯರ, ಅನಾಥ ಮಕ್ಕಳ ಕಾನೂನು ಹಕ್ಕಿಗಾಗಿ, ಎಷ್ಟೋ ಸಲ ಯಾವ ಶುಲ್ಕವೂ ಇಲ್ಲದೆ ಹೋರಾಡಿದರು. ರಾಷ್ಟ್ರೀಯ ಹೋರಾಟಕ್ಕೆ ಬೆಂಬಲ ನೀಡಿದರು. ಬಾಲ್ಯವಿವಾಹ ವಿರೋಧಿಸಿ ಮತ್ತು ವಿಧವೆಯರ ಹಕ್ಕುಗಳ ಎತ್ತಿಹಿಡಿದು ವಿಸ್ತೃತವಾಗಿ ಬರೆದರು.

೧೯೨೪ರಲ್ಲಿ ನ್ಯಾಯದೇವತೆ ನ್ಯಾಯಾಸ್ಥಾನದ ಬಾಗಿಲುಗಳನ್ನು ಮಹಿಳೆಯರಿಗೆ ತೆರೆಸಿದಳು. ಅಲಹಾಬಾದ್ ಹೈಕೋರ್ಟಿನಲ್ಲಿ ಕಾರ್ನೆಲಿಯಾ ವಕೀಲೆಯಾಗಿ ನೋಂದಣಿಯಾದರು. ಆದರೆ ಅಲ್ಲಿನ ವಾತಾವರಣ ಮಹಿಳಾ ನ್ಯಾಯವಾದಿಗೆ ಎಷ್ಟು ಪ್ರತಿಕೂಲವಾಗಿತ್ತು ಎಂದರೆ ೧೯೨೮ರಲ್ಲಿ ನಿವೃತ್ತಿ ಪಡೆದು ಇಂಗ್ಲೆಂಡಿಗೆ ಹೋಗಿಬಿಟ್ಟರು. ಕುಟುಂಬವೇ ಇಂಗ್ಲೆಂಡಿಗೆ ಹೋಯಿತು.

ಆಗ ರಾಷ್ಟ್ರೀಯತೆ ಹೋರಾಟ ಮತ್ತು ಗಾಂಧಿ ಬೆಂಬಲಿತ ನಾಗರಿಕ ಅಸಹಕಾರವನ್ನು ವಿರೋಧಿಸಿ ಬ್ರಿಟಿಷ್ ರಾಜಸತ್ತೆಗೆ ಬೆಂಬಲ ಸೂಚಿಸಿದರು. ಬ್ರಿಟಿಷ್ ಆಳ್ವಿಕರ ಅಡಿ ಸ್ವಾಯತ್ತ ಸನಾತನ ಭಾರತ ಇರುವ ಹಾಗೇ ಇರಬೇಕೆಂದು ಹೇಳಿ ರಾಷ್ಟ್ರೀಯ ಹೋರಾಟಗಾರರ ಅವಗಣನೆಗೆ ಗುರಿಯಾದರು. ಸಮಾಜ ಸುಧಾರಣೆಯ ಅವರ ಕನಸುಗಳು ಹಾಗೇ ಉಳಿದವು. ಅವರ ಎಲ್ಲ ಕೆಲಸ-ಸೇವೆಗಳೂ ಹಿನ್ನಲೆಗೆ ಸರಿದುಬಿಟ್ಟವು.

ಇತ್ತೀಚೆಗೆ ಆಕ್ಸ್‌ಫರ್ಡಿನ ಲಿಂಕನ್ ಇನ್‌ನಲ್ಲಿ ಅವರ ಮೂರ್ತಿ ಸ್ಥಾಪಿಸಲಾಗಿದೆ. ಆದರೆ ಭಾರತದ ಮಟ್ಟಿಗೆ ಅವರಿನ್ನೂ ಅಪರಿಚಿತರಾಗಿಯೇ ಉಳಿದಿದ್ದಾರೆ.

***

ನ್ಯಾಯವ್ಯವಸ್ಥೆಯಲ್ಲಿ ಬಡಿದಾಡಿದ ಕಾರ್ನೆಲಿಯಾ ಸಂಕಟಗಳು ಅವರ ಜೊತೆಗೆ ಕೊನೆಯಾಗಲಿಲ್ಲ. ಇವತ್ತಿಗೂ ಓದು ಮುಗಿಸಿ ನೂರಾರು ಕನಸುಗಳೊಂದಿಗೆ ನಾನಾಹಂತದ ಕೋರ್ಟುಗಳನ್ನು ಪ್ರವೇಶಿಸಿ ತಮ್ಮನ್ನು ಸ್ಥಾಪಿಸಿಕೊಳ್ಳಬಯಸುವ ವಕೀಲೆಯರಿಗೆ ಪರಿಸ್ಥಿತಿ ಪೂರಕವಾಗೇನೂ ಇಲ್ಲ. ಪುರುಷ ವೃತ್ತಿ ಬಾಂಧವರಿರಲಿ, ಕೋರ್ಟಿನೊಳಗಿರುವ ನ್ಯಾಯಾಧೀಶರಿರಲಿ, ಕೊನೆಗೆ ಕಕ್ಷಿದಾರರಿರಲಿ – ಹೆಚ್ಚಿನವರು ಮಹಿಳಾ ಲಾಯರುಗಳ ಬಗೆಗೆ ಅಸಡ್ಡೆ, ಅಸಮ್ಮತಿ, ಅವರ ಸಾಮರ್ಥ್ಯ ಕುರಿತ ಅನುಮಾನ, ಪೂರ್ವಗ್ರಹಗಳನ್ನೇ ಹೊಂದಿದ್ದಾರೆ. ಕಾನೂನು ಶಾಲೆ-ಕಾಲೇಜುಗಳಲ್ಲಿ ಸಾಕಷ್ಟು ಸಂಖ್ಯೆಯ ಹೆಣ್ಣುಮಕ್ಕಳು ಕಾನೂನು ಪದವಿ ಪಡೆದು ವೃತ್ತಿ ಆರಂಭಿಸಿದರೂ ಸ್ವತಂತ್ರವಾಗಿ ವೃತ್ತಿನಿರತರಾಗುವವರ ಸಂಖ್ಯೆ ಕಡಿಮೆ. ದೀರ್ಘಾವಧಿಯವರೆಗೆ ವೃತ್ತಿ ಮುಂದುವರೆಸಿದವರು ಅತಿ ಕಡಿಮೆ. ಹೆಚ್ಚಿನವರು ತಮ್ಮ ಕುಟುಂಬದ ಅಥವಾ ಸ್ನೇಹಬಳಗದ ಸೀನಿಯರುಗಳ ಸಹಾಯಕರಾಗಿಯೋ, ಕಾರ್ಪೋರೇಟ್ ಕಾನೂನು ಸಲಹಾಕಾರರಾಗಿಯೋ, ಬ್ಯಾಂಕುಗಳಲ್ಲೋ, ಲಾ ಫರ್ಮುಗಳಲ್ಲೋ ಕೆಲಸ ಮಾಡುತ್ತಾರೆ. ಕೌಟುಂಬಿಕ ಜವಾಬ್ದಾರಿಗಳು ಅದಕ್ಕೆ ಮುಖ್ಯ ಕಾರಣವಾದರೂ ನ್ಯಾಯಾಸ್ಥಾನದ ಒಳಹೊರಗಿರುವ ಮಹಿಳಾ ಸ್ನೇಹಿಯಲ್ಲದ ಅನುತ್ತೇಜಕ ವಾತಾವರಣವೂ ಮುಖ್ಯವಾಗಿದೆ ಎನ್ನಬಹುದು.

ದೆಹಲಿ ಹೈಕೋರ್ಟಿನ ಒಬ್ಬ ನ್ಯಾಯಾಧೀಶರು ವಕೀಲೆಯರ ವಾದ ಆಲಿಸಲು, ಅವರ ಪ್ರಕರಣಗಳ ತೀರ್ಪು ಹೇಳಲು ಪೂರ್ವಗ್ರಹ ಹೊಂದಿರುವವರೆಂದು ಪ್ರಖ್ಯಾತರು. ಅವರ ಬಳಿ ಹಿಯರಿಂಗ್ ಬಂದರೆ ವಕೀಲೆಯರು ಭಯಗೊಳ್ಳಬೇಕಾದ ಪರಿಸ್ಥಿತಿಯಿದೆಯಂತೆ. ಅಲಂಕಾರಗೊಂಡ ವಕೀಲೆಯರಿಗೆ, ‘ಪಾರ್ಟಿಗೆ ಹೋಗಲೆಂದು ಅಲಂಕಾರ ಮಾಡಿಕೊಂಡು ಬಂದಿರುವೆಯೆ?, ‘ನಿನ್ನ ಅಲಂಕಾರದ ಮೇಲೆ ನಿನಗೆಷ್ಟು ಗಮನ ಎಂದರೆ ಮುಂದಿನ ಹಿಯರಿಂಗ್ ಡೇಟ್ ತೆಗೆದುಕೊಳ್ಳಲೂ ನಿನಗೆ ನೆದರಿಲ್ಲ ಎನ್ನುವ ಕಾಮೆಂಟುಗಳು ನ್ಯಾಯಾಧೀಶರಿಂದ ಬರುತ್ತವಂತೆ! ‘ನನ್ನ ಲಿಪ್‌ಸ್ಟಿಕ್ ನೋಡಬೇಡಿ, ಅದು ಹೇಳಲಿರುವ ಮಾತುಗಳ ಕೇಳಿಸಿಕೊಳ್ಳಿ ಎಂದು ಅವರಿಗೆ ಕಿರುಚಿ ಹೇಳಬೇಕೆನಿಸುವಂತಾಗುತ್ತದೆಂದು ಒಬ್ಬ ವಕೀಲೆ ಹೇಳಿದ್ದಾಳೆ.

ನ್ಯಾಯಾಧೀಶರ ಸ್ಥಳದಲ್ಲಿ ಮಹಿಳೆಯರ ಸಂಖ್ಯೆ ಮತ್ತಷ್ಟು ಕಡಿಮೆಯಿದೆ. ಬಾರ್ ಅಸೋಸಿಯೇಷನ್ನಿನಿಂದ ಯಶಸ್ವಿ ವಕೀಲೆಯರು ನ್ಯಾಯಾಧೀಶರ ಸ್ಥಾನಕ್ಕೆ ಶಿಫಾರ್ಸುಗೊಳ್ಳುವುದೇ ಕಡಿಮೆ. ಎಲ್ಲೋ ಕೆಲವರು ದೆಹಲಿ ಹೈಕೋರ್ಟಿನ ಮಾಜಿ ನ್ಯಾಯಮೂರ್ತಿ ಎ. ಪಿ. ಷಾ ತರಹದವರನ್ನು ಬಿಟ್ಟರೆ ಮಹಿಳೆಯರನ್ನು ನ್ಯಾಯಾಧೀಶರಾಗಿ ಶಿಫಾರ್ಸು ಮಾಡುವವರು ಇಲ್ಲವೆನ್ನುವಷ್ಟು ಕಡಿಮೆ. ಅದರಲ್ಲಿ ನೇಮಕವಾಗುವವರ ಸಂಖ್ಯೆ ಇನ್ನೂ ಕಡಿಮೆ. ಹೀಗಿರುವುದರಿಂದಲೇ ೧೯೨೪ರಿಂದ ೨೦೧೭ ಬಂದರೂ ಒಬ್ಬ ಮಹಿಳೆ ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಲು ಸಾಧ್ಯವಾಗಿಲ್ಲ. ಸದ್ಯ ಎಂಟು ರಾಜ್ಯಗಳ ಹೈಕೋರ್ಟುಗಳಲ್ಲಿ – ಮಣಿಪುರ, ತ್ರಿಪುರ, ಮೇಘಾಲಯ, ಹಿಮಾಚಲ ಪ್ರದೇಶ, ಜಾರ್ಖಂಡ್, ಛತ್ತೀಸ್‌ಘರ್, ಉತ್ತರಾಖಂಡ್, ಜಮ್ಮು ಮತ್ತು ಕಾಶ್ಮೀರಗಳಲ್ಲಿ ಒಬ್ಬ ಮಹಿಳಾ ನ್ಯಾಯಮೂರ್ತಿಯೂ ಇಲ್ಲ. ದೇಶದ ೨೪ ಹೈಕೋರ್ಟುಗಳಲ್ಲಿ ೬೨೧ ನ್ಯಾಯಮೂರ್ತಿಗಳಿದ್ದರೆ ಅವರಲ್ಲಿ ೬೪ ಜನ ಮಾತ್ರ ಮಹಿಳೆಯರಿದ್ದಾರೆ. ದೇಶದ ಮೂರು ಪ್ರಮುಖ ನ್ಯಾಯಾಲಯಗಳು – ಸುಪ್ರೀಂಕೋರ್ಟು, ಮುಂಬಯಿ ಮತ್ತು ದೆಹಲಿ ಹೈಕೋರ್ಟುಗಳಲ್ಲಿ ಒಬ್ಬೊಬ್ಬರೇ ಸೀನಿಯರ್ ಅಡ್ವೊಕೇಟ್ ಮಹಿಳೆ ಇದ್ದಾರೆ.

೧೯೬೧ರಲ್ಲಿ ಸ್ಥಾಪನೆಯಾದ ಬಾರ್ ಕೌನ್ಸಿಲ್ ಆಫ್ ಇಂಡಿಯಾದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಸೇರಿದಂತೆ ಯಾವುದೇ ಸ್ಥಾನವನ್ನು ಇದುವರೆಗೆ ಮಹಿಳೆ ಅಲಂಕರಿಸಿಲ್ಲ. ಇವಾಗಿನ ಕೇಂದ್ರ ಬಾರ್ ಕೌನ್ಸಿಲಿನಲ್ಲಿ ಒಬ್ಬ ಮಹಿಳಾ ಸದಸ್ಯೆಯೂ ಇಲ್ಲ. ೧೨ ಬಾರ್ ಕೌನ್ಸಿಲುಗಳಲ್ಲಿ ಕರ್ನಾಟಕ(೧), ಆಂಧ್ರ(೨), ಉತ್ತರ ಪ್ರದೇಶ(೨), ದೆಹಲಿ(೨)ಗಳಲ್ಲಿ ಮಾತ್ರ ಮಹಿಳೆಯರಿರುವುದು. ಉಳಿದ ೮ರಲ್ಲಿ ಒಬ್ಬ ಮಹಿಳೆಯೂ ಇಲ್ಲ. ಎಂದರೆ ಬಾರ್ ಕೌನ್ಸಿಲಿನಲ್ಲಿ ಈಗಿರುವ ಮಹಿಳಾ ಸದಸ್ಯರು ೨.೮%. ೨೦೧೬ರಲ್ಲಿ ಮುಂಬಯಿ ಹೈಕೋರ್ಟು ಒಂದು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಆಲಿಸಿತು. ಬಾರ್ ಕೌನ್ಸಿಲುಗಳಲ್ಲಿ ಕನಿಷ್ಠ ೩೦% ಮಹಿಳಾ ಪ್ರಾತಿನಿಧ್ಯವಿರುವಂತೆ ೧೯೬೧ರ ಅಡ್ವೊಕೇಟ್ಸ್ ಆಕ್ಟ್‌ಗೆ ತಿದ್ದುಪಡಿ ತರಲು ಒತ್ತಾಯಿಸಿ, ಅದಕ್ಕಿರುವ ಸಾಂವಿಧಾನಿಕ ಅವಕಾಶಗಳ ಪ್ರಸ್ತಾಪಿಸಿ, ಬಾಂಬೆ ಲಾಯರ‍್ಸ್ ಅಸೋಸಿಯೇಷನ್ ಅರ್ಜಿ ಸಲ್ಲಿಸಿತ್ತು. ಅದನ್ನು ತಕ್ಷಣವೇ ಕೈಗೆತ್ತಿಕೊಂಡು ಅದಕ್ಕೆ ಬಾರ್ ಕೌನ್ಸಿಲು, ಸರ್ಕಾರ ಎಂಟು ವಾರದೊಳಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೋರ್ಟು ಹೇಳಿತು. ಆದರೆ ಇನ್ನೂ ಅಂತಹ ಕ್ರಮಗಳು ಜರುಗಿದ ಸೂಚನೆಯಿಲ್ಲ. ನ್ಯಾಯವ್ಯವಸ್ಥೆಯೊಳಗೆ ಮೀಸಲಾತಿ ಬೇಕೇಬೇಡವೇ ಎಂಬ ಚರ್ಚೆ ನಡೆದಾಗಲೆಲ್ಲ ಜ್ಞಾನ, ಪರಿಣತಿ, ಸಾಮರ್ಥ್ಯ, ಬದ್ಧತೆ ಮುಂತಾದ ಭಾರವಾದ ಪದಗಳ ನೆಪದಲ್ಲಿ ಪ್ರಾತಿನಿಧ್ಯ ನಿರಾಕರಿಸಲಾಗುತ್ತದೆ.

ಇದರ ಜೊತೆಜೊತೆಗೆ ನ್ಯಾಯಾಲಯಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳೂ ಕಡಿಮೆಯಿಲ್ಲ. ‘ಅದು ಭಾರತದ ನ್ಯಾಯವ್ಯವಸ್ಥೆಯ ಹೊಲಸು ಗುಟ್ಟು ಎನ್ನುತ್ತಾರೆ ಭಾರತದ ಮೊದಲ ಸಾಲಿಸಿಟರ್ ಜನರಲ್ ಮಹಿಳೆ ಇಂದಿರಾ ಜೈಸಿಂಗ್. ಜೂನಿಯರುಗಳನ್ನು ಲೈಂಗಿಕ ಗುಲಾಮರಂತೆ ಬಳಸಿಕೊಳ್ಳುವುದನ್ನು ನೋಡಿ ರೋಸಿ ಹೋಗಿರುವುದಾಗಿ ಕರ್ನಾಟಕದ ಹಿರಿಯ ಮಹಿಳಾ ನ್ಯಾಯವಾದಿ ನೊಂದು ಹೇಳುತ್ತಾರೆ. ಉದ್ಯೋಗ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ತಡೆಯಬೇಕೆಂದು ವಿಶಾಖಾ ಗೈಡ್‌ಲೈನ್ಸ್ ಅನ್ನು ೧೯೯೭ರಲ್ಲಿ ರೂಪುಗೊಳಿಸಿದ ಸುಪ್ರೀಂಕೋರ್ಟಿನಲ್ಲಿ ಮಹಿಳೆಯರ ದೂರು ಪರಿಶೀಲನಾ ಸಮಿತಿ ರೂಪುಗೊಂಡಿದ್ದು ೨೦೧೩ರಲ್ಲಿ! ಭಾರತದ ಬಹುಪಾಲು ಕಚೇರಿಗಳಂತೆ ನ್ಯಾಯಾಸ್ಥಾನಗಳ ಆವರಣಗಳಲ್ಲೂ ಲೈಂಗಿಕ ದೌರ್ಜನ್ಯ ದೂರು ನಿರ್ವಹಣಾ ಸಮಿತಿ ರಚನೆಯಾಗಿಲ್ಲ. ಸ್ವತಃ ದೌರ್ಜನ್ಯಕ್ಕೊಳಗಾಗಿ ದೂರು ನೀಡಿದ್ದ ಇಂದಿರಾ ಜೈಸಿಂಗ್ ಈಗ ಅಂತಹ ಎರಡು ಕೇಸುಗಳನ್ನು ತಾವೇ ವಾದಿಸುತ್ತಿದ್ದಾರೆ. ಹಕ್ಕುಗಳ ಕುರಿತು, ಕಾನೂನು ಬಳಸಿಕೊಳ್ಳಬಹುದಾದ ಅವಕಾಶಗಳ ಕುರಿತು ವಕೀಲೆಯರಿಗೆ ಅರಿವೂ ಇಲ್ಲ, ಧೈರ್ಯವೂ ಇಲ್ಲ ಎಂದವರು ವಿಷಾದಿಸುತ್ತಾರೆ.

ಈ ಎಲ್ಲ ಕಹಿ ವಾಸ್ತವಗಳ ನಡುವೆ ಉಪೇಂದ್ರ ಭಕ್ಷಿ, ಜ. ಎ. ಪಿ. ಷಾ, ಜ. ಜೆ. ಎಸ್. ವರ್ಮಾ ತರಹದ ತಾಯಿ ಮನಸಿನ ನ್ಯಾಯಾಧೀಶರಿರುವುದು ಭವಿಷ್ಯ ಕುರಿತು ಒಂದಷ್ಟು ಆಶಾಭಾವನೆ ಹೊಂದುವಂತೆ ಮಾಡಿದೆ. ಹಾಗೆಂದೇ ಎಲ್ಲ ಅಡೆತಡೆ ಮೀರಿಯೂ ಕೆಲವರಾದರೂ ಯಶಸ್ವಿ ವಕೀಲೆಯರು, ಮಹಿಳಾ ನ್ಯಾಯಾಧೀಶರು ಇದ್ದಾರೆ. ಉತ್ತಮ ಬೆಳವಣಿಗೆಯೆಂಬಂತೆ ಆಲ್ ಇಂಡಿಯಾ ಫೆಡರೇಷನ್ ಆಫ್ ವಿಮೆನ್ ಲಾಯರ‍್ಸ್ (ಫೆಡರೇಷನ್ ಆಫ್ ಇಂಟರ್ ನ್ಯಾಷನಲ್ ವಿಮೆನ್ ಲಾಯರ‍್ಸ್‌ನ ಭಾರತದ ಶಾಖೆ) ೨೦೦೭ರಲ್ಲಿ ರೂಪುಗೊಂಡಿದೆ. ಶೀಲಾ ಅನೀಶ್ ಅದರ ಸ್ಥಾಪಕ ಅಧ್ಯಕ್ಷೆ. ಬೆಂಗಳೂರು ಅದರ ಮುಖ್ಯಕೇಂದ್ರವಾಗಿದೆ. ಈಗ ಅಮಿ ಯಾಜ್ನಿಕ್ ಅಧ್ಯಕ್ಷೆ ಹಾಗೂ ಹೇಮಲತಾ ಮಹಿಷಿ ಉಪಾಧ್ಯಕ್ಷೆ ಆಗಿದ್ದಾರೆ.

ಮಹಿಳಾ ನ್ಯಾಯವಾದಿಗಳ ಸಂಘಟನೆ ಕಹಿ ವಾಸ್ತವಗಳತ್ತ ಗಮನ ಹರಿಸಿ ನ್ಯಾಯಕ್ಕಾಗಿ, ಹಕ್ಕಿಗಾಗಿ ಹೋರಾಡಬಹುದೆಂದು ಆಶಿಸಬಹುದಾಗಿದೆ.

ಆಸ್ಟಿಸಿಯ ಅಥವಾ ಥೆಮಿಸ್ ನ್ಯಾಯದೇವತೆ. ಅವಳು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕುರುಡಾಗಿರುವವಳು. ಅದು ಪಕ್ಷಪಾತರಹಿತ ಸ್ಥಿತಿಯ ಸೂಚಕ ಎನ್ನಲಾಗುತ್ತದೆ. ಭಯಗೊಳುವುದು, ಆಯ್ದವರಿಗೆ ಅನುಕೂಲ ಮಾಡುವುದನ್ನು ತಡೆಯಬಲ್ಲ ಸ್ಥಿತಿಯ ಕುರುಹಾಗಿ ಬಟ್ಟೆ ಕಟ್ಟಲಾಗಿದೆ. ನ್ಯಾಯದೇವತೆಯ ಎಡಗೈಯಲ್ಲಿ ತಕ್ಕಡಿಯಿದ್ದು ಅದು ವಿಷಯದ ಪರ ವಿರೋಧಗಳೆರಡನ್ನೂ ಸಮತೋಲನಗೊಳಿಸಿ ಆಲಿಸುವುದನ್ನು ಪ್ರತಿನಿಧಿಸುತ್ತದೆ. ಅವಳ ಬಲಗೈಯಲ್ಲಿ ಎರಡಲಗಿನ ಕತ್ತಿಯಿದೆ. ಅದು ತರ್ಕ ಮತ್ತು ವಿಶ್ಲೇಷಣೆ ಎಂಬ ಅಲಗುಗಳಿರುವ, ಶಿಕ್ಷೆಯನ್ನು ಪ್ರತಿನಿಧಿಸುವ ಕತ್ತಿ. ಭಾವುಕಳಾದರೂ ಸಮತೂಕದ ಯೋಚನೆಯಿರುವ; ತಾಯ್ತನದ ಮಮತೆಯಿದ್ದರೂ ತಪ್ಪಿದಲ್ಲಿ ಶಿಕ್ಷಿಸುವ ಹೆಣ್ಣು ನ್ಯಾಯಪರತೆಯ ಪ್ರತಿನಿಧಿಯಂತೆ ಎಂದಿನಿಂದಲೂ ಮನುಷ್ಯರಿಗೆ ಕಂಡಿದ್ದಾಳೆ. ನ್ಯಾಯದೇವತೆ ಪರಿಕಲ್ಪನೆ ರೂಪುಗೊಂಡಿದ್ದೂ ಹಾಗೆಯೇ.

ಆದರೆ ಇವತ್ತಿನ ಸಮಾಜಕ್ಕೆ ಹೆಣ್ಣಿನ ಶಕ್ತಿ, ಸಾಮರ್ಥ್ಯ, ಜ್ಞಾನದಲ್ಲಿ ನಂಬಿಕೆಯೇ ಇಲ್ಲವಾಗಿದೆ. ಒಂದೋ ಹೆಣ್ಣನ್ನು ಅಸಡ್ಡೆಯಿಂದ ಕಾಣುವುದು ಅಥವಾ ಅವರನ್ನು ತಮ್ಮ ರಕ್ಷಣಾ ಕೋಟೆಯೊಳಗೆ ತೆಗೆದುಕೊಂಡು ಪೊರೆಯುವುದು – ಇವೆರೆಡರಲ್ಲಿ ಒಂದು ಮಾತ್ರ ಹೆಣ್ಣಿನ ಕುರಿತು ಗಂಡಿಗಿರುವ ಸಾಮಾನ್ಯ ಧೋರಣೆ. ಅದರಾಚೆಗೆ ಸ್ನೇಹ-ಸಮಾನತೆ-ಸಮಾನ ಗೌರವದ ನೆಲೆಯಲ್ಲಿ ಸಹಬಾಳ್ವೆ ರೂಪಿಸುವುದು ಅವಶ್ಯವಾಗಿದೆ. ವಕೀಲಿಕೆಯೊ, ವೈದ್ಯಕೀಯವೊ, ರಾಜಕಾರಣವೋ, ಚಳುವಳಿಯೋ ಎಲ್ಲ ಕಡೆ ಮಹಿಳಾ ಭಾಗವಹಿಸುವಿಕೆಗೆ ಅವಕಾಶ ಮತ್ತು ಸಮಾನ ಗೌರವ ಇವತ್ತಿನ ತುರ್ತಾಗಿದೆ.

(ಈ ಬರಹದಲ್ಲಿ ‘ದ ವೀಕ್ ಇಂಗ್ಲಿಷ್ ಸಾಪ್ತಾಹಿಕದ ಬರಹ ಮತ್ತು ಕಾನೂನು ಅಂತರ್ಜಾಲ ತಾಣಗಳ ಮಾಹಿತಿ ಬಳಸಿಕೊಳ್ಳಲಾಗಿದೆ.)

***

ಈಗ ಕ್ರಿಯಾಶೀಲರಾಗಿರುವ ಇಬ್ಬರು ಕನ್ನಡ ‘ನ್ಯಾಯದೇವತೆಗಳ ಪರಿಚಯ:

ಕರ್ನಾಟಕ ಹೈಕೋರ್ಟಿನ ಮೊದಲ ನ್ಯಾಯಾಧೀಶೆ ಜಸ್ಟಿಸ್ ಮಂಜುಳಾ ಚೆಲ್ಲೂರ್. ಬಳ್ಳಾರಿಯ ಮಂಜುಳಾ ಪದವಿ ತನಕ ಶಿಕ್ಷಣವನ್ನು ಅಲ್ಲಿಯೇ ಪೂರೈಸಿದರು. ನಂತರ ಬೆಂಗಳೂರಿನಲ್ಲಿ ಕಾನೂನು ಪದವಿ ಪಡೆದು, ಇಂಗ್ಲೆಂಡಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ತೆರಳಿದರು. ವಾಪಸಾದ ಮೇಲೆ ಬಳ್ಳಾರಿ ಕೋರ್ಟುಗಳಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ಎರಡೂ ಕೇಸುಗಳ ತೆಗೆದುಕೊಂಡರು. ಹಾಗೆ ಅಲ್ಲಿ ಕೇಸು ವಾದಿಸಿದ ಮೊದಲ ಮಹಿಳಾ ನ್ಯಾಯವಾದಿ ಅವರು. ೧೯೮೮ರಲ್ಲಿ ಕೋಲಾರ ಹಾಗೂ ನಂತರ ಮೈಸೂರಿನ ಸೆಷನ್ಸ್ ಜಡ್ಜ್ ಆದ ಅವರಿಗೆ ವಿಜಯಪುರದ ಮಹಿಳಾ ವಿವಿ ೨೦೧೨ರಲ್ಲಿ ಗೌರವ ಡಾಕ್ಟೊರೇಟ್ ನೀಡಿದೆ. ೨೦೦೦ನೇ ಇಸವಿಯಲ್ಲಿ ಕರ್ನಾಟಕ ಹೈಕೋರ್ಟಿನ ಜಡ್ಜ್ ಆದ ಅವರು ೨೦೧೨ರಲ್ಲಿ ಕೇರಳ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ, ೨೦೧೪ರಲ್ಲಿ ಕೋಲ್ಕತಾ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಆಗಿ ಈಗ ಮುಂಬೈ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ. ಕೇರಳದಲ್ಲಿದ್ದಾಗ ರಾಜ್ಯಸಭೆಯ ಉಪಸಭಾಪತಿ ಪಿ. ಜೆ. ಕುರಿಯನ್ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ಸರ್ಕಾರ ತನಿಖೆ ನಡೆಸಿ ವರದಿ ಕೊಡುವಂತೆ ಆದೇಶಿಸಿದ್ದರು. ವಿರೋಧಪಕ್ಷದ ನಾಯಕ ವಿ. ಎಸ್. ಅಚ್ಯುತಾನಂದನ್ ಅವರಿಗೆ ಐಸ್ ಕ್ರೀಂ ಪಾರ್ಲರ್ ಪ್ರಕರಣದಲ್ಲಿ ‘ಬೇಗ ಹಿಯರಿಂಗ್ ಮುಗಿಸಿ ಹೋಗಲು ಅವಕಾಶ ಕೊಡದೆ ಎಲ್ಲರಂತೆ ಅವರ ಸರದಿ ಬರುವವರೆಗು ಕಾಯುವಂತೆ ಮಾಡಿ ಸುದ್ದಿಯಾಗಿದ್ದರು. ಒಟ್ಟಾರೆ ಹೈಪ್ರೊಫೈಲ್ ಪ್ರಕರಣಗಳನ್ನೂ ದಿಟ್ಟವಾಗಿ, ನ್ಯಾಯಯುತವಾಗಿ ಬಗೆಹರಿಸುವ ಜಸ್ಟಿಸ್ ಮಂಜುಳಾ ಚೆಲ್ಲೂರ್ ಮುಂದೊಂದು ದಿನ ಸುಪ್ರೀಂಕೋರ್ಟ್ ನ್ಯಾಯಯಮೂರ್ತಿ ಆದಾರು. ಅತ್ಯುಚ್ಛ ಸ್ಥಾನವೂ ಅವರಿಗೊಲಿದೀತೆಂದು ಆಶಿಸಬಹುದು.

ಮಂಗಳೂರು ಬಳಿಯ ಕದ್ರಿಯ ಫ್ಲೇವಿಯಾ ಆಗ್ನೆಸ್ (೧೯೪೭) ೧೯೮೮ರಿಂದ ಮುಂಬಯಿ ಹೈಕೋರ್ಟಿನಲ್ಲಿ ವೃತ್ತಿ ನಡೆಸುತ್ತಿರುವವರು. ಪ್ರೌಢಶಾಲೆಯವರೆಗೆ ಚಿಕ್ಕಮ್ಮನೊಡನೆ ಮಂಗಳೂರಿನಲ್ಲಿದ್ದು ವಿದ್ಯಾಭ್ಯಾಸ ಪಡೆವಾಗ ತಂದೆ ಯೆಮನಿನ ಆಡೆನ್ನಿನಲ್ಲಿದ್ದರು. ಆ ಹೊತ್ತಿಗೆ ಚಿಕ್ಕಮ್ಮ ತೀರಿಕೊಂಡರೆಂದು ತಂದೆಯ ಬಳಿ ಹೋದರೆ ಅವರೂ ಅಕಾಲ ಮರಣ ಹೊಂದಿದರು. ಕುಟುಂಬ ಮಂಗಳೂರಿಗೆ ಮರಳಿತು. ವಿದ್ಯೆ ಮೊಟಕುಗೊಳಿಸಿ ಅವರ ಮದುವೆ ಮಾಡಲಾಯಿತು. ಆದರೆ ಕೌಟುಂಬಿಕ ಬದುಕಿನಲ್ಲಿ ಸಾಕಷ್ಟು ಹಿಂಸೆ ಅನುಭವಿಸಿ, ಕ್ರೈಸ್ತ ಧರ್ಮದ ಪ್ರಕಾರ ವಿಚ್ಛೇದನೆಯೂ ಸಿಗದೆ, ಕೊನೆಗೆ ಕೋರ್ಟಿನ ಮೊರೆ ಹೋಗಿ ವಿಚ್ಛೇದನೆ, ಮಕ್ಕಳ ಕಸ್ಟಡಿ ಪಡೆದರು. ಸ್ವಂತ ಅನುಭವಗಳೇ ಅವರನ್ನು ಹೋರಾಟಗಾರ್ತಿಯಾಗಿ ರೂಪಿಸಿದವು.

ಮದುವೆಯಾಗುವಾಗ ಬರಿಯ ಎಸ್ಸೆಲ್ಸಿ ಪಾಸು ಮಾಡಿದ್ದವರು ನಂತರ ವಿದ್ಯಾಭ್ಯಾಸ ಮುಂದುವರೆಸಿದರು. ಡಿಗ್ರಿ ಮುಗಿಸಿ ಕಾನೂನು ಪದವಿ ಪಡೆದು ೧೯೮೮ರಲ್ಲಿ ಮುಂಬೈ ಹೈಕೋರ್ಟಿನಲ್ಲಿ ವಕೀಲಿಕೆ ಶುರು ಮಾಡಿದರು. ೧೯೯೨ರಲ್ಲಿ ಸ್ನಾತಕೋತ್ತರ ಎಲ್‌ಎಲ್‌ಎಂ ಪಡೆದು ನಂತರ ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲಿನಲ್ಲಿ ಎಂ.ಫಿಲ್ ಮುಗಿಸಿ (೧೯೯೭) ಅಲ್ಲೇ ಗೌರವ ಪ್ರಾಧ್ಯಾಪಕರಾದರು. ಅವರು ಕೌಟುಂಬಿಕ, ವೈವಾಹಿಕ, ಆಸ್ತಿ ಕಾನೂನು ಪರಿಣಿತರು. ನಟಿ, ನಿರ್ದೇಶಕಿ, ಕಲಾವಿದೆ ಮಧುಶ್ರೀ ದತ್ತಾ ಅವರೊಡನೆ ೧೯೯೦ರಲ್ಲಿ ‘ಮಜ್ಲಿಸ್ ಎಂಬ ಮಹಿಳೆ ಮತ್ತು ಕಾನೂನು ಸಲಹಾ ಕೇಂದ್ರ ನಡೆಸುತ್ತಿದ್ದಾರೆ. ಇದುವರೆಗೆ ೫೦ ಸಾವಿರಕ್ಕೂ ಹೆಚ್ಚು ಹೆಣ್ಣು ಮಕ್ಕಳಿಗೆ ಅವರ ಸಂಸ್ಥೆ ಕಾನೂನು ಸಹಾಯ ನೀಡಿದೆ. ಅವರಲ್ಲಿ ಹೆಚ್ಚಿನವರು ಅನಾಥರು. ಇದರ ಮೂರುಪಟ್ಟು ಜನರಿಗೆ ಕಾನೂನು ಸಲಹೆ ನೀಡಿದ್ದಾರೆ. ನಿರ್ಭಯಾ ಪ್ರಕರಣ ಮತ್ತು ಶಕ್ತಿ ಮಿಲ್ ಅತ್ಯಾಚಾರ ಪ್ರಕರಣದ ವೇಳೆ ಆರೋಪಿಗಳಿಗೆ ಮರಣದಂಡನೆ ವಿಧಿಸಿದಾಗ ಅದನ್ನು ವಿರೋಧಿಸಿದರು. ಅಷ್ಟೇ ಅಲ್ಲ, ಮರಣದಂಡನೆ ಶಿಕ್ಷೆ ಪಡೆಯುವವರ ವರ್ಗ ಹಿನ್ನೆಲೆ ವಿಶ್ಲೇಷಿಸಿ ಅದು ರದ್ದಾಗಬೇಕೆಂದೂ ಕೋರಿದ್ದರು. ಇವತ್ತಿಗೂ ಮಹಿಳಾ ಪರ ಕಾನೂನು ಕುರಿತ ಚರ್ಚೆ ಬಂದರೆ ಅಲ್ಲಿ ಎದ್ದು ಕಾಣುವ ಹೆಸರು ಅವರದು.

– ಡಾ. ಎಚ್. ಎಸ್. ಅನುಪಮಾ

Please follow and like us:
error