ನಾಝಿ ಜರ್ಮನಿಯ ನೆನಪು ತಂದ ಎನ್‌ಆರ್‌ಸಿ

ಅಕ್ರಮ ವಲಸೆಗಾರರೆಲ್ಲ ಭಯೋತ್ಪಾದಕರು ಎಂಬಂತೆ ಬಿಂಬಿಸಿ ಒಂದು ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು ಸರಿಯಲ್ಲ. ವಲಸೆಗಾರರೆಲ್ಲ ಅಪರಾಧಿಗಳಲ್ಲ ಅವರು ದುಡಿಯುವ ಜನ. ಬೆಂಗಳೂರಿನಂಥ ಊರುಗಳು ಮಹಾನಗರವಾಗಿ ಬೆಳೆಯಲು, ವಲಸೆಗಾರರ ಕೊಡುಗೆಯೂ ಇದೆ.


ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಕಾರ್ಯವನ್ನು ಕರ್ನಾಟಕದಲ್ಲಿ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಕರ್ನಾಟಕಕ್ಕೆ ವಲಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು ಅವರನ್ನು ನಿರ್ಬಂಧಿಸಲು ನೋಂದಣಿ ಕಾರ್ಯ ಆರಂಭಿಸುವುದಾಗಿ ಅವರು ಹೇಳಿದ್ದಾರೆ. ಬಸವರಾಜ ಬೊಮ್ಮಾಯಿ ಹೇಳಿಕೆ ಮೇಲ್ನೋಟಕ್ಕೆ ಸಹಜ ಹೇಳಿಕೆ ಎಂದೆನಿಸಿದರೂ ಇದರ ಹಿಂದಿನ ಅಜೆಂಡಾ ಎಷ್ಟು ಅಪಾಯಕಾರಿಯಾಗಿದೆ. ಸಂವಿಧಾನ ವಿರೋಧಿಯಾಗಿದೆ ಎಂದು ಆಲೋಚಿಸಿದರೆ ಆತಂಕ ಉಂಟಾಗುತ್ತದೆ. ಕರ್ನಾಟಕ ಹೊರತುಪಡಿಸಿ ದಕ್ಷಿಣ ಭಾರತದಲ್ಲಿ ಯಾವ ರಾಜ್ಯವೂ ಎನ್‌ಆರ್‌ಸಿ ಕೈಗೆತ್ತಿಕೊಂಡಿಲ್ಲ.

ಜನತಾದಳದ ಹಿರಿಯ ನಾಯಕರಾಗಿದ್ದ ಮಾಜಿ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಅವರು ಬದುಕಿದ್ದರೆ ತಮ್ಮ ಮಗ ಬಿಜೆಪಿ ಸೇರಿ ಅಡ್ಡಹಾದಿ ಹಿಡಿದಿರುವ ಬಗ್ಗೆ ದಿಗ್ಭ್ರಾಂತರಾಗುತ್ತಿದ್ದರು. ಎಸ್.ಆರ್.ಬೊಮ್ಮಾಯಿ ಅವರು ಭಾರತದ ಮೊದಲ ಮಾರ್ಕ್ಸ್‌ವಾದಿ ಚಿಂತಕ ಮಾನವೇಂದ್ರನಾಥ ರಾಯ್ ಅವರ ಕಟ್ಟಾ ಅನುಯಾಯಿ. ನಾನು ಹುಬ್ಬಳ್ಳಿಯಲ್ಲಿದ್ದಾಗ ಹಲವಾರು ಸಲ ಅವರನ್ನು ಭೇಟಿಯಾಗಿ ಮಾತಾಡುವ ಅವಕಾಶ ದೊರಕಿತ್ತು. ಕಮ್ಯುನಿಸ್ಟ್ ನಾಯಕ ಎ.ಜೆ. ಮುಧೋಳ ಅವರ ಜೊತೆ ಹಾಗೂ ಪ್ರತ್ಯೇಕವಾಗಿ ಅವರನ್ನು ಭೇಟಿ ಮಾಡಿದಾಗ ಸಂಘಪರಿವಾರದ ಹಿಂದೂರಾಷ್ಟ್ರ ಕಾರ್ಯಸೂಚಿಯ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸುತ್ತಿದ್ದರು. ಮಾನವ ಹಕ್ಕುಗಳ ರಕ್ಷಣೆಯ ಬಗ್ಗೆ ಅವರು ವಿಶೇಷ ಆಸಕ್ತಿ ಹೊಂದಿದ್ದರು. ಬಿಜೆಪಿ ಸೇರುವ ಅವಕಾಶ ಮತ್ತು ಆಮಿಷ ಬಂದರೂ ಅವರು ಜನತಾದಳ ಬಿಟ್ಟು ಹೋಗಲಿಲ್ಲ. ಇಂಥ ಬೊಮ್ಮಾಯಿ ಅವರ ಮಗ ಬಸವರಾಜ ಈಗ ಸಂಘಪರಿವಾರ ಹಾಗೂ ಅಮಿತ್ ಶಾ ಅವರನ್ನು ಓಲೈಸಲು ಎನ್‌ಆರ್‌ಸಿ ಪ್ರಸ್ತಾವನೆ ಮುಂದಿಟ್ಟಿದ್ದಾರೆ.

ಇದೇ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ ಹೇಳಿಕೆ ಗಮನಿಸಿದರೆ ಎನ್‌ಆರ್‌ಸಿಯ ನಿಜ ಸ್ವರೂಪ ಗೊತ್ತಾಗುತ್ತದೆ. ‘ದೇಶವ್ಯಾಪಿ ಪೌರತ್ವ ನೋಂದಣಿ ಕಾರ್ಯ’ (ಎನ್‌ಆರ್‌ಸಿ) ಮುನ್ನ ಪೌರತ್ವ ತಿದ್ದುಪಡಿ ವಿಧೇಯಕ ತರುವುದಾಗಿ ಅವರು ಹೇಳಿದ್ದಾರೆ. ಏನಿದು ಪೌರತ್ವ ತಿದ್ದುಪಡಿ ವಿಧೇಯಕ ಎಂದು ಹುಡುಕಲು ಹೊರಟರೆ ಇದರ ಅಪಾಯಕಾರಿ ಸ್ವರೂಪ ಗೋಚರಿಸುತ್ತದೆ. ಎನ್‌ಆರ್‌ಸಿ ಅಂದರೆ ಭಾರತಕ್ಕೆ ಹೊರಗಿನಿಂದ ಬರುವ ವಲಸೆಗಾರರನ್ನು ಗುರುತಿಸಿ ಹೊರದಟ್ಟುವುದು. ಆದರೆ, ಪೌರತ್ವ ತಿದ್ದುಪಡಿ ವಿಧೇಯಕ ಅಂದರೆ ‘ಭಾರತಕ್ಕೆ ಹೊರಗಿನಿಂದ ಬರುವ ಹಿಂದೂ, ಸಿಖ್, ಜೈನ, ಬೌದ್ಧ ಮತ್ತು ಕ್ರೈಸ್ತರಿಗೆ ಪೌರತ್ವ ನೀಡಿ ಮುಸಲ್ಮಾನರನ್ನು ಮಾತ್ರ ಹೊರಗಿಡುವುದು. ಇದು ಅಪಾಯಕಾರಿ ಅಜೆಂಡಾ.

ನಮ್ಮ ಸಂವಿಧಾನ ಜಾತಿ, ಮತ, ಭೇದವಿಲ್ಲದೆ ಸರ್ವರಿಗೂ ಸಮಾನಾವಕಾಶ ನೀಡುತ್ತದೆ.ಅದು ಜಾತಿ, ಬಣ್ಣ, ಭಾಷೆಯ ಆಧಾರದಲ್ಲಿ ತಾರತಮ್ಯ ಮಾಡುವುದಿಲ್ಲ. ನಮ್ಮ ಪರಂಪರೆ ಕೂಡ ಸರ್ವೇಜನಾ ಸುಖಿನೋಭವಂತು ಮೌಲ್ಯವನ್ನು ಪ್ರತಿಪಾದಿಸುತ್ತದೆ. ಬಸವಣ್ಣನವರು ಕೂಡ ಸಕಲ ಜೀವಾತ್ಮರಿಗೆ ಲೇಸನು ಬಯಸಿದರು. ಅಂಬೇಡ್ಕರ್ ಕೂಡ ಅದನ್ನೇ ಹೇಳಿದರು. ಗಾಂಧೀಜಿ ಇದಕ್ಕಾಗಿ ಬಲಿದಾನವನ್ನೇ ಮಾಡಿದರು. ಆದರೂ ಹಿಂದೂರಾಷ್ಟ್ರ ನಿರ್ಮಿಸಲು ಹೊರಟವರು ನಮ್ಮ ನೆಲಕ್ಕೆ ಪರಕೀಯವಾದ ಈ ಪ್ರತ್ಯೇಕತೆಯ ನಂಜನ್ನು ಎಲ್ಲಿಂದ ತಂದರು? ಇದನ್ನು ಯೋಚಿಸುವ ಮುನ್ನ ಎನ್‌ಆರ್‌ಸಿ ಅಂದರೆ ಏನೆಂದು ಇನ್ನಷ್ಟು ತಿಳಿದುಕೊಳ್ಳೋಣ.

ಬಾಂಗ್ಲಾದೇಶ, ನೇಪಾಳ ಮತ್ತಿತರ ಅಕ್ಕಪಕ್ಕದ ದೇಶಗಳಿಂದ ವಲಸೆ ಬರುತ್ತಿರುವವರಿಂದ ಅಸ್ಸಾಂ, ಪಶ್ಚಿಮ ಬಂಗಾಳ ಮುಂತಾದ ಈಶಾನ್ಯ ರಾಜ್ಯಗಳು ತತ್ತರಿಸಿ ಹೋಗಿವೆ. ವಲಸೆಗಾರರು ಇಲ್ಲಿ ತಳವೂರಿ ಸಮಸ್ಯೆಯಾಗಿದ್ದಾರೆ ಎಂಬುದು ಸಂಘಪರಿವಾರದ ಮಾತ್ರವಲ್ಲ ಈಶಾನ್ಯ ರಾಜ್ಯಗಳ ಜನರ ಅಸಮಾಧಾನವಾಗಿದೆ. ವಲಸೆಗಾರರಲ್ಲಿ ಹಿಂದುಗಳೂ, ಮುಸಲ್ಮಾನರೂ ಇದ್ದಾರೆ. ಎಲ್ಲ ವಲಸೆಗಾರರನ್ನು ಹೊರದಬ್ಬಬೇಕೆಂದು ಕೆಲವರ ಬೇಡಿಕೆಯಾದರೆ, ಮುಸ್ಲಿಂ ವಲಸೆಗಾರರನ್ನು ಮಾತ್ರ ಹೊರದಬ್ಬಿ ಹಿಂದೂ ವಲಸೆಗಾರರನ್ನು ಉಳಿಸಿಕೊಳ್ಳಬೇಕೆಂಬುದು ಆರೆಸ್ಸೆಸ್ ಆಗ್ರಹವಾಗಿದೆ. ಅಸ್ಸಾಮಿನಲ್ಲಿ ಪೌರತ್ವ ನೋಂದಣಿ ಮಾಡುವಾಗ ಮುಸ್ಲಿಂ ವಲಸೆಗಾರರ ಜೊತೆಗೆ ಹಿಂದೂ ವಲಸೆಗಾರರನ್ನು ಪಟ್ಟಿ ಮಾಡಿದಾಗ ಮೋಹನ್ ಭಾಗವತ್ ಕಣ್ಣು ಕೆಂಪಗೆ ಮಾಡಿದರು.

 ಈ ಎನ್‌ಆರ್‌ಸಿ ಎಷ್ಟು ಅಪಾಯಕಾರಿಯಾಗಿದೆ ಅಂದರೆ ಪೌರತ್ವ ನೋಂದಣಿಯಲ್ಲಿ ಭಾರತದ ಪೌರರಲ್ಲದವರನ್ನು ಬಂಧಿಸಿಡಲು ಇದು ‘ಫಾರಿನರ್ಸ್ ಡಿಟೆನ್ಷನ್ ಸೆಂಟರ್’ಗಳನ್ನು ನಿರ್ಮಿಸಲಿದೆ. ಈ ಬಂಧನ ಕೇಂದ್ರಗಳು ಜರ್ಮನಿಯಲ್ಲಿ ಕಳೆದ ಶತಮಾನದ ಮೂವತ್ತರ ದಶಕದಲ್ಲಿ ನಾಝಿ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಯಹೂದಿಗಳಿಗಾಗಿ ನಿರ್ಮಿಸಿದ್ದ ಕಾನ್ಸೆಂಟ್ರೇಶನ್ ಕ್ಯಾಂಪ್‌ಗಳನ್ನು ನೆನಪಿಗೆ ತರುತ್ತವೆ . ಆರ್ಯನ್ ಜನಾಂಗದ ಶ್ರೇಷ್ಠತೆಯನ್ನು ಪ್ರತಿಪಾದಿಸಿದ ಹಿಟ್ಲರ್ ಜರ್ಮನಿಯ ಅನಿಷ್ಟಕ್ಕೆಲ್ಲ ಯಹೂದಿಗಳೇ ಕಾರಣ ಎಂದು ಅವರನ್ನು ತುಂಬಾ ದ್ವೇಷಿಸುತ್ತಿದ್ದ. ಈ ದ್ವೇಷ ಎಷ್ಟು ವಿಪರೀತಕ್ಕೆ ಹೋಯಿತೆಂದರೆ ದೇಶವ್ಯಾಪಿ ಯಹೂದಿಗಳನ್ನು ಮಕ್ಕಳು ಮಹಿಳೆಯರೆನ್ನದೇ ಅವರಿಗಾಗಿ ಬಲಾತ್ಕಾರದ ಲೇಬರ್ ಕ್ಯಾಂಪ್‌ಗಳನ್ನು ನಿರ್ಮಾಣ ಮಾಡಿ ಸುತ್ತ ಮುಳ್ಳು ಬೇಲಿ ಬೀಗಿದ. ಈ ಬೇಲಿಗಳ ಒಳಗೆ ನೂರು ಜನರಿಗೆ ಸಾಲುವ ಜಾಗದಲ್ಲಿ ಸಾವಿರಾರು ಜನರನ್ನು ತುಂಬಿ ಚಿತ್ರಹಿಂಸೆ ನೀಡಿ ಖುಷಿ ಪಡುತ್ತಿದ್ದ. ಗ್ಯಾಸ್ ಚೇಂಬರ್‌ಗೆ ಹಾಕಿ ಅವರನ್ನು ಕೊಲ್ಲುತ್ತಿದ್ದ. ಹಿಟ್ಲರ್‌ನ ಈ ಚಿತ್ರ ಹಿಂಸೆಯ ಬಗ್ಗೆ ಕನ್ನಡದಲ್ಲಿ ಕೆಲ ಪುಸ್ತಕಗಳು ಬಂದಿವೆ. ಇತ್ತೀಚೆಗೆ ಪಲ್ಲವಿ ಇಡೂರು ಅವರು ಬರೆದ ‘ಜೊಲಾಂಟಾ’ ಪುಸ್ತಕ ಓದಿದರೆ ಎದೆ ನಡುಗುತ್ತದೆ. ಗಿರೀಶ್ ಜಕಾಪುರೆ ಅವರು ನಾಝಿ ಹಿಂಸೆಯ ಬಗ್ಗೆ ಬರೆದ ಇನ್ನೊಂದು ಪುಸ್ತಕ ಪರಿಣಾಮಕಾರಿಯಾಗಿದೆ.

ಹಿಟ್ಲರ್ ಪ್ರಸ್ತಾಪವನ್ನು ಇಲ್ಲಿ ಯಾಕೆ ಮಾಡಬೇಕಾಯಿತೆಂದರೆ 1925 ರಲ್ಲಿ ಸ್ಥಾಪನೆಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ (ಆರ್‌ಎಸ್‌ಎಸ್) ಸ್ಪೂರ್ತಿ ಯಾಗಿದ್ದು ಇದೇ ಹಿಟ್ಲರ್ ಮತ್ತು ಇಟಲಿಯ ಸರ್ವಾಧಿಕಾರಿ ಮುಸ್ಸೋಲಿನಿ. ನಾಗಪುರದಲ್ಲಿ ಆರೆಸ್ಸೆಸ್ ಸ್ಥಾಪನೆಯಾಗುವ ಮುನ್ನ ಅದರ ಸ್ಥಾಪಕರಾದ ಕೇಶವ ಬಲಿರಾಮ ಹೆಡ್ಗೆವಾರ್ ಅವರು ಡಾ. ಮುಂಜೆ ಎಂಬವರನ್ನು ಇಟಲಿಗೆ ಕಳಿಸಿ ಫ್ಯಾಶಿಸ್ಟ್ ಪಾರ್ಟಿಯ ಸಂಘಟನಾ ಸ್ವರೂಪವನ್ನು ತಿಳಿದುಕೊಂಡು ಬರಲು ಹೇಳಿದ್ದರು. ಅದರ ಸಿದ್ಧಾಂತ ಹಾಗೂ ಕಾರ್ಯಕ್ರಮವನ್ನು ಮನುಸ್ಮತಿಗೆ ಲೇಪನ ಮಾಡಿ ಹಿಂದುತ್ವ ಸಿದ್ಧಾಂತವನ್ನು ರೂಪಿಸಲಾಯಿತು. ಈಗ ಕೇಂದ್ರದಲ್ಲಿ ಅಧಿಕಾರದಲ್ಲಿರುವುದು ಈ ಸಿದ್ಧಾಂತದಲ್ಲಿ ನಂಬಿಕೆ ಹೊಂದಿರುವ ಪಕ್ಷ. ಅಲ್ಲಿ ಹಿಟ್ಲರ್ ಯಹೂದಿಗಳನ್ನು ಕಾನ್ಸೆಂಟ್ರೇಶನ್ ಕ್ಯಾಂಪ್ ಗಳಲ್ಲಿ ಇರಿಸಿದಂತೆ ಇಲ್ಲೂ ಮುಸ್ಲಿಮರನ್ನು ಇಡುವುದಾಗಿ ಅದು ಬೆದರಿಸುತ್ತಿದೆ. ಅದಕ್ಕಾಗಿ ಎನ್‌ಆರ್‌ಸಿ ತಂದಿದೆ.

ಆರೆಸ್ಸೆಸ್‌ನ ಎರಡನೇ ಸರ ಸಂಘಚಾಲಕ ಮಾಧವ ಸದಾಶಿವ ಗೋಳ್ವಲ್ಕರ್ ಅವರಿಗೆ ಹಿಟ್ಲರ್ ಬಗ್ಗೆ ವಿಶೇಷ ಅಭಿಮಾನವಿತ್ತು. ‘ದೇಶದ ಜನಾಂಗೀಯ ಮತ್ತು ಸಾಂಸ್ಕೃತಿಕ ಪರಿಶುದ್ಧತೆ ಕಾಪಾಡಲು ಜರ್ಮನಿಯಲ್ಲಿ ಯಹೂದಿಗಳನ್ನು ಹೊಡೆದೋಡಿಸಲಾಯಿತು’ ಎಂದು ಅವರು ತಮ್ಮ ಪುಸ್ತಕವೊಂದರಲ್ಲಿ ಬರೆದಿದ್ದಾರೆ . ‘ಕಮ್ಯುನಿಸ್ಟರು, ಕ್ರೈಸ್ತರು ಮತ್ತು ಮುಸಲ್ಮಾನರು ನಮ್ಮ ಶತ್ರುಗಳು’ ಎಂದು ಅವರು ಹೇಳಿದ್ದಾರೆ.

ಅದೇನೇ ಇರಲಿ ಈಗ ಮೋದಿ ನೇತೃತ್ವದ ಬಿಜೆಪಿ ಸರಕಾರ ನೋಟು ರದ್ದತಿ, ಜಿಎಸ್‌ಟಿ, ಬೆಲೆ ಏರಿಕೆ, ನಿರುದ್ಯೋಗದಂಥ ಸಮಸ್ಯೆಗಳಿಂದ ಹಾಗೂ ಆರ್ಥಿಕ ಅಧೋಗತಿಯಿಂದ ಜನರ ಗಮನ ಬೇರೆಡೆ ಸೆಳೆಯಲು ಎನ್‌ಆರ್‌ಸಿ ಕಸರತ್ತು ನಡೆಸಿದೆ. ಈಗಾಗಲೇ ಆಸ್ಸಾಮಿನಲ್ಲಿ ಎನ್‌ಆರ್‌ಸಿ ಮಾಡಿದ ಅಧ್ವಾನಗಳು ಕಣ್ಣ ಮುಂದಿವೆ. ಅಕ್ರಮ ವಲಸೆಗಾರರನ್ನು ನಿಯಂತ್ರಣ ಮಾಡಲು ಪೌರತ್ವ ನೋಂದಣಿ ಯಂಥ ಭಾರೀ ಖರ್ಚಿನ ದುಬಾರಿ ಕಾರ್ಯಾಚರಣೆ ಅಗತ್ಯವಿರಲಿಲ್ಲ. ಎನ್‌ಆರ್‌ಸಿ ತರದೇ ಈಗಿರುವ ಕಾನೂನುಗಳನ್ನೇ ಬಳಸಿಕೊಂಡು ಅಕ್ರಮ ವಲಸೆಗಾರರನ್ನು ನಿಯಂತ್ರಿಸಬಹುದಾಗಿತ್ತು.

ಅಕ್ರಮ ವಲಸೆಗಾರರೆಲ್ಲ ಭಯೋತ್ಪಾದಕರು ಎಂಬಂತೆ ಬಿಂಬಿಸಿ ಒಂದು ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು ಸರಿಯಲ್ಲ. ವಲಸೆಗಾರರೆಲ್ಲ ಅಪರಾಧಿಗಳಲ್ಲ ಅವರು ದುಡಿಯುವ ಜನ. ಬೆಂಗಳೂರಿನಂಥ ಊರುಗಳು ಮಹಾನಗರವಾಗಿ ಬೆಳೆಯಲು, ವಲಸೆಗಾರರ ಕೊಡುಗೆಯೂ ಇದೆ. ನಮ್ಮ ಹೆಮ್ಮೆಯ ಅಣೆಕಟ್ಟುಗಳು, ಬಹು ಅಂತಸ್ತಿನ ಕಟ್ಟಡಗಳು ವಲಸೆ ಕಾರ್ಮಿಕರ ಮೈ ಬೆವರಿನಿಂದಲೇ ನಿರ್ಮಾಣಗೊಂಡಿವೆ. ನಮ್ಮ ವಿಧಾನಸೌಧವನ್ನು, ಹೈಕೋರ್ಟ್‌ನ ಬೃಹತ್ ಕಟ್ಟಡವನ್ನು ನಿರ್ಮಿಸಿದವರು ವಲಸೆ ಕಾರ್ಮಿಕರು. ಈ ಕಾರ್ಮಿಕರಲ್ಲಿ ಹಿಂದೂ, ಮುಸ್ಲಿಂ ಎಂದು ಜಾತಿ ಮತ ಧರ್ಮದ ಹೆಸರಿನಲ್ಲಿ ಭೇದ ಮಾಡುವುದು ನಮ್ಮ ಸಂಸ್ಕೃತಿ ಅಲ್ಲ. ಅದು ಹಿಟ್ಲರ್, ಮುಸ್ಸೋಲಿನಿಗಳಿಂದ ಆಮದು ಮಾಡಲ್ಪಟ್ಟ ಸಂಸ್ಕೃತಿ. ಪೌರತ್ವ ನೋಂದಣಿ ಹೆಸರಿನಲ್ಲಿ ಸರ್ವಜನಾಂಗದ ಶಾಂತಿಯ ತೋಟವಾದ ಭಾರತದಲ್ಲಿ ಹಿಟ್ಲರ್ ಮಾದರಿಯ ನಾಝಿ ಶಿಬಿರ ಮಾಡಲು ನಾವು ಅವಕಾಶ ನೀಡಬಾರದು. ನಾವು ಬಾಬಾಸಾಹೇಬರ ಸಂವಿಧಾನ ನೀಡಿದ ಬೆಳಕಿನಲ್ಲಿ ಸಾಗಬೇಕೇ ಹೊರತು ಹಿಟ್ಲರ್, ಮುಸ್ಸೋಲಿನಿಗಳ ಕಾರ್ಗತ್ತಲಿನ ಪ್ರಪಾತದ ದಾರಿಯಲ್ಲಲ್ಲ.

Please follow and like us:
error